ಬೇಸಿಗೆ ಬಂದರೆ ಸಾಕು ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಶುರುವಾಗುತ್ತದೆ. ಕಳೆದ ವರ್ಷ ಸಂಪೂರ್ಣ ಬೆಂಗಳೂರಿನ ಬಹುತೇಕ ಜನರು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಿದ್ದಾರೆ. ಇನ್ನೂ ಕೆಲವು ಪ್ರದೇಶಗಳಲ್ಲಿ ಇತರೆ ಕಾರ್ಯಗಳಿಗೆ ಬಳಸುವ ನೀರಿನ ಅಭಾವವೂ ಕಂಡುಬಂದಿದೆ. ಈ ವರ್ಷವೂ (2025) ಮತ್ತೆ ಅದೇ ಸಮಸ್ಯೆ ತಲೆದೂರಿದೆ.
ಎರಡು ದಿನಕ್ಕೊಮ್ಮೆ ನಿಗದಿತ ಸಮಯಕ್ಕೆ ಬರುವ ಕಾವೇರಿ ನೀರು, ಅದಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲುವ ಜನರು, ನೀರಿಗಾಗಿ ಸಾಲಿನಲ್ಲಿ ಜಗಳ, ಇನ್ನೊಂದು ಅಥವಾ ಎರಡು ದಿನ ಬಿಟ್ಟು ನೀರು ಬರುವವರೆಗೂ ಶೇಖರಿಸಿಟ್ಟ ನೀರನ್ನು ಬಳಸಲು ಹಿಂದೆ ಮುಂದೆ ನೋಡಬೇಕಾದ ಸ್ಥಿತಿ, 2-3 ಮನೆಗಳಿರುವ ಬಿಲ್ಡಿಂಗ್‌ಗಳಲ್ಲಿ ನೀರು ಬರುತ್ತಿದ್ದಂತೆ ಇತರ ಮನೆಯವರಿಗೂ ಮುನ್ನವೇ ಡ್ರಮ್‌ಗಳಲ್ಲಿ ಶೇಖರಿಸಿಕೊಟ್ಟುಕೊಳ್ಳಲು ತರಾತುರಿ – ಇವೆಲ್ಲವೂ ಬೆಂಗಳೂರಿನ ಮಧ್ಯಮ ವರ್ಗ, ಬಡ ವರ್ಗದ ಜನರ ಬೇಸಿಗೆ ಕಾಲದಲ್ಲಿ ಜೀವನಶೈಲಿ.
ಇದನ್ನು ಓದಿದ್ದೀರಾ? ಕುಡಿಯುವ ನೀರು ಕಲುಷಿತಗೊಳ್ಳದಂತೆ ಅಗತ್ಯ ಕ್ರಮಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ
ಆದರೆ ಶ್ರೀಮಂತರ ಜೀವನಶೈಲಿ ಕೊಂಚ ಭಿನ್ನ. ತಾವು ಇರುವ ಅಪಾರ್ಟ್‌ಮೆಂಟ್‌ಗಳಲ್ಲಿ ನೀರು 24 ಗಂಟೆ ಬರುವಂತೆ ನೋಡಿಕೊಳ್ಳುವುದು ಅಪಾರ್ಟ್‌ಮೆಂಟ್ ನಿರ್ವಾಹಕರ ಜವಾಬ್ದಾರಿ. ಹಣ ಕೊಡುವುದು ಮಾತ್ರ ಇವರ ಜವಾಬ್ದಾರಿ. ಹಣ ಕೊಡುತ್ತೇವೆ, ನೀರು ಲಭ್ಯವಿರಬೇಕು, ಅಷ್ಟೇ ಇವರ ಭಾವನೆ. ಪ್ರತ್ಯೇಕ ಮನೆಯಾದರೆ ಹಣ ಕೊಟ್ಟು ಟ್ಯಾಂಕರ್‌ನಲ್ಲಿ ನೀರು ತರಿಸುವುದು. ಆದರೆ ಆ ಟ್ಯಾಂಕರ್ ನೀರು ಲಭ್ಯವಾಗುವುದು ಕೂಡಾ ಬೆಂಗಳೂರಿನಲ್ಲಿ ಬೇಸಿಗೆಗಾಲದಲ್ಲಿ ಕಷ್ಟಸಾಧ್ಯ. ಹಣವಿದ್ದವರು ಟ್ಯಾಂಕರ್‌ನಲ್ಲಿ ನೀರು ತರಿಸಿಕೊಳ್ಳುತ್ತಾರೆ, ಆದರೆ ಬಡ ವರ್ಗದ ಜನರು ಬಿಬಿಎಂಪಿ ಮೇಲೆ ಅವಲಂಬನೆಯಾಗಿರುತ್ತಾರೆ.
ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಕಾರಣ
ಬೆಂಗಳೂರಿನಲ್ಲಿ ಬೇಸಿಗೆ ಆರಂಭವಾಗುತ್ತಿದ್ದಂತೆ ನೀರಿನ ಸಮಸ್ಯೆ ತಲೆದೂರುತ್ತದೆ. ಈ ಬಾರಿ ಫೆಬ್ರವರಿಯಿಂದಲೇ ಕೆಲವೆಡೆ ನೀರಿನ ಅಭಾವ ಕಾಣಿಸಿಕೊಳ್ಳುತ್ತಿದೆ. ಈ ಕೊರತೆ ಕಾಣಿಸಿಕೊಂಡ ಬಳಿಕ ಎಚ್ಚೆತ್ತ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕುಡಿಯುವ ನೀರು ಪೋಲು ಮಾಡುವವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಈಗಾಗಲೇ ಫೆಬ್ರವರಿಯಲ್ಲಿ ಕುಡಿಯುವ ನೀರನ್ನು ಬೇಕಾಬಿಟ್ಟಿಯಾಗಿ ಬಳಸುವವರ ವಿರುದ್ಧ ನೀರು ಸರಬರಾಜು ಮಂಡಳಿ 112 ಪ್ರಕರಣಗಳನ್ನು ದಾಖಲಿಸಿಕೊಂಡಿದೆ, 5.60 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದೆ.
ವಿಶ್ವದಾದ್ಯಂತ ದಿನ ಕಳೆದಂತೆ ತಾಪಮಾನ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕಳೆದ ವರ್ಷ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ತಾಪಮಾನ ದಾಖಲಾಗಿದ್ದು, ಈ ವರ್ಷ ಆ ದಾಖಲೆಯನ್ನು ಮುರಿಯಲಿದೆ, ತಾಪಮಾನ ಸಾಮಾನ್ಯಕ್ಕಿಂತ ತೀವ್ರ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಾಪಮಾನದಿಂದ ನಮ್ಮನ್ನು ನಾವು ಉಳಿಸಿಕೊಳ್ಳಲು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳನ್ನು ಕೂಡಾ ತಿಳಿಸಿದೆ.
ಇದನ್ನು ಓದಿದ್ದೀರಾ? ಕುಡಿಯುವ ನೀರು ಕೊಡದೆ ಯಾವ ಬ್ರ್ಯಾಂಡ್ ಬೆಂಗಳೂರು ಮಾಡ್ತೀರಾ; ಮೋಹನ್ ದಾಸರಿ ಪ್ರಶ್ನೆ
ಶಾಖ ಏರುತ್ತಿದ್ದಂತೆ ಬಾವಿ, ಕೆರೆ, ಬೋರ್‌ವೆಲ್ ಸೇರಿದಂತೆ ಇತರೆ ನೀರಿನ ಮೂಲಗಳು ಬತ್ತಿ ಹೋಗುತ್ತಿವೆ. ಈ ನಡುವೆಯೂ ಕೆಲವೆಡೆ ಕುಡಿಯುವ ನೀರಿನ ದುರ್ಬಳಕೆಯಾಗುತ್ತಿದೆ. ಕುಡಿಯುವ ನೀರನ್ನು ಸ್ನಾನ, ಪಾತ್ರೆ ತೊಳೆಯಲು, ಬೈಕ್-ಕಾರು ತೊಳೆಯಲು ಬಳಸುತ್ತಿರುವುದು ಕೂಡಾ ಗಮನಕ್ಕೆ ಬಂದಿದೆ. ಕೆಲವರು ಕುಡಿಯುವ ನೀರು ಪೋಲು ಮಾಡುತ್ತಿರುವುದರಿಂದಾಗಿ ಬೆಂಗಳೂರಿನ ಬಹುತೇಕರಿಗೆ ಸಮಸ್ಯೆ ಉಂಟಾಗುತ್ತಿದೆ.
ಇವಿಷ್ಟೇ ಅಲ್ಲ ತಾಪಮಾನ ಏರಿಕೆಯಿಂದಾಗಿ ಬೇಸಿಗೆಯಲ್ಲಿ ನೀರು ಬತ್ತುತ್ತಿರುವ ನಡುವೆ ಬೆಂಗಳೂರಿನಲ್ಲಿ ಜನಸಂಖ್ಯೆಯೂ ಹೆಚ್ಚಾಗುತ್ತಿದೆ. ರಾಜ್ಯ ರಾಜಧಾನಿಯಾದ ಬೆಂಗಳೂರಿಗೆ ಉದ್ಯೋಗ ಹರಸಿ ಬರುವವರ ಸಂಖ್ಯೆ ಅಧಿಕವಾಗಿದೆ. ಐಟಿ ಹಬ್ ಆಗಿರುವ ಬೆಂಗಳೂರಿಗೆ ರಾಜ್ಯದ ಹಲವು ಜಿಲ್ಲೆಗಳಿಂದ ಮಾತ್ರವಲ್ಲ, ಇತರೆ ರಾಜ್ಯಗಳಿಂದಲೂ ಜನರು ಬರುತ್ತಾರೆ. ದಿನ, ವರ್ಷ ಕಳೆದಂತೆ ಅದೆಷ್ಟೋ ಜನರು ಬೆಂಗಳೂರಲ್ಲೇ ನೆಲೆಸುತ್ತಿದ್ದಾರೆ. ಎಲ್ಲರಿಗೂ ನೀರಿನ ಸರಬರಾಜು ಮಾಡುವುದು ಬೇಸಿಗೆಯಲ್ಲಿ ಸಾಹಸವೆಂದರೆ ತಪ್ಪಾಗಲಾರದು.
ನೀರಿನ ಬೆಲೆ ಏರಿಸಲು ಮುಂದಾದ ಸರ್ಕಾರ
ಒಂದೆಡೆ ಕುಡಿಯುವ ನೀರಿನ ಅಭಾವ ಕಾಡುತ್ತಿರುವಾಗ ಸರ್ಕಾರವು ನೀರಿನ ದರ ಏರಿಸಲು ಮುಂದಾಗಿದೆ. 2014ರ ನಂತರ ಬೆಂಗಳೂರಿನಲ್ಲಿ ನೀರಿನ ದರ ಪರಿಷ್ಕರಿಸಲಾಗಿಲ್ಲ. ಈ ನಿಟ್ಟಿನಲ್ಲಿ ಬೆಂಗಳೂರು ಜಲ ಮಂಡಳಿಯು 7-8 ಪೈಸೆ ದರ ಏರಿಕೆಯ ಪ್ರಸ್ತಾಪವನ್ನು ಸಲ್ಲಿಸಿತ್ತು. ಆದರೆ ಸರ್ಕಾರ ಸದ್ಯ 1 ಪೈಸೆಯಷ್ಟು ಬೆಲೆ ಏರಿಕೆ ಮಾಡಲು ಚಿಂತನೆ ನಡೆಸಿದೆ. ಒಂದು ಪೈಸೆ ಏರಿಕೆ ಮಾಡಿದರೆ ಮಂಡಳಿಗೆ ಪ್ರತಿ ವರ್ಷ ಉಂಟಾಗುವ 1 ಸಾವಿರ ಕೋಟಿ ರೂಪಾಯಿ ನಷ್ಟವನ್ನು ತಪ್ಪಿಸಬಹುದು ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಈ ಬೆಲೆ ಏರಿಕೆಯಾದರೆ ಜನರು 50 ರೂಪಾಯಿಯಿಂದ 250 ರೂಪಾಯಿವರೆಗೂ ಹೆಚ್ಚುವರಿ ನೀರಿನ ಶುಲ್ಕವನ್ನು ಪಾವತಿಸಬೇಕಾಗಬಹುದು. ಅಧಿಕ ನೀರು ಬಳಸುವವರಿಗೆ ಇನ್ನಷ್ಟು ಹೊರೆ ಹೆಚ್ಚಾಗಬಹುದು.
ಇದನ್ನು ಓದಿದ್ದೀರಾ? ಕುಡಿಯುವ ನೀರು ಕೊಡದೆ ಯಾವ ಬ್ರ್ಯಾಂಡ್ ಬೆಂಗಳೂರು ಮಾಡ್ತೀರಾ; ಮೋಹನ್ ದಾಸರಿ ಪ್ರಶ್ನೆ
ಮತ್ತೆ ಶುರುವಾಗಬಹುದು ಟ್ಯಾಂಕರ್‌ಗಳ ಲಾಬಿ
ಕಳೆದ ವರ್ಷ ಬೆಂಗಳೂರಿನಲ್ಲಿ ಕುಡಿಯುವ ಮತ್ತು ದೈನಂದಿನ ಬಳಕೆಯ ನೀರಿನ ಸಮಸ್ಯೆ ಉಂಟಾದಾಗ ಟ್ಯಾಂಕರ್‌ಗಳ ಲಾಬಿ ಕಡಿಮೆಯೇನೂ ಇರಲಿಲ್ಲ. ಖಾಸಗಿ ಟ್ಯಾಂಕರ್‌ಗಳು ದುಪ್ಪಟ್ಟು ಹಣ ಪಡೆದು ನೀರು ಸರಬರಾಜು ಮಾಡುತ್ತಿತ್ತು. ಹಾಗೆಯೇ ಯಾರು ಅಧಿಕ ಹಣ ಪಾವತಿಸುತ್ತಾರೋ ಅವರಿಗೆ ಮೊದಲು ನೀರು ಸರಬರಾಜು ಎಂಬ ತಮ್ಮದೇ ಆದ ನಿಯಮವನ್ನು ಖಾಸಗಿ ಟ್ಯಾಂಕರ್ ಮಾಲೀಕರು ರೂಪಿಸಿಕೊಂಡಿದ್ದರು. ಇದಕ್ಕೆ ಸರ್ಕಾರ ಎಷ್ಟು ಕಡಿವಾಣ ಹಾಕುವ ಪ್ರಯತ್ನ ಮಾಡಿದರೂ ಕೂಡಾ ಸಂಪೂರ್ಣವಾಗಿ ಸಫಲವಾಗಿಲ್ಲ.
ಈ ವರ್ಷ ಇದೀಗಲೇ ಖಾಸಗಿ ಟ್ಯಾಂಕರ್‌ಗಳು ಜನರನ್ನು ದೂಚಲು ಶುರು ಮಾಡಿದೆ. ಆದರೆ ಜನರಿಗೆ ಉಚಿತವಾಗಿ ನೀರು ಪೂರೈಸುವ ಜವಾಬ್ದಾರಿ ಸರ್ಕಾರದ್ದು. ಈ ಖಾಸಗಿ ಟ್ಯಾಂಕರ್‌ಗಳಿಗೆ ಈ ವರ್ಷವಾದರೂ ಕಡಿವಾಣ ಹಾಕಬೇಕು, ದರವನ್ನಾದರೂ ನಿಗದಿಪಡಿಸಬೇಕು. ದುಪ್ಪಟ್ಟು ಹಣ ಪಡೆದವರಿಗೆ ದಂಡ ವಿಧಿಸುವಂತಹ ಕ್ರಮಕ್ಕೆ ಮುಂದಾಗಬೇಕು. ಬೇಸಿಗೆ ಮುಗಿಯುವವರೆಗಾದರೂ ಖಾಸಗಿ ಟ್ಯಾಂಕರ್‌ಗಳನ್ನು ಸರ್ಕಾರ ತಮ್ಮ ಸುಪರ್ದಿಗೆ ಪಡೆದು ಜನರಿಗೆ ಉಚಿತವಾಗಿ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಬೇಕು.
ಇದನ್ನು ಓದಿದ್ದೀರಾ? ಬೆಂಗಳೂರು | ನೀರಿನ ಸಮಸ್ಯೆ : ಬೇಸಿಗೆ ಮುಗಿಯುವವರೆಗೂ ಕಟ್ಟಡ ಪ್ರದೇಶದ ಕೊಳವೆಬಾವಿಗಳು ಜಲಮಂಡಳಿ ಸುಪರ್ದಿಗೆ
ನೀರು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇತ್ತೀಚೆಗೆ ನೀಡಿದ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ 1 ಕೋಟಿ 40 ಲಕ್ಷ ಜನಸಂಖ್ಯೆಯಿದೆ. ಎಲ್ಲರಿಗೂ ಕೂಡಾ ಕುಡಿಯುವ ನೀರನ್ನು ಪೂರೈಸಬೇಕಿದೆ. ಈ ನಡುವೆ ಉಷ್ಣಾಂಶವೂ ಏರುತ್ತಿದೆ. ಒಂದೆಡೆ ಮಳೆಯ ಕೊರತೆಯಿಂದ ಅಂತರ್ಜಲ ಕುಸಿದಿದೆ. ಇನ್ನೊಂದೆಡೆ ನಿರ್ಜಲೀಕರಣಕ್ಕೆ ತುತ್ತಾಗದಂತೆ ನೋಡಿಕೊಳ್ಳಲು ಜನರು ಹೆಚ್ಚು ನೀರು ಸೇವಿಸುವುದು ಅನಿವಾರ್ಯ. ಈ ಎಲ್ಲಾ ಸಮಸ್ಯೆಗಳನ್ನು ಸರಿದೂಗಿಸಿಕೊಂಡು ಹೋಗುವುದು ಆಡಳಿತದ ಜವಾಬ್ದಾರಿಯಾದರೂ, ಜನರು ತಮ್ಮ ಹೊಣೆಗಾರಿಕೆಯನ್ನು ಮರೆಯಬಾರದು.
ಬೇಸಿಗೆಗಾಲ ಬಂದಾಗ ನೀರು ಉಳಿತಾಯದ ಬಗ್ಗೆ ಚಿಂತೆ ಮಾಡುವ ಬದಲಾಗಿ ಮೊದಲೇ ಮಳೆಗಾಲದಲ್ಲಿ ನೀರು ಉಳಿಸುವ ಪ್ರಯತ್ನ ಮಾಡಬೇಕು. ಮಳೆ ನೀರು ಕೊಯ್ಲು ವಿಧಾನವನ್ನು ಪಾಲಿಸಲು ಜನರು ಮುಂದಾಗಬೇಕು, ಜೊತೆಗೆ ಸರ್ಕಾರವು ಅದಕ್ಕೆ ಉತ್ತೇಜನ ನೀಡಬೇಕು. ಜನರಿಗೆ ಈ ಬಗ್ಗೆ ಮಾಹಿತಿ ನೀಡಬೇಕು. ಕುಡಿಯುವ ನೀರಿನ ಸಂರಕ್ಷಣೆ ನಮ್ಮ ನಿಮ್ಮೆಲರ ಹೊಣೆ, ಸರ್ಕಾರದ ಜವಾಬ್ದಾರಿ. ಒಂದು ಹನಿವೂ ಜೀವಾಳವಾಗಿದೆ, ಪೋಲು ಮಾಡದಿರಿ.
