ಕನ್ನಡದ ಕಥಾಸಂಕಲನಕ್ಕೆ 2025ರ ಸಾಲಿನ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್ ಅವರನ್ನು ಈ ಬಾರಿಯ ದಸರಾ ಉದ್ಘಾಟನೆಗೆ ಸರ್ಕಾರ ಆಯ್ಕೆ ಮಾಡಿರುವುದು ಅತ್ಯಂತ ಸ್ವಾಗತಾರ್ಹ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕನ್ನಡದ ಕಂಪನ್ನು ಪಸರಿಸಿದ ಹೆಮ್ಮೆಯ ಕನ್ನಡತಿಗೆ ಈ ಗೌರವ ಸಿಕ್ಕಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ಸಂಗತಿಯಾಗಬೇಕಿತ್ತು. ಕೋಮುವಾದಿ ಬಿಜೆಪಿಯವರು ಮತ್ತು ಕೆಲವು ಹಿಂದುತ್ವವಾದಿಗಳು ತಕರಾರು ತೆಗೆದಿದ್ದರೆ, ಪ್ರಜ್ಞಾವಂತ ನಾಗರಿಕರು ಸ್ವಾಗತಿಸಿದ್ದಾರೆ.
ನಾಡವ್ವನ ಕಿರೀಟಕ್ಕೆ ಬೂಕರ್ ಮುಡಿಸಿದ ಮನೆಮಗಳು ಬಾನು ಮುಷ್ತಾಕ್
ಬಾನು ಮುಷ್ತಾಕ್ ಅವರ ಸಾಹಿತ್ಯದ ನೆಲೆಯಿರುವುದೇ ಸ್ತ್ರೀ ಸಂವೇದನೆಯ, ಧಾರ್ಮಿಕ ಹಿಂಸೆಯ ವಿರುದ್ಧದ ಬಗೆಯಲ್ಲಿ. ಇವರು ಆ ಕಡೆ ಇಸ್ಲಾಮಿಕ್ ಮೂಲಭೂತದ ಸಂಕುಚಿತತೆಯ ಗಾಳಕ್ಕೂ ಸಲ್ಲುವವರಲ್ಲ, ಈ ಕಡೆ ಹಿಂದುತ್ವದ ದ್ವೇಷದ ಕಣ್ಣುಗಳಿಗೂ ಸಿಲುಕುವವರಲ್ಲ. ಮುಸ್ಲಿಂ ಸಮುದಾಯದಲ್ಲಿ ನಿತ್ಯ ತುಳಿತಕ್ಕೆ ಒಳಗಾಗುವವರ ಪರವಾಗಿ, ಹಿಂಸೆ ಪ್ರಚೋದಕ ಶಕ್ತಿಗಳ ವಿರುದ್ಧವಾಗಿ ಕಟುವಾಗಿ ಹೋರಾಟ ಮಾಡಿದ ಬಾನು ಮುಷ್ತಾಕ್ ನಿಜವಾಗಿಯೂ ಬೆಳಗ್ಗಿನಿಂದ ಸಂಜೆಯ ತನಕ ಮುಸ್ಲಿಂ ಧರ್ಮೀಯರ ಬಗ್ಗೆ, ಅವರು ಸರಿಯಿಲ್ಲ, ಅವರಲ್ಲಿ ಹಂಗಿದೆ, ಹಿಂಗಿದೆ ಎನ್ನುವ ಇಸ್ಲಾಮೋಫೋಬಿಕ್ ಗಳಿಗೆ ಹಿಡಿಸಬೇಕಿತ್ತು ಅಲ್ಲವಾ?

ಇಲ್ಲವೆಂದಾದರೆ ಇವರ ಹೋರಾಟ, ಹಾರಾಟಗಳು ಯಾಕಾಗಿ ಎಂದು ನಾವು ಸೂಕ್ಷ್ಮವಾಗಿ ಯೋಚಿಸಬೇಕಾಗುತ್ತದೆ. ನಾಡಹಬ್ಬ ಅಂದ್ರೆ ನಾಡಿನ ಜನರ ಹಬ್ಬ, ಅದರಲ್ಲಿ ಮುಸ್ಲಿಮರು, ಕ್ರೈಸ್ತರು ಎಲ್ಲರೂ ಒಳಗೊಂಡಿದ್ದಾರೆ. ನಾಡವ್ವನ ಕಿರೀಟಕ್ಕೆ ಕನ್ನಡ ಅಕ್ಷರಗಳ ಮಾಲೆಯ ಮೂಲಕ ಬೂಕರ್ ಮುಡಿಸಿದ ಬಾನು ಅವರು ಕನ್ನಡ ನಾಡಿನ ಮನೆಮಗಳು. ಮನೆಮಗಳು ಮನೆಹಬ್ಬವನ್ನು ಉದ್ಘಾಟಿಸಬಾರದು ಎಂದರೆ ಅರ್ಥವಿದೆಯ? ಜನರನ್ನು ಪ್ರೀತಿಸುವ ಬಾನು ಅವರಿಗೆ ಚಾಮುಂಡೇಶ್ವರಿಯಲ್ಲಿ ಅಲ್ಲಾಹುನನ್ನು ಕಾಣದಷ್ಟು ಸಂಕುಚಿತರಲ್ಲ. ಜನಗಳು ಬೆರೆತಾಗ ಅವರವರು ನಂಬುವ ದೇವರುಗಳು ಬೆರೆಯುತ್ತಾರೆ ಎಂದು ʼಮೊಹರಂʼ ಹಬ್ಬ ಕಲಿಸಿಕೊಟ್ಟದ್ದನ್ನು ಮರೆಯದಿರೋಣ. ಅದನ್ನು ಬಿಟ್ಟು ಮುಸ್ಲಿಮ್ ಸಮುದಾಯದವರ ಮೇಲೆ ಪೂರ್ವಗ್ರಹಪೀಡಿತ ಒತ್ತಡ ಹೇರುವುದು ಸಂಸ್ಕೃತಿ ಎನಿಸಿಕೊಳ್ಳುವುದಿಲ್ಲ.
-ಚರಣ್ ಗೌಡ, ಯುವ ಪತ್ರಕರ್ತ,ಬೆಂಗಳೂರು
ಕರ್ನಾಟಕದ ಒಳಗೊಳ್ಳುವ ಸಂಸ್ಕೃತಿಯನ್ನು ತೋರಿಸುತ್ತದೆ
ಕರ್ನಾಟಕ ಸರ್ಕಾರವು ಈ ವರ್ಷದ ಮೈಸೂರು ದಸರಾ ಉತ್ಸವವನ್ನು ಉದ್ಘಾಟಿಸಲು ಪ್ರಸಿದ್ಧ ಕನ್ನಡ ಲೇಖಕಿ ಮತ್ತು ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ನಿರ್ಧಾರವು ಸಾಂಸ್ಕೃತಿಕ ಹೆಮ್ಮೆ ಮತ್ತು ಒಳಗೊಳ್ಳುವಿಕೆಯನ್ನು ತೋರಿಸುತ್ತದೆ. ಈ ಹಿಂದೆಯೂ ಮುಖ್ಯಮಂತ್ರಿಗಳು ಸಾಂಪ್ರದಾಯಿಕ ಚೌಕಟ್ಟನ್ನು ಮುರಿಯುವಂತಹ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ದಸರಾ ಉದ್ಘಾಟಿಸಲು ಮಹಿಳಾ ಸಾಹಿತಿಯನ್ನು ಆಯ್ಕೆ ಮಾಡುವುದು ಒಂದು ಪ್ರಗತಿಪರ ಹೆಜ್ಜೆಯಾಗಿದ್ದು, ಇದು ಬೌದ್ಧಿಕ ಸಾಧಕರನ್ನು ಗುರುತಿಸುವುದು ಮತ್ತು ಲಿಂಗ ಪ್ರಾತಿನಿಧ್ಯವನ್ನು ಒತ್ತಿ ಹೇಳುತ್ತದೆ. ಈ ನಿರ್ಧಾರವು ಸಂಪ್ರದಾಯದಂತೆ ರಾಜಕಾರಣಿಗಳು ಅಥವಾ ಧಾರ್ಮಿಕ ವ್ಯಕ್ತಿಗಳಿಗೆ ಮಾತ್ರ ಮೀಸಲಿಡದೇ ವೈವಿಧ್ಯಮಯ ಧ್ವನಿಗಳಿಗೆ ಅವಕಾಶ ನೀಡುವ ರಾಜ್ಯದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಮೈಸೂರು ದಸರಾ ಕರ್ನಾಟಕದ ಶ್ರೀಮಂತ ಸಂಪ್ರದಾಯಗಳನ್ನು ಸಂಕೇತಿಸುವ ಉತ್ಸವವಾಗಿದೆ. ಕನ್ನಡ ಸಂಸ್ಕೃತಿ ಮತ್ತು ಸಾಹಿತ್ಯದೊಂದಿಗೆ ಆಳವಾದ ಸಂಬಂಧವನ್ನು ಹೊಂದಿರುವ ಬಾನು ಮುಷ್ತಾಕ್ ಅವರಂತಹವರನ್ನು ಆಹ್ವಾನಿಸುವುದು ರಾಜ್ಯದ ಒಳಗೊಳ್ಳುವ ಸಂಸ್ಕೃತಿಯನ್ನು ತೋರಿಸುತ್ತದೆ.
-ಆಯೇಷಾ ಖಾನಂ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ
ನಿಸಾರ್ಗಿಲ್ಲದ ಆಕ್ಷೇಪ ಬಾನು ಮೇಡಂಗೇಕೆ?
2017ರಲ್ಲಿ ಪ್ರೊ.ನಿಸಾರ್ ಅಹಮದ್ ಅವರು ದಸರಾ ನಾಡಹಬ್ಬ ಉದ್ಘಾಟಿಸಿದಾಗ ವಿರೋಧಿಸದ ಬಿಜೆಪಿ ಈಗ ಬಾನು ಮುಷ್ತಾಕ್ ಅವರನ್ನು ವಿರೋಧಿಸುವುದಕ್ಕೆ ಮುಖ್ಯ ಕಾರಣ, ಬಿಜೆಪಿಯ ಕೋಮು ರಾಜಕಾರಣವನ್ನು ಖಡಾ ಖಂಡಿತವಾಗಿ ವಿರೋಧಿಸುತ್ತಲೇ ಬಂದಿರುವ ಬಾನು ಅವರ ಪ್ರಖರ ವೈಚಾರಿಕ ನಿಲುವು. ಹಾಗೆಯೇ ಬಾಬಾ ಬುಡನ್ ಗಿರಿ ವಿವಾದದ ಸಂದರ್ಭದಲ್ಲಿ ಅವರು ಕೂಡ ಕೋಮು ಸೌಹಾರ್ದ ವೇದಿಕೆಯ ಮುಂಚೂಣಿಯ ಹೋರಾಟದಲ್ಲಿ ಭಾಗಿಯಾಗಿದ್ದರೆನ್ನುವುದು. ಈಗ ನಾಡಹಬ್ಬ ಒಂದು ನೆಪ ಅಷ್ಟೇ.

ಇಷ್ಟಕ್ಕೂ ನಾಡಹಬ್ಬವನ್ನು ಸರ್ಕಾರವೇ ಅಧಿಕೃತವಾಗಿ ಆಚರಿಸುತ್ತಿರುವಾಗ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಕೀರ್ತಿಯನ್ನು ಹಬ್ಬಿಸಿದ ಓರ್ವ ಹೆಮ್ಮೆಯ ಸಾಧಕಿ, ಚಿಂತನಶೀಲ ಸಮಾಜಮುಖಿ ಲೇಖಕಿಯನ್ನು ಉದ್ಘಾಟನೆಗೆ ಆಹ್ವಾನಿಸುವ ಮೂಲಕ ಕುವೆಂಪು ಹೇಳಿದ ಸರ್ವಜನಾಂಗದ ಶಾಂತಿಯ ತೋಟದ ಪರಿಕಲ್ಪನೆಯನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಿದೆ ಎಂದು ನನಗನಿಸುತ್ತದೆ. ನಾನಂತೂ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅತ್ಯಂತ ಸೂಕ್ತ ವ್ಯಕ್ತಿ ಎಂದೇ ಪರಿಗಣಿಸಿ ಸರ್ಕಾರದ ನಿಲುವನ್ನು ಅಭಿನಂದಿಸುತ್ತೇನೆ.
-ಗಿರಿಧರ ಕಾರ್ಕಳ, ಲೇಖಕ, ಪ್ರಗತಿಪರ ಚಿಂತಕ
ದುಷ್ಟ ಶಕ್ತಿಗಳ ನಡೆ ಅಮಾನವೀಯ ಮತ್ತು ಅಕ್ಷಮ್ಯ
ಜಾತಿ, ಧರ್ಮ, ದೇವರು, ರಾಜಕಾರಣದ ಹೆಸರಿನಲ್ಲಿ, ಅವುಗಳನ್ನು ಅಸ್ತ್ರವಾಗಿಸಿಕೊಳ್ಳುವ ಮೂಲಕ ಹೆಣ್ಣುಮಕ್ಕಳನ್ನು ಅವಮಾನಿಸುವುದು, ಗುಲಾಮಳಾಗಿಸುವುದು, ಖಂಡಿಸುವುದು, ಅವಹೇಳನ ಮಾಡುವುದು, ದುರ್ಬಳಕೆ ಮಾಡಿಕೊಳ್ಳುವುದು, ಶೋಷಿಸುವುದು, ಹತ್ತಿಕ್ಕುವುದು, ನಿರ್ಲಕ್ಷಿಸುವುದು- ಎಲ್ಲವೂ ಅನಾದಿ ಕಾಲದಿಂದಲೂ ಹಲವು ಆಯಾಮ ಮತ್ತು ವಿಧಗಳಲ್ಲಿ ನಡೆಯುತ್ತಲೇ ಬಂದಿವೆ. ಇವೆಲ್ಲವೂ ಇತ್ತೀಚೆಗಿನ ವರ್ಷಗಳಲ್ಲಿ ಮಿತಿಮೀರಿ ಹೋಗಿ, ಉತ್ತುಂಗವನ್ನು ತಲುಪುತ್ತಿರುವುದಕ್ಕೆ ಹಲವು ಉದಾಹರಣೆಗಳನ್ನು ನಮ್ಮ ಸುತ್ತಲೂ ಕಾಣಬಹುದಾಗಿದೆ. ಇವು ಕುಬ್ಜ ಮನಸ್ಥಿತಿಯ ಪ್ರತೀಕಗಳು.
ಅದಕ್ಕೆ ಹೊಸ ಸೇರ್ಪಡೆ- ಬಾನು ಮುಷ್ತಾಕ್ ಅವರ ದಸರಾ ಉದ್ಘಾಟನೆ ವಿವಾದ! ದಸರಾ- ಅರಸೊತ್ತಿಗೆ ಮತ್ತು ಧಾರ್ಮಿಕ ಕಟ್ಟುಪಾಡುಗಳನ್ನು ಕಳಚಿ, ಅದೊಂದು ನಾಡ ಉತ್ಸವವಾಗಿ ಅಧಿಕೃತವಾಗಿ ಪರಿಗಣಿಸಲ್ಪಟ್ಟು ದಶಕಗಳೇ ಕಳೆದಿವೆ. ಹೀಗಾಗಿ ಯಾವುದೇ ಜಾತಿ, ಧರ್ಮದ ಕಟ್ಟುಪಾಡುಗಳು ಇಲ್ಲಿ ಅರ್ಥಹೀನ. ಈ ನಾಡಿನ ಘನತೆಯನ್ನು ಎತ್ತಿ ಹಿಡಿದ ಪ್ರತಿಯೊಬ್ಬ ವ್ಯಕ್ತಿಗೂ ದಸರಾ ಉದ್ಘಾಟಿಸುವ ಹಕ್ಕಿದೆ. ಹಾಗೆ ಆ ಹಕ್ಕು ಹಿಂದೂ ಧರ್ಮೀಯರಿಗೆ ಮಾತ್ರ ಸೇರಿರುವುದು ಎಂದಾಗಿದ್ದರೆ 2017ರಲ್ಲಿ ಕವಿ ನಿಸಾರ್ ಅಹಮದ್, 2024ರಲ್ಲಿ ಹಂಪನಾ ದಸರಾ ಉದ್ಘಾಟಿಸಿದ್ದರಲ್ಲ? ಆಗೇಕೆ ವಿವಾದಗಳು ಆಗಲಿಲ್ಲ? ಅವರ ಧರ್ಮಗಳೂ ಮೂರ್ತಿ ಪೂಜೆಗಳಲ್ಲಿ ನಂಬಿಕೆ ಇಲ್ಲದವೇ ಅಲ್ಲವೇ?

ಹೀಗಾಗೇ ಇದು ಹೆಣ್ಣುಮಕ್ಕಳ ಕುರಿತಾದ ಈರ್ಷ್ಯೆ, ಹತ್ತಿಕ್ಕುವಿಕೆ ಕುರಿತಾದ ವಿವಾದವೇ ಎಂಬುದು ಅಗೋಚರ ಸತ್ಯ. ಈ ದಮನಕಾರಿ ನೀತಿಯನ್ನು ಪ್ರಯೋಗಿಸಿ ವಿವಾದ ಸೃಷ್ಟಿಸುವ ಯಾರೇ ಆಗಿದ್ದರೂ ಅವರ ನಿಲುವನ್ನು ನಾನು ಕಟುವಾಗಿ ವಿರೋಧಿಸುತ್ತೇನೆ. ಹಾಗೇ ಸೌಹಾರ್ದತೆ, ಸಾಮರಸ್ಯ ಕಾಪಾಡಿಕೊಂಡು ಮುನ್ನಡೆಯಬೇಕಾದ ಈ ಸಂದರ್ಭದಲ್ಲಿ, ಎಲ್ಲ ವಿಷಯಗಳಲ್ಲೂ ದೇವರು, ಜಾತಿ, ಧರ್ಮ, ರಾಜಕಾರಣವನ್ನು ಎಳೆತಂದು ಸಮಾಜದಲ್ಲಿ ಅಶಾಂತಿ ಮತ್ತು ಕ್ಷೋಭೆಯನ್ನು ಉಂಟು ಮಾಡುತ್ತಿರುವ ದುಷ್ಟ ಶಕ್ತಿಗಳ ನಡೆ ಅಮಾನವೀಯ ಮತ್ತು ಅಕ್ಷಮ್ಯವಾದುದು.
-ರೂಪ ಹಾಸನ
ಸಾಹಿತಿಗಳು ಮತ್ತು ಸಾಮಾಜಿಕ ಹೋರಾಟಗಾರರು
ಇದನ್ನೂ ಓದಿ ದಸರಾ | ಬಾನು ಮುಸ್ತಾಕ್ಗೆ ವಿರೋಧ; ಮಹಿಳಾ ವಿರೋಧಿಗಳ ಹಳಹಳಿಕೆ
https://shorturl.fm/FAojx