ಪ್ಲಾಸ್ಟಿಕ್ ಹೂಮಾಲೆ ಮಾರುತ್ತಾ, ಚೌಟರಿಗಳಲ್ಲಿ ಕ್ಲೀನಿಂಗ್ ಮಾಡುತ್ತಾ, ಗಾರೆ ಕೆಲಸವನ್ನೂ ಮಾಡುವ ಈ ಸಂತ್ರಸ್ತ ತಾಯಿಗೆ ಐವರು ಮಕ್ಕಳು. ಅವರಲ್ಲಿ ಮೂವರು ಮೂಕರು. ಕುರುಡನಾಗಿದ್ದ ಪತಿಯನ್ನು ಕಳೆದುಕೊಂಡಿರುವ ಆ ತಾಯಿ, ಈಗ ತನ್ನ ಕಿರಿಯ ಮೂಕ ಮಗಳ ಅನುಮಾನಾಸ್ಪದ ಸಾವಿಗೀಡಾಗಿರುವ ಮತ್ತಷ್ಟು ಜರ್ಜರಿತರಾಗಿದ್ದಾರೆ..
“ಸೀಮಂತ ಕಾರ್ಯಕ್ರಮವೊಂದಕ್ಕೆ ಹೋಗಿದ್ದ ಮಗಳು, ನಗುನಗುತ್ತಾ ಮನೆಗೆ ಬಂದಳು. ನನ್ನ ಫೋಟೋಗಳನ್ನೆಲ್ಲ ತಗೊಂಡು ಖುಷಿ ಪಡುತ್ತಿದ್ದಳು. ಸಂಜೆ ಕಾಣೆಯಾದಳು. ಅವಳು ಮೂಕಿ. ನನಗೆ ಐದು ಜನ ಮಕ್ಕಳು. ಅವರಲ್ಲಿ ಮೂವರು ಮೂಕರು. ನನ್ನ ಗಂಡ ಕುರುಡನಾಗಿದ್ದ. ಅವನೂ ತೀರಿಹೋದ. ಆತ ಬದುಕಿದ್ದಾಗಲೂ ನಾನೇ ದುಡಿದು ಸಾಕುತ್ತಿದ್ದೆ. ಪ್ಲಾಸ್ಟಿಕ್ ಹೂಗಳ ಮಾಲೆಗಳನ್ನು ಮಾಡಿ ಅವುಗಳನ್ನು ಮಾರುತ್ತಾ ಬದುಕುವ ಜನ ನಾವು. ಚೌಟರಿಗಳಲ್ಲಿ ನಡೆಯುವ ಮದುವೆಗಳಲ್ಲಿ ಕ್ಲೀನಿಂಗ್ ಕೆಲಸ ಮಾಡೋಕೆ ಕರೆದರೆ ಹೋಗುತ್ತಿದ್ದೆ. ಗಾರೆ ಕೆಲಸ ಮಾಡುತ್ತಿದ್ದೆ. ಮಕ್ಕಳನ್ನೆಲ್ಲ ಸಾಕಬೇಕಲ್ಲ ಸ್ವಾಮಿ? ಎಂಟನೇ ಕ್ಲಾಸ್ ಓದುತ್ತಿದ್ದ ಮಗಳನ್ನು ಎತ್ತಿಕೊಂಡು ಹೋಗಿ ಹೀಗೆ ಮಾಡಿ, ರೈಲ್ವೆ ಟ್ರಾಕ್ ಬಳಿ ತಂದು ಎಸೆದು ಹೋಗಿದ್ದಾರೆ. ಕಾಣೆಯಾದ ಮಗಳು ಬಾರದೆ ಇದ್ದಾಗ ಭಾನುವಾರ ರಾತ್ರಿ 1 ಗಂಟೆಗೆ ಹೋಗಿ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ಮಗಳ ಫೋಟೋ ಪಡೆದುಕೊಂಡರು. ಹೆಸರು ಮತ್ತು ಮೊಬೈಲ್ ಸಂಖ್ಯೆ ಬರೆದುಕೊಂಡರು. ಹೆಚ್ಚೇನೂ ಮಾಡಲಿಲ್ಲ. ಈಗ ಪೊಲೀಸರು ನನ್ನ ಮೊಬೈಲ್ ಪಡೆದುಕೊಂಡಿದ್ದಾರೆ. ನಿನ್ನ ಮಗಳನ್ನು ಯಾರಾದರೂ ಸಂಪರ್ಕಿಸಿದ್ದರಾ ಅಂತ ಚೆಕ್ ಮಾಡಲು ಮೊಬೈಲ್ ಕೊಡಿ ಅಂದರು. ಆದರೆ ನನ್ನ ಮೊಬೈಲ್ ಲಾಕ್ ಏನೆಂದು ಅವರು ಕೇಳಿ ತಿಳಿದುಕೊಳ್ಳಲೇ ಇಲ್ಲ. ಮನೆಯಲ್ಲಿ ಇದ್ದದ್ದು ಇದೊಂದೇ ಫೋನ್. ಇನ್ನೊಬ್ಬ ಮೂಕಿ ಮಗಳು ಈಗ ಬಾಣಂತಿ. ಅವಳನ್ನೂ ನೋಡಿಕೊಳ್ಳಬೇಕು… ಕೊನೆಯ ಮಗಳನ್ನು ಕೊಂದವರನ್ನು ಶಿಕ್ಷಿಸಿ ಸ್ವಾಮಿ…”
ಹೀಗೆ ಮೂಕ ತಾಯಿಯ ಆಕ್ರಂದನ, ಒಡಲಾಳದ ಸಂಕಟ ವ್ಯಕ್ತವಾಗುತ್ತಿತ್ತು. ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಬಿಡದಿ ಹೋಬಳಿಯ ಭದ್ರಾಪುರ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಬಾಲಕಿಯ ತಾಯಿ ತನ್ನ ಮುರುಕಲು ಸಿಮೆಂಟ್ ಶೀಟಿನ ಮನೆಯ ಮುಂದೆ ಕಣ್ಣೀರು ಹಾಕುತ್ತಾ ನಿಂತರು. ಅಲೆಮಾರಿ ಹಕ್ಕಿಪಿಕ್ಕಿ ಸಮುದಾಯದ ಮಗುವಿನ ಸಾವಿಗೆ ಮಿಡಿದಿರುವ ಊರಿನ ಇಡೀ ಸಮುದಾಯದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಭಾನುವಾರ ಕೊಲೆಯಾದ ಮಗುವಿನ ಅಂತ್ಯಸಂಸ್ಕಾರ ಬುಧವಾರ ಸಂಜೆ 4 ಗಂಟೆಯ ವೇಳೆಗೆ ಪೊಲೀಸ್ ಅಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳ ಸಮ್ಮುಖದಲ್ಲಿ ಊರ ಹೊರಗಿನ ಸ್ಮಶಾನದಲ್ಲಿ ನಡೆದು ಹೋಯಿತು. “ಮೂರು ದಿನಗಳ ಹಿಂದೆ ಅತ್ಯಾಚಾರ ಮತ್ತು ಹತ್ಯೆಗೆ ಒಳಗಾಗಿರುವ ಬಾಲಕಿಯ ಶವದ ಅಂತ್ಯಸಂಸ್ಕಾರ ಮಾಡುವುದಿಲ್ಲ, ಕೊಲೆಗಡುಕರ ಬಂಧಿಸುವವರೆಗೆ ಹೆಣ ಎತ್ತುವುದಿಲ್ಲ” ಎಂದು ಗ್ರಾಮಸ್ಥರು ಬಿಗಿಪಟ್ಟು ಹಿಡಿದಿದ್ದರು. ಹೆಣ ಕೊಳೆಯುತ್ತಿತ್ತು. ಊದಿಕೊಂಡು ಬ್ಲಾಸ್ಟ್ ಆಗುವ ಹಂತಕ್ಕೆ ತಲುಪಿತ್ತು. ಕೊನೆಗೂ ಪೊಲೀಸರ ಒತ್ತಾಯಕ್ಕೆ ಮಣಿದು ಅಂತಿಮ ಸಂಸ್ಕಾರವನ್ನೂ ನೆರವೇರಿಸಲಾಯಿತು. ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಅಧಿಕಾರಿಗಳೇ ನಿಂತು ಹೆಣವನ್ನು ದಫನ ಮಾಡಿದ್ದ ಚಿತ್ರಣವನ್ನು ಘಟನಾವಳಿಗಳು ನೆನಪಿಸುತ್ತಿದ್ದವು.
ಅಂತ್ಯಸಂಸ್ಕಾರದ ಬಳಿಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗ್ರಾಮಕ್ಕೆ ಭೇಟಿ ನೀಡಿದರು. ಊರಿನ ಶಾಲೆಯ ಕೊಠಡಿಯೊಂದರಲ್ಲಿ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದ ನಂತರ, ಅವರಿಗೆ ಪರಿಹಾರದ ಚೆಕ್ ವಿತರಿಸಿದರು. ಗ್ರಾಮ ಪಂಚಾಯಿತಿಯಿಂದ 50,000 ಸಾವಿರ ರೂ., ಜಿಲ್ಲಾಡಳಿತದಿಂದ 4,12,500 ರೂಪಾಯಿ ಪರಿಹಾರ ನೀಡುತ್ತಿರುವುದಾಗಿ ಘೋಷಿಸಿದರು. ಮಾಧ್ಯಮಗಳಿಗೆ ಹೇಳಿಕೆ ಕೊಟ್ಟು ಹೊರಗೆ ಬಂದ ಕೂಡಲೇ ಹಕ್ಕಿಪಿಕ್ಕಿ ಸಮುದಾಯದ ಜನರ ಆಕ್ರೋಶ ಭುಗಿಲೆದ್ದಿತು. ‘ನ್ಯಾಯ ಬೇಕೇ ಬೇಕು’ ಎಂದು ಘೋಷಣೆಗಳನ್ನು ಕೂಗಿದರು. ಸುಮಾರು 30ಕ್ಕೂ ಹೆಚ್ಚು ಪೊಲೀಸರು ಸ್ಥಳದಲ್ಲಿದ್ದರು.
“ಅತ್ಯಾಚಾರಿಗಳನ್ನು ಗಲ್ಲಿಗೇರಿಸಬೇಕು. ಊರಿನಲ್ಲಿ ಬೀದಿದೀಪಗಳಿಲ್ಲ. ಬಸ್ ವ್ಯವಸ್ಥೆ ಇಲ್ಲ. ಆಟೋಗಳು ಕೂಡ ಬರುವುದಿಲ್ಲ. ಎರಡು ಕಿಲೋಮೀಟರ್ ದೂರದ ಹೆದ್ದಾರಿಗೆ ಹೋಗಬೇಕಾದರೆ ಸರಿಯಾದ ರಸ್ತೆ ಇಲ್ಲ. ನಮ್ಮ ಮಕ್ಕಳು ಶಾಲೆಗೆ ಹೋಗುವುದಕ್ಕೂ ಹೆದರುವಂತಾಗಿದೆ. ನಾವು ಊರೂರು ತಿರುಗಿ ವ್ಯಾಪಾರ ಮಾಡಿ ರಾತ್ರಿ ಹತ್ತು ಗಂಟೆಯ ವೇಳೆಗೆ ಮನೆಗೆ ಸೇರುತ್ತೇವೆ. ಮತ್ತೆ ಈ ಪ್ರದೇಶದಲ್ಲಿ ಇಂತಹ ಘಟನೆಗಳು ನಡೆದರೆ ಯಾರು ಹೊಣೆ? ನಮ್ಮ ಹೆಣ್ಣು ಮಕ್ಕಳು ಇಂತಹ ಸನ್ನಿವೇಶದಲ್ಲಿ ಓದಲು ಸಾಧ್ಯವೇ? ಇವತ್ತು ಆ ಮಗುವಿಗೆ ಆದದ್ದು ನಾಳೆ ಇನ್ನೊಂದು ಮಗುವಿಗೆ ಆಗಲ್ಲ ಅನ್ನುವ ಖಾತ್ರಿ ಇಲ್ಲ” ಎಂದು ತಮ್ಮ ದುಃಖವನ್ನು ತೋಡಿಕೊಂಡರು.
ಹೀಗೊಂದು ಘಟನೆ ನಡೆದಿದೆ ಎಂದು ತಿಳಿದ ಕೂಡಲೇ ಮಹಿಳಾ ಸಂಘಟನೆಗಳು ಊರಿಗೆ ಧಾವಿಸಿದವು. ಕೆಲವು ಸಂಘಟನೆಗಳು ಘೋಷಣೆಗಳನ್ನು ಕೂಗಿದಾಗ ಪೊಲೀಸರು ತಡೆದು ನಿಲ್ಲಿಸಿರುವುದು, ಅಂತ್ಯಸಂಸ್ಕಾರದ ಸ್ಥಳಕ್ಕೆ ಬಾರಲು ಬಿಡದಿರುವುದೂ ನಡೆದಿದೆ ಎಂದು ಆರೋಪಿಸಲಾಗಿದೆ.
ಸಮಾಧಿ ಸ್ಥಳದಲ್ಲಿ ‘ಈದಿನ ಡಾಟ್ ಕಾಮ್’ಗೆ ಪ್ರತಿಕ್ರಿಯಿಸಿದ ‘ಮಹಿಳಾ ಮುನ್ನಡೆ’ ಸಂಘಟನೆಯ ಕಾರ್ಯಕರ್ತೆ ಪೂರ್ಣಿಮಾ, “ಸರಿಯಾದ ರೀತಿಯಲ್ಲಿ ಎಫ್‌ಐಆರ್ ದಾಖಲಾಗಿಲ್ಲ ಮತ್ತು ಪೋಸ್ಟ್ ಮಾರ್ಟಮ್ (ಮರಣೋತ್ತರ ಶವ ಪರೀಕ್ಷೆ) ರಿಪೋರ್ಟ್ ಕೂಡ ಬಂದಿಲ್ಲ ಎಂಬುದು ಬುಧವಾರ ಬೆಳಿಗ್ಗೆ ನಮ್ಮ ಗಮನಕ್ಕೆ ಬಂತು. ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನಗಳು ನಡೆಯುತ್ತಿರುವ ಸೂಚನೆಗಳು ಸಿಕ್ಕಿವೆ. ಮಗು ಕಾಣೆಯಾಗಿದ್ದು ಭಾನುವಾರ ಸಂಜೆ, ಹೆಣ ಸಿಕ್ಕಿದ್ದು ಸೋಮವಾರ ಬೆಳಿಗ್ಗೆ, ಪೋಸ್ಟ್ ಮಾರ್ಟಮ್ ಆಗಿರುವುದು ಮಂಗಳವಾರ- ಈ ನಾಲ್ಕು ದಿನಗಳವರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆದಿವಾಸಿ ಸಮುದಾಯಗಳಿಗೆ ಸಂಬಂಧಿಸಿದ ಇಲಾಖೆಯವರು ಸತ್ತು ಹೋಗಿದ್ದರಾ? ಸಂಬಂಧಪಟ್ಟ ಇಲಾಖೆಯವರ ಮೇಲೆ, ಜಿಲ್ಲಾಡಳಿತದ ಮೇಲೆ ಒತ್ತಡ ಹಾಕಿದ ಬಳಿಕ ಎಲ್ಲರೂ ಭೇಟಿ ಕೊಟ್ಟಿದ್ದಾರೆ. ಈ ನಾಲ್ಕು ದಿನ ಏನು ಮಾಡುತ್ತಿದ್ದರು? ಶವ ಊದಿಕೊಂಡಿತ್ತು. ಬ್ಲಾಸ್ಟ್ ಆಗುವ ಹಂತದಲ್ಲಿತ್ತು. ಈವರೆಗೂ ಕ್ರಮ ಜರುಗಿಸದೆ ಏನು ಮಾಡುತ್ತಿದ್ದರು?” ಎಂದು ಪ್ರಶ್ನಿಸಿದರು.

“ಮಗುವಿನ ಎದೆಭಾಗವನ್ನು ಕಚ್ಚಿರುವ ಗುರುತಿದೆ. ಸಿಗರೇಟಿನಿಂದ ಸುಟ್ಟಿರುವ ಗುರುತಿದೆ. ಕತ್ತಿನ ಮೇಲೆ ಕಾಲಿಟ್ಟಿರುವ ಗುರುತಿದೆ. ಬೆನ್ನು ಮೂಳೆ ಮತ್ತು ಕಾಲನ್ನು ಮುರಿದು ಹಾಕಿದ್ದಾರೆ ಎಂದು ಸಂತ್ರಸ್ತ ತಾಯಿ ಹೇಳುತ್ತಿದ್ದಾರೆ. ಮರಣೋತ್ತರ ವರದಿ ಬರುವವರೆಗೂ ಅತ್ಯಾಚಾರ ಆಗಿದೆ ಎಂದು ಹೇಳಲು ಸಾಧ್ಯವಿಲ್ಲವೆಂದು ಪೊಲೀಸ್ ಅಧಿಕಾರಿಗಳು ತಿಳಿಸಿರುವುದಾಗಿ ಕುಟುಂಬ ಆತಂಕದಲ್ಲಿದೆ. ಯುಪಿ ಮಾದರಿಯಲ್ಲಿ ಪೊಲೀಸರೇ ಶವಸಂಸ್ಕಾರವನ್ನು ಮಾಡಿದ್ದಾರೆ. ನಮಗೆ ಸಮಯ ಕೊಡಿ, ಎಫ್‌ಐಆರ್ ಕಾಪಿ ನಿಮಗೆ ತಲುಪಿಸುತ್ತೇವೆ ಎಂದು ಕೇಳಿಕೊಳ್ಳುತ್ತಿದ್ದಾರೆ. ನಾಳೆ ಏನಾದರೂ ಅತ್ಯಾಚಾರ ಆಗಿಲ್ಲವೆಂದು ವರದಿ ಬಂದರೆ, ಮರು ಮರಣೋತ್ತರ ಪರೀಕ್ಷೆ ಮಾಡುವ ಅವಕಾಶವೂ ನಮ್ಮ ಮುಂದೆ ಇದೆ. ಪೊಲೀಸ್ ವ್ಯವಸ್ಥೆಯ ಮೇಲೆ ಈಗಲೂ ಭರವಸೆ ಇಟ್ಟುಕೊಂಡಿದ್ದೇವೆ” ಎಂದರು.
ಸಂತ್ರಸ್ತ ತಾಯಿಯ ಪತಿ ತೀರಿ ಹೋದ ಮೇಲೆ ಅವರು ಮತ್ತೊಬ್ಬ ವ್ಯಕ್ತಿಯನ್ನು ವಿವಾಹವಾದರು. ಆ ವ್ಯಕ್ತಿಯು ಊರೂರು ತಿರುಗಿ ಕೂಲಿ ಕೆಲಸ ಮಾಡುವವರಾಗಿದ್ದು ಈಗ ಮಗುವನ್ನು ನೆನೆದು ದುಃಖಿಸುತ್ತಿದ್ದಾರೆ. “ಈ ಮಕ್ಕಳೆಲ್ಲವೂ ನನ್ನವು. ನನ್ನ ಮಗಳನ್ನು ಕೊಂದು ಹಾಕಿದ್ದಾರೆ. ಅವಳ ಶವವನ್ನು ತೆಗೆದು ಸಾಕ್ಷ್ಯ ನಾಶಮಾಡಿಬಿಡುತ್ತಾರೆ ಅನ್ನೋ ಭಯವಿದೆ. ನಾನು ರಾತ್ರಿಯೆಲ್ಲ ಸಮಾಧಿಯನ್ನು ಕಾಯುತ್ತೇನೆ” ಎಂದು ಕಣ್ಣೀರು ಹಾಕಿದರು.

‘ಈದಿನ’ದೊಂದಿಗೆ ಮಾತನಾಡಿದ ಕರ್ನಾಟಕ ಅಲೆಮಾರಿ ಹಕ್ಕಿಪಿಕ್ಕಿ ಬುಡಕಟ್ಟು ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಜಗ್ಗು, “ಸತತ ನಾಲ್ಕು ದಿನ ಮೃತದೇಹವನ್ನು ಅಂತ್ಯ ಸಂಸ್ಕಾರ ಮಾಡದೆ ಹೋರಾಟವನ್ನು ನಡೆಸಿದ್ದೇವೆ. ಈ ಹೋರಾಟ ನ್ಯಾಯ ಸಿಗುವವರೆಗೂ ಇರುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ಕೊಟ್ಟಿದ್ದೇವೆ. ಆ ಕುಟುಂಬದ ಹೆಣ್ಣುಮಗಳೊಬ್ಬಳಿಗೆ ಸರ್ಕಾರಿ ಕೆಲಸವನ್ನು ಕೊಡಬೇಕು, ಸರ್ಕಾರ ಹೆಚ್ಚಿನ ಪರಿಹಾರವನ್ನು ಘೋಷಿಸಬೇಕು, ಅತ್ಯಾಚಾರಿಗಳಿಗೆ ಗುಂಡಿಕ್ಕಿ ಸಾಯಿಸಬೇಕು” ಎಂದು ಒತ್ತಾಯಿಸಿದರು.
“ಬಡವರು ಸತ್ತಾರೆ ಸುಡಲಿಕ್ಕೆ ಸೌದಿಲ್ಲೋ, ಒಡಲ ಬೆಂಕೀಲಿ ಹೆಣಬೆಂದೋ, ಒಡಲ ಬೆಂಕೀಲಿ ಹೆಣಬೆಂದೋ ಪರಶಿವನೇ- ಬಡವರಿಗೆ ಸಾವ ಕೊಡಬ್ಯಾಡೋ” ಎಂಬಂತಾಗಿದೆ ಸಂತ್ರಸ್ತ ಕುಟುಂಬದ ಸ್ಥಿತಿ. ಮರಣೋತ್ತರ ಪರೀಕ್ಷೆಯ ವರದಿ ಏನು ಹೇಳುತ್ತದೆ ಎಂದು ಕಾಯುತ್ತಿದೆ ಇಡೀ ಗ್ರಾಮ. ಗ್ರೇಟರ್ ಬೆಂಗಳೂರು ಮಾಡುತ್ತೇವೆ ಎಂದು ಸರ್ಕಾರ ಕೊಚ್ಚಿಕೊಳ್ಳುತ್ತಿರುವ ಹೊತ್ತಿನಲ್ಲಿ ನಗರಕ್ಕೆ ಅಂಟಿಕೊಂಡ ಬಿಡದಿಯ ಸಮೀಪವೊಂದರ ಕುಗ್ರಾಮದ ಅಲೆಮಾರಿಗಳು ಮಗುವೊಂದನ್ನು ಕಳೆದುಕೊಂಡು ದುಃಖತಪ್ತರಾಗಿದ್ದಾರೆ.
(ಫೋಟೋಗಳು: ಮುಸ್ತಫಾ ಅಳವಂಡಿ)

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.