ಮುಖ್ಯ ನ್ಯಾಯಮೂರ್ತಿ ಅವರೆಡೆಗೆ ರಾಕೇಶ್ ಕಿಶೋರ್ ತೂರಬೇಕೆಂದಿದ್ದ ಒಂದು ಬೂಟಿನ ಹಿಂದೆ ಎಷ್ಟೊಂದು ವಿಚಾರಗಳಿವೆ ಎಂಬುದನ್ನು ನೆನೆದರೆ ಈಗಲೂ ಭಯ, ಆತಂಕ ಮತ್ತು ಭಾರತದ ಭವಿಷ್ಯ ಕಣ್ಮುಂದೆ ಬರುತ್ತಿದೆ. ಹಾಗೆಯೇ ಆ ವಕೀಲನ ವಯಸ್ಸೂ ಕೂಡ 71 ವರ್ಷ!
ಪ್ರಾಚೀನ ಕಾಲದಲ್ಲಿ ಭಾರತೀಯ ಸಂಸ್ಕೃತಿ ಎಂದರೆ ಬ್ರಾಹ್ಮಣ ಸಂಸ್ಕೃತಿ ಮಾತ್ರವೇ ಎಂಬ ನಂಬಿಕೆ ಆವರಿಸಿದಂತಹ ಆ ಕಾಲದಲ್ಲಿಯೇ -ಬ್ರಾಹ್ಮಣೇತರರಿಗೆ ಸ್ವಂತ ಸಂಸ್ಕೃತಿ ಇಲ್ಲವೆಂಬ ಭಾವ ಆವರಿಸುವಂತೆ ಮಾಡಲಾಗಿತ್ತು. ಆದರೆ ವೈದಿಕ ದರ್ಶನದ ಸಂಪ್ರದಾಯ ಕ್ರೌರ್ಯಗಳ ವಿರುದ್ಧ ಬಂಡೆದ್ದವರು ಆ ಕಾಲದಲ್ಲಿ ಅನೇಕರಿದ್ದರು. ದಲಿತರಿಗೆ ಸಾಂಸ್ಕೃತಿಕ ಸ್ಮೃತಿಯನ್ನು ಕಟ್ಟಿಕೊಡುವ ಸಲುವಾಗಿ ಅಸ್ಪೃಶ್ಯರು ಮೂಲತಃ ಬೌದ್ಧರು ಎಂದು ಅಂಬೇಡ್ಕರ್ ಪ್ರತಿಪಾದಿಸಿದರು. ಆದ್ದರಿಂದ ರಾಜಕಾರಣದ ಪುರಾಣೀಕರಣ ಮತ್ತು ಭಾರತೀಯ ಮಾಧ್ಯಮ ರಂಗದ ಕಪೋಲ ಕಲ್ಪಿತ ಚಿತ್ರಗಳೇ ಸೇರಿ ನಾಗರಿಕ ಸಮಾಜದಲ್ಲಿ ಇನ್ನಿಲ್ಲದ ಗೊಂದಲ ನಿರ್ಮಿಸಿವೆ.
ಪ್ರಸ್ತುತ ಭಾರತದ ಸಮಾಜದಲ್ಲಿ ಮಾಧ್ಯಮಗಳ ಮೂಲಕ ಬಿತ್ತಲಾಗುತ್ತಿರುವ ಭಾರತೀಯ ಸಂಸ್ಕೃತಿಯ ಕಲ್ಪನೆ ಏಕಾಕಾರಿಯಾದದ್ದು. ಪ್ರಾಚೀನರಲ್ಲೂ ಸಾಂಸ್ಕೃತಿಕ ದಂಗೆಗಳಾಗಿದ್ದವು ಎಂಬುದರ ಚರಿತ್ರೆಯ ಜ್ಞಾನವೇ ಇಲ್ಲದವರು ಇವತ್ತು ಮಾಧ್ಯಮಗಳಲ್ಲಿ 24/7 ಹೇಳುವ ಮಾತುಗಳನ್ನೇ ಕೇಳಬೇಕಿದೆ. ಪರಿಣಾಮವೇ ರಾಕೇಶ್ ಕಿಶೋರ್ ಎಂಬ ವಕೀಲ, ಸುಪ್ರೀಂಕೋರ್ಟಿನ ಮೊತ್ತ ಮೊದಲ ಬೌದ್ಧ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿಯವರತ್ತ ಶೂ ಎಸೆಯಲು ಪ್ರಯತ್ನಿಸಿದ್ದಾರೆ.
ಯುನೆಸ್ಕೋದ ವಿಶ್ವ ಪಾರಂಪರಿಕ ಪಟ್ಟಿಯಲ್ಲಿರುವ ಮಧ್ಯಪ್ರದೇಶದ ಖಜುರಾಹೊದ ಜಾವರಿ ದೇವಸ್ಥಾನದಲ್ಲಿ ಏಳು ಅಡಿ ಎತ್ತರದ ವಿಷ್ಣುಮೂರ್ತಿಯ ತಲೆಯ ಭಾಗವು ಭಗ್ನಗೊಂಡಿತ್ತು. ಈ ಮೂರ್ತಿಯನ್ನು ಮರು ನಿರ್ಮಿಸಿ, ದೇವಾಲಯದಲ್ಲಿ ಮರುಸ್ಥಾಪಿಸಬೇಕು ಎಂದು ಕೋರಿ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅದಕ್ಕೆ ಭಾರತದ ಸಿಜೆಐ ಗವಾಯಿಯವರು,”ಇದೊಂದು ಪ್ರಚಾರದ ಹಿತಾಸಕ್ತಿಯ ಮೊಕದ್ದಮೆ. ಏನಾದರೂ ಮಾಡುವಂತೆ ಹೋಗಿ, ನಿಮ್ಮ ದೇವರಲ್ಲಿಯೇ ಕೇಳಿಕೊಳ್ಳಿ. ನೀವು ವಿಷ್ಣುವಿನ ಪರಮಭಕ್ತ ಎಂದು ಹೇಳುತ್ತೀರಿ, ನೀವೇ ಹೋಗಿ ಕೇಳಿ. ಇದು ಪುರಾತತ್ವ ಇಲಾಖೆಗೆ ಸೇರಿದ ಜಾಗ. ಇದಕ್ಕೆ ಆ ಇಲಾಖೆ ಅನುಮತಿ ನೀಡಬೇಕು”ಎಂದು ವಿಚಾರಣೆ ವೇಳೆ ಹೇಳಿದ್ದರು. ಇದು ಜಾಲತಾಣಗಳಲ್ಲಿ ವಿವಾದದ ಸ್ವರೂಪವನ್ನು ಪಡೆದುಕೊಂಡಾಗ, ಅವರು “ನಾನು ಎಲ್ಲಾ ಧರ್ಮಗಳನ್ನೂ ಗೌರವಿಸುತ್ತೇನೆ. ಇವೆಲ್ಲವೂ ಸಾಮಾಜಿಕ ಜಾಲತಾಣಗಳ ಸೃಷ್ಟಿ” ಎಂದೂ ಹೇಳಿದ್ದರು.
ಸನಾತನ ಧರ್ಮದ ಮೇಲಿನ ಅವಮಾನವನ್ನು ಹಿಂದೂಸ್ತಾನವು ಸಹಿಸಿಕೊಳ್ಳುವುದಿಲ್ಲ ಎಂದು ರಾಕೇಶ್ ಕಿಶೋರ್ ಎಂಬ ದೆಹಲಿ ಬಾರ್ ಕೌನ್ಸಿಲ್ ಸದಸ್ಯ ವಕೀಲ ಕೂಗಾಡುತ್ತ, ನ್ಯಾಯಾಧೀಶರತ್ತ ಶೂ ಎಸೆಯಲು ಮುಂದಾದರು ಎಂಬುದಾಗಿ ವರದಿಯಾಗಿದೆ.

ಭಾರತವು ಒಂದು ಸಾರ್ವಭೌಮ ರಾಷ್ಟ್ರ. ನಮ್ಮ ನಿರ್ಮಾರ್ತೃಗಳ ಆಲೋಚನೆಗಳನ್ನು ಆಧರಿಸಿದ ಲಿಖಿತ ಸಂವಿಧಾನವನ್ನು ದೇಶ ಹೊಂದಿದೆ; ಸಂವಿಧಾನ, ತನ್ನ ದೃಷ್ಟಿಕೋನದ ವಿಶಾಲತೆ ಮತ್ತು ಸಮಾನತೆಯ ಮೌಲ್ಯಗಳಿಂದಾಗಿ ಭಾರತದ ಅಮೂಲ್ಯವಾದ ದಾಖಲೆಯಾಗಿದೆ. ಈ ಸಂವಿಧಾನವನ್ನು ಭಾರತೀಯ ಸಮಾಜದ ಬಹುತ್ವ ಸ್ವರೂಪದ ಕಾರಣಕ್ಕಾಗಿಯೇ ವಿಶೇಷ ಎಂಬುದಾಗಿ ಪರಿಗಣಿಸಲಾಗಿದೆ. ಭಾರತೀಯ ಪೌರತ್ವವನ್ನು ನಿರ್ದಿಷ್ಟ ಸಂಸ್ಕೃತಿ ಅಥವಾ ಧರ್ಮಕ್ಕೆ ಬದ್ಧತೆಯ ಆಧಾರದ ಮೇಲೆ ನಿರ್ಧರಿಸಲಾಗಿಲ್ಲ. ಬದಲಾಗಿ ರಾಜಕೀಯದಲ್ಲಿ ಸಾಮಾನ್ಯ ಭಾಗವಹಿಸುವಿಕೆಯ ಆಧಾರದ ಮೇಲೆ ವ್ಯಾಖ್ಯಾನಿಸಲಾಗಿದೆ.
ಭಾರತೀಯ ರಾಷ್ಟ್ರ ನಿರ್ಮಾಣದ ಪಿತಾಮಹರು ಭಾರತೀಯ ಸಮಾಜದ ಬಹುಸಂಸ್ಕೃತಿ, ಬಹುಧರ್ಮೀಯ, ಬಹುಭಾಷಾ ಮತ್ತು ಬಹುಜನಾಂಗೀಯ ಸ್ವಭಾವದ ಬಗ್ಗೆ ಚೆನ್ನಾಗಿ ತಿಳಿದಿದ್ದರು. ಆದ್ದರಿಂದ ಭಾರತೀಯ ಸಮಾಜದ ಬಹುತ್ವದ ಸ್ವರೂಪವನ್ನು ದೃಢೀಕರಿಸುವುದು ಬಹಳ ಮುಖ್ಯವಾಯಿತು. ಯಾವುದೇ ಧಾರ್ಮಿಕ ಗುಂಪು ಭಾರತವನ್ನು ತಮ್ಮದು ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ, ಎಲ್ಲರ ಭಾರತ. ಆದರೆ ಈ ಹೊತ್ತಿನ ಭಾರತದ ಚಲನೆಗಳು ಹಾಗೆ ಕಾಣಿಸುತ್ತಿಲ್ಲ ಎನ್ನುವುದು ಕಳವಳಕಾರಿ ಅಂಶ.
ಇಂದು ಭಾರತ ಎದುರಿಸುತ್ತಿರುವ ಸಮಸ್ಯೆಗಳು ಭಾರತೀಯ ವಾಸ್ತವದ ಮೂರು ಪ್ರಮುಖ ಕ್ಷೇತ್ರಗಳಾದ ಸಂಸ್ಕೃತಿ, ರಾಷ್ಟ್ರ ಮತ್ತು ಮತಾಂತರಕ್ಕೆ ಸಂಬಂಧಿಸಿವೆ. ಈ ವಿಷಯಗಳನ್ನು ಈ ಹೊತ್ತು, ಹಿಂದೂ ಸಮಾಜದ ಮೇಲ್ಜಾತಿ ಮತ್ತು ಸಂಸ್ಕೃತೀಕರಣ ದೃಷ್ಟಿಕೋನಕ್ಕೆ ಸರಿಹೊಂದುವಂತೆ ಹೆಚ್ಚು ಹೆಚ್ಚು ರಾಜಕೀಯಗೊಳಿಸಲಾಗಿದ್ದೇ ಇವತ್ತಿನ ಪರಿಸ್ಥಿತಿಗೆ ಕಾರಣ. ಒಂದು ಧರ್ಮವನ್ನು ಪೊಲಿಟಿಕಲ್ ಐಡೆಂಟಿಟಿಯಾಗಿ ಬಳಸುವ, ಬಳಸಿದ್ದರ ಪರಿಣಾಮವೇ ಇಂತಹ ದುರಂತಗಳು ಸಂಭವಿಸಲು ಕಾರಣ. ಭಾರತೀಯ ಸಮಾಜದ ಬಹುತ್ವದ ಸ್ವರೂಪವನ್ನು ಕಾಪಾಡಲು ಈ ದೇಶದ ಎಲ್ಲಾ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ದಲಿತರು ಮತ್ತು ಭಾರತೀಯ ಸಮಾಜದ ಇತರ ದಮನಿತ ಜನಸಾಮಾನ್ಯರು ತಮಗಾಗಿ ರಚಿತವಾದ ದೇಶದ ಸಂವಿಧಾನವನ್ನು ಅರಿಯಬೇಕಿದೆ. ತಮ್ಮ ಹಕ್ಕುಗಳಿಗಾಗಿ ಜಾಗೃತರಾಗಬೇಕಿದೆ. ವಿಶೇಷವಾಗಿ ಸಂವಿಧಾನವನ್ನು ಪರಾಮರ್ಶಿಸುವ, ಪರಿಶೀಲಿಸುವ /ಬದಲಿಸುವ ಪ್ರಯತ್ನಗಳ ಸಂದರ್ಭದಲ್ಲಿ ಮತ್ತು ದಾಳಿ ಸಂದರ್ಭಗಳಲ್ಲಿ ಇದು ಬಹಳ ಮುಖ್ಯ.
ಭಾರತದ ಮುಖ್ಯ ನ್ಯಾಯಮೂರ್ತಿಗಳ ಮೇಲೆ ನಡೆದ ಹಲ್ಲೆ ಪ್ರಯತ್ನವನ್ನು ನಾವು ಇಂದಿಗೂ ಹಳ್ಳಿಹಳ್ಳಿಗಳಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಪ್ರತಿಮೆಗಳನ್ನು ಪ್ರತಿಷ್ಠಾಪಿಸುವಾಗ ಉಂಟಾಗುವ ಸಂಘರ್ಷದಂತೆಯೇ ನೋಡಬೇಕಾಗಿದೆ.
ಇಂತಹ ಪ್ರತಿರೋಧಗಳು, ಸಂಘರ್ಷಗಳೆಲ್ಲವುಗಳು ಬಹುತೇಕ ದಲಿತ, ಹಿಂದುಳಿದ ವರ್ಗಗಳ ನಾಯಕರುಗಳು ಮುಖ್ಯವಾಹಿನಿಗೆ ಬಂದು ನಿರ್ಣಾಯಕ ಅಧಿಕಾರಯುತ ಪದವಿಗಳಲ್ಲಿ ಇದ್ದಾಗ ಮತ್ತೆ ಮತ್ತೆ ಸಂಭವಿಸುತ್ತವೆ ಮತ್ತು ಭಾರತಕ್ಕೆ ಆಳವಾದ, ಆರದ ಗಾಯವನ್ನುಂಟು ಮಾಡುತ್ತವೆ ಎಂಬುದನ್ನು ಮರೆಯಬಾರದು.
ರಾಜಕೀಯ ಅಧಿಕಾರ ಬದಲಾವಣೆಯು ಮುಖ್ಯವಾಗಿ ಸಾಂವಿಧಾನಿಕ ಮಾರ್ಗಗಳಿಂದಾಗಿ ಸಂಭವಿಸಿದೆ ಎಂಬುದರ ಅರಿವೇ ದಮನಿತ ಸಮುದಾಯಗಳಿಗೆ ಇಲ್ಲ. ಈ ಹೊತ್ತು ಎಲ್ಲರ ತಲೆಗೇರಿರುವ ಸ್ಯೂಡೋ ಹಿಂದೂ ಸಿದ್ಧಾಂತವೇ ರಾಜಕೀಯ ಸಿದ್ಧಾಂತವೂ ಆಗಿಬಿಟ್ಟಿರುವ ವಿಚಿತ್ರ ಸನ್ನಿವೇಶದಲ್ಲಿ ಬಹುಸಂಖ್ಯಾತ ಭಾರತೀಯ ಸಮಾಜ ತುಂಬಾ ಕೆಟ್ಟದಾಗಿ ಸಿಕ್ಕಿಹಾಕಿಕೊಂಡಿದೆ.
ಅವು ಎಷ್ಟರಮಟ್ಟಿಗೆ ಎಂದರೆ, ಭಾರತೀಯ ಸಂವಿಧಾನದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಮರೆಸುವಷ್ಟು, ನಾವು ನಮ್ಮ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಪ್ರತಿಪಾದಿಸುವುದನ್ನು ಮರೆತುಬಿಡುವಷ್ಟು ಮತ್ತು ಭಾರತದ ಜನರಲ್ಲಿ ಭೀತಿಯನ್ನೂ ಹುಟ್ಟಿಸುವಷ್ಟು ಬೆಳೆದಿರುವುದು, ಭಾರತಕ್ಕಂತೂ ಒಳ್ಳೆಯ ಲಕ್ಷಣ ಅಲ್ಲ.
ಮುಖ್ಯ ನ್ಯಾಯಮೂರ್ತಿ ಅವರೆಡೆಗೆ ರಾಕೇಶ್ ಕಿಶೋರ್ ತೂರಬೇಕೆಂದಿದ್ದ ಒಂದು ಬೂಟಿನ ಹಿಂದೆ ಎಷ್ಟೊಂದು ವಿಚಾರಗಳಿವೆ ಎಂಬುದನ್ನು ನೆನೆದರೆ ಈಗಲೂ ಭಯ, ಆತಂಕ ಮತ್ತು ಭಾರತದ ಭವಿಷ್ಯ ಕಣ್ಮುಂದೆ ಬರುತ್ತಿದೆ. ಹಾಗೆಯೇ ಆ ವಕೀಲನ ವಯಸ್ಸೂ ಕೂಡ 71 ವರ್ಷ!
ಇದನ್ನು ಯಾವ ಯಾವ ರಾಜಕೀಯ ಪಕ್ಷಗಳು ಮುಖಂಡರುಗಳು ಖಂಡಿಸಿದ್ದಾರೆ ಎಂದು ಕುತೂಹಲದಿಂದ ಪತ್ರಿಕೆ, ದೂರದರ್ಶನದ ಸುದ್ದಿ, ಸಾಮಾಜಿಕ ಜಾಲತಾಣಗಳ ತಡಕಾಡಿದೆ. ಪ್ರಕರಣ ನಡೆದ ಒಂಭತ್ತು ತಾಸುಗಳ ನಂತರ ಸಿಜೆಐ ಅವರೊಂದಿಗೆ ಪ್ರಧಾನಿ ಮಾತನಾಡಿದ್ದಾರೆ. ಖರ್ಗೆಯವರು ಖಂಡಿಸಿದ್ದಾರೆ. ಅಲ್ಲಿಗೆ ಪ್ರಕರಣ ಮುಕ್ತಾಯಗೊಂಡಂತಾಗಿದೆ. ಪ್ರಶ್ನೆಗಳು ಹಾಗೇ ಉಳಿಯುತ್ತವೆ.
ಇದನ್ನೂ ಓದಿ ಈ ದಿನ ಸಂಪಾದಕೀಯ | ಆರ್‌ಎಸ್‌ಎಸ್‌ಗೆ ನೂರು, ನ್ಯಾಯಮೂರ್ತಿಗಳ ಮೇಲೆ ಶೂ ತೂರು
ಕೊನೆಯದಾಗಿ, ಜೆ ಹೆಚ್ ಪಟೇಲರು ತಮ್ಮ ಆಪ್ತರಿಗೆ ಹೇಳಿದ ಮಾತು ನೆನಪಾಯಿತು. ವಿ ಪಿ ಸಿಂಗ್ ಮಂಡಲ್ ವರದಿ ಜಾರಿಗೆ ತಂದ ದಿನಗಳು. ಆಗ, ಪಟೇಲರು ಸಿಂಗ್ ಅವರನ್ನು ಸಮರ್ಥಿಸಿಕೊಂಡು “ನೋಡಪಾ, ನಮ್ಮ ವಿಧಾನಸಭೆಯ ಅಧಿಕಾರಿಗಳಲ್ಲಿ ಇರುವವರಲ್ಲಿ ಹೆಚ್ಚಿನ ಪಾಲು ಜನ ಮೇಲ್ಜಾತಿಯವರು.ಇದಕ್ಕೆ ವಿನಾಯಿತಿ ಎಂದರೆ ರಿಸರ್ವೇಶನ್ ಮುಖಾಂತರ ಅನಿವಾರ್ಯವಾಗಿ ಮೇಲಕ್ಕೆ ಬಂದಂತಹ ಕೆಲವು ದಲಿತ ಅಧಿಕಾರಿಗಳು ಮಾತ್ರ. ಇವರಲ್ಲಿ ಕೆಲವರು ಒಳ್ಳೆಯ ಅಧಿಕಾರಿಗಳೂ ಇದ್ದಾರೆ. ಆದರೆ ಇಡೀ ವಿಧಾನಸಭೆಯಲ್ಲಿ ಕ್ಷೌರಿಕರ ಜಾತಿಯವನೋ, ಅಗಸರವನೊ, ಮುಸಲ್ಮಾನನೊ, ಬಡಗಿಯೋ, ನೇಕಾರನೋ, ಕುಂಬಾರನೋ ಅಥವಾ ಹೆಚ್ಚು ಜನರ ಓಟಿನ ಬಲವಿಲ್ಲದ ಅಸಂಖ್ಯಾತ ಇತರ ಜಾತಿಗಳಲ್ಲಿ ಯಾವೊಬ್ಬನೂ ಐಎಎಸ್ ಅಧಿಕಾರಿಯಾಗಿರುವುದು ಅಪರೂಪ. ವಿ ಪಿ ಸಿಂಗರ ನಿರ್ಧಾರದಿಂದಾಗಿ ಈ ಎಲ್ಲಾ ಜಾತಿಗಳ ಮುಖಗಳೂ ಇನ್ನು ಮುಂದೆ ಅಧಿಕಾರದ ಸ್ಥಾನದಲ್ಲಿರುವುದನ್ನು ಕಾಣುವಂತಾಗುತ್ತದೆ” ಎಂದು ಹೇಳಿದ್ದರು.
ಪ್ರಾಚೀನ ಭಾರತ ಆಧುನಿಕವಾಗುವುದು ಎಂದರೆ ಹೀಗೆ ಎಂದು ತೋರಿದ ವಿ ಪಿ ಸಿಂಗ್ ಮತ್ತು ಅವರ ಮಾತನ್ನು ಹೇಳಿದ ಜೆ ಎಚ್ ಪಟೇಲರಂತಹ ಸಂವೇದನಾಶೀಲ ರಾಜಕಾರಣಿಗಳು ಇಂದು ನಮ್ಮ ಜೊತೆಗಿಲ್ಲ.
ಆರದ ಗಾಯ, ಹೊಸ ಗಾಯ
ಗಾಯ ಹೊಸದೇನಲ್ಲ
ಹಳ್ಳಿಗಳ ಕೇರಿಗಳಿಗೆ
ಸಿಟಿಗಳ ಕೊಳಗೇರಿಗಳಿಗಳಿಗೆ
ತೂರಿಬರುವ ಚಪ್ಪಲಿ,ಶೂಗಳು
ಹೊಸದೇನಲ್ಲ,
ಹೊಸದು
ದೂರದ ದಿಲ್ಲಿಗೆ,
ನ್ಯಾಯಮೂರ್ತಿಗೆ ಹೊಸದು !
ಈ ಆರದ ಗಾಯ!
ಎಪ್ಪತ್ತೈದು ವರುಷಗಳು
ದೇಶಕ್ಕೆ ಮಾತ್ರವಲ್ಲ?
ಅವರ ದ್ವೇಷಕ್ಕೂ!

ಬಿ ಶ್ರೀನಿವಾಸ
ಸಾಹಿತಿಗಳು