ಮನೆಯ ಹತ್ತಿರವೇ ಕಷ್ಟ ಕಾಲಕ್ಕೆ ಸಿಗುತ್ತಿದ್ದ ಕಡಿಮೆ ಬಡ್ಡಿಯ ಅಡಮಾನವಿಲ್ಲದ ಸಾಲ ವ್ಯವಸ್ಥೆಯು ಕುಟಂಬದಲ್ಲಿ ಮಹಿಳೆಯರ ಸ್ಥಾನವನ್ನು ಹೆಚ್ಚಿಸಿತ್ತು. ಸಂಘಕ್ಕೆ ಕಟ್ಟುತ್ತಿದ್ದ ಬಡ್ಡಿಯ ಹಣವು ಸಂಘದಲ್ಲಿಯೇ ಉಳಿದು ಅದಕ್ಕೆ ಎಲ್ಲಾ ಸದಸ್ಯರೂ ಪಾಲುದಾರರಾಗಿದ್ದರು. ಬ್ಯಾಂಕಿನಿಂದ ಸಾಲವನ್ನು ತನ್ನ ನಿಯಮಗಳಡಿ ನೀಡಿ, ಅದು ಸದ್ಬಳಕೆಯಾಗಲು ಬೇಕಾದ ಬೆಂಬಲಿತ ವಾತಾವರಣ ಹಾಗೂ ನಿರಂತರ ಉಸ್ತುವಾರಿಯನ್ನು ಸಂಘವು ಕಲ್ಪಿಸುತ್ತಿತ್ತು.
1984ರಿಂದ ಕರ್ನಾಟಕದ ಹಲವು ಹಳ್ಳಿಗಳಲ್ಲಿ ಸದ್ದಿಲ್ಲದೆ ಸಾಮಾಜಿಕ ಹಾಗೂ ಆರ್ಥಿಕ ಕ್ರಾಂತಿಯೊಂದು ಮಹಿಳೆಯರ ಜೀವನದೊಂದಿಗೆ ವಿಕಸನಗೊಳ್ಳುತ್ತದೆ. ಗ್ರಾಮೀಣ ಅಭಿವೃದ್ಧಿಗಾಗಿ ವಿವಿಧ ಮಾರ್ಗಗಳ ಅನ್ವೇಷಣೆಯಲ್ಲಿ ತೊಡಗಿಕೊಂಡ ಮೈರಾಡ (ಮೈಸೂರು ಪುನರ್ವಸತಿ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ) ಎಂಬ ಸ್ವಯಂ ಸೇವಾಸಂಸ್ಥೆಯು ಈಗಾಗಲೇ ಸಮುದಾಯದಲ್ಲಿದ್ದ ಪರಸ್ಪರ ಸಹಕಾರದ ಪದ್ದತಿಯನ್ನು ಗುರುತಿಸಿ, ಪೋಷಿಸಿ ಅದನ್ನು ಜನಗಳೇ ನಿರ್ವಹಿಸುವಂತಹ ಅನೌಪಚಾರಿಕ ಸಂಘಟನೆಗಳಾಗಿ ರೂಪುಗೊಳಿಸುತ್ತದೆ. ಈ ಪರಿಕಲ್ಪನೆಯು ದೇಶದಾದ್ಯಂತ ಮತ್ತು ಅನೇಕ ಬಡರಾಷ್ಟ್ರಗಳಲ್ಲಿಯೂ ವ್ಯಾಪಕವಾಗಿ ಹರಡುತ್ತದೆ.
40 ವರ್ಷಗಳ ಹಿಂದೆ ಬಡ ಜನರ ಸುಸ್ಥಿರ ಅಭಿವೃದ್ಧಿಯ ಸೂಕ್ತ ಪರ್ಯಾಯ ವ್ಯವಸ್ಥೆಯಾಗಿ ಹೊರಬಂದ ಈ ಸ್ವಸಹಾಯ ಸಂಘಗಳಿಗೆ ಕಿರುಸಾಲ ಸಂಸ್ಥೆಗಳು ಸಾಲಗಳನ್ನು ನೀಡುತ್ತಿರುವ ಹಾಗೂ ಅದರಿಂದಾಗುತ್ತಿರುವ ಶೋಷಣೆಗಳ ಬಗ್ಗೆ ಇತ್ತಿಚೆಗೆ ಮಾಧ್ಯಮಗಳಲ್ಲಿ ಹೆಚ್ಚು ಪ್ರಸಾರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ವಸಹಾಯ ಸಂಘದ ಪರಿಕಲ್ಪನೆ ಮತ್ತು ಅದನ್ನು ಹೊಸಕಿಹಾಕಿದ ಕಥೆಯನ್ನು ಹೇಳುವ ಔಚಿತ್ಯ ಉಂಟಾಗಿದೆ.
ನಮ್ಮ ಹಳ್ಳಿಗರಿಗೆ ಸಾವು, ಮದುವೆ, ಹಬ್ಬ ಜಾತ್ರೆಗಳಲ್ಲಿ ಒಡಗೂಡಿ ಕೆಲಸ ಮಾಡುವಂತಹ ಮತ್ತು ಸಹಕಾರದಲ್ಲಿ ಬದುಕುವ ರೀತಿ ಹೊಸತಾಗಿರಲಿಲ್ಲ. ಹೊಲಮನೆಗಳಲ್ಲಿನ ಬದುಕು ಬಿಟ್ಟು ಬೇರೇನನ್ನು ಕಂಡರಿಯದ ಮಹಿಳೆಯರು ನೆರೆಹೊರೆಯ ಮಹಿಳೆಯರ ಜೊತೆ ತಮ್ಮ ಕಷ್ಟಸುಖಗಳನ್ನು ಹೇಳಿಕೊಂಡು ಅಥವಾ ಜಗಳವಾಡಿಯಾದರೂ ಹಗುರಾಗುವ ಮೂಲಕ ತಮ್ಮ ಸಾಮಾಜಿಕ ಹಾಗೂ ಮಾನಸಿಕ ಒತ್ತಡಗಳನ್ನು ಸಂಭಾಳಿಸುತ್ತಿದ್ದ ಬಗೆಯನ್ನು ಕ್ರಿಯಾಶೀಲವಾಗಿ ಮುನ್ನಡೆಸುವಂತಹ ಒಂದು ವ್ಯವಸ್ಥೆ ಬೇಕಿತ್ತು ಅಷ್ಟೇ. ಜೊತೆಗೆ, ಅತೀ ಬಡತನ ಹಾಗೂ ಅಭಾವ ಸ್ಥಿತಿಯಲ್ಲಿಯೂ ಸಾಸಿವೆ ಜೀರಿಗೆ ಡಬ್ಬಗಳಲ್ಲಿ ಕಾಸು ಉಳಿಸಿಟ್ಟು ಕುಟುಂಬದ ಆರ್ಥಿಕತೆಯನ್ನು ನೇರ್ಪುಗೊಳಿಸುವ ಪರಿಣಿತಿ ಇದ್ದ ಮಹಿಳೆಯರ ಕೈಗೊಂದಿಷ್ಟು ಬಂಡವಾಳ ಸಿಗುವಂತೆ ಮಾಡಿ ಅದರ ನಿರ್ವಹಣೆಯನ್ನು ಕಲಿಸಬೇಕಿತ್ತು. ಬಡ ಕುಟುಂಬಗಳ ಗಂಡಸರು ಊರಿನ ಲೇವಾದೇವಿಗಾರರ ಸಂಕೋಲೆಯಲ್ಲಿ ಸಿಲುಕಿ ಹೊಲ, ಮನೆಗಳನ್ನು ಕಳೆದುಕೊಂಡು ಬಡತನದ ಸುಳಿಯಲ್ಲಿ ತೊಳಲಾಡುತ್ತಿದ್ದ ಪರಿಸ್ಥಿತಿ ಸಾಮಾನ್ಯವಾಗಿತ್ತು.

ಮೈರಾಡದ ಅಧ್ಯಯನದಲ್ಲಿ ಬಡವರಿಗೆ ತುರ್ತಾಗಿ ಅತಿ ಸಣ್ಣ ಸಾಲಗಳು ಪದೇ ಪದೇ ಬೇಕಾಗಿದೆ ಎಂಬ ಮೂರು ಅಂಶಗಳು ಬೆಳಕಿಗೆ ಬರುತ್ತವೆ. ಈ ಅವಶ್ಯಕತೆಗಳು ಹೆಚ್ಚಿನಂಶ ಸಾಮಾಜಿಕ ಜರೂರುಗಳಿಗಾಗಿದ್ದು, ಇವು ಖರ್ಚಿನ ಬಾಬ್ತಾದ ಮತ್ತು ಅಡವಿಡಲು ಆಸ್ತಿ ಇಲ್ಲದ ಕಾರಣ ಬಡವರಿಗೆ ಬಂಡವಾಳ ನೀಡಲು ಯಾವುದೇ ಔಪಚಾರಿಕ ಅರ್ಥಿಕ ವ್ಯವಸ್ಥೆಗಳು ಅಂದು ತಯಾರಿರಲಿಲ್ಲ. ಬಡವರು ಸಾಲ ಪಡೆಯಲು ಯೋಗ್ಯರೇ ಅಲ್ಲವೆಂದು ತಿರ್ಮಾನಿಸಿದ್ದ ಕಾರಣ, ಸ್ಥಳಿಯ ಜಮೀನ್ದಾರರು ಮತ್ತು ದೊಡ್ಡ ವ್ಯಾಪಾರಸ್ಥರೇ ಈ ಸಾಲಗಳ ದಾತರಾಗಿದ್ದರು. ಬಡವರು ಅಂದಿನಿಂದಲೂ ದೇಶದ ಯಾವ ಶ್ರೀಮಂತರೂ ನೀಡದ ಹೆಚ್ಚು ಬಡ್ಡಿ ನೀಡುತ್ತಿದ್ದಾರೆ. ಸರಿಸುಮಾರು ವಾರ್ಷಿಕ 60% ರಿಂದ 240% (ತಿಂಗಳಿಗೆ ರೂ.5 ರಿಂದ 20 ರೂ ತನಕ) ಬಡ್ಡಿಯನ್ನು ತೆರಬೇಕಿದ್ದು, ನಗರಗಳಲ್ಲಿ ಇದು ಇನ್ನೂ ಹೆಚ್ಚಿತ್ತು.
ಇದೆಲ್ಲವನ್ನು ಗ್ರಹಿಸಿದ ಮೈರಾಡವು ಬಾಂಧವ್ಯತೆ (ಆಫಿನಿಟಿ) ಇರುವ ಸುಮಾರು 10 ರಿಂದ 20 ಗ್ರಾಮೀಣ ಬಡ ಮಹಿಳೆಯರನ್ನು ಚಿಕ್ಕ ಚಿಕ್ಕ ಸಂಘಗಳಾಗಿ ಒಗ್ಗೂಡಿಸಿತ್ತು. ಇವು ಸಾಮಾನ್ಯವಾಗಿ ಒಂದೇ ರೀತಿಯ ಸಾಮಾಜಿಕ ಹಾಗೂ ಆರ್ಥಿಕ ನೆಲೆಯುಳ್ಳ ಮಹಿಳೆಯರು ಸ್ವಯಂಪ್ರೇರಿತರಾಗಿ ರಚಿಸಿಕೊಂಡ ರಾಜಕೀಯರಹಿತ ಸಂಘಟನೆಗಳಾಗಿದ್ದವು. ಹೆಚ್ಚು ಮಹಿಳೆಯರ ಸಂಘಗಳು ರಚನೆಯಾಗಿ, ಪ್ರತಿ ಸಂಘಗಳು ತಮಗೊಂದು ಹೆಸರನ್ನು ಇಟ್ಟುಕೊಂಡು, ಅದರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದಿದ್ದವು. ಯಾವುದೇ ಕಾಯ್ದೆಯಡಿ ನೋಂದಣಿಯಾಗದ ಇವು ಅನೌಪಚಾರಿಕ ಸಂಘಟನೆಯಾಗಿವೆ.
ಪ್ರತಿವಾರ ತಮಗಾದ ಸಮಯದಲ್ಲಿ ತಮ್ಮ ಮನೆಗಳ ಹತ್ತಿರವೇ ಸಭೆ ಸೇರುವುದು, ಕೈಲಾದಷ್ಟು ಉಳಿತಾಯ ಮಾಡುವುದು, ಸದಸ್ಯರ ಅವಶ್ಯಕತೆಗೆ ಅನುಸಾರವಾಗಿ ತಮ್ಮದೇ ಉಳಿತಾಯದಿಂದ ಸಣ್ಣ ಸಾಲ ನೀಡಿ, ಉದ್ದೇಶಕ್ಕೆ ತಕ್ಕಂತೆ ಬಡ್ಡಿ ನಿಗದಿಪಡಿಸುವುದು, ಚಿಕ್ಕ ಕಂತುಗಳಲ್ಲಿ ಮರುಪಾವತಿ ಮಾಡಿಕೊಳ್ಳುವುದು, ಇದೆಲ್ಲದರ ಲೆಕ್ಕವನ್ನು ಬರೆದಿಡುವುದು, ಸಂದರ್ಭಕ್ಕನುಸಾರವಾಗಿ ನಿಯಮಗಳನ್ನು ಸದಸ್ಯರೆಲ್ಲರೂ ಚರ್ಚಿಸಿ ರಚಿಸಿಕೊಳ್ಳುವುದು ಮತ್ತು ಎರಡು ಪ್ರತಿನಿಧಿಗಳನ್ನು ಸರದಿಯಂತೆ ಆಯ್ಕೆ ಮಾಡುವುದು – ಇವು ಸಂಘಗಳಲ್ಲಿನ ಒಂದು ಪ್ರಕಾರದ ಕೆಲಸಗಳಾದರೆ, ಸದಸ್ಯೆಯರ ಕುಟುಂಬ/ಸ್ವಂತದ ಸಮಸ್ಯೆಗಳನ್ನು ಆಲಿಸುವುದು, ಚರ್ಚಿಸುವುದು, ನೈತಿಕ ಬೆಂಬಲ ಸೂಚಿಸಿ, ನಾವೆಲ್ಲರೂ ನಿನ್ನೊಂದಿಗಿದ್ದೇವೆ ಎಂಬ ಭರವಸೆ ಮೂಡಿಸುವ ಜೊತೆಗೆ ಸಮಸ್ಯೆಗಳ ಪರಿಹಾರಕ್ಕೆ ಒಗ್ಗೂಡಿತ ಕ್ರಮಗಳನ್ನು ಕೈಗೊಳ್ಳುವುದು, ಗ್ರಾಮದ ಅಭಿವೃದ್ಧಿ ಚಟುವಟಿಕೆಯಲ್ಲಿ ಭಾಗವಹಿಸುವುದು – ಇವುಗಳು ಇನ್ನೊಂದು ಪ್ರಕಾರದ ಅತಿ ಪ್ರಮುಖ ಕೆಲಸವಾಗಿತ್ತು.
ಸಂಪೂರ್ಣ ಸಹಭಾಗಿತ್ವದಲ್ಲಿ ನಡೆಯುತ್ತಿದ್ದ ಈ ಎರಡೂ ರೀತಿಯ ಕೆಲಸಗಳಲ್ಲಿ ಎಲ್ಲರೂ ಎಲ್ಲಾ ತೀರ್ಮಾನಗಳಲ್ಲಿ ಭಾಗವಹಿಸುತ್ತಿದ್ದ ಪ್ರಕ್ರಿಯೆ ಅವರ ಸಬಲೀಕರಣಕ್ಕೆ ಬಹು ಪೂರಕವಾಗಿತ್ತು. ಕಾಲಕ್ರಮೇಣ ಸದಸ್ಯರುಗಳಲ್ಲಿ ಪರಸ್ಪರ ಪ್ರೀತಿ, ಸಹಕಾರ, ನಿರಂತರ ಕಲಿಕೆ, ಜ್ಞಾನ ಮತ್ತು ಹಂಚಿಕೊಳ್ಳುವಂತಹ ಪ್ರಕ್ರಿಯೆಗಳು ಬೆಳೆದು, ಇದು ಮಹಿಳೆಯರಲ್ಲಿ ಆತ್ಮ ವಿಶ್ವಾಸ ಮತ್ತು ದೃಢತೆಯನ್ನು ಹಿಗ್ಗಿಸಿ ಕುಟುಂಬ ಮತ್ತು ಸಮಾಜದಲ್ಲಿ ತಮ್ಮ ನ್ಯಾಯಯುತ ಹಕ್ಕುಗಳನ್ನು ಸ್ಥಾಪಿಸಿಕೊಳ್ಳುವ ಜೊತೆಗೆ ತಮ್ಮ ಮೇಲಿನ ದೌರ್ಜನ್ಯಗಳನ್ನು ಹತ್ತಿಕ್ಕುವ ಒಗ್ಗೂಡಿತ ಬಲವಾಗಿ ಈ ಸಂಘಗಳು ಬೆಳೆದಿದ್ದವು.
ಮನೆಯ ಹತ್ತಿರವೇ ಕಷ್ಟಕಾಲಕ್ಕೆ ಸಿಗುತ್ತಿದ್ದ ಕಡಿಮೆ ಬಡ್ಡಿಯ ಅಡಮಾನವಿಲ್ಲದ ಸಾಲ ವ್ಯವಸ್ಥೆಯು ಕುಟಂಬದಲ್ಲಿ ಮಹಿಳೆಯರ ಸ್ಥಾನವನ್ನು ಹೆಚ್ಚಿಸಿತ್ತು. ಸಂಘಕ್ಕೆ ಕಟ್ಟುತ್ತಿದ್ದ ಬಡ್ಡಿಯ ಹಣವು ಸಂಘದಲ್ಲಿಯೇ ಉಳಿದು ಅದಕ್ಕೆ ಎಲ್ಲಾ ಸದಸ್ಯರೂ ಪಾಲುದಾರರಾಗಿದ್ದರು. ಬ್ಯಾಂಕಿನಿಂದ ಸಾಲವನ್ನು ತನ್ನ ನಿಯಮಗಳಡಿ ನೀಡಿ, ಅದು ಸದ್ಬಳಕೆಯಾಗಲು ಬೇಕಾದ ಬೆಂಬಲಿತ ವಾತಾವರಣ ಹಾಗೂ ನಿರಂತರ ಉಸ್ತುವಾರಿಯನ್ನು ಸಂಘವು ಕಲ್ಪಿಸುತ್ತಿತ್ತು. ಉದಾಹರಣೆಗೆ, ಸಂಘದಿಂದ ಸಾಲ ಪಡೆದು ಲೇವಾದೇವಿಗಾರನ ಹಳೆ ಬಾಕಿ ತೀರಿಸಿದ ನಂತರವೂ ಅವನು ಜೀತಕ್ಕಿಟ್ಟುಕೊಂಡಿದ್ದ ಆ ಮಹಿಳೆಯ 13 ವರ್ಷದ ಮಗನನ್ನು ವಾಪಸ್ಸು ಕಳಿಸಲು ತಯಾರಿರಲಿಲ್ಲ. ಆಗ ಸಂಘದ ಎಲ್ಲಾ ಸದಸ್ಯರು ಗಲಾಟೆ ಮಾಡಿ ಹುಡುಗನನ್ನು ಮನೆಗೆ ಕರೆತಂದಿದ್ದರು.
ಈ ವ್ಯವಸ್ಥೆಯನ್ನು ಕೆಲವೊಮ್ಮೆ ಬಾಂಗ್ಲಾದೇಶದ ಗ್ರಾಮೀಣ ಬ್ಯಾಂಕ್ ಸಾಲದ ಸಣ್ಣ ಗುಂಪುಗಳಿಗೆ ಹೋಲಿಸಲಾಗುತ್ತಿತ್ತು. ಆದರೆ ಅದು ಸರಿಯಲ್ಲ. ಇವು ಬಾಂಧವ್ಯದ ತಳಹದಿಯಲ್ಲಿ ರಚಿತವಾದ, ಸಬಲತೆಯನ್ನು ಸೃಷ್ಟಿಸುವ ವಾತಾವರಣದಲ್ಲಿ, ತಮ್ಮದೇ ಉಳಿತಾಯದ ಮೂಲ ಬಂಡವಾಳವನ್ನು ಬಳಸಿ ಸದಸ್ಯರ ದಿನನಿತ್ಯದ ಸಣ್ಣ ಸಾಲಗಳ ಅವಶ್ಯಕತೆಯನ್ನು ಪೂರೈಸುವ ಜನಸಂಘಟನೆಗಳಾಗಿವೆ. ಕ್ರಮೇಣ ಸ್ವಂತ ಕಾರ್ಯಕ್ಷಮತೆಯ ಸಾಮರ್ಥ್ಯದಿಂದ ದೊಡ್ಡ ಮೊತ್ತದ ಸಾಲಗಳನ್ನು ಬ್ಯಾಂಕುಗಳಿಂದ ಪಡೆದು ತಮ್ಮ ಕುಟುಂಬದ ಆಸ್ತಿ/ಆದಾಯ ಹೆಚ್ಚಿಸಿಕೊಳ್ಳುತ್ತಿದ್ದ ಈ ಸಂಘಟನೆಗಳು ತಮ್ಮ ತಮ್ಮ ನೆಲ ಸಂಸೃತಿಯ ಮೇಲೆ ನಿಂತ ಭಾರತೀಯ ಮೂಲದ ವಿಶೇಷ ಮಾದರಿಯಾಗಿದೆ ಎನ್ನುತ್ತದೆ ಮೈರಾಡ.
1987ರಲ್ಲಿ ಮೈರಾಡವು ನಡೆಸುವ ಸ್ವಸಹಾಯ ಸಂಘದ ಪರಿಕಲ್ಪನೆಯ ಪ್ರಯೋಗಾತ್ಮಕ ಯೋಜನೆಗೆ ಜೊತೆಯಾಗಿ ನಾಬಾರ್ಡ್ ಹತ್ತು ಲಕ್ಷಗಳ ಸಹಾಯಧನವನ್ನು ನೀಡುತ್ತದೆ. ಈ ಪ್ರಯೋಗವನ್ನು ಹತ್ತಿರದಿಂದ ಗಮನಿಸಿ, ಅದರ ಬೆಳವಣಿಗೆಯಿಂದ ಉತ್ತೇಜಿತಗೊಂಡ ನಾಬಾರ್ಡ್ ಮೈರಾಡದೊಂದಿಗೆ ಸೇರಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ (RBI) ಬ್ಯಾಂಕುಗಳು ನೇರವಾಗಿ 500 ಸಂಘಗಳಿಗೆ ಸಾಲ ನೀಡುವಂತಹ ತನ್ನSHG-Bank ಲಿಂಕೆಜ್ ಪ್ರಯೋಗಕ್ಕೆ 1991ರಲ್ಲಿ ಆದೇಶ ಹೊರಡಿಸುವಲ್ಲಿ ಯಶಸ್ವಿಯಾಗುತ್ತದೆ. ಸಂಘಕ್ಕೆ ನೇರವಾಗಿ ಸಾಲ ನೀಡುವ (ಸಂಘದ ಸದಸ್ಯರಿಗಲ್ಲ), ಸಾಲ ಕೊಡುವ ಮೊದಲೇ ಸಾಲದ ಉದ್ದೇಶವನ್ನು ಬ್ಯಾಂಕುಗಳು ಕೇಳಬೇಕಾಗಿಲ್ಲದ ಮತ್ತು ನೋಂದಣಿಯಾಗದ ಸಂಘದ ಖಾತೆಗೆ ಸಾಲ ಕೊಡುವಂತಹ ಈ ಮೂರು ನೀತಿ ಬದಲಾವಣೆಗಳು ಪ್ರಮುಖವಾಗಿವೆ. (Fernandez A.P, 2004, Sanghamithra – A Micro Finance Instution With A Difference)
ಇದರಿಂದ ಸಂಘವು ತನ್ನ ಯಾವ ಸದಸ್ಯರಿಗೆ, ಯಾವ ಉದ್ದೇಶಕ್ಕೆ, ಎಷ್ಟು ಸಾಲ ನೀಡಬೇಕು, ಎಷ್ಟು ಸೇವಾಶುಲ್ಕ ಮತ್ತು ಮರುಪಾವತಿ ಕಂತುಗಳ ಕುರಿತು ಸ್ವಂತ ತೀರ್ಮಾನ ಕೈಗೊಳ್ಳುವಂತಾಗುತ್ತದೆ. ಈ ಪ್ರಯೋಗದ ಇನ್ನೊಂದು ಭಾಗವಾಗಿ ನಬಾರ್ಡ್ ಸ್ವಯಂ ಸೇವಾ ಸಂಸ್ಥೆಗಳ ಮೂಲಕವೂ ಸಹ ಸಂಘಗಳಿಗೆ ಬಂಡವಾಳ ಹರಿವಿಕೆಯ ಮತ್ತೊಂದು ಮಾರ್ಗವನ್ನು (NGO- SHG ಲಿಂಕೆಜ್) ತೆರೆಯುತ್ತದೆ.
ನಾಬಾರ್ಡ್ ಪ್ರಯೋಗದಲ್ಲಿ ನಿಗದಿಸಿದ 500 ಸಂಘಗಳಿಗೂ ಮೀರಿ ಹೆಚ್ಚು ಸಂಘಗಳಿಗೆ ಸಾಲ ನೀಡುವ ಬ್ಯಾಂಕುಗಳು ಅವುಗಳ ಸಾಲ ಬಳಕೆ ಮತ್ತು 98%ಕ್ಕೂ ಹೆಚ್ಚಿನ ಮರುಪಾವತಿ ಕುರಿತು ಸಮಾಧಾನ ಹೊಂದುತ್ತಾರೆ. ಸಾಲ ಪಡೆಯುವ ಮತ್ತು ನೀಡುವ ಇಬ್ಬರಿಗೂ ಕಡಿಮೆ ಖರ್ಚಿನಲ್ಲಿ ನಡೆಯುವ ವ್ಯವಸ್ಥೆ ಇದಾಗಿದೆಯೆಂದು ನಾಬಾರ್ಡ್ ತನ್ನ ಅಧ್ಯಯನದಲ್ಲಿ ದಾಖಲಿಸುತ್ತದೆ. (ಮೈರಾಡದ RMS ಪತ್ರಿಕೆ 34) ಸಂಘಗಳಿಗೆ ದೇಶದಾದ್ಯಂತ ಎಲ್ಲಾ ಕ್ಷೇತ್ರವಾರು ಬ್ಯಾಂಕುಗಳು ಆದ್ಯತಾ ಕ್ಷೇತ್ರದ ಬಂಡವಾಳದಡಿ (ಪ್ರಿಯಾರಿಟಿ ಸೆಕ್ಟರ್) ಸಾಲ ನೀಡುವ ಗುರಿ ನಿಗದಿಸಿ ಸ್ವ-ಸಹಾಯ ಸಂಘವನ್ನು ಮುಖ್ಯವಾಹಿನಿಗೆ ತರಲಾಗುತ್ತದೆ. ಆದರೂ, 1999ರ ತನಕ ಕೇವಲ 32,995 ಸಂಘಗಳು ಮಾತ್ರ ಬ್ಯಾಂಕ್ ಸಾಲ ಪಡೆದಿರುತ್ತವೆ ಎಂದು ತಿಳಿದುಬರುತ್ತದೆ.
ಈ ನಡುವೆ, ಮೈರಾಡವು ಸಂಘದ ತರಬೇತಿ ಅವಶ್ಯಕತೆಗಳನ್ನು ಗುರುತಿಸಿ ತರಬೇತಿ ಮಾದರಿಯನ್ನು ರಚಿಸಿ ಸಂಘಗಳಿಗೆ ಆಳವಡಿಸುತ್ತದೆ. ನಬಾರ್ಡ್ ಸಹಾಯದೊಂದಿಗೆ ನೂರಾರು ಬ್ಯಾಂಕ್ ಅಧಿಕಾರಿಗಳಿಗೂ ಸಹ ತರಬೇತಿ ಮತ್ತು ಕ್ಷೇತ್ರ ಭೇಟಿಗಳನ್ನು ಆಯೋಜಿಸುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ-ಸೇವಾ ಸಂಸ್ಥೆಗಳು ಸಂಘಗಳ ರಚನೆಯಲ್ಲಿ ತೊಡಗಿಕೊಳ್ಳುತ್ತವೆ. ಈ ಬೆಳವಣಿಗೆಯಿಂದ ಪ್ರಭಾವಿತರಾಗಿ ವಿದೇಶಿ ಅಭಿವೃದ್ಧಿ ಸಂಸ್ಥೆಗಳು ಸರ್ಕಾರಗಳೊಂದಿಗೆ ಸೇರಿ ಸಂಘಗಳಿಗೆ ಯೋಜನೆಗಳನ್ನು ರಚಿಸುತ್ತವೆ; ಮೊದಲಿಗೆ ಇಫಾಡ್ ಅನುದಾನಿತ ಯೋಜನೆಗಳು ತಮಿಳುನಾಡು, ಕರ್ನಾಟಕ (ಸ್ವಶಕ್ತಿ) ಹಾಗೂ ಅನೇಕ ಉತ್ತರದ ರಾಜ್ಯಗಳಲ್ಲಿ ಅನುಷ್ಠಾನಗೊಳ್ಳುತ್ತವೆ. ಅಲ್ಲದೆ, ಅನೇಕ ರಾಜ್ಯ ಸರ್ಕಾರಗಳು (ಕರ್ನಾಟಕದಲ್ಲಿ ಸ್ತ್ರಿಶಕ್ತಿ) ಹಾಗೂ ಕೇಂದ್ರವು (ಸ್ವರ್ಣಜಯಂತಿ ಗ್ರಾಮ ಸ್ವರಾಜ್ಗಾರ್, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ) ಸಂಘಗಳಿಗೆ ತರಬೇತಿ, ಸಾಲ / ಅನುದಾನದ ಯೋಜನೆಗಳನ್ನು ಯೋಜಿಸುತ್ತವೆ.
ಈ ಬೆಂಬಲಿತ ವಾತಾವರಣದಿಂದ, 1999ರ ನಂತರದಿಂದ ಬ್ಯಾಂಕ್ಗಳು ಹೆಚ್ಚುಸಂಘಗಳಿಗೆ ಸಾಲವನ್ನು ನೀಡುತ್ತವೆ. ಮಾರ್ಚ್ 2005ಕ್ಕೆ ಬ್ಯಾಂಕುಗಳು 16,18,456 ಸಂಘಗಳಿಗೆ ಸುಮಾರು 120 ಮಿಲಿಯನ್ ಸಾಲವನ್ನು ಕೊಟ್ಟಿದ್ದು, ಇದು ಪ್ರಪಂಚದಲ್ಲಿಯೇ ಅತ್ಯಂತ ಬೃಹತ್ ಸಣ್ಣ ಸಾಲಗಳ ವ್ಯವಸ್ಥೆಯಾಗಿದೆ ಎಂದು ಮೈರಾಡ ತನ್ನ RMS ಪತ್ರಿಕೆ 73ರಲ್ಲಿ ಹೇಳಿದೆ. ಇದೇ ವಿಚಾರವನ್ನು ಇಂದಿಗೂ ಹೇಳುವ ನಬಾರ್ಡ್, 31ನೇ ಮಾರ್ಚ್ 2024ಕ್ಕೆ ಒಟ್ಟು 144.22 ಲಕ್ಷ ಸಂಘಗಳಿಗೆ ಬ್ಯಾಂಕುಗಳು ಸುಮಾರು 2,09,285 ಕೋಟಿ ಸಾಲ ಕೊಟ್ಟಿರುವುದಾಗಿ ತನ್ನ ವೆಬ್ಸೈಟ್ನಲ್ಲಿ ಹೇಳಿರುತ್ತದೆ. ಸಂಘದ ಬೆಳವಣಿಗೆಯಿಂದ ಸ್ಥಳಿಯ ಲೇವಾದೇವು ಬಡ್ಡಿ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿ ಅದರ ವಾರ್ಷಿಕ ಬಡ್ಡಿ ದರವು 2005ರ ಆಸುಪಾಸಿನಲ್ಲಿಯೇ 30-36%ಕ್ಕೆ ಕುಸಿದಿದೆಯೆಂದು ಅಂದಾಜಿಸಲಾಗಿತ್ತು.
ಸರದಿಯಂತೆ ಬ್ಯಾಂಕುಗಳಿಗೆ ಹೋಗಿ ಬರುವ, ಅಧಿಕಾರಿಗಳೊಂದಿಗೆ ಚರ್ಚಿಸಿ ಮನವರಿಕೆ ಮಾಡಿಸಿ ವ್ಯವಹರಿಸುವ ನಿರಂತರ ಪ್ರಕ್ರಿಯೆಯು ಸಂಘದ ಮಹಿಳೆಯರ ಜೀವನದಲ್ಲಿ ಚಲನೆಯನ್ನು ಸೃಷ್ಟಿಸುತ್ತದೆ. ಈ ಸ್ವಸಹಾಯ ಸಂಘವೆಂಬ ಪರಿಕಲ್ಪನೆಯು ಪ್ರಚಾರದಿಂದ ದೂರವಾಗಿ ಸದ್ದಿಲ್ಲದೆ ಎಲ್ಲಡೆ ಹರಡಿ ಬಂಡವಾಳಶಾಹಿಗಳ ಗಮನ ಸೆಳೆದಂತೆ ಮಹಿಳೆಯರ ಸಬಲೀಕರಣದ ಸಂಭ್ರಮ ಬಹಳ ದಿನ ಉಳಿಯುವುದಿಲ್ಲ.

ಬ್ಯಾಂಕುಗಳು ಈ ಅನೌಪಚಾರಿಕ ಸಂಘಗಳಿಗೆ ಬಾಗಿಲು ತೆರೆದರೂ ಸಹ, ಸಾಲದ ಬೇಡಿಕೆ ಅಧಿಕವಾಗಿರುತ್ತದೆ. ಬ್ಯಾಂಕುಗಳು ಸಮೀಕರಣಗೊಂಡು ಶಾಖೆಗಳು ಕಮ್ಮಿಯಾಗುತ್ತವೆ. ಆಗ, ಆರೋಗ್ಯಪೂರ್ಣ ಸ್ಪರ್ಧಾತ್ಮಕ ವಾತಾವರಣ ಸೃಷ್ಟಿಸಲು ‘ಸಂಘಮಿತ್ರ ಗ್ರಾಮೀಣ ಹಣಕಾಸು ಸೇವೆಗಳು’ ಎಂಬ ಸಣ್ಣ ಸಾಲಗಳ ಸಂಸ್ಥೆಯನ್ನು ಜನೇವರಿ 1995ರಲ್ಲಿ ಮೈರಾಡವು ತೆರೆಯುತ್ತದೆ. ಇದು ಸೆಕ್ಷನ್ 25ರ ಕಂಪೆನಿ ಕಾಯ್ದೆ 19-56ರಡಿ ನೊಂದಾಯಿಸಲ್ಪಟ್ಟ ಲಾಭಕ್ಕಲ್ಲದ (ನಾಟ್ ಫಾರ್ ಪ್ರಾಫಿಟ್) ಸಂಸ್ಥೆಯಾಗಿದ್ದು, ತನ್ನ ಲಾಭಾಂಶವನ್ನು ಸಂಘದ ಬೆಳವಣಿಗೆಗೆ ಖರ್ಚು ಮಾಡುತ್ತದೆ. ಈ ನಡುವೆ, ನಾಬಾರ್ಡ್ ತನ್ನ ಹೊಸ ಅವಿಷ್ಕಾರಗಳ ಭಾಗವಾಗಿ ಜಾಯಿಂಟ್ ಲಯಬಿಲಿಟಿ ಗ್ರೂಪ್ (ಜೆಎಲ್ಜಿ) ಎಂಬ ಸಾಲದ ಗುಂಪುಗಳನ್ನು ಮತ್ತು ನ್ಯಾಬ್ಫಿನ್ ಎಂಬ ಕಿರುಸಾಲ ಸಂಸ್ಥೆಯನ್ನು (NBFC) ಪರಿಚಯಿಸುತ್ತದೆ.
ಅಷ್ಟರಲ್ಲಿ ಸಂಘದ ಸಾಲ ಪಡೆಯುವ ಸಾಮಥ್ರ್ಯ ಮತ್ತು ಬೇಡಿಕೆಯನ್ನು ಗುರುತಿಸಿದ ಖಾಸಗಿ ಆರ್ಥಿಕ ಸಂಸ್ಥೆಗಳು ಮತ್ತು ವ್ಯಕ್ತಿಗಳು ಈ ಅವಕಾಶವನ್ನು ಬಳಸಿಕೊಳ್ಳುವ ಪ್ರಯತ್ನವಾಗಿ ಅನೇಕ ರೀತಿಯ ಕಿರುಸಾಲ ಸಂಸ್ಥೆಗಳು ಅಣಬೆಗಳಂತೆ ಹುಟ್ಟಿಕೊಳ್ಳುತ್ತವೆ. ಕಿರುಸಾಲ ಸಂಸ್ಥೆಗಳು ಆರ್ಥಿಕ ಸಂಸ್ಥೆಗಳಿಂದ ಬಂಡವಾಳ ಪಡೆದು ಸಂಘಗಳಿಗೆ ಸಾಲ ಕೊಡಲು ಇದ್ದ RBI ಅನುಮತಿಯು ಇವರಿಗೆ ವರದಾನವಾಗುತ್ತದೆ. ಸಣ್ಣ ಕಿರುಸಾಲ ಸಂಸ್ಥೆಗಳು (MFIs), ಬ್ಯಾಂಕೇತರ ಆರ್ಥಿಕ ಕಂಪೆನಿಗಳು (NBFCs), ಲಾಭರಹಿತ ಕಿರುಸಾಲ ಸಂಸ್ಥೆಗಳು (not-for-profit MFIs), ಸಣ್ಣಸಾಲಗಳ ಬ್ಯಾಂಕುಗಳು (Sಈಃs), ಹಾಗೂ NGO (BCA) ಸ್ವಸಹಾಯ ಸಂಘಗಳಿಗೆ ಕಿರುಸಾಲ ಒದಗಿಸುತ್ತಿವೆ. ಇವೆಲ್ಲವನ್ನು ಒಟ್ಟಾಗಿ ಕಿರುಸಾಲ ಸಂಸ್ಥೆಗಳು ಎಂದು ಈ ಲೇಖನದಲ್ಲಿ ಗುರುತಿಸಿದ್ದು, ಇವುಗಳ ಕಾರ್ಯಚರಣೆ ಕುರಿತು ಹೆಚ್ಚಿನ ಮಾಹಿತಿಗೆ ಮುಂದೆ ಬರಲಿರುವ ಲೇಖನವನ್ನು ಓದಿ.
ಹೆಚ್ಚಿನಂಶ ಈ ಕಿರುಸಾಲ ಸಂಸ್ಥೆಗಳಲ್ಲಿ ಹೂಡಿಕೆದಾರರೇ ಪಾಲುದಾರರಾಗಿರುವ ಕಾರಣ, ಅವರ ನಿಜ ಉದ್ದೇಶ ಕೇವಲ ಲಾಭ ಗಳಿಸುವುದಾದ ಕಾರಣ, ಸಂಘದೊಳಗಿನ ಸಬಲೀಕರಣ ಪ್ರಕ್ರಿಯೆಗಳು ಇವರಿಗೆ ಬೇಕಾಗಿಲ್ಲ. ಒಂದು ಸಂಘದಲ್ಲಿ ಅನೇಕ ಕಿರುಸಾಲ ಸಂಸ್ಥೆಗಳು ಕೆಲಸ ಮಾಡುತ್ತವೆ. ಇವೆಲ್ಲವೂ ಸಂಘವೆಂದು ಹೇಳಿಕೊಂಡು ಪ್ರತಿ ಸದಸ್ಯರಿಗೆ ಸಾಲ ನೀಡುತ್ತವೆ. ಸಂಘವನ್ನು ಒಡೆದು ಅದರೊಳಗೊಂದು ಜೆ.ಎಲ್.ಜಿ ರಚಿಸುತ್ತವೆ ಅಥವಾ ಅದೇ ಸದಸ್ಯರಿಗೆ ಮತ್ತೊಂದು ಸಂಘವನ್ನು ರಚಿಸುತ್ತದೆ. ಜೊತೆಗೆ ಅದೇ ಕುಟುಂಬಗಳ ಇತರೆ ಸದಸ್ಯರಿಗೆ ಹೊಸ ಜೆ.ಎಲ್.ಜಿ ಪ್ರಾರಂಭಿಸುತ್ತದೆ. ಹೀಗೆ ಒಂದು ಕುಟುಂಬಕ್ಕೆ ಅನೇಕ ಮೂಲಗಳಿಂದ ಅವಶ್ಯಕತೆಗಿಂತ ಹೆಚ್ಚು ಸಾಲವನ್ನು ನೀಡಲಾಗುತ್ತಿದೆ. ಹಳೆ ಸಾಲವನ್ನು ತೀರಿಸಲು ನೀಡುವ ಹೊಸಸಾಲದ ಕಾರಣ ಕುಟುಂಬಗಳು ಸಾಲದ ಶೂಲದಲ್ಲಿಯೇ ಮುಳುಗಿವೆ.
ಹೆಚ್ಚು ಜನರಿಗೆ, ಹೆಚ್ಚು ಸಾಲವನ್ನು ಎಗ್ಗಿಲ್ಲದೆ ನೀಡುವ ಮತ್ತು ಮರುಪಾವತಿ ಮಾಡಿಕೊಳ್ಳಲು ಹಾಗೂ ಕೆಲವು ಕಾನೂನುಗಳ ಹೊಂದಾಣಿಕೆಗಾಗಿ ಪ್ರತಿ ಕಿರುಸಾಲ ಸಂಸ್ಥೆಗಳೂ ಸಂಘದ ಸಾಲ ನೀಡುವಿಕೆಯ ನಿಯಮಗಳನ್ನು ಗಾಳಿಗೆ ತೂರಿ, ತನ್ನ ನಿಯಮಗಳನ್ನು ಹೇರುವ ಮೂಲಕ ಸಾಲ ಸಂಬಂಧಿತ ಎಲ್ಲಾ ತೀರ್ಮಾನ ಪ್ರಕ್ರಿಯೆಗಳನ್ನು ಸ್ವಾಧಿನ ಮಾಡಿಕೊಂಡಿವೆ. ಸಂಘಗಳು ತಮ್ಮ ಅನುಕೂಲ, ಅವಶ್ಯಕತೆ ಮತ್ತು ಸಂಪನ್ಮೂಲಗಳ ನಿರ್ವಹಣೆಗೆ ತಕ್ಕಂತೆ ಮಾಡಿಕೊಂಡಿದ್ದ ತನ್ನದೇ ಸಾಂಸ್ಥಿಕ ರಚನೆ ಮತ್ತು ವ್ಯವಸ್ಥೆಗಳನ್ನು ಈ ಹೊರಗಿನ ಕಿರು ಸಾಲ ಸಂಸ್ಥೆಗಳು ಛಿದ್ರಗೊಳಿಸಿ ತಮಗೆ ಅನುಕೂಲಕರವಾದ ವ್ಯವಸ್ಥೆಯನ್ನು ಸಂಘಗಳ ಮೇಲೆ ಹೇರಿವೆ. ಮೊದಲಿನ ನಿರಂತರ ಸಭೆ, ಚರ್ಚಿ, ಕಲಿಕೆ, ಪರಸ್ಪರ ಸಹಾಯ, ನ್ಯಾಯಕ್ಕಾಗಿ ಒಗ್ಗೂಡಿತ ಕ್ರಮಗಳೆಲ್ಲವೂ ಕಾಣೆಯಾಗಿ, ಇಂದು ಸಂಘಗಳು ಕೇವಲ ಕಿರುಸಾಲ ಸಂಸ್ಥೆಗಳ ಅಧಿನದ ಎಜೆಂಟರಾಗಿದ್ದರೆ, ಈ ಕಿರುಸಾಲ ಸಂಸ್ಥೆಗಳು ಹಿಂದಿನ ಸ್ಥಳಿಯ ಲೇವಾದೇವಿಗಾರರ ಪಾತ್ರವನ್ನು ನಿರ್ವಹಿಸುತ್ತಿವುದು ದುರಂತವಾಗಿದೆ.

ಕೆಲವು ದೊಡ್ಡ NGOಗಳು ಬ್ಯಾಂಕಿನ ಸಂಪರ್ಕ ಸಂಸ್ಥೆಯಾಗಿ (BCA) ಸಂಘದ ಸಬಲೀಕರಣ ವ್ಯವಸ್ಥೆಯನ್ನು ಮರೆತು ಕಿರುಸಾಲ ಸಂಸ್ಥೆಗಳೊಂದಿಗೆ ಸರಿಸಾಟಿಯಾಗಿ ಸಾಲ ನೀಡುತ್ತಿದ್ದರೆ, ಸಂಘವನ್ನು ಪೋಷಿಸಿ ಬೆಳೆಸಿದ ಇನ್ನುಳಿದ ಅನೇಕ NGOಗಳು ಸಂಪನ್ಮೂಲದ ಕೊರತೆಯಿಂದಾಗಿ ಕಿರುಸಾಲ ಸಂಸ್ಥೆಗಳಿಂದ ಕಮಿಷನ್ ಪಡೆದು ಅವರ ಸಾಲಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ.
ಈ ಕ್ರಾಂತಿಯ ಜನ್ಮದಾತರಾದ ಮೈರಾಡ ಮತ್ತು ನಾಬಾರ್ಡ್ ಬಡವರ ಹಾಗೂ ಮುಖ್ಯವಾಹಿನಿ ಬ್ಯಾಂಕುಗಳ ಮಧ್ಯೆ ಬಹು ಸಮರ್ಥವಾಗಿ ಬೆಳೆಸಿದ್ದ ಅಭಿವೃದ್ಧಿಯ ತಂತುವನ್ನು ತಾವೇ ಹೊಸ ಅನ್ವೇಷಣೆಗಳ (ಸಂಘಮಿತ್ರ, ಜಿಎಲ್ಜಿ, ನ್ಯಾಬ್ಫಿನ್) ಅವಸರದಲ್ಲಿ ಕತ್ತರಿಸಿದರೇ ಎಂಬ ಪ್ರಶ್ನೆಗಳು ಕಾಡುತ್ತವೆ. ಸಂಘಗಳ ವ್ಯವಸ್ಥೆಗೆ ಮಾರಕವಾದ ಈ ಅನ್ವೇಷಣೆಗಳ ಬದಲಿಗೆ ಅವರು ಮತ್ತೊಂದಿಷ್ಟು ಹೆಜ್ಜೆಗಳನ್ನು ಮುಂದಿಟ್ಟು ಸಂಘ-ಬ್ಯಾಂಕ್ ಲಿಂಕೇಜ್ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಜವಾಬ್ದಾರಿ ಹೊರಬೇಕಾಗಿತ್ತು.
ಅಂತೆಯೇ, ಸರ್ಕಾರದ ಯೋಜನೆಗಳು ಸಂಘಗಳ ಸಹಜ ಬೆಳವಣಿಗೆಗೆ ಬೇಕಾದ ಸಮಯ ಅಥವಾ ತರಬೇತಿಗಳನ್ನು ಪರಿಗಣಿಸಲಿಲ್ಲ(ಕೆಲವು ಯೋಜನೆಗಳನ್ನು ಹೊರತುಪಡಿಸಿ). ಗುರಿ ತಲುಪುವ ಅವಸರದಲ್ಲಿ ಅಲ್ಪ ಅವಧಿಯೊಳಗೆ ನಾಯಿಕೊಡೆಗಳಂತೆ ಲಕ್ಷಗಟ್ಟಲೆ ಸಂಘಗಳು ಕೇವಲ ಸರ್ಕಾರಿ ಯೋಜನೆಯ ಸಹಾಯ ಪಡೆಯಲು ಹುಟ್ಟಿಕೊಂಡವು. ಸ್ವಲ್ಪವಾದರೂ ಗುಣಮಟ್ಟ ಹೊಂದಿದ್ದ ಇವರ ಸಂಘಗಳು ಕಿರುಸಾಲ ಸಂಸ್ಥೆಗಳ ದಾಳಿಗೆ ತುತ್ತಾಗುವುದನ್ನು ಯಾವ ಸರ್ಕಾರಗಳೂ ತಡೆಯಲಿಲ್ಲ.
ಬಡವರಿಗೆ ಬಂಡವಾಳದ ಅವಶ್ಯಕತೆ ಅತಿ ಹೆಚ್ಚಿದ್ದು, ಅದನ್ನು ಖಾಸಗಿ ವ್ಯವಸ್ಥೆಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ಸರ್ಕಾರ ಅಥವಾ ದೇಶದ ಉನ್ನತ ಆರ್ಥಿಕ ಸಂಸ್ಥೆಗೆ ತಿಳಿಯದ ವಿಷಯವೇನಲ್ಲ. ಇವರಿಗೆ ಪ್ರಿಯಾರಿಟಿ ಸೆಕ್ಟರ್ನಡಿ ಸಂಘಗಳಿಗೆ ಅವಶ್ಯವಿದ್ದಷ್ಟು ಬಂಡವಾಳವನ್ನು ಒದಗಿಸುವುದು ದೊಡ್ಡ ವಿಷಯವಾಗಿರಲಿಲ್ಲ. ಇಗಾಗಲೇ ಇರುವ ಬ್ಯಾಂಕ್ ಮತ್ತು ಸಹಕಾರಿ ವ್ಯವಸ್ಥೆಗಳ ಮೂಲಕ ನಿರಂತರ ಸಾಲ ಒದಗಿಸುವ ಸಾಮರ್ಥ್ಯವಿತ್ತು. NGOಗಳ ನೆರವಿನಿಂದ ಬ್ಯಾಂಕ್ ಸಿಬ್ಬಂದಿ ಕೊರತೆಯನ್ನು ಪರಿಹರಿಸಿದ್ದರೆ ಬಡವರು ಶೋಷಣೆ ಇಲ್ಲದ ಸಾಲದ ವ್ಯವಸ್ಥೆಯೊಳಗಿರುತ್ತಿದ್ದರು. ಆದರೆ, ಯಾರೂ ಜವಾಬ್ದಾರಿ ವಹಿಸದ ಕಾರಣ ಇಂದು ಸ್ವಸಹಾಯ ಸಂಘಗಳು ನೆಲಕಚ್ಚಿವೆ. ಒಟ್ಟಾರೆ, ಎಲ್ಲಾ ವ್ಯವಸ್ಥೆಗಳೂ ಸೇರಿ ಬಡವರು ಎಂದಿಗೂ ಶೋಷಣೆಯ ವ್ಯವಸ್ಥೆಯಡಿ ಬದುಕುವುದನ್ನು ಕಡ್ಡಾಯಗೊಳಿಸಿದ್ದಾರೆ.

ಲತಾಮಾಲ
ಗ್ರಾಮೀಣಾಭಿವೃದ್ಧಿ ತಜ್ಞರು ಮತ್ತು ಲೇಖಕರು