ಬಾಂಗ್ಲಾದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಶೇಖ್‌ ಹಸೀನಾ ಬೆಂಬಲಿಸಿ ಕಷ್ಟಕ್ಕೀಡಾಗಲಿದೆಯೇ ಭಾರತ?

Date:

Advertisements

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬರುಬರುತ್ತ ನೆರೆಯ ದೇಶಗಳೊಂದಿಗೆ ಸಂಬಂಧವನ್ನು ಹದಗೆಡಿಸಿಕೊಳ್ಳುತ್ತಿದೆ. ಪಾಕಿಸ್ತಾನದೊಂದಿಗೆ ಭಾರತದ ಸಂಬಂಧ ಮೊದಲಿನಿಂದಲೂ ಉತ್ತಮವಾಗಿಲ್ಲ. ಕೆಲವು ವರ್ಷಗಳಿಂದ ಶ್ರೀಲಂಕಾದೊಂದಿಗೆ ತನ್ನ ಸಂಬಂಧವನ್ನು ಕೆಡಿಸಿಕೊಂಡಿದೆ. ಮಾಲ್ಡೀವ್ಸ್‌ನೊಂದಿಗೆ ಕೂಡ ಬಾಂಧವ್ಯ ಹಳಸಿಕೊಂಡಿದೆ. ನೇಪಾಳದೊಂದಿಗೂ ಮೊದಲು ಇದ್ದಂತಹ ಉತ್ತಮ ಬಾಂಧವ್ಯ ಇಲ್ಲ. ರಾಷ್ಟ್ರದ ವಿದೇಶಾಂಗ ನೀತಿ ಹಳಿತಪ್ಪಿ ಅಡ್ಡಾದಿಡ್ಡಿಯಾಗಿದೆ ಎಂಬುದನ್ನು ಕೇಂದ್ರದ ನಾಯಕರು ಅರಿತುಕೊಳ್ಳಬೇಕಿದೆ.

ಕಳೆದ ಆರು ತಿಂಗಳುಗಳ ಕಾಲ ತಣ್ಣಗಾಗಿದ್ದ ನೆರೆಯ ಬಾಂಗ್ಲಾದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಬಾಂಗ್ಲಾದೇಶದ ಸ್ಥಾಪಕ ಎಂದು ಕರೆಯಲ್ಪಡುವ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ತಂದೆ ಶೇಖ್ ಮುಜಿಬುರ್ ರೆಹಮಾನ್ ಅವರ ಢಾಕಾದಲ್ಲಿರುವ ನಿವಾಸವನ್ನು ಧ್ವಂಸಗೊಳಿಸಲಾಗಿದೆ. ಅವಾಮಿ ಲೀಗ್ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ, ರಾಜಧಾನಿ ಢಾಕಾ ಸೇರಿದಂತೆ ದೇಶದ ಹಲವಾರು ನಗರಗಳಲ್ಲಿ ಹಿಂಸಾಚಾರ ತೀವ್ರಗೊಂಡಿದೆ. ಫೆಬ್ರವರಿ 6 ರಂದು ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷ ತನ್ನ ಕಾರ್ಯಕರ್ತರು ಮತ್ತು ನಾಯಕರು ಬೀದಿಗಿಳಿದು ಪ್ರತಿಭಟನೆ ಮಾಡುವಂತೆ ಮನವಿ ಮಾಡಿತ್ತು.

ಬಾಂಗ್ಲಾದೇಶದಲ್ಲಿ ಸಾರಿಗೆ ವ್ಯವಸ್ಥೆಯನ್ನು ಸ್ಥಗಿತಗೊಳಿಸಲು ಮತ್ತು ಹೆದ್ದಾರಿಗಳು ಸೇರಿದಂತೆ ಹಲವಾರು ನಗರಗಳನ್ನು ನಿರ್ಬಂಧಿಸಲು ಅವಾಮಿ ಲೀಗ್ ಸಿದ್ಧತೆ ನಡೆಸಿತ್ತು. ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಮತ್ತು ಅವಾಮಿ ಲೀಗ್ ನಾಯಕರು ಮತ್ತು ಕಾರ್ಮಿಕರ ಮೇಲಿನ ಹಿಂಸಾಚಾರದ ವಿರುದ್ಧ ಅವಾಮಿ ಲೀಗ್ ಬೃಹತ್ ಪ್ರತಿಭಟನೆಗೆ ಕರೆ ನೀಡಿತ್ತು. ಈ ಬೆಳವಣಿಗೆಯ ನಂತರವೆ ಹಿಂಸಾಚಾರ ಶುರುವಾಗಿದೆ. ಆಡಳಿತ ಹಾಗೂ ವಿರೋಧ ಪಕ್ಷದ ಪ್ರತಿಭಟನೆಯ ಪರಿಣಾಮ ಬಾಂಗ್ಲಾದ ಸ್ವಾತಂತ್ರ್ಯ ಚಳವಳಿಯ ನಾಯಕ ಶೇಖ್ ಮುಜಿಬುರ್ ರೆಹಮಾನ್ ಅವರ ನಿವಾಸವನ್ನು ಹಾಳುಗೆಡವಲಾಗಿದೆ. ಬಾಂಗ್ಲಾವು 1971ರಲ್ಲಿ ಭಾರತದ ಸಹಕಾರದೊಂದಿಗೆ ಪ್ರತ್ಯೇಕ ರಾಷ್ಟ್ರವಾಗಿ ಪ್ರಪ್ರಥಮ ರಾಷ್ಟ್ರಧ್ಯಕ್ಷರಾಗಿ ನೇಮಕಗೊಂಡರು. 1975 ರಲ್ಲಿ ಅವರು ವಾಸವಿದ್ದ ಮನೆಯಲ್ಲಿ ಅವರನ್ನು ಕೊಲ್ಲಲಾಗಿತ್ತು. ನಂತರ ಹಸೀನಾ ಅವರು ಆ ಮನೆಯನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಿದರು.   

Advertisements

ಭಾರತ ಸರ್ಕಾರದ ನೆರವಿನೊಂದಿಗೆ ನವದೆಹಲಿಯಲ್ಲಿ ರಕ್ಷಣೆ ಪಡೆಯುತ್ತಿರುವ ಶೇಖ್ ಹಸೀನಾ ತಮ್ಮ ಮನೆಯ ದಾಳಿಗೆ ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಕಾರಣವೆಂದು ನೇರವಾಗಿ ಆರೋಪಿಸಿದ್ದಾರೆ. ‘ನಾವು ಶೇಖ್ ಮುಜಿಬುರ್ ರೆಹಮಾನ್ ಅವರ ನೆನಪುಗಳಿಗಾಗಿ ಬದುಕುತ್ತಿದ್ದೇವೆ. ಆದರೆ ಯೂನಸ್ ಬೆಂಬಲಿಗರು ಮುಜಿಬುರ್‌ ಅವರ ಸ್ಮಾರಕವನ್ನು ನಾಶಪಡಿಸುತ್ತಿದ್ದಾರೆ. ಬುಲ್ಡೋಜರ್ ಬಳಸಿ ಲಕ್ಷಾಂತರ ಹುತಾತ್ಮರ ಪ್ರಾಣವನ್ನು ಬಲಿಕೊಟ್ಟು ನಾವು ಗಳಿಸಿದ ರಾಷ್ಟ್ರಧ್ವಜ, ಸಂವಿಧಾನ ಮತ್ತು ಸ್ವಾತಂತ್ರ್ಯವನ್ನು ನಾಶಮಾಡುವ ಶಕ್ತಿ ಅವರಿಗೆ ಇನ್ನೂ ಬಂದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಶೇಖ್‌ ಹಸೀನಾರ ಪ್ರಚೋದನೆಯ ಈ ಮಾತುಗಳು ಮತ್ತೆ ಅಧಿಕಾರ ಪಡೆಯಲು ನಡೆಸುತ್ತಿರುವ ಸಂಚು ಎಂಬ ಮಾತುಗಳು ಎಲ್ಲರಿಗೂ ಅರ್ಥವಾಗುತ್ತದೆ. ಪದಚ್ಯುತ ಪ್ರಧಾನಿಯ 15 ವರ್ಷಗಳ ನಿರಂಕುಶ ಆಡಳಿತದ ವಿರುದ್ಧ ಕಳೆದ 6 ತಿಂಗಳ ಹಿಂದೆ ದೇಶದ ವಿದ್ಯಾರ್ಥಿ ಹಾಗೂ ನಾಗರಿಕ ಸಮೂಹ ದೇಶಾದ್ಯಂತ ಕಿಚ್ಚು ಹೊರಹಾಕಿದ್ದರು. ಹಣದುಬ್ಬರ ಏರಿಕೆ, ಹೆಚ್ಚುತ್ತಿರುವ ನಿರುದ್ಯೋಗ, ಅಭಿವೃದ್ಧಿಯ ಕಡೆಗಣನೆ ಮತ್ತು ಕುಗ್ಗುತ್ತಿರುವ ವಿದೇಶಿ ವಿನಿಮಯ ದರ ಸೇರಿದಂತೆ ಹಲವು ರೀತಿಯ ಅಸಮಾಧಾನಗಳಿಂದ ಹಿಂಸಾಚಾರ ಶುರುವಾಗಿತ್ತು. ಬಾಂಗ್ಲಾದೇಶದ 17 ಕೋಟಿ ಜನಸಂಖ್ಯೆಯಲ್ಲಿ ಮೂರು ಕೋಟಿಗೂ ಹೆಚ್ಚು ಯುವಜನರಿಗೆ ಉದ್ಯೋಗವಿರಲಿಲ್ಲ. ಗುಣಮಟ್ಟದ ಶಿಕ್ಷಣದಿಂದ ಲಕ್ಷಾಂತರ ಮಂದಿ ವಂಚಿತರಾಗಿದ್ದರು. ಒಟ್ಟಾರೆ ಜನಸಂಖ್ಯೆಯಲ್ಲಿ ಮೂರನೇ ಎರಡರಷ್ಟು ಮಂದಿ 15 ರಿಂದ 50 ವರ್ಷ ವಯಸ್ಸಿನವರು. ಇವರಲ್ಲಿ ಬಹುತೇಕರಿಗೆ ಉದ್ಯೋಗ ಹಾಗೂ ಶಿಕ್ಷಣವಿಲ್ಲ. ಪ್ರತಿ ವರ್ಷ 20 ಲಕ್ಷ ಯುವಜನರು ನಿರುದ್ಯೋಗಿಗಳಾಗುತ್ತಿದ್ದಾರೆ.

ಇವೆಲ್ಲ ಸಿಟ್ಟು ಹಸೀನಾ ಸರ್ಕಾರದ ವಿರುದ್ಧ ತಿರುಗಿಬಿದ್ದಿತ್ತು. ದೇಶದಲ್ಲಿ ಎಲ್ಲ ಕಚೇರಿಗಳು, ಬ್ಯಾಂಕ್‌ಗಳು, ಕಾರ್ಖಾನೆಗಳು ತೆರೆದಿದ್ದರೂ ಕೆಲಸ ಮಾಡಲು ಸಿಬ್ಬಂದಿಗಳು ಬಂದಿರಲಿಲ್ಲ. ಪ್ರಮುಖ ಹೆದ್ದಾರಿಗಳಲ್ಲಿ ಪ್ರತಿಭಟನಾಕಾರರು ಜಮಾಯಿಸಿ ರಸ್ತೆ ತಡೆ ನಡೆಸಿ ನಾಗರಿಕರಿಗೆ ತೆರಿಗೆ ಮತ್ತು ಇತರ ಸರ್ಕಾರಿ ಬಿಲ್‌ಗಳನ್ನು ಪಾವತಿಸದಂತೆ ಅಸಹಕಾರ ಚಳವಳಿಗೆ ಮನವಿ ಮಾಡಿದ್ದರು. ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಯಲ್ಲಿ 800ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಕೊನೆಗೆ ದೇಶದ ಜನರ ಆವೇಶಕ್ಕೆ ಹೆದರಿದ ಪ್ರಧಾನಿ ಶೇಖ್‌ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನಗೈದು ರಹಸ್ಯ ಸ್ಥಳದಲ್ಲಿ ವಾಸಿಸುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದುರಹಂಕಾರಿ ದೊಡ್ಡಣ್ಣನ ಎದುರು ಮಂಡಿಯೂರಿದ ಮೋದಿ

ಈಗ ಮತ್ತೆ ದೇಶದ ಜನರಲ್ಲಿ ತಂದೆಯ ಹೆಸರಿನ ಮೂಲಕ ಸಹಾನುಭೂತಿಯನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕಿಡಿಗೇಡಿಗಳು ಹಾಗೂ ಆಡಳಿತ ಪಕ್ಷದ ಕಾರ್ಯಕರ್ತರು ಬಾಂಗ್ಲಾದೇಶದ ಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ ಮನೆ ಹಾಗೂ ಪ್ರತಿಮೆಯನ್ನು ಧ್ವಂಸಗೊಳಿಸಿದ್ದು ಖಂಡಿತಾ ತಪ್ಪು. ಆದರೆ ದೇಶದಲ್ಲಿ ಒಂದಿಷ್ಟು ಬದಲಾವಣೆಯನ್ನು ತರಲು ಪ್ರಯತ್ನಿಸುತ್ತಿರುವ ಮೊಹಮ್ಮದ್ ಯೂನಸ್ ವಿರುದ್ಧ ಶೇಖ್ ಹಸೀನಾ ಮಸಲತ್ತು ನಡೆಸುತ್ತಿದ್ದಾರೆ. ಇವೆಲ್ಲವನ್ನು ಗಮನಿಸಿದರೆ ದೇಶದ ಹಿತಕ್ಕಿಂತ ಅಧಿಕಾರದ ದುರಾಸೆಯೆ ಹಸೀನಾರಿಗೆ ಹೆಚ್ಚಾಗಿದೆ. ತಮ್ಮ ಸ್ವಾರ್ಥಕ್ಕಾಗಿ ದೇಶದ ಅಮಾಯಕರನ್ನು ಪ್ರತಿಭಟನೆ, ಹಿಂಸೆಗೆ ಬಳಸಿಕೊಂಡು ಬಲಿಕೊಡಲು ಹೊರಟಿದ್ದಾರೆ.  

ಪ್ರತಿಭಟನೆಗೆ ಹೈಕೋರ್ಟ್ ತೀರ್ಪು ಕೂಡ ಕಾರಣ

ಶೇಖ್‌ ಹಸೀನಾ ವಿರುದ್ಧದ ಅಂದಿನ ಆಕ್ರೋಶಕ್ಕೆ ಬಾಂಗ್ಲಾದೇಶದ ಹೈಕೋರ್ಟ್ ತೀರ್ಪು ಕೂಡ ಕಾರಣವಾಗಿತ್ತು. ಅಲ್ಲಿನ ಹೈಕೋರ್ಟ್ ಕಳೆದ ವರ್ಷದ ಜೂನ್‌ನಲ್ಲಿ ಪ್ರಕಟಿಸಿದ ತೀರ್ಪಿನಲ್ಲಿ 1971ರ ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸೇನಾ ಸಿಬ್ಬಂದಿಯ ಮಕ್ಕಳು, ಸಂಬಂಧಿಕರಿಗೆ ಶೇ. 30ರಷ್ಟು ಮೀಸಲಾತಿ ನೀಡಬೇಕೆಂದು ಆದೇಶ ನೀಡಿತ್ತು. ಈ ತೀರ್ಪಿನಿಂದ ಪ್ರತಿಭಾನ್ವಿತರ ಜೊತೆ ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದ ಜಿಲ್ಲೆಗಳು, ಮಹಿಳೆಯರು, ಅಲ್ಪಸಂಖ್ಯಾತರು ಹಾಗೂ ಅಂಗವಿಕಲರಿಗೆ ಅನ್ಯಾಯವಾಗಿತ್ತು. ನೂತನ ಮೀಸಲಾತಿ ನಿಯಮದಿಂದ ಆಡಳಿತ ಪಕ್ಷ ಅವಾಮಿ ಲೀಗ್ ಮುಖ್ಯಸ್ಥೆ ಹಾಗೂ ಪ್ರಧಾನಿ ಶೇಖ್ ಹಸೀನಾರ ಬೆಂಬಲಿಗರಿಗೆ ಹೆಚ್ಚಿನ ಅನುಕೂಲ ದೊರಕುತ್ತಿತ್ತು. ತೀರ್ಪಿನಿಂದಾಗಿ ಪ್ರತಿಭಾವಂತ ಯುವಕರು, ಹಿಂದುಳಿದವರನ್ನು ಉದ್ಯೋಗದಿಂದ ವಂಚಿತ ಮಾಡಲಾಗುತ್ತಿತ್ತು. ಅನರ್ಹರನ್ನು ಸರ್ಕಾರಿ ನೌಕರಿಯಲ್ಲಿ ತುಂಬಲಾಗುವ ಗುಪ್ತ ಅಜೆಂಡ ಇದಾಗಿತ್ತು.

ಹಸೀನಾ ಬೆಂಬಲಕ್ಕೆ ನಿಂತಿರುವ ಭಾರತ

ಸರ್ಕಾರ ಹಾಗೂ ದೇಶದ ಜನರಿಗೆ ಬೆದರಿ ಭಾರತದಲ್ಲಿ ಅವಿತು ಕುಳಿತಿರುವ ಶೇಖ್‌ ಹಸೀನಾಗೆ ಕೇಂದ್ರ ಬಿಜೆಪಿ ಸರ್ಕಾರ ಬೆಂಬಲ ನೀಡುತ್ತಿದೆ. ಹಲವು ಭ್ರಷ್ಟಾಚಾರ ಪ್ರಕರಣಗಳಿರುವುದರಿಂದ ವಿಚಾರಣೆಗಾಗಿ ತಮ್ಮ ದೇಶಕ್ಕೆ ಗಡಿಪಾರು ಮಾಡುವಂತೆ ಮೊಹಮ್ಮದ್ ಯೂನಸ್ ಸರ್ಕಾರ ಹಲವು ಬಾರಿ ಮನವಿ ಮಾಡಿದ್ದರೂ ಕೇಂದ್ರ ಸರ್ಕಾರ ಸೊಪ್ಪು ಹಾಕುತ್ತಿಲ್ಲ. ಶೇಖ್ ಹಸೀನಾ ಅವರನ್ನು ಹಸ್ತಾಂತರಿಸಲು ಭಾರತಕ್ಕೆ ಬಾಂಗ್ಲಾ ಕೋರಿದೆ ಎಂದು ಇತ್ತೀಚಿಗೆ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಲೋಕಸಭೆಗೆ ಮಾಹಿತಿ ನೀಡಿದ್ದರು. ಬಾಂಗ್ಲಾದೇಶ ಸರ್ಕಾರವು 2024ರ ಆಗಸ್ಟ್ 5ರಂದು ಭಾರತಕ್ಕೆ ಬರುವ ಮೊದಲು ಮಾಡಿದ ಅಪರಾಧಗಳಿಗಾಗಿ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಕೋರಿದೆ. ಬಾಂಗ್ಲಾದೇಶ ಸರ್ಕಾರಕ್ಕೆ ನಮ್ಮ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿಸಿದ್ದರು. ಹೀಗೆ ಹೇಳುವ ಮೂಲಕ ಭ್ರಷ್ಟಾಚಾರವೆಸಗಿರುವ ವ್ಯಕ್ತಿಯನ್ನು ಬೆಂಬಲಿಸಿ ನೆರೆಯ ದೇಶದ ಸ್ನೇಹವನ್ನು ಕೇಂದ್ರ ಸರ್ಕಾರ ಕಳೆದುಕೊಳ್ಳುತ್ತಿದೆ.    

ಅಲ್ಲದೆ ಹಸೀನಾ ಸರ್ಕಾರ ಪತನಕ್ಕೆ ಕಾರಣವಾದ ಪ್ರತಿಭಟನೆ, ಹಿಂಸಾಚಾರದಲ್ಲಿ ಪಾಕಿಸ್ತಾನ, ಚೀನಾ ಪರ ಒಲವು ಉಳ್ಳವರೇ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿದ್ದರು ಎಂದು ಬಿಜೆಪಿ ಸರ್ಕಾರ ಹೇಳುತ್ತಿದೆ. ಬಾಂಗ್ಲಾದಲ್ಲಿ ಹಸೀನಾ ಅವರ ಅವಾಮಿ ಲೀಗ್ ಬಿಟ್ಟು ಇತರ ಪಕ್ಷಗಳು ಭಾರತದ ಪರ ನಿಲುವು ಹೊಂದಿಲ್ಲ. ಶೇಖ್‌ ಹಸೀನಾ ಅವರಿಗೆ ರಕ್ಷಣೆ ನೀಡಿರುವುದರಿಂದ ಭಾರತ – ಬಾಂಗ್ಲಾ ಸಂಬಂಧ ಹದಗೆಡುತ್ತಿದೆ. ರಾಷ್ಟ್ರದ ಭದ್ರತೆಯ ದೃಷ್ಟಿಯಿಂದ ಅಕ್ಕಪಕ್ಕದ ದೇಶಗಳೊಂದಿಗೆ ಉತ್ತಮ ಸಂಬಂಧ ಹೊಂದಿರುವುದು ಬಹಳಮುಖ್ಯ. ಆದರೆ, ಇತ್ತೀಚಿನ ವರ್ಷಗಳಲ್ಲಿ ಭಾರತವು ನೆರೆಯ ರಾಷ್ಟ್ರಗಳ ಗೆಳೆತನವನ್ನು ಕಳೆದುಕೊಳ್ಳುತ್ತಿದೆ. ಅರಬ್ಬಿ ಸಮುದ್ರ , ಹಿಂದೂ ಮಹಾಸಾಗರ, ಬಂಗಾಳಕೊಲ್ಲಿ ವ್ಯಾಪ್ತಿಯಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಚೀನಾ, ಭಾರತದ ನೆರೆಯ ರಾಷ್ಟ್ರಗಳಿಗೆ ಸಾಲ, ಬಂದರು ನಿರ್ಮಾಣಕ್ಕೆ ಸಹಕಾರ, ಮೂಲಸೌಕರ್ಯಕ್ಕೆ ನೆರವು, ನೀಡುವಂತಹ ಕಾರ್ಯಕ್ರಮಗಳಿಂದ ಆ ರಾಷ್ಟ್ರಗಳಲ್ಲಿ ತನ್ನ ನೆಲೆಯನ್ನು ಗಟ್ಟಿಗೊಳಿಸುತ್ತಿದೆ.

ಬಾಂಗ್ಲಾದ ಬೆಳವಣಿಗೆಗಳಿಂದ ಭಾರತಕ್ಕೆ ಎದುರಾಗಿರುವ ಮತ್ತೊಂದು ಆತಂಕ ಒಳನುಸುಳಿವಿಕೆಯದ್ದು. ಬಾಂಗ್ಲಾ ಭಾರತದ ಪಶ್ಚಿಮ ಬಂಗಾಳ, ತ್ರಿಪುರಾ, ಮೇಘಾಲಯ, ಮಿಜೋರಾಂ ಮತ್ತು ಅಸ್ಸಾಂನೊಂದಿಗೆ 4,096 ಕಿ.ಮೀ.ಯಷ್ಟು ಗಡಿಯನ್ನು ಹಂಚಿಕೊಂಡಿದೆ. 1971ರಲ್ಲಿ ಬಾಂಗ್ಲಾದೇಶವು ಪಾಕಿಸ್ತಾನದಿಂದ ಪ್ರತ್ಯೇಕಗೊಂಡಾಗ, ಅಲ್ಲಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಈಶಾನ್ಯ ರಾಜ್ಯಗಳಿಗೆ ನುಸುಳಿದ್ದರು. ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ ಭಾರತ ಮತ್ತು ಬಾಂಗ್ಲಾದೇಶ ನಡುವಿನ 4096.7 ಉದ್ದದ ಗಡಿಯ ಪೈಕಿ ಒಟ್ಟು 864.482 ಕಿ.ಮೀ.ಭಾಗಕ್ಕೆ ಇನ್ನೂ ಬೇಲಿಯನ್ನು ನಿರ್ಮಿಸಿಲ್ಲ. ಇದನ್ನು ಕೇಂದ್ರ ಸರ್ಕಾರವೇ ಒಪ್ಪಿಕೊಂಡಿತ್ತು. ಇತ್ತೀಚಿಗೆ ಸಂಸತ್ತಿನಲ್ಲಿ ಮಾಹಿತಿ ನೀಡಿದ್ದ ವಿದೇಶಾಂಗ ಸಚಿವರು ಒಟ್ಟು ಗಡಿಯ ಪೈಕಿ 174.514 ಕಿ.ಮೀ.ಭಾಗವು ‘ಕಾರ್ಯಸಾಧ್ಯವಲ್ಲದ’ ಅಂತರವಾಗಿದೆ ಎಂದು ತಿಳಿಸಿದ್ದರು. ಒಟ್ಟು 4,096.7 ಕಿ.ಮೀ.ಗಡಿಯ ಪೈಕಿ 3,232.218 ಕಿ.ಮೀ.ಗಡಿಯಲ್ಲಿ ಬೇಲಿಯನ್ನು ನಿರ್ಮಿಸಲಾಗಿದೆ ಎಂದು ಹೇಳಿದ್ದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬರುಬರುತ್ತ ನೆರೆಯ ದೇಶಗಳೊಂದಿಗೆ ಸಂಬಂಧವನ್ನು ಕಡಿದುಕೊಳ್ಳುತ್ತಿದೆ. ಈಗಾಗಲೇ ಪಾಕಿಸ್ತಾನದೊಂದಿಗೆ ಭಾರತದ ಸಂಬಂಧ ಮೊದಲಿನಿಂದಲೂ ಉತ್ತಮವಾಗಿಲ್ಲ. ಕೆಲವು ವರ್ಷಗಳಿಂದ ಶ್ರೀಲಂಕಾದೊಂದಿಗೆ ತನ್ನ ಸಂಬಂಧವನ್ನು ಹದಗೆಡಿಸಿಕೊಂಡಿದೆ. ಮಾಲ್ಡೀವ್ಸ್‌ನೊಂದಿಗೆ ಕೂಡ ಬಾಂಧವ್ಯವನ್ನು ಹಳಸಿಕೊಂಡಿದೆ. ನೇಪಾಳದೊಂದಿಗೂ ಮೊದಲು ಇದ್ದಂತಹ ಉತ್ತಮ ಬಾಂಧವ್ಯ ಈಗಿಲ್ಲ. ಇವೆಲ್ಲ ಸಮಸ್ಯೆಗಳು ರಾಷ್ಟ್ರದ ವಿದೇಶಾಂಗ ನೀತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬುದನ್ನು ಕೇಂದ್ರದ ನಾಯಕರು ಅರಿತುಕೊಳ್ಳಬೇಕಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X