ಅಮರೇಶ ನುಗಡೋಣಿ ಸಂದರ್ಶನ: ಕೂಡು ಧ್ವನಿಯ ಕಾಲ ಈಗ ಮುಗಿದು ಹೋಗಿದೆ ಅನ್ನಿಸ್ತಿದೆ…

Date:

ಡಾ. ರಾಮಲಿಂಗಪ್ಪ ಟಿ. ಬೇಗೂರು ಅವರು ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿ ಪುರಸ್ಕೃತ ಲೇಖಕ ಅಮರೇಶ ನುಗಡೋಣಿ ಅವರೊಂದಿಗೆ ಬರವಣಿಗೆಯ ಬೆರಗು, ಭಾಷಾ ಪ್ರಜ್ಞೆ, ಸಂಶೋಧನೆ, ಸಾಹಿತ್ಯ ಪಯಣ ಮತ್ತು ಸಾಮಾಜಿಕ ಕಳಕಳಿ ಕುರಿತ ನಡೆಸಿದ ಮಾತು ಮತ್ತು ಕತೆ ಈದಿನ ಓದುಗರಿಗಾಗಿ...

ಸರ್ ನಿಮ್ಮ ‘ದಡ ಸೇರಿಸು ತಂದೆ’ ಕಥಾ ಸಂಕಲನಕ್ಕೆ 25ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿ ಬಂದಿದೆ. ನಿಮಗೆ ಅಭಿನಂದನೆಗಳು ಸರ್.

- Advertisement -

ಧನ್ಯವಾದಗಳು ಸರ್.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ...

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ ಪ್ರಭಾವ ಬೀರುತ್ತಿದ್ದ ಭೂಗತ ಲೋಕ, ಈಗ ಗುಂಡಿನ ದಾಳಿ ಮತ್ತು ಜೀವಬೆದರಿಕೆಗಳ ಮೂಲಕ ಮತ್ತೊಮ್ಮೆ ತನ್ನ ಅಸ್ತಿತ್ವ ಪ್ರದರ್ಶಿಸುತ್ತಿದೆ. ದಾವೂದ್...

ಲೋಕಸಭೆಯ ಬಲ 850ಕ್ಕೆ ಏರಿಕೆ: ಕಲಾಪದ ಸಮಯ ಹೆಚ್ಚಳವಿಲ್ಲದಿದ್ದರೆ...

ಲೋಕಸಭೆಯ ಸದಸ್ಯರ ಬಲವನ್ನು 550ರಿಂದ 850ಕ್ಕೆ ಹೆಚ್ಚಿಸುವ ‘ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ–2026’ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಜನಸಂಖ್ಯೆಗೆ ಅನುಗುಣವಾಗಿ ಸೀಟುಗಳ ಹೆಚ್ಚಳ ಅನಿವಾರ್ಯವಾದರೂ, ಸಂಸತ್ತಿನ ವಾರ್ಷಿಕ ಕಲಾಪದ ದಿನಗಳು ಮತ್ತು...

ಸೌದಿ ಅರೇಬಿಯಾದ ಕಂಠನಾಳಕ್ಕೇ ಕೈಹಾಕಿರುವ ಯೆಮನ್!

ಸೌದಿ ಅರೇಬಿಯಾದ ಜೀವನಾಡಿಗೇ ಕೈಹಾಕಿರುವ ಯೆಮನ್‌ನ ಈ ಪ್ರತಿರೋಧವು ಕೇವಲ ಒಂದು ಯುದ್ಧದ ಕಥೆಯಲ್ಲ; ಇದು ಮಧ್ಯಪ್ರಾಚ್ಯದ ರಾಜಕೀಯ ಇತಿಹಾಸವನ್ನೇ ಮರುಬರೆಯಬಹುದಾದ ಸಂಘರ್ಷವಾಗಿದೆ. ಅಲ್ಲಿಯವರೆಗೆ, ಯೆಮನ್ ಕೇವಲ ಅರಬ್ ಜಗತ್ತಿಗಷ್ಟೇ ಅಲ್ಲ, ಇಡೀ...

ಬೇಗೂರು: ನೀವು ಕಥೆ ಯಾಕೆ ಬರೆದ್ರಿ? ಕಥೆಗಾರರಾಗಿ ನೀವು ಹೇಗೆ ಬೆಳೆದ್ರಿ ಅನ್ನೋದನ್ನು ಸಂಕ್ಷಿಪ್ತವಾಗಿ ಹೇಳೋಕೆ ಸಾಧ್ಯವೇ?

ನುಗಡೋಣಿ: ಸಾಹಿತ್ಯ ರಚನೆ ಸಾಮಾನ್ಯವಾಗಿ ಎಲ್ಲರಿಗೂ ಹುಟ್ಟುಗುಣ ಆಗಿರಲ್ಲ. ಯಾವಾಗೋ ಬೆಳಿತಾ ಬೆಳಿತಾ ಆ ಆಸಕ್ತಿ ಮೂಡುತ್ತೆ ಮತ್ತು ಅದಕ್ಕೆ ಅವಕಾಶ ಸಿಗುತ್ತೆ. ನಾನು ಬಾಲ್ಯದಲ್ಲಿ ಕೂಡು ಕುಟುಂಬದಲ್ಲಿ ಬೆಳೆದವನು. ರೈತಾಪಿ ಕುಟುಂಬ. ಹಾಗೆ ಹೈಸ್ಕೂಲ್, ಕಾಲೇಜು ಓದ್ತಾ ರಜೆಗಳಲ್ಲಿ ಹೊಲ ಮನೆ ಕೆಲಸ ಮಾಡಿಕೊಂಡು ಚೂರು ಪಾರು ಓದ್ತಾ ಇದ್ದವನು. ಆ ಸಂದರ್ಭದಲ್ಲಿ ನನಗೆ ಕುವೆಂಪು ಅವರ ಕಾದಂಬರಿಗಳು ಸಿಕ್ಕವು. ಮನುಷ್ಯನ ಬಾಳ್ವೆಯನ್ನು ಕತೆ ಮಾಡುವ ವಿಚಾರದಲ್ಲಿ ನಾನೂ ಬರೀಬಹುದಲ್ಲ ಎನ್ನುವ ಪ್ರೇರಣೆ ಆ ಕಾದಂಬರಿಗಳಿಂದ ನನಗಾಯಿತು. ಆದರೆ ನನಗೆ ಸಾಹಿತ್ಯದ ಗಂಧಗಾಳಿ ಅಷ್ಟಾಗಿ ಇರಲಿಲ್ಲ. ಮುಂದೆ ಸುಮಾರು ಹತ್ತು ಹದಿನೈದು ವರ್ಷಗಳ ನಂತರ ನಾನು ನಿಧಾನವಾಗಿ ಸಣ್ಣ ಕಥೆಗಳನ್ನ ಬರೆಯುವುದಕ್ಕೆ ಪ್ರಯತ್ನ ಪಟ್ಟೆ.

ಬೇಗೂರು: ಸರ್, ನಿಮ್ಮ ‘ಮಣ್ಣು ಸೇರಿತು ಬೀಜ’, ‘ತಮಂಧದ ಕೇಡು’ ಇವೆರಡೂ ಆರಂಭದ ಸಂಕಲನಗಳಲ್ಲಿ ಸಾಮಾಜಿಕ ವಾಸ್ತವ ಹೆಚ್ಚು ನಿರೂಪಣೆಯಾಗಿದೆ. ಆನಂತರದ ಕಥೆಗಳಲ್ಲಿ ಇದರ ಜೊತೆಗೆ ಕಲ್ಪಿತ ವಾಸ್ತವ ಕೂಡ ಸೇರಿಕೊಂಡಿದೆ ಅನ್ಸುತ್ತೆ. ಒಬ್ಬ ಕಥೆಗಾರ ಕಲ್ಪನೆಯನ್ನ ಬೆಸೆದು ಅವನ ಆಶಯಕ್ಕೆ ತಕ್ಕ ಹಾಗೆ ಕತೆನ ಕಟ್ಟಬೇಕಾಗುತ್ತೆ. ಇಂತಹ ಕೌಶಲ್ಯ ಹೇಗೆ ನಿಮ್ಮಲ್ಲಿ ಸಂಭವಿಸ್ತು?

ನುಗಡೋಣಿ: ಅದು ನನಗೂ ಸ್ವಲ್ಪ ವಿಸ್ಮಯದ್ದೆ. ಯಾಕೆ ಅಂತ ಕೇಳಿದ್ರೆ ನಾನು ಕಥೆ ಬಗ್ಗೆ, ಕನ್ನಡ ಕಥಾ ಲೋಕದ ಬಗ್ಗೆ ಹೆಚ್ಚು ಓದಿದವನಲ್ಲ ಮತ್ತು ಅದರ ಮೇಲೆ ಮಾತನಾಡುವ ಯಾವ ಅವಕಾಶಗಳು ನನಗೆ ಆರಂಭದಲ್ಲಿ ಇರಲಿಲ್ಲ. ಅತ್ಯಂತ ಸೀಮಿತವಾದ ಓದು ಮತ್ತು ಬರಹ ಮಾತ್ರ ನನ್ನಲ್ಲಿತ್ತು. ನಮ್ಮ ಊರಲ್ಲಿರುವ ಪಾತ್ರ, ಅವಕ್ಕೆ ಸಂಬಂಧಿಸಿದ ಸನ್ನಿವೇಶಗಳು ಮತ್ತವರ ಪರಿಸರ ಎಲ್ಲವನ್ನು ವಾಸ್ತವದ ರೀತಿಯಲ್ಲಿಯೇ ನಾನು ಗ್ರಹಿಸಿದ್ದೀನಿ ಮತ್ತು ಬರೆದಿದ್ದೀನಿ. ಹಾಗೆ ಮೊದಮೊದಲ ಕಥೆಗಳನ್ನ ನಾನು ಯಥಾವತ್ತಾಗಿ ಯಾವ ಕಲ್ಪನೆ ಇಲ್ಲದೆಯೂ ಬರೆದಿದ್ದೇನೆ. ಆದರೆ ಆಕಸ್ಮಿಕವಾಗಿ ಅದನ್ನು ಓದಿದ ನಮ್ಮೂರ ಜನ ಅದನ್ನು ಸಹಿಸಲಿಲ್ಲ. ಅದರಲ್ಲಿ ಅವರ ಹಾದರ, ಅವರ ದಡ್ಡತನ ಅವೆಲ್ಲ ಕಾಣಿಸಿದಾಗ ಅವರಿಗೆ ಸ್ವಲ್ಪ ಆಕ್ರೋಶ ಬಂತು.

ಅವಾಗ ನನಗೆ ನಮ್ಮ ಗುರುಗಳಾದ ಶಾಂತರಸರು ಹಾಗೆ ಯಥಾವತ್‌ ಬರಿಬಾರದು; ಸಮುದಾಯಗಳು ಅಂತಹದನ್ನು ತಡ್ಕೊಳಲ್ಲ; ಅದಕ್ಕಾಗಿ ನೀನು ತಂತ್ರಗಳನ್ನು ಹುಡುಕಬೇಕು ಅಂತ ಹೇಳಿದರು. ಆವಾಗ ನಾನು ಕಲ್ಪನೆ ಸೇರಿಸಿಕೊಳ್ಳಲಿಕ್ಕೆ ತೊಡಗಿದೆ. ಅದಕ್ಕೆ ನನಗೆ ಬಹಳ ಟೈಮ್ ಹಿಡಿತು. ಕೊನೆಗೆ ಒಂದು ಒಂದು ತಂತ್ರ ಕಂಡುಕೊಂಡೆ. ಏನು ಅಂದ್ರೆ ಮೊದಲು ವಾಸ್ತವದ ಕತೆಯನ್ನು ಬರೆದುಬಿಡೋದು. ಆನಂತರ ಪಾತ್ರದ ಹೆಸರುಗಳು, ಅವರಿಗೆ ಸಂಬಂಧಿಸಿದಂತ ಘಟನೆಗಳು, ಸನ್ನಿವೇಶಗಳನ್ನು ಬದಲಿಸೋದು. ಅಲ್ಲಿಂದ ನನಗೆ ಬೇರೆ ಹೆಸರು ಇಡಬಹುದು, ಬೇರೆ ಬೇರೆ ಸ್ಥಳಗಳನ್ನು ಕಲ್ಪಿಸಿಕೊಳ್ಳಬಹುದು ಅಂತ ನಿಧಾನವಾಗಿ ಗೊತ್ತಾಯಿತು. ಅಲ್ಲಿಂದ ನಾನು ವಾಸ್ತವ ಮತ್ತು ಕಲ್ಪನೆಯ ಸಮ್ಮಿಲನ ಮಾಡುವುದಕ್ಕೆ ಪ್ರಯತ್ನಪಟ್ಟ ಫಲವಾಗಿ ಮುಂದೆ ಅನೇಕ ಕಥೆಗಳಲ್ಲಿ ಅದನ್ನ ಅನುಸರಿಸಿಕೊಂಡು ಹೋಗಿದ್ದೇನೆ.

ಬೇಗೂರು: 2020-21ರಲ್ಲಿ ದಂದುಗ ಮತ್ತು ಗೌರಿಯರು ಕಾದಂಬರಿಗಳನ್ನು ಬರೆದ್ರಿ. ಕವಿತೆಗಳನ್ನೂ ಬರೆದ್ರಿ. ಈ ಪ್ರಕಾರಗಳಿಗೆ ತುಂಬಾ ತಡವಾಗಿ ಪ್ರವೇಶ ಮಾಡೋದಕ್ಕೆ ಏನಾದರೂ ಕಾರಣ ಇದಾವ ಸರ್?

ಇದನ್ನು ಓದಿದ್ದೀರಾ?: ಕೈರೋ ಸ್ಟೇಷನ್: ಅರಬ್ ಸಿನೆಮಾದ ಆಧುನಿಕತೆಯ ಉದಯ ಮತ್ತು ಅಲಕ್ಷಿತ ಮಾನವನ ದುರಂತ

ನುಗಡೋಣಿ: ನಾನು ಆರಂಭದಿಂದಲೂ ಬರೆದರೆ ಕಾದಂಬರಿಯನ್ನೇ ಬರಿಬೇಕು ಅನ್ನುವ ಒತ್ತಡದಲ್ಲಿ ಇದ್ದೆ. ಆದರೆ ನನ್ನ ಕೆಲಸದ ಸ್ವರೂಪದಿಂದಾಗಿ ದೀರ್ಘವಾಗಿ ಕುಳಿತು ಬರೆಯುವ ಅವಕಾಶವಾಗಲಿ, ಸಮಯವಾಗಲಿ ಸಿಗದೆ ಹೋದ್ದರಿಂದ ಸಣ್ಣ ಕಥೆಗಳನ್ನು ನಾನು ಬರಿತಾ ಹೋದೆ. ಯಾವಾಗ ಇನ್ನೇನು ನಿವೃತ್ತಿ ಹೊಂದುವ ಸಮಯದಲ್ಲಿ ನನಗೆ ಕರೋನ ಕಾಲದಲ್ಲಿ ಒಂದಿಷ್ಟು ದೀರ್ಘಕಾಲ ರಜೆ ಸಿಕ್ಕಿತೊ ಅವಾಗ ನನಗೆ ಎರಡು ಕಾದಂಬರಿಗಳ ಬರಿಬಹುದು ಅನಿಸಿತು.

ನಿಮ್ಮಂತಹ ವಿದ್ವಾಂಸರು ನನ್ನ ಕತೆಯ ಸ್ವರೂಪ ಕುರಿತು ಮಾತಾಡುವಾಗ ಅವು ಕಾದಂಬರಿಗಳ ಸಂಕ್ಷಿಪ್ತ ರೂಪವೇ ಅಂತ ಮಾತಾಡ್ತಾರೆ. ಅವು ಸಣ್ಣ ಕಥೆಯ ಲಕ್ಷಣಕ್ಕಿಂತಲೂ ಕಾದಂಬರಿಯ ಲಕ್ಷಣವನ್ನು ಹೊಂದಿದ ಸಣ್ಣ ಕತೆಗಳು ಅಂತ ಕರೀತಾರೆ. ಎಂತಾ ದೊಡ್ಡ ಕತೆನೇ ಇರಲಿ ಅದನ್ನ ಸಣ್ಣ ಕತೆಯನ್ನಾಗಿ ಪರಿವರ್ತಿಸುವ ಒಂದು ಜಾಣ್ಮೆ ನನಗೆ ಮೊದಲೆ ಕರಗತ ಆಯ್ತು. ನಾನು ಬಹಳ ದೀರ್ಘಕಾಲ ಆಲೋಚನೆ ಮಾಡಿ ಅದನ್ನ ನನ್ನ ಮನಸ್ಸಿನಲ್ಲಿಯೇ ಬರೆದುಕೊಂಡು ಆನಂತರ ಅಕ್ಷರಗಳಿಗೆ ಇಳಿಸುತ್ತಿದ್ದೆ. ಹೀಗಾಗಿ ಆರಂಭದ ಇಪ್ಪತ್ತು ಇಪ್ಪತ್ತೈದು ವರ್ಷಗಳ ಕಾಲ ಒಂದೊಂದೇ ಕತೆ ಆಯ್ಕೆ ಮಾಡಿಕೊಳ್ಳೋದು ಅದನ್ನು ಬರೆದು ಮುಗಿಸಿ ನಿರಾಳ ಆಗೋದು. ಮತ್ತೆ ಕಥೆಯನ್ನು ಬರಿಯೋಕೆ ಶುರು ಮಾಡೋದು ಹೀಗೆ ಕತೆ ಬರೆಯೋಕೆ ಕಾದಂಬರಿ ಬರೆಯುವಷ್ಟೆ ಅವಧಿ ತೆಗೆದುಕೊಳ್ತಾ ಇದ್ದೆ.

ನೀವು ಗೌರಿಯರು ಓದಿದೀರಲ್ಲ. ಅದು ದೀರ್ಘ ಕತೆನೇ. ದಂದುಗನು ಅಷ್ಟೇ. ಹಾಗೆ ಕಾದಂಬರಿಯ ಒಳಗೆ ಸಣ್ಣ ಕತೆಯ ಒಂದು ಸ್ವರೂಪವನ್ನು ಇಟ್ಟುಕೊಂಡಿದ್ದೀನಿ ನಾನು. ಕಥೆಯ ಒಳಗೆ ಕಾದಂಬರಿಯ ಸ್ವರೂಪನು ಇಟ್ಟುಕೊಂಡಿದ್ದೀನಿ.

ಬೇಗೂರು: ಸರ್ ನಿಮ್ಮ ನಾಲ್ಕು ಕಥೆಗಳು ಚಲನಚಿತ್ರಗಳೂ ನಾಲ್ಕು ನಾಟಕಗಳೂ ಆಗಿವೆ. ಒಂದು ಕಥನ ಚಿತ್ರಕತೆ, ರಂಗರೂಪ ಆಗಿ ಬದಲಾಗುವಾಗ ಕಥನದ ಆಶಯಗಳು ಬದಲಾಗಬಹುದು. ಆ ಥರದ ಮಾರ್ಪಾಡಿನ ಬಗ್ಗೆ ನಿಮ್ಮ ಒಪಿನಿಯನ್ ಏನು ಸರ್.

ನುಗಡೋಣಿ: ಆರಂಭದಲ್ಲಿಯೇ ನನ್ನ ಸವಾರಿ ಅನ್ನುವ ಕಥೆಯನ್ನು ಗಿರೀಶ್ ಕಾಸರವಳ್ಳಿ ಅವರು ಸಿನಿಮಾ ಮಾಡುವುದಕ್ಕೆ ಎತ್ತಿಕೊಂಡರು. ‘ಕನಸೆಂಬೊ ಕುದುರೆ’ ಅಂತ ಮಾಡಿದರು. ಒಬ್ಬ ಸಿನಿಮಾ ನಿರ್ದೇಶಕರು ಕಥೆಗಾರ ಹೇಳಿದ್ದನ್ನೆ ಯಥಾವತ್ ಸಿನಿಮಾದಲ್ಲಿ ನಿರೂಪಿಸ್ತಾರೆ ಅಂದರೆ ಅದಕ್ಕೆ ಅವರೆ ಯಾಕೆ ಬೇಕು? ಅವರದೆ ಆಶಯಗಳು ಮತ್ತು ದೃಷ್ಟಿಕೋನಗಳು ಇರ್ತಾವೆ. ಅದಕ್ಕಾಗಿ ಅವರು ಸಿನಿಮಾ ಅಥವಾ ನಾಟಕ ಮಾಡ್ತಾರೆ. ಬಟ್ ಕತೆಗಾರನ ಕಥೆಯಿಂದ ಅವು ಸೃಷ್ಟಿ ಆಗ್ತವೆ ಅಲ್ಲವಾ? ಕತೆಗಾರನ ಒಂದು ಕತೆ ಇನ್ನೊಂದು ಮಾಧ್ಯಮಕ್ಕೆ ಹೋದಾಗ ಇಲ್ಲಿರುವ ಅನೇಕ ಅಂಶಗಳು ಅಲ್ಲಿ ಬೇರೆ ರೂಪದಲ್ಲಿ ಸೇರಿ ಅದು ಇನ್ನೊಂದು ಆಗ್ತದೆ. ಅದು ಆಗಬೇಕು.

ಬೇಗೂರು: ಸರ್, 1992ರ ಸುಮಾರಲ್ಲಿ ನೀವು ಹಂಪಿ ಕನ್ನಡ ಯೂನಿವರ್ಸಿಟಿಗೆ ಕೆಲಸಕ್ಕೆ ಸೇರಿಕೊಂಡ್ರಿ. ಅಷ್ಟೊತ್ತಿಗೆ ನೀವು ಕನ್ನಡದಲ್ಲಿ ಕತೆಗಾರ ಅಂತ ಗುರುತಿಸಿಕೊಂಡಿದ್ರಿ. ಆನಂತರದಲ್ಲಿ ಅಲ್ಲಿನ ಕರ್ತವ್ಯದ ಭಾಗವಾಗಿ ನೀವು ವಿಮರ್ಶೆ, ಸಂಶೋಧನೆ, ಸಂಪಾದನೆ ಹೀಗೆ ಹಲವು ಕರ್ತವ್ಯಗಳಲ್ಲಿ ತೊಡಗಿಕೊಂಡ್ರಿ. ಇವುಗಳ ನಡುವೆ ಏನಾದರೂ ಸಂಘರ್ಷ ಉಂಟಾಯ್ತಾ? ಅಥವಾ ನಿಮ್ಮ ಒಳಗಿನ ಕಥೆಗಾರನಿಗೆ ಈ ಅನುಭವ ಯಾವ ರೀತಿನಲ್ಲಿ ಬಳಕೆ ಆಯ್ತು?

ನುಗಡೋಣಿ: ಕನ್ನಡ ವಿಶ್ವವಿದ್ಯಾಲಯಕ್ಕೆ ಆರಂಭ ಕಾಲದಲ್ಲಿ ಹಲವು ಪ್ರಖರ ವೈಚಾರಿಕತೆ, ಬೌದ್ಧಿಕತೆ ಉಳ್ಳ ವಿದ್ವಾಂಸರೆ ಬಂದರು. ನಿತ್ಯವೂ ಅವರ ಜೊತೆ ನಾನು ಒಡನಾಟ ಮಾಡ್ತಾ ಇದ್ದೆ. ಅವರ ವೈಚಾರಿಕತೆ, ಪ್ರಬುದ್ಧತೆ ಮತ್ತು ಮೆಥಡ್‌ಗಳನ್ನು ಅನುಸರಿಸಲು ಆಗದೆ ಇರುವ ಹಲವು ನನ್ನ ಓರಗೆಯ ಪ್ರಾಧ್ಯಾಪಕರು ಅವರ ಸಹವಾಸವನ್ನೇ ಬಿಡುವ ರೀತಿಯಲ್ಲಿ ವರ್ತನೆ ಮಾಡಿದ್ರು. ನನ್ನನ್ನು ಆ ವಿದ್ವಾಂಸರು ಒಬ್ಬ ಕಥೆಗಾರನನ್ನಾಗಿ ನೋಡಿದರೆ ಹೊರತು ಒಬ್ಬ ಸಂಶೋಧಕ ಮತ್ತು ವಿದ್ವಾಂಸನನ್ನಾಗಿ ನೋಡಲಿಲ್ಲ. ಆ ದಿಕ್ಕಿಗೆ ನನ್ನನ್ನು ಕರೆದೊಯ್ಯಲೂ ಇಲ್ಲ. ಆದರೆ, ನನ್ನ ಗ್ರಾಮೀಣ ಭಾಷೆ ಇತ್ತಲ್ಲ ಅದು ಉದ್ಯೋಗ ನಿಮಿತ್ತ ತನ್ನ ಮೂಲ ಶೈಲಿಯನ್ನೆ ಕಳಕೋತು. ನೀವು ಆನಂತರದ ಸಂಕಲನಗಳ ನೋಡ್ರಿ ಅಲ್ಲಿ ಡೈಲಾಗ್ ಮಾತ್ರ ಉಳಿಸಿಕೊಂಡಿದ್ದೀನಿ. ನನ್ನ ಕಥನಗಳ ನಿರೂಪಣಾ ಭಾಷೆ ಬದಲಾಗಿದೆ. ಮತ್ತೆ ಇತ್ತೀಚೆಗೆ ಎಷ್ಟು ಬದಲಾವಣೆ ಆಗಿದೆ ಅಂದ್ರೆ ನನ್ನ ಊರಿನ ಭಾಷೆಯನ್ನ ಉಳಿಸಿಕೊಂಡೆ ನಾನು ಒಂದು ಕಥೆನ ಸಂಪೂರ್ಣ ಬರೀತೀನಿ ಅನ್ನೊ ಗಟ್ಟಿ ನಿರ್ಧಾರನ್ನೆ ನಾನು ಕಳಕೊಂಡಿದ್ದೀನಾ ಅನ್ನೊವಷ್ಟು.  ಸದಾ ಗ್ರಾಂಥಿಕ ಭಾಷೆನೆ ಬರುತ್ತೆ. ಅಂದ್ರೆ ಸಂಶೋಧನೆಗೆ ಒಂದು ಭಾಷೆ ಇರುತ್ತಲ್ಲ ಅದು ಕತೆಗೂ ಬರುತ್ತೆ. ಆದರೆ, ನಾನು ಕತೆಗೆ ಆಯ್ಕೆ ಮಾಡಿಕೊಂಡ ವಸ್ತು, ಪಾತ್ರಗಳು ಮತ್ತು ಸನ್ನಿವೇಶಗಳು ಪ್ರಾದೇಶಿಕವಾಗಿಯೇ ಇರಬೇಕು ಅನ್ನುವುದನ್ನ ಬಹಳ ಶ್ರಮದಿಂದ, ಶ್ರದ್ಧೆಯಿಂದ, ಪ್ರಜ್ಞಾಪೂರ್ವಕವಾಗಿ ರೂಢಿಸಿಕೊಳ್ಳೋದಕ್ಕೆ, ಉಳಿಸಿಕೊಳ್ಳೋದಕ್ಕೆ ನಾನು ಪ್ರಯತ್ನ ಪಟ್ಟು ಉಳಿಸಿಕೊಂಡಿದ್ದೀನಿ. ಹಾಗೆ ಭಾಷೆ ವಿಚಾರದಲ್ಲು ಎಚ್ಚರದಿಂದ ಅದನ್ನು ರೂಢಿಸಿಕೊಂಡು ಬಂದಿದ್ದೀನಿ.  

Amaresha nugudoni Ramalingappa begur1
ಅಮರೇಶ ನುಗಡೋಣಿ ಮತ್ತು ರಾಮಲಿಂಗಪ್ಪ ಟಿ. ಬೇಗೂರು

ಬೇಗೂರು: ಒಬ್ಬ ವಿಮರ್ಶಕ, ಸಂಶೋಧಕ ಗ್ರಹಿಸುವ ಕ್ರಮಕ್ಕೂ ಕಥೆಗಾರರು ಸಮಾಜವನ್ನು ಗ್ರಹಿಸುವ ಕ್ರಮಕ್ಕೂ ಭಿನ್ನತೆಗಳು ಇರುತ್ತವೆ ಅಂತ ನಾನು ಭಾವಿಸುತ್ತೀನಿ. ನಿಮ್ಮ ಕಥನದ ಗ್ರಹಿಕೆ ಮೇಲೆ ಇವು ಮಾಡಿದಂತಹ ಪ್ರಭಾವದ ಬಗ್ಗೆ ಹೇಳೋಕೆ ಸಾಧ್ಯವಾ?

ನುಗಡೋಣಿ: ಅಂದ್ರೆ ಈಗ ಫಾರ್ ಎಕ್ಸಾಂಪಲ್ ನಾನು ವಿಮರ್ಶೆ ಅಥವಾ ಸಂಶೋಧನೆ ಮಾಡ್ತಿದ್ನಲ್ಲರಿ ಮಾಡೋ ಕಾಲಕ ಎಲ್ಲ ಸಂಗತಿಗಳನ್ನು ಕಥಾರೂಪದಲ್ಲಿಯೇ ನೋಡ್ತಾ ಇದ್ದೆ. ಅಂದ್ರೆ ವಿಮರ್ಶೆ ಆಗಬಹುದು ಸಂಶೋಧನೆ ಆಗಬಹುದು ಅದಕ್ಕೆ ನಾನು ಕಥನದ ಅಂಶವನ್ನು ಸೇರಿಸಿ ಆಲೋಚನೆ ಮಾಡ್ತಾ ಇದ್ದೆ. ಹಾಗಾಗಿ ಸಂಪೂರ್ಣವಾಗಿ ಕಥನದಿಂದ ಹೊರಗೆ ಹೋಗಿ ನಾನು ಸಂಶೋಧನೆ ಮಾಡಲಿಲ್ಲ ಮತ್ತು ಅದಕ್ಕೂ ಹೆಚ್ಚಾಗಿ ಪ್ರತಿ ಕತೆ ಬರ್ದಿದ್ದನ್ನು ನಾನು ಅಲ್ಲಿರುವಂತಹ ವಿದ್ವಾಂಸರಿಗೆ ತೋರಿಸ್ತಾ ಇದ್ದೆ. ಸಂಶೋಧನೆ, ವಿಮರ್ಶೆ ನನಗೆ ಸೆಕೆಂಡರಿ. ಈ ಕತೆಗಳೇ ನನಗೆ ಆದ್ಯತೆ. ಆದರೆ ವಿಮರ್ಶೆಯನ್ನು ಅಲ್ಲಿ ಕರ್ತವ್ಯದ ಭಾಗ, ವೃತ್ತಿಯ ಭಾಗವಾಗಿ ಮಾಡ್ಕೋತ ಬಂದಿದ್ದೆ. ಅದು ಏನೊ ಅಷ್ಟು ಮಾಡೋದು ಅದನ್ನು ಮರೆಯೋದು. ಆದರೆ ದಿನನಿತ್ಯ ಆಲೋಚನೆ ಮಾಡುವುದು ಕಥೆಗಳನ್ನೇ.

ಬೇಗೂರು: ಸುಮ್ನೆ ಮಾತಿಗೆ ಹೇಳೋದಾದ್ರೆ ಈಗ ಕುವೆಂಪು ಬಗ್ಗೆ ಯೋಚನೆ ಮಾಡುವಾಗ ಶಿವರಾಮ ಕಾರಂತರ ಬಗ್ಗೆ ಯೋಚನೆ ಮಾಡುವಾಗ ನಾವು ಅವರನ್ನ ಬೇರೆ ಬೇರೆ ಹಲವು ಪ್ರಕಾರಗಳಲ್ಲಿ ಸಿದ್ದಹಸ್ತರು ಅನ್ನೋಥರ ನೋಡ್ತೀವಿ ಮತ್ತೆ ಗುರುತಿಸ್ತೀವಿ ಕೂಡ ಹೌದು. ಆದರೆ ಮಾಸ್ತಿನ ಹಾಗೆ ನಾವು ಗುರುತಿಸಲ್ಲ ಅವರು ವಿಮರ್ಶೆ ಬರೆದಿದ್ರು ಅವರನ್ನ ಕಥೆಗಾರ ಅಂತಾನೆ ಗುರುತಿಸ್ತೀವಿ. ಇವಾಗ ನೀವು ಕೂಡ ಸಾಕಷ್ಟು ವಿಮರ್ಶೆ ಬರೆದಿದ್ದೀರಿ. ಬೇರೆ ಬೇರೆ ಕೃತಿಗಳಿಗೆ ಸಂಪಾದನಾ ಕೃತಿಗಳಿಗೆ ಪ್ರಸ್ತಾವನೆ ಬರೆದಿದ್ದೀರಿ. ಸಂಶೋಧನಾ ಸಾಹಿತ್ಯ ಸೃಷ್ಟಿ ಮಾಡಿದ್ದೀರಿ, ಸಂಶೋಧಕರಿಗೆ ಮಾರ್ಗದರ್ಶನ ಮಾಡಿದ್ದೀರಿ. ಅದೆಲ್ಲದರ ಆಚೆಗೆ ನಿಮ್ಮ ಐಡೆಂಟಿಟಿ ಕನ್ನಡದ ಕಥೆಗಾರ ಅಂತಾನೇ ಇದೆ.

ಇದನ್ನು ಓದಿದ್ದೀರಾ?: ಸಾವು, ಸ್ಮಶಾನ, ಗೋರಿ, ಸ್ಮಾರಕ- ಚದುರಿದ ಚಿತ್ರಗಳು

ನುಗಡೋಣಿ: ಹೌದು ಹೌದು ಆ ಎಲ್ಲಾ ಚಟುವಟಿಕೆಗಳು ಇದ್ದವಲ್ಲ ಸರ್ ಅವು ನನ್ನ ಕಥನಕ್ಕೆ ಬಲವನ್ನು ನೀಡಿವೆ ಅಂತ. ಅದು ಇಲ್ಲದೆ ಹೋಗಿದ್ರೆ ಇಷ್ಟು ಮಟ್ಟದಲ್ಲಿ ನನ್ನ ಕತೆಗಳು ರೂಪಗೊಳ್ಳುತ್ತಿರಲಿಲ್ಲ. ಈಗಿನ ಯುವಕ, ಯುವತಿಯರು ಕತೆ ಬರೆಯುವವರು ವಿಮರ್ಶೆ ಓದಬಾರದು, ಸಂಶೋಧನೆ ಮಾಡಬಾರದು; ಅವುಗಳಿಂದ ಕಥನಕಲೆಗೆ ಏನೂ ಪ್ರಯೋಜನ ಇಲ್ಲ ಅಂತನ್ನುವ ಒಂದು ಭಾವನೆನ ಕೆಲವರು ವ್ಯಕ್ತಪಡಿಸ್ತಾರೆ. ಆದರೆ ಅದು ತಪ್ಪು ಅಂತ ನಾನು ಹೇಳೋದು. ವಿಮರ್ಶೆನು ಓದಬೇಕು. ಅಂದ್ರೆ ಕುರ್ತಕೋಟಿ, ಕೆ.ವಿ.ಎನ್., ಚೆನ್ನಿ, ಜಿ.ಎಚ್.‌ ನಾಯಕ ಎಲ್ಲರನ್ನು ಓದಬೇಕು. ಅಲ್ಲಿ ಏನಂದ್ರೆ ನಮಗೆ ಒಂದು ಪೊಲಿಟಿಕಲ್ ಸ್ಟ್ಯಾಂಡ್ ಸಿಗ್ತದೆರೀ.

ಬೇಗೂರು: ನಾನು ಅದನ್ನೇ ಸರ್ ಗ್ರಹಿಕೆ, ಲೋಕದೃಷ್ಟಿ ಅಂತ ಅಂದಿದ್ದು.

ನುಗಡೋಣಿ: ಅಲ್ವಾ, ಈ ಲೋಕದೃಷ್ಟಿ ಅನ್ನೋದು ವಿದ್ವಾಂಸರ ಬರವಣಿಗೆಗಳನ್ನು ಓದುವ ಮೂಲಕ ಸಿಗುತ್ತೆ. ನಾವು ಗಾಂಧಿಯನ್ನ ಓದೋದಾಗಲಿ, ಅಂಬೇಡ್ಕರ್‌, ಲೋಹಿಯಾ ಓದೋದಾಗಲಿ ಯಾಕೆ ಅಂತ ಕೇಳಿದರೆ ಅವರ ಅನುಭವಕ್ಕೆ. ಲೋಕದೃಷ್ಟಿ ಅದು ರೂಪಿಸಿಕೊಳ್ಳಲಿಕ್ಕೆ. ಲೋಕಗ್ರಹಿಕೆಯನ್ನ ಕಲಿಬೇಕಾದರೆ ನಾವು ವೈಚಾರಿಕ, ವಿಮರ್ಶಾ ಸಾಹಿತ್ಯವನ್ನು ಪ್ರತಿಯೊಬ್ಬ ಕಥೆಗಾರರು, ಕಾದಂಬರಿಕಾರರು ಓದಲೇಬೇಕು ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ.

ಬೇಗೂರು: ನಿಮ್ಮ ಯೂನಿವರ್ಸಿಟಿ ಹೇಳಿ ಕೇಳಿ ಜ್ಞಾನ ಸೃಷ್ಟಿ ಮಾಡುವಂತಹ ಯೂನಿವರ್ಸಿಟಿಯಾಗಿ ಕೆಲಸ ನಿರ್ವಹಿಸೊ ಸಂಸ್ಥೆ. ಅಲ್ಲಿ ನಿಮ್ಮ ಮಾರ್ಗದರ್ಶನದಲ್ಲಿ 12 ಮಂದಿ ಎಂಫಿಲ್ ಮತ್ತು 20 ಜನ ಪಿಎಚ್.ಡಿ ಪಡ್ಕೊಂಡಿದ್ದಾರೆ. ಅಂದ್ರೆ ಸ್ವಯಂ ಸಂಶೋಧನೆ ಒಳಗಡೆ ಪಾಲ್ಗೊಳ್ಳುವುದು ಮತ್ತು ಅದಕ್ಕೆ ಒಂದು ಪೀಳಿಗೆಯನ್ನ ತಯಾರು ಮಾಡೋದು ಈ ಎರಡು ಕರ್ತವ್ಯಗಳ ಹಿನ್ನೆಲೆನಲ್ಲಿ ಇವತ್ತಿನ ಸಾಹಿತ್ಯ ಸಂಶೋಧನೆಯ ವಸ್ತು, ವಿಧಾನ, ಗುಣಮಟ್ಟ ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ನುಗಡೋಣಿ: ಪಿಎಚ್.ಡಿ ಮಾಡುವ ವಿದ್ಯಾರ್ಥಿ ಮತ್ತು ಮಾರ್ಗದರ್ಶಕ ಇವರಿಬ್ಬರಿಗೂ ತಾವು ಆಯ್ಕೆ ಮಾಡಿಕೊಂಡಂತಹ ವಸ್ತುವಿನಲ್ಲಿ ಆಸಕ್ತಿ ಇರಬೇಕು. ಒಬ್ಬರಿಗೊಬ್ಬರು ಆಲೋಚನೆ ಮಾಡ್ತಾ ಮಾಡ್ತಾ ಇಬ್ಬರೂ ಬೆಳಿಬೇಕು. ಅದರಿಂದ ಒಂದು ಥೀಸಸ್ ಸೃಷ್ಟಿ ಆಗ್ತದೆ. ಆದ್ರೆ ಏನಾಗಿದೆ ಅಂತ ಅಂದ್ರೆ ಮಾರ್ಗದರ್ಶಕರು ಕೇವಲ ನಾಮಕೆವಾಸ್ತೆ ಮಾರ್ಗದರ್ಶಕರಾಗಿದ್ದಾರೆ. ವಿದ್ಯಾರ್ಥಿಗಳು ಇಂದು ಎಂ.ಎ. ಪರೀಕ್ಷೆ ಬರೆದು ಪಾಸ್ ಆಗುವ ಹಾಗೆ ಪಿಎಚ್.ಡಿಯನ್ನು ಕೂಡ ಒಂದು 200 ಪುಟ ಬರೆದು ಪಾಸ್ ಆಗುವ ಸ್ಥಿತಿಗೆ ಬಂದು ನಿಂತಿದ್ದಾರೆ. ಅದು ಒಂದು ಪದವಿ ಅನ್ನೋತರದ ಸ್ಥಿತಿಗೆ ಬಂದಿದ್ದಾರೆ. ಅಂದರೆ ಪದವಿ ಪರೀಕ್ಷೆಗಳನ್ನ ಒಂದು ರೂಮಲ್ಲಿ ಕುಂತು ಬರೀತಾರೆ. ಇದನ್ನು ಮನೆಲಿ ಕುಂತು ಬರೀತಾರೆ ಅಷ್ಟೇ ವ್ಯತ್ಯಾಸ.

ಬೇಗೂರು: ಸೋ ಇವತ್ತಿನ ಈ ಸಂಶೋಧನೆಯ ವಸ್ತು, ವಿಧಾನ ಇಲ್ಲವೆ ಗುಣಮಟ್ಟ ಇವೆಲ್ಲ ಒಂದು ಜಂಟಿ ಹೊಣಿಗಾರಿಕೆ ಅಂತ ಹೇಳ್ತಾ ಇದ್ದೀರಿ ಅಲ್ಲವಾ?

ನುಗಡೋಣಿ: ಹೌದು ಅನುಮಾನವೇ ಇಲ್ಲ. ಅದರ ಕ್ರೆಡಿಟ್ ಏಕಕಾಲಕ್ಕೆ ಇಬ್ಬರಿಗೂ ಹೋಗ್ತದೆ. ಅದರ ಗುಣಮಟ್ಟ ಚೆನ್ನಾಗಿದ್ದರೆ ಇಬ್ಬರಿಗೂ ಕ್ರೆಡಿಟ್. ಕಳಪೆ ಆಗಿದ್ದರೆ ಇಬ್ಬರದೂ ಹೊಣೆ. ಹಂಗಾಗಿ ನಾನೇನು ಹೇಳುತ್ತೀನಿ ಅಂದ್ರೆ ಮಾರ್ಗದರ್ಶಕ ಆದ ನಾನು ಓದದೆ, ನನಗೆ ಗೈಡ್ ಮಾಡಕ್ಕೆ ಬರಲ್ಲ. ಸಂಶೋಧನಾರ್ಥಿ ಕೂಡ ಆಸಕ್ತಿಯಿಂದ ಪ್ರಶ್ನೆಗಳನ್ನು ಹಾಕುತ್ತಾ ಆ ಮಾರ್ಗದರ್ಶಕರಿಂದ ಪಡಿಬೇಕಾದದ್ದನ್ನು ಪಡಿಬೇಕು ಮತ್ತು ತನ್ನ ಸ್ವಶಕ್ತಿಯಿಂದ ತನ್ನ ಥೀಸಸ್ ಅನ್ನ ಕಟ್ಟಬೇಕು. ಹಿಂಗಾಗಿ ಇವೆರಡು ಶಕ್ತಿಯುತವಾಗಿ ಮಿಲನ ಆದರೆ ಮಾತ್ರ ಅತ್ಯುತ್ತಮ ಪಿಎಚ್.ಡಿ ಹೊರಗೆ ಬರ್ತದೆರೀ.

ಅಲ್ಲಿ ಕೋ ಆರ್ಡಿನೇಟ್ ಇಲ್ಲ ಅನ್ನೋದಾದ್ರೆ ಅದು ಏನೋ ಬರೀ ನಾನು ಸಹಿ ಮಾಡ್ತೀನಿ ಅಂತ ಅನ್ನೋದಾದ್ರೆ ವಿದ್ಯಾರ್ಥಿಗಳಿಗೆ ಅದೇ ಬೇಕಾಗಿರುತ್ತದೆ. ಓದಲ್ಲ ಪದವಿ ತಗೋಬೇಕು ಅಷ್ಟೇ. ಆಮೇಲೆ ಮೂರು ವರ್ಷ ನಾಲ್ಕು ವರ್ಷ ಐದು ಆರೇಳು ವರ್ಷ ಕಳೆದರೂ ತಮ್ಮ ಪಿಎಚ್.ಡಿಯ ಮೂಲ ವಸ್ತುವನ್ನೇ ಕೆಲವು ವಿದ್ಯಾರ್ಥಿಗಳು ಸ್ಪರ್ಶಿಸಿರಲ್ಲ. ಇದು ದುರಂತ ನೋಡ್ರಿ, ಏನ್ ಮಾಡ್ತೀರಿ.

ಬೇಗೂರು: ಅವರನ್ನ ಆ ದಿಸೆನಲ್ಲಿ ತಯಾರು ಮಾಡೋದಕ್ಕೆ ಕೆಲವು ಬೇರೆ ಬೇರೆ ರೀತಿ ಉಪಕ್ರಮ ಅಂದ್ರೆ ಆ ಪ್ಲಾನ್‌ಗಳನ್ನ, ಯೋಜನೆಗಳನ್ನ, ನಿಯಮಗಳನ್ನ ಮಾಡ್ಕೋಬೇಕು ಅಂತ ಅನ್ಸುತ್ತೆ ಅಲ್ವಾ ಸರ್?

ನುಗಡೋಣಿ: ಅಂದ್ರೆ, ನಿಯಮಗಳನ್ನ ರೂಪಿಸಬಹುದು ಸರ್ ವಿಶ್ವವಿದ್ಯಾಲಯ ಅಥವಾ ಯಾರೋ ಒಂದು ವಿದ್ವಾಂಸರ ಸಮಿತಿ ನಿಯಮಗಳನ್ನ ರೂಪಿಸಬಹುದು. ಆದರೆ ಆಸಕ್ತಿ, ಅಭಿರುಚಿ, ಡೆಡಿಕೇಶನ್ ಅದನ್ನು ರೂಪಿಸೋಕೆ ಆಗಲ್ಲ. ಅದು ಏನಿದ್ದರೂ ಅವರಲ್ಲಿ ಇರಬೇಕು. ಮೊದಲು ವಿದ್ಯಾರ್ಥಿ ಮಾಡುವ ಪಿಎಚ್.ಡಿ ಯಾವತ್ತೂ ಅದಕ್ಕೆ ಕಪ್ಪು ಚುಕ್ಕೆ ಇರಬಾರದು ಅಂತ ಗೈಡು ಆಲೋಚನೆ ಮಾಡಬೇಕು. ನಾನು ಸುಮ್ಮನೆ ಐದು ವರ್ಷ ಬರೋದು ವ್ಯರ್ಥ ಆಗಬಾರದು ಅಂತ ಅವನಿಗೂ ಇರಬೇಕು.

ಬೇಗೂರು: ನಿಮ್ಮ ಸಂಪರ್ಕಕ್ಕೆ ತುಂಬಾ ಜನ ಓದುಗರು ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಬಂದಿದ್ದಾರೆ. ನಿಮ್ಮಿಂದ ಪ್ರೇರೇಪಣೆ ಪಡ್ಕೊಂಡು ಕಥೆ ರಚನೆ ಮಾಡೋದಕ್ಕೆ ತೊಡಗಿದಂಥವರು ಅಥವಾ ನಿಮ್ಮ ಚಿಂತನೆ ನೆಲೆನಲ್ಲಿ ಪ್ರೇರೇಪಣೆ ಪಡೆದುಕೊಂಡಂತಹ ಕರಸಂಜಾತ ಪರಂಪರೆ ಥರದವರು ಯಾರಾದರೂ ಇದ್ದಾರಾ?

ನುಗಡೋಣಿ: ಇಲ್ಲ 20 ಮಂದಿ ಸಂಶೋಧಕರು, ಎಂಫಿಲ್ ಅವರನ್ನು ಬಿಟ್ಟುಬಿಡಿ. ಈ 20 ಮಂದಿ ಸಂಶೋಧಕರು ಪಿಎಚ್.ಡಿ ಪದವಿಯನ್ನು ಪಡೆದು ಅವರು ನನ್ನ ಜೊತೆ ಇರೋ ಕಾಲಕನು ನಾನು ಪ್ರತಿ ಕತೆಯನ್ನು ನಮ್ಮ ವಿಶ್ವವಿದ್ಯಾಲಯ ವಿದ್ವಾಂಸರಿಗೆ ಕೊಟ್ಟು ಓದಿಸಿದ ಹಾಗೆ ಓದಿಸ್ತಾ ಇದ್ದೆ. ಏನನ್ನ ಹೇಳ್ರಪ್ಪ ಅಂತ. ಆಯಾ ಕಾಲಕ್ಕೆ ಯಾರು ಬರ್ತಿದ್ರು ಆಯಾ ವಿದ್ಯಾರ್ಥಿಗಳಿಗೆ. ಆಸಕ್ತಿ ಅದರಗ ಮೂಡಲಿ; ಬರೀ ಪಿಎಚ್.ಡಿ ವಿಷಯ ಅಂತ ಹೇಳಿ ಜಡ್ಡು ಕಟ್ಟಬಾರದು, ಕಥೆನು ಓದಬೇಕು, ಕಾದಂಬರಿ ಓದಬೇಕು ಅಂತ ಹೇಳಿ ಬಹಳ ಪ್ರೇರಣೆ ಕೊಡ್ತಿದ್ದೀನರಿ. ಮತ್ತೆ ಪ್ರತಿ ಪಿಎಚ್.ಡಿ ಮಾಡುವ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ಒಂದು ಕಂಡೀಷನ್ ಹಾಕ್ತಿದ್ದೆ. ನೋಡಪ್ಪ ನೀನು ಯಾವುದೋ ಒಂದು ಅವಧಿಯ ಕಥೆಗಳನ್ನು ಕುರಿತು ಪಿಎಚ್.ಡಿ ಮಾಡ್ತಿ; ಆ ಅವಧಿಯ ಕಥೆಗಳನ್ನೇನೊ ಓದ್ತಾಯಿದ್ದಿ, ಆದರೆ ಆ ಅವಧಿಯಲ್ಲಿ ಕನ್ನಡದ ಕತೆಗಳನ್ನು ಕುರಿತು ಬಂದ ವಿಮರ್ಶೆಗಳನ್ನ ಸಂಗ್ರಹ ಮಾಡಿ ಒಂದು ಪುಸ್ತಕ ಮಾಡು ಅಂತ. ಪಿಎಚ್.ಡಿಯ ಉಪ ಉತ್ಪನ್ನವನ್ನು ಪ್ರತಿ ವಿದ್ಯಾರ್ಥಿಗಳಿಗೆ ಹೇಳಿದ್ದೀನಿರಿ. ಆದರೆ ಯಾರು ಕಥೆ ಬರೆಯುವುದಿರಲಿ, ಒಂದು ಲೇಖನವನ್ನೂ ಬರೆದಿಲ್ಲ. ಏನ್‌ ಮಾಡನ?

ಬೇಗೂರು: ಅಂದ್ರೆ ಸಂಶೋಧನೆಯ ನಂತರ ಅವರು ಸಂಶೋಧನಾ ಕ್ಷೇತ್ರದಲ್ಲಿ ಮುಂದುವರೆಯುವುದಾಗಲಿ ಅಥವಾ ಇನ್ಯಾವುದೇ ಬಗೆಯ ಬರವಣಿಗೆ- ಪ್ರಬಂಧ, ವಿಮರ್ಶೆ- ಈ ಥರದ್ದನ್ನು ಮಾಡಲ್ಲ ಅನ್ನೋದು ನಿಮ್ಮ ಅನುಭವ.

ಇದನ್ನು ಓದಿದ್ದೀರಾ?: ‘ದಲಿತ್ ಸುಬ್ಬಯ್ಯ’ ಎಂಬ ಪ್ರತಿರೋಧದ ಕಥನ ಎತ್ತುವ ಪ್ರಶ್ನೆಗಳು

ನುಗಡೋಣಿ: ನನ್ನ ಅನುಭವ ಮತ್ತು ಅದು ಎಷ್ಟು ನನಗೆ ಅಂದ್ರೆ ನೋಡಪ್ಪ ನೀವು ಪಿಎಚ್.ಡಿ ಪಡ್ಕೊಂಡು ಹೋಗಬಹುದು; ಹೋದ ಮೇಲೆ ನೀವು ಏನು ಮಾಡುತ್ತಿದ್ದೀರಿ ಅನ್ನೋದರ ಮೇಲೆ ನನ್ನ ದೃಷ್ಟಿ ಇದೆ ಹೊರತು ಪದವಿ ಕೊಡಿಸೋದು ನನ್ನ ಕೆಲಸ ಅಲ್ಲ. ಹಂಗಾಗಿ ಏನಾರ ಬರೀತಿರಿ, ಬರೀರಿ, ತೋರಿಸ್ರಿ ಅಂತ ಬಹಳ ಹೇಳಿದ್ದೀನರಿ. ನನ್ನ ಸ್ಟೂಡೆಂಟ್ಸ್ ಅಷ್ಟೇ ಅಲ್ಲ ಬೇರೆಯವರಿಗೂ, ಬೇರೆಯವರ ವಿದ್ಯಾರ್ಥಿಗಳಿಗೂ ಇದನ್ನೆಲ್ಲ ಹೇಳ್ತಾ ಇದ್ದನಲ್ರೀ. ಮತ್ತು ಯಾವುದೋ ಒಂದು ಸಂದರ್ಭದಲ್ಲಿ ನೋಡಿ ಇದೊಂದು ಹೊಸ ಪುಸ್ತಕ ಬಂದಿದೆ ಓದಿ ಇದರ ಮೇಲೆ ಒಂದು ಲೇಖನ ಬರೆಯಿರಿ ಅಂತ ಪುಸ್ತಕ ಕೊಟ್ರೂನು ತಿಂಗಳಾನುಗಟ್ಟಲೆ ಇಟ್ಟಕೊಂಡು ಪುಸ್ತಕ ಓದ್ತಿರಲಿಲ್ಲ.

ಬೇಗೂರು: ಮುಂದುವರೆದ ಹಾಗೆ ಒಂದು ಕೌಟುಂಬಿಕವಾದ ಪ್ರಶ್ನೆ. ಇವಾಗ ನಿಮಗೆ ಕೇಂದ್ರ ಸಾಹಿತ್ಯ ಅಕಾದೆಮಿ ಅವಾರ್ಡ್ ಬಂದಿದೆ. ನಿಮ್ಮ ಕಥೆಗಳು ಚಲನಚಿತ್ರ ಆಗಿದ್ದಾವೆ, ನಾಟಕ ಆಗಿದ್ದಾವೆ. ಅದಕ್ಕೆಲ್ಲ ಪ್ರಶಸ್ತಿಗಳು ಬಂದಿವೆ. ರಾಜ್ಯ ಸಾಹಿತ್ಯ ಅಕಾಡೆಮಿ ಅವಾರ್ಡ್ ಬಂದಿದೆ. ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಇದೆಲ್ಲ ಆಗಿ ನಿಮಗೊಂದು ಸಾಹಿತ್ಯ ವ್ಯಕ್ತಿತ್ವ ಅನ್ನೋದು ಕರ್ನಾಟಕದಲ್ಲಿ ನಿರ್ಮಾಣ ಆಗಿದೆ. ನಿಮ್ಮ ಮಕ್ಕಳು ನಿಮ್ಮ ಈ ಲಿಟರರಿ ಪರ್ಸನಾಲಿಟಿ ಬಗ್ಗೆ ಯಾವಾಗಾದರೂ ಏನಾದರೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರ?

ನುಗಡೋಣಿ: ಅಂದ್ರೆ ಏನಾಗುತ್ತೆ ಸರ್, ನಾವು ಹಳ್ಳಿಯಿಂದ ಬಂದವರು. ನಮ್ಮ ಮಕ್ಕಳು ಏನು ಅವಕ ನಾವು ಅನುಭವಿಸಿದ ಈ ಪಾಡು ಅವರಿಗೆ ಆಗಬಾರದು ಅನ್ನೋದು ನಮ್ಮದೊಂದು ಹಂಬಲ. ಮತ್ತು ಅವರು ಏನಂತ ಕೇಳಿದರೆ ಎಲ್ಲರೂ ಒಂದೊಂದು ಪ್ರವಾಹ ಹರಿತದಲ್ಲ ಏನು ಎಸ್ಸೆಲ್ಸಿ ಪಾಸ್ ಆಗಣ ಸೈನ್ಸ್ ಮಾಡಬೇಕು. ಪಿಯುಸಿ ಆಗಣ ಇಂಜಿನಿಯರಿಂಗ್, ಡಾಕ್ಟರ್ ಇನ್ನು ಒಂದು ಅಂತ ಹೋಗಿಬಿಡ್ತಿದ್ರು.

ಅವರಿಗೆ ನಮ್ಮಪ್ಪ ಕಥೆಗಾರ ಅಂತ ಗೊತ್ತು. ನನ್‌ ಕತೆ ಸಿನಿಮಾ ಆಗಿವೆ ಅಂತ ಗೊತ್ತು. ನಾಟಕ ಆಗಿವೆ ಅಂತ ಗೊತ್ತು. ಮನೆಗೆಲ್ಲ ಪ್ರಶಸ್ತಿ ಬಂದಾಗ ತಂದು ತಂದು ಇಡ್ತಾನೆ ಅನ್ನೋದು ಗೊತ್ತು. ಆದರೆ ನಮ್ಮ ದೊಡ್ಡ ಮಗ ಒಂದಿಷ್ಟು ಅವನಿಗೆ ಕನ್ನಡ ಜ್ಞಾನ ಇದೆರೀ. ನನ್ನ ಕತೆ, ಕಾದಂಬರಿಗಳನ್ನು ಓದಿ ತಿಳಿದುಕೊಳ್ಳಬಲ್ಲ. ಸಣ್ಣ ಮಗನಿಗೆ ಈ ಕನ್ನಡದ ಜ್ಞಾನ ಕಡಿಮೆ. ಇಬ್ಬರು ಆರಂಭದಿಂದ ಇಂಗ್ಲಿಷ್ ಮೀಡಿಯಂ. ನನ್ನ ಸಾಹಿತ್ಯದ ಬಗ್ಗೆ ಅವರಿಗೆ ಅಂತಹ ಅಭಿಪ್ರಾಯ ಅನ್ನೋದೇನಿಲ್ಲ. ಬರಿ ಮೆಚ್ಚುಗೆ, ಪ್ರೀತಿ ಅಷ್ಟೆ.

ಬೇಗೂರು: ಸರ್, ಈ ಕಥೆ ಬರೆಯೊ ಹಿನ್ನೆಲೆನಲ್ಲಿ ಇದು ನನ್ನ ಅನುಭವಕ್ಕೆ ಬಂದಂತಹ ಒಂದು ಬಾಳ, ಬಾಳಾ ವಿಶಿಷ್ಟವಾದಂತಹ ಸಂಗತಿ. ನನ್ನ ಸುತ್ತ ನಾನು ಕಾಣ್ತಾ ಇರುವಂತಹ ಬಹಳ ದೊಡ್ಡ ದೊಡ್ಡ ಸಾಮಾಜಿಕ ಸಮಸ್ಯೆಗಳಿದಾವೆ. ಇವನ್ನೆಲ್ಲ ನಾನು ಬರಿಬೇಕಾಗಿತ್ತು; ಯಾಕೆ ಇದರ ಬಗ್ಗೆ ನಾನು ಬರೆದಿಲ್ಲ; ಆತರ ಉಳಿದುಕೊಂಡಂತಹ ಸಂಗತಿ ಯಾವಾದರೂ ನಿಮಗೆ ಕಾಡುವಂತಹ ಸಂಗತಿ ಇದಾವಾ?

Amaresha nugudoni Ramalingappa begur2
ಅಮರೇಶ ನುಗಡೋಣಿ ಮತ್ತು ರಾಮಲಿಂಗಪ್ಪ ಟಿ. ಬೇಗೂರು

ನುಗಡೋಣಿ: ಬಹಳನೆ ಅದಾವರಿ, ಒಂದಲ್ಲ ಎರಡಲ್ಲ. ಯಾಕೆ ಅಂತಂದ್ರೆ ನಾವು ವರ್ತಮಾನದಲ್ಲಿ ಎಷ್ಟು ಇದ್ದೀವಿ ಅಲ್ವಾ ಅದಕ್ಕಿಂತಲೂ ಭೂತದಲ್ಲಿ ಹೆಚ್ಚಿದ್ದವರು. ಹಂಗಾಗಿ ಭೂತದಿಂದ ಕಳಚಿಕೊಂಡು ಅತ್ಯಂತ ಪ್ರಖರವಾದ ವರ್ತಮಾನದ ಬದುಕನ್ನು ಹಿಡಿಯುವ ಕತೆಗಾರರು ಕನ್ನಡದಲ್ಲಿ ಬಹಳ ಕಡಿಮೆ. ಅದು ಇತ್ತೀಚಿಗೆ ಅವರು ಶಿಕ್ಷಣ ಕಲಿಯುವುದಕ್ಕೆ ಬಹುಬೇಗ ನಗರ ಸೇರುತ್ತಾರೆ. ಅಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ನಗರದ ಅನುಭವಗಳನ್ನು ಬರೀತಾರೆ. ಆದರೆ ಯಾವ ರೀತಿಯ ಒಂದು ದೊಡ್ಡ ತಾತ್ವಿಕ ನೆಲೆಗಟ್ಟು ಇರಲ್ಲ. ಹಂಗಾಗಿ ಈಗ ನಾವು 40 ವರ್ಷ ಪಟ್ಟಣದಲ್ಲಿ ಕಳೆದರೂ ಕೂಡ 20 ವರ್ಷದ ಹಳೆ ಬಾಲ್ಯ ಕಾಲದ್ದನ್ನೇ ಬರೆದಿದ್ದೀವಿ. ವರ್ತಮಾನ ಬರ್ದಿಲ್ಲ. ಅಂದರೆ ಅಂತವು ಬರಿಬೇಕಾಗಿತ್ತು ಇದು ಆಗಲಿಲ್ಲ ಅನ್ನುವ ಅನೇಕ ಬಗೆಯ ವ್ಯಸನಗಳು ನನ್ನಲ್ಲಿ ಇವೆ.

ಬೇಗೂರು: ಯಾವುದಾದರೂ ಪ್ಲಾನ್ಸ್ ಇದೆಯಾ ಸರ್, ಅಂದ್ರೆ ಮುಂದೆ ನಾನು ಇದನ್ನೆಲ್ಲ ಬರೀಬೇಕು ಅಂತ ಯೋಚನೆ, ಯೋಜನೆ ಇದಾವಾ?

ನುಗಡೋಣಿ: ಅದಾವ ಸರ್ ಈಗ ಎಲ್ಲೋ ಒಂದು ಅತ್ಯಾಚಾರ ಆಗ್ತದೆ; ಎಲ್ಲೋ ಒಬ್ಬ ರೈತ ಸಾಯ್ತಾನೆ; ಎಲ್ಲೋ ಒಬ್ಬ ವ್ಯಕ್ತಿಗೆ ಶೋಷಣೆ ಆಗಿ ಬಲಿಯಾಗ್ತಾನೆ…

ಬೇಗೂರು: ಇಲ್ಲೆ ಇದ್ದಕ್ಕಿದ್ದಂಗೆ ಒಂದು ಯುದ್ಧ ಶುರುವಾಗಿ ಬಿಡುತ್ತೆ…

ನುಗಡೋಣಿ: ಹ, ಶುರುವಾಗುತ್ತೆ. ಅಲ್ಲಿ ರಕ್ತಪಾತ ಆಗುತ್ತೆ. ಇವು ಏನಾಗ್ತವಲ್ಲ ಇವು ಕಥೆಗಾರರಿಗೆ ವರದಿಗಳಾಗಿ ನಿಲುಕಬಹುದು. ಅವನ್ನು ಕಥೆಗಾರ ಅನುಭವಗಳನ್ನಾಗಿ ರೂಪಿಸಿಕೊಳ್ಳುವ ವ್ಯವಧಾನ ಬೇಕು. ಈ ವ್ಯವಧಾನ ಈ ಕಾಲದಲ್ಲಿ ಸಾಧ್ಯ ಆಗದೆ ಹೋದರೆ ಅವು ಹಂಗೆ ಕೈ ಬಿಟ್ಟು ಹೋಗ್ತವೆ. ಈಗ ನೋಡಿ ರೈತರ ಸಾವನ್ನು ಕುರಿತು ಎಷ್ಟು ಕಥೆಗಳಿವೆ ಸರ್. ಪ್ರಮಾಣ ಕಡಿಮೆ ಮತ್ತೆ ಸಾವಿರಾರು ಮಂದಿ ರೈತರು ಸತ್ತರು ಅಲ್ವಾ? ನೂರಾರು ಅತ್ಯಾಚಾರ ಆಗ್ತಾವಲ್ಲ ಸರ್ ಅವೆಲ್ಲ ಕಥೆಗಳು ಎಲ್ಲಿ ಬಂದಿವೆ? ಅವು ನಮ್ಮ ಅನುಭವ ಆಗುವ ಹಾಗೆ ನಾವು ಅವುಗಳನ್ನ ಒಳಗೆ ಎಳೆದುಕೊಳ್ಳಬೇಕು. ಎಳೆದುಕೊಂಡು ಮರುರೂಪಿಸಬೇಕು. ಇಂತಹ ವ್ಯಥೆ ಪ್ರತಿಯೊಬ್ಬ ಸೂಕ್ಷ್ಮ ಕಥೆಗಾರರಲ್ಲೂ ಇದ್ದೇ ಇರುತ್ತೆ.‌

ಬೇಗೂರು: ಸರಿ ಸರ್, ಇವತ್ತಿನ ಈ ವರ್ತಮಾನದ ಬರ್ನಿಂಗ್ ಇಶ್ಯೂಸ್ ಸುಡು ಸಮಸ್ಯೆಗಳು ಬೇಕಾದಷ್ಟಿದೆ. ಇವುಗಳನ್ನ ಕಥೆ ಕಟ್ಟೋದಕ್ಕೆ ಬರೊ ಹೊಸಬರಿಗೆ ನೀಡುವಂತ ಸಲಹೆ ಏನಾದರು ಇದಾವಾ?

ನುಗಡೋಣಿ: ಅಂದರೆ ಒಂದು ನಾನು 90ರ ದಶಕದಿಂದ ಬರೆಯೋಕೆ ಶುರು ಮಾಡಿದ್ದೀನಿ ಸರ್. ನನ್ನ ಕಿರಿಯರು ಅಂತ ಅಂದ್ರೆ ಅವರು 2000ದಿಂದ ಬರಿತಾ ಇದ್ದಾರೆ. ಆದರೆ ನಮ್ಮ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಹಲವರು ಹಿಂದೆ ಏನು ಒಂದು ದನಿಯನ್ನ ರೂಪಿಸಿಕೊಂಡು, ವಿಸ್ತರಿಸಿಕೊಂಡು ಒಂದು ಚಳವಳಿಯಾಗಿ ಬೆಳೀತಿದ್ರು; ಏನು ಜೈನ ಸಾಹಿತ್ಯ ಅಂತ ಕರೀತೀವಿ ವಚನ ಸಾಹಿತ್ಯ ತತ್ವಪದ ಸಾಹಿತ್ಯ ಇಂತಾ ಕಡೆ ನೂರಾರು ಲೇಖಕರು ಒಂದು ಆ ಕಾಲದ ಯುಗ ಧರ್ಮ ಅಂತ ಕರೆಯುವ ವಿಸ್ತಾರವಾದ ತಾತ್ವಿಕತೆಯಲ್ಲಿ ಬರೀತಾ, ಕಟ್ತಾ ಅವರವರ ಅನನ್ಯತೆಯನ್ನೂ ಉಳಿಸಿಕೊಳ್ಳುತ್ತಿದ್ದರು. ಅಂತಾ ನೂರಾರು ದನಿಗಳಲ್ಲಿ ಒಂದು ಏನೋ ಕಾಜ್‌ ಇತ್ತ್‌ ಅಲ್ವಾ… ಆ ಕಾಜ್‌ಗಾಗಿ ದುಡಿದರು ಅವ್ರು. ಆದರೆ ಈ ಬಗೆಯ ಕೂಡು ಧ್ವನಿಯಲ್ಲಿ ಮಾತನಾಡುವ ಲೇಖಕರ ಕಾಲ ಈಗ ಮುಗಿದು ಹೋಗಿದೆ ಅನ್ನಿಸ್ತಿದೆ. ಅವರು ತಮ್ಮ ಸೀಮಿತವಾದ ಅನುಭವಗಳನ್ನ ಒಂದೊಂದು ಕಥೆ, ಒಂದೊಂದು ಕವಿತೆ ಮಾಡ್ತಾ ಹೋಗ್ತಾ ಇದ್ದಾರೆ.

ಇದನ್ನು ಓದಿದ್ದೀರಾ?: ಸ್ಥಿರಚಿತ್ರಕ್ಕೆ ಚಲನೆಯ ಜೀವ: ಚಿತ್ರಕಲೆ ಮತ್ತು ಸಿನಿಮಾದ ಬೆಸುಗೆ

ಇದು ಜಾಗತೀಕರಣದ, ಉದಾರೀಕರಣದ ಫಲ ಕೂಡ ಇರಬಹುದು. ಒಂದು ಶಿಸ್ತಿನಲ್ಲಿ, ಒಂದು ವೈಚಾರಿಕತೆಯಲ್ಲಿ ಸಮುದಾಯ ಮಾತನಾಡುವುದನ್ನ ಕಲಿಸಿದರೆ ಅದು ಒಂದು ಚಳವಳಿಯಾದರೆ ಅದರಿಂದ ಏನಾದರು ಸಾಧಿಸೋದು ಅದು ಈ ಜಾಗತೀಕರಣಕ್ಕೆ ಬೇಕಾಗಿಲ್ಲದೆ ಇರಬಹುದು. ಹ ಅದಕ್ಕಾಗಿ ಇದನ್ನ ಕಾಲ ಛಿದ್ರ ಮಾಡಿರಬಹುದು.

ಬೇಗೂರು: ಅಂದರೆ ಕಾಮನ್ ಪರ್ಪಸ್ ಹಿನ್ನೆಲೆನಲ್ಲಿ ಒಂದು ಇಡೀ ಸಮುದಾಯ ದನಿಯೆತ್ತಿ ಮಾತಾಡೊ ತರಹದ ಸಂಘಟಿತವಾದ ಪ್ರಯತ್ನಗಳು ನಡಿತಾ ಇಲ್ಲ ಅಂತೀರ?

ನುಗಡೋಣಿ: ಹೌದು ನಡೀತಾ ಇಲ್ಲ. ಹಾಗೆನೆ ಹಳೆಯ ಚಳವಳಿಗಳನ್ನ ಮರು ಸ್ಥಾಪಿಸುವುದಕ್ಕೂ ಸಾಧ್ಯವಿಲ್ಲ. ಪ್ರಯತ್ನಪಟ್ಟರೂ ಅವರು ಸೋಲ್ತಾರರಿ. ಮತ್ತೆ ಆ ಕಾಮನ್ ಕಾಸ್ ಅನ್ನೋದು ಇವತ್ತಿನ ತಲೆಮಾರಿನಲ್ಲಿಯೇ ಹುಟ್ಟಬೇಕೆ ಹೊರತು; ಅದು ಯಾರೋ ಹಿಂದಿನ ತಲೆಮಾರಿನವರು ಇದನ್ನು ಕಂಡುಹಿಡಿದುಕೊಂಡು ನೀವು ಹಿಂಗೆ ಆಗಿ ಅಂತ ಹೇಳಕಾಗದು.

ಈ ವಚನ ಚಳವಳಿಯನ್ನ ಮರುಕಟ್ಟುವುದಕ್ಕೆ ಮತ್ತೆ ಕಲ್ಯಾಣ ಕಟ್ಟೋಕೆ ಸಾಧ್ಯ ಇಲ್ಲ. ಮತ್ತೆ ದಲಿತ ಬಂಡಾಯ ಸಾಧ್ಯ ಇಲ್ಲ. ಇಲ್ಲಿ ಫೀಲ್ಡಿನಲ್ಲಿ ನಿಂತ್ಕೊಬೇಕು. ಇವರ ವಯಸ್ಸಿನವರು ಎಲ್ಲ ಏನ್ಏನ್‌ ಅನುಭವಿಸುತ್ತಾ ಇದ್ದಾರೆ ಅದಕ್ಕೆ ಇವರೇ ಒಂದು ರೂಪ ಕೊಡಬೇಕು. ಪ್ರಕಾರ ಯಾವುದೇ ಇರಲಿ ಸರ್. ಕಥೆ ಇರಲಿ ನಾಟಕ ಇರಲಿ ಪ್ರಬಂಧ ಕಾದಂಬರಿ ಯಾವುದೇ ಇರಲಿ ಸರಿಯಾದ ಒಂದು ತಾತ್ವಿಕತೆ ಹೊಂದಿರಬೇಕು ಅಂತ.

ಹಾ ಸರ್‌ ಸಾಕಷ್ಟು ಮಾತಾಡಿದ್ವಿ. ಮತ್ತೊಮ್ಮೆ ಭೇಟಿಯಾಗೋಣ; ಧನ್ಯವಾದಗಳು ಸರ್.‌

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಗಾಯಕ ದೇವದಾಸಗೆ ಒಲಿದ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ

ಕರ್ನಾಟಕ ಜಾನಪದ ಅಕಾಡೆಮಿಯು 2026ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳನ್ನು ಪ್ರಕಟಿಸಿದ್ದು,...

ಬಡತನ ಮೆಟ್ಟಿ ಬಿಲ್ಲುಗಾರಿಕೆ ಒಲಿಸಿಕೊಂಡ ದೇವಮ್ಮ: ಒಲಂಪಿಕ್ಸ್‌ ಕನಸಿಗೆ ಸ್ಪೂರ್ತಿ ತುಂಬಿದ ಎಂ.ಬಿ ಪಾಟೀಲ್‌

ಬಡತನದ ನಡುವೆಯೂ ಬಿಲ್ಲುಗಾರಿಕೆಯಲ್ಲಿ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಕಲ್ಯಾಣ ಕರ್ನಾಟಕದ ಪ್ರತಿಭೆ...

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ ಲಾರೆನ್ಸ್ ಬಿಷ್ಣೋಯ್‌ವರೆಗೆ!

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ...

CJP ನಾಯಕರ ನ್ಯಾಯಾಂಗ ಬಂಧನ ವಿಸ್ತರಣೆಗೆ ಪೊಲೀಸರ ಮನವಿ; ಮ್ಯಾಜಿಸ್ಟ್ರೇಟ್ ಮುಂದೆ ಹಾಜರು

CJP ನಾಯಕರಾದ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರನ್ನು ಸೋಮವಾರ...