"ಯಾರು ಕೇಳದೆಯೂ ದಾವಣಗೆರೆಯ ಯುವಜನೋತ್ಸವದಲ್ಲಿ ಮಾಂಸಾಹಾರ ಇರಲಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಇದು ಸ್ವಾಗತಾರ್ಹ. ಅಲ್ಲಿ ತಪ್ಪದೇ ಸಸ್ಯಾಹಾರವೂ ಇರಲಿ ಎಂದು ನಾವು ಮನವಿ ಮಾಡುತ್ತೇವೆ"
‘ಸಾವಿರ ಮೈಲಿಯ ಪಯಣಕೂ ಒಂದೇ ಹೆಜ್ಜೆಯ ಆರಂಭ…’ ಇದು ಅರ್ಥಪೂರ್ಣ ಹೋರಾಟದ ಗೀತೆಯೊಂದರ ಸಾಲು. ಮಂಡ್ಯದಲ್ಲಿ ಮುನ್ನೆಲೆಗೆ ಬಂದ ಆಹಾರ ಹಕ್ಕಿನ ಪ್ರಶ್ನೆಯು ಕ್ರಾಂತಿಕಾರಕ ಬದಲಾವಣೆಗೆ ನಾಂದಿ ಹಾಡಿದೆ ಎಂಬುದು ಈಗ ಸ್ಪಷ್ಟವಾಗುತ್ತಿದೆ- ಮಂಡ್ಯ ಇಟ್ಟ ಹೆಜ್ಜೆ ಸರಿಯಾದ ದಿಕ್ಕು ತೋರಿಸಿದೆ. ಮಾಂಸಾಹಾರ ಕೀಳಲ್ಲ, ಹಾಗಾಗಿ ಸಸ್ಯಾಹಾರದ ಜೊತೆಗೆ ಮಾಂಸಾಹಾರವನ್ನೂ ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ವಿತರಿಸಬೇಕು ಎಂಬ ಹೋರಾಟ ತಾರ್ಕಿಕ ಅಂತ್ಯ ತಲುಪಿದ್ದು ನಮಗೆಲ್ಲ ಗೊತ್ತಿದೆ. ಈಗ ಅದರ ಮುಂದುವರಿದ ಭಾಗವಾಗಿ ಬದಲಾವಣೆಗಳು ಗೋಚರಿಸಿವೆ. ಜನವರಿ 5ರಿಂದ ದಾವಣಗೆರೆಯಲ್ಲಿ ನಡೆಯುವ ರಾಜ್ಯಮಟ್ಟದ ಯುವಜನೋತ್ಸವದಲ್ಲಿಯೂ ಮಾಂಸಾಹಾರ ನೀಡುವುದಾಗಿ ಅಲ್ಲಿನ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಅಂದರೆ ಇದು ಆಹಾರ ಸಮಾನತೆಯೆಡೆಗಿನ ಮತ್ತೊಂದು ದೃಢ ಹೆಜ್ಜೆಯಾಗಿದ್ದು, ಇದರ ಶ್ರೇಯಸ್ಸು ಮಂಡ್ಯದಲ್ಲಿ ದನಿಯೆತ್ತಿದವರಿಗೆ ಸಲ್ಲಬೇಕಾಗಿದೆ.
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟವೂ ಇರಬೇಕೆನ್ನುವುದು ವಿಶಾಲ ಅರ್ಥದ ಹೋರಾಟವಾಗಿತ್ತು. ಬ್ರಾಹ್ಮಣ್ಯದ ಯಾಜಮಾನ್ಯವನ್ನು ಪ್ರಶ್ನಿಸುವ ಚಿಂತನೆಯದು. ಮದ್ಯ, ತಂಬಾಕು ಜೊತೆ ಮಾಂಸಾಹಾರ ನಿಷಿದ್ಧ ಎಂಬ ಷರತ್ತು ಹಾಕಿದ ಮಹೇಶ ಜೋಶಿ ಎಂಬ ಉಡಾಫೆಯ ವ್ಯಕ್ತಿಗೆ ನೇರಾನೇರ ಠಕ್ಕರ್ ಅದು. ಆದರೆ ಬಹಳಷ್ಟು ಜನ ಅದನ್ನು ಕೇವಲ ಬಾಡಿನ ವಿಷಯವನ್ನಾಗಿ ಮಾತ್ರ ನೋಡಿದರು, ಮಾಂಸ ಕಾಣದವರು ಕೇಳುತ್ತಿದ್ದಾರೆ ಎಂದು ಜರಿದರು.
ಮಾಂಸಾಹಾರದ ಹಕ್ಕೊತ್ತಾಯ ಮುಂದಿಟ್ಟಾಗ ಕೆಲವರು ಇದೆಲ್ಲ ಆಗುವ ಮಾತಲ್ಲ, ಸುಮ್ಮನೆ ಕೂಗಾಡುತ್ತಾರೆ, ಇವರದು ಅರಣ್ಯರೋದನ ಅಂದರು. ಮತ್ತೆ ಕೆಲವರು ಬಾಡೂಟ ಕೇಳುವುದು ಉದ್ಧಟತನ, ಅಶಿಸ್ತು ಎಂದರು. ಕೆಲವರು ಇದು ದೊಡ್ಡ ಖರ್ಚಿನ ಬಾಬ್ತು ಎಂಬ ಕಾಳಜಿ ವ್ಯಕ್ತಪಡಿಸಿದರು. ಆದರೆ ನನ್ನಂಥವರ ದೃಷ್ಟಿಯಲ್ಲಿ ಇದೊಂದು ಸಮಾಜವನ್ನು ಮುಂದಕ್ಕೆ ಕೊಂಡೊಯ್ಯುವ ಮಾನವೀಯ ವಿಚಾರವಾಗಿತ್ತು. ಹಾಗಾಗಿಯೇ ಸಾಂಕೇತಿಕವಾಗಿಯಾದರೂ ಮಾಂಸಾಹಾರ ವಿತರಿಸಬೇಕು, ಕನಿಷ್ಠ ಮೊಟ್ಟೆಯನ್ನಾದರೂ ಕೊಡಬೇಕು ಎಂದು ಪ್ರತಿಪಾದಿಸಿದೆವು.
ಆಗ ನಮಗೆ ನಮ್ಮ ಹೋರಾಟ ಗೆಲ್ಲಲೇಬೇಕು ಎಂಬ ಹಠದಿಂದ ಹುಟ್ಟಿದ್ದಲ್ಲ. ಬದಲಿಗೆ ಬಹುಸಂಖ್ಯಾತರು ಮಾಂಸಾಹಾರಿಗಳಾಗಿದ್ದು, ಅವರನ್ನು ಕೀಳಾಗಿ ಕಾಣುವುದು ಸರಿಯಲ್ಲ, ಈ ವಿಚಾರವನ್ನು ಮುನ್ನಲೆಗೆ ತರಬೇಕು ಎಂಬುದು ನಮ್ಮ ಗುರಿಯಾಗಿತ್ತು. ಒಂದು ಹೋರಾಟದ ಗೆಲುವು ಸೋಲು ಎಂಬುದಕ್ಕೆ ಸಾಪೇಕ್ಷ ಅರ್ಥವಿದೆ.
“ಎಲ್ಲ ಯುದ್ಧಗಳನ್ನು ಗೆಲ್ಲಲ್ಲಿಕ್ಕಾಗಿಯೇ ಮಾಡಲಾಗುವುದಿಲ್ಲ. ಅನ್ಯಾಯದ ಎದುರು ಯುದ್ಧಭೂಮಿಯಲ್ಲಿ ಯಾರೋ ಒಬ್ಬರು ಇದ್ದರು ಎಂದು ಸುಮ್ಮನೆ ಜಗತ್ತಿಗೆ ಹೇಳಲಾದರೂ ಕೆಲವೊಮ್ಮೆ ಯುದ್ಧ ಮಾಡಬೇಕಾಗುತ್ತದೆ” ಎನ್ನುತ್ತಾರೆ ದಿಟ್ಟ ಪತ್ರಕರ್ತ ರವೀಶ್ ಕುಮಾರ್. ಈ ನೆಲೆಯಲ್ಲಿ ನಮ್ಮ ಹೋರಾಟವನ್ನು ಅರ್ಥ ಮಾಡಿಕೊಂಡುಬಂದೆವು. ಅದಕ್ಕೆ ಮಂಡ್ಯ ಜಿಲ್ಲೆಯಲ್ಲಿ ಸಿಕ್ಕ ಪ್ರತಿಕ್ರಿಯೆ ಅದ್ಭುತವಾಗಿತ್ತು. ಒಂದೇ ದಿನದಲ್ಲಿ ಬಾಡೂಟ ಬಳಗದ ಹೆಸರಿನಲ್ಲಿ 14 ವಾಟ್ಸ್ ಆಪ್ ಗ್ರೂಪ್‌ಗಳು ರಚನೆಯಾದವು. ಎಲ್ಲ ತಾಲ್ಲೂಕುಗಳ ಜನರು ಅದರಲ್ಲಿ ಸೇರಿಕೊಂಡರು. ಮಾತ್ರವಲ್ಲದೆ ರಾಮನಗರ, ಮೈಸೂರು, ಹಾಸನ ಸೇರಿದಂತೆ ಹಲವು ಜಿಲ್ಲೆಗಳ ವಾಟ್ಸ್ ಆಪ್ ಗ್ರೂಪ್‌ಗಳು ರಚನೆಯಾಗಿ ಅಲ್ಲಿನ ಜನರು ಸಹ ನಮ್ಮ ಹೋರಾಟಕ್ಕೆ ಕೈ ಜೋಡಿಸಿದರು.
ಇನ್ನೊಂದೆಡೆ ಅಪೌಷ್ಟಿಕತೆಯಿಂದ ಬಳಲುತ್ತಿರುವ ಭಾರತದಂತಹ ದೇಶದಲ್ಲಿ ಈ ರೀತಿಯ ಆಹಾರ ತಾರತಮ್ಯ ಎಷ್ಟು ಸರಿ ಎಂದು ಪ್ರಶ್ನಿಸಿದರು. ಒಟ್ಟಾರೆಯಾಗಿ ತಿನ್ನುವ ಆಹಾರದಲ್ಲಿ ತಾರತಮ್ಯ ಸಲ್ಲದು. ಆಹಾರ ನಮ್ಮ ಆಯ್ಕೆ ಎಂಬ ವಿಚಾರ ಮುನ್ನಲೆಗೆ ಬಂದಿತು. ಒಂದು ವೇಳೆ ಜಿಲ್ಲಾಡಳಿತ ಮಾಂಸಾಹಾರದ ವ್ಯವಸ್ಥೆ ಮಾಡದಿದ್ದರೆ ಬಾಡೂಟ ಬಳಗವೇ ಸಾಂಕೇತಿಕವಾಗಿ ಮಾಂಸಾಹಾರದ ವ್ಯವಸ್ಥೆ ಮಾಡಲು ಮುಂದಾದಾಗ ಹಳ್ಳಿಯ ಜನ ಕೋಳಿ, ಮೊಟ್ಟೆ ನೀಡಿ ಬೆಂಬಲಿಸಿದರು. ಹೀಗೆ ಪ್ರಾಮಾಣಿಕ ಹೋರಾಟವೊಂದು ರೂಪುಗೊಂಡಾಗ ವ್ಯಕ್ತವಾದ ಬೆಂಬಲ ಈ ಸಮಾಜದಲ್ಲಿ ಇದುವರೆಗೂ ನಡೆದ ಅನ್ಯಾಯಕ್ಕೆ ಪ್ರತಿರೋಧದ ರೀತಿಯಲ್ಲಿತ್ತು. ಹಾಗಾಗಿ ಮಂಡ್ಯ ಸಮ್ಮೇಳನದಲ್ಲಿ ಕೊನೆಗೂ ಮೊಟ್ಟೆಯೂಟ ಬಡಿಸಲಾಯಿತು.
ಇದನ್ನೂ ಓದಿರಿ: ಗರ್ಭಿಣಿಯರು, ಬಾಣಂತಿಯರ ಆಹಾರ-ಆರೈಕೆ ಬಗ್ಗೆ ಅರಿವು ಮುಖ್ಯ
ಆ ಮೂಲಕ 86 ವರ್ಷಗಳ ನಂತರ ಸಮ್ಮೇಳನದಲ್ಲಿ ಆಹಾರದ ವಿಚಾರ ಮುನ್ನಲೆಗೆ ಬಂದಿದ್ದು ಬಹಳ ಮುಖ್ಯವಾದ ವಿಚಾರ. ಆಹಾರವನ್ನು ಒಂದು ಆಹಾರವಾಗಿ ಮಾತ್ರ ಪ್ರತ್ಯೇಕವಾಗಿ ನೋಡಲು ಬರುವುದಿಲ್ಲ. ಆ ಆಹಾರದ ಸುತ್ತ ನೆಲಮೂಲ ಸಂಸ್ಕೃತಿ ಇರುತ್ತದೆ. ಶ್ರೇಷ್ಠತೆಯ ವ್ಯಸನಕ್ಕೆ ಉತ್ತರವಿರುತ್ತದೆ- ಈ ಹಿನ್ನೆಲೆಯಲ್ಲಿ ಇದನ್ನು ನೋಡಬೇಕು. ಮಾಂಸಾಹಾರ ಸೇವಿಸಿ ಈ ರೀತಿಯ ಕಾರ್ಯಕ್ರಮ ಮಾಡಿದರೆ ಕೆಡಕು ಉಂಟಾಗುತ್ತದೆ ಎಂಬ ಮೌಢ್ಯವನ್ನು ಬ್ರಾಹ್ಮಣ್ಯ ತುಂಬಿಬಿಟ್ಟಿದೆ. ಇದನ್ನು ಹೋಗಲಾಡಿಸುವುದು ಮತ್ತು ವೈಜ್ಞಾನಿಕತೆಯನ್ನು ಮುನ್ನೆಲೆಗೆ ತರುವುದೇ ಹೋರಾಟದ ಉದ್ದೇಶವಾಗಿತ್ತು.
ಮೊದಲು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ಕೊಡಬೇಕು ಎಂದಾಗಲೂ ಇದೇ ರೀತಿ ಆಕ್ಷೇಪಗಳು ವ್ಯಕ್ತವಾದವು. ಮಠಾಧೀಶರು ಕೊಂಕು ಮಾತು ಆಡಿದರು. ಆಗ 8ನೇ ತರಗತಿಯ ಒಬ್ಬ ವಿದ್ಯಾರ್ಥಿನಿಯೊಬ್ಬಳು ತಮಗೆ ಮೊಟ್ಟೆ ಏಕೆ ಬೇಕು ಎಂದು ಆಡಿದ ಮಾತುಗಳು ಎಲ್ಲೆಡೆ ವೈರಲ್ ಆಗಿದ್ದವು ಮತ್ತು ಆ ಮಾತುಗಳು ಅರ್ಥಪೂರ್ಣವಾಗಿದ್ದವು. ಮಾಂಸಾಹಾರ ಸಮ್ಮೇಳನದಲ್ಲಿ ಏಕೆ ಬೇಕೆನ್ನುತ್ತಿದ್ದಾರೆ ಎಂಬ ವಿಶಾಲ ಅರ್ಥವನ್ನು ಗ್ರಹಿಸದೆ ಕೆಲವರು ಕೊಂಕು ನುಡಿದರು. ಆದರೆ ಮಂಡ್ಯದ ಸಾಮಾನ್ಯ ಜನರ ವಿವೇಕ ಅದನ್ನು ಸಾಧ್ಯವಾಗಿಸಿತು.
ಈಗ ಯಾರು ಕೇಳದೆಯೂ ದಾವಣಗೆರೆಯ ಯುವಜನೋತ್ಸವದಲ್ಲಿ ಮಾಂಸಾಹಾರ ಇರಲಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಇದು ಸ್ವಾಗತಾರ್ಹ. ಅಲ್ಲಿ ತಪ್ಪದೇ ಸಸ್ಯಾಹಾರವೂ ಇರಲಿ ಎಂದು ನಾವು ಮನವಿ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಇದೊಂದು ಸಹಜ ಕ್ರಿಯೆಯಾಗಿ ಹೊರಹೊಮ್ಮಲಿ. ದೇಶದ ಅಪೌಷ್ಟಿಕತೆ ನಾಶವಾಗಲಿ. ಆಹಾರ ತಾರತಮ್ಯ ಅಳಿಯಲಿ. ಆಹಾರ ಅವರವರ ಆಯ್ಕೆಯಾಗಲಿ ಮತ್ತು ಎಲ್ಲರಿಗೂ ಮುಕ್ತವಾಗಲಿ ಎಂದು ಆಶಿಸುತ್ತೇವೆ. ಅದಕ್ಕಾಗಿ ಈ ಹೋರಾಟ ಮತ್ತಷ್ಟು ಜೋರಾಗಲಿ.

ಸಂತೋಷ್ ಜಿ.
ಮಂಡ್ಯದಲ್ಲಿ ಜನಪರ ಚಳವಳಿಗಳ ಪರವಾಗಿ ಕೆಲಸ ಮಾಡುತ್ತಿರುವ ಸಂತೋಷ್ ಜಿ. ಅವರು, ನುಡಿಕರ್ನಾಟಕ.ಕಾಂ ಸಹಸಂಪಾದಕರು. 'ಜಾಗೃತ ಕರ್ನಾಟಕ' ಸಂಘಟನೆಯಲ್ಲೂ ಸಕ್ರಿಯರಾಗಿರುವ ಇವರು, ಸಾಹಿತ್ಯ ಸಮ್ಮೇಳನದಲ್ಲಿ ಆಹಾರ ಸಮಾನತೆ ಎತ್ತಿಹಿಡಿಯಲು ನಡೆದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ನೋಡಿ ಸರ್ , ನೀವು ಮಾಂಸ ಆಹಾರ ತಿನ್ನುವರ ಹಕ್ಕು ಎಂದು ಹೇಳುತ್ತಿರಲ್ಲಾ , ಹಾಗಾದರೆ ಭೂಮಿಯ ಮೇಲೆ ಜೀವಿಸುವ ಯಾವುದೇ ಪ್ರಾಣಿ ಪಕ್ಷಿ ಗಳಿಗೆ ಬದುಕುವ ಹಕ್ಕು ಇದೆ, ಹೀಗಿದ್ದ ಮೇಲೆ, ಮಾಂಸ ತಿನುವರ ಅವರ ಸ್ವಾರ್ಥ ಆಸೆಗೆ , ಕೊಲೆ ಮಾಡುವ ಹಕ್ಕು ಇದೆಯೆ, ನಿಮ್ಮ ಆತ್ಮ ಸಾಕ್ಷಿ ಯಾಗಿ ಹೇಳಿ