ವಕ್ಫ್ ತಿದ್ದುಪಡಿ ಕಾಯ್ದೆ ಮೂಲಕ ಮುಸ್ಲಿಮರ ಮೇಲೆ ನಿಯಂತ್ರಣ ಸಾಧಿಸಿರುವುದಾಗಿ ಹೇಳಿಕೊಂಡು ಹಿಂದು ಮತದಾರರನ್ನೂ ಹಾಗೂ ವಕ್ಫ್ ಮಂಡಳಿಯಲ್ಲಿ ಮಹಿಳೆಯರಿಗೆ ಅವಕಾಶ ನೀಡಿದ್ದೇವೆಂದು ಮುಸ್ಲಿಂ ಮಹಿಳೆಯರ ಮತಗಳನ್ನೂ ಸೆಳೆಯಲು ಬಿಜೆಪಿ ತಂತ್ರ ರೂಪಿಸುತ್ತಿದೆ
ಕೇಂದ್ರವು ವಕ್ಫ್ ತಿದ್ದುಪಡಿ ಮಸೂದೆ-2024ಅನ್ನು ಸಂಸತ್‌ನ ಉಭಯ ಸದನಗಳು ಅಂಗೀಕರಿಸಿ, ರಾಷ್ಟ್ರಪತಿ ಕೂಡ ಸಹಿ ಹಾಕಿದ್ದಾರೆ. ಅಂಗೀಕಾರ ಪಡೆದಿರುವ ಮಸೂದೆ, ಈಗ ವಕ್ಫ್ (ತಿದ್ದುಪಡಿ) ಕಾಯ್ದೆ-2025ಯಾಗಿದೆ. ಕಾಯ್ದೆಯನ್ನು ಅನುಷ್ಠಾನಕ್ಕೆ ತರಲು ಕೇಂದ್ರ ಸರ್ಕಾರ ಸಿದ್ದತೆ ನಡೆಸುತ್ತಿದೆ. ಸಂಸತ್‌ನಲ್ಲಿ ಮಸೂದೆಯನ್ನು ಬೆಂಬಲಿಸಿದ ಬಿಜೆಪಿಯ ಎನ್‌ಡಿಎ ಮಿತ್ರಪಕ್ಷಗಳಾದ ಜೆಡಿಯು, ಎಲ್‌ಜೆಪಿ, ಆರ್‌ಎಲ್‌ಡಿಯಲ್ಲಿ ಬಂಡಾಯ ಎದುರಾಗಿದೆ. ಈ ಪಕ್ಷಗಳ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಸೇರಿದಂತೆ ಹಲವರು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ಬಂಗಾಳದ ಟಿಎಂಸಿ, ತಮಿಳುನಾಡಿನ ಡಿಎಂಕೆ ಸೇರಿದಂತೆ ಹಲವು ವಿಪಕ್ಷಗಳು ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿವೆ. ಇದೆಲ್ಲದರ ನಡುವೆ, ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಸಮರ್ಥಿಸಿ ಬಿಜೆಪಿ ದೇಶಾದ್ಯಂತ ಅಭಿಮಾನ ನಡೆಸಲು ಮುಂದಾಗಿದೆ.
ವಕ್ಫ್ ಬೋರ್ಡ್‌ನಲ್ಲಿ ಮಹಿಳೆಯರಿಗೆ ಮೊದಲ ಬಾರಿಗೆ ಅವಕಾಶ ನೀಡಿದ್ದೇವೆ. ಮುಸ್ಲಿಂ ಮಹಿಳೆಯರ ಪಾಲ್ಗೊಳ್ಳುವಿಕೆ ಮತ್ತು ಸಬಲೀಕರಣಕ್ಕೆ ಒತ್ತುಕೊಟ್ಟಿದ್ದೇವೆ ಎಂಬ ಅಂಶವನ್ನು ಇಟ್ಟುಕೊಂಡು ಕಾಯ್ದೆಯನ್ನು ಸಮರ್ಥಿಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಏಪ್ರಿಲ್ 20ರಿಂದ ಮೇ 20ರವರೆಗೆ ರಾಷ್ಟ್ರವ್ಯಾಪಿ ಜಾಗೃತಿ ಅಭಿಯಾನ ನಡೆಸಲು ನಿರ್ಧರಿಸಿದೆ.
ಅಂದಹಾಗೆ, ವಕ್ಫ್ ಕಾಯ್ದೆಯು ವಕ್ಫ್ ಮಂಡಳಿಯ ಅಧಿಕಾರವನ್ನು ಮೊಟಕುಗೊಳಿಸಲಿದೆ. ವಕ್ಫ್ ಆಸ್ತಿಯ ಮೇಲೆ ಕೇಂದ್ರ ಸರ್ಕಾರ ಹೆಚ್ಚು ಅಧಿಕಾರ ಸ್ಥಾಪಿಸಲಿದೆ. ಮಾತ್ರವಲ್ಲದೆ, ವಕ್ಫ್ ಬೋರ್ಡ್‌ಗೆ ಸಾರ್ವಜನಿಕರ ಆಸ್ತಿ ದಾನ ಮಾಡುವುದಕ್ಕೂ ಅಡ್ಡಿಯುಂಟು ಮಾಡಲಿದೆ. ಕಾಯ್ದೆಯು ಒಂದು ಸಮುದಾಯದ ಧಾರ್ಮಿಕ ಆಸ್ತಿಯನ್ನು ಸರ್ಕಾರ ಕಿತ್ತುಕೊಳ್ಳಲು ಅವಕಾಶ ಮಾಡಿಕೊಡುತ್ತದೆ ಎಂಬುದು ಸ್ಪಷ್ಟವಾಗಿದೆ.
ಕಾಯ್ದೆಯಲ್ಲಿ ವಕ್ಫ್ ಆಸ್ತಿಗಳ ಸರ್ವೆ ನಡೆಸುವ ಅಧಿಕಾರವನ್ನು ರಾಜ್ಯ ಸರ್ಕಾರ ನೇಮಿಸಲು ಸರ್ವೆ ಆಯುಕ್ತರಿಂದ ಕಸಿದುಕೊಂಡು ಜಿಲ್ಲಾಧಿಕಾರಿಗೆ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರವೇ ನೇರವಾಗಿ ವಕ್ಫ್ ಆಸ್ತಿ ಸರ್ವೆಯಲ್ಲಿ ಹಸ್ತಕ್ಷೇಪ ಮಾಡಲು ದಾರಿ ಮಾಡಿಕೊಂಡಿದೆ.
ವಕ್ಫ್ ಬೋರ್ಡ್‌ಗೆ ಯಾವುದೇ ವ್ಯಕ್ತಿ (ಮುಸ್ಲಿಮೇತರರೂ ಕೂಡ) ತಮ್ಮ ಆಸ್ತಿಯನ್ನು ಸೆಕ್ಷನ್ 104ರ ಅಡಿಯಲ್ಲಿ ವಕ್ಫ್‌ಗೆ ದಾನವಾಗಿ ನೀಡಬಹುದಿತ್ತು. ಆದರೆ, ಈಗ ಆ ಸೆಕ್ಷನ್ 104ನ್ನೂ ತೆಗೆದು ಹಾಕಲಾಗಿದ್ದು, ಇಸ್ಲಾಂ ಧರ್ಮವನ್ನು ಕನಿಷ್ಠ 5 ವರ್ಷ ಪಾಲಿಸಿದವರು ಮಾತ್ರವೇ ತಮ್ಮ ಆಸ್ತಿಯನ್ನು ವಕ್ಫ್‌ಗೆ ನೀಡಲು ಸಾಧ್ಯವೆಂದು ಕಡಿವಾಣ ಹಾಕಿದೆ.
ಈ ವರದಿ ಓದಿದ್ದೀರಾ?: ವಕ್ಫ್ ತಿದ್ದುಪಡಿ ಮಸೂದೆ 2025 | ಬೇರೆ ಧಾರ್ಮಿಕ ಸಂಸ್ಥೆಗಳು ಸ್ವಚ್ಛವಾಗಿವೆಯೇ?
ವಕ್ಫ್ ಮಂಡಳಿಯಲ್ಲಿ ಮುಸ್ಲಿಮರಿಗಿಂತ ಮುಸ್ಲಿಮೇತರರ ಸಂಖ್ಯೆ ಹೆಚ್ಚಿರಬೇಕೆಂದು ಸೂಚಿಸಲಾಗಿದ್ದು, ಮುಸ್ಲಿಂ ಧಾರ್ಮಿಕ ಮಂಡಳಿಯಲ್ಲಿ ಮುಸ್ಲಿಮರ ಅಭಿಪ್ರಾಯ/ನಿರ್ಧಾರಗಳಿಗೆ ಮನ್ನಣೆ ದೊರೆಯದಂತೆ ಮಾಡಲಾಗಿದೆ. ಆ ಮೂಲಕ ವಕ್ಫ್ ಬೋರ್ಡ್ ಮತ್ತು ನಿರ್ವಹಣೆಯ ಮೇಲೆ ಪರೋಕ್ಷವಾಗಿ ಸರ್ಕಾರ ನಿಯಂತ್ರಣ ಸಾಧಿಸಲಿದೆ. ಲೆಕ್ಕ ಪರಿಶೋಧನೆಯ ಅಧಿಕಾರವನ್ನೂ ವಕ್ಫ್ ಮಂಡಳಿಯಿಂದ ಕೇಂದ್ರ ಸರ್ಕಾರ ಕಸಿದುಕೊಂಡಿದ್ದು, ಕೇಂದ್ರ ಸರ್ಕಾರವು ತನ್ನಿಚ್ಛೆಯಂತೆ ವಕ್ಫ್ ಆಸ್ತಿಯ ಲೆಕ್ಕಪರಿಶೋಧನೆ ಮಾಡುವಂತೆ ತಿದ್ದುಪಡಿ ಮಾಡಿಕೊಂಡಿದೆ.
ಹೀಗೆ, ಬಿಜೆಪಿ-ಸಂಘಪರಿವಾರದ ಹಲವಾರು ಹುನ್ನಾರಗಳನ್ನು ಕಾಯ್ದೆಯು ಒಳಗೊಂಡಿದೆ. ಈ ಕಾಯ್ದೆಯು ಸಂವಿಧಾನ ವಿರೋಧಿ, ಜನವಿರೋಧಿ, ಜಾತ್ಯತೀತತೆಗೆ ಮಾರಕವೆಂದು ವಿಪಕ್ಷಗಳು ವಾದಿಸುತ್ತಿವೆ. ಕಾಯ್ದೆಯನ್ನು ದಿಟ್ಟವಾಗಿ ವಿರೋಧಿಸುತ್ತಿವೆ. ಸದ್ಯ, ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತಿವೆ.
ಕಾಯ್ದೆಯ ವಿರುದ್ಧ ವಿಪಕ್ಷಗಳ ಆಕ್ರೋಶ, ವಿರೋಧ ಹೆಚ್ಚಾದಂತೆ, ಅದನ್ನು ನಿಭಾಯಿಸಲು ಮತ್ತು ಕಾಯ್ದೆಯನ್ನು ಸಮರ್ಥಿಸಿಕೊಳ್ಳಲು ಬಿಜೆಪಿ ‘ವಕ್ಫ್ ಸುಧಾರಣೆಗಳ ಸಾರ್ವಜನಿಕ ಜಾಗೃತಿ’ ಅಭಿಯಾನ ನಡೆಸಲು ಮುಂದಾಗಿದೆ. ಕಾಯ್ದೆಯನ್ನು ನಿಜವಾದ ಜಾತ್ಯತೀತತೆ, ಪಾರದರ್ಶಕತೆ ಮತ್ತು ಸಾಮಾಜಿಕ ನ್ಯಾಯದ ಮೇಲೆ ರೂಪಿಸಲಾಗಿದೆ ಎಂಬುದಾಗಿ ಪ್ರಚಾರ ಮಾಡಲು ಕಸರತ್ತು ನಡೆಸುತ್ತಿದೆ.
ಸದ್ಯ, ಈ ವರ್ಷದ ಕೊಲೆಯಲ್ಲಿ ಬಿಹಾರದಲ್ಲಿ ಮತ್ತು 2026ರಲ್ಲಿ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಮುಖ್ಯವಾಗಿ, ಚುನಾವಣೆ ನಡೆಯುವ ಈ ರಾಜ್ಯಗಳಲ್ಲಿ ಅಭಿಯಾನ ನಡೆಸಲು ಬಿಜೆಪಿ ಯೋಜಿಸಿದೆ. ವಿಶೇಷವಾಗಿ ಈಶಾನ್ಯ ಮತ್ತು ದಕ್ಷಿಣ ಭಾರತದಲ್ಲಿ ಗಣನೀಯ ಪ್ರಮಾಣದಲ್ಲಿ ಕ್ರಿಶ್ಚಿಯನ್ ಜನಸಂಖ್ಯೆ ಇದ್ದು, ಅಂತಹ ಪ್ರದೇಶಗಳಲ್ಲಿ ‘ಇಸೈ ಸದ್ಭಾವನೆ’ (ಕ್ರಿಶ್ಚಿಯನ್ ಸೌಹಾರ್ದತೆ) ಸಭೆಗಳನ್ನು ನಡೆಸಲಿದೆ.
ವಕ್ಫ್ ತಿದ್ದುಪಡಿ ಕಾಯ್ದೆ ಮೂಲಕ ಮುಸ್ಲಿಮರ ಮೇಲೆ ನಿಯಂತ್ರಣ ಸಾಧಿಸಿರುವುದಾಗಿ ಹೇಳಿಕೊಂಡು ಹಿಂದು ಮತದಾರರನ್ನೂ ಹಾಗೂ ವಕ್ಫ್ ಮಂಡಳಿಯಲ್ಲಿ ಮಹಿಳೆಯರಿಗೆ ಅವಕಾಶ ನೀಡಿದ್ದೇವೆಂದು ಮುಸ್ಲಿಂ ಮಹಿಳೆಯರ ಮತಗಳನ್ನೂ ಸೆಳೆಯಲು ಬಿಜೆಪಿ ತಂತ್ರ ರೂಪಿಸುತ್ತಿದೆ ಎಂದು ವರದಿಯಾಗಿದೆ.
ಅಭಿಯಾನ ನಡೆಸುವುದಕ್ಕಾಗಿ ಗುರುವಾರ, ದೆಹಲಿಯಲ್ಲಿನ ಪಕ್ಷದ ಕೇಂದ್ರ ಕಚೇರಿಯಲ್ಲಿ ಕಾರ್ಯಾಗಾರ ನಡೆಸಿದೆ. ಕಾರ್ಯಾಗಾರದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹಾಗೂ ಪಕ್ಷದ ವಿವಿಧ ಘಟಕಗಳ ಸುಮಾರು 200 ಪದಾಧಿಕಾರಿಗಳು ಭಾಗಿಯಾಗಿದ್ದರು. ಕಾರ್ಯಾಗಾರದಲ್ಲಿ ಜೆ.ಪಿ ನಡ್ಡಾ ಮತ್ತು ಕಿರಣ್ ರಿಜಿಜು – ಇಬ್ಬರೂ ವಕ್ಫ್ ತಿದ್ದುಪಡಿ ಕಾಯ್ದೆಯ ಬಗ್ಗೆ ಪದಾಧಿಕಾರಿಗಳಿಗೆ ಪಾಠ ಮಾಡಿದ್ದಾರೆ. ಕಾಯ್ದೆಯಲ್ಲಿ ಸಮರ್ಥಿಸಿಕೊಳ್ಳಬೇಕಾದ ಅಂಶಗಳ ಕುರಿತು ವಿವರವಾದ ಮಾಹಿತಿ ನೀಡಿದ್ದಾರೆ.
ಚುನಾವಣೆ ನಡೆಯಲಿರುವ ಮತ್ತು ಇತರ ರಾಜ್ಯಗಳಲ್ಲಿ ಹಿಂದುಳಿದ ಮುಸ್ಲಿಮರನ್ನು ತಲುಪುವುದು ಬಿಜೆಪಿಯ ಗುರಿಯಾಗಿದೆ. ಅಕ್ರಮ ಭೂಸ್ವಾಧೀನದಿಂದ ಜನರಿಗೆ (ಮುಸ್ಲಿಮರಿಗೆ) ಪರಿಹಾರ ಮತ್ತು ನ್ಯಾಯ ಒದಗಿಸಲು ಮೋದಿ ಸರ್ಕಾರ ವಕ್ಫ್ ತಿದ್ದುಪಡಿ ಕಾಯ್ದೆ ತಂದಿದೆ ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದಾರೆ.
ಈ ವರದಿ ಓದಿದ್ದೀರಾ?: ವಕ್ಫ್ ತಿದ್ದುಪಡಿ ಕಾಯ್ದೆ: ಮುಸ್ಲಿಮರ ಧಾರ್ಮಿಕ-ಸಾಮಾಜಿಕ ಚಟುವಟಿಕೆಗಳಿಗೆ ಕಡಿತ ಖಂಡಿತ
ಕಾರ್ಯಾಗಾರದ ಆರಂಭದಲ್ಲಿ ಮಾತನಾಡಿದ ನಡ್ಡಾ, ”ಪಸ್ಮಂದ (ಹಿಂದುಳಿದ) ಮುಸ್ಲಿಮರು ಮತ್ತು ಇತರ ಜನರು ವಕ್ಫ್ ತಿದ್ದುಪಡಿ ಕಾಯ್ದೆಯಿಂದ ನ್ಯಾಯ ಪಡೆಯಲಿದ್ದಾರೆ. ಅಲ್ಲದೆ, ಕಾಯ್ದೆಯು ಮಹಿಳೆಯರು ಮತ್ತು ಬಡವರ ಹಕ್ಕುಗಳು ಮತ್ತು ಪ್ರಾತಿನಿಧ್ಯವನ್ನು ಖಾತ್ರಿಪಡಿಸುತ್ತದೆ” ಎಂದು ಹೇಳಿದ್ದಾರೆ.
”ಹೊಸ ವಕ್ಫ್ ಕಾನೂನು ಬಡ ಮುಸ್ಲಿಮರು ಮತ್ತು ಮಹಿಳೆಯರ ಕಲ್ಯಾಣಕ್ಕಾಗಿ ವಕ್ಫ್ ಆಸ್ತಿಗಳನ್ನು ಬಳಸಿಕೊಳ್ಳಲು ಸಹಾಯ ಮಾಡುತ್ತದೆ. ವಕ್ಫ್ ಸ್ವತ್ತುಗಳನ್ನು ಪ್ರಭಾವಿ ವರ್ಗದ ಜನರ ನಿಯಂತ್ರಣದಿಂದ ಮುಕ್ತಗೊಳಿಸುತ್ತದೆ. ಸಮಗ್ರ ಅಲ್ಪಸಂಖ್ಯಾತ ಸಮುದಾಯದ ಬಳಕೆಗಾಗಿ ಈ ಆಸ್ತಿಗಳು ಲಭ್ಯವಾಗುವಂತೆ ಮಾಡುತ್ತವೆ” ಎಂದು ನಡ್ಡಾ ಪ್ರತಿಪಾದಿಸಿದ್ದಾರೆ.
ಕಾರ್ಯಾಗಾರದ ನಂತರ ‘ಎಕ್ಸ್’ನಲ್ಲಿ ಪೋಸ್ಟ್ ಹಾಕಿರುವ ರಿಜಿಜು, ”ವಕ್ಫ್ ಕಾಯ್ದೆಯ ನಿಬಂಧನೆಗಳು, ಸುಧಾರಣೆಗಳು ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನ್ಯಾಯದ ಕಡೆಗಿನ ಒಂದು ಪ್ರಮುಖ ಹೆಜ್ಜೆಯಾಗಿದೆ” ಎಂದು ವಾದಿಸಿದ್ದಾರೆ.
ಈ ಅಭಿಯಾನವನ್ನು ಕೇಂದ್ರ ಸಚಿವರು ಮತ್ತು ಪಕ್ಷದ ಪದಾಧಿಕಾರಿಗಳು ಹಾಗೂ ಬಿಜೆಪಿಯ ಎಲ್ಲ ಸಂಸದರು ತಮ್ಮ ಕ್ಷೇತ್ರಗಳಲ್ಲಿ ನಡೆಸಲಿದ್ದಾರೆ. ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ. ಜನರಲ್ಲಿ ಕಾಯ್ದೆ ಕುರಿತು ಜಾಗೃತಿ ಮೂಡಿಸುವುದು ಅವರ ಕರ್ತವ್ಯವಾಗಿರುತ್ತದೆ ಎಂದು ಪಕ್ಷವು ಹೇಳಿದೆ. ಅಭಿಯಾನವನ್ನು ಯಶಸ್ವಿಗೊಳಿಸವುದಕ್ಕಾಗಿ ಅದರ ಮೇಲುಸ್ತುವಾರಿ ನಡೆಸಲು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ದಾಸ್ ಅಗರ್ವಾಲ್ ಮತ್ತು ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಜಮಾಲ್ ಸಿದ್ದಿಕಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.
ಇದು ಕೂಡ ಮುಸ್ಲಿಂ ಮತದಾರರ ಕಣ್ಣೊರೆಸುವ ತಂತ್ರವೇ ಹೊರತು, ಅವರ ಕಲ್ಯಾಣಕ್ಕಾಗಿ ಖಂಡಿತ ಅಲ್ಲ. ಆರ್ಟಿಕಲ್ 370 ಮತ್ತು ಟ್ರಿಬಲ್ ತಲಾಕ್ ಕಾಯ್ದೆಗಳಿಗೇನಾಯಿತು ಎಂಬುದನ್ನು ಒಮ್ಮೆ ಅವಲೋಕಿಸಿದರೆ, ವಕ್ಫ್ ನಿಜಹೂರಣ ಅರ್ಥವಾದೀತು.