ಹೊರದೇಶಗಳ ಬೀದಿಗಳಲ್ಲಿ ನಡೆಯುವ ದೊಂಬಿ, ಲೂಟಿಗೂ, ಭಾರತದ ಯುವಕರು ಸಂವಿಧಾನದತ್ತ ಹಕ್ಕಿಗಾಗಿ ನಡೆಸುವ ಪ್ರತಿಭಟನೆಗೂ ಏನು ಸಂಬಂಧ? ಸರ್ಕಾರದ ವೈಫಲ್ಯಗಳನ್ನು ಮರೆಮಾಚಲು ಸೋ ಕಾಲ್ಡ್ ಮುಖ್ಯವಾಹಿನಿಗಳು ಹೇಗೆ ವಿದೇಶಿ ಘಟನೆಗಳನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿವೆ? ವಿದ್ಯಾರ್ಥಿಗಳ ನ್ಯಾಯಯುತ ಆಕ್ರೋಶವನ್ನು ‘ಅರಾಜಕತೆ’ ಎಂದು ಬಿಂಬಿಸುತ್ತಿರುವ ʼಮಡಿಲ ಮಾಧ್ಯಮʼಗಳ ವ್ಯವಸ್ಥಿತ ಹುನ್ನಾರದ ಮುಖವಾಡ ಕಳಚಿ ಬೀಳುತ್ತಿದೆ.
ಇತ್ತೀಚೆಗೆ ಯುರೋಪಿನ ಪ್ರಮುಖ ದೇಶಗಳಲ್ಲಿ (ಫ್ರಾನ್ಸ್, ಸ್ಪೇನ್, ಇಟಲಿ, ಬೆಲ್ಜಿಯಂ, ಪೋರ್ಚುಗಲ್ ಮತ್ತು ಅಲ್ಬೇನಿಯಾ) ಉಂಟಾಗಿರುವ ತೀವ್ರ ಆರ್ಥಿಕ ಬಿಕ್ಕಟ್ಟು, ಬೆಲೆ ಏರಿಕೆ, ವಸತಿ ಸಮಸ್ಯೆ ಹಾಗೂ ಸಾರ್ವಜನಿಕ ಸೇವೆಗಳ ವೈಫಲ್ಯದ ವಿರುದ್ಧ ಅಲ್ಲಿನ ನಾಗರಿಕರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಫ್ರಾನ್ಸ್‌ನಲ್ಲಿ ಶಾಲೆಗಳಲ್ಲಿ ಶಿಕ್ಷಕರ ತೀವ್ರ ಕೊರತೆ ಮತ್ತು ಕಳಪೆ ಶಿಕ್ಷಣ ಸೌಲಭ್ಯಗಳಿಂದ ಆರಂಭವಾದ ಅಸಮಾಧಾನವು, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜೀವನ ವೆಚ್ಚ ಹಾಗೂ ಸಾರ್ವಜನಿಕ ಸೇವೆಗಳ ಕುಸಿತದೊಂದಿಗೆ ಸೇರಿಕೊಂಡು ಉಲ್ಬಣಿಸಿತು. ಪ್ಯಾರಿಸ್ ಸೇರಿದಂತೆ ಪ್ರಮುಖ ನಗರಗಳ ಬೀದಿಗಳಲ್ಲಿ ಯುವಕರು ಮತ್ತು ಸಾರ್ವಜನಿಕರು ನಡೆಸಿದ ಪ್ರತಿಭಟನೆಗಳು ಹಿಂಸಾತ್ಮಕ ಸ್ವರೂಪ ಪಡೆದುಕೊಂಡವು. ರಸ್ತೆಗಳಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚುವುದು, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಕಲ್ಲು ತೂರಾಡುವುದು ಮತ್ತು ವಾಣಿಜ್ಯ ಪ್ರದೇಶಗಳಲ್ಲಿದ್ದ ದೊಡ್ಡ ಬ್ರ್ಯಾಂಡ್‌ನ ಅಂಗಡಿಗಳ ಗಾಜುಗಳನ್ನು ಒಡೆದು ಬಟ್ಟೆ ಹಾಗೂ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ವ್ಯಾಪಕವಾಗಿ ಲೂಟಿ ಮಾಡಲಾಯಿತು. ಪರಿಸ್ಥಿತಿ ಸಂಪೂರ್ಣ ಕೈಮೀರಿದಾಗ ಪೊಲೀಸರು ಅಶ್ರುವಾಯು ಪ್ರಯೋಗಿಸಿ ಸಾವಿರಾರು ಜನರನ್ನು ಬಂಧಿಸಿದರು ಮತ್ತು ಕೆಲವು ನಗರಗಳಲ್ಲಿ ರಾತ್ರಿ ವೇಳೆ ಕರ್ಫ್ಯೂ ಜಾರಿಗೊಳಿಸುವ ಅನಿವಾರ್ಯತೆ ಎದುರಾಯಿತು.


ಇಟಲಿಯಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಜೀವನ ವೆಚ್ಚ, ಕಡಿಮೆ ವೇತನ, ಶಿಕ್ಷಣ ಹಾಗೂ ಸಾರ್ವಜನಿಕ ಸೇವೆಗಳ ಕುಸಿತದ ವಿರುದ್ಧ ಕಾರ್ಮಿಕರು ಮತ್ತು ಯುವಕರು ನಡೆಸಿದ ಆಕ್ರೋಶವು ಉಗ್ರ ರೂಪ ತಾಳಿತು. ಆರ್ಥಿಕ ರಾಜಧಾನಿಯಾದ ಮಿಲಾನ್ ಸೇರಿದಂತೆ ಹಲವೆಡೆ ಪ್ರತಿಭಟನೆಗಳ ವೇಳೆ ಉದ್ರಿಕ್ತ ಗುಂಪುಗಳಿಗೂ ಭದ್ರತಾ ಸಿಬ್ಬಂದಿಗೂ ನಡುವೆ ತೀವ್ರ ಘರ್ಷಣೆಗಳು ನಡೆದವು. ರಸ್ತೆಗಳಲ್ಲೇ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ಬೀದಿ ಬದಿಯ ಅಂಗಡಿಗಳ ಮೇಲೆ ದಾಳಿ ನಡೆಸಿ ವಸ್ತುಗಳನ್ನು ದೋಚಲಾಯಿತು. ಸಾರ್ವಜನಿಕ ಆಸ್ತಿಪಾಸ್ತಿಗಳ ರಕ್ಷಣೆಗಾಗಿ ಮತ್ತು ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಡುವುದನ್ನು ತಪ್ಪಿಸಲು ಇಟಲಿ ಸರ್ಕಾರವು ಅಂತಿಮವಾಗಿ ಭದ್ರತೆಯನ್ನು ತೀವ್ರಗೊಳಿಸಿ ಸೈನಿಕರನ್ನು ನಿಯೋಜಿಸಬೇಕಾಯಿತು.
ಬೆಲ್ಜಿಯಂನ ರಾಜಧಾನಿ ಬ್ರಸೆಲ್ಸ್‌ನಲ್ಲಿ ವಿಶ್ವವಿದ್ಯಾಲಯಗಳ ನೋಂದಣಿ ಶುಲ್ಕ ವಿಪರೀತ ಹೆಚ್ಚಳ ಮತ್ತು ಜೀವನ ನಿರ್ವಹಣಾ ವೆಚ್ಚದ ಬಿಕ್ಕಟ್ಟು ವಿದ್ಯಾರ್ಥಿಗಳನ್ನು ಬೀದಿಗಿಳಿಯುವಂತೆ ಮಾಡಿತು. ಸರ್ಕಾರದ ಜೊತೆಗಿನ ಮಾತುಕತೆಗಳು ವಿಫಲವಾದಾಗ ಆಕ್ರೋಶಗೊಂಡ ವಿದ್ಯಾರ್ಥಿಗಳು ಮತ್ತು ಯುವಕರ ಗುಂಪು ಪೊಲೀಸ್ ಬ್ಯಾರಿಕೇಡ್‌ಗಳನ್ನು ಮುರಿಯಲು ಯತ್ನಿಸಿ, ಪೊಲೀಸರ ಮೇಲೆ ಬಾಟಲಿ ಹಾಗೂ ಕಲ್ಲುಗಳನ್ನು ತೂರಾಡಿತು. ಕೆಲವು ಕಡೆಗಳಲ್ಲಿ ರಸ್ತೆಗಳಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಮತ್ತು ಸಾರ್ವಜನಿಕ ಆಸ್ತಿಗೆ ಬೆಂಕಿ ಹಚ್ಚುವ ಮೂಲಕ ಉದ್ವಿಗ್ನ ಪರಿಸ್ಥಿತಿ ಎದುರಾಯಿತು.
ಅಲ್ಬೇನಿಯಾದಲ್ಲಿ ಸರ್ಕಾರದ ವಿರುದ್ಧ ಕೇಳಿಬಂದ ಗಂಭೀರ ಸ್ವರೂಪದ ಭ್ರಷ್ಟಾಚಾರದ ಆರೋಪಗಳು ಮತ್ತು ಜನವಿರೋಧಿ ನೀತಿಗಳು ತೀವ್ರ ರಾಜಕೀಯ ಅಶಾಂತಿಗೆ ಕಾರಣವಾದವು. ವಿಪಕ್ಷಗಳು ಮತ್ತು ಸಾರ್ವಜನಿಕರು ನಡೆಸಿದ ಬೃಹತ್ ಆಂದೋಲನಗಳು ನೇರವಾಗಿ ಹಿಂಸಾತ್ಮಕ ಗಲಭೆಗಳಿಗೆ ತಿರುಗಿದವು. ಪ್ರಧಾನಿ ಕಚೇರಿ ಮತ್ತು ಪ್ರಮುಖ ಸರ್ಕಾರಿ ಕಟ್ಟಡಗಳ ಮೇಲೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದರು. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಭಾರಿ ಸಂಘರ್ಷ ನಡೆದು, ದೇಶದಲ್ಲಿ ತೀವ್ರ ರಾಜಕೀಯ ಅಸ್ಥಿರತೆ ಮತ್ತು ಪ್ರಧಾನಿಯವರ ರಾಜೀನಾಮೆಗೆ ಒತ್ತಾಯಿಸುವ ಪರಿಸ್ಥಿತಿ ನಿರ್ಮಾಣವಾಯಿತು.
ಈ ಎಲ್ಲಾ ಪಾಶ್ಚಾತ್ಯ ಹಾಗೂ ಯುರೋಪಿಯನ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಆಯಾ ದೇಶಗಳ ಸ್ಥಳೀಯ ಆರ್ಥಿಕ ಸಮಸ್ಯೆಗಳಾದ ಹಣದುಬ್ಬರ, ನಿರುದ್ಯೋಗ, ವಸತಿ ಕೊರತೆ, ಶಿಕ್ಷಣ ಶುಲ್ಕ ಏರಿಕೆ ಮತ್ತು ಆಡಳಿತಾತ್ಮಕ ವೈಫಲ್ಯಗಳಿಂದ ಹುಟ್ಟಿಕೊಂಡಿರುವ ಆಂತರಿಕ ಬಿಕ್ಕಟ್ಟುಗಳೇ ಆಗಿವೆ. ಪ್ರತಿಯೊಂದು ದೇಶದಲ್ಲೂ ಅಲ್ಲಿನ ಪರಿಸ್ಥಿತಿಗೆ ತಕ್ಕಂತೆ ಹೋರಾಟಗಳ ಸ್ವರೂಪ ಕೂಡ ಬದಲಾಗಿದೆ. ಈ ನೈಜ ಹಿನ್ನೆಲೆಯನ್ನು ಮರೆಮಾಚಿ, ಬೇರೆ ದೇಶಗಳ ಕೆಲವೇ ಕೆಲವು ಹಿಂಸಾತ್ಮಕ ನಿದರ್ಶನಗಳನ್ನು ಮುಂದಿಟ್ಟುಕೊಂಡು ನಮ್ಮ ದೇಶದ ವಿದ್ಯಾರ್ಥಿಗಳ ಮತ್ತು ಯುವಕರ ನ್ಯಾಯಯುತ ಪ್ರತಿಭಟನೆಯನ್ನೂ ‘ಅರಾಜಕತೆ’ ಎಂದು ಬಿಂಬಿಸುವುದು ಮುಖ್ಯವಾಹಿನಿಯ ಮಾಧ್ಯಮಗಳ ಕಪಟ ಧೋರಣೆಯನ್ನು ಎತ್ತಿ ತೋರಿಸುತ್ತದೆ.
ನಮ್ಮ ದೇಶದಲ್ಲಿಯೂ ಕೂಡ ಯುವಕರು ಮತ್ತು ವಿದ್ಯಾರ್ಥಿಗಳು ತಮ್ಮ ಮೂಲಭೂತ ಹಕ್ಕುಗಳು, ನಿರುದ್ಯೋಗ ನಿರ್ಮೂಲನೆ, ಪರೀಕ್ಷಾ ಅಕ್ರಮಗಳ ತಡೆ ಹಾಗೂ ಜನಪರ ನೀತಿಗಳಿಗಾಗಿ ಆರಂಭಿಸಿದ ಪ್ರತಿಭಟನೆಗಳು ಇಂದು ದೊಡ್ಡ ಮಟ್ಟದ ಜನಪರ ಚಳವಳಿಯಾಗಿ ರೂಪುಗೊಂಡಿವೆ. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ವಿಶ್ವವಿದ್ಯಾಲಯಗಳು ಮತ್ತು ಬೀದಿಗಳಲ್ಲಿ ಮೊಳಗಿದ ಈ ಧ್ವನಿಗಳು ಇಂದು ದೇಶದಾದ್ಯಂತ ವ್ಯಾಪಿಸಿ, ವ್ಯವಸ್ಥೆಯ ಲೋಪಗಳನ್ನು ನೇರವಾಗಿ ಪ್ರಶ್ನಿಸುವ ಹಂತಕ್ಕೆ ಬಂದು ನಿಂತಿವೆ. ಆದರೆ, ಈ ನ್ಯಾಯಯುತ ಹೋರಾಟವನ್ನು ಹತ್ತಿಕ್ಕಲು ಆಡಳಿತ ವ್ಯವಸ್ಥೆ ಹಾಗೂ ಅದರ ಕುಮ್ಮಕ್ಕಿನಿಂದ ಕೆಲ ಮಾಧ್ಯಮಗಳು ನಡೆಸುತ್ತಿರುವ ವ್ಯರ್ಥ ಯತ್ನಗಳು ಜಗಜ್ಜಾಹೀರಾಗಿವೆ.



ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸುವ ದಮನಕಾರಿ ಕ್ರಮಗಳು, ಅಶ್ರುವಾಯು ಪ್ರಯೋಗ, ಕಾರಣವಿಲ್ಲದ ಬಂಧನಗಳು, ಲಾಠಿಚಾರ್ಜ್‌ನಂತಹ ಅಮಾನುಷ ಅಕ್ರಮ ಬಂಧನಗಳು ಎಲ್ಲೆ ಮೀರಿದ್ದರೂ, ಮುಖ್ಯವಾಹಿನಿಯ ಗೋದಿ ಮಾಧ್ಯಮಗಳು ಅವುಗಳಲ್ಲಿ ಕನಿಷ್ಠ ಒಂದು ಸುದ್ದಿಯನ್ನೂ ಸಹ ಪ್ರಾಮಾಣಿಕವಾಗಿ ಪ್ರಕಟಿಸಲಿಲ್ಲ. ಸರ್ಕಾರದ ಹಿತ ಕಾಯುವ ಭರದಲ್ಲಿ ಪೊಲೀಸರ ಈ ಮೃಗೀಯ ವರ್ತನೆಯನ್ನು ಮುಚ್ಚಿಹಾಕುವ ಅಥವಾ ಸಮರ್ಥಿಸುವ ಕೆಲಸವನ್ನು ಈ ಮಾಧ್ಯಮಗಳು ಅಚ್ಚುಕಟ್ಟಾಗಿ ಮಾಡಿದ್ದವು. ವಿದ್ಯಾರ್ಥಿಗಳ ರಕ್ತಸಿಕ್ತ ಬಟ್ಟೆಗಳು ಮತ್ತು ಅವರ ಕಣ್ಣೀರು ಮುಖ್ಯವಾಹಿನಿಯ ಸ್ಟುಡಿಯೋಗಳ ದೊಡ್ಡ ಪರದೆಗಳ ಮೇಲೆ ಎಂದಿಗೂ ಗೋಚರಿಸಲೇ ಇಲ್ಲ.
ಆದರೆ, ಮುಖ್ಯವಾಹಿನಿ ಮಾಧ್ಯಮಗಳು ಮುಚ್ಚಿಟ್ಟ ಸತ್ಯವನ್ನು ಹೊರಹಾಕುವಲ್ಲಿ ಸ್ವತಂತ್ರ ಮಾಧ್ಯಮಗಳು, ವಿಶೇಷವಾಗಿ ಯೂಟ್ಯೂಬ್ ಚಾನೆಲ್‌ಗಳು ಮತ್ತು ಡಿಜಿಟಲ್ ಮೀಡಿಯಾಗಳು ಪ್ರಮುಖ ಪಾತ್ರ ನಿರ್ವಹಿಸಿವೆ. ಸ್ಥಳದಲ್ಲೇ ನಿಂತು ರಿಯಲ್-ಟೈಮ್ ವರದಿಗಳನ್ನು ನೀಡುವ ಮೂಲಕ, ಪ್ರತಿಭಟನೆಯ ಸಂಪೂರ್ಣ ಚಿತ್ರಣವನ್ನು ಮತ್ತು ಸರ್ಕಾರದ ದಮನಕಾರಿ ನೀತಿಗಳನ್ನು ಜನರ ಮುಂದಿಟ್ಟವು. ಪೊಲೀಸರ ಅತಿರೇಕದ ಕ್ರಮಗಳು ಹಾಗೂ ಸರ್ಕಾರದ ಜನವಿರೋಧಿ ನೀತಿಗಳನ್ನು ಕಟುವಾಗಿ ಖಂಡಿಸಿದ ಈ ಡಿಜಿಟಲ್ ಮಾಧ್ಯಮಗಳು, ಯುವಕರಿಗೆ ಗಟ್ಟಿ ಧ್ವನಿ ನೀಡಿದವು.
ಇದನ್ನೂ ಓದಿ: ಇದು ಯುವಜನ ಚಳವಳಿಗಳ ಪರ್ವಕಾಲ; ಬಿಜೆಪಿಗೆ ಸಂಕಷ್ಟ ಕಾಲ
ಜನರಿಗೆ ನೈಜ ಸಂಗತಿಗಳನ್ನು ತಲುಪಿಸಬೇಕಿದ್ದ ಮುಖ್ಯವಾಹಿನಿ ಮಾಧ್ಯಮಗಳು ಮಾತ್ರ ಇದರ ವಿರುದ್ಧ ದಿಕ್ಕಿನಲ್ಲಿ ಸಾಗಿವೆ. ಸರ್ಕಾರದ ಕಪಿಮುಷ್ಟಿಯಲ್ಲಿರುವ ಈ ‘ಮಡಿಲ ಮಾಧ್ಯಮಗಳು’ ತಮ್ಮ ಸ್ಟುಡಿಯೋಗಳಲ್ಲಿ ಕುಳಿತು, ನಮ್ಮದೇ ದೇಶದ ಯುವಕರ ಹೋರಾಟವನ್ನು ಹೊರದೇಶಗಳಲ್ಲಿ ನಡೆಯುವ ಹಿಂಸಾಚಾರ ಮತ್ತು ಲೂಟಿಗೆ ಹೋಲಿಸಿ ಬೊಬ್ಬೆ ಹೊಡೆಯುತ್ತಿರುವುದು ಅತ್ಯಂತ ಖಂಡನೀಯ ಹಾಗೂ ನಾಚಿಕೆಗೇಡಿನ ಸಂಗತಿ. ಸತ್ಯವನ್ನು ಮರೆಮಾಚಿ, ಸುಳ್ಳಿನ ಕತೆಗಳನ್ನು ಬಿತ್ತರಿಸುವ ಮೂಲಕ ಇವು ಪ್ರಜಾಪ್ರಭುತ್ವದ ಅತಿ ದೊಡ್ಡ ಶತ್ರುಗಳಾಗಿ ಮಾರ್ಪಟ್ಟಿವೆ ಎಂಬುದನ್ನು ಸಾಬೀತುಪಡಿಸುತ್ತಿವೆ.
ದೇಶದ ಭವಿಷ್ಯ ರೂಪಿಸಬೇಕಾದ ಯುವಕರು ಮತ್ತು ವಿದ್ಯಾರ್ಥಿಗಳು ತಮ್ಮ ಮೂಲಭೂತ ಹಕ್ಕುಗಳಿಗಾಗಿ ಸಂವಿಧಾನಬದ್ಧವಾಗಿ ನಡೆಸುವ ಶಾಂತಿಯುತ ಪ್ರತಿಭಟನೆಗಳನ್ನು ಹತ್ತಿಕ್ಕಲು ಮುಖ್ಯವಾಹಿನಿಯ ಮಾಧ್ಯಮಗಳು ಹೊರದೇಶಗಳ ಹಿಂಸಾಚಾರ ಮತ್ತು ಲೂಟಿಯ ಉದಾಹರಣೆಗಳನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವುದು ಅತ್ಯಂತ ಕಳವಳಕಾರಿ. ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮತ್ತು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮಾಧ್ಯಮಗಳು ನಡೆಸುತ್ತಿರುವ ಈ ಕಪಟ ತಂತ್ರಗಳು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಿವೆ. ಸ್ಥಳೀಯ ಸಮಸ್ಯೆಗಳನ್ನು ಬದಿಗಿಟ್ಟು, ವಿದ್ಯಾರ್ಥಿಗಳ ನ್ಯಾಯಯುತ ಆಕ್ರೋಶವನ್ನು ‘ಅರಾಜಕತೆ’ ಎಂದು ಬಿಂಬಿಸುವ ಬದಲು, ಆಡಳಿತ ವ್ಯವಸ್ಥೆಯ ಲೋಪಗಳನ್ನು ತಿದ್ದಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ನಡೆಯಬೇಕಿದೆ. ಮುಖ್ಯವಾಹಿನಿಯ ಮಾಧ್ಯಮಗಳು ತಮ್ಮ ಕಾರ್ಪೊರೇಟ್ ಮತ್ತು ರಾಜಕೀಯ ಹಿತಾಸಕ್ತಿಗಳನ್ನು ಬದಿಗಿಟ್ಟು, ನೈಜ ಪತ್ರಿಕೋದ್ಯಮದ ಮೌಲ್ಯಗಳನ್ನು ಮೈಗೂಡಿಸಿಕೊಂಡು ಜನರ ಧ್ವನಿಯಾಗುವ ಮೂಲಕ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿ ತನ್ನ ಜವಾಬ್ದಾರಿಯನ್ನು ಮರುಸ್ಥಾಪಿಸಿಕೊಳ್ಳಬೇಕಾದ ತುರ್ತು ಅವಶ್ಯಕತೆ ಇದೆ.





