ಪುತ್ತೂರಿನಲ್ಲಿ ಬಿಜೆಪಿಯ ನಗರಸಭಾ ಸದಸ್ಯನ ಪುತ್ರನಿಂದ ಲವ್ ಸೆಕ್ಸ್ ದೋಖಾ (LSD) ನಡೆದಿದೆ. ಆದರೆ, ಯುವತಿಗೆ ನ್ಯಾಯ ಕೊಡಿಸಲು ಯಾವ ಬಜರಂಗದಳವೂ ಇಲ್ಲ, ಪರಿವಾರವೂ ಇಲ್ಲ. ಯಾವುದೇ ಪ್ರತಿಭಟನೆಯೂ ಇಲ್ಲ. ಆರೋಪಿ ಮುಸ್ಲಿಂ ಆಗಿದ್ದರೆ ಪುತ್ತೂರಿನಲ್ಲಿ ಮಾತ್ರವಲ್ಲ, ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಪ್ರತಿಭಟನೆ ಜೋರಾಗಿ ನಡೆಯುತ್ತಿತ್ತು. ಬೆಂಗಳೂರಿನ ಬಿಜೆಪಿ ಸಕಲ ನಾಯಕರೂ ಪುತ್ತೂರು ರೈಲು ಹತ್ತಿರುತ್ತಿದ್ದರು. ಶೋಭಾ ಮೇಡಂ ದೆಹಲಿಯಲ್ಲಿ ಅಪ್ಪಟ ಹಿಂದಿಯಲ್ಲಿ ಖಂಡಿಸಿ ತಕ್ಷಣ ವಿಮಾನ ಏರುತ್ತಿದ್ದರು.
ಪುತ್ತೂರಿನಲ್ಲಿ ಕೇವಲ 21 ವರ್ಷ ವಯಸ್ಸಿನ ಯುವಕನೊಬ್ಬ ಸಹಪಾಠಿ ವಿದ್ಯಾರ್ಥಿನಿಯೊಬ್ಬಳನ್ನು ಹಲವು ವರ್ಷಗಳ ಕಾಲ ಪ್ರೀತಿಸಿ, ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು ಆಕೆ ಗರ್ಭಿಣಿಯಾದ ನಂತರ ಮದುವೆಯಾಗುವ ಭರವಸೆ ಕೊಟ್ಟು ಕೊನೆಗೆ ಮದುವೆಯಾಗದೆ ಪರಾರಿಯಾಗಿದ್ದಾನೆ. ಯುವತಿಗೆ ಹೆರಿಗೆಯಾಗಿದೆ. ಆರೋಪಿ ಮುರಳಿ ಕೃಷ್ಣ ಜೆ ರಾವ್ ಬಿಜೆಪಿ ಮುಖಂಡ, ಪುತ್ತೂರು ನಗರಸಭಾ ಸದಸ್ಯ ಪಿ ಜಿ ಜಗನ್‌ನಿವಾಸ ರಾವ್ ಅವರ ಪುತ್ರ. ಹಿಂದುತ್ವದ ದಟ್ಟ ಪ್ರಭಾವ ಮತ್ತು ಆರೆಸ್ಸೆಸ್ ಘಟಾನುಘಟಿ ನಾಯಕರಿರುವ ಪುತ್ತೂರಿನಲ್ಲಿ ಒಬ್ಬ ಹಿಂದೂ ಯುವತಿಗೆ ಅನ್ಯಾಯವಾಗಿದೆ. ಆದರೆ ಯಾವುದೇ ಪ್ರತಿಭಟನೆ ಇಲ್ಲ, ಯಾವುದೇ ಖಂಡನಾ ಹೇಳಿಕೆ ಹೊರಬಿದ್ದಿಲ್ಲ. ರಸ್ತೆ, ಚರಂಡಿ ಬಗ್ಗೆ ಮಾತು ಬೇಡ. ಬದಲಿಗೆ ಲವ್ ಜಿಹಾದ್ ಕುರಿತು ಮಾತನಾಡಬೇಕು ಎಂದ ಮಾಜಿ ಸಂಸದ ನಳಿನ್‌ಕುಮಾರ್ ಸೇರಿದಂತೆ ದಕ್ಷಿಣ ಕನ್ನಡದ ಬಿಜೆಪಿ, ಸಂಘಪರಿವಾರದ ನಾಯಕರೆಲ್ಲ ಅತ್ಯಾಚಾರಿ ಯುವಕನ ಜೊತೆಗೆ ನಾಪತ್ತೆಯಾದರೇ? ಹೀಗೊಂದು ಪ್ರಶ್ನೆ ಕರಾವಳಿಯ ಪ್ರಜ್ಞಾವಂತರು ಕೇಳುತ್ತಿದ್ಧಾರೆ.
2019ರಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಅದೇ ಕಾಲೇಜಿನ ವಿದ್ಯಾರ್ಥಿನಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಗ್ಯಾಂಗ್‌ರೇಪ್ ಮಾಡಿ ಅದರ ವಿಡಿಯೋ ಮಾಡಿಟ್ಟುಕೊಂಡು ನಂತರ ಅದನ್ನು ವಾಟ್ಸಪ್‌ನಲ್ಲಿ ಶೇರ್ ಮಾಡಿದ ಪ್ರಕರಣ ಭಾರೀ ಸುದ್ದಿಯಾಗಿತ್ತು. ಆ ವಿದ್ಯಾರ್ಥಿಗಳು ಎಬಿವಿಪಿ ಮತ್ತು ಭಜರಂಗದಳದ ಕಾರ್ಯಕರ್ತರಾಗಿದ್ದರು. ಆಗಲೂ ಇದೇ ಪ್ರಶ್ನೆ ಎದುರಾಗಿತ್ತು. ಹಿಂದುತ್ವದ ಸಂಘಟನೆಗಳು ಬಾಯಿಮುಚ್ಚಿ ಕೂತಿದ್ದವು. ಆ ಯುವತಿ ಕೂಡ ಹಿಂದೂ, ಯುವಕರು ಹಿಂದುತ್ವದ ಕಾರ್ಯಕರ್ತರು! ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಇಡೀ ರಾಜ್ಯ ಮಾತನಾಡುವಾಗ ಕರಾವಳಿಯ ಬಿಜೆಪಿ ನಾಯಕರು ತುಟಿಬಿಚ್ಚಿಲ್ಲ. ಆರೋಪಿ ಮುಸ್ಲಿಂ ಆಗಿದ್ದರೆ ಮಾತ್ರ ಎನ್‌ಐಎ, ಸಿಬಿಐ ಜಪ ಮಾಡುತ್ತಾರೆ.
ಪುತ್ತೂರಿನ ವಿದ್ಯಾರ್ಥಿನಿಯನ್ನು ಮದುವೆಯಾಗುವುದಾಗಿ ನಂಬಿಸಿ, ಮಗುವನ್ನೂ ಕೊಟ್ಟು ಕೈಕೊಟ್ಟ ಪ್ರಕರಣದ ಬಗ್ಗೆ ದಕ್ಷಿಣ ಕನ್ನಡದ ಯಾವೊಂದು ಹಿಂದೂ ಸಂಘಟನೆಗಳೂ ಧ್ವನಿ ಎತ್ತುತ್ತಿಲ್ಲ. ಆರಂಭದಲ್ಲಿ ಎಲ್ಲರೂ ಸೇರಿ ರಾಜಿ ಮಾಡಿಸಲು ಯತ್ನಿಸಿದ್ದಾರೆ. ಮದುವೆ ಮಾಡುವ ಭರವಸೆ ಕೊಟ್ಟಿದ್ದಾರೆ. ಆದರೆ, ಈಗ ಯುವಕ ನಾಪತ್ತೆಯಾಗಿದ್ದಾನೆ. ಕಲ್ಲಡ್ಕ ಪ್ರಭಾಕರ ಭಟ್, ಅರುಣ್ ಕುಮಾರ್ ಪುತ್ತಿಲ, ಡಾ. ಭಂಡಾರಿ ಎಲ್ಲರೂ ಉಗ್ರ ಹಿಂದುತ್ವವಾದಿಗಳು. ಆದರೆ, ತಮ್ಮ ಸಮುದಾಯದ ಯುವಕ ಇಂತಹ ಕೃತ್ಯ ಎಸಗಿದಾಗ ಯುವತಿಗೆ ನ್ಯಾಯ ಕೊಡಿಸುವ ಜೊತೆಗೆ ಹಿಂದೂ ಸಂಘಟನೆಗಳ ಬದ್ಧತೆಯ ಮೇಲಿನ ಕಳಂಕ ಕಳೆಯುವ ಒಂದು ಅವಕಾಶ ಇತ್ತು. ಆದರೆ ಅವರೆಲ್ಲ ಈಗ ಮೌನಕ್ಕೆ ಶರಣಾಗಿದ್ದಾರೆ. ಯಾವ ಮಹಿಳಾ ಮೋರ್ಚವೂ ಕಾಣಿಸುತ್ತಿಲ್ಲ, ಕಲ್ಲಡ್ಕ ಭಟ್ರು ಸೈಲೆಂಟಾಗಿದ್ದಾರೆ. ಜಿಲ್ಲೆಯ ಶಾಸಕತ್ರಯರು ಪತ್ತೆ ಇಲ್ಲ. ಕೇಸರಿ ಶಾಲು ಹಾಕಿ ಬೀದಿಗಿಳಿದು ಆರ್ಭಟಿಸುವ ಯುವಕರ ಪಡೆ ನಾಪತ್ತೆಯಾಗಿದೆ. ಶೋಭಾ ಮೇಡಂ ಬಾಯಿ ಬಿಟ್ಟಿಲ್ಲ. ಮಾಧ್ಯಮಗಳೂ ಅಷ್ಟೇ ಅವರ ಬಾಯಿಗೆ ಮೈಕ್ ಹಿಡಿಯುತ್ತಿಲ್ಲ.

ನೊಂದ ಯುವತಿಯ ಕುಟುಂಬ ನ್ಯಾಯಕ್ಕಾಗಿ ಅಂಗಲಾಚುತ್ತಿದೆ. ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಯುವತಿಯ ತಾಯಿ, “ಯುವಕನಿಗೆ ಜೂನ್ 23ರಂದು 21 ವರ್ಷ ತುಂಬುತ್ತದೆ. ಆ ನಂತರ ಮದುವೆ ಮಾಡುತ್ತೇವೆ ಎಂದು ನಂಬಿಸಿ ಕೇಸು ದಾಖಲಿಸದಂತೆ ಮಾಡಿದ್ದರು. ಆದರೆ ಜೂನ್ 23ರ ನಂತರ ಯುವಕ ನಾಪತ್ತೆಯಾಗಿದ್ದಾನೆ. ಅಷ್ಟೇ ಅಲ್ಲ ಮಗಳಿಗೆ ಏಳು ತಿಂಗಳು ತುಂಬಿದ್ದರೂ ಅಬಾರ್ಷನ್ ಮಾಡಿಸಲು ಯತ್ನಿಸಿದ್ದಾರೆ. ಅದಕ್ಕೆ ನಾವು ಒಪ್ಪದಿದ್ದಾಗ, ಯಾವುದೇ ಕಾರಣಕ್ಕೂ ಮಗನಿಗೆ ನಿಮ್ಮ ಮಗಳ ಜೊತೆಗೆ ಮದುವೆ ಮಾಡುತ್ತೇವೆ ಎಂದು ಭಾವಿಸಬೇಡಿ ಎಂದು ಆರೋಪಿಯ ತಾಯಿ ಹೇಳಿದ್ದಾರೆ. ನಾವು ಶರಣ್ ಪಂಪ್ವೆಲ್ ಜೊತೆಗೂ ಮಾತಾಡಿದ್ದೇನೆ. ಎಲ್ಲಿದ್ದಾರೆ ಹಿಂದೂ ಸಂಘಟನೆಗಳವರು, ನನ್ನ ಮಗಳೂ ಹಿಂದೂ ಅಲ್ವಾ” ಎಂದು ಅವರು ಪ್ರಶ್ನಿಸಿದ್ದಾರೆ.
ಆರಂಭದಲ್ಲಿ ಪೊಲೀಸ್ ಠಾಣೆಗೆ ಹೋದಾಗ ಯುವಕನ ತಂದೆ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಫೋನ್ ಮಾಡಿ ಯುವತಿಯ ತಾಯಿಯ ಜೊತೆಗೆ ಮಾತನಾಡಿಸಿದ್ದಾರೆ. ಮದುವೆ ಮಾಡಿಕೊಡುವುದಾಗಿ ಯುವಕನ ಮನೆಯವರು ಹೇಳುತ್ತಿದ್ದಾರೆ. ಹಾಗಾಗಿ ಕೇಸು ದಾಖಲಿಸಬೇಡಿ. ಕೇಸಾದರೆ ಯುವಕ ಅರೆಸ್ಟ್ ಆಗುತ್ತಾನೆ. ಅದರಿಂದ ಎರಡೂ ಕುಟುಂಬಕ್ಕೆ ತೊಂದರೆ ಎಂದು ಹೇಳಿದ್ದಾರೆ. ಅದಕ್ಕೆ ಒಪ್ಪಿ ದೂರು ಕೊಟ್ಟಿಲ್ಲ. ಆದರೆ, ನಂತರ ಯುವಕ ಕಾಣೆಯಾಗಿದ್ದಾನೆ. ಆಗಲೂ ಶಾಸಕರಿಗೆ ಯುವತಿಯ ತಾಯಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮದುವೆಯಾಗಿ ನಂಬಿಸಿ ಈಗ ಆಗಲ್ಲ ಅಂದಿರುವ ಕಾರಣ ನೀವು ದೂರು ದಾಖಲಿಸಿ. ಮಗಳ ಭವಿಷ್ಯ ಮುಖ್ಯ. ನೀವು ಕಾನೂನು ಪ್ರಕಾರ ಮುಂದುವರಿಯಿರಿ ಎಂದು ಸಲಹೆ ನೀಡಿದ್ದಾರೆ. ಈ ವಿಚಾರವನ್ನು ಶಾಸಕರೇ ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡ ಮಹಮ್ಮದ್ ಅಲಿ ಅವರು ಮಂಗಳವಾರ ಪುತ್ತೂರಿನಲ್ಲಿ ಪ್ರೆಸ್‌ಮೀಟ್ ಮಾಡಿ ಸಂಘ ಪರಿವಾರಿಗಳನ್ನು ಹೀನಾಮಾನ ಝಾಡಿಸಿದ್ದಾರೆ. “ಹಿಂದೂ ಯುವತಿಯ ಮೇಲೆ ಇಂತಹ ಘೋರ ಅನ್ಯಾಯ ನಡೆದಿರುವಾಗ ಹಿಂದೂ ಸಮಾಜ ಯಾಕೆ ಮೌನವಾಗಿದೆ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ ಮುಸ್ಲಿಮರ ವಿರುದ್ಧ ಸದಾ ದ್ವೇಷ ಕಾರುವ ಪುತ್ತಿಲ ಪರಿವಾರ ಈಗ ಎಲ್ಲಿದೆ ಎಂದು ಕೇಳಿದ್ದಾರೆ. ಹಿಂದೂ ಯುವತಿಗೆ ಹಿಂದೂಗಳಿಂದಲೇ ಅನ್ಯಾಯವಾದರೆ ಪ್ರತಿಭಟನೆ ಯಾಕಿಲ್ಲ! ಇದು ಲವ್ ರೇಪ್ ದೋಖಾ ಪ್ರಕರಣ. ಅದೂ ಆತನ ಮನೆಯಲ್ಲಿಯೇ ಅತ್ಯಾಚಾರ ನಡೆದಿದೆ ಎಂದು ಯುವತಿ ಹೇಳಿದ್ದಾಳೆ. ಆ ಮನೆಯನ್ನು ಪೊಲೀಸರು ತಪಾಸಣೆ ನಡೆಸಬೇಕು. ಹೀಗೆ ಇನ್ನೂ ಎಷ್ಟು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆದಿದೆ ಎಂದು ತನಿಖೆ ಮಾಡಬೇಕು. ಯಾಕೆಂದರೆ ನಿಜವಾಗಿ ಆತ ಪ್ರೀತಿಸಿದ್ದರೆ ಹೀಗೆ ಮೋಸ ಮಾಡುತ್ತಿರಲಿಲ್ಲ. ಹಿಂದೂ ಯುವತಿಯ ರಕ್ಷಣೆಗೆ ಹಿಂದೂ ಮುಖಂಡರು ಯಾಕೆ ಬರುತ್ತಿಲ್ಲ? ಡಾ ಆಶಾ ಪುತ್ತೂರಾಯ ಪ್ರಕರಣದಲ್ಲಿ ಸಂಘಪರಿವಾರ ಪೊಲೀಸ್ ಠಾಣೆಗೆ ಮುತ್ತಿಗೆ, ರಸ್ತೆ ತಡೆ ಮಾಡಿದ್ದರು. ಈಗ ಎಲ್ಲಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.

ಈಗ ಬಿಜೆಪಿಯ ನಗರಸಭಾ ಸದಸ್ಯನ ಪುತ್ರನಿಂದ ಒಬ್ಬ ಹಿಂದೂ ಹುಡುಗಿಗೆ ಘೋರ ಅನ್ಯಾಯವಾಗಿದೆ. ಈಗ ಯಾವ ದಳವೂ ಇಲ್ಲ, ಪರಿವಾರವೂ ಇಲ್ಲ. ಹಿಂದೂ ಯುವತಿಯ ರಕ್ಷಣೆಗೆ ಈಗ ಯಾವ ಹಿಂದೂ ಸಂಘಟನೆಗಳೂ ಬರುತ್ತಿಲ್ಲ. ಪುತ್ತೂರಿನಲ್ಲಿ ಯಾವುದೇ ಪ್ರತಿಭಟನೆ ಇಲ್ಲ. ಮುಸ್ಲಿಂ ಯುವಕ ಆರೋಪಿ ಸ್ಥಾನದಲ್ಲಿ ಇದ್ದಿದ್ದರೆ ಈಗ ಪುತ್ತೂರಿನಲ್ಲಿ ಮಾತ್ರವಲ್ಲ, ಮಂಗಳೂರು, ಉಡುಪಿ ಸೇರಿದಂತೆ ಬೆಂಗಳೂರಿನಲ್ಲೂ ಪ್ರತಿಭಟನೆ ಜೋರಾಗಿ ನಡೆಯುತ್ತಿತ್ತು. ಬಿಜೆಪಿ ಸಕಲ ನಾಯಕರೂ ಪುತ್ತೂರು ರೈಲು ಹತ್ತಿರುತ್ತಿದ್ದರು. ಶೋಭಾ ಮೇಡಂ ದೆಹಲಿಯಲ್ಲಿ ಅಪ್ಪಟ ಹಿಂದಿಯಲ್ಲಿ ಖಂಡಿಸಿ ಬೆಂಗಳೂರು ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಇದೆಲ್ಲ ಸರ್ಕಾರದ ಬೆಂಬಲದಿಂದ ನಡೆಯುತ್ತಿದೆ. ಜಿಹಾದಿಗಳಿಗೆ ಕಾಂಗ್ರೆಸ್ ಬೆಂಬಲ ಕೊಡುತ್ತಿದೆ. ಲವ್ ಜಿಹಾದ್ ನಡೆಸಿ ಹಿಂದೂ ಹೆಣ್ಣುಮಕ್ಕಳನ್ನು ಮತಾಂತರ ಮಾಡುವ ಜಾಲದ ಹಿಂದೆ ವಿದೇಶಿ ಶಕ್ತಿಗಳ ಕೈವಾಡ ಇದೆ ಎಂದು ಒಂದೇ ಉಸುರಿನಲ್ಲಿ ಭಾಷಣ ಮಾಡಿರುತ್ತಿದ್ದರು. ಅಷ್ಟೇ ಅಲ್ಲ ಸೂಲಿಬೆಲೆ, ಕೆರೆಹಳ್ಳಿಯಂತಹ ವಿಷ ಸರ್ಪಗಳು ಪುತ್ತೂರಿನಲ್ಲಿ ಬೀಡು ಬಿಡುತ್ತಿದ್ದವು. ಬೆಂಗಳೂರಿನಿಂದ ಆರ್ ಅಶೋಕ್, ಎನ್ ರವಿ ಕುಮಾರ್, ಛಲವಾದಿ ನಾರಾಯಣ ಸ್ವಾಮಿ, ಸಿ ಟಿ ರವಿ, ಡಾ ಅಶ್ವತ ನಾರಾಯಣ ಬೀದಿಗಿಳಿದು ಹೋರಾಟ ಮಾಡುತ್ತಿದ್ದರು. ಜೊತೆಗೆ ಎಚ್ ಡಿ ಕುಮಾರಸ್ವಾಮಿಯೂ ಒಂದು ಎಕ್ಸ್ ಪೋಸ್ಟ್ ಮಾಡಿರೋರು. ಹರೀಶ್ ಪೂಂಜಾ, ಡಾ ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಶರಣ್ ಪಂಪ್ವೆಲ್ ತರಹದ ಕೋಮು ವಿಷಕಾರಿಗಳು ಇಡೀ ಜಿಲ್ಲೆಯ ನೆಮ್ಮದಿಗೆ ಕೊಳ್ಳಿ ಇಡುತ್ತಿದ್ದವು. ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ಪ್ರತಿಭಟನೆಗೆ ತಪ್ಪದೇ ಹಾಜರಾಗಿರೋರು.
ದೆಹಲಿಯವರೇನು ದಡ್ಡರೇ, ಅವರೂ ಉಗ್ರವಾಗಿ ಖಂಡಿಸಿರೋರು. ಬಿಜೆಪಿ ಸೋಷಿಯಲ್ ಮೀಡಿಯಾ ಮುಖ್ಯಸ್ಥ ಅಮಿತ್ ಮಾಳವೀಯ ರಾಹುಲ್ ಗಾಂಧಿ ಹೆಸರನ್ನು ಎಳೆದು ತಂದು ಖಂಡಿಸುತ್ತಿದ್ದರು.

ಸಂಘಪರಿವಾರದವರಿಗೆ ಇದೇನು ಹೊಸದಲ್ಲ. ಅವರ ಬಂಡವಾಳವೇ ಇಷ್ಟು. ಅವರಿಗೆ ಕನಿಷ್ಠ ಸಾಮಾಜಿಕ ಕಳಕಳಿ, ಕೊಲೆ -ಅತ್ಯಾಚಾರ ಕೃತ್ಯಗಳಲ್ಲಿ ತಮ್ಮ ಸಮುದಾಯ ಅಥವಾ ತಮ್ಮದೇ ಸಂಘಟನೆ, ಪಕ್ಷದ ಮುಖಂಡರು ಸಿಕ್ಕಿ ಹಾಕಿಕೊಂಡಾಗ ಅವರ ಗಂಟಲಿನಲ್ಲಿ ಮುಳ್ಳು ಸಿಕ್ಕಿಕೊಳ್ಳುತ್ತದೆ. ಸುಹಾಸ್ ಶೆಟ್ಟಿ ಕೊಲೆಯನ್ನು ಮುಸ್ಲಿಮರು ಮಾಡಿದ್ದಾರೆ ಎಂದು ಬೊಬ್ಬೆ ಹೊಡೆಯುತ್ತಿದ್ದಾಗಲೇ ಬಂಧಿತ ಆರೋಪಿಗಳಲ್ಲಿ ಇಬ್ಬರು ಹಿಂದೂಗಳೂ ಇದ್ದರು. ಇದು ಸಂಘಪರಿವಾರದ ಉಗ್ರ ಪ್ರತಿಭಟನೆಗೆ ಬ್ರೇಕ್ ಹಾಕಿತ್ತು. ಎಲ್ಲರೂ ಮುಸ್ಲಿಮರೇ ಇದ್ದಿದ್ದರೆ ಅವರ ಅಜೆಂಡ ಫಲಿಸುತ್ತಿತ್ತು. ಆದರೂ ಅಮಾಯಕ ರಹ್ಮಾನ್‌ನನ್ನು ಕೊಚ್ಚಿ ಹಾಕಿ ಪ್ರತೀಕಾರ ಎಂದು ಮೆರೆದಿದ್ದಾರೆ ಹಿಂದೂ ಕೋಮುವಾದಿ ಉಗ್ರರು. ಕಾಶ್ಮೀರ್ ಪಹಲ್ಗಾಮ್‌ನಲ್ಲಿ ಉಗ್ರರಿಂದ ನಡೆದ ದಾಳಿಗೆ ಪ್ರತೀಕಾರವಾಗಿ ಮಂಗಳೂರಿನಲ್ಲಿ ಗುಜುರಿ ಆಯ್ದು ಬದುಕುತ್ತಿದ್ದ ವಯನಾಡಿನ ಬಡ ಯುವಕ ಅಶ್ರಫ್‌ನನ್ನು ಹಿಂದೂ ಕೋಮುವಾದಿಗಳು ಹೊಡೆದು ಸಾಯಿಸಿದ್ದರು. ಇದೇ ಸಮಯವನ್ನು ನೋಡಿಕೊಂಡು ರೌಡಿ ಶೀಟರ್ ಸುಹಾಸ್ ಶೆಟ್ಟಿಯನ್ನು ಇನ್ನೊಂದು ರೌಡಿ ಗ್ಯಾಂಗ್ ಹೊಡೆದು ಹಾಕಿದೆ.
ರೌಡಿ ಶೀಟರ್ ಸುಹಾಸ್ ಸುರತ್ಕಲ್‌ನ ಫಾಝಿಲ್‌ನನ್ನು ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರವಾಗಿ ಕೊಂದು ಹಾಕಿದ್ದ ಆರೋಪಿ. ಜಾಮೀನಿನ ಮೇಲೆ ಹೊರಗಿದ್ದ. ಅಷ್ಟೇ ಅಲ್ಲ ದಲಿತ ಯುವಕ ಕೀರ್ತಿಯ ಕೊಲೆ ಆರೋಪಿ. ಇಷ್ಟೆಲ್ಲ ಮಾಡಿದ್ದ ಓರ್ವ ಕ್ರಿಮಿನಲ್, ನಂತರ ರೂಪಾಂತರಗೊಂಡಿದ್ದು ಹಿಂದೂ ಕಾರ್ಯಕರ್ತನಾಗಿ. ಕೇಸರಿ ಶಾಲು, ಗಡ್ಡ -ಜುಟ್ಟು ಬಿಟ್ಟು, ಕೈಗೊಂದಷ್ಟು ಕೆಂಪು ದಾರ ಕಟ್ಟಿಕೊಂಡು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಂದಾಳತ್ವ ವಹಿಸಿಕೊಂಡು ಹಿಂದೂ ಧರ್ಮ ರಕ್ಷಕನಾಗಿದ್ದ. ಬಿಜೆಪಿ ಸರ್ಕಾರ ಇದ್ದಾಗಲೇ ರೌಡಿಶೀಟರ್ ಪಟ್ಟಿಗೆ ಸುಹಾಸ್‌ನನ್ನು ಸೇರಿಸಲಾಗಿತ್ತು. ಆದರೆ, ಕೊಲೆಯಾದ ಕೂಡಲೇ ಆತ ಪರಮ ಹಿಂದುತ್ವದ ಕಾರ್ಯಕರ್ತನಾಗಿದ್ದ. ಬಿಜೆಪಿಯ ನಾಯಕರು ಆತನ ಶವಯಾತ್ರೆ ನಡೆಸಿ ಹುತಾತ್ಮನ ಪಟ್ಟ ಕಟ್ಟಿದ್ದರು. ಶರಣ್ ಪಂಪ್ವೆಲ್, ಭರತ್ ಕುಮ್ಡೇಲು, ಶ್ರೀಕಾಂತ್ ಶೆಟ್ಟಿ, ಕಲ್ಲಡ್ಕ ಪ್ರಭಾಕರ ಭಟ್ಟರಂತಹ ಕರಾವಳಿಯಲ್ಲಿ ಸದಾ ಕೋಮುದ್ವೇಷದ ಭಾಷಣ ಮಾಡುವುದನ್ನೇ ವೃತ್ತಿ ಮಾಡಿಕೊಂಡವರು ಸುಹಾಸ್ ಶೆಟ್ಟಿಯ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳುವ ಭಾಷಣ ಮಾಡಿ ಎರಡೇ ದಿನದಲ್ಲಿ ರೆಹ್ಮಾನ್‌ನ ಹತ್ಯೆ ನಡೆದಿತ್ತು. ಅದೂ ಆತನ ಊರಿನ ಯುವಕರಿಂದಲೇ ಕೊಲೆ ಮಾಡಿಸಿದ್ದರು. ಆತನ ಸಹಾಯ ಪಡೆದ ಯುವಕರೇ ಹಂತಕರು. ಈ ಕೊಲೆಗೆ ದ್ವೇಷ ಭಾಷಣ ಬಿಟ್ಟರೆ ಬೇರೆ ಯಾವುದೇ ಘನವಾದ ಪ್ರೇರಣೆ ಇರಲಿಲ್ಲ. ಸುಹಾಸ್ ಕೊಲೆಗೆ ಪ್ರತೀಕಾರವಾಗಿ ಒಬ್ಬ ಮುಸ್ಲಿಮನ ಕೊಲೆಯಾಗಬೇಕು ಎಂಬ ಹಿಂದುತ್ವದ ಮುಖಂಡರ ಅಜೆಂಡ ಫಲಿಸಿದೆ. ಆದರೆ, ಕೊಲೆ ಆರೋಪದಲ್ಲಿ ಏಳು ಮಂದಿ ಹಿಂದೂ ಯುವಕರು ಜೈಲುಪಾಲಾಗಿದ್ದಾರೆ. ಉಗ್ರರ ಮೇಲಿನ ಸಿಟ್ಟಿಗೆ ಬಡ ಮುಸ್ಲಿಮನ ಕೊಲೆ ಮಾಡಿದ ಆರೋಪದಲ್ಲಿ ಹತ್ತಿಪ್ಪತ್ತು ಹಿಂದೂ ಯುವಕರು ಜೈಲು ಸೇರಿದ್ದಾರೆ. ಆದರೆ ದ್ವೇಷ ಭಾಷಣ ಮಾಡುವ ಪುಂಡ ಮುಖಂಡರು ಆರಾಮವಾಗಿಯೇ ಇದ್ದಾರೆ.

ಕೇವಲ ಎರಡು ತಿಂಗಳ ಹಿಂದೆ ಪುತ್ತೂರಿನ ಸರ್ಕಾರಿ ಆಸ್ಪತ್ರೆಯ ವೈದ್ಯೆ ಡಾ ಆಶಾ ಪುತ್ತೂರಾಯ ಜೊತೆಗೆ ಮುಸ್ಲಿಂ ಕುಟುಂಬವೊಂದು ಅನುಚಿತವಾಗಿ ವರ್ತಿಸಿದೆ ಎಂಬ ಪ್ರಕರಣದಲ್ಲಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಪುತ್ತೂರಿನ ಬಿಜೆಪಿ ಮುಖಂಡರು, ಭಜರಂಗದಳ ಮತ್ತು ಅರುಣ್ ಕುಮಾರ್ ಪುತ್ತಿಲನ ಪುತ್ತಿಲ ಪರಿವಾರದವರು ರಸ್ತೆ ತಡೆ ಮಾಡಿ ಮುಸ್ಲಿಂ ಯುವಕ ಮತ್ತು ಆತನ ತಾಯಿಯನ್ನು ಬಂಧಿಸುವಂತೆ ಪ್ರತಿಭಟನೆ ನಡೆಸಿದ್ದರು. ಭಾರತೀಯ ವೈದ್ಯಕೀಯ ಸಂಘ ಪುತ್ತೂರು ಶಾಖೆ ಪ್ರತಿಭಟನೆಗೆ ಕರೆ ನೀಡಿತ್ತು. ಸರ್ಕಾರಿ ಮತ್ತು ಖಾಸಗಿ ವೈದ್ಯರು ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಿದ್ದರು. ಇದು ವೈದ್ಯೆ ಮತ್ತು ರೋಗಿಯ ಕುಟುಂಬದ ನಡುವೆ ನಡೆದ ಪುಟ್ಟ ಜಗಳ, ಆದರೆ ಇದನ್ನು ಹಿಂದೂ ಮುಸ್ಲಿಂ ದ್ವೇಷ ರಾಜಕಾರಣಕ್ಕೆ ಬಳಸಿಕೊಳ್ಳಲು ಬಿಜೆಪಿ ಮತ್ತು ಸಂಘ ಪರಿವಾರ ಹರ ಸಾಹಸ ಮಾಡಿತ್ತು. ಅವರೆಲ್ಲ ಈಗ ಇಂತಹ ಅನ್ಯಾಯದ ವಿರುದ್ಧ ತುಟಿ ಬಿಚ್ಚುತ್ತಿಲ್ಲ. ಇದಲ್ಲವೇ ಮಾನಗೆಟ್ಟ ನಡವಳಿಕೆ!
ಯುವತಿಯ ದೂರಿನಲ್ಲೇನಿದೆ?
ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಯುವತಿ ನೀಡಿರುವ ದೂರಿನ ಪ್ರಕಾರ, ಕೃಷ್ಣ ಜೆ ರಾವ್ ಮತ್ತು ದೂರುದಾರೆ ಪ್ರೌಢಶಾಲೆಯಲ್ಲಿ ಸಹಪಾಠಿಗಳಾಗಿದ್ದರು. ಶಾಲಾ ದಿನಗಳ ನಂತರವೂ ಇಬ್ಬರ ನಡುವೆ ಸಂಬಂಧ ಮುಂದುವರಿದಿತ್ತು. ಪ್ರಸ್ತುತ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ವ್ಯಾಸಂಗ ಮಾಡುತ್ತಿರುವ ಯುವತಿ, 2024ರ ಅಕ್ಟೋಬರ್ 11 ರಂದು ಕೃಷ್ಣ ತನ್ನ ಮನೆಗೆ ಯಾರೂ ಇಲ್ಲದ ಸಮಯದಲ್ಲಿ ಕರೆದು, ಮದುವೆಯಾಗುವ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿದ್ದಾನೆ. ನಂತರ 2025ರ ಜನವರಿಯಲ್ಲಿ, ಆತ ಮತ್ತೆ ತನ್ನ ಮೇಲೆ ಬಲವಂತ ಮಾಡಿದ್ದಾನೆ. ಗರ್ಭಿಣಿ ಎಂದು ತಿಳಿಸಿದಾಗ, ಕೃಷ್ಣ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ.
ಇದನ್ನೂ ಓದಿ ಹೇಮಾ ಕಮಿಟಿ ವರದಿಯಲ್ಲಿದ್ದ ಎಲ್ಲ 35 ಪ್ರಕರಣ ಕೈಬಿಟ್ಟ ಕೇರಳ ಸರ್ಕಾರ; ಮರೀಚಿಕೆಯಾದ ನ್ಯಾಯ

ಆತನ ಮನೆಯಲ್ಲಿ ಅನೇಕ ಬಾರಿ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದಾಳೆ. ಗರ್ಭಿಣಿಯಾದ ವಿಷಯ ತಿಳಿದ ನಂತರ, ಯುವತಿ ತನ್ನ ಹೆತ್ತವರಿಗೆ ತಿಳಿಸಿದ್ದಾಳೆ. ಕೃಷ್ಣನ ಕುಟುಂಬವನ್ನು ಸಂಪರ್ಕಿಸಿದಾಗ ಆರಂಭದಲ್ಲಿ ಮದುವೆಗೆ ಒಪ್ಪಿಕೊಂಡರೂ, ನಂತರ ನಿರಾಕರಿಸಿದ್ದಾರೆ. ಈಗ ಕೃಷ್ಣ ನಾಪತ್ತೆಯಾಗಿದ್ದಾನೆ. ಅತ್ತ ಯುವತಿಗೆ ಗಂಡು ಮಗು ಜನಿಸಿದೆ.
ಜೂನ್ 24ರ ರಾತ್ರಿ ದೂರು ದಾಖಲಾದ ನಂತರ, ಪುತ್ತೂರು ಪೊಲೀಸರು ಕೃಷ್ಣ ರಾವ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 64(1) ಮತ್ತು 69 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತಲೆ ಮರೆಸಿಕೊಂಡಿರುವ ಆತನ ಪತ್ತೆಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.

ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.