ವಾಯುಮಾಲಿನ್ಯ – ನಾವು ಪ್ರಾಥಮಿಕ ತರಗತಿಯಿಂದಲೇ ಪಠ್ಯದಲ್ಲಿ ಓದಿಕೊಂಡು ಬಂದಿರುವ ವಿಷಯ. ವಾಯುಮಾಲಿನ್ಯದ ದುಷ್ಪರಿಣಾಮ, ಜನರ ಆರೋಗ್ಯದ ಮೇಲೆ ಆಗುವ ಪ್ರಭಾವ ಎಲ್ಲವನ್ನೂ ನಮಗೆ ಸಣ್ಣ ವಯಸ್ಸಿನಿಂದಲೇ ತಿಳಿಸಲಾಗುತ್ತದೆ. ಆದರೆ, ಬೆಳೆಯುತ್ತಿದ್ದಂತೆ ನಾವು ಗೊತ್ತಿದ್ದೋ ಗೊತ್ತಿಲ್ಲದೆಯೋ ಗಾಳಿ ಕಲುಷಿತಗೊಳಿಸುವಲ್ಲಿ ನಾವು ಪಾತ್ರವಹಿಸುತ್ತಿದ್ದೇವೆ. ಹಬ್ಬ ಹರಿದಿನ-ಸಂಭ್ರಮಾಚರಣೆಗೆ ಪಟಾಕಿ ಸಿಡಿಸುವುದು, ಹೆಚ್ಚು ಖಾಸಗಿ ವಾಹನ ಬಳಕೆಯಿಂದ ವಾಯು ಮಾಲಿನ್ಯಕ್ಕೆ ಕೊಡುಗೆ ನೀಡುತ್ತಿದ್ದೇವೆ. ಎಲ್ಲಕ್ಕಿಂತ, ಕಾರ್ಖಾನೆಗಳೇ ವಾಯುಮಾಲಿನ್ಯಕ್ಕೆ ಮುಖ್ಯ ಕಾರಣವೂ ಆಗಿವೆ.
ವಾಯು ಗುಣಮಟ್ಟ ಸೂಚ್ಯಂಕದ (ಎಕ್ಯೂಐ) ಆಧಾರದಲ್ಲಿ ನಮ್ಮ ಸುತ್ತಮುತ್ತಲಿನ ಗಾಳಿಯು ನಮ್ಮ ಆರೋಗ್ಯಕ್ಕೆ ಎಷ್ಟು ಸುರಕ್ಷಿತ ಎಂಬುದನ್ನು ನಿರ್ಧರಿಸಲಾಗುತ್ತದೆ. ಈ ಎಕ್ಯೂಐ ಲೆಕ್ಕಾಚಾರದಲ್ಲಿ ನೋಡಿದಾಗ ವಿಶ್ವದ ಅತೀ ಕಲುಷಿತ ಗುಣಮಟ್ಟದ ಗಾಳಿ ಇರುವ ನಗರಗಳ ಪಟ್ಟಿಯಲ್ಲಿ ದೆಹಲಿ ಎರಡನೇ ಸ್ಥಾನದಲ್ಲಿದೆ. ಹೌದು, ನಮ್ಮ ರಾಷ್ಟ್ರ ರಾಜಧಾನಿಯ ಗಾಳಿ ಜನರ ಆರೋಗ್ಯಕ್ಕೆ ಅತ್ಯಂತ ಕೆಟ್ಟದಾಗಿದೆ. ಅಪಾಯಕಾರಿ ಎಕ್ಯೂಐ ಸೂಚ್ಯಂಕ ಹೊಂದಿರುವ ವಿಶ್ವದ ಅಗ್ರ 10 ನಗರಗಳ ಪಟ್ಟಿಯಲ್ಲಿ ಭಾರತದ ಎರಡು ನಗರಗಳಿವೆ. ಎರಡನೇ ಸ್ಥಾನದಲ್ಲಿ ದೆಹಲಿಯಿದ್ದರೆ, 9ನೇ ಸ್ಥಾನದಲ್ಲಿ ಕೋಲ್ಕತ್ತಾ ಇದೆ.
ಇದನ್ನು ಓದಿದ್ದೀರಾ? ಬೆಂಗಳೂರು, ಮಂಗಳೂರು, ಮೈಸೂರಿನಲ್ಲಿ ಗಾಳಿ ಕಲುಷಿತ : ಎಚ್ಚರಿಕೆ ನೀಡಿದ ಗ್ರೀನ್ ಪೀಸ್ ವರದಿ
ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಅತೀ ಕಲುಷಿತವಾಗಿದ್ದು ಎಕ್ಯೂಐ 204ಕ್ಕೆ ತಲುಪಿದೆ. ಮಂಜಿನಿಂದ ಆವರಿಸಿದ ಮಲೆನಾಡಿನಂತೆ ದೆಹಲಿಯ ಗಾಳಿಯು ಹೊಗೆಯಿಂದ ಆವರಿಸಿದೆ. ಇದಕ್ಕೆಲ್ಲ ಕಾರಣ ವಾಹನದಟ್ಟಣೆ, ಕೈಗಾರಿಕಾ ಮಾಲಿನ್ಯ ಇತ್ಯಾದಿ. ಇನ್ನು ಕೋಲ್ಕತ್ತಾದಲ್ಲಿ ಎಕ್ಯೂಐ ಪ್ರಮಾಣ 113 ಇದೆ. ಈ ಎರಡು ನಗರಗಳೊಂದಿಗೆ ವಿಶ್ವದಲ್ಲೇ ಅತೀ ಕಲುಷಿತ ಗಾಳಿ ಹೊಂದಿರುವ ನಗರ ಎಂಬ ಕುಖ್ಯಾತಿ ಪಡೆಯಲು ನಮ್ಮ ಬೆಂಗಳೂರು ಧಾವಿಸುತ್ತಿದೆ. ದೆಹಲಿ ಅಥವಾ ಕೋಲ್ಕತ್ತಾದ ಸ್ಥಾನವನ್ನು ನಾವು ತುಂಬುತ್ತೇವೆ ಎಂಬ ಓಟದಲ್ಲಿ ಬೆಂಗಳೂರು ಸಾಗಿದೆ. ಇತ್ತೀಚಿನ, ಗ್ರೀನ್‌ಪೀಸ್ ಇಂಡಿಯಾದ ‘ಸ್ಪೇರ್ ದಿ ಏರ್-2’ ವರದಿಯ ಪ್ರಕಾರ ಬೆಂಗಳೂರು, ಮಂಗಳೂರು ಹಾಗು ಮೈಸೂರಿನ ಗಾಳಿಯ ಗುಣಮಟ್ಟ ತೀವ್ರ ಪ್ರಮಾಣದಲ್ಲಿ ಕುಸಿದಿದೆ.
ಏನಿದು ಎಕ್ಯೂಐ? ಲೆಕ್ಕಾಚಾರ ಹೇಗೆ?
ನಾವು ಬೆಂಗಳೂರಿನ ಎಕ್ಯೂಐ ಬಗ್ಗೆ ತಿಳಿಯುವ ಮುನ್ನ ಎಕ್ಯೂಐ ಎಂದರೇನು, ಹೇಗೆ ಲೆಕ್ಕಾಚಾರ ಹಾಕಲಾಗುತ್ತದೆ ಎಂಬ ಬಗ್ಗೆ ತಿಳಿಯೋಣ. ಎಕ್ಯೂಐ ಎಂದರೆ ವಾಯು ಗುಣಮಟ್ಟ ಸೂಚ್ಯಂಕ. ಇದು ದೈನಂದಿನ ವರದಿಯಾಗಿದ್ದು ಗಾಳಿಯು ಎಷ್ಟು ಕಲುಷಿತವಾಗಿದೆ, ಎಷ್ಟು ಶುದ್ಧವಾಗಿದೆ, ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಸೂಚಿಸುತ್ತದೆ. ಗಾಳಿಯಲ್ಲಿರುವ ಕಣ ಮಾಲಿನ್ಯ, ಕಾರ್ಬನ್ ಮಾನಾಕ್ಸೈಡ್, ಸಲ್ಫರ್ ಡೈಆಕ್ಸೈಡ್ ಮತ್ತು ನೈಟ್ರೋಜನ್ ಡೈಆಕ್ಸೈಡ್ ಆಧಾರದಲ್ಲಿ ಈ ಸೂಚ್ಯಂಕ ನಿಗದಿಪಡಿಸಲಾಗುತ್ತದೆ.
ಎಕ್ಯೂಐ 0–33: ಗಾಳಿಯ ಗುಣಮಟ್ಟ ಅತ್ಯುತ್ತಮ
ಎಕ್ಯೂಐ 34–66: ಗಾಳಿಯ ಗುಣಮಟ್ಟ ಉತ್ತಮ
ಎಕ್ಯೂಐ 67–99: ಗಾಳಿಯ ಗುಣಮಟ್ಟ ಸಾಧಾರಣ
ಎಕ್ಯೂಐ 100–149: ಗಾಳಿಯ ಗುಣಮಟ್ಟ ಕಳಪೆ
ಎಕ್ಯೂಐ 150–200: ಗಾಳಿಯ ಗುಣಮಟ್ಟ ಅತೀ ಕಳಪೆ
ಎಕ್ಯೂಐ 200ಗಿಂತ ಅಧಿಕ: ಗಾಳಿಯ ಗುಣಮಟ್ಟ ಅಪಾಯಕಾರಿ
ಬೆಂಗಳೂರಿನ ವಿವಿಧ ಪ್ರದೇಶಗಳ ವಾಯು ಗುಣಮಟ್ಟ
ಬೆಂಗಳೂರಿನಲ್ಲಿ ಮೈಲಸಂದ್ರ, ಸಿಲ್ಕ್ ಬೋರ್ಡ್‌ನಲ್ಲಿ (ಬೊಮ್ಮನಹಳ್ಳಿ) ಗಾಳಿಯ ಗುಣಮಟ್ಟ ಅತೀ ಕೆಟ್ಟದಾಗಿದ್ದು ಎರಡು ಪ್ರದೇಶದಲ್ಲಿಯೂ ಎಕ್ಯೂಐ 248-249 ಆಗಿದೆ. ಹೆಬ್ಬಾಳ (168), ಬಾಪುಜಿ ನಗರ (168), ಶಿವಪುರ-ಪೀಣ್ಯ (184), ಹೊಂಬೇಗೌಡ ನಗರ (121), ಜಯನಗರ 5ನೇ ಬ್ಲಾಕ್ (122), ಬಿಟಿಎಂ ಲೇಔಟ್ (170) ಗಾಳಿ ಗುಣಮಟ್ಟ ಕಲುಷಿತವಾಗಿದೆ. ಕೃಷ್ಣರಾಜಪುರ, ಸಾನೆಗುರುವ ಹಳ್ಳಿ ಹೊರತುಪಡಿಸಿ ಬಹುತೇಕ ಎಲ್ಲ ಪ್ರದೇಶಗಳ ವಾಯುಗುಣಮಟ್ಟ ಜನರ ದೇಹಕ್ಕೆ ಅಪಾಯ ತರುವ ಹಂತಕ್ಕೆ ತಲುಪಿದೆ.
ಇದನ್ನು ಓದಿದ್ದೀರಾ?: ದೆಹಲಿ ವಾಯು ಮಾಲಿನ್ಯ: 4 ರಾಜ್ಯಗಳಲ್ಲಿ ತ್ಯಾಜ್ಯ ಸುಡುವುದನ್ನು ತಕ್ಷಣ ನಿಲ್ಲಿಸುವಂತೆ ಸುಪ್ರೀಂ ಆದೇಶ
ಮಾನಸಿಕ ಆರೋಗ್ಯಕ್ಕೂ ಪ್ರಭಾವ ಬೀರುತ್ತೆ ವಾಯುಮಾಲಿನ್ಯ!
ಎಕ್ಯೂಐ ಹೆಚ್ಚಾಗುತ್ತಿದೆ ಎಂದರೆ ನಮ್ಮ ಆರೋಗ್ಯದ ಮೇಲಾಗುವ ಕೆಟ್ಟ ಪರಿಣಾಮವೂ ಕೂಡಾ ಅಧಿಕವಾಗುತ್ತಿದೆ ಎಂದರ್ಥ. ಕಲುಷಿತವಾದ ಗಾಳಿಯನ್ನು ನಾವು ಉಸಿರಾಡುವುದರಿಂದ ಉಸಿರಾಟದ ಸಮಸ್ಯೆ, ಅಸ್ತಮಾ, ಹೃದಯ ಸಂಬಂಧಿ ಹಾಗು ಶ್ವಾಸಕೋಶ ಸಂಬಂಧಿ ಕಾಯಿಲೆಗಳು, ಸೋಂಕು, ಇತರೆ ಕಾಯಿಲೆಗಳು ಬರಬಹುದು. ಇಷ್ಟು ಮಾತ್ರವಲ್ಲದೆ ವಾಯುಮಾಲಿನ್ಯ ಜನರ ಮಾನಸಿಕ ಆರೋಗ್ಯಕ್ಕೂ ಪ್ರಭಾವ ಬೀರಬಹುದು ಎಂದು ಕೆಲವೊಂದು ಸಂಶೋಧನಾ ವರದಿಗಳು ಹೇಳುತ್ತದೆ.
ದೆಹಲಿ ಸರ್ಕಾರ ಈ ವರ್ಷದ ಆರಂಭದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ನೀಡಿದ ವರದಿಯಲ್ಲಿ ವಾಯುಮಾಲಿನ್ಯವು ಮಾನಸಿಕ ಆರೋಗ್ಯವನ್ನು ಕೂಡಾ ಹದಗೆಡಿಸುತ್ತದೆ ಎಂಬುದನ್ನು ಉಲ್ಲೇಖಿಸಿದೆ. ವಾಯುಮಾಲಿನ್ಯವು ದುಃಖದ ಭಾವನೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಮರೆವು ಹೆಚ್ಚಾಗುತ್ತದೆ, ಜೀವನವೇ ದೊಡ್ಡ ಸವಾಲೆಂಬಂತೆ ಭಾಸವಾಗುತ್ತದೆ, ಜೀವನದ ಸವಾಲುಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಎಂದು ವರದಿ ಹೇಳಿದೆ.
ವಾಯುಮಾಲಿನ್ಯ ತಡೆಗೆ ನಾವು-ನೀವು ಮತ್ತು ಸರ್ಕಾರ
ಆರೋಗ್ಯಕರ ಪರಿಸರದ ಹಕ್ಕು 100ಕ್ಕೂ ಹೆಚ್ಚು ದೇಶಗಳಲ್ಲಿ ಸಾಂವಿಧಾನಿಕ ಸ್ಥಾನಮಾನವನ್ನು ಹೊಂದಿದೆ. ವಾಯುಮಾಲಿನ್ಯವನ್ನು ತಡೆಗಟ್ಟಲು ನಾವು ಮಾಡುವ ಸಣ್ಣ ಪ್ರಯತ್ನವೂ ಕೂಡಾ ಅಗಾಧವಾಗಿದೆ. ಜೊತೆಗೆ ಸರ್ಕಾರಗಳ ಕ್ರಮ ಅತ್ಯಗತ್ಯ. ಗಾಳಿ ಕಲುಷಿತಗೊಳಿಸುವ ಕಾರ್ಖಾನೆಗಳಿಗೆ ಕಡಿವಾಣ ಹಾಕುವುದು ಸರ್ಕಾರದ ಆದ್ಯ ಕರ್ತವ್ಯ. ಅಭಿವೃದ್ಧಿ ಮಾಡುವ ಜೊತೆಗೆ ವಾಯು, ಶಬ್ದ ಮಾಲಿನ್ಯವನ್ನು ನಿಯಂತ್ರಣ ನಮ್ಮ ನಿಮ್ಮ, ನಮ್ಮ ಮುಂದಿನ ಪೀಳಿಗೆಯ ಆರೋಗ್ಯದ ದೃಷ್ಟಿಯಿಂದ ಅತ್ಯವಶ್ಯಕ.