ತಮ್ಮ ನ್ಯಾಯಾಂಗ ಬಂಧನ ವಿಸ್ತರಣೆಯನ್ನು ಪ್ರಶ್ನಿಸಿ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರು ಮಂಗಳವಾರ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದು, ತುರ್ತು ವಿಚಾರಣೆಗೆ ಮನವಿ ಮಾಡಿದ್ದಾರೆ. ದಸರಾ ರಜೆಯ ಹಿನ್ನೆಲೆಯಲ್ಲಿ ಈ ವಾರ ಹೈಕೋರ್ಟ್ ಕಲಾಪಗಳಿಲ್ಲ. ಹೀಗಿದ್ದರೂ, ಪ್ರಕರಣದ ಗಾಂಭೀರ್ಯತೆ ಪರಿಗಣಿಸಿ ರಾತ್ರೋರಾತ್ರಿ ತುರ್ತು ವಿಚಾರಣೆ ನಡೆಸುವಂತೆ ನಾಯಕರು ಕೋರಿದ್ದಾರೆ ಎಂದು ‘ಪಿಟಿಐ’ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಂದಿರ್ ಮಾರ್ಗ್ ಪೊಲೀಸ್ ಠಾಣೆಯ ನೂತನ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಸೋಮವಾರ ಈ ನಾಯಕರನ್ನು ಹಾಜರುಪಡಿಸಲಾಗಿತ್ತು. ಈ ವೇಳೆ, ಇಬ್ಬರ ನ್ಯಾಯಾಂಗ ಬಂಧನವನ್ನು ಮತ್ತಷ್ಟು ಎರಡು ದಿನಗಳ ಕಾಲ ವಿಸ್ತರಿಸಿ ಮ್ಯಾಜಿಸ್ಟ್ರೇಟ್ ಆದೇಶಿಸಿದ್ದರು.
ಪ್ರತಿಭಟನಾ ಸ್ಥಳ ಎಂಬ ಮಾನ್ಯತೆಯನ್ನು ಈ ಹಿಂದೆಯೇ ರದ್ದುಗೊಳಿಸಲಾಗಿರುವ ಜಂತರ್ ಮಂತರ್‌ನ ಬೀಗ ಹಾಕಿದ್ದ ಗೇಟ್ ಹಾರಿ ಒಳಪ್ರವೇಶಿಸಿದ ಆರೋಪದ ಮೇಲೆ ಅಕ್ಟೋಬರ್ 13 ರಂದು ಇಬ್ಬರನ್ನೂ ವಶಕ್ಕೆ ಪಡೆಯಲಾಗಿತ್ತು. ವಶಕ್ಕೆ ಪಡೆಯುವ ಮುನ್ನ ಜಂತರ್ ಮಂತರ್ ಬಳಿ ರಾಷ್ಟ್ರಧ್ವಜ ಪ್ರದರ್ಶಿಸಿದ್ದ ದಾಸ್, ರಾಂಕಾ ಹಾಗೂ ಇತರ ಸಿಜೆಪಿ ಕಾರ್ಯಕರ್ತರು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅವರನ್ನು ವಶಕ್ಕೆ ಪಡೆದು, ತದನಂತರ ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು ಎಂದು ವರದಿ ತಿಳಿಸಿದೆ.
“ನಾವು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ರಾತ್ರಿಯೇ ತುರ್ತು ವಿಚಾರಣೆ ನಡೆಸುವಂತೆ ಕೋರಿದ್ದೇವೆ. ಸೌರವ್ ಮತ್ತು ಅಶುತೋಷ್ ಒಂದು ನಿಮಿಷವೂ ಕಂಬಿ ಹಿಂದೆ ಇರಬಾರದು. ರಾಜಕೀಯ ಆಟಗಳಿಗಾಗಿ ಅವರ ಸ್ವಾತಂತ್ರ್ಯವನ್ನು ಕಸಿದುಕೊಳ್ಳಬಾರದು. ನ್ಯಾಯಕ್ಕಾಗಿ ಕಾಯುವಂತಾಗಬಾರದು” ಎಂದು ಸಿಜೆಪಿ ಕಾನೂನು ವಿಭಾಗದ ಮುಖ್ಯಸ್ಥೆ ರತ್ನಾ ಸಿಂಗ್ ಅವರು ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಪಕ್ಷದ ಇಬ್ಬರು ಸಹ-ಸಂಚಾಲಕರ ಬಿಡುಗಡೆಯನ್ನು ತಡೆಯುವ ದುರುದ್ದೇಶದಿಂದಲೇ ಪ್ರಕರಣದ ಜಾಮೀನು ಪ್ರಕ್ರಿಯೆಯನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದೆ ಎಂದು ಸಿಜೆಪಿ ಗಂಭೀರ ಆರೋಪ ಮಾಡಿದೆ.





