ದೇವರ ಬಗ್ಗೆ ಬಾಬಾ ಸಾಹೇಬರು ಬರೆದಿದ್ದೇನೆಂದು ಅಮಿತ್ ಶಾ ಓದಿದ್ದಾರಾ?

Date:

Advertisements
ದೇವ ವರ್ಗಕ್ಕೆ ಇದ್ಧ ವಿಚಿತ್ರಕಾರಿ ಅನುಕೂಲಗಳನ್ನು, ಆರ್ಯರಲ್ಲಿದ್ದ ಅರಾಜಕತೆಯನ್ನು ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರು ವಿಸ್ತೃತವಾಗಿ ದಾಖಲಿಸಿದ್ದಾರೆ.

ಈ ದೇಶದ ಗೃಹಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ನಿಂತು ಮಾತನಾಡುತ್ತಾ, ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಭರದಲ್ಲಿ, ‘ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎನ್ನುವುದು ಒಂದು ರೀತಿ ವ್ಯಸನ ಆಗಿಬಿಟ್ಟಿದೆ. ಇಷ್ಟು ಸಲ ದೇವರ ಹೆಸರನ್ನು ಹೇಳಿದ್ದರೆ, ಏಳೇಳು ಜನ್ಮದಲ್ಲೂ ಸ್ವರ್ಗ ಸಿಗುತ್ತಿತ್ತು’ ಎಂದಿರುವುದು ವಿವಾದ ಸೃಷ್ಟಿಸಿರುವ ಹೊತ್ತಲ್ಲೇ ‘ಮನುಸ್ಮೃತಿ ದಹನ ದಿನ’ವೂ ಬಂದಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು 1927ರ ಡಿಸೆಂಬರ್ 25ರಂದು ‘ಮನುಸ್ಮೃತಿ’ಯನ್ನು ಸಾರ್ವಜನಿಕವಾಗಿ ದಹಿಸಿದ್ದರು. ಆ ಚಾರಿತ್ರಿಕ ವಿದ್ಯಮಾನಕ್ಕೆ 97 ವರ್ಷಗಳಾದ ಈ ವೇಳೆ ಸಂಸತ್ತಿನಲ್ಲಿ ಅಂಬೇಡ್ಕರ್ ವಿರೋಧಿ ಮಾತುಗಳು ಹೊರಹೊಮ್ಮಿವೆ.

ಅಮಿತ್ ಶಾ ಅವರು ದೇವರ ಪ್ರಸ್ತಾಪ ಮಾಡಿರುವುದನ್ನು ನೋಡಿದ ತಕ್ಷಣ, ಬಾಬಾ ಸಾಹೇಬರು ದೇವರ ಬಗ್ಗೆ ಬರೆದ ಟಿಪ್ಪಣಿಗಳು ನೆನಪಾದವು. ಚರಿತ್ರೆಯನ್ನು ಒಳಗಣ್ಣಿನಿಂದ ನೋಡಿದ ಅಂಬೇಡ್ಕರರು, ‘ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ’ ಕೃತಿಯಲ್ಲಿ ಹಲವು ಮಹತ್ವದ ಸಂಗತಿಗಳನ್ನು ದಾಖಲಿಸಿ, ಹೊಸ ಸಂಚಲನವನ್ನು ಉಂಟು ಮಾಡಿದರು. ”ಭಾರತದ ಚರಿತ್ರೆಯೆಂದರೆ ಬೌದ್ಧ ಧರ್ಮ ಮತ್ತು ಬ್ರಾಹ್ಮಣ ಧರ್ಮದ ನಡುವೆ ನಡೆದ ಮಾರಕ ಕಾಳಗದ ಚರಿತ್ರೆಯೇ ಆಗಿದೆ” ಎಂದಿದ್ದ ಅವರು, ಬೌದ್ಧ ಸಾಹಿತ್ಯದ ತುಲನೆಯೊಂದಿಗೆ ವೈದಿಕ ಸಾಹಿತ್ಯವನ್ನು ಡೀಕೋಡ್ ಮಾಡುತ್ತಾ ಹೋಗುತ್ತಾರೆ.

”ದೇವ ಎಂಬುವರು ಮಾನವ ಜೀವಿಗಳ ಒಂದು ಸಮುದಾಯ ಎಂಬುದನ್ನು ಬೌದ್ಧಸಾಹಿತ್ಯವು ತೋರಿಸುತ್ತದೆ. ಅನೇಕ ಜನ ದೇವರು ಬುದ್ಧನನ್ನು ಕಂಡು ತಮ್ಮ ಸಂಶಯಗಳನ್ನೂ ಸಂಕಷ್ಟಗಳನ್ನೂ ನಿವಾರಿಸಿಕೊಂಡಿದ್ದಾರೆ. ದೇವರು ಮನುಷ್ಯರಲ್ಲದೇ ಹೋಗಿದ್ದರೆ ಇದು ಹೇಗೆ ಸಾಧ್ಯ?” ಎಂದು ಪ್ರಶ್ನಿಸುತ್ತಾರೆ ಬಾಬಾ ಸಾಹೇಬರು (ಕ್ರಾಂತಿ ಮತ್ತು ಪ್ರತಿಕ್ರಾಂತಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬರೆಹಗಳು ಮತ್ತು ಭಾಷಣಗಳು, ಸಂಪುಟ 3, ಪು.ಸಂ.166).

Advertisements

”ದೇವ ಪದದ ಜೊತೆಗೆ ಯಕ್ಷ, ಗಣ, ಗಂಧರ್ವ, ಕಿನ್ನರ ಈ ಹೆಸರುಗಳೂ ಕಂಡುಬರುತ್ತವೆ. ಅವರೆಲ್ಲ ಯಾರು? ‘ಮಹಾಭಾರತ’ ಮತ್ತು ‘ರಾಮಾಯಣ’ ಓದಿದಾಗ ಇವರೆಲ್ಲರೂ ಕಾಲ್ಪನಿಕ ಜೀವಿಗಳಿರಬೇಕೆಂಬ ಭಾವನೆ ಬರುತ್ತದೆ. ಆದರೆ ಯಕ್ಷ, ಗಣ, ಗಂಧರ್ವ, ಕಿನ್ನರರು ನಿಜವಾದ ಮಾನವ ಕುಲದ ಸದಸ್ಯರು. ಅವರೆಲ್ಲ ದೇವ ಎಂಬ ಜನರ ಊಳಿಗದಲ್ಲಿರುವವರು. ಯಕ್ಷರು ಅರಮನೆಗಳನ್ನು ಕಾಯುತ್ತಿದ್ದವರು. ಗಣ ಎಂಬುವರು ದೇವರ ಕಾವಲಿನವರು. ಗಂಧರ್ವರು ತಮ್ಮ ಸಂಗೀತ ಮತ್ತು ನೃತ್ಯದಿಂದ ದೇವರನ್ನು ರಂಜಿಸುತ್ತಿದ್ದರು. ಕಿನ್ನರರು ಕೂಡ ದೇವರ ಊಳಿಗದಲ್ಲಿದ್ದವರು” ಎಂದು ವಿವರಿಸುತ್ತಾರೆ (ಬರಹ- ಭಾಷಣ, ಸಂ.3, ಪು.ಸಂ.165). ದೇವರು ಎಂಬುದು ಒಂದು ‘ಪದವಿ’ ಅಥವಾ ಬೌದ್ಧಪೂರ್ವ ಆರ್ಯ ಸಮಾಜದಲ್ಲಿನ ‘ಬ್ರಾಹ್ಮಣ ಮೇಲ್ವರ್ಗ’ ಎಂಬುದನ್ನು ವಿಸ್ತೃತವಾಗಿ ಇಲ್ಲಿ ವಿಶ್ಲೇಷಿಸುತ್ತಾರೆ.

ಗೌತಮ ಬುದ್ಧರು ಹುಟ್ಟುವ ಮುನ್ನ, ಪ್ರಾಚೀನ ಭಾರತದ ವ್ಯವಸ್ಥೆ ಹೇಗಿತ್ತು ಎಂಬುದನ್ನು ಬಾಬಾ ಸಾಹೇಬರು ವಿವರಿಸಿದ್ದಾರೆ. ಪಗಡೆಯಾಟದ ಮೋಜು ಮಿತಿ ಮೀರಿತ್ತು. ಜೂಜುಮನೆಗಳಿಗೆ ರಾಜರಿಂದ ಪರವಾನಗಿ ಇತ್ತು. ದ್ರೌಪದಿಯನ್ನು ಪಾಂಡವರು ಜೂಜಿನಲ್ಲಿ ಸೋತಿದ್ದು ಇದಕ್ಕೊಂದು ಬಹುದೊಡ್ಡ ಉದಾಹರಣೆ. ಸುರಪಾನ, ಸೋಮಪಾನ ಆರ್ಯ ಸಮಾಜದ ಸ್ವಾಸ್ಥ್ಯವನ್ನು ಹದಗೆಡಿಸಿತ್ತು. ವೈವಾಹಿಕ, ಲೈಂಗಿಕ ಬಾಂಧವ್ಯಗಳು ಚಿತ್ರವಿಚಿತ್ರವಾಗಿದ್ದವು. ತಂದೆ- ಮಗಳನ್ನೇ ಮದುವೆಯಾಗಬಹುದಿತ್ತು. ಅದಕ್ಕೆ ಅಂಬೇಡ್ಕರರು ಕೊಡುವ ಉದಾಹರಣೆ- ”ವಶಿಷ್ಠನು ತನ್ನ ಮಗಳಾದ ಶತ್ರಪಳು ಪ್ರಾಯಕ್ಕೆ ಬಂದಾಗ ಅವಳನ್ನು ಮದುವೆಯಾದನು. ಮನುವು ತನ್ನ ಮಗಳಾದ ಇಳಾಳನ್ನು ಮದುವೆಯಾದನು. ಜಹ್ನುವು ತನ್ನ ಮಗಳಾದ ಜಾಹ್ನವಿಯನ್ನು ಮದುವೆಯಾದನು. ಸೂರ್ಯನು ತನ್ನ ಮಗಳಾದ ಉಷಾಳನ್ನು ಮದುವೆಯಾದನು” (ಸಂಪುಟ 3, ಪುಟ ಸಂಖ್ಯೆ 169). ಆ ಕಾಲದಲ್ಲಿ ಬಹುಪತಿತ್ವ ಆಚರಣೆಯಲ್ಲಿತ್ತು. ಅಜ್ಜನು ತನ್ನ ಮೊಮ್ಮಗಳನ್ನೇ ಮದುವೆಯಾಗುವ ಉದಾಹರಣೆಗಳೂ ಇದ್ದವು. ಇಂತಹ ಅನೇಕ ವಿಚಾರಗಳು ಕ್ರಾಂತಿ ಮತ್ತು ಪ್ರತಿಕ್ರಾಂತಿ ಪ್ರಬಂಧದಲ್ಲಿವೆ. ಕರ್ನಾಟಕ ಸರ್ಕಾರ ಅನುವಾದಿಸಿ ಪ್ರಕಟಿಸಿರುವ ‘ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು’ ಸರಣಿಯ ಸಂಪುಟ ಮೂರನ್ನು ಹೆಚ್ಚಿನ ಓದಿಗಾಗಿ ಗಮನಿಸಬಹುದು.

ಬೌದ್ಧ ಪೂರ್ವ ಕಾಲದಲ್ಲಿ ಆರ್ಯರಲ್ಲಿ ಕೆಲಮಟ್ಟಿಗೆ ಹೆಂಗಸರನ್ನು ಇತರರ ಉಪಯೋಗಕ್ಕೆ ಕೊಡುವ ಪದ್ಧತಿ ಚಾಲ್ತಿಯಲ್ಲಿತ್ತು ಎನ್ನುತ್ತಾರೆ ಅಂಬೇಡ್ಕರ್. ಯಯಾತಿ ರಾಜನು ತನ್ನ ಮಗಳಾದ ಮಾಧವಿಯನ್ನು ತನ್ನ ಗುರು ಗಾಲವನಿಗೆ ಕಾಣಿಕೆಯಾಗಿ ಕೊಟ್ಟಿದ್ದನ್ನು ಉಲ್ಲೇಖಿಸುತ್ತಾ, ‘ಆ ಗಾಲವನು ಮಾಧವಿಯನ್ನು ಮೂವರು ರಾಜರಿಗೆ ಎರವಲು ಕೊಟ್ಟನು, ಆನಂತರ ಅವಳನ್ನು ಅವನು ವಿಶ್ವಾಮಿತ್ರನಿಗೆ ಮದುವೆ ಮಾಡಿಕೊಟ್ಟನು. ಅವಳು ತನಗೆ ಒಂದು ಒಂದು ಗಂಡುಮಗು ಹುಟ್ಟುವತನಕ ಅವನೊಡನೆ ಇದ್ದಳು. ತದನಂತರ ಗಾಲವನು ಆ ಹೆಣ್ಣನ್ನು ಮತ್ತೆ ಅವಳ ತಂದೆ ಯಾಯಾತಿಗೆ ಮರಳಿಸಿದನು’ ಎಂದು ಬರೆಯುತ್ತಾರೆ.

ಮತ್ತೆ ದೇವರ ವಿಚಾರಕ್ಕೆ ಬರುವುದಾದರೆ, ದೇವ ವರ್ಗಕ್ಕೆ ಇದ್ದ ವಿಚಿತ್ರಕರ ಅನುಕೂಲಗಳನ್ನು ನೋಡಬೇಕು. ದೇವ ಪದವಿ ಹೊಂದಿದ್ದವರು ಆರ್ಯಕುಲದಲ್ಲಿ ಪ್ರಭಾವಶಾಲಿಗಳಾಗಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಇದಕ್ಕೆ ಪೂರಕವಾಗಿ ಆರ್ಯರಲ್ಲಿದ್ದ ಮತ್ತೊಂದು ಪದ್ಧತಿಯನ್ನು ಉಲ್ಲೇಖಿಸುತ್ತಾರೆ ಬಾಬಾ ಸಾಹೇಬರು: ”ಅದೇನೆಂದರೆ, ಆರ್ಯರಲ್ಲಿ ಶ್ರೇಷ್ಠರೆನಿಸಿಕೊಳ್ಳುವ ಗಂಡಸರಿಂದ ಹೆಂಗಸು ಸಂತಾನ ಪಡೆಯಲು ಅನುಮತಿ ಕೊಡುವುದು. ಕುಟುಂಬವನ್ನು ಬೆಳೆಸುವುದೆಂದರೆ ಅವರು ದನಗಳ ತಳಿ ತಯಾರು ಮಾಡಿದಂತೆ ಅಥವಾ ಸಂತಾನ ವೃದ್ಧಿ ಮಾಡಿದಂತೆ ಎಂದು ತಿಳಿಯುತ್ತಿದ್ದರು. ಆರ್ಯರಲ್ಲಿ ದೇವ ಎಂಬ ಜನರ ವರ್ಗವಿತ್ತು. ಅವರು ಆರ್ಯರೇ ಇದ್ದರೂ ಅವರ ಸ್ಥಾನ ಮತ್ತು ಶ್ರೌರ್ಯ ಹೆಚ್ಚಿನದೆಂದು ತಿಳಿಯಲಾಗುತ್ತಿತ್ತು. ಉತ್ತಮ ಸಂತಾನ ಪಡೆಯುವ ಉದ್ದೇಶದಿಂದ ಆರ್ಯರು ತಮ್ಮ ಸ್ತ್ರೀಯರು ದೇವ ವರ್ಗದ ಬೇಕಾದ ಗಂಡಸನ್ನು ಸಂಭೋಗಿಸಲು ಅನುಮತಿ ಕೊಡುತ್ತಿದ್ದರು. ಈ ಪದ್ಧತಿ ಎಷ್ಟು ವ್ಯಾಪಕವಾಗಿ ಪ್ರಚಲಿತವಾಗಿತ್ತೆಂದರೆ ಆರ್ಯ ಸ್ತ್ರೀಯರ ಕನ್ಯತ್ವ ಹರಣವು ತಮಗಾಗಿಯೇ ಕಾಯ್ದಿರಿಸಿದ ಹಕ್ಕೆಂದು ದೇವ ವರ್ಗದವರು ತಿಳಿಯುತ್ತಿದ್ದರು. ಈ ಕನ್ಯತ್ವದ ಹಕ್ಕನ್ನು ದೇವರು ಚಲಾಯಿಸದೆ ಹೋದರೆ ಹಾಗೂ ತಾಂತ್ರಿಕವಾಗಿ ಅವದಾನ ಎಂದು ಕರೆಸಿಕೊಳ್ಳುವ ಕಾಣಿಕೆಯನ್ನು ಅವರಿಗೆ ಕೊಟ್ಟು ದೇವಜನರ ನಿಯಂತ್ರಣದಿಂದ ಮುಕ್ತರಾಗದೇ ಹೋದರೆ ಯಾವ ಆರ್ಯ ಸ್ತ್ರೀಯೂ ಮದುವೆಯಾಗುವಂತಿರಲಿಲ್ಲ” ಎಂದು ದಾಖಲಿಸುತ್ತಾರೆ (ಸಂಪುಟ 3. ಪು.ಸಂ. 189).

ಇದನ್ನೂ ಓದಿರಿ: ಮಾಧ್ಯಮಗಳ ಪಕ್ಷಪಾತಿ ಧೋರಣೆ ಮತ್ತೆ ಅನಾವರಣ; ಸಿ.ಟಿ.ರವಿಗೆ ಇಷ್ಟೊಂದು ಪ್ರಚಾರ ನೀಡಬೇಕಿತ್ತೆ?

ಆರ್ಯಕಾಲದಲ್ಲಿ ವ್ಯಭಿಚಾರ ಸಹಜವಾಗಿತ್ತು. ಬಯಲಿನಲ್ಲಿ ಸಂಭೋಗಗಳು ನಡೆಯುತ್ತಿದ್ದವು. ಮದ್ಯದ ಸೇವನೆ ಮಿತಿಮೀರಿತ್ತು. ಯಜ್ಞ ಯಾಗಾದಿಗಳ ನೆಪದಲ್ಲಿ ನರಬಲಿಯೂ ನಡೆಯುತ್ತಿತ್ತು. ಸಾವಿರಾರು ಪ್ರಾಣಿಗಳ ಮಾರಣಹೋಮ ಆಗುತ್ತಿತ್ತು. ಭವಿಷ್ಯ ಹೇಳುವ ನೆಪದಲ್ಲಿ ಜನರನ್ನು ಹೆದರಿಸಲಾಗುತ್ತಿತ್ತು. ಹೀಗೆ ಸಮಾಜ ಅಂಧಕಾರದಲ್ಲಿದ್ದಾಗ, ಆರ್ಯ ಸಮಾಜ ಲೋಲುಪತೆಯಲ್ಲಿ ಮುಳುಗಿದ್ದಾಗ, ಗೌತಮ ಬೌದ್ಧನು ಹೊಸ ಬೆಳಕನ್ನು ಚೆಲ್ಲಿದನು. ಆತನ ವಿಚಾರಗಳು ಪ್ರಖರವಾಗಿದ್ದರಿಂದ ಜನ ಸಹಜವಾಗಿ ಬೌದ್ಧಧಮ್ಮದತ್ತ ಹೊರಳಿದರು. ಇದೆಲ್ಲವನ್ನೂ ತಮ್ಮ ಬರಹದಲ್ಲಿ ದಾಖಲಿಸುವ ಅಂಬೇಡ್ಕರ್, ಬೌದ್ಧಕಾಲದಲ್ಲಿ ಆದ ಕ್ರಾಂತಿಯನ್ನು, ಪುಷ್ಯಶುಂಗನ ಕಾಲದಲ್ಲಿ ಬ್ರಾಹ್ಮಣರು ಮಾಡಿದ ಪ್ರತಿಕ್ರಾಂತಿಯನ್ನು ವಿವರಿಸುತ್ತಾರೆ. ಪುಷ್ಯಶುಂಗನ ಅವಧಿಯಲ್ಲಿ ಮನುಸ್ಮೃತಿ ರಚನೆಯಾಗುತ್ತದೆ. ಚಲನೆಯೇ ಇಲ್ಲದ ಸ್ಥಿರವಾದ ಸಮಾಜವನ್ನು ಮನುಸಂವಿಧಾನ ರೂಪಿಸುತ್ತದೆ.

‘ಬ್ರಾಹ್ಮಣ ಧರ್ಮದ ದಿಗ್ವಿಜಯ’ ಎಂಬ ಬರಹದಲ್ಲಿ ಬಾಬಾ ಸಾಹೇಬರು ‘ಮನುಸ್ಮೃತಿ’ ಜಾರಿಯಾದ ರೀತಿಯನ್ನು ವಿವರಿಸುತ್ತಾರೆ. ‘ಸುಮತಿ ಭಾರ್ಗವ’ ಎಂಬ ವ್ಯಕ್ತಿ ‘ಮನುಸ್ಮೃತಿ’ಯನ್ನು ಬರೆಯುತ್ತಾನೆ. ‘ಮನು’ ಎಂಬುದು ಸುಮತಿ ಭಾರ್ಗವ ಕಟ್ಟಿಕೊಂಡ ಸುಳ್ಳು ಹೆಸರು ಎನ್ನುವ ಅಂಬೇಡ್ಕರರು, ‘ಕೆಲವು ಪ್ರಶ್ನಾತೀತ ವಿದ್ವಾಂಸರ ಪ್ರಕಾರ- ಸುಮತಿ ಭಾರ್ಗವನು- ಉದ್ದೇಶಪೂರ್ವಕವಾಗಿ ‘ಮನುಸ್ಮೃತಿ’ ಎಂದು ಕರೆದುಕೊಂಡ ಈ ಸಂಹಿತೆಯನ್ನು- ಕ್ರಿ.ಪೂ. 170ರಿಂದ 150ರವರೆಗಿನ ಅವಧಿಯಲ್ಲಿ ರಚಿಸಿರಬೇಕು. ಆಗ ಪುಷ್ಯಶುಂಗನ ಬ್ರಾಹ್ಮಣ ಕ್ರಾಂತಿ ಕ್ರಿಸ್ತಪೂರ್ವ 185ರಲ್ಲಿ ಜರುಗಿತೆಂಬುದನ್ನು ಮನಸ್ಸಿನಲ್ಲಿಟ್ಟುಕೊಂಡರೆ, ಮೌರ್ಯರ ಬೌದ್ಧ ಸಾಮ್ರಾಜ್ಯದ ವಿರುದ್ಧ ಜರುಗಿದ ಬ್ರಾಹ್ಮಣ ಕ್ರಾಂತಿಯ ತತ್ವಗಳನ್ನು ಅಡಕವಾಗಿಸಿಕೊಂಡ ಮನುಸ್ಮೃತಿಯನ್ನೂ ಆತನೇ ಜಾರಿಗೆ ತಂದ ಎಂಬುದರಲ್ಲಿ ಅನುಮಾನ ಉಳಿಯುವುದಿಲ್ಲ’ ಎನ್ನುತ್ತಾರೆ (ಬ್ರಾಹ್ಮಣ ಧರ್ಮದ ದಿಗ್ವಿಜಯ- ಅಂಬೇಡ್ಕರ್, ಅನು: ಎನ್.ಎಸ್.ಶಂಕರ್, ಪು.17).

ಮನುಸ್ಮೃತಿಕಾರ ತಂದ ಪ್ರತಿಗಾಮಿ ಕಾನೂನುಗಳು ಚರಿತ್ರೆಯುದ್ದಕ್ಕೂ ಚರ್ಚೆಗೆ ಒಳಪಟ್ಟಿವೆ. ಬೌದ್ಧಪೂರ್ವ ಸಮಾಜದಲ್ಲಿ ವರ್ಣ ವ್ಯವಸ್ಥೆ ಇದ್ದಾಗಲೂ ಒಂದು ಮಟ್ಟಿಗಿನ ಚಲನೆ ಇತ್ತು. ವರ್ಣವನ್ನು ನಿರ್ಧರಿಸುವ ವ್ಯವಸ್ಥೆ ಇತ್ತು. ಹೀಗಾಗಿ ಯಾವುದೇ ವ್ಯಕ್ತಿ ಯಾವುದೇ ವರ್ಣಕ್ಕೆ ಹೋಗಬಹುದಿತ್ತು. ವರ್ಣ ಮತ್ತು ಜಾತಿಗಳ ನಡುವಿನ ಗೆರೆ ಬಹಳ ತೆಳುವಾಗಿತ್ತು ಎಂದು ಅಭಿಪ್ರಾಯಪಡುವ ಅಂಬೇಡ್ಕರರು, ವರ್ಣವನ್ನು ಮನು ಹೇಗೆ ಜಾತಿಗಳನ್ನಾಗಿ ಸ್ಥಿತ್ಯಂತರ ಮಾಡಿದ ಮತ್ತು ಜಾತಿ ವ್ಯವಸ್ಥೆಯನ್ನು ಸ್ಥಿರವಾಗಿಸಿದ ಎಂಬುದನ್ನು ಬಯಲಿಗೆಳೆಯುತ್ತಾರೆ. ಅದಕ್ಕೊಂದು ಉದಾಹರಣೆ ನೋಡುವುದಾದರೆ ಉಪನಯನ ಪದ್ಧತಿ. ಮಕ್ಕಳಿಗೆ ತರಬೇತಿ ಮುಗಿದ ಮೇಲೆ ಗುರುವು ಆ ಮಗುವಿನ ವರ್ಣವನ್ನು ನಿರ್ಧರಿಸುವ ಗುರುಕುಲ ಪದ್ಧತಿಯನ್ನು ಮನು ರದ್ದು ಮಾಡುತ್ತಾನೆ. ‘ಪ್ರಾಚೀನ ಕಾಲದಲ್ಲಿ ಉಪನಯನವೆಂದರೆ, ಯಾವುದೇ ವರ್ಣವೃತ್ತಿಯಲ್ಲಿ ನೈಪುಣ್ಯದ ಪದವಿ ಪ್ರಮಾಣಪತ್ರವನ್ನು ಗುರುವು ಶಿಷ್ಯರಿಗೆ ನೀಡುವ ಘಟಿಕೋತ್ಸವ ಸಮಾರಂಭದಂತಿತ್ತು. ಮನು ಇದನ್ನು ಬದಲಿಸುತ್ತಾನೆ. ತರಬೇತಿಯ ನಂತರ ಉಪನಯನ ನೀಡುತ್ತಿದ್ದ ವ್ಯವಸ್ಥೆಯಲ್ಲಿ, ಉಪನಯನದ ನಂತರ ತರಬೇತಿಯನ್ನು ಮನು ಜಾರಿಗೆ ತರುತ್ತಾನೆ. ತಂದೆಯೇ ಮಗುವಿನ ವರ್ಣ ನಿರ್ಧಾರ ಮಾಡುವಂತಾಗುತ್ತದೆ. ಅಂದರೆ ತಂದೆಯೇ ಮಗುವಿನ ಉಪನಯನ ಮಾಡುವಂತಾಗುತ್ತದೆ. ತಂದೆಯು ಸಹಜವಾಗಿ ತನ್ನ ಮಗುವಿಗೆ ತನ್ನ ವರ್ಣವನ್ನೇ ಕೊಡುವ ಮೂಲಕ ವರ್ಣವನ್ನು ಅನುವಂಶೀಯಗೊಳಿಸುತ್ತಾನೆ. ಹುಟ್ಟಿನೊಂದಿಗೆ ಜಾತಿಯನ್ನು, ಅಸಮಾನತೆಯನ್ನು ಮನು ಥಳುಕು ಹಾಕಿದ್ದು ಹೀಗೆ. ಹುಟ್ಟಿನಿಂದ ಯಾರು ಯಾವ ವರ್ಣಕ್ಕಾದರೂ ಹೋಗಬಹುದು ಎಂದು ವಾದ ಮಾಡುವವರು ಇಂದು ಸಿಗುತ್ತಾರೆ. ಆದರೆ ಮನುಕಾಲದಲ್ಲೇ ವರ್ಣ ನಿರ್ಣಯವನ್ನು ಜಡವಾಗಿಸಿ ಜಾತಿಯ ಗೂಟವಾಗಿ ಬಡಿದಾಗಿರುವುದನ್ನು ‘ಮನುವಾದಿ’ಗಳು ಒಪ್ಪುವುದಿಲ್ಲ.

ಇದನ್ನೂ ಓದಿರಿ: ಮನುವಾದ ದಹಿಸಲಿ, ಸಂವಿಧಾನ ಬೆಳಗಲಿ

ಮನು ಚಲನೆ ಇಲ್ಲದ ವರ್ಣವ್ಯವಸ್ಥೆಗೆ ಬೇಕಾದ ಎಲ್ಲ ಕಾನೂನುಗಳನ್ನು ರೂಪಿಸುತ್ತಾನೆ. ಅಂತರ್ ವರ್ಣೀಯ ವಿವಾಹಗಳನ್ನು ನಿಷೇಧಿಸುತ್ತಾನೆ. ಸ್ತ್ರೀಯರ ಮೇಲೆ ನಿರ್ಬಂಧಗಳನ್ನು ಹೇರುತ್ತಾನೆ. ಶೂದ್ರರು ಗುಲಾಮಗಿರಿ ಮಾಡಲಷ್ಟೇ ಎಂದು ಶಾಸನ ಬರೆಯುತ್ತಾನೆ. ಮನುಸ್ಮೃತಿಯನ್ನು ಓದುತ್ತಾ ಹೋದರೆ ಹುಚ್ಚುಹಿಡಿಯುವಷ್ಟು ವಿಚಿತ್ರ ನೀತಿ, ನಿಯಮಗಳು ನಮಗೆ ಕಾಣಿಸುತ್ತವೆ. ಹೀಗಾಗಿಯೇ ಬಾಬಾ ಸಾಹೇಬರು ಈ ಮನುಸ್ಮೃತಿಯನ್ನು ಸಾರ್ವಜನಿಕವಾಗಿ ಸುಟ್ಟು ಹಾಕುತ್ತಾರೆ. ಆದರೆ ಮನುಸ್ಮೃತಿಯ ಅಂಶಗಳು ನಮ್ಮ ಸಂವಿಧಾನದಲ್ಲಿ ಇಲ್ಲ ಎಂದು ಆರ್‌ಎಸ್‌ಎಸ್ ಬಡಬಡಾಯಿಸಿತ್ತು. ಇದಕ್ಕೆ ಆರ್‌ಎಸ್‌ಎಸ್ ಇಂದಾದರೂ ಉತ್ತರಿಸುತ್ತಾ?

ದೇವರ ಸ್ಥಾನಮಾನದಲ್ಲಿದ್ದ ವರ್ಗದವರಿಗೆ ಮನು ಒಂದು ಸ್ಥಿರವಾದ ಪ್ರಿವಿಲೇಜ್ ಒದಗಿಸಿಕೊಟ್ಟನು. ಅಕ್ಷರಗಳು ಬ್ರಾಹ್ಮಣರಿಗೆ ಮಾತ್ರ ಎಂದು ಕಟ್ಟಲೆ ರೂಪಿಸಿದನು. ದೇವರ ಸ್ಥಾನದಲ್ಲಿದ್ದ ಜನರು ಮನುಸಂಹಿತೆಯ ಮೂಲಕ ಇನ್ನುಳಿದ ಜನವರ್ಗದ ಮೇಲೆ ದಬ್ಬಾಳಿಕೆ ಮಾಡುತ್ತಾ ಹೋದರು ಎಂಬುದನ್ನು ಬಾಬಾ ಸಾಹೇಬರ ಬರಹಗಳು ಬಯಲಿಗೆಳೆಯುತ್ತಿವೆ.

ಮುಚ್ಚಿಟ್ಟ ಇತಿಹಾಸವನ್ನು ಮರುಕಟ್ಟುವ ಪ್ರಯತ್ನ ಮಾಡಿದ ಅಂಬೇಡ್ಕರರ ಮೇಲೆ ದ್ವೇಷಕಾರುವ ಪ್ರವೃತ್ತಿಯನ್ನು ಸನಾತನ ಧರ್ಮದ ಪ್ರತಿಪಾದಕರು ಮೊದಲಿನಿಂದಲೂ ಮಾಡುತ್ತಾ ಬಂದಿದ್ದಾರೆ. ಹೀಗಾಗಿ ಅಂಬೇಡ್ಕರರ ವಿಚಾರಗಳನ್ನು ಮತ್ತೆ ಮತ್ತೆ ಮನನ ಮಾಡಿಕೊಂಡು, ಹೆಚ್ಚು ಮಾತನಾಡುವುದೇ ಇದಕ್ಕೆಲ್ಲ ಪರಿಹಾರ. ‘ಇತಿಹಾಸವನ್ನು ಓದದವರು ಇತಿಹಾಸ ಸೃಷ್ಟಿಸಲಾರರು’ ಎಂದು ಬಾಬಾಸಾಹೇಬರು ಹೇಳಿದ ಮಾತು ಬಹುಜನರಿಗೆ ಎಚ್ಚರಿಕೆಯೂ ಹೌದು.

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

2 COMMENTS

  1. Dr.B.R.Ambedkar dalitha samudayakke anukoolavaguva hage samvidana baredhiddare antha sumaru janara vada ide.inthavarige arthavaguva hage thilisi.thanks.namasthe sir.

  2. ವಿಶ್ವ ದಾರ್ಶನಿಕ ಅಂಬೇಡ್ಕರರನ್ನು ಬಾವಿ ಕಪ್ಪೆಗಳಾದ ಮನುವಾದಿಗಳಿಗೆ ಅರ್ಥ ಮಾಡಿಸುವುದು ದುಷ್ಕರವಾದ ಕೆಲಸ ಸರ್. ಅವು ಒಂಥರಾ ಸ್ಯೆಕಿಕ್ ಗಳು. ಅಂತಹ ಸ್ಯೆಕಿಕ್ ಗಳ ಗುಲಾಮರಿಗೆ ಇದನ್ನು ತಿಳಿ ಹೇಳುವುದು ಇನ್ನೂ ಕಷ್ಟದ ಕೆಲಸ. ಆದರೂ ಸಹ ನಾವೂ ಜನರ ಮುಂದೆ ನಿಂತು ಇಂತಹ ವಿಚಾರಗಳನ್ನು ನಿರಂತರವಾಗಿ ಮಂಡಿಸುತ್ತಲೇ ಹೋಗಬೇಕು.

    ಧನ್ಯವಾದಗಳು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X