ಪ್ರೀತಿ ಅಥವಾ ಮದುವೆ ಎನ್ನುವುದು ವೈಯಕ್ತಿಕ ಒಪ್ಪಂದವೇ ಹೊರತು, ಅದು ಧಾರ್ಮಿಕ ಯುದ್ಧವಲ್ಲ. ರಾಜಕೀಯ ಮೇಲಾಟಗಳು ಆಗಾಗ ಬರುತ್ತವೆ ಹೋಗುತ್ತವೆ. ಆದರೆ, ಸಮಾಜದ ಮೌಲ್ಯಗಳು ಕುಸಿದರೆ ಅವನ್ನು ಮರಳಿ ಕಟ್ಟುವುದು ಕಷ್ಟ. ಈ ಲಾಭದಾಟಗಳ ಮಧ್ಯೆ ವ್ಯಕ್ತಿ ಗೌರವಕ್ಕೆ, ಸ್ವಾತಂತ್ರ್ಯಕ್ಕೆ ಧಕ್ಕೆ ಸಲ್ಲದು. ವೈಯಕ್ತಿಕ ವಿಷಯವನ್ನೂ ಗೌರವದಿಂದ ನೋಡುವುದೇ ನಾಗರಿಕ ಸಮಾಜದ ಲಕ್ಷಣ.
ಒಬ್ಬ ಸಿನಿಮಾ ನಟ, ಅಂತಾರಾಷ್ಟ್ರೀಯ ಆಟಗಾರ ಅಥವಾ ಸಾಮಾಜಿಕವಾಗಿ ಹೆಚ್ಚು ತೊಡಗಿಕೊಂಡಿರುವ ವ್ಯಕ್ತಿಯ ವೈಯಕ್ತಿಕ ವಿಚಾರಗಳು ಸಾರ್ವಜನಿಕ ಚರ್ಚೆಯ ವಿಷಯವಾಗುವುದು ಹೊಸದೇನಲ್ಲ. ಈ ಬಾರಿ ಆ ಚರ್ಚೆಯ ಸಾಲಿಗೆ ನಿಂತಿರುವುದು ಬಾಲಿವುಡ್ ನಟ ಆಮೀರ್ ಖಾನ್ ಅವರ ಮೂರನೇ ವಿವಾಹ. ಮದುವೆಯಾದ ಬಳಿಕ ಕೇಳಿಬಂದ ‘ಲವ್ ಜಿಹಾದ್’ ಆರೋಪ, ಅದಕ್ಕೆ ಆಮೀರ್ ಕೊಟ್ಟ ಸ್ಪಷ್ಟನೆ ಹಾಗೂ ನಂತರದ ವಿವಾದಗಳು, ಅಂತರ್ಧರ್ಮೀಯ ವಿವಾಹಗಳ ಕುರಿತು ಭಾರತದಲ್ಲಿ ಇನ್ನೂ ಭಿನ್ನಾಭಿಪ್ರಾಯಗಳು ಎಷ್ಟರ ಮಟ್ಟಿಗೆ ತೀವ್ರವಾಗಿವೆ ಎಂಬುದನ್ನು ಮತ್ತೆ ನೆನಪಿಸಿವೆ.
ಆಮೀರ್ ಖಾನ್ ಅವರು ತಮ್ಮ ದೀರ್ಘಕಾಲದ ಗೆಳತಿ ಗೌರಿ ಸ್ಪ್ರಾಟ್ ಅವರೊಂದಿಗೆ ಜುಲೈ 5ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಈ ವಿವಾಹವು ಭಾರತೀಯ ಸಂವಿಧಾನದ ವಿಶೇಷ ವಿವಾಹ ಕಾಯ್ದೆ (Special Marriage Act) ಅಡಿಯಲ್ಲಿ ನೆರವೇರಿದ್ದು, ಆಮೀರ್ ಅವರ ಜೀವನದ ಮೂರನೇ ವಿವಾಹವಾಗಿದೆ. ಈ ಸುದ್ದಿಯು ಖಾಸಗಿ ಸಮಾರಂಭಕ್ಕೆ, ಮಾಧ್ಯಮಗಳ ಸಿನಿ ಸುದ್ದಿಗೆ, ಗಾಸಿಪ್ ಕಾಲಂಗಳಿಗೆ ಸೀಮಿತವಾಗಬೇಕಿತ್ತು, ಆದರೆ ಇದು ಈ ದೇಶದ ಸಾಮಾಜಿಕ ವಾತಾವರಣದಲ್ಲಿ ‘ಲವ್ ಜಿಹಾದ್’, ವೈಯಕ್ತಿಕ ಸ್ವಾತಂತ್ರ್ಯದ ಕುರಿತು ತೀವ್ರ ಚರ್ಚೆಗೆ ಹಚ್ಚಿದೆ.

ಆಮೀರ್ ವೆಡ್ಸ್ ಗೌರಿ ವಿವಾಹದ ಸುದ್ದಿ ಹೊರಬರುತ್ತಿದ್ದಂತೆಯೇ, ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಸುರಿಮಳೆಯಾಯಿತು. ಮಹಾರಾಷ್ಟ್ರದ ಸಚಿವ ಮತ್ತು ಬಿಜೆಪಿ ನಾಯಕ ನಿತೇಶ್ ರಾಣೆ, ಆಮೀರ್ ಅವರನ್ನು “ಲವ್ ಜಿಹಾದ್ನ ಬ್ರ್ಯಾಂಡ್ ಅಂಬಾಸಿಡರ್” ಎಂದು ಕರೆದಿದ್ದು, ವಿವಾದಕ್ಕೆ ರಾಜಕೀಯ ಆಯಾಮ ತಂದುಕೊಟ್ಟಿತು.
ಈ ಹಂತದಲ್ಲಿ ಸಭ್ಯತೆಯ ಎಲ್ಲಾ ಮಿತಿಗಳನ್ನೂ ದಾಟಿ, ಉತ್ತರ ಪ್ರದೇಶದ ಅಯೋಧ್ಯೆಯ ಧಾರ್ಮಿಕ ಮುಖಂಡ ಜಗದ್ಗುರು ಪರಮಹಂಸ ಆಚಾರ್ಯ, ಆಮೀರ್ ಖಾನ್ ಅವರನ್ನು ಹತ್ಯೆ ಮಾಡುವವರಿಗೆ ₹5 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿರುವುದು ವ್ಯಾಪಕ ಚರ್ಚೆಗೆ ಕಾರಣವಾಯಿತು. ಈ ಹೇಳಿಕೆಯನ್ನು ಹಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಬಳಿಕ ನಟನಿಗೆ ಜೀವ ಬೆದರಿಕೆಗಳೂ ಬಂದಿರುವ ಕುರಿತು ವರದಿಗಳು ಪ್ರಕಟವಾಗಿದ್ದು, ಪೊಲೀಸರು ಅವುಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಈ ಹೇಳಿಕೆ ಭಾರತದಂಥ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಅಭಿಪ್ರಾಯ ಭೇದಗಳು ಎಷ್ಟೊಂದು ಅಪಾಯಕಾರಿ ಹಂತ ತಲುಪಬಹುದು ಎಂಬುದಕ್ಕೆ ಸಾಕ್ಷಿಯಾಯಿತು.
ಅಲ್ಲಿವರೆಗೆ ಯಾವುದಕ್ಕೂ ಪ್ರತಿಕ್ರಿಯಿಸದೆ ಸುಮ್ಮನಿದ್ದ ಆಮೀರ್ ಖಾನ್ ಮೌನ ಮುರಿದರು. “ನನ್ನನ್ನು ‘ಲವ್ ಜಿಹಾದ್’ನ ರಾಯಭಾರಿ ಎಂದು ಕರೆಯುವುದು ಹಾಸ್ಯಾಸ್ಪದ. ನಮ್ಮ ಕುಟುಂಬದಲ್ಲಿ ‘ಧರ್ಮ’ ಎನ್ನುವುದು ಎಂದಿಗೂ ಬಾಂಧವ್ಯಕ್ಕೆ ಅಡ್ಡಿಯಾಗಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ತಮ್ಮ ಇಬ್ಬರು ಸಹೋದರಿಯರು ಹಿಂದೂ ಕುಟುಂಬಗಳಿಗೆ ವಿವಾಹವಾಗಿದ್ದಾರೆ. ಪುತ್ರಿ ಐರಾ ಖಾನ್ ಹಿಂದೂ ಯುವಕ ನೂಪುರ್ ಶಿಖರೆ ಅವರನ್ನು ಮದುವೆಯಾಗಿದ್ದಾರೆ. ತಮ್ಮ ಸೋದರ ಸಂಬಂಧಿ ಮನ್ಸೂರ್ ಖಾನ್ ಕ್ರೈಸ್ತ ಮಹಿಳೆಯನ್ನು ವಿವಾಹವಾಗಿದ್ದಾರೆ. ಅಲ್ಲದೆ ತಮ್ಮ ಮೂವರು ಸಂಗಾತಿಗಳಾದ ರೀನಾ ದತ್ತಾ, ಕಿರಣ್ ರಾವ್ ಮತ್ತು ಗೌರಿ ಸ್ಪ್ರಾಟ್ ಅವರಲ್ಲಿ ಯಾರೂ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿಲ್ಲ. ನಮ್ಮ ಮೂರೂ ವಿವಾಹಗಳು ಸಿವಿಲ್ ಮ್ಯಾರೇಜ್ಗಳಾಗಿವೆ. ಗೌರಿ ಹಿಂದೂ ಅಲ್ಲ, ಅವರು ಕ್ರೈಸ್ತರು. ಹಾಗಿದ್ದಾಗ ‘ಲವ್ ಜಿಹಾದ್’ ಪ್ರಶ್ನೆಯೇ ಉದ್ಭವಿಸುವುದಿಲ್ಲ” ಎಂದು ಅವರು ಹೇಳಿದ್ದಾರೆ. ಈ ಮೂಲಕ ಪೂರ್ವಗ್ರಹ ಪೀಡಿತ ಮನಸ್ಥಿತಿಯಿಂದ ತರ್ಕಹೀನ ಆರೋಪ ಮಾಡುವವರಿಗೆ ತಿವಿದಿದ್ದಾರೆ.
ಅಸಲಿಗೆ ಈ ʼಲವ್ ಜಿಹಾದ್ʼ ಎಂದರೇನು?

‘ಲವ್ ಜಿಹಾದ್’ ಎಂಬುದು ಭಾರತದಲ್ಲಿಕೆಲ ವರ್ಷಗಳಿಂದ ವಿಶೇಷವಾಗಿ ಕಳೆದೊಂದು ದಶಕದಿಂದ ರಾಜಕೀಯವಾದಿಗಳು ಹೆಚ್ಚು ಬಳಸುವ ಪದ. ಕೆಲವು ಸಂಘಟನೆಗಳ ಪ್ರಕಾರ, ಪ್ರೀತಿಯ ಹೆಸರಿನಲ್ಲಿ ಬೇರೆ ಧರ್ಮದ ಮಹಿಳೆಯರನ್ನು ವಿವಾಹವಾಗಿ ಧರ್ಮಾಂತರ ಮಾಡುವ ಸಂಘಟಿತ ಪ್ರಯತ್ನವನ್ನು ಸೂಚಿಸಲು ಈ ಪದ ಬಳಸಲಾಗುತ್ತದೆ. ಆದರೆ ಭಾರತದ ಕಾನೂನು ಪುಸ್ತಕದಲ್ಲಿ ‘ಲವ್ ಜಿಹಾದ್’ ಎಂಬ ಪ್ರತ್ಯೇಕ ಅಪರಾಧಕ್ಕೆ ಮಾನ್ಯತೆ ಇಲ್ಲ. ಬಲವಂತದ ಮತಾಂತರಗಳನ್ನು ತಡೆಯಲು ರಾಜ್ಯ ಸರ್ಕಾರಗಳು ಕಾನೂನುಗಳನ್ನು ರೂಪಿಸಿವೆ ಎಂಬುದು ನಿಜ. ಆದರೆ, ವೈಯಕ್ತಿಕ ಆಯ್ಕೆಯ ಮದುವೆಗಳನ್ನು ‘ಲವ್ ಜಿಹಾದ್’ ಎಂಬ ಲೇಬಲ್ ಅಡಿಯಲ್ಲಿ ತಂದು, ಸಾರ್ವಜನಿಕವಾಗಿ ನಿಂದಿಸುವುದೇ ಒಂದು ಸಂಘಟಿತ ಪ್ರವೃತ್ತಿಯಾಗಿಬಿಟ್ಟಿದೆ. ಬಲವಂತ ಅಥವಾ ವಂಚನೆಯ ಮೂಲಕ ಧರ್ಮಾಂತರ ನಡೆದಿರುವ ಪ್ರಕರಣಗಳನ್ನು ಮಾತ್ರ ಸಂಬಂಧಿತ ರಾಜ್ಯಗಳ ಕಾನೂನುಗಳ ಅಡಿಯಲ್ಲಿ ತನಿಖೆ ಮಾಡಲಾಗುತ್ತದೆ. ಪ್ರಶ್ನೆ ಏನೆಂದರೆ, ಧರ್ಮದ ಆಧಾರದಲ್ಲಿ ವಿವಾಹಗಳನ್ನು ವಿಭಜಿಸುವ ಈ ಪ್ರವೃತ್ತಿ ನಮ್ಮ ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಲ್ಲವೇ? ಯಾವುದೇ ರಾಜಕೀಯ ಪಕ್ಷದ ನಾಯಕರ ಕುಟುಂಬದಲ್ಲಿ ನಡೆಯುವ ಇಂತಹ ಮದುವೆಗಳ ಬಗ್ಗೆ ಮೌನ ವಹಿಸುವ ಒಂದು ವರ್ಗ, ಆಮೀರ್ ಖಾನ್ ಪ್ರಕರಣದಲ್ಲಿ ಮಾತ್ರ ತೀವ್ರ ಸ್ವರೂಪ ಪಡೆದುಕೊಳ್ಳುವುದು ಏಕೆ?, ಅವರು ಮುಸ್ಲಿಂ ಅಂತಲೇ? ಎಂದು ಹಲವರು ಟೀಕಿಸುತ್ತಿದ್ದಾರೆ. ಇದು ಬೇಕಂತಲೇ ಒಬ್ಬರನ್ನು ಗುರಿಯಾಗಿಸುವುದು ಎಂಬ ಆರೋಪಕ್ಕೆ ಪುಷ್ಟಿ ನೀಡುತ್ತದೆ.
ಆಮೀರ್ ಖಾನ್ ಅವರ ಹೇಳಿಕೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಂದು ಚರ್ಚೆ ಆರಂಭವಾಯಿತು. “ಅಂತರ್ಧರ್ಮೀಯ ವಿವಾಹಗಳು ಕೇವಲ ಸಿನಿಮಾ ಕ್ಷೇತ್ರದಲ್ಲಷ್ಟೇ ಅಲ್ಲ; ವಿವಿಧ ರಾಜಕೀಯ ಪಕ್ಷಗಳ ನಾಯಕರು ಹಾಗೂ ಅವರ ಕುಟುಂಬಗಳಲ್ಲಿಯೂ ನಡೆದಿವೆ. ಹಾಗಿದ್ದರೆ ಕೆಲ ಪ್ರಕರಣಗಳು ಮಾತ್ರ ರಾಜಕೀಯ ವಿವಾದವಾಗುವುದೇಕೆ?” ಎಂಬ ಪ್ರಶ್ನೆಯನ್ನು ಹಲವರು ಎತ್ತಿದರು.
ಇದನ್ನೂ ಓದಿ: 3 ಈಡಿಯಟ್ಸ್ ಚಿತ್ರದ ರ್ಯಾಂಚೋ ಪಾತ್ರಕ್ಕೂ ಸೋನಮ್ ವಾಂಗ್ಚುಕ್ ಅವರಿಗೂ ಸಂಬಂಧವಿಲ್ಲ: ಆಮೀರ್ ಖಾನ್
ವಾಸ್ತವವಾಗಿ ಭಾರತದಲ್ಲಿ ವಿವಿಧ ರಾಜಕೀಯ ಪಕ್ಷಗಳಿಗೆ ಸೇರಿದ ನಾಯಕರು ಅಥವಾ ಅವರ ಕುಟುಂಬಗಳಲ್ಲಿ ಅಂತರ್ಧರ್ಮೀಯ ವಿವಾಹಗಳ ಉದಾಹರಣೆಗಳಿವೆ. ಆದರೆ ಇಂತಹ ವೈಯಕ್ತಿಕ ಸಂಬಂಧಗಳನ್ನು ರಾಜಕೀಯ ಆಯುಧವನ್ನಾಗಿ ಬಳಸುವ ಪ್ರವೃತ್ತಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಆಧುನಿಕ ಭಾರತದಲ್ಲಿ ವೈಯಕ್ತಿಕ ಸಂಬಂಧಗಳು ಕೂಡ ಸಾರ್ವಜನಿಕವಾಗಿ ತೀರ್ಪಿಗೆ ಒಳಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಇಷ್ಟದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ನೀಡಿದೆ. ಆದರೆ, ರಾಜಕೀಯ ಲಾಭ ಮತ್ತು ಧಾರ್ಮಿಕ ದ್ವೇಷದ ನಡುವೆ ಈ ವೈಯಕ್ತಿಕ ಸ್ವಾತಂತ್ರ್ಯ ಬಲಿಯಾಗುತ್ತಿದೆ.
ಪ್ರೀತಿ ಅಥವಾ ಮದುವೆ ಎನ್ನುವುದು ವೈಯಕ್ತಿಕ ಒಪ್ಪಂದವೇ ಹೊರತು, ಅದು ಧಾರ್ಮಿಕ ಯುದ್ಧವಲ್ಲ. ರಾಜಕೀಯ ಮೇಲಾಟಗಳು ಆಗಾಗ ಬರುತ್ತವೆ ಹೋಗುತ್ತವೆ. ಆದರೆ, ಸಮಾಜದ ಮೌಲ್ಯಗಳು ಕುಸಿದರೆ ಅವನ್ನು ಮರಳಿ ಕಟ್ಟುವುದು ಕಷ್ಟ. ಈ ಲಾಭದಾಟಗಳ ಮಧ್ಯೆ ವ್ಯಕ್ತಿ ಗೌರವಕ್ಕೆ, ಸ್ವಾತಂತ್ರ್ಯಕ್ಕೆ ಧಕ್ಕೆ ಸಲ್ಲದು. ವೈಯಕ್ತಿಕ ವಿಷಯವನ್ನೂ ಗೌರವದಿಂದ ನೋಡುವುದೇ ನಾಗರಿಕ ಸಮಾಜದ ಲಕ್ಷಣ.





