ರೈಲು ಬೋಗಿಯೊಳಗೆ ಬೆರಗುಗೊಳಿಸಿದ ಸೂಕ್ಷ್ಮ ಪ್ರಜ್ಞೆಯ ಜೇಡ

Date:

Advertisements

ಸೂರ್ಯ ಭೂಮಿಯಿಂದ ಮರೆಯಾಗಿ, ಹಂತ ಹಂತವಾಗಿ ಕತ್ತಲು ಆಕ್ರಮಿಸಿಕೊಂಡು ಸಮಯ 7-10 ಆಗಿತ್ತು. ಗದಗ ರೈಲು ನಿಲ್ದಾಣದ ಮೊದಲನೇ ಪ್ಲಾಟ್ ಫಾರ್ಮ್ ಕಡೆಗೆ ಹೋದಾಗ ಪ್ಲಾಟ್ ಫಾರ್ಮ್‌ನಲ್ಲಿ ಪ್ರಯಾಣಿಕರು ಜಾಸ್ತಿಯೇ ಇದ್ದರು. ಕುಳಿತುಕೊಳ್ಳಲು ಜಾಗ ಸಿಗುತ್ತದೆಯೇ ಎಂದು ಸುತ್ತಲೂ ಕಣ್ಣಾಡಿಸಿದೆ. ಕಬ್ಬಿಣದ ಚೇರು, ಕುಳಿತುಕೊಳ್ಳುವ ಕಟ್ಟೆಯ ಮೇಲೆ ಕುಳಿತು ಪ್ರಯಾಣಿಕರು ಬ್ಯಾಗುಗಳನ್ನು ಮುಂದಿಟ್ಟುಕೊಂಡು ರೈಲಿಗಾಗಿ ಕಾಯುತ್ತಿದ್ದರು.

ಈ ಜನ ಜಂಗುಳಿ ನಡುವೆ ಹಾದು ಪಕ್ಕಕ್ಕೆ ನಿಂತು ನಾನೂ ಕೂಡ ರೈಲಿಗಾಗಿ ಕಾಯುತ್ತ ಕುಳಿತಿದ್ದೆ. ಆಗಲೇ ಹದಿನೈದು-ಇಪ್ಪತ್ತು ನಿಮಿಷಕ್ಕೆ ʼಬಳ್ಳಾರಿ-ಯಶವಂತಪುರ ಮಾರ್ಗವಾಗಿ ಮೈಸೂರು ತಲುಪುವ ಹಂಪಿ ಎಕ್ಸ್ ಪ್ರೆಸ್ ರೈಲು ಸದ್ಯದಲ್ಲಿಯೇ ಒಂದನೇ ಫ್ಲಾಟ್ ಪಾರಂ ಬಂದು ಸೇರಲಿದೆʼ ಎಂದು ಮೈಕಿನಲ್ಲಿ ಹೇಳಿದ ತಕ್ಷಣ ಕುಳಿತಿದ್ದವರು, ನಿಂತಿದ್ದವರು, ತೂಕಡಿಸುತ್ತಿದ್ದವರ ಕಿವಿಗಳು ತಟ್ಟನೆ ನೆಟ್ಟಗಾಗಿ ತಮ್ಮ ತಮ್ಮ ಭೋಗಿಗಳು ನಿಲ್ಲುವ ಸ್ಥಳಕ್ಕೆ ನಿಂತು ರೈಲು ಬರುವ ಕಡೆ ಕಣ್ಣಾಡಿಸುತ್ತಿದ್ದರು. ಎಸ್ ಭೋಗಿ ನಿಲ್ಲುವ ಸ್ಥಳದಲ್ಲಿ ನಿಂತು ಹುಬ್ಬಳ್ಳಿ ಕಡೆ ಕಣ್ಣಾಡಿಸಿದಾಗ ಸದ್ದು ಮಾಡುತ್ತ ಮಿಣುಕು ಬೆಳಕು ಹಾಯಿಸಿಕೊಂಡು ರೈಲು ಹತ್ತಿರ ಬಂದಂತೆಲ್ಲ ಬೆಳಕು ಉಜ್ವಲಿಸುತ್ತಿತ್ತು.

ಎಸ್ ಒನ್ ಬೋಗಿ ಹತ್ತಿ 54ನೇ ಸಂಖ್ಯೆಯ ಸೀಟು ನೋಡಿದಾಗ ಅಪ್ಪರ್ ಸೀಟ್ ಕಾಯುತ್ತಿತ್ತು. ಹೆಗಲ ಮೇಲೆ ಇದ್ದ ಬ್ಯಾಗನ್ನು ತೆಗೆದು ಸಿಟ್ ಮೇಲೆ ಇಟ್ಟು, ಮೇಲೆ ಹತ್ತಿದಾಗ ಮುಖಕ್ಕೆ ಎಳೆ ಎಳೆಯಂತಹದ್ದು ಸ್ಪರ್ಶಸುತ್ತಿದ್ದಂತೆ ಬಾಸವಾಗಿ ಕೈಯಿಂದ ಮುಖವನ್ನು ಸವರಿಕೊಂಡು, ಬ್ಯಾಗ್ ಮುಂದೆ ಸರಿಸಿ ತಲೆ ಇಟ್ಟು ಅಂಗಾತ ಮಲಗಿದೆ.

Advertisements

ಎಲ್ಲಿಂದಲೋ ಸರ್ರನೆ ಮುಖದ ಮೇಲೆ ಓಡಾಡಿದ ಹಾಗೆ ಅನ್ನಿಸಿತು. ಕೂಡಲೇ ಮುಖದ ಮೇಲೆ ಕೈಯಾಡಿಸಿ ಆ ಕಡೆ ಈ ಕಡೆ ನೋಡಿದೆ. ಕೂದಲು ಎಳೆಗಿಂತ ತೆಳುವಾದ ಎಳೆ ಲೈಟಿನ ಬೆಳಕಿನಲ್ಲಿ ಅಸ್ಪಷ್ಟವಾಗಿ ಕಾಣುತ್ತಿತ್ತು. ಆ ಅಸ್ಪಷ್ಟ ಎಳೆಯು ಗಾಳಿಯಲ್ಲಿ ತೇಲಾಡುತ್ತಿದ್ದ ಜೇಡ ಸರ್ರನೆ ಕೆಳಗಿಳಿದು ಮತ್ತೆ ಅದೇ ವೇಗದಲ್ಲಿ ಮೇಲಕ್ಕೇರುತ್ತಿದ್ದ ಜೇಡ ಹಗ್ಗದ ಮೇಲೆ ನಡೆಯುವ ಸರ್ಕಸ್ಸಿನವನನ್ನು ಮೀರಿಸುತ್ತಿತ್ತು. ಇದನ್ನು ಗಮನಿಸಿದ ನಾನು, ಕುತೂಹಲದಿಂದ ಎದ್ದು ಕೂರುವಂತೆ ಮಾಡಿತು.

ಮೂರು ಫ್ಯಾನ್‌ಗಳು ಒಂದೇ ಸಮನೆ ಗರಗರನೆ ತಿರುಗುತ್ತಿದ್ದವು. ಎರಡು ಫ್ಯಾನ್‌ಗಳ ಮೇಲ್ಭಾಗದ ಸುತ್ತ ಮೂರು ಜೇಡಗಳು. ಒಂದು ಬಲೆ ಹೆಣೆದು ನಡುವೆ ವಿಶ್ರಾಂತಿ ಪಡೆಯುತ್ತಿತ್ತು. ಇನ್ನೊಂದು ಜೇಡ ಬಲೆ ಹೆಣೆದು ಕೊನೆಯ ಹಂತಕ್ಕೆ ತಲುಪುವ ತವಕದಲ್ಲಿತ್ತು. ಮೂರನೇ ಜೇಡ ಬಲೆ ಹೆಣೆಯಲು ಆಗತಾನೆ ಬುನಾದಿ ಹಾಕುತ್ತಿತ್ತು.

ನನಗಂತೂ ಖುಷಿ, ಆಶ್ಚರ್ಯ, ಸೋಜಿಗ ಎಲ್ಲವೂ ಒಗ್ಗೂಡಿ ಒಮ್ಮೆಲೇ ಕುತೂಹಲ ಕೆರಳಿಸುತ್ತಿತ್ತು. ಯಾಕೆಂದರೆ ಊರ ಮನೆಯ ತೊಲೆಗಳ ಮೂಲೆ, ಸಂದಿ-ಗೊಂದಿ, ಪಾಳು ಬಿದ್ದ ಜಾಗ, ಬಿರುಕು ಬಿಟ್ಟ ಜಾಗ, ಕಲ್ಲು ಬಂಡೆಯ ಇಕ್ಕಟ್ಟಿನಲ್ಲಿ ಜೇಡ ಹೆಣೆದಿದ್ದ ಬಲೆಗಳನ್ನು ನೋಡಿದ್ದೆನೇ ಹೊರತು, ಜೇಡ ಬಲೆ ಹೆಣೆಯುವುದನ್ನು ನೋಡಿರಲಿಲ್ಲ.

ಜೇಡ ಬಲೆಯನ್ನು ಹೆಣೆಯುತ್ತಿರುವುದನ್ನು ನೋಡಲು ಹತ್ತಿರಕ್ಕೆ ಕಣ್ಣು ಹಾಯಿಸಿದೆ. ತಕ್ಷಣವೇ ಹೆಣೆಯುವ ಕಾಯಕಕ್ಕೆ ವಿರಾಮ ನೀಡಿ, ಇವನ್ಯಾವಣಯ್ಯ ಹಿಂಗೇ ನೋಡುತ್ತಿರುವವನು ಎಂದು ನನ್ನ ಕಡೆ ಮುಖ ತಿರುಗಿಸಿ ನಿಂತಿತು. ಡುಮುಕು ಹೊಟ್ಟೆ, ಹೊಟ್ಟೆಯ ಮೇಲೆ ಸಣ್ಣ ಸಣ್ಣ ಕೂದಲುಗಳು, ಹೊಟ್ಟೆಗೆ ಹತ್ತಿಕೊಂಡು ಮುಂಚಾಚಿದ ಮುಖ, ಮುಖದಲ್ಲಿ ಸಣ್ಣ ಸಣ್ಣ ಎಂಟು ಕಣ್ಣುಗಳಿವೆಯೆಂದು ಕೇಳಿದ್ದೆ, ಕಣ್ಣುಗಳ ಕೆಳಗೆ ಎರಡು ಸಣ್ಣ ಮೀಸೆ, ಮೀಸೆಯ ನಡುವೆ ಬಾಯಿ. ಹೊಟ್ಟೆ ಮುಖದ ಮಧ್ಯ ಕೆಳಭಾಗದಿಂದ ಚಾಚಿದ ಸಮನಾದ ಉದ್ದವಾದ ಎಂಟು ಕಾಲುಗಳು.

ಜೇಡ ಬಲೆ ಹೆಣೆಯುವುದನ್ನು ನಿಲ್ಲಿಸಿದ್ದನ್ನು ಗಮನಿಸಿ, ಸ್ವಲ್ಪ ಹಿಂದಕ್ಕೆ ಸರಿದು ನೋಡುತ್ತಿದ್ದೆ. ಸ್ವಲ್ಪ ಹೊತ್ತಿನ ನಂತರ ಜೇಡ ತನ್ನ ಕಾಯಕ ಆರಂಭಿಸಿತು. ಜೇಡ ಹೊಟ್ಟೆಯೊಳಗಿಂದ ಉದ್ಭವಿಸುವ ನೂಲನ್ನು ಫ್ಯಾನಿನ ತಂತಿಗೆ ಬಿಗಿಹಾಕಿ, ಹೊಟ್ಟೆಯೊಳಗಿಂದ ನೂಲನ್ನು ಹೊರ ಹಾಕುತ್ತ ಗಾಳಿಯಲ್ಲಿ ತೇಲುತ್ತ ವಿರುದ್ಧ ದಿಕ್ಕಿನಲ್ಲಿ ಸಾಗಿ ಕೊಂಕು ಹಾಕಿ, ಅದೇ ನೂಲಿನಲ್ಲಿ ನಡೆದುಕೊಂಡು ಬಂದು ಅಡ್ಡವಾಗಿ ನೂಲನ್ನು ಬಿಡುತ್ತ ಮತ್ತೊಂದು ಫ್ಯಾನಿನ ತಂತಿಗೆ ಬಿಗಿ ಹಾಕಿ, ಅದರ ವಿರುದ್ಧ ದಿಕ್ಕಿನಲ್ಲಿ ನೆಡೆದು ದೂರ ಸಾಗಿ ನೂಲು ಬಿಗಿಯುತ್ತದೆ. ನಂತರ ಮೇಲೆ ಒಂದು ಸುತ್ತು ನೂಲು ನೇಯ್ದು, ನಡುವೆ ಬಂದು ನೂಲಿನಿಂದ ಸಣ್ಣ ವೃತ್ತ ಮಾಡಿಕೊಂಡು, ಅಲ್ಲಿಂದ ಮೇಲೆ ಕಳಗೆ ಒಂದಕ್ಕೊಂದು ನೂಲು ಹೆಣೆಯುತ್ತ ಸುತ್ತಲೂ ಹೆಣೆದು, ಅಡ್ಡಲಾಗಿ ನೂಲನ್ನು ಹೆಣೆಯುತ್ತ ಕೆಳಗಿಂದ ಮೇಲಿನವರೆಗೂ ಹೆಣೆಯುತ್ತದೆ. ಹೀಗೆ ಹೆಣೆಯುವಾಗ ಕಾಲುಗಳು ಸಾತ್ ನೀಡುತ್ತಿದ್ದವು. ಜೇಡ ನೋಡ ನೋಡುತ್ತಿದ್ದಂತೆಯೇ ವೇಗವಾಗಿ ಬಲೆ ಹೆಣೆದು ಬೇಟೆಯಾಡಲು ಹೊಂಚು ಹಾಕಿತ್ತು.

ಜೇಡ ಸೂಕ್ಷ್ಮ ಜೀವಿಯಾಗಿದ್ದು, ಮೈಮೇಲಿನ ಕೂದಲಿನಿಂದ ಕೀಟಗಳ ಶಬ್ದ ಗ್ರಹಿಸಿ, ಬಲೆಯ ಹತ್ತಿರ ಯಾವುದೇ ಕೀಟಗಳು ಬಂದರೆ ಸಾಕು. ಇದೇ ಕೀಟವೆಂದು ಗುರುತಿಸುತ್ತದೆಯಂತೆ. ಕೀಟಗಳು ಬಲೆಯೊಳಗೆ ಸಿಕ್ಕಿಕೊಳ್ಳುತ್ತಿದ್ದಂತೆ ಜೇಡ ಜಾಗೃತವಾಗಿ, ಬಾಯಲ್ಲಿ ಉತ್ಪತ್ತಿಯಾದ ಒಂದು ಬಗೆಯ ವಿಷವನ್ನು ಕೀಟಕ್ಕೆ ಚುಚ್ಚುತ್ತದೆ. ಚುಚ್ಚಿದ ಕೂಡಲೇ ಕೀಟದ ದೇಹವೆಲ್ಲ ಕರಗುತ್ತದೆ. ಆಗ ಜೇಡ ಎಳನೀರು ಹೀರಿದ ಹಾಗೆ ಕರಗಿದ ದ್ರವವನ್ನು ಹೀರಿ ಹೊಟ್ಟೆ ತುಂಬಿಸಿಕೊಳ್ಳುತ್ತದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಸ್ಲಿಮರು, ನಂತರ ಕ್ರೈಸ್ತರು… ಆನಂತರ?

“ಒಮ್ಮೊಮ್ಮೆ ಹೆಣ್ಣು ಜೇಡ ಸ್ವ ಜಾತಿಯ ಗಂಡು ಜೇಡವನ್ನು ಅರಿಯದೆ ಹಿಡಿದು ತಿನ್ನುತ್ತವೆ. ಹಾಗಾಗಿ ಗಂಡು ಜಾತಿಯ ಜೇಡಗಳು ಹೆಣ್ಣು ಜೇಡಗಳೊಂದಿಗೆ ವ್ಯವಹರಿಸಲು ಕಷ್ಟಕರ ವಾತಾವರಣವಿದೆ. ಗಂಡು ಜೇಡಗಳು ಕಾಮಕ್ರೀಡೆ ಆಡುವುದರ ಜತೆಗೆ ಹೆಣ್ಣು ಜೇಡಗಳಿಗೆ ಆಹಾರವಾಗುತ್ತವೆ” ಎಂಬುದನ್ನು ತಿಳಿದಾಗ ಆಶ್ಚರ್ಯ ಎನಿಸಿತು.

ಜೇಡಗಳಿಗೆ ಎಂಟು ಕಾಲುಗಳಿದ್ದರೂ ನೆಲದ ಮೇಲೆ ನಡೆಯುವುದು ಅಪರೂಪ. ಯಾವಾಗಲು ಗಾಳಿಯಲ್ಲಿ ಹಾಯಾಗಿ ನೂಲಿನೊಂದಿಗೆ ಗಾಳಿಯಲ್ಲಿ ಸಂಚರಿಸುತ್ತ, ಬಲೆಗಳನ್ನು ಹೆಣೆಯುತ್ತ, ಬೇಟೆಯಾಡುತ್ತ, ಮೊಟ್ಟೆಗಳನ್ನು ಬಲೆಯಲ್ಲಿಯೇ ಚೀಲ ಹೆಣೆದು ಸಾಕುವ ಪರಿ ಸೋಜಿಗವೆನಿಸಿತು.

ಫ್ಯಾನಿನ ಗಾಳಿಯ ಅಲೆಗೆ ಮೂರು ಜೇಡಗಳು ನೇಯ್ದ ಬಲೆಗಳು ಗಾಳಿಯಲ್ಲಿ ತೇಲುತ್ತಿದ್ದವು. ನನಗರಿಯದೆ ನನ್ನ ಕಣ್ಣುಗಳು ನಿದ್ದೆಗೆ ಜಾರಿದವು.

SHARANAPPA H SANGANALA
ಶರಣಪ್ಪ ಎಚ್ ಸಂಗನಾಳ
+ posts

ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣಪ್ಪ ಎಚ್ ಸಂಗನಾಳ
ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X