ವಿನೇಶ್ ಅವರ ಪರಿಶ್ರಮದ ಹಿನ್ನೆಲೆಯನ್ನು ತಿಳಿಯದ ಹಾಗೂ ಕುಸ್ತಿ ಪಟುಗಳ ತೂಕ ಇಳಿಸುವ ಅತಿ ಕಷ್ಟದಾಯಕ ಪ್ರಕ್ರಿಯೆ ಬಗ್ಗೆ ಅರಿವಿಲ್ಲದವರು ಅವರ ಪ್ಯಾರಿಸ್ ಒಲಿಂಪಿಕ್‌ನ ಅನರ್ಹತೆಯನ್ನು ಬಹು ಹಗುರವಾಗಿ ಟೀಕೆ ಮಾಡುತ್ತಿದ್ದಾರೆ.
ಹರಿಯಾಣದ ಚಕ್ರಿ ದಾದ್ರಿ ಎಂಬ ಗ್ರಾಮದ ಒಂದು ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಚಿನ್ನದ ಹುಡುಗಿ ವಿನೇಶ್ ಫೋಗಟ್ ಪ್ಯಾರಿಸ್ಸಿನಿಂದ ಭಾರತಕ್ಕೆ ಮರಳಿ ಬಂದಿದ್ದಾರೆ. ಒಲಿಂಪಿಕ್‌ನಲ್ಲಿ ಪದಕ ಗೆಲ್ಲದಿದ್ದರೂ, ಅದಕ್ಕೂ ಮೀರಿ ಅಪಾರ ಪ್ರೀತಿ ಗಳಿಸಿರುವ ಅವರಿಗೆ ಸಹೃದಯಿ ಭಾರತೀಯರಿಂದ ಆತ್ಮೀಯ ಸ್ವಾಗತ ದೊರಕಿದೆ. ಕಳೆದ ವಾರದಿಂದ ಈ ಚಿನ್ನದ ಹುಡುಗಿಯ 100 ಗ್ರಾಮ್ ತೂಕದ ಕಥೆಯು ಬಹು ವ್ಯಾಪಕವಾಗಿ ಹರಿದಾಡುತ್ತಿದೆಯಾದರೂ, ಅದು ಗೊಂದಲ ಸೃಷ್ಟಿಸಿರುವ ಕಾರಣ ವಸ್ತುಸ್ಥಿತಿಯ ಸೂಕ್ತ ಗ್ರಹಿಕೆಗಾಗಿ ವಿನೇಶ್ ಕಥೆಯನ್ನು ಮತ್ತೆ ಮತ್ತೆ ಹೇಳಬೇಕಾದ ಅನಿವಾರ್ಯತೆ ಇದೆ.
ತನ್ನ 29ನೇ ವಯಸ್ಸಿಗೆ ಫ್ರಿ ಸ್ಟೈಲ್ ಕುಸ್ತಿಯಲ್ಲಿ ಅನೇಕ ಸಾಧನೆ ಮಾಡಿರುವ ಛಲಗಾತಿ ವಿನೇಶ್ ಬಾಲ್ಯದಿಂದಲೂ ಸವಾಲುಗಳ ಮಡಿಲಲ್ಲೇ ಬೆಳೆದವರು. ಸೋಲನ್ನೆಂದೂ ಒಪ್ಪದ ಇವರು ಈಗ ‘ಕುಸ್ತಿಯೇ ನನ್ನನ್ನು ಸೋಲಿಸಿತು, ನಾನು ಕುಸ್ತಿಯನ್ನು ಸೋಲಿಸಲಾಗಲಿಲ್ಲ’ ಎಂದು ಕುಸ್ತಿಗೆ ವಿದಾಯ ಹೇಳಿರುವುದು ದುರಂತವಷ್ಟೆ ಅಲ್ಲ, ನಮ್ಮ ಕ್ರೀಡಾ ವ್ಯವಸ್ಥೆಯನ್ನು ಗಂಭೀರ ವಿಮರ್ಶೆಗೊಳಪಡಿಸುವ ಅಗತ್ಯವನ್ನು ಸೂಚಿಸುತ್ತದೆ.
ವಿನೇಶ್ ತಮ್ಮ ಒಂಬತ್ತನೆ ವಯಸ್ಸಿನಲ್ಲಿಯೇ ತನ್ನ ತಂದೆಯ ದುರ್ಮರಣವನ್ನು ಎದುರಿಸಿದಾಗ ಅವರ ದೊಡ್ಡಪ್ಪ ಮಹಾವೀರ್ ವಿನೇಶ್ ಫೋಗಟ್ ಇವರ ಗುರುವಾಗುತ್ತಾರೆ. ಪುರುಷ ಸೀಮಿತ ಕುಸ್ತಿ ಕಣದೊಳಗೆ ಸ್ಥಾನ ಸ್ಥಾಪಿಸಲು ಸಾಮಾಜಿಕ ವಿರೋಧವನ್ನು ಎದುರಿಸುವ ವಿನೇಶ್ ಮತ್ತು ದೊಡ್ಡಪ್ಪನ ಕುಟುಂಬವು ಊರನ್ನೇ ತೊರೆಯಬೇಕಾಗುತ್ತದೆ. ಇವೆಲ್ಲಾ ಸವಾಲುಗಳನ್ನು ಎದುರಿಸಿ ಕುಸ್ತಿಯಲ್ಲಿ ದೊಡ್ಡ ಸಾಧನೆ ಮಾಡಿದ ವಿನೇಶ್ ಕ್ಯಾನ್ಸರ್‌ನೊಂದಿಗೆ ಸೆಣಸಾಡಿ ಗೆದ್ದ ತನ್ನ ತಾಯಿಯೇ ತನ್ನ ಬದುಕಿಗೆ ಸ್ಪೂರ್ತಿ ಎನ್ನುತ್ತಾರೆ.
2013ರಿಂದಲೂ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ವಿನೇಶ್ ಸತತವಾಗಿ ತಮ್ಮ ಗೆಲುವಿನ ಪಟ್ಟನ್ನು ಛಾಪಿಸುತ್ತಲೇ ಬಂದಿದ್ದಾರೆ. ಏಷ್ಯನ್ ರೆಝಲಿಂಗ್ ಚಾಂಪಿಯನ್‍ಶಿಪ್, ಕಾಮನ್‍ವೆಲ್ತ್ ಗೆಮ್ಸ್, ಏಷಿಯನ್ ಗೆಮ್ಸ್, ವಿಶ್ವ ಚಾಂಪಿಯನ್‍ಶಿಪ್ ಮತ್ತು ಏಷ್ಯನ್ ಚಾಂಪಿಯನ್‍ಶಿಪ್‍ಗಳಲ್ಲಿ ಒಟ್ಟು 5 ಚಿನ್ನ, 2 ಬೆಳ್ಳಿ, 7 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. 2018ರಲ್ಲಿ ಕಾಮನ್‍ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ಎರಡರಲ್ಲಿಯೂ ಚಿನ್ನವನ್ನು ಗಳಿಸಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. ಅರ್ಜುನ ಪ್ರಶಸ್ತಿ, ಕ್ರೀಡಾ ಪ್ರಾಧಿಕಾರದ ಪದ್ಮಶ್ರಿ ಮತ್ತು ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿಗಳನ್ನು ಪಡೆದ ಇವರು, 2019ರ ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಮೊದಲ ಭಾರತೀಯ ಮಹಿಳೆ ಹಾಗೂ 2022ರ ವರ್ಷದ ಬಿಬಿಸಿ ಭಾರತೀಯ ಮಹಿಳಾ ಕ್ರೀಡಾಪಟು ಎಂದೂ ಸಹ ಗುರುತಿಸಿಕೊಂಡಿದ್ದಾರೆ.

ಒಟ್ಟು ಮೂರು ಒಲಿಂಪಿಕ್‌ನಲ್ಲಿ ಭಾಗವಹಿಸಿದ ಇವರು, ಟೋಕಿಯೋ ಮತ್ತು ರಿಯೋ ಒಲಿಂಪಿಕ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದರೆ, ಇತ್ತಿಚೆಗೆ ನಡೆದ ಪ್ಯಾರಿಸ್ ಒಲಿಂಪಿಕ್‍ನಲ್ಲಿ ಫೈನಲ್ ತಲುಪಿ 100 ಗ್ರಾಮ್ ತೂಕ ಹೆಚ್ಚಿದ್ದ ಕಾರಣಕ್ಕೆ ತಾವು ಗಳಿಸಿದ್ದ ಬೆಳ್ಳಿಯನ್ನೂ ಸಹ ಕಳೆದುಕೊಂಡು ಆಟದಿಂದ ಅನರ್ಹಗೊಳ್ಳುತ್ತಾರೆ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಅವರ ಪ್ರದರ್ಶನ ತಾಂತ್ರಿಕವಾಗಿ ಅದ್ಬುತವೆಂದು ಪರಿಗಣಿತವಾದರೂ, ತಮ್ಮ ಕಾಲಿಗಾದ ದೊಡ್ಡ ಪೆಟ್ಟಿನಿಂದ ಸರ್ಜರಿಗೆ ಒಳಗಾಗುತ್ತಾರೆ. ಇವೆಲ್ಲದರ ನಡುವೆ, ಮಹಿಳಾ ಕುಸ್ತಿಪಟುಗಳ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ವಿನೇಶ್ ಮತ್ತು ಅವರ ಸಹ ಕ್ರೀಡಾಪಟುಗಳು ಖಂಡಿಸಿ ಬೀದಿಗಿಳಿಯುತ್ತಾರೆ. ಭಾರತೀಯ ಕುಸ್ತಿ ಒಕ್ಕೂಟದ (ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ) ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಸಂಸದರಾಗಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಸಮರವನ್ನೇ ಸಾರಿ, ಸುಪ್ರಿಂ ಕೋರ್ಟ್ ಮೊರೆ ಹೊಕ್ಕು ಅವರ ವಿರುದ್ಧ ಎಫ್‍ಐಆರ್ ದಾಖಲಿಸುತ್ತಾರೆ.
ಕಳೆದ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಬ್ರಿಜ್ ಭೂಷಣ್‍ರವರಿಗೆ ಟಿಕೆಟ್ ಸಿಗುವುದಿಲ್ಲವಾದರೂ, ಅವರ ಮಗ ಟಿಕೆಟ್ ಪಡೆದುಕೊಳ್ಳುತ್ತಾರೆ. 2023ರ ಡಿಸೆಂಬರ್‌ನಲ್ಲಿ ನಡೆಸಿದ ಕುಸ್ತಿ ಒಕ್ಕೂಟದ ಚುನಾವಣೆಗೆ ಬ್ರಿಜ್ ಭೂಷಣ್ ನಿಲ್ಲದಿದ್ದರೂ ಅವರ ವ್ಯಾಪಾರದ ಪಾಲುದಾರರು ಮತ್ತು ಸಹಾಯಕರು ಆದ ಸಂಜಯ್ ಸಿಂಗ್ ಎಂಬುವರನ್ನು ಚುನಾವಣೆಯಲ್ಲಿ ಗೆಲ್ಲಿಸಿ ಅಧ್ಯಕ್ಷ ಸ್ಥಾನ ನೀಡಲಾಗುತ್ತದೆ. ಇದನ್ನು ಪ್ರಶ್ನಿಸಿ ವಿನೇಶ್ ಮತ್ತು ತಂಡವು ತೀವ್ರ ವಿರೋಧ ವ್ಯಕ್ತ ಪಡಿಸುತ್ತದೆ. ವಿನೇಶ್ ತಮ್ಮ ಖೇಲ್ ರತ್ನ ಪ್ರಶಸ್ತಿಯನ್ನು ಮರಳಿಸಿದರೆ, ಸಾಕ್ಷಿ ಮಲ್ಲಿಕ್ ತನ್ನ ಕುಸ್ತಿಗೆ ವಿದಾಯ ಘೋಷಣೆ ಮಾಡುತ್ತಾರೆ ಮತ್ತು ಬಜರಂಗ್ ಪುನಿಯ ತಮ್ಮ ಪದ್ಮಭೂಷಣ ಪ್ರಶಸ್ತಿಯನ್ನು ಸರ್ಕಾರಕ್ಕೆ ಮರಳಿಸುತ್ತಾರೆ. ಕೊನೆಗೆ, ಸೂಕ್ತ ನಿಯಮಗಳನ್ನು ಅನುಸರಿಸದೆ ರಾಷ್ಟ್ರೀಯ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದ ಕಾರಣ ನೀಡಿ ಕ್ರೀಡಾ ಸಚಿವಾಲಯವು ಹೊಸದಾಗಿ ಚುನಾಯಿತವಾದ ಒಕ್ಕೂಟವನ್ನು ಅಮಾನ್ಯಗೊಳಿಸುತ್ತದೆ. ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ತಾತ್ಕಾಲಿಕ ಕುಸ್ತಿ ಸಮಿತಿಯನ್ನು ರಚಿಸುತ್ತದೆ.
ಈ ಎಲ್ಲಾ ಸಂದರ್ಭಗಳಲ್ಲಿ ಕ್ರೀಡಾ ವ್ಯವಸ್ಥೆ ಮತ್ತು ಅಧಿಕಾರರೂಢರಿಂದ ನೋವನ್ನು ಉಂಡಿರುವ ವಿನೇಶ್ ಮತ್ತು ಅವರ ಸಹ ಕ್ರೀಡಾಪಟುಗಳಿಗೆ ಯಾವುದೇ ಬೆಂಬಲ ನೀಡದ ಈ ದೇಶ ಅವರಿಂದ ಚಿನ್ನವನ್ನು ಬಯಸುತ್ತಿದೆ!? ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗಳಿಸಿ ಪರಿವಾರದವಳಾಗಿದ್ದ ವಿನೇಶ್, ತನ್ನ ಸಹ ಮಹಿಳಾ ಕ್ರೀಡಾಪಟುಗಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ಪ್ರಶ್ನಿಸಿದಾಗ ಮತ್ತು ರಸ್ತೆಯಲ್ಲಿ ಪೊಲೀಸರು ಅವಳನ್ನು ಎಳೆದೊಯ್ಯುವಾಗ ಅನಾಥಳಾಗುತ್ತಾಳೆ. ಮೂರು ಮತ್ತೊಂದು ರಾಜಕೀಯ ಸೀಟು ಗೆಲ್ಲಿಸುವ ಕ್ರಿಮಿನಲ್ ಆರೋಪಿಯೊಬ್ಬ ಸ್ವಂತದವನಾಗಿ ರಕ್ಷಣೆ ಪಡೆಯುತ್ತಾನೆ! ವಿನೇಶ್ ಪ್ಯಾರಿಸ್ ಒಲಿಂಪಿಕ್ ನಿಂದ ಅನರ್ಹರಾಗಿದ್ದಕ್ಕೆ ಒಲಿಂಪಿಕ್ ನಿಯಮವನ್ನು ದೂರಬೇಕಾಗಿಲ್ಲ ಅಥವಾ ಅದರ ಹಿಂದೆ ಯಾವ ಷಡ್ಯಂತ್ರವಿದೆ ಎಂದು ಅನುಮಾನಿಸಬೇಕಾಗಿಲ್ಲ. ಆದರೆ, ವಿನೇಶ್ ಖಂಡಿಸಿದ ಲೈಂಗಿಕ ದೌರ್ಜನ್ಯದ ಈ ಕಥೆಯು ಒಬ್ಬ ಸಮರ್ಥ ಕುಸ್ತಿ ಪಟುವಿಗೆ ಮತ್ತು ಈ ದೇಶಕ್ಕೆ ಮಾಡಿದ ಅನ್ಯಾಯದೊಂದಿಗೆ ತಳುಕು ಹಾಕಿಕೊಂಡಿದೆ ಎನ್ನುವುದರಲ್ಲಿ ಅನುಮಾನವಿಲ್ಲ.
ಇದೆಲ್ಲವನ್ನು ಹೇಳಬೇಕಾಗಿರುವುದು ಅನಿವಾರ್ಯವಿದೆ. ವಿನೇಶ್ ಅವರ ಪರಿಶ್ರಮದ ಹಿನ್ನೆಲೆಯನ್ನು ತಿಳಿಯದ ಹಾಗೂ ಕುಸ್ತಿ ಪಟುಗಳ ತೂಕ ಇಳಿಸುವ ಅತಿ ಕಷ್ಟದಾಯಕ ಪ್ರಕ್ರಿಯೆ ಬಗ್ಗೆ ಅರಿವಿಲ್ಲದವರು ಅವರ ಪ್ಯಾರಿಸ್ ಒಲಿಂಪಿಕ್‌ನ ಅನರ್ಹತೆಯನ್ನು ಬಹು ಹಗುರವಾಗಿ ಟೀಕೆ ಮಾಡುತ್ತಿದ್ದಾರೆ. ಸಾಮಾನ್ಯವಾಗಿ 53 ಕೆಜಿ ವರ್ಗದಲ್ಲಿ ಹೆಚ್ಚು ಬಾರಿ ಆಟವಾಡಿರುವ ವಿನೇಶ್ ಪ್ಯಾರಿಸ್ ಒಲಿಂಪಿಕ್‌ನಲ್ಲಿ 50 ಕೆಜಿ ವರ್ಗದಲ್ಲಿ ಆಟವಾಡಲು ತೀರ್ಮಾನಿಸಿದ್ದನ್ನು ಸುಲಭವಾಗಿ ಗೆಲ್ಲಲು ಮಾಡಿದ ತಂತ್ರ ಎಂದೆಲ್ಲಾ ಟೀಕೆಗಳು ಬಂದಿವೆ. ಸಾಮಾನ್ಯರ ಇಂತಹ ಟೀಕೆಗಳನ್ನು ದಡ್ಡತನವೆಂದು ಕಡೆಗಣಿಸಬಹುದು. ಆದರೆ ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ಅಧ್ಯಕ್ಷರಾದ ಪಿ.ಟಿ. ಉಷಾರವರು ಒಲಿಂಪಿಕ್ ಮಧ್ಯಸ್ತಿಕೆ ನ್ಯಾಯಾಲಯದ (ಕೋರ್ಟ್ ಆಫ್ ಆರ್ಬಿರ್ಟೆಶನ್ ಆಫ್ ಸ್ಪೋರ್ಟ್) ತೀರ್ಮಾನ ಬರುವ ಮುನ್ನ ನೀಡಿದ ಹೇಳಿಕೆ ಅನುಮಾನಸ್ಪದವಷ್ಟೆ ಅಲ್ಲ, ಅವರ ಪದವಿಗೆ ತಕ್ಕದ್ದಾಗಿಲ್ಲ.
ವಿನೇಶ್‍ರವರು ಅನರ್ಹಗೊಂಡ ತಕ್ಷಣದಲ್ಲಿ ಅವರು (ಪಿ.ಟಿ. ಉಷಾ), ವೈದ್ಯಾಧಿಕಾರಿ ಡಾ.ದಿನ್ಶಾ ಪರ್ದಿವಾಲ ಹಾಗೂ ಮತ್ತಿತರರು ಸ್ವತಃ ಜವಾಬ್ದಾರಿ ವಹಿಸಿ ತೂಕ ಇಳಿಸಲು ಇಡೀ ರಾತ್ರಿ ವಿನೇಶ್‍ರವರಿಂದ ಏನೆಲ್ಲಾ ಮಾಡಿಸಲಾಯಿತು ಎಂದು ತಾವೇ ಸ್ವಯಂ ಹೇಳಿಕೆ ನೀಡಿದ್ದರು. ನಂತರ ನ್ಯಾಯಾಲಯ ನಿರ್ಣಯದ ನಿರೀಕ್ಷೆಯಲ್ಲಿದ್ದ ಸಮಯದಲ್ಲಿ (ಆಗಸ್ಟ್ 12ರಂದು) ತೂಕ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ಆಟಗಾರ್ತಿ ಮತ್ತು ಅವರ ತರಬೇತಿದಾರರದೇ ಹೊರತು ಅದು ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ಅಥವಾ ವೈದ್ಯಾಧಿಕಾರಿಗಳದ್ದಲ್ಲ ಎಂಬ ಹೇಳಿಕೆ ನೀಡುತ್ತಾರೆ. ಇವರ ಈ ಹೇಳಿಕೆ ಮುಂದೆ ಬರಲಿರುವ ನ್ಯಾಯಾಲಯದ ತೀರ್ಪಿನ ಮೇಲೆ ಪರಿಣಾಮ ಬೀರಿ, ಅದು ಕೇವಲ ವಿನೇಶ್‍ಗಷ್ಟೆ ಅಲ್ಲ ಭಾರತಕ್ಕೂ ನಷ್ಟವನ್ನುಂಟು ಮಾಡಬಹುದೆಂಬ ಅರಿವು ಇರಲಿಲ್ಲವೋ, ಅಥವಾ ಅಂತಹ ಪರಿಣಾಮ ಜರುಗಲೆಂದೇ ನೀಡಿದ ಹೇಳಿಕೆಯಾಗಿತ್ತೊ ತಿಳಿಯದು.

ಸಾಮಾನ್ಯವಾಗಿ 53 ಕೆಜಿ ತೂಕದ ವರ್ಗದಡಿ ಆಡುತ್ತಿದ್ದ ವಿನೇಶ್ ಈ ಬಾರಿ 50 ಕೆಜಿ ತೂಕವನ್ನು ಆಯ್ಕೆ ಮಾಡಿಕೊಂಡಿದ್ದೆಕೆ? ಕಾಲಿನ ಸರ್ಜರಿಯಿಂದಾಗಿ ವಿನೇಶ್ ಏಷ್ಯನ್ ಗೇಮ್ಸ್ ಒಂದರಲ್ಲಿ 53 ಕೆಜಿಯಡಿ ಸ್ಪರ್ಧಿಸುವುದಿಲ್ಲ. ಆದರೆ, ಇನ್ನೊರ್ವ ಕ್ರೀಡಾಪಟು ಅಂತಿಮ್ ಪಂಗಲ್ ಸ್ಪರ್ಧಿಸಿ 53 ಕೆಜಿಯಡಿ ಕಂಚು ಮತ್ತು ವಿಶ್ವ ಚಾಂಪಿಯನ್‍ಶಿಪ್‌ನಲ್ಲೂ ಸಹ ಕಂಚು ಪದಕಗಳನ್ನು ಗೆಲ್ಲುತ್ತಾರೆ. ಇದರಿಂದಾಗಿ ಅಂತಿಮ್ ಅವರು 53 ಕೆಜಿಯಡಿ ಪ್ಯಾರಿಸ್ ಒಲಿಂಪಿಕ್‍ನಲ್ಲಿ ಸ್ಪರ್ಧಿಸಲು ಕೋಟಾ ಹೊಂದುತ್ತಾರೆ. ಇದು ವ್ಯಕ್ತಿಗತವಾಗಿರದೆ, ದೇಶದ ಕೋಟಾ ಆಗಿದ್ದು, ದೇಶದಿಂದ ಯಾವ ಸಮರ್ಥರೂ ಸ್ಪರ್ಧಿಸಬಹುದಾಗಿರುತ್ತದೆ.
ಆದರೆ ಕುಸ್ತಿ ಒಕ್ಕೂಟವು ಈ ಕೋಟಾ ಪಡೆಯಲು ಟ್ರಯಲ್ ಸ್ಪರ್ಧೆ ನಡೆಸಿ ಅದರಲ್ಲಿ ಗೆಲ್ಲುವವರನ್ನು ಕಳಿಸುವುದಾಗಿ ತಿರ್ಮಾನಿಸುತ್ತದೆ. ಟ್ರಯಲ್ ಪಟಿಯಾಲದಲ್ಲಿ ಶುರುವಾದಾಗ ವಿನೇಶ್ 53 ಮತ್ತು 50 ಕೆ.ಜಿ. ಹೀಗೆ ಎರಡೂ ವರ್ಗದಡಿ ಸ್ಪರ್ಧಿಸಿ ನಾಲ್ಕು ಜನರಲ್ಲಿ ಮೊದಲಿಗರಾಗಿ ಗೆದ್ದಿರುತ್ತಾರೆ. (ಎಪ್ರಿಲ್‍ನಂದು ಕಿರ್ಗಿಸ್ತಾನದಲ್ಲಿ ನಡೆದ ಏಷ್ಯನ್ ರೆಸಲಿಂಗ್ ಚಾಂಪಿಯನ್‍ಶಿಪ್‍ನಲ್ಲಿ ವಿನೇಶ್ 50 ಕೆ.ಜಿ.ಯಡಿ ಸಹ ಒಲಿಂಪಿಕ್ ಕೋಟಾವನ್ನು ಈಗಾಗಲೇ ಗಳಿಸಿರುತ್ತಾರೆ). ಅಂತಿಮ್ ಅವರು ಟ್ರಯಲ್‍ನಲ್ಲಿ ಗೆದ್ದ ವಿನೇಶ್ ಮತ್ತು ಇತರೆ ಮೂರು ಕುಸ್ತಿ ಪಟುಗಳ ವಿರುದ್ಧ ಆಡಿ ತಮ್ಮ 53 ಕೆ.ಜಿ. ಕೋಟಾ ಉಳಿಸಿಕೊಳ್ಳಬೇಕಿತ್ತು. ಆದರೆ, ಇದ್ದಕ್ಕಿದ್ದಂತೆ ಕಳೆದ ಮೇ ತಿಂಗಳಿನಲ್ಲಿ ಈ ಟ್ರಯಲ್ ಬೇಕಾಗಿಲ್ಲ ಈ ಬಾರಿ ವಿನಾಯಿತಿ ನೀಡಲಾಗಿದೆ ಎಂದು ಕುಸ್ತಿ ಒಕ್ಕೂಟವು ಘೋಷಿಸುತ್ತದೆ. ಇದರಿಂದಾಗಿ ವಿನೇಶ್ ಅವರನ್ನು 53 ಕೆ.ಜಿ.ಯಡಿ ಸೋಲಿಸುವ ಅವಶ್ಯಕತೆ ಅಂತಿಮ್‍ಗೆ ಬರುವುದಿಲ್ಲ. ವಿನೇಶ್ ಖಂಡಿತವಾಗಿ ಅಂತಿಮ್ ಅವರನ್ನು 53 ಕೆ.ಜಿ. ಟ್ರಯಲ್‌ನಲ್ಲಿ ಸೋಲಿಸುತ್ತಾರೆಂದು ತಿಳಿದೇ ಟ್ರಯಲ್ ನಿಯಮವನ್ನು ರದ್ದುಗೊಳಿಸಲಾಯಿತೇ? ಇದೇ ಕಾರಣಕ್ಕೆ 53 ಕೆ.ಜಿ.ಯಡಿ ಆಡಲು ಒಕ್ಕೂಟದಿಂದ ಅನುಮತಿ ಸಿಗುತ್ತದೋ ಇಲ್ಲವೋ ಎಂಬ ಅನುಮಾನದಿಂದಲೇ ವಿನೇಶ್ 50 ಕೆ.ಜಿ.ಯಡಿ ಸ್ಪರ್ಧಿಸಲು ತಯಾರಾಗಿರುತ್ತಾರೆ.
ಮೊದಲಿನಿಂದಲೂ ಒಕ್ಕೂಟ ಅವರನ್ನು ಒಲಂಪಿಕ್‍ಗೆ ಕಳಿಸದಿರಲು ಮನಸ್ಸಿಲ್ಲದ ಬಗ್ಗೆ ಅನೇಕ ಸೂಚನೆಗಳನ್ನು ವಿನೇಶ್ ಇಗಾಗಲೇ ಗ್ರಹಿಸಿರುತ್ತಾರೆ. ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಅವರ ಬಲಗೈ ಬಂಟರಾದ ಹಾಲಿ ಅಧ್ಯಕ್ಷ ಸಂಜಯ್ ಸಿಂಗ್ 53 ಕೆಜಿಯಡಿ ಸ್ಪರ್ಧಿಸಲು ಅವಕಾಶ ನೀಡುವ ಸಂಭವ ಕಡಿಮೆ ಇರುವ ಕಾರಣ ಅವರನ್ನು ಒಲಿಂಪಿಕ್ ಕುಸ್ತಿ ಅಭ್ಯರ್ಥಿಗಳ ಆಯ್ಕೆಯಿಂದ ಹೊರಗಿಡುವುದಕ್ಕಾಗಿ ವಿನೇಶ್ ಮತ್ತು ಬಜರಂಗ್ ಪುನಿಯಾ ಇವರು ಉಚ್ಛ ನ್ಯಾಯಾಲಯದಲ್ಲಿ ಮಧ್ಯಂತರ ಆದೇಶ ಪಡೆಯಲು ಮಾರ್ಚ್ 2024ರಲ್ಲಿ ಅರ್ಜಿ ಸಲ್ಲಿಸುತ್ತಾರೆ. ಆದೇಶ ಬರಲು ಎರಡವರೆ ತಿಂಗಳು ತಡವಾದ ಕಾರಣ ಅದು ಸಾಧ್ಯವಾಗದೆ ವಿನೇಶ್ 50 ಕೆ.ಜಿ.ಯಡಿ ಆಡುವುದು ಅನಿವಾರ್ಯವಾಯಿತು ಎಂದು ಅವರ ವಕೀಲರಾದ ರಾಹುಲ್ ಮೆಹ್ರಾ ದಿ ಪ್ರಿಂಟ್ಗೆ ನೀಡಿದ ಸಂದರ್ಶನದಲ್ಲಿ ತಿಳಿಸುತ್ತಾರೆ.

53 ಕೆಜಿ ಸ್ಪರ್ಧೆಗೆ ಆಯ್ಕೆಯಾಗುವ ಅಂತಿಮ್ ಅವರು ಒಲಿಂಪಿಕ್‌ನಲ್ಲಿ ಮೊದಲ ಸುತ್ತಿಗೆ ಸೋಲುವುದು ದುರದೃಷ್ಟಕರ. ಆದರೆ ಗೆಲ್ಲುವ ಕುದುರೆ ಯಾವುದು ಮತ್ತು ಯಾವ ಟ್ರಾಕ್‍ನಲ್ಲಿ ಗೆಲ್ಲುವ ಸಂಭವವಿದೆ ಎಂದು ತಿಳಿದಿದ್ದರೂ, ಅದನ್ನು ಸೋಲಿನ ಹಾದಿಯೆಡೆಗೆ ಬಲವಂತದಿಂದ ತಳ್ಳಿದ್ದು ಷಡ್ಯಂತ್ರವೋ ಅಲ್ಲವೋ ಎಂದು ಯೋಚಿಸುವುದು ಕೈಹುಣ್ಣಿಗೆ ಕನ್ನಡಿ ಹಿಡಿದಂತಾಗುತ್ತದೆ.
ಒಲಿಂಪಿಕ್‌ನಲ್ಲಿ ಭಾಗವಹಿಸಲಿದ್ದ ವಿನೇಶ್ ಅವರ ಫಿಸಿಯೊಥೆರಪಿಸ್ಟ್‌ಗೆ ಮಾನ್ಯತಾ ಪತ್ರವನ್ನು ನೀಡಲು ವಿಳಂಬ ಮಾಡುವುದು, ಸತತ ಬೇಡಿಕೆಯ ನಂತರವೂ ಅವರಿಗಾಗಿಯೇ ನಿಗದಿಸಿದ ಫಿಸಿಯೊಥೆರಪಿಸ್ಟ್ ನೀಡದೆ ಇರುವುದು, ಸ್ವಯಂಸೇವಾ ಸಂಸ್ಥೆ ಸಹಾಯದಿಂದ ನುರಿತ ವಿದೇಶಿ ತರಬೇತಿದಾರರನ್ನು ನೇಮಿಸಿಕೊಂಡಾಗ ತಕರಾರು ಒಡ್ಡುವುದು, ಸಣ್ಣಪುಟ್ಟ ತಪ್ಪುಗಳಿಗೆ ಅಥವಾ ಸುಳ್ಳು ಆರೋಪಗಳನ್ನು ಹೊರಿಸಿ ಜೀವನ ಪರ್ಯಂತ ಕುಸ್ತಿ ಸ್ಪರ್ಧೆಯಿಂದ ತೆಗೆದು ಹಾಕುವ ಬೆದರಿಕೆಯ ಶೋಕಾಸ್ ನೋಟಿಸ್ ನೀಡುವುದು. . . ., ಹೀಗೆ ವಿಧ ವಿಧವಾಗಿ ವಿನೇಶ್ ಒಲಿಂಪಿಕ್‌ನಲ್ಲಿ ಚಿನ್ನ ಗಳಿಸದಂತೆ ಮಾಡಲು ಒಡ್ಡಿದ ಅಡ್ಡಿಗಳ ವಿವರವನ್ನು ಧ್ರುವ್ ರಾಠಿ ತಮ್ಮ ಯೂಟ್ಯೂಬ್‍ನಲ್ಲಿ ತಿಳಿಸಿದ್ದಾರೆ. ಇಂತಹ ಪರಿಸ್ಥಿಯಲ್ಲಿ ಆಟಗಾರರು ತಮ್ಮ ಮಾನಸಿಕ ಹಾಗೂ ದೈಹಿಕ ಕ್ಷಮತೆಯನ್ನು ಕಾಯ್ದುಕೊಳ್ಳುವುದಾದರೂ ಹೇಗೆ? ಆದರೂ, ಒಲಿಂಪಿಕ್‌ನಲ್ಲಿ ಗೆಲ್ಲಲೇಬಾರದೆಂಬ ಮಾಡಿದ ಇಂತಹ ಅನೇಕ ಸಂಚುಗಳ ನಡುವೆಯೂ ವಿನೇಶ್ ಜಪಾನಿನ ಸೋಲು ಕಾಣದ ಸರದಾರಿಣಿ ಯುಯಿ ಸುಸಾಕಿಯನ್ನು ಸೋಲಿಸಿ ಫೈನಲ್ ತಲುಪಿದ್ದು ರೋಚಕವೇ ಸರಿ!
ಅಮಾನ್ಯಗೊಂಡ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷರು ಒಲಿಂಪಿಕ್ ಕುಸ್ತಿ ತಂಡವನ್ನು ಆಯ್ಕೆ ಮಾಡುವುದು ಮತ್ತು ಒಲಿಂಪಿಕ್‌ನಲ್ಲಿ ಭಾರತವನ್ನು ಪ್ರತಿನಿಧಿಸುವುದನ್ನು ಕ್ರಿಡಾ ಕಾರ್ಯಕರ್ತರು ಮತ್ತು ವಕೀಲರಾದ ರಾಹುಲ್ ಮೆಹ್ರಾ ಅವರು ದಿ ಪ್ರಿಂಟ್ಗೆ ನೀಡಿದ ಸಂದರ್ಶನದಲ್ಲಿ ಪ್ರಶ್ನಿಸಿದ್ದಾರೆ. ಸರ್ಕಾರವೇ (ಕ್ರೀಡಾ ಸಚಿವಾಲಯವು) ಅಮಾನ್ಯಗೊಳಿಸಿದ ಒಕ್ಕೂಟದ ಅಧ್ಯಕ್ಷರನ್ನು ಒಲಿಂಪಿಕ್‍ಗೆ ಕಳಿಸಲು ಸರ್ಕಾರ ಹೇಗೆ ಒಪ್ಪಿಗೆ ನೀಡಿತು ಎನ್ನುವುದು ಮೆಹ್ರಾರವರ ಮತ್ತೊಂದು ಪ್ರಶ್ನೆ. ಅನರ್ಹಗೊಂಡ ಅಂತಹ ಮಾನಸಿಕ ಕ್ಷೋಭೆಯ ಸಮಯದಲ್ಲಿಯೂ ವಿನೇಶ್ ನಿಗದಿತ ಅವಧಿಯೊಳಗೆ ಪ್ರೆಂಚ್ ಲಾಯರ್ ಸಹಾಯ ಪಡೆದು ಒಲಿಂಪಿಕ್ ಮಧ್ಯಸ್ಥಿಕೆ (ಆರ್ಬಿರ್ಟೆಶನ್) ನ್ಯಾಯಾಲಯಕ್ಕೆ ಜಂಟಿ ಬೆಳ್ಳಿ ಪದಕವನ್ನು ಕೊಡುವಂತೆ ಮನವಿ ಸಲ್ಲಿಸಿದ ಕಾರಣಕ್ಕೆ ನಂತರ ನೇಮಕವಾದ ಭಾರತದ ಹಿರಿಯ ವಕೀಲರು ಆ ದಾವೆಯನ್ನು ನಡೆಸಲು ಸಾಧ್ಯವಾಯಿತೆಂದೂ, ಆದರೆ ಅಲ್ಲೇ ಇದ್ದ ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ಆಗಲಿ ಅಥವಾ ಭಾರತೀಯ ಕುಸ್ತಿ ಒಕ್ಕೂಟವಾಗಲಿ ನಿಗದಿತ ಸಮಯದೊಳಗೆ ಮನವಿ ಸಲ್ಲಿಸುವ ಜವಾಬ್ದಾರಿ ವಹಿಸಲಿಲ್ಲವೆನ್ನುತ್ತಾರೆ ಮೆಹ್ರಾರವರು. ಅಂದರೆ, ಈ ಸಂಸ್ಥೆಗಳು ತಮ್ಮ ಜವಾಬ್ದಾರಿ ಮರೆತವೋ ಅಥವಾ ವಿನೇಶ್ ತಾನು ಗಳಿಸಿದ ಬೆಳ್ಳಿಯನ್ನೂ ಸಹ ಪಡೆಯಬಾರದೆನ್ನುವುದು ಅವರ ಒಳ ಉದ್ದೇಶವಾಗಿತ್ತೊ ತಿಳಿಯದು.
ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಈ ಬಗ್ಗೆ ಸರ್ಕಾರದ ಮುಂದಿನ ನಡೆಯ ಬಗ್ಗೆ ಪ್ರಶ್ನಿಸಿದಾಗ ಅದಕ್ಕೆ ಉತ್ತರಿಸುವ ಬದಲು ಕ್ರೀಡಾ ಮಂತ್ರಿಗಳು ವಿನೇಶ್ ಮೇಲೆ 70 ಲಕ್ಷಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡಿರುವ ವಿವರವಾದ ವರದಿ ನೀಡುತ್ತಾರೆ! ಆದರೆ, ಕ್ರಿಕೆಟ್ ಪಟುಗಳಿಗೆ ಸುರಿಯುವ ಸಾರ್ವಜನಿಕರ ಹಣದ ಲೆಕ್ಕವನ್ನೇಕೆ ಕೊಡುವುದಿಲ್ಲ? ಮಂತ್ರಿ ಮಹೋದಯರು ನಡೆಸುವ ಸಭೆ ಅಥವಾ ಅವರ ಓಡಾಟಗಳಿಗಾಗುವ ಖರ್ಚಿನ ವಿವರವನ್ನು ಹೀಗೆಯೇ ಕೋಡಬೇಕಲ್ಲವೇ? ವಿನೇಶ್ ಅವರಂತಹ ಸಮರ್ಥ ಮತ್ತು ಬದ್ದತೆಯ ಆಟಗಾರ್ತಿಗೆ ತೆರಿಗೆ ಹಣ ಖರ್ಚಾಗಿರುವ ಬಗ್ಗೆ ಸಾರ್ವಜನಿಕರಿಗೆ ತೊಂದರೆ ಅಥವಾ ಪ್ರಶ್ನೆಗಳಿಲ್ಲ. ಪ್ರಶ್ನೆಗಳಿರುವುದು ಇಂತಹ ಸಮರ್ಥ ಆಟಗಾರರನ್ನು ಒಲಿಂಪಿಕ್ ಹಂತಕ್ಕೆ ಅಣಿಗೊಳಿಸಲು ಅವಶ್ಯವಿರುವ ಸೌಲಭ್ಯ, ಸೂಕ್ತ ತರಬೇತಿ ಮತ್ತು ನೈತಿಕ ಬೆಂಬಲದ ಕೊರತೆಯ ಬಗ್ಗೆ. ಭಾರತಕ್ಕೆ ಬರಬಹುದಾಗಿದ್ದ ಚಿನ್ನದ ಪದಕವನ್ನು ಕಳೆದುಕೊಂಡಿದ್ದಕ್ಕೆ ಯಾರು ಹೊಣೆ ಎಂಬುದನ್ನು ಸರ್ಕಾರ ಗುರುತಿಸಬೇಕು ಮತ್ತು ಕ್ರೀಡಾ ವ್ಯವಸ್ಥೆಯ ನಿರ್ವಹಣೆಯನ್ನು ಸಮರ್ಥರ ಕೈಯ್ಯಲ್ಲಿಟ್ಟು ಗಟ್ಟಿಗೊಳಿಸಬೇಕೆಂಬುದು ಸಾರ್ವಜನಿಕರ ಹಕ್ಕೊತ್ತಾಯವಾಗಿದೆ.
ವಿನೇಶ್ ಕುಸ್ತಿಗೆ ವಿದಾಯ ಹೇಳಿರಬಹುದು. ಆದರೆ, ಅವರು ಫೀನಿಕ್ಸ್ ಪಕ್ಷಿಯಂತೆ ತನ್ನದೇ ಬೂದಿಯಿಂದ ಮತ್ತೆ ಪುಟಿದೆದ್ದು, ಕುಸ್ತಿ ಕಣದ ಅನ್ಯಾಯಗಳ ವಿರುದ್ಧ ತಮ್ಮ ಕುಸ್ತಿಯನ್ನು ಮುಂದುವರೆಸಲಿ. ನಿಮಗೆ ಬೆಂಬಲದ ಸ್ವರ್ಣ ಸ್ವಾಗತ ವಿನೇಶ್ ಫೋಗಟ್.

ಲತಾಮಾಲ
ಗ್ರಾಮೀಣಾಭಿವೃದ್ಧಿ ತಜ್ಞರು ಮತ್ತು ಲೇಖಕರು