ಎಂಟು ಸಿಸಿ ಕ್ಯಾಮೆರಾ, ಡಿಜಿಟಲ್ ಲೈಬ್ರೆರಿ, ಸ್ಮಾರ್ಟ್ ಕ್ಲಾಸ್, ಸುತ್ತಮುತ್ತಲಲ್ಲಿ ಕೈತೋಟ, ಅತ್ಯಾಧುನಿಕ ಶೌಚಾಲಯ….ಇದು ಯಾವುದೋ ಖಾಸಗಿ ಶಾಲೆಯ ಬಗ್ಗೆ ಹೇಳುತ್ತಿರುವುದಲ್ಲ. ಬದಲಾಗಿ ಶಿವಮೊಗ್ಗ ನಗರದಲ್ಲಿ ಒಂದು ಹೈಟೆಕ್ ಸರ್ಕಾರಿ ಶಾಲೆ ಇದೆ ಎಂದರೆ ನೀವು ನಂಬಲೇಬೇಕು.
ಒಂದು ಕಡೆ ರಾಜ್ಯದ ಹಲವು ಕಡೆಗಳಲ್ಲಿ ಸರ್ಕಾರಿ ಶಾಲೆಗಳು ದುಸ್ಥಿತಿಯಲ್ಲಿರುವ ಬಗ್ಗೆ ದೂರುಗಳು ಕೇಳಿಬರುತ್ತಿದ್ದರೆ, ಇದಕ್ಕೆ ವ್ಯತಿರಿಕ್ತವಾದ ಸರ್ಕಾರಿ ಶಾಲೆಯೊಂದು ಶಿವಮೊಗ್ಗ ನಗರದ ಕೆ ಆರ್ ಪುರಂನಲ್ಲಿದೆ.
2018ರಲ್ಲಿ ಈ ಶಾಲೆಯು ಕೂಡ ಮುಚ್ಚುವ ಸ್ಥಿತಿಗೆ ತಲುಪಿತ್ತು ಎಂದರೆ ನೀವು ನಂಬಲೇಬೇಕು. 2018ರಲ್ಲಿ ಈ ಶಾಲೆಯಲ್ಲಿ ಇದ್ದ ಮಕ್ಕಳ ಸಂಖ್ಯೆ ಕೇವಲ 14. ಈಗ 250 ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ ಎಂದರೆ ನೀವು ಆಶ್ಚರ್ಯ ಪಡಬಹುದು. ಸಂಬಂಧಪಟ್ಟವರು ಮನಸ್ಸಿಟ್ಟು ಕೆಲಸ ಮಾಡಿದರೆ ಅಸಾಧ್ಯವಾದುದನ್ನು ಸಾಧ್ಯಗೊಳಿಸಬಹುದು ಎಂಬುದಕ್ಕೆ ಈ ಶಾಲೆಯನ್ನೇ ಒಂದು ಉದಾಹರಣೆಯನ್ನಾಗಿಸಬಹುದು.
ಶಿವಮೊಗ್ಗ ನಗರದ ಕೆ ಆರ್ ಪುರಂನಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭವಾಗಿದ್ದು 1935ರಲ್ಲಿ. ಗತ ವೈಭವದಿಂದ ನಡೆದುಕೊಂಡು ಬರುತ್ತಿದ್ದ ಶಾಲೆಯಲ್ಲಿ ಒಂದು ಕಾಲದಲ್ಲಿ ಸುಮಾರು 700 ರಿಂದ 800 ವಿದ್ಯಾರ್ಥಿಗಳ ದಾಖಲಾತಿ ಇತ್ತು. ಬೆಳಗಿನ ಪ್ರಾರ್ಥನೆಯ ಸಮಯದಲ್ಲಿ ಮಕ್ಕಳು ನಿಲ್ಲುವುದಕ್ಕೂ ಕೂಡ ಸರಿಯಾದ ಜಾಗವಿರಲಿಲ್ಲ. ಇಂತಹ ಅದ್ಬುತ ಶಾಲೆ, ಕಾಲ ಕ್ರಮೇಣ ಅಂದರೆ 2018ರಲ್ಲಿ ಮುಚ್ಚುವ ಕಡೆಗೆ ಸಾಗಿತ್ತು.
2018 ರಲ್ಲಿ ಒಂದರಿಂದ 7 ನೇ ತರಗತಿಯವರೆಗೂ ಕೇವಲ 14 ವಿದ್ಯಾರ್ಥಿಗಳ ದಾಖಲಾತಿ ಇತ್ತು. ಪೋಷಕರು ತಮ್ಮ ಮಕ್ಕಳನ್ನ ಈ ಶಾಲೆಗೆ ಮಕ್ಕಳನ್ನ ದಾಖಲಾತಿ ಮಾಡಲು ಹಿಂದೆ ಸರಿದು ಕ್ರಮೇಣ ಖಾಸಗಿ ಶಾಲೆಗಳ ಕಡೆ ಮುಖ ಮಾಡುತ್ತಿದ್ದರು. ಕೇವಲ ಒಂದು ಕೊಠಡಿಯಲ್ಲಿ ಮಾತ್ರ ತರಗತಿ ಗಳುನಡೆಯುತ್ತಾ ಇದ್ದು ಈ ಸಂದರ್ಭದಲ್ಲಿ ಕೇವಲ ಇಬ್ಬರು ಶಿಕ್ಷಕರಿದ್ದರು.
ಈ ಸಮಯದಲ್ಲಿ ಈ ಶಾಲೆಗೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನಿಂದ ವರ್ಗಾವಣೆ ಆಗಿ ಬಂದ ಸಹ ಶಿಕ್ಷಕ ರಾಮಾಚಾರಿಯವರು ಈ ಶಾಲೆಯ ಪರಿಸ್ಥಿತಿ ಅವಲೋಕಿಸಿ, ಇದಕ್ಕೆ ಮರು ಜೀವ ನೀಡಲೇಬೇಕು, ಪ್ರಗತಿ ಪಥದಲ್ಲಿ ನಡೆಸಲೇಬೇಕು ಎಂಬ ದೃಢ ಸಂಕಲ್ಪ ಮಾಡಿದರು.
ಈ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದೇ ದೊಡ್ಡ ಪರೀಕ್ಷೆ ಆಗಿತ್ತು. ಆ ಬಳಿಕ ಶಿಕ್ಷಕರು ಮನೆ ಮನೆಗಳಿಗೆ ತೆರಳಿ ಶಾಲೆಗೆ ಯಾಕೆ ವಿದ್ಯಾರ್ಥಿಗಳನ್ನು ಪೋಷಕರು ದಾಖಲು ಮಾಡುತ್ತಿಲ್ಲ ಎಂಬ ಮಾಹಿತಿ ಪಡೆಯಲು ಆರಂಭ ಮಾಡಿದರು.
ಶಾಲೆಯಲ್ಲಿರಬೇಕಾದ ಅಗತ್ಯ ಮೂಲಭೂತ ಸೌಕರ್ಯ ಕೊರತೆ ಹಾಗೂ ಶಾಲೆ ಗೋಡೆಗಳಿಂದ ನೀರು ಸೋರುತ್ತಿದೆ. ಮಳೆಗಾಲದಲ್ಲಿ ಸರಿಯಾದ ಮೂಲಭೂತ ಸೌಕರ್ಯವಿಲ್ಲದಿರುವುದು ಹಾಗೂ ಶಾಲೆಗೆ ಆಂಗ್ಲ ಮಾಧ್ಯಮ ಸಹಬೇಕು ಹಾಗೂ ಶಾಲೆಯಲ್ಲಿ ಕಲಿಯಲು ಮಕ್ಕಳಿಗೆ ಸೂಕ್ತ ವ್ಯವಸ್ಥೆ ಬೇಕು ಎಂಬುದು ಪೋಷಕರ ಅಭಿಪ್ರಾಯವಾಗಿತ್ತು.
ಆನಂತರ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಸುನಿತಾ ಅಣ್ಣಪ್ಪ ಅವರನ್ನ ಭೇಟಿಯಾಗಿ ಈ ಶಾಲೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿ ಮನವಿ ಮಾಡಿದರು. ಇದಕ್ಕೆ ಸಹಕರಿಸಿದ ಮಹಾನಗರ ಪಾಲಿಕೆ ಮಾಜಿ ಸದಸ್ಯರು, ಬಳಿಕ ಡಿಡಿಪಿಐ ಹಾಗೂ ಬಿಇಓ ಅವರುಗಳು ಶಾಲೆಗೆ ಭೇಟಿ ನೀಡಿ, ಅವಲೋಕನ ನಡೆಸಲು ವಿನಂತಿಸಿದ್ದಲ್ಲದೇ, ಶಾಲೆಯಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದರು.
ಈ ವೇಳೆಗೆ ಶಾಲೆಯಲ್ಲಿ ಒಂದು ಕೊಠಡಿ ಇದ್ದದ್ದು ಬಿಟ್ಟರೆ, ಬೇರೆ ಯಾವುದೇ ಉಪಕರಣಗಳು ಇಲ್ಲದೆ ಇದ್ದಂತ ವ್ಯವಸ್ಥೆ ಇತ್ತು. ಮತ್ತು ಶಾಲೆಯಲ್ಲಿ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಕೂಡ ಇರಲಿಲ್ಲ. ಅವ್ಯವಸ್ಥೆಯ ಆಗರವಾಗಿತ್ತು.
ಶಾಲೆಯ ಶಿಕ್ಷಕರು ಸಾವಿರಾರು ಕರ ಪತ್ರ ಮಾಡಿ ಹಾಗೆ ಕೆಲವು ಬ್ಯಾನರ್ ಗಳನ್ನು ಮಾಡಿ ಪ್ರಚಾರ ಮಾಡಿ ಪೋಷಕರ ಮನವೊಲಿಸಿ ನಂತರ ಶಾಲೆಗೆ ಒಂದನೇ ತರಗತಿಗೆ ಕೇವಲ 10 ಮಕ್ಕಳು ದಾಖಲಾತಿ ಆಯಿತು. ನಂತರ ಶಾಲೆಯಲ್ಲಿ ಎಲ್ ಕೆ ಜಿ ಪ್ರಾರಂಭ ಮಾಡಲಾಯಿತು. ಆಮೇಲೆ ಶಾಲೆ ಕೆ ಪಿ ಎಸ್ ಶಾಲೆಯಾಗಿ ಪರಿವರ್ತನೆಯಾಯಿತು.
ನಂತರ 2019 – 2020 ರಲ್ಲಿ ಒಂದರಿಂದ ಏಳನೇ ತರಗತಿವರೆಗೂ ಶಾಲೆಗೆ 25 ಮಕ್ಕಳ ದಾಖಲಾತಿಯಾಯಿತು. ನಂತರ ಎಲ್ ಕೆ ಜಿ ಹಾಗೂ ಯುಕೆಜಿ ಗೆ 50 ಮಕ್ಕಳು ದಾಖಲಾತಿಯಾಯಿತು. ಈ ಸಮಯದಲ್ಲಿ ಕೇವಲ ಮೂರು ಶಿಕ್ಷಕರಷ್ಟೇ ಕಾರ್ಯ ನಿರ್ವಹಿಸುತ್ತಿದ್ದರು. ಶಾಲೆಯಲ್ಲಿ ಮೂಲಭೂತ ಸೌಕರ್ಯಗಳು ಬರುತ್ತಿದ್ದಂತೆಯೇ 2020-2021 ರಲ್ಲಿ ನಿಧಾನವಾಗಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಾ ಬಂತು. ಈ ಪ್ರಸಕ್ತ ಸಾಲಿನಲ್ಲಿ ಈ ಶಾಲೆಯಲ್ಲಿ 250ಕ್ಕೂ ಅಧಿಕ ಮಕ್ಕಳು ದಾಖಲಾತಿಯಾಗಿದ್ದು, ಸದ್ಯ 11 ಶಿಕ್ಷಕರು ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಶಾಲೆಗೆ ಒಂದರಿಂದ ಆರನೇ ತರಗತಿಯವರೆಗೂ ಆಂಗ್ಲ ಮಧ್ಯಮ ವ್ಯವಸ್ಥೆ ಇದೆ ಮುಂದಿನ ವರ್ಷದಿಂದ ಏಳನೇ ತರಗತಿಯವರೆಗೂ ಆಂಗ್ಲ ಮಾಧ್ಯಮ ವಿಸ್ತರಣೆ ಆಗಲಿದೆ.
“ಮಕ್ಕಳಿಗೆ ಶಿಸ್ತು ಮತ್ತು ಗುಣಮಟ್ಟದ ಶಿಕ್ಷಣ ನೀಡಬೇಕು. ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದರೆ ಮತ್ತೆ ಮಕ್ಕಳ ಅರೋಗ್ಯಕ್ಕೆ ಸಂಬಂಧಪಟ್ಟಂತೆ ಗುಣಮಟ್ಟದ ಆಹಾರ ನೀಡಬೇಕು. ಆವಾಗ ಮಾದರಿ ಶಾಲೆಯನ್ನಾಗಿ ಮಾಡಬಹುದು” ಎಂದು ಶಾಲೆಯ ಸಹ ಶಿಕ್ಷಕರಾದ ರಾಮಾಚಾರಿ ಈ ದಿನ.ಕಾಮ್ ಜೊತೆಗೆ ಮಾತನಾಡಿ ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕಿ ದಾನೇಶ್ವರಿ ಮಾತನಾಡಿ, “ಶಾಲೆಯಲ್ಲಿ ಮಕ್ಕಳಿಗೆ ಬೇಕಾದ ಎಲ್ಲ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿದ್ದರಿಂದ 2022-23 ರಲ್ಲಿ ಒಂದರಿಂದ ಏಳನೇ ತರಗತಿವರೆಗಿನ ದಾಖಲಾತಿ ಸಂಖ್ಯೆ 189ಕ್ಕೆ ದಾಟಿತು. ಎಲ್ ಕೆ ಜಿ ಹಾಗೂ ಯು ಕೆ ಜಿ ಸೇರಿ 60 ಮಕ್ಕಳು ದಾಖಲಾತಿ ಆಯಿತು. 2022-2023 ರಲ್ಲಿ ಈ ಶಾಲೆಗೆ ಕೇಂದ್ರ ಸರ್ಕಾರದ ಪಿಎಂಶ್ರೀ ಯೋಜನೆಯಡಿಯಲ್ಲಿ ಈ ಶಾಲೆ ಆಯ್ಕೆಯಾದ ಮಾಹಿತಿ ಬಂತು” ಎಂದು ತಿಳಿಸಿದರು.
“ಶಿವಮೊಗ್ಗ ತಾಲೂಕಿನಲ್ಲಿ ಎರಡು ಶಾಲೆಗಳು ಮಾತ್ರ ಆಯ್ಕೆ ಆಗಿದ್ದು ಇದು ನಗರ ವ್ಯಾಪ್ತಿಯಲ್ಲಿ ಕೆ ಆರ್ ಪುರಂ ಶಾಲೆ ಆಯ್ಕೆ ಆಗಿದ್ದು ಹಾಗೂ ಮತ್ತೊಂದು ಶಾಲೆ ಶಿವಮೊಗ್ಗದ ಹೊಸಕೋಪ್ಪ ಶಾಲೆ ಆಯ್ಕೆ ಆಗಿದೆ” ಎಂದು ಮಾಹಿತಿ ನೀಡಿದರು.
ಪಿಎಂ ಶ್ರೀ ಯೋಜನೆಯಡಿಯಲ್ಲಿ ಅನುದಾನ ಬಿಡುಗಡೆಯಾಗಿದ್ದು, ಮಕ್ಕಳ ಕಲಿಕೆಗೆ ಅನುಗುಣವಾಗಿ ಶಾಲೆ ಅಭಿವೃದ್ಧಿ ಪಥದತ್ತ ಸಾಗಿದೆ.
ಪೋಷಕರಾದ ಪ್ರತಿಮಾ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಾವು ಬಡವರು. ಖಾಸಗಿ ಶಾಲೆಗೆ ಸೇರಿಸುವಷ್ಟು ಹಣ ನಮ್ಮಲ್ಲಿಲ್ಲ. ಆ ಸಮಯದಲ್ಲಿ ಕೆ ಪಿ ಎಸ್ ಶಾಲೆ ಆರಂಭವಾಗಿರುವ ಕುರಿತು ಮಾಹಿತಿ ಬಂತು. ಹಾಗಾಗಿ ಇಲ್ಲಿ ಸೇರಿಸಿದ್ದೇವೆ. ಇಲ್ಲಿ ಡಿಜಿಟಲ್ ಲೈಬ್ರರಿ ಮತ್ತು ಕಂಪ್ಯೂಟರ್ ಶಿಕ್ಷಣ ವ್ಯವಸ್ಥೆ, ಸುಸುರ್ಜಿತ ಶೌಚಾಲಯ ವ್ಯವಸ್ಥೆ, ವಿಶಾಲವಾದ ಆಟದ ಮೈದಾನ ಶಾಲೆ ಆವರಣದಲ್ಲಿ ಶಾಲಾ ಕೈ ತೋಟ, ಶಾಲೆ ಸುತ್ತಲೂ 8 ಸಿ ಸಿ ಟಿ ವಿ ಸುರಕ್ಷತೆ ವ್ಯವಸ್ಥೆ ಹೀಗೆ ಇದೆಲ್ಲ ಸರ್ಕಾರಿ ಶಾಲೆಯಲ್ಲಿ ಸಿಗುತ್ತಿರುವುದನ್ನ ನೋಡಿ ತುಂಬಾ ಸಂತೋಷವಾಯಿತು ಹಾಗಾಗಿ ಎಲ್ ಕೆ ಜಿ ಯಿಂದಾನು ನಮ್ಮ ಮಗುವನ್ನು ಇಲ್ಲಿ ಓದಿಸುತ್ತಿದ್ದೇವೆ. ಇಂತಹ ಶಿಕ್ಷಣ ಎಲ್ಲ ಮಕ್ಕಳಿಗೆ ಸಿಗುವಂತೆ ಅನುಕೂಲ ಮಾಡಿಕೊಡಬೇಕು” ಎಂದು ಮನವಿ ಮಾಡಿಕೊಂಡರು.
ಪೋಷಕರಾದ ಮಸ್ತಾನ್ ಈ ದಿನ.ಕಾಮ್ ಜೊತೆಗೆ ಮಾತನಾಡಿ, “ನಮ್ಮ ಮಗುವನ್ನು ಇಲ್ಲಿ ಓದಿಸುತ್ತಿರುವುದು ಸಂತಸ ತಂದಿದೆ. ಶಾಲೆ ಅಭಿವೃದ್ಧಿ ಶಾಲೆಯ ಸ್ವಚ್ಛತೆ ವಿದ್ಯಾರ್ಥಿಗಳಿಗೆ ಇರುವ ಎಲ್ಲಾ ಅನುಕೂಲ ನಿಜವಾಗ್ಲೂ ಸರ್ಕಾರಿ ಶಾಲೆಯಲ್ಲಿ ಹೀಗೆಲ್ಲ ಇದೆಯೇ ಎಂದು ಅನಿಸುತ್ತದೆ” ಎಂದರು.
ಎಸ್ ಡಿಎಂಸಿ ಸದಸ್ಯರಾದ ರಾಘವೇಂದ್ರ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಶಾಲೆಯಲ್ಲಿ ಎಸ್‌ಡಿಎಂಸಿ ಯನ್ನು ಗಟ್ಟಿಗೊಳಿಸಿ ಸದಸ್ಯರೆಲ್ಲ ಒಗ್ಗಟ್ಟಾಗಿ ನಮ್ಮ ಅತೀ ಹೆಚ್ಚು ಸಮಯವನ್ನು ಶಾಲೆಗೆ ನೀಡುತ್ತಿದ್ದೇವೆ. ಶಾಲೆಗೆ ಒಂದು ಒಳ್ಳೆಯ ಊಟದ ಕೊಠಡಿ ಶಾಲೆಗೆ ಅವಶ್ಯಕತೆ ಇದೆ. ಸದ್ಯ ಮಕ್ಕಳು ಶಾಲೆಯ ಕಾರೀಡಾರ್ ನಲ್ಲೇ ಊಟ ಮಾಡುತ್ತಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುತ್ತಿರುವ ಕಾರಣ ಕುಡಿಯುವ ನೀರಿನ ಸಮಸ್ಯೆ ಇದೆ. ಹಾಗಾಗಿ ಒಂದು ಬೋರ್ ವೆಲ್ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಈ ಮೂಲಕ ನಾವು ಶಿಕ್ಷಣ ಸಚಿವರಿಗೆ ಮನವಿ ಮಾಡಿಕೊಳ್ಳುತ್ತೇನೆ” ಎಂದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಸುನೀತಾ ಅಣ್ಣಪ್ಪ ಅವರ ಪತಿ ಅಣ್ಣಪ್ಪ “ನಾವು ಮುಖ್ಯವಾಗಿ ಎಂದಿಗೂ ನೆನಪಲ್ಲಿ ಇಟ್ಟುಕೊಳ್ಳುವ ಕೆಲಸ ಅಂದರೆ ಅದು ಶಿಕ್ಷಣ ಮಾತ್ರ. ನಾವು ಮಕ್ಕಳಿಗೆ ಶಿಕ್ಷಣ ನೀಡಿದರೆ ಅವರು ಮುಂದೆ ಒಂದು ದಿನ ಸ್ವಂತ ಬದುಕು ಕಟ್ಟಿಕೊಳ್ಳಲು ನೆರವಾಗಲಿದೆ. ಈ ಶಾಲೆಗೆ ಸುತ್ತಮುತ್ತಲಿನ ಐದು ಆರು ವಾರ್ಡಿನಿಂದ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಸರ್ಕಾರದ ಎಲ್ಲಾ ಸೌಲಭ್ಯ ಮಕ್ಕಳಿಗೆ ದೊರೆಯುತ್ತಿದೆ ಹಾಗೆ ತುಂಬಾ ಅತ್ಯುತ್ತಮ ಮಾದರಿ ಶಾಲೆಯಾಗಿ ಜಿಲ್ಲೆಯಲ್ಲಿ ಪರಿವರ್ತನೆ ಆಗುತ್ತಿರುವುದು ಸಂತೋಷವಾಗುತ್ತಿದೆ” ಎಂದರು.
ಶಾಲೆಯ 6 ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ಅದ್ನಾನ್ ಮಾತನಾಡಿ, “ನಮ್ಮ ತಂದೆ ಆಟೋ ಡ್ರೈವರ್. ನಾನು ಈ ಶಾಲೆಯಲ್ಲಿ ಮೊದಲು ಸೇರಿದಾಗ ಸರಿಯಾದ ವ್ಯವಸ್ಥೆ ಇರಲಿಲ್ಲ ಈವಾಗ ಎಲ್ಲ ವ್ಯವಸ್ಥೆ ಅಭಿವೃದ್ಧಿಗೊಂಡಿದೆ. ಇಲ್ಲಿ ಓದುತ್ತಿರುವ ವಿದ್ಯಾರ್ಥಿ ಎಂಬುದಕ್ಕೆ ತುಂಬಾ ಖುಷಿ ಆಗುತ್ತಿದೆ” ಎಂದು ತಿಳಿಸಿದರು.
ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಜೊತೆಗೂಡಿ, ರಾಜಕಾರಣಿಗಳು ಅಧಿಕಾರಿಗಳು ಹಾಗೆ ಶಿಕ್ಷಕ ವೃಂದ, ಪೋಷಕರು ಹಾಗೂ ಮಕ್ಕಳು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಅಸಾಧ್ಯವಾದುದನ್ನು ಸಾಧ್ಯಗೊಳಿಸಬಹುದು ಎಂಬುದಕ್ಕೆ ಈ ಸರ್ಕಾರಿ ಶಾಲೆ ಒಂದು ಉದಾಹರಣೆಯಾಗಿದೆ.
