ಡಾ. ಸಿಂಗ್‌ರೊಂದಿಗೆ ಅತೀಕ್ ಕೆಲಸ: ದೂರದೃಷ್ಟಿ, ಸಮರ್ಪಣಾ ಭಾವ, ಸಮಗ್ರತೆಯ ನೆನಪುಗಳು

Date:

Advertisements

ಡಾ.ಮನಮೋಹನ್ ಸಿಂಗ್ ಕೇವಲ ಒಬ್ಬ ರಾಜಕಾರಣಿಯಾಗಿರಲಿಲ್ಲ; ಅವರೊಬ್ಬ ರಾಜನೀತಿ ತಜ್ಞ, ಸಜ್ಜನ ಮತ್ತು ಆದರ್ಶಪ್ರಾಯ ಮನುಷ್ಯ. ಅವರೊಂದಿಗೆ ಕೆಲಸ ಮಾಡುವುದೆಂದರೆ ಪೂರ್ವಸಿದ್ಧತೆ, ಸಾಕ್ಷಿ ಮತ್ತು ಬೌದ್ಧಿಕ ಕಾಠಿಣ್ಯವನ್ನು ಬಯಸುವ ಪ್ರಾಧ್ಯಾಪಕರೊಂದಿಗೆ ಕೆಲಸ ಮಾಡಿದಂತೆ. ಅವರು ರಾಜಕೀಯ ಭಾಷಣಕ್ಕೆ ಒಂದು ಘನತೆಯನ್ನು ತಂದರು. ಅವರ ನಡವಳಿಕೆಯಲ್ಲಿ ನಮ್ರತೆ ಮತ್ತು ಸರಳತೆ ತುಂಬಿ ತುಳುಕಾಡುತ್ತಿತ್ತು.

2007 ರಿಂದ 2012 ರವರೆಗೆ ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ, ಅವರ ಕಚೇರಿಯಲ್ಲಿ ಕೆಲಸ ಮಾಡುವ ಸೌಭಾಗ್ಯ ನನ್ನದಾಗಿತ್ತು. ಡಾ. ಸಿಂಗ್ ಅವರ ಪ್ರಧಾನ ಮಂತ್ರಿ ಅವಧಿಯು ಬಹುದೊಡ್ಡ ಸವಾಲುಗಳು ಮತ್ತು ಸಾಧನೆಗಳಿಂದ ಕೂಡಿತ್ತು. ಆ ಇಡೀ ಅವಧಿಯು ನನಗೆ ಭಾರತದ ಅತ್ಯಂತ ಗೌರವಾನ್ವಿತ ಮತ್ತು ವಿಶಿಷ್ಟ ನಾಯಕರೊಬ್ಬರ ಕೆಲಸದ ಕುರಿತಾದ ಒಳನೋಟಗಳ ಪಾಠಶಾಲೆಯಾಗಿತ್ತು. ಅವರ ನಾಯಕತ್ವದ ಶೈಲಿಯು ನನ್ನಂತಹ ಅಸಂಖ್ಯಾತರ ಮೇಲೆ ಅಳಿಸಲಾಗದ ಪ್ರಭಾವವನ್ನು ಬೀರಿತು. ಅದೆಷ್ಟೋ ವಿಚಾರಗಳಲ್ಲಿ ಹೊರಗೆ ಬಿಂಬಿತವಾಗಿರುವುದಕ್ಕಿಂತ ಭಿನ್ನವಾದ ವ್ಯಕ್ತಿತ್ವ ಮತ್ತು ನಿಲುವು ಡಾ.ಸಿಂಗ್‌ ಅವರದ್ದಾಗಿತ್ತು. ಅವರ ಆ ಧೋರಣೆಗಳ ಕುರಿತಾಗಿ ನಾವು ಭಿನ್ನಮತ ಹೊಂದಿರಬಹುದು. ಆದರೆ, ಅವರ ಆ ನಿಲುವುಗಳಿಗೆ ಭದ್ರವಾದ ವೈಜ್ಞಾನಿಕ ಪುರಾವೆಗಳನ್ನು ಹೊಂದಿದ್ದರು ಎಂಬುದನ್ನು ನಾನು ಹತ್ತಿರದಿಂದ ನೋಡಿದ್ದೇನೆ.

ಡಾ.ಮನಮೋಹನ್ ಸಿಂಗ್ ಕೇವಲ ಒಬ್ಬ ರಾಜಕಾರಣಿಯಾಗಿರಲಿಲ್ಲ; ಅವರೊಬ್ಬ ರಾಜಕೀಯ ಮುತ್ಸದ್ದಿ, ಸಜ್ಜನ ಮತ್ತು ಆದರ್ಶಪ್ರಾಯ ಮನುಷ್ಯ. ಅವರೊಂದಿಗೆ ಕೆಲಸ ಮಾಡುವುದೆಂದರೆ ಪೂರ್ವಸಿದ್ಧತೆ, ಪುರಾವೆ ಮತ್ತು ಗಟ್ಟಿ ಬೌದ್ಧಿಕತೆಯನ್ನು ಬಯಸುವ ಪ್ರಾಧ್ಯಾಪಕರೊಂದಿಗೆ ಕೆಲಸ ಮಾಡಿದಂತೆ. ಅವರು ರಾಜಕೀಯ ವಾಗ್ವಾದಕ್ಕೂ ಒಂದು ಘನತೆಯನ್ನು ತಂದರು, ಪ್ರಜಾಸತ್ತಾತ್ಮಕ ತತ್ವಗಳಿಗೆ ಕಟ್ಟುನಿಟ್ಟಾಗಿ ಬದ್ಧರಾಗಿದ್ದರು. ದೇಶದ ಹತ್ತಾರು ಮಹತ್ವದ ಹುದ್ದೆಗಳಲ್ಲಿ ಕೆಲಸ ಮಾಡಿದ್ದ ಅವರ ನಡವಳಿಕೆಯಲ್ಲಿ ನಮ್ರತೆ ಮತ್ತು ಸರಳತೆ ತುಂಬಿ ತುಳುಕಾಡುತ್ತಿತ್ತು.

Advertisements

ಪುರಾವೆ ಹಾಗೂ ಅಂಕಿ-ಅಂಶ (Evidence and data)ದ ಜೊತೆಗೆ ಮಾನವತೆಯು ಡಾ. ಸಿಂಗ್‌ ಅವರ ವಿಶಿಷ್ಟತೆಯಾಗಿತ್ತು. ಹೀಗಿರುವಾಗ, ಅವರು ಇಲ್ಲವಾದ ಕೆಲವು ಗಂಟೆಗಳಲ್ಲಿ ಈ ಶ್ರದ್ಧಾಂಜಲಿ ಬರಹವನ್ನು ಬರೆಯುತ್ತಿರುವಾಗ, ಯಾವುದೂ ಉತ್ಪ್ರೇಕ್ಷೆಯಾಗದಂತೆ ಪ್ರತಿಯೊಂದಕ್ಕೂ ಅವರೊಂದಿಗಿನ ನನ್ನ ಅನುಭವದ ಸಂಗತಿಗಳು ಆಧಾರವಾಗಿದೆಯಾ ಎಂದು ಪರಿಶೀಲಿಸಿದ್ದೇನೆ.

ದೆಹಲಿಯ ಅವರ ಕಚೇರಿಗೆ ಹೋಗಿ ಕೆಲಸ ಮಾಡಲು ಶುರು ಮಾಡಿದ ಮೇಲೆ, ಆರಂಭದಲ್ಲೇ ನನ್ನನ್ನೊಮ್ಮೆ ʼದೆಹಲಿಯ ವಾತಾವರಣ ನಿಮಗೆ ಹೊಂದಿಕೆಯಾಯ್ತಾ, ಮಕ್ಕಳಿಗೆ ಶಾಲೆಗಳಲ್ಲಿ ಪ್ರವೇಶ ದೊರಕಿತಾ, ಕುಟುಂಬ ಇಲ್ಲಿ ಸೆಟ್ಲ್‌ ಆಯಿತಾ?ʼ ಎಂದು ವಿಚಾರಿಸುವಷ್ಟು ಸರಳ ಹೃದಯವಂತಿಕೆ, ಮನುಷ್ಯ ಪ್ರೀತಿ ಅವರಲ್ಲಿತ್ತು. ಪ್ರತೀ ವರ್ಷ ದೀಪಾವಳಿಯೂ ಸೇರಿದಂತೆ ಎರಡು ಸಾರಿ, ಕಚೇರಿಯ ಅಧಿಕಾರಿಗಳೆಲ್ಲರ ಕುಟುಂಬದವರನ್ನು ಔತಣಕ್ಕೆ ಕರೆಯುತ್ತಿದ್ದರು. ಅಂತಹ ಒಂದು ಸಂದರ್ಭದಲ್ಲಿ ನನ್ನ ಮಗನ ಜೊತೆಗೆ ಮಾತಾಡುತ್ತಾ, ಜೀವನದಲ್ಲಿ ಮುಂದೇನು ಮಾಡಬಯಸಿದ್ದಾನೆ ಎಂದು ಕೇಳಿಕೊಂಡಿದ್ದರು. ಇಷ್ಟು ಹತ್ತಿರದ ಒಡನಾಟದಲ್ಲಿ, ಅದರಲ್ಲೂ ಸುದೀರ್ಘ ಐದು ವರ್ಷಗಳ ಕಾಲ ರಾಜಕಾರಣಿ-ಪ್ರಾಧ್ಯಾಪಕ-ಅಧಿಕಾರಿ ಎಲ್ಲವೂ ಆಗಿದ್ದ ಪ್ರಧಾನಿಯೊಬ್ಬರ ಜೊತೆಗೆ ಕೆಲಸ ಮಾಡಲು ನನಗೆ ಸಾಧ್ಯವಾಯಿತು.

ಮನಮೋಹನ್ ಸಿಂಗ್ ಪ್ರೆಸ್ ಮೀಟ್
2013ರಲ್ಲಿ ಚಳಿಗಾಲದ ಅಧಿವೇಶನ ಶುರುವಾಗುವುದಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಧಾನಿ ಸಿಂಗ್

ಕೃಷಿ ಕ್ಷೇತ್ರದ ಅವರ ವಿಶಿಷ್ಟ ನಿಲುವುಗಳು

ಡಾ.ಸಿಂಗ್‌ ಅವರ ವಿಚಾರದಲ್ಲಿ ಪ್ರಚಾರದಲ್ಲಿರುವ ಸಂಗತಿಗಳಿಗೂ, ಅವರ ಅಸಲೀ ಆದ್ಯತೆಗಳಿಗೂ ದೊಡ್ಡ ಅಂತರವಿದ್ದುದಕ್ಕೆ ಒಂದು ಉದಾಹರಣೆಯೆಂದರೆ ಅದು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ್ದು. ಡಾ. ಸಿಂಗ್ ಅವರ ಹೃದಯಕ್ಕೆ ತುಂಬಾ ಹತ್ತಿರವಾಗಿದ್ದ ಕ್ಷೇತ್ರವಿದ್ದರೆ, ಅದು ಕೃಷಿ. ಪ್ರಧಾನ ಮಂತ್ರಿ ಕಚೇರಿಯಲ್ಲಿ ಕೃಷಿ ಸಮಸ್ಯೆಗಳ ಬಗ್ಗೆ ಅವರ ಜೊತೆಗೆ ನಿಕಟವಾಗಿ ಕೆಲಸ ಮಾಡಿದ ನಾನು, ರೈತರ ಜೀವನವನ್ನು ಸುಧಾರಿಸುವಲ್ಲಿ ಅವರಿಗಿದ್ದ ಬದ್ಧತೆಯನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಕೃಷಿಯಲ್ಲೇ ಪದವಿಯನ್ನು ಪಡೆದಿದ್ದ ನನಗೆ ಕೃಷಿ ವ್ಯಾಪಾರದ ನಿಯಮಗಳು (Terms of Trade) ಚೆನ್ನಾಗಿಯೇ ಗೊತ್ತಿದ್ದವು. ಡಾ. ಸಿಂಗ್‌ ಅವರು ಈ ವ್ಯಾಪಾರಿ ನಿಯಮಗಳು ಚರಿತ್ರೆಯುದ್ದಕ್ಕೂ ಕೃಷಿಯ ವಿರುದ್ಧ ಹೇಗೆ ಬರೆಯಲ್ಪಟ್ಟಿವೆ ಎಂಬುದನ್ನು ಆಗಾಗ ಮಾತನಾಡುತ್ತಿದ್ದರು. ಈ ಅಸಮತೋಲನವನ್ನು ನಿವಾರಿಸಲು ವ್ಯವಸ್ಥೆಯಲ್ಲೇ ಬದಲಾವಣೆಗಳನ್ನು ತರಬೇಕಾದ ಅಗತ್ಯವನ್ನು ಒತ್ತಿ ಹೇಳುತ್ತಿದ್ದರು.

ಉದಾಹರಣೆಗೆ, ಅವರ ಅಧಿಕಾರಾವಧಿಯ ಅತ್ಯಂತ ದೊಡ್ಡ ನಡೆಯೆಂದರೆ 2008ರ ಕೃಷಿ ಸಾಲ ಮನ್ನಾ. ಈ ನಿರ್ಧಾರವು ದೇಶಾದ್ಯಂತ ಸಾಲದಲ್ಲಿ ಬೇಯುತ್ತಿದ್ದ ರೈತರಿಗೆ ಪರಿಹಾರವನ್ನು ನೀಡಿತು. ಡಾ. ಸಿಂಗ್ ಮತ್ತು ಕೃಷಿ ಸಚಿವ ಶರದ್ ಪವಾರ್ ಅವರು ಮನ್ನಾ ಕುರಿತು ಚರ್ಚಿಸಿದ ಹಲವಾರು ಸಭೆಗಳಲ್ಲಿ ನಾನು ಭಾಗವಹಿಸಿದ್ದೆ. ಡಾ. ಸಿಂಗ್ ಅವರ ತರ್ಕದಲ್ಲಿ ಕೃಷಿಕರ ಬಗ್ಗೆ ಸಹಾನುಭೂತಿಯೂ ಇತ್ತು ಮತ್ತು ಅದೇ ಸಂದರ್ಭದಲ್ಲಿ ಅರ್ಥಶಾಸ್ತ್ರದ ದೃಷ್ಟಿಯಿಂದ ಪ್ರಾಯೋಗಿಕವೂ ಆಗಿತ್ತು. ಯಾವ ವ್ಯವಸ್ಥೆಯಲ್ಲಿ ರೈತರು ಸಾಲದ ಹೊರೆಯಿಂದ ಬಳಲುತ್ತಾ ಇರುತ್ತಾರೋ, ಅವರಿಗೆ (ಒಮ್ಮೆಯಲ್ಲ!) ಕಾಲಕಾಲಕ್ಕೆ ಸಾಲಮನ್ನಾದ ಅಗತ್ಯ ಇದ್ದೇ ಇರುತ್ತದೆ ಎಂದು ಪ್ರತಿಪಾದಿಸುತ್ತಿದ್ದರು. ಆ ಮೂಲಕ ರೈತರು ಇನ್ನೊಂದು ಹೊಸ ಶುರುವಾತನ್ನು ಮಾಡಲು ಸಾಧ್ಯವಾಗುತ್ತದೆ ಎಂಬುದು ಅವರ ವಾದವಾಗಿತ್ತು!

WhatsApp Image 2024 12 27 at 4.50.39 PM

ರೈತರಿಗೆ ಲಾಭದಾಯಕ ಬೆಲೆಗಳನ್ನು ನೀಡುವ ಅಗತ್ಯವನ್ನು ಮನಗಂಡು, ಅವರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು (MSPs) ಹೆಚ್ಚಿಸಲು ಡಾ. ಸಿಂಗ್ ಮುಂದಾದರು. ಇದನ್ನು ಜಾರಿಗೊಳಿಸುವಾಗ ಅವರು ತೋರಿದ ಉತ್ಸಾಹವು ಗ್ರಾಮೀಣ ಭಾರತದ ಬಗ್ಗೆ ಅವರಲ್ಲಿದ್ದ ಆಳವಾದ ಸಹಾನುಭೂತಿ ಮತ್ತು ಕೃಷಿ ಕ್ಷೇತ್ರವು ಎದುರಿಸುತ್ತಿರುವ ರಚನಾತ್ಮಕ ಸವಾಲುಗಳ ಬಗ್ಗೆ ಅವರಿಗಿದ್ದ ತಿಳಿವಳಿಕೆಯನ್ನು ತೋರಿಸುತ್ತದೆ.

ಆಡಳಿತ ವ್ಯವಸ್ಥೆಗೆ ಶಕ್ತಿಯನ್ನು ತುಂಬಿದ‌ ನಾಯಕ

ಯಾವುದೇ ಅಧಿಕಾರಿಗೆ ಡಾ. ಸಿಂಗ್ ಅವರೊಂದಿಗೆ ಕೆಲಸ ಮಾಡುವುದೆಂದರೆ, ಕನಸು ನನಸಾದಂತೆಯೇ ಸರಿ. ಅವರು ಪೂರ್ವ ತಯಾರಿ, ಸ್ಪಷ್ಟತೆ ಮತ್ತು ನಿಖರತೆಯನ್ನು ಬಯಸುವ ನಾಯಕರಾಗಿದ್ದರು. ನಾವು ಅವರ ಮುಂದಿಡುವ ಪ್ರತಿಯೊಂದು ಟಿಪ್ಪಣಿ- ಬ್ರೀಫಿಂಗನ್ನು ತುಂಬಾ ಎಚ್ಚರಿಕೆಯಿಂದ ಅವರು ಓದುತ್ತಿದ್ದರು. ಸಭೆಗಳಿಗೆ ಬರುವಾಗ ಅವರು ಯಾವಾಗಲೂ ಸಂಪೂರ್ಣ ಸಿದ್ಧರಾಗಿ ಬರುತ್ತಿದ್ದರು. ಕ್ಯಾಬಿನೆಟ್ ಪೂರ್ವ ಸಭೆಯ ಬ್ರೀಫಿಂಗ್‌ಗಳ ಸಮಯದಲ್ಲಿ ಅವರು ಹಾಕುತ್ತಿದ್ದ ತೀಕ್ಷ್ಣ ಪ್ರಶ್ನೆಗಳು ಮತ್ತು ಕಣ್ಣ ಮುಂದಿರುವ ಸಮಸ್ಯೆಗಳ ಬಗ್ಗೆ ಅವರಿಗಿದ್ದ ಸಂಪೂರ್ಣ ತಿಳಿವಳಿಕೆಯು ನಮ್ಮನ್ನು ಚಕಿತಗೊಳಿಸುತ್ತಿದ್ದವು.

ಡಾ. ಸಿಂಗ್ ಅವರು ಆಯಾಯ ಸಚಿವಾಲಯಗಳಿಗೆ ಆಯಾಯ ಕ್ಷೇತ್ರದ ಪರಿಣಿತಿ ಇರುತ್ತದೆ ಎಂಬುದರ ಬಗ್ಗೆ ವಿಶ್ವಾಸ ಹೊಂದಿದ್ದರು. ಜೊತೆಗೆ ಅಧಿಕಾರಿವರ್ಗ ಮತ್ತು ಸಚಿವರ ಜವಾಬ್ದಾರಿಗಳ ಚೌಕಟ್ಟಿನ ಬಗ್ಗೆ ಗೌರವವುಳ್ಳವರಾಗಿದ್ದರು. ಅದರ ಫಲವಾಗಿ, ಯಾವ ವಿಚಾರದ ಬಗ್ಗೆ ಯಾರಿಗೆ ತಿಳಿವಳಿಕೆ ಇದೆಯೋ ಅವರು ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಖಾತರಿಯಾಗುತ್ತಿತ್ತು.

ಕಲಾಂ ಜೊತೆ ಸಿಂಗ್
ರಾಷ್ಟ್ರಪತಿ ಅಬ್ದುಲ್‌ ಕಲಾಂ ಮತ್ತು ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಜೊತೆ ಪ್ರಧಾನಿ ಸಿಂಗ್

ಒಮ್ಮೆ, ಕೆಲವು ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಧಾನ ಮಂತ್ರಿ ಕಚೇರಿಯು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ (ಎಚ್‌ಆರ್‌ಡಿ) ನಿರ್ದೇಶನ ನೀಡಬೇಕೆಂದು ಸೂಚಿಸಬೇಕೆಂದು ನಾನು ಕ್ಯಾಬಿನೆಟ್ ಟಿಪ್ಪಣಿಯಲ್ಲಿ ಕಾಮೆಂಟ್ ಬರೆದಿದ್ದೆ. ಡಾ. ಸಿಂಗ್, “ಈ ಓಬಿಟರ್ ಡಿಕ್ಟಾದ (ಸಾಮಾನ್ಯ ಪ್ರಕ್ರಿಯೆಯಲ್ಲಿ ಮಾಡದ, ಅದರ ಇತರ ಸಂಗತಿಗಳ ಜೊತೆಗೆ ನ್ಯಾಯಾಧೀಶರು ಸೇರಿಸುವ ಒಕ್ಕಣೆಗಳಿಗೆ ಹೀಗೆನ್ನುತ್ತಾರೆ) ಟಿಪ್ಪಣಿಯ ಅಗತ್ಯವೇನು?” ಎಂದು ನಿರ್ದಿಷ್ಟವಾಗಿ ಸೂಚಿಸಿ ಕೇಳಿದರು. ಅವರ ಪ್ರತಿಕ್ರಿಯೆ ಸೌಮ್ಯವಾಗಿದ್ದರೂ, ಸಚಿವಾಲಯಗಳ ಸ್ವಾಯತ್ತತೆಯನ್ನು ಗೌರವಿಸುವ ಅವರ ನಂಬಿಕೆಯ ದೃಢವಾದ ಸೂಚನೆಯನ್ನು ಅವರು ನೀಡಿದ್ದರು.

ಕೇಂದ್ರ ಬಜೆಟ್‌ಗೆ ಪ್ರಧಾನ ಮಂತ್ರಿ ಕಚೇರಿಯಿಂದ ಕೆಲವು ಸಲಹೆಗಳಿದ್ದ ಟಿಪ್ಪಣಿಯೊಂದನ್ನು ಅವರ ಮುಂದಿಡಲಾಗಿತ್ತು. ಆದರೆ, ಅದಕ್ಕೆ ಸಹಿ ಹಾಕಲು ಅವರು ನಿರಾಕರಿಸಿದರು. ಸಾಂಸ್ಥಿಕ ಪ್ರಕ್ರಿಯೆಗಳ ಬಗ್ಗೆ ಅವರಿಗಿದ್ದ ಗೌರವವು ಅದರಿಂದ ಸ್ಪಷ್ಟವಾಗಿ ಎದ್ದು ಕಂಡಿತು. ʼಬಜೆಟ್ ರಚನೆಯು ಹಣಕಾಸು ಸಚಿವಾಲಯದ ವಿಶೇಷಾಧಿಕಾರ, ಅದನ್ನು ಮಾಡಲು ಅವರಿಗೇ ಬಿಡಬೇಕುʼ ಎಂದು ಅವರು ದೃಢವಾಗಿ ಹೇಳಿದರು.

ನೀತಿ ನಿರೂಪಣೆ (Policy)ಯ ಬಗ್ಗೆ ಸ್ಪಷ್ಟತೆ ಹೊಂದಿದ್ದ ಪರಿಪೂರ್ಣತಾವಾದಿ

ನೀತಿ ನಿರೂಪಣೆಯ ವಿಚಾರಕ್ಕೆ ಬಂದಾಗ ಡಾ. ಸಿಂಗ್ ಅವರೊಬ್ಬ ಪರಿಪೂರ್ಣತಾವಾದಿ. ಅವರ ಆಲೋಚನೆಗಿದ್ದ ಸ್ಪಷ್ಟತೆ ಮತ್ತು ಪ್ರತೀ ಅಂಶಕ್ಕೂ ಅವರು ನೀಡುತ್ತಿದ್ದ ಗಮನ ಸಾಟಿಯಿಲ್ಲದವು. ಅವರು ತಮ್ಮ ತಂಡದಿಂದಲೂ ಅದೇ ಮಟ್ಟದ ಕಠಿಣ ಪರಿಶ್ರಮವನ್ನು ನಿರೀಕ್ಷಿಸುತ್ತಿದ್ದರು. ಹಾಗೂ ನಾವೇನು ಹೇಳಬೇಕೆಂದರೂ ಅಂಕಿ-ಅಂಶ ಮತ್ತು ಪುರಾವೆಗಳೊಂದಿಗೆ ನಮ್ಮ ಶಿಫಾರಸುಗಳನ್ನು ಅವರ ಮುಂದಿಡುವ ಸವಾಲು ನಮಗೆ ಸದಾ ಎದುರಾಗುತ್ತಿತ್ತು.

ನಾನೇ ಭಾಗಿಯಾಗಿದ್ದ ಘಟನೆಯೊಂದನ್ನು ನನಗಿಂದೂ ಮರೆಯಲಾಗಿಲ್ಲ. ಸರ್ಕಾರದ ನಿರ್ದಿಷ್ಟ ಕಾರ್ಯಕ್ರಮವೊಂದು ಸರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪವಿತ್ತು; ಅದರ ಕುರಿತು ನಾನು ಒಂದು ಕಮೆಂಟನ್ನು ಸಾಂದರ್ಭಿಕವಾಗಿ ಮಾಡಿಬಿಟ್ಟೆ. ಆಗ ಡಾ.ಸಿಂಗ್ ತಕ್ಷಣವೇ, “ನೀವು ಹೇಳುತ್ತಿರುವುದಕ್ಕೆ ಏನು ಆಧಾರ? ಈ ಕಾರ್ಯಕ್ರಮದಲ್ಲಿ ಇರುವ ಕೊರತೆಗಳ ಬಗೆಗಿನ ಅಧ್ಯಯನಗಳನ್ನು ನೀವು ಓದಿದ್ದೀರಾ?” ಎಂದು ಕೇಳಿದರು. ಅವರೇನೂ ನನ್ನ ಜೊತೆಗೆ ವಾದಕ್ಕಿಳಿಯುವ ರೀತಿ ಮಾತಾಡಿರಲಿಲ್ಲ. ಆದರೆ ಯಾರಾದರೂ ಒಂದು ಹೇಳಿಕೆಯನ್ನು ನೀಡುವಾಗ ಅದಕ್ಕೆ ಆಧಾರ ಇರಬೇಕು ಎಂಬ ಮಹತ್ತರ ಪಾಠವಾಗಿ ನನಗೆ ಒದಗಿ ಬಂದಿತು.

ಪೂರ್ವ ಸಿದ್ಧತೆ ಮತ್ತು ಪುರಾವೆಯನ್ನು ಆಧರಿಸಿದ ನೀತಿ ನಿರೂಪಣೆ ಮಾಡುವ ಅವರ ಶೈಲಿಯು ಪ್ರಧಾನ ಮಂತ್ರಿ ಕಚೇರಿಯ ಒಳಗೆ ಕಠಿಣ ಬೌದ್ಧಿಕ ಪರಿಶ್ರಮದ ಸಂಸ್ಕೃತಿಯನ್ನು ಬೆಳೆಸಿತು. ಅವರು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವವರಲ್ಲ, ಜನಪ್ರಿಯ ತೀರ್ಮಾನಗಳನ್ನು ತೆಗೆದುಕೊಳ್ಳಬೇಕೆಂಬ ಒತ್ತಡಗಳಿಗೆ ಮಣಿದವರಲ್ಲ. ಆಡಳಿತದ ಕುರಿತಾದ ಧೋರಣೆ ಹೇಗಿತ್ತೆಂದರೆ ನೀತಿ ನಿರೂಪಣೆ ಮಾಡುವಾಗ ಸಾಕಷ್ಟು ಅದರ ಕುರಿತು ಚಿಂತನೆ ನಡೆದಿರಬೇಕು ಮತ್ತು ದೀರ್ಘಾವಧಿಯ ಪ್ರಯೋಜನಗಳನ್ನು ಗುರಿಯಾಗಿರಿಸಿಕೊಂಡೂ ಅವನ್ನು ರೂಪಿಸಬೇಕು ಎಂಬುದಾಗಿತ್ತು.

ಸಜ್ಜನ ಮತ್ತು ಶ್ರೇಷ್ಠ ಮಾನವ

ತಮ್ಮ ಬೌದ್ಧಿಕ ತೇಜಸ್ಸು ಮತ್ತು ವೃತ್ತಿಪರ ಕುಶಾಗ್ರಮತಿಯನ್ನು ಮೀರಿ ಡಾ. ಸಿಂಗ್ ಅವರು ಹಿರಿಯ ಅಧಿಕಾರಿಗಳಿಂದ ಹಿಡಿದು ಸಹಾಯಕ ಸಿಬ್ಬಂದಿಯವರೆಗೆ ಎಲ್ಲರನ್ನೂ ಗೌರವ ಮತ್ತು ದಯೆಯಿಂದ ನಡೆಸಿಕೊಂಡರು. ಅವರ ನಮ್ರತೆಯೇ ಒಂದು ದಂತಕತೆ. ತಮ್ಮ ಸಾಧನೆಗಳ ಕ್ರೆಡಿಟ್‌ ಪಡೆಯುವ ಹಪಾಹಪಿ ಅವರಲ್ಲಿ ಎಂದಿಗೂ ಇರಲಿಲ್ಲ.

ತುಂಬಾ ಒತ್ತಡದಲ್ಲಿ ಇದ್ದಾಗ ಶಾಂತವಾಗಿರುವ ಡಾ. ಸಿಂಗ್ ಅವರ ಸಾಮರ್ಥ್ಯವು ಮತ್ತೊಂದು ಮಹತ್ವದ ಗುಣಲಕ್ಷಣವಾಗಿತ್ತು. ಅತ್ಯಂತ ಸವಾಲಿನ ಸಮಯದಲ್ಲೂ ಅವರು ಸಂಯಮದಿಂದ ಹಿಡಿತವನ್ನು ಕಾಯ್ದುಕೊಂಡರು, ಪರಿಹಾರಗಳನ್ನು ಹುಡುಕುವತ್ತ ತಮ್ಮ ಗಮನ ಹರಿಸಿದರು. ಅವರ ಈ ವರ್ತನೆಯು ಸುತ್ತಲಿರುವ ಪ್ರತಿಯೊಬ್ಬರ ಮೇಲೆ ಶಾಂತ ಪರಿಣಾಮವನ್ನು ಬೀರಿತು, ನಂಬಿಕೆ ಮತ್ತು ಸಹಯೋಗದ ವಾತಾವರಣವನ್ನು ನಿರ್ಮಿಸಿತು.‌

ರಾಜ್ಯಸಭೆಯಲ್ಲಿ ಸಿಂಗ್
2023 ಆಗಸ್ಟ್‌ 9ರಂದು ರಾಜ್ಯಸಭೆಗೆ ಗಾಲಿಕುರ್ಚಿಯಲ್ಲಿ ಬಂದ ಸಿಂಗ್

ಪ್ರಧಾನಿ ಕಚೇರಿಯಲ್ಲಿ ಕೆಲಸ ಮಾಡಿದ ನಂತರ, ವಿಶ್ವಬ್ಯಾಂಕಿನ ಭಾಗವಾಗಿ ವಾಷಿಂಗ್ಟನ್‌ ಡಿ.ಸಿ.ಗೆ ಹೋಗಲು ಸೂಚಿಸಲಾಯಿತು. ಅಲ್ಲಿಗೆ ತೆರಳುವ ಮುಂಚೆ ಕೆಲ ನಿಮಿಷಗಳಾದರೂ ಅವರನ್ನು ಭೇಟಿ ಮಾಡಿ ವಂದನೆಗಳನ್ನು ಹೇಳಲು ಸಮಯ ಕೇಳಿದೆ. ಅವರು 30 ನಿಮಿಷ ನಿಗದಿ ಮಾಡಿದರು ಮತ್ತು ಆ 30 ನಿಮಿಷದಲ್ಲಿ ಉಭಯ ಕುಶಲೋಪರಿಗಳಷ್ಟೇ ಅಲ್ಲದೇ, ದೇಶದ ಆಡಳಿತ ವ್ಯವಸ್ಥೆಯಲ್ಲಿ ಇನ್ನೂ ಏನೇನು ಬದಲಾವಣೆಗಳಾಗಬೇಕೆಂದು ನಾನು ಯೋಚಿಸುತ್ತಿದ್ದೇನೆ ಎಂದು ಕೇಳಿದರು! ನಿರ್ದಿಷ್ಟವಾಗಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸರ್ಕಾರ ಏನು ಮಾಡಬೇಕಿದೆ ಎಂದು ಪ್ರಶ್ನಿಸಿದರು.

ವಿದೇಶ ಪ್ರವಾಸದಲ್ಲಿ ಭಾರತದ ಘನತೆ ಮತ್ತು ಹಿತಾಸಕ್ತಿಯ ಪರ ಗಟ್ಟಿ ನಿಂತಿದ್ದ ಡಾ.ಸಿಂಗ್‌

ಭಾರತದಂತಹ ದೊಡ್ಡ ದೇಶದ ಪ್ರಧಾನಿಯಾಗಿ ವಿವಿಧ ದೇಶಗಳ ಜೊತೆಗೆ ಮಾತುಕತೆ, ವ್ಯವಹಾರ ನಡೆಸುವುದು ದೊಡ್ಡ ಜವಾಬ್ದಾರಿಯ ಕೆಲಸ. ಡಾ.ಸಿಂಗ್‌ ಅವರ ಜೊತೆಗೆ ನಾನು ಹಲವಾರು ಅಂತಾರಾಷ್ಟ್ರೀಯ ಸಭೆಗಳಲ್ಲಿ ಭಾಗಿಯಾಗಿದ್ದೇನೆ. ಅಮೆರಿಕ, ಸಾರ್ಕ್‌ ದೇಶಗಳ ಸಭೆ ಸೇರಿದಂತೆ ಹಲವದ್ದರಲ್ಲಿ ನಾನು ಜೊತೆಗಿದ್ದೆ. ಮಾಲ್ಡೀವ್ಸ್‌ ದೇಶದ ಅಧ್ಯಕ್ಷ ಮೊಹಮದ್‌ ನಷೀದ್‌ ಅವರ ಜೊತೆಗಿನ ಸಭೆಯಂತೂ ಮರೆಯಲಾಗದ್ದು.

ಎರಡೂ ದೇಶಗಳ ನಡುವಿನ ಮಾತುಕತೆಗಳೆಲ್ಲಾ ಮುಗಿದು ಅಂತಿಮವಾಗಿ ದ್ವಿಪಕ್ಷೀಯ ಒಪ್ಪಂದದ ಹೇಳಿಕೆಗೆ ಸಹಿ ಹಾಕುವ ಸಂದರ್ಭವದು. ಇದ್ದಕ್ಕಿದ್ದಂತೆ ಅಧ್ಯಕ್ಷ ನಷೀದ್‌ ಅವರು ಭಾರತದ ಭಾಗವಾಗಿರುವ, ಮಾಲ್ಡೀವ್ಸ್‌ಗೂ ಹತ್ತಿರವಿರುವ ದ್ವೀಪವೊಂದರ ಕುರಿತಾಗಿ ಚರ್ಚೆ ತೆಗೆದರು. ಅದರ ಬಗ್ಗೆ ಏನಾದರೂ ʼಸಕಾರಾತ್ಮಕʼ ಸಂದೇಶವಿಲ್ಲದೇ ತಾನು ಹೇಗೆ ತನ್ನ ದೇಶದಲ್ಲಿ ತಲೆಯೆತ್ತಿ ಮಾತಾಡುವುದು ಎಂಬುದು ಅವರ ಪ್ರಶ್ನೆಯಾಗಿತ್ತು. ಡಾ.ಸಿಂಗ್‌ ಬಹಳ ಗಂಭೀರವಾದರು; ಗಟ್ಟಿ ದನಿಯಲ್ಲಿ, ಸಿಟ್ಟಿನಿಂದ ಉತ್ತರಿಸಿದರು. ʼಗೌರವಾನ್ವಿತ ಅಧ್ಯಕ್ಷರೇ, ಎಲ್ಲಾ ಚರ್ಚೆ ಮುಗಿದ ನಂತರವೇ ಅಧಿಕಾರಿಗಳು ಈ ಹೇಳಿಕೆ ಸಿದ್ಧಪಡಿಸಿದ್ದಾರೆ. ಅಂತಾರಾಷ್ಟ್ರೀಯ ನಡವಳಿಕೆಯಲ್ಲಿ, ಈ ರೀತಿ ಕಡೆಯ ಹಂತದಲ್ಲಿ ಹೊಸ ಸಂಗತಿಗಳನ್ನು ತೆಗೆಯುವುದು ಸಲ್ಲದುʼ ಎಂದು ಅತ್ಯಂತ ನಿಷ್ಠುರವಾಗಿ ಡಾ. ಸಿಂಗ್‌ ಅವರು ಹೇಳಿದ ಮೇಲೆ ಅಧ್ಯಕ್ಷರು ಮತ್ತೇನೂ ಹೇಳಲು ಸಾಧ್ಯವಿರಲಿಲ್ಲ.

ಪರಿವರ್ತನಾತ್ಮಕ ಅನುಭವದ ಅವಲೋಕನ

ಅವರ ನಾಯಕತ್ವದಲ್ಲಿ ಪ್ರಧಾನ ಮಂತ್ರಿ ಕಚೇರಿಯಲ್ಲಿ ನಾನು ಕಳೆದ ವರ್ಷಗಳು ನನ್ನ ವೃತ್ತಿಜೀವನದ ಅತ್ಯಂತ ತೃಪ್ತಿಕರ ಅವಧಿಯ ಭಾಗ. ಡಾ. ಸಿಂಗ್ ಅವರು ಕೆಲಸಕ್ಕೆ ನೀಡುತ್ತಿದ್ದ ಸಮರ್ಪಣಾ ಭಾವ, ಸಂಸ್ಥೆಗಳಿಗೆ ನೀಡುತ್ತಿದ್ದ ಗೌರವ ಮತ್ತು ಪುರಾವೆ ಆಧಾರಿತ ನೀತಿ-ನಿರೂಪಣೆಯಲ್ಲಿ ಅವರಿಗಿದ್ದ ನಂಬಿಕೆಗಳು ನನಗೆ ಇಂದಿಗೂ ಪ್ರೇರಣೆಯಾಗಿವೆ.

ಅವರೊಂದಿಗೆ ಕಳೆದ ಸಮಯವನ್ನು ನಾನು ನೆನಪಿಸಿಕೊಂಡಾಗ, ಸಮರ್ಥ ನಾಯಕನೊಂದಿಗೆ ಕೆಲಸ ಮಾಡಿದ ಧನ್ಯತೆಯಿಂದ ತುಂಬಿಹೋಗುತ್ತೇನೆ. ಡಾ. ಸಿಂಗ್ ಅವರ ಪರಂಪರೆಯು ಅವರು ಜಾರಿಗೆ ತಂದ ನೀತಿಗಳಲ್ಲಿ ಅಥವಾ ಅವರ ಸಾಧನೆಗಳಲ್ಲಿ ಮಾತ್ರವಲ್ಲದೆ, ಅವರು ಎತ್ತಿಹಿಡಿದ ಮೌಲ್ಯಗಳಲ್ಲಿ ಮತ್ತು ಅವರೊಂದಿಗೆ ಕೆಲಸ ಮಾಡುವ ಸೌಭಾಗ್ಯ ಪಡೆದುಕೊಂಡವರಿಗೆ ಅವರು ನೀಡಿದ ಸ್ಫೂರ್ತಿಯಲ್ಲಿದೆ.

WhatsApp Image 2024 12 27 at 11.41.57 AM
ಮನಮೋಹನ್‌ ಸಿಂಗ್‌ ಜೊತೆ ಲೇಖಕರು

ಇದನ್ನೂ ಓದಿ ದೇಶ ಕಂಡ ಪರಮ ಪ್ರಾಮಾಣಿಕ ಪ್ರಧಾನಿ ಮನಮೋಹನ್ ಸಿಂಗ್

Athiq
ಎಲ್‌ ಕೆ ಅತೀಕ್‌
+ posts

ಎಲ್‌.ಕೆ.ಅತೀಕ್‌.
ಅಪರ ಮುಖ್ಯ ಕಾರ್ಯದರ್ಶಿಗಳು, ಮುಖ್ಯಮಂತ್ರಿಗಳ ಕಚೇರಿ ಮತ್ತು ಆರ್ಥಿಕ ಇಲಾಖೆ
ಕರ್ನಾಟಕ ಸರ್ಕಾರ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಎಲ್‌ ಕೆ ಅತೀಕ್‌
ಎಲ್‌ ಕೆ ಅತೀಕ್‌
ಎಲ್‌.ಕೆ.ಅತೀಕ್‌. ಅಪರ ಮುಖ್ಯ ಕಾರ್ಯದರ್ಶಿಗಳು, ಮುಖ್ಯಮಂತ್ರಿಗಳ ಕಚೇರಿ ಮತ್ತು ಆರ್ಥಿಕ ಇಲಾಖೆ ಕರ್ನಾಟಕ ಸರ್ಕಾರ

3 COMMENTS

  1. Very apt writeup
    Dr Manmohan Singh was a Statesman, not politician.
    He commanded respect, did not demand.
    In a reply in Parliament, to the opposition, he had said, ‘History will judge, who is strong’.
    Dr Singh’s contribution to the overall well being of every Indian, will be marked in golden letters in the history of our Nation.
    May his spirit encourage and enlighten, every citizen of today and future.

  2. People believe what the visual media propogate. In these moments, this article of your first hand experience and personal anecdotes with the late Prime minister Dr. Manmohan Singhji is the need of the hour to throw light on the unknown incidents which has changed the Indian economy. Great insights sir

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X