ರಾಘವೇಶ್ವರ, ನಿತ್ಯಾನಂದ, ಮತ್ತೀಗ ಯೋಗಗುರು ಪ್ರದೀಪ್ ಉಲ್ಲಾಳ್ ನಂತಹ ಅತ್ಯಾಚಾರಿ, ಅನ್ಯಾಯಕಾರಿಗಳಿಗೆ ಅಧ್ಯಾತ್ಮಗುರು-ಯೋಗಗುರು-ಸ್ವಾಮಿಗಳೆಂಬುದು ಸುಂದರ ಪದವಿಗಳು ಅಷ್ಟೇ. ಮನುಷ್ಯ ಸಹಜ ವಾಂಛೆಗಳಿಗೆ ಇವರೆಲ್ಲ ಅತೀತರಲ್ಲ ಎಂಬ ಎಚ್ಚರ ಅನುಯಾಯಿಗಳಿಗೆ ಅಗತ್ಯ
ಸಿನಿಮಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ಎಷ್ಟು ಸಾಮಾನ್ಯವೋ ಅಷ್ಟೇ ಸಾಮಾನ್ಯವಾದ ಮತ್ತೊಂದು ಜಾಗ ಆಧ್ಯಾತ್ಮಿಕ ಕ್ಷೇತ್ರ. ಈಗ ಈ ಚರ್ಚೆ ಯಾಕೆ ಬಂತು ಎಂದರೆ, ಚಿಕ್ಕಮಗಳೂರಿನ ಯೋಗ ಗುರುವೊಬ್ಬನನ್ನು ಎರಡು ದಿನಗಳ ಹಿಂದೆಯಷ್ಟೇ ಅತ್ಯಾಚಾರದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ. ಯೋಗಗುರು, ಮಠದ ಸ್ವಾಮಿ, ಅಧ್ಯಾತ್ಮ ಗುರು, ಪೂಜಾರಿ, ಪಾದ್ರಿ, ಮುಲ್ಲಾ… ಹೀಗೆ ಮಾರ್ಗದರ್ಶಕರ ಸ್ಥಾನದಲ್ಲಿ ನಿಂತವರು ತಮ್ಮ ಅನುಯಾಯಿಗಳನ್ನು, ಭಕ್ತರನ್ನು, ಶಿಷ್ಯರನ್ನು ಲೈಂಗಿಕವಾಗಿ ಬಳಸಿಕೊಳ್ಳುವುದು ಡಿವೈನ್ ರೇಪ್ ಎಂದೇ ಕರೆಯಬೇಕಾಗುತ್ತದೆ. ಮೊದಲು ತಮ್ಮ ಮಾತಿನಿಂದ, ಪ್ರವಚನ, ಬೋಧನೆಯಿಂದ ಮಾನಸಿಕವಾಗಿ ತಾನೊಬ್ಬ ದೈವಾಂಶ ಸಂಭೂತ ಎಂದೋ, ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವ ಪವಾಡ ಪುರುಷ ಎಂದೋ ನಂಬಿಸಿ ನಂತರ ತನಗೆ ಬೇಕಾದಂತೆ ಒಲಿಸಿಕೊಳ್ಳುವ ನಯವಂಚಕರಿಗೆ ಅಧ್ಯಾತ್ಮಗುರು, ಯೋಗಗುರು, ಸ್ವಾಮಿ ಮುಂತಾದವು ಬೇರೆ ಬೇರೆ ಹೆಸರುಗಳಷ್ಟೇ.
ಚಿಕ್ಕಮಗಳೂರಿನ ಯೋಗಗುರು ಪ್ರದೀಪ್ ಉಲ್ಲಾಳ್ ಆನ್ಲೈನ್ನಲ್ಲಿ ಯೋಗ ತರಬೇತಿ ನೀಡುತ್ತ ಪರಿಚಯವಾದ ಯುವತಿಯನ್ನು ಮಲ್ಲೇನಹಳ್ಳಿಯ ತನ್ನ ಯೋಗ ಕೇಂದ್ರಕ್ಕೆ ಕರೆಸಿಕೊಂಡು ಮೂರು ಬಾರಿ ಅತ್ಯಾಚಾರ ಮಾಡಿದ್ದಾನೆ ಎಂದು ಪಂಜಾಬ್ ಮೂಲದ ಕ್ಯಾಲಿಫೋರ್ನಿಯಾ ನಿವಾಸಿ ಯುವತಿ ದೂರು ನೀಡಿದ್ದಾರೆ. “ಹಿಂದಿನ ಜನ್ಮದಲ್ಲಿ ನಮ್ಮ ನಡುವೆ ಸಂಬಂಧ ಇತ್ತು, ಡಿವೈನ್ ಲವ್ ಮಾಡುತ್ತೇನೆ” ಎಂದು ಪುಸಲಾಯಿಸಿ 2021, 2022ರಲ್ಲಿ ಮೂರು ಬಾರಿ ಅತ್ಯಾಚಾರ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮೂರು ಬಾರಿ ಅತ್ಯಾಚಾರವಾದ ಮೇಲೆ, ಎರಡು ವರ್ಷ ಕಳೆದ ನಂತರ ದೂರು ನೀಡುವುದರಿಂದ ಆರೋಪಿಗೆ ಶಿಕ್ಷೆಯಾಗುವುದು ಅನುಮಾನ.

ಈ ಪ್ರಕರಣ ಹತ್ತು ವರ್ಷಗಳ ಹಿಂದೆ ರಾಜ್ಯದಲ್ಲಿ ಭಾರೀ ಸುದ್ದಿ ಮಾಡಿದ್ದ, ರಾಮಕಥಾ ಗಾಯಕಿಯ ಮೇಲೆ ರಾಮನ ಹೆಸರಿನಲ್ಲಿ ನಿರಂತರವಾಗಿ ಲೈಂಗಿಕ ಶೋಷಣೆ ಮಾಡಿದ್ದ ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮಿಯ ʼಸರಣಿ ಅತ್ಯಾಚಾರʼ ಪ್ರಕರಣವನ್ನು ನೆನಪಿಸುತ್ತಿದೆ.
ಮಠದಿಂದ ಆಯೋಜನೆಯಾಗುತ್ತಿದ್ದ ʼರಾಮಕಥಾʼ ಕಾರ್ಯಕ್ರಮದಲ್ಲಿ ಗಾಯಕಿಯಾಗಿದ್ದ ಸಂತ್ರಸ್ತೆ 2014ರಲ್ಲಿ ಹೊಸನಗರ ತಾಲ್ಲೂಕಿನ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮಿ ವಿರುದ್ಧ ಸರಣಿ ಅತ್ಯಾಚಾರದ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸ್ವಾಮೀಜಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376(2)(ಎಫ್) (ಅತ್ಯಾಚಾರ), 376(2)(ಎನ್) (ಬೆದರಿಸಿ ಬಲವಂತದ ಸಂಭೋಗ), 506 (ಕ್ರಿಮಿನಲ್ ಬೆದರಿಕೆ) ಆರೋಪಗಳ ಅಡಿ ಪ್ರಕರಣ ದಾಖಲಿಸಲಾಗಿತ್ತು.
ಎರಡೇ ಎರಡು ವರ್ಷಗಳಲ್ಲಿ ತ್ವರಿತ ವಿಚಾರಣೆ ನಡೆಸಿದ ಬೆಂಗಳೂರಿನ 53ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಜಿ ಬಿ ಮುದಿಗೌಡರ್ ಅವರು “ಆರೋಪಿ ರಾಘವೇಶ್ವರಗೆ ಕಿರುಕುಳ ನೀಡಲು ಮತ್ತು ಅವರ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಲು ಪ್ರಯತ್ನಿಸಲಾಗಿದೆ” ಎಂದು ಹೇಳಿ, ಆರೋಪಿಯನ್ನು ಪ್ರಕರಣದಲ್ಲಿ ಖುಲಾಸೆಗೊಳಿಸಿ 2016 ಮಾರ್ಚ್ 31ರಂದು ತೀರ್ಪು ಪ್ರಕಟಿಸಿದ್ದರು.
ಒಂದು ದಿನಕ್ಕೂ ಆರೋಪಿಯನ್ನು ಪೊಲೀಸರು ಬಂಧಿಸಿರಲಿಲ್ಲ. ಆತನದ್ದು ಪರಸ್ಪರ ಸಮ್ಮತಿಯ ಸಂಭೋಗ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಸ್ಪಷ್ಟವಾಗಿ ಬರೆದಿದ್ದರೂ ಮಠದ ಆತನ ಅಧಿಕಾರ, ಸ್ಥಾನ ಮಾನಕ್ಕೆ ಯಾವುದೇ ಕುಂದು ಬಂದಿಲ್ಲ. ಮಠದ ಭಕ್ತರು ಆತನ ಎಲ್ಲ ಅನಾಚಾರವನ್ನೂ ಹೊಟ್ಟೆಗೆ ಹಾಕಿಕೊಂಡು ದೇವರಂತೆ ಮೆರೆಸಿದ್ದಾರೆ. ಆತನಿಂದ ಈಗಲೂ ಮಠದಲ್ಲಿ ಕನ್ಯಾಪೂಜೆ ನಡೆಯುತ್ತಿದೆ. ಮಹಿಳಾ ಭಕ್ತರ ದಂಡು ಈಗಲೂ ಇದೆ. ಇಡೀ ಸರ್ಕಾರ ನ್ಯಾಯಾಂಗ ವ್ಯವಸ್ಥೆ ಆತನ ಪರ ನಿಂತು ದೂರುದಾರೆಯನ್ನೇ ಅವಮಾನಿಸಿ ಆಕೆ ನೇಪಥ್ಯಕ್ಕೆ ಸರಿಯುವಂತೆ ಮಾಡಿತ್ತು.

ಈತನ ಪರವಾಗಿ ಮಠದ ಮಹಿಳಾ ಭಕ್ತರು ಬೆಂಗಳೂರಿನ ಟೌನ್ಹಾಲ್ ಮುಂದೆ ಘೋಷಣೆ ಕೂಗಿ ಸಂತ್ರಸ್ತೆಯನ್ನೇ ಅವಮಾನಿಸಿದ್ದರು. ಹಲವು ನ್ಯಾಯಾಧೀಶರು ಸ್ವಾಮೀಜಿಯ ವಿರುದ್ಧದ ವಿಚಾರಣೆಯಿಂದ ಹಿಂದೆ ಸರಿದು ನ್ಯಾಯಾಂಗ ವ್ಯವಸ್ಥೆಗೆ ಅವಮಾನ ಮಾಡಿದ್ದರು. ತಮ್ಮದೇ ಹವ್ಯಕ ಸಮುದಾಯದ ಖ್ಯಾತ ಹಾಡುಗಾರ್ತಿಯನ್ನು ತಮ್ಮ ರಾಮಕಥಾ ಸರಣಿ ಕಾರ್ಯಕ್ರಮಗಳಿಗೆ ಹಾಡಲು ದೇಶದೆಲ್ಲೆಡೆ ಕರೆದೊಯ್ದು, ಲೈಂಗಿಕ ಸಂಪರ್ಕ ಮಾಡಲು ʼರಾಮನ ಪ್ರೇರಣೆಯಾಗಿದೆʼ ಎಂದು ಹೇಳಿ ಅತ್ಯಾಚಾರ ಮಾಡಿದ್ದಾನೆ. ಮೊದಲು ಮನಸ್ಸನ್ನು ಕದಿಯುವುದು, ತನ್ನ ಮೇಲೆ ಅಪಾರ ನಂಬಿಕೆ, ಭಕ್ತಿ ಬರುವಂತೆ ಮಾಡುವುದು, ನಂತರ ತನ್ನ ಆಸೆಯನ್ನು ಈಡೇರಿಸಿಕೊಳ್ಳುವುದು ಇಂಥವರ ಚಾಣಕ್ಯ ತಂತ್ರ.
2010ರಲ್ಲಿ ಮತ್ತೊಬ್ಬ ಅಧ್ಯಾತ್ಮ ಗುರು ಬಿಡದಿಯ ನಿತ್ಯಾನಂದ ಸ್ವಾಮಿಯ ವಿರುದ್ಧ ಮಠದ ಅನುಯಾಯಿ ಮಹಿಳೆಯೊಬ್ಬರು ನಿರಂತರ ಅತ್ಯಾಚಾರದ ಆರೋಪ ಮಾಡಿದ್ದರು. ನಿತ್ಯಾನಂದನ ಆಶ್ರಮದಲ್ಲಿ ಸುಮಾರು ಐದು ವರ್ಷಗಳ ಕಾಲ ಶಿಷ್ಯೆಯೊಬ್ಬರ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂಬ ಆರೋಪದಲ್ಲಿ ನಿತ್ಯಾನಂದನ ವಿರುದ್ಧ ಸೆಕ್ಷನ್ 376 (ಅತ್ಯಾಚಾರ), 377 (ಅಸ್ವಾಭಾವಿಕ ಲೈಂಗಿಕತೆ), 420 (ವಂಚನೆ), 114 (ಕ್ರಿಮಿನಲ್ ಕುಮ್ಮಕ್ಕು), 201 (ಸಾಕ್ಷ್ಯಾಧಾರಗಳ ಕಣ್ಮರೆ, ಸುಳ್ಳು ಮಾಹಿತಿ ನೀಡುವುದು), 120 ಬಿ (ಅಪರಾಧ ಪಿತೂರಿ) ಮತ್ತು ಇತರ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
2007ರಲ್ಲಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷ ವಯಸ್ಸಿನ ವೀಣಾಗೆ ಯಾವುದೇ ಸಮಸ್ಯೆ ಇರಲಿಲ್ಲ. ಪತಿಯ ಜೊತೆಗೆ ಅಮೆರಿಕದಲ್ಲಿ ನೆಲೆಸಿದ್ದರು. ಆದರೆ, ಆಕೆಗೆ ತಾನು ಇನ್ನೂ ಏನಾದರೂ ಸಾಧಿಸಬೇಕು ಎಂದು ಒಳಮನಸ್ಸು ಹೇಳುತ್ತಿತ್ತು. ಅಧ್ಯಾತ್ಮದ ಸೆಳೆತವಿತ್ತು. ಆಕೆ ಭಾರತಕ್ಕೆ ತನ್ನ ಪೋಷಕರ ಮನೆಗೆ ಬಂದಾಗ ತಂದೆ ತಾಯಿ ಟಿವಿಯಲ್ಲಿ ನಿತ್ಯಾನಂದನ ಪ್ರವಚನವನ್ನು ನೋಡುತ್ತಿದ್ದರಂತೆ. ಆತನ ಮಾತಿನ ಶೈಲಿಗೆ ಮನಸೋತು ಈಕೆ ಆತನನ್ನು ಭೇಟಿಯಾಗಲು ಬಯಸಿದ್ದಳು. ಕುಟುಂಬದವರೂ ಈತನ ಅನುಯಾಯಿಗಳಾದ ಕಾರಣ ಬೆಂಬಲಿಸಿದ್ದರು. ಹೀಗೆ ಬಿಡದಿಯ ಆಶ್ರಮದಲ್ಲಿ ನಿತ್ಯಾನಂದನನ್ನು ಭೇಟಿಯಾಗಿ ಹೋಗಿದ್ದರು. ಒಂದು ವರ್ಷದ ನಂತರ ಆಕೆ ವೃತ್ತಿ ತೊರೆದು ನಿತ್ಯಾನಂದನ ಆಶ್ರಮದಲ್ಲಿ ಶಿಷ್ಯೆಯಾಗಿ ಸೇರಿಕೊಳ್ಳುತ್ತಾರೆ. ಅಲ್ಲಿಂದ ಆತನ ಲೈಂಗಿಕ ಕಿರುಕುಳ ಶುರುವಾಗುತ್ತದೆ. ಗುರುವಿನ ತೀರಾ ಸಮೀಪಕ್ಕೆ ಹೋಗಲು ಕೆಲವೇ ಕೆಲವು ಅದೃಷ್ಟವಂತರಿಗೆ ಮಾತ್ರ ಸಾಧ್ಯ ಎಂದು ಆತನ ಆಪ್ತ ವಲಯದ ಶಿಷ್ಯರು ಹೇಳುತ್ತಿದ್ದರು.

“ಆತ ತನ್ನನ್ನು ತಾನು ಒಂದೊಂದು ದೇವರ ಅವತಾರ ಎಂದು ಹೇಳುತ್ತಾ ಆಕೆಯನ್ನು ಸಮೀಪಕ್ಕೆ ಕರೆಯುತ್ತಿದ್ದ. ಕೃಷ್ಣನ ಅವತಾರ ಎಂದು ಹೇಳುತ್ತಾ “ನೀನು ರಾಧೆಯಾಗಬೇಕು. ನಾನು ದೇವರು, ನನ್ನ ಆತ್ಮಸಂಗಾತಿಯಾಗಲು (ಸಂಭೋಗ ನಡೆಸಲು) ನೀನು ದೇವರ ಆಶೀರ್ವಾದ ಪಡೆದಿರುವೆ” ಎಂದು ನಂಬಿಸಿ ಅತ್ಯಾಚಾರ ಎಸಗಿದ್ದ. ಆಕೆಯನ್ನು ಮಠದಿಂದ ಹೊರ ಹೋಗಲೂ ಬಿಡದೇ, ವಿಷಯವನ್ನು ಬಹಿರಂಗಪಡಿಸದಂತೆ ಆತನ ಸೇವಕರೇ ಒತ್ತಡ ಹೇರಿದ್ದರು. ಆದರೂ ಆಕೆ ಮಠದಲ್ಲಿ ನಡೆಯುತ್ತಿರುವ ಅವ್ಯವಹಾರ, ಅದರಲ್ಲೂ ಶ್ರೀಮಂತ ಭಕ್ತರನ್ನೇ ಗುರಿಯಾಗಿಸಿ ಸುಲಿಗೆ ಮಾಡುತ್ತಿರುವುದನ್ನು ಕಂಡು ರೋಸಿ ಹೋಗಿ ತನ್ನ ಮೇಲಾದ ಅತ್ಯಾಚಾರವನ್ನು ಬಯಲುಗೊಳಿಸಿದ್ದರು.
ನವೆಂಬರ್ 2010 ರಲ್ಲಿ ಬಿಡದಿ ಪೊಲೀಸರು ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ನಿತ್ಯಾನಂದ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಲು ಶಿಷ್ಯೆಯನ್ನು ಹೇಗೆ ಮನವರಿಕೆ ಮಾಡಿದ್ದಾನೆ ಎಂಬುದನ್ನು ವಿವರಿಸುತ್ತದೆ. ಮಠದಲ್ಲಿ ಉಳಿದುಕೊಳ್ಳುವ ಶಿಷ್ಯೆಯರು ಆತನ ಕೋಣೆಯನ್ನು ಸ್ವಚ್ಛಗೊಳಿಸುವ ಆತನಿಗೆ ಮಸಾಜ್ ಮಾಡುವ ಕೆಲಸ ಮಾಡಬೇಕಿತ್ತು.
ಸಂತ್ರಸ್ತೆಯ ಹೇಳಿಕೆಯ ಪ್ರಕಾರ, ಆಕೆಯನ್ನು ಸ್ವಚ್ಛಗೊಳಿಸುವ ನೆಪದಲ್ಲಿ ಆತನ ಕೋಣೆಗೆ ಕರೆತಂದು ನಿತ್ಯಾನಂದನ ಕಾಲುಗಳಿಗೆ ಮಸಾಜ್ ಮಾಡುವಂತೆ ಹೇಳಲಾಗಿತ್ತು. ಆಕೆ ಮಸಾಜ್ ಮಾಡುವಾಗ ಏಕಾಏಕಿ ತಬ್ಬಿಕೊಂಡು ತುಟಿಗಳಿಗೆ ಮುತ್ತಿಟ್ಟಿದ್ದ. ಆಕೆ ವಿರೋಧಿಸಿದಾಗ ಇವೆಲ್ಲ ಜ್ಞಾನೋದಯಕ್ಕಾಗಿ ಎಂದು ಹೇಳಿದ್ದ. ಆಧ್ಯಾತ್ಮಿಕ ಜ್ಞಾನವನ್ನು ಪಡೆಯಲು ಏಕೈಕ ಮಾರ್ಗವೆಂದರೆ ‘ಆತನ ಮಾತುಗಳನ್ನು ಆಲಿಸಿ ಮತ್ತು ಪಾಲಿಸುವುದು’ ಎಂದು ಹೇಳಿದ್ದಲ್ಲದೇ, ತಾನು ದೇವರು, ‘ಪ್ರೀತಿಯ ಭಾವನೆಯು ಜ್ಞಾನೋದಯಕ್ಕೆ ಒಂದು ಮಾರ್ಗವಾಗಿದೆ’ ಎಂದು ಸಮರ್ಥಿಸಿದ್ದಾನೆ.
ಹೀಗೆ ಆಕೆಯ ಮನಸ್ಸಿನ ಮೇಲೆ ದಾಳಿ ಮಾಡಿ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಆಕೆಯನ್ನು ಸಂಪೂರ್ಣ ಶರಣಾಗುವಂತೆ ಮಾಡಿ ಆಕೆಯ ಮೇಲೆ ವಿವಿಧ ಹೋಟೆಲ್ಗಳಲ್ಲಿ ಮತ್ತು ಬಿಡದಿ ಆಶ್ರಮದಲ್ಲಿ ಹಲವು ಬಾರಿ ಅತ್ಯಾಚಾರವೆಸಗಲಾಯಿತು ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.
ಈ ಪ್ರಕರಣದಲ್ಲಿ ಎರಡು ಬಾರಿ ಬಂಧನಕ್ಕೊಳಗಾದ ನಿತ್ಯಾನಂದ ಜಾಮೀನಿನಲ್ಲಿ ಬಿಡುಗಡೆಯಾಗಿದ್ದ. ಅದಾಗಿ ಹದಿನೈದು ವರ್ಷಗಳಾಗಿವೆ. ಪ್ರಕರಣ ಇನ್ನೂ ಮುಗಿದಿಲ್ಲ. ಅತ್ತ ದೇಶಬಿಟ್ಟ ನಿತ್ಯಾನಂದ ವಿದೇಶದಲ್ಲಿ ದ್ವೀಪವೊಂದನ್ನು ಖರೀದಿಸಿ ʼಕೈಲಾಸʼ ಎಂದು ಹೆಸರಿಟ್ಟು ಅಲ್ಲೂ ಜನರನ್ನು ಮರುಳು ಮಾಡುವ ಕೆಲಸ ಮುಂದುವರಿಸಿದ್ದಾನೆ. ಈ ಎರಡೂ ಸ್ವಾಮಿಗಳ ಪ್ರಕರಣದಲ್ಲಿ ಸಂತ್ರಸ್ತರು ವರ್ಷಗಳ ನಂತರ ದೂರು ನೀಡಿದ್ದರು. ಮೊದಲ ಸಲ ಅತ್ಯಾಚಾರ ನಡೆದಾಗಲೇ ದೂರು ನೀಡದಿದ್ದರೆ, ಹಲವು ಬಾರಿ ನಡೆದ ನಂತರ ಅದು ಒಪ್ಪಿತ ಸಂಬಂಧ ಎನಿಸಿಕೊಳ್ಳುತ್ತದೆಯೇ ಹೊರತು ಅತ್ಯಾಚಾರ ಎನ್ನಲಾಗದು ಎಂದು ಸುಪ್ರೀಂ ಕೋರ್ಟ್ ಕೂಡಾ ಹೇಳಿದೆ. ಇದು ರಾಘವೇಶ್ವರ ಭಾರತೀ ಪ್ರಕರಣದಲ್ಲಿ ರುಜುವಾತಾಗಿದೆ. ವರ್ಷಾನುಗಟ್ಟಲೆ ಲೈಂಗಿಕ ಶೋಷಣೆ ಅನುಭವಿಸಿ ಮೌನವಾಗಿದ್ದು ಎಂದೋ ದೂರು ಕೊಟ್ಟಾಗ ಸಂತ್ರಸ್ತರನ್ನೇ ಅನುಮಾನದಿಂದ ನೋಡುವ ಚಾಳಿ ಈ ಸಮಾಜಕ್ಕೆ ಅಂಟಿದ ರೋಗ.

ನಾಗರಿಕ ಸಮಾಜ ಗಮನಿಸಬೇಕಾದ ಇನ್ನೊಂದು ವಿಚಾರವೆಂದರೆ; ಧರ್ಮಗುರುಗಳು, ಪೀಠಾಧಿಪತಿಗಳು, ಅಧ್ಯಾತ್ಮ ಗುರುಗಳೆಂದುಕೊಂಡವರ ಐಷಾರಾಮಿ ಜೀವನ ಶೈಲಿಗೆ ಅವರ ಅನುಯಾಯಿಗಳಾಗಿರುವ ಸುಶಿಕ್ಷಿತ ಸಮುದಾಯ ಅಷ್ಟೇ ಅಲ್ಲ ಸಿರಿವಂತ ಜನರ ಕೊಡುಗೆ ಅಪಾರವಾದುದು. ಯೋಗ, ಅಧ್ಯಾತ್ಮ ಶಿಬಿರ, ಪ್ರವಚನದ ಹೆಸರಿನಲ್ಲಿ ಸುಲಿಗೆ ಮಾಡಲು ದುರ್ಬಲ ಮನಸ್ಸು ಅಥವಾ ಕೆಲಸದ ಒತ್ತಡ, ಖಿನ್ನತೆಯ ಸಮಸ್ಯೆ ಇರುವ ವ್ಯಕ್ತಿಗಳೇ ಇವರ ಬಂಡವಾಳ. ಅಧ್ಯಾತ್ಮದ ಹೆಸರಿನಲ್ಲಿ ಈಶ ಫೌಂಡೇಷನ್ ಸ್ಥಾಪಿಸಿದ ಸದ್ಗುರುವಿಗೆ ದೇಶ ವಿದೇಶಗಳಲ್ಲಿ ಅನುಯಾಯಿಗಳಿದ್ದಾರೆ. ಶಿವರಾತ್ರಿಯ ದಿನ ಅಹೋರಾತ್ರಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಟಿಕೆಟ್ ದರ ಐದು ಲಕ್ಷದವರೆಗೆ ಇರುತ್ತದೆ. ಅಷ್ಟು ಹಣ ತೆತ್ತು ಸಾವಿರಾರು ಮಂದಿ ಐಟಿ ಉದ್ಯೋಗಿಗಳು ಎಲೈಟ್ ಕ್ಲಾಸ್ನ ಸುಶಿಕ್ಷಿತರು ಬರುತ್ತಾರೆ. ಅಲ್ಲಿ ಮಾದಕ ವಸ್ತು ಸೇವನೆಗೆ ಮುಕ್ತ ಅವಕಾಶ ಇದೆ ಎಂಬ ಮಾತುಗಳು ಕೇಳಿ ಬಂದಿವೆ. ಅಲ್ಲೆಲ್ಲ ನಡೆಯುವ ಲೈಂಗಿಕ ದೌರ್ಜನ್ಯ ಬೆಳಕಿಗೆ ಬರುವುದೇ ಇಲ್ಲ. ಅಧ್ಯಾತ್ಮ ಎಂಬುದು ಮಾತಿನ ವ್ಯಾಪಾರಿಗಳ ದಂಧೆ. ಸದ್ಗುರು ಮೇಲೆ ಅಕ್ರಮ ಭೂವ್ಯವಹಾರದ ಆರೋಪವಿದೆ. ತಮಿಳುನಾಡಿನಲ್ಲಿದ್ದ ʼಈಶ ಫೌಂಡೇಷನ್ʼ ಯೋಗ ಕೇಂದ್ರ ಈಗ ಚಿಕ್ಕಬಳ್ಳಾಪುರಕ್ಕೆ ಶಿಫ್ಟ್ ಆಗಿದೆ.
ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ʼಆರ್ಟ್ ಆಫ್ ಲಿವಿಂಗ್ʼ ಫೌಂಡೇಷನ್ನ ರವಿಶಂಕರ ಗುರೂಜಿಗೂ ದೇಶ ವಿದೇಶದ ಲಕ್ಷಾಂತರ ಮಂದಿ ಅನುಯಾಯಿಗಳಿದ್ದಾರೆ. ಈತನ ಮೇಲೆ ಅಕ್ರಮ ಭೂ ಅಕ್ರಮದ ಆರೋಪ ಇದೆ. ಅಧ್ಯಾತ್ಮವನ್ನು ಬಂಡವಾಳ ಮಾಡಿಕೊಂಡು, ರಿಯಲ್ ಎಸ್ಟೇಟ್ ದಂಧೆ ನಡೆಸುವ ಇವರೆಲ್ಲ ಸಾವಿರಾರು ಕೋಟಿಯ ಒಡೆಯರು.

ಎರಡು ವರ್ಷಗಳ ಹಿಂದೆ ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಸ್ವಾಮೀಜಿ ವಿರುದ್ಧ ಬಂದ ಆರೋಪವನ್ನು ನೆನಪಿಸಿಕೊಳ್ಳೋಣ. ಪ್ರಗತಿಪರ ಸ್ವಾಮೀಜಿ ಎಂದು ಪ್ರಗತಿಪರ ವಲಯದಲ್ಲಿ ಗುರುತಿಸಿಕೊಂಡಿದ್ದ ಶಿವಮೂರ್ತಿ ಸ್ವಾಮಿ ತನ್ನ ಮಠದ ವಿದ್ಯಾರ್ಥಿನಿಲಯದ ಬಡ ಮತ್ತು ಎಳೆಯ ವಿದ್ಯಾರ್ಥಿನಿಯರನ್ನು ತನ್ನ ಲೈಂಗಿಕ ದಾಹ ತಣಿಸಲು ಬಳಸಿಕೊಳ್ಳುತ್ತಿದ್ದ. ಇದು ದಶಕಗಳಿಂದ ನಡೆಯುತ್ತಿದ್ದ ಅನ್ಯಾಯವಾಗಿದ್ದರೂ ಮಠದ ಸಿಬ್ಭಂದಿಯೇ ಸಹಕರಿಸುತ್ತಿದ್ದರು. ಕೆಲವರು ಗೊತ್ತಿದ್ದೂ ಸುಮ್ಮನಾಗಿದ್ದರು. ಅದೊಂದು ಕೆಟ್ಟ ಘಳಿಗೆಯಲ್ಲಿ ಇಬ್ಬರು ಬಾಲಕಿಯರು ಹಾಸ್ಟೆಲ್ನಿಂದ ತಪ್ಪಿಸಿಕೊಂಡು ಹೊರಬಂದು ದೂರು ನೀಡಿದ್ದು, ಅದಕ್ಕೆ ಮೈಸೂರಿನ ಒಡನಾಡಿ ಸಂಸ್ಥೆ ಬೆಂಬಲವಾಗಿ ನಿಂತು ಸ್ವಾಮೀಜಿಯ ವಿರುದ್ಧ ಪೋಕ್ಸೊ ಕೇಸು ದಾಖಲಾದ ನಂತರ ಅನಿವಾರ್ಯವಾಗಿ ಬಂಧಿಸಬೇಕಾಯ್ತು. ಸ್ವಾಮಿ ಈಗಲೂ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾನೆ. ಆದರೆ, ಈತನ ಈ ಚಾಳಿಗೆ ಮುವ್ವತ್ತು ವರ್ಷಗಳ ಕರಾಳ ಇತಿಹಾಸ ಇದೆ ಎಂದು ಅಲ್ಲಿದ್ದ ಹಲವರಿಗೆ ಗೊತ್ತು. ಅಷ್ಟು ವರ್ಷ ಆತನ ಕಾಮಕಾಂಡವನ್ನು ನೋಡಿಯೂ ತಡೆಯದ, ಬಯಲುಗೊಳಿಸದ ಸಮಾಜ ನಮ್ಮದು.
ಆತ ಪ್ರತಿಷ್ಠಿತ ಮಠದ ಸ್ವಾಮಿ, ಸಾವಿರಾರು ಎಕರೆ ಭೂಮಿ, ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಮಠದ ಮುಖ್ಯಸ್ಥ. ಆತನ ಕಾಮದ ಕಣ್ಣಿಗೆ ಬಿದ್ದಿರುವುದು, ಸುಲಭವಾಗಿ ಸಿಕ್ಕಿರುವುದು ಅವನದೇ ಹಾಸ್ಟೆಲ್ನಲ್ಲಿ ಆಶ್ರಯಿಸಿದ್ದ ಬಡ ಮಕ್ಕಳು. ಹೀಗೆ ಬಹುತೇಕ ಕಾವಿಧಾರಿಗಳು, ಯೋಗಗುರು, ಅಧ್ಯಾತ್ಮ ಚಿಂತಕರ ಬಳಿ ಹೋಗುವ ಮಹಿಳೆಯರು ಒಂದಲ್ಲ ಒಂದು ರೀತಿಯಲ್ಲಿ ಅವರ ಕಾಮುಕ ದೃಷ್ಟಿಗೆ ಬಲಿಯಾಗಬೇಕಾಗುತ್ತದೆ. ಇವರೆಲ್ಲರಲ್ಲೂ ಮನುಷ್ಯ ಸಹಜ ವಾಂಛೆಗಳು ಇರುತ್ತವೆ ಎಂಬ ಎಚ್ಚರವನ್ನು ಇಟ್ಟುಕೊಂಡೇ ವ್ಯವಹರಿಸಿದರೆ ಹೆಣ್ಣುಮಕ್ಕಳು ʼಬಲಿಪಶುʼವಾಗುವುದರಿಂದ ತಪ್ಪಿಸಿಕೊಳ್ಳಬಹುದು.

ಹರಿಯಾಣದ ಅಧ್ಯಾತ್ಮ ಗುರು ಸಚ್ಚಾ ಸೌಧದ ರಾಮ್ ರಹೀಂನ ಸಾವಿರಾರು ಕೋಟಿ ಬೆಲೆ ಬಾಳುವ ಸಾಮ್ರಾಜ್ಯದಲ್ಲಿ ನಡೆದ ಅತ್ಯಾಚಾರ, ಕೊಲೆಯ ಕರಾಳ ಚರಿತ್ರೆಯನ್ನು ಕೇಳಿ ದೇಶವೇ ಬೆಚ್ಚಿ ಬಿದ್ದಿತ್ತು. ಆತನ ಐಷಾರಾಮಿ ಹಾಗೂ ಶೋಕೀ ಜೀವನದ ಹಿಂದೆ ಹಲವು ಹೆಣ್ಣುಮಕ್ಕಳ ನೋವಿನ ಕತೆಯಿದೆ. ಕೊಲೆ, ಅತ್ಯಾಚಾರ ಪ್ರಕರಣದಲ್ಲಿ 2019ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರೂ ಪೆರೋಲ್ ಹೆಸರಿನಲ್ಲಿ ವರ್ಷದಲ್ಲಿ ತಿಂಗಳುಗಟ್ಟಲೆ ಹೊರಗಿರುತ್ತಾನೆ. ಇದು ನಮ್ಮ ನ್ಯಾಯಾಂಗ ವ್ಯವಸ್ಥೆಯ ಬಹುದೊಡ್ಡ ಅಣಕ.
ಆದರೆ, ರಾಘವೇಶ್ವರ, ನಿತ್ಯಾನಂದ, ಮತ್ತೀಗ ಯೋಗಗುರು ಪ್ರದೀಪ್ ಉಲ್ಲಾಳ್ ನಂತಹ ಕೀಚಕರ ಬಲಿಪಶುಗಳು ಯಾರೋ ಅನಕ್ಷರಸ್ಥರು, ಬಡವರು ಅಮಾಯಕರಲ್ಲ. ಜನರನ್ನು ಮರುಳು ಮಾಡುವ ಅತ್ಯಾಚಾರಿ, ಅನ್ಯಾಯಕಾರಿಗಳಿಗೆ ಅಧ್ಯಾತ್ಮಗುರು, ಯೋಗಗುರು, ಪೀಠಾಧಿಪತಿಗಳೆಂಬುದು ಸುಂದರ ಪದವಿಗಳು ಅಷ್ಟೇ. ಇಷ್ಟನ್ನು ಸುಶಿಕ್ಷಿತರು ಅರ್ಥ ಮಾಡಿಕೊಳ್ಳದೇ ಅವರ ಬಲೆಗೆ ಬೀಳುತ್ತಿರುವುದು ಮಾತ್ರ ದುರಂತ.

ಹೇಮಾ ವೆಂಕಟ್
ʼಈ ದಿನ.ಕಾಮ್ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಭಾರತದಲ್ಲಿ ಇಂಥಹ ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳದೇ ಇರೋದೇ ಇವ್ರು ಆಡಿದ್ದೇ ಆಟವಾಗಿದೆ. ಅದ್ರೆ ಸಂತ್ರಸ್ತ ಮಹಿಳೆಯರು ದೂರ ಕೊಟ್ರು ಕೆಲವು ದಿಟ್ಟ ಅಧಿಕಾರಿಗಳು ಕಾನೂನು ಕ್ರಮಕೈಗೊಳ್ತಾರೆ. ಇಂಥಹ ಅತ್ಯಾಚಾರಿಗಳ ಮರ್ಮಾಂಗ ಕಟ್ ಮಾಡಬೇಕು.. ಅದೇ ಸರಿಯಾದ ಶಿಕ್ಷೆ ಅನ್ನಿಸುತ್ತದೆ.
ಎಂ.ಶಿವರಾಂ. ಬೆಂಗಳೂರು