ಪ್ರಾದೇಶಿಕ ಪಕ್ಷಗಳ ಭಸ್ಮಾಸುರ – ಬಿಜೆಪಿ

Date:

Advertisements

ಹರಿಯಾಣ ಮತ್ತು ಜಮ್ಮು-ಕಾಶ್ಮೀರ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದಿದೆ. ಜಮ್ಮು-ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಒಟ್ಟಾಗಿ ಚುನಾವಣೆ ಎದುರಿಸಿ ಜಯಗಳಿಸಿವೆ. ಇನ್ನು ಹರಿಯಾಣದಲ್ಲಿ ಬಿಜೆಪಿ ಗೆಲುವು ಕಂಡಿದೆ. ಆದರೆ, ಹರಿಯಾಣದಲ್ಲಿ ಈ ಹಿಂದೆ ಬಿಜೆಪಿ ಜತೆಗೆ ಕೈ ಜೋಡಿಸಿ ಸರ್ಕಾರ ರಚನೆ ಮಾಡಿದ್ದ ಜೆಜೆಪಿ (ಜನನಾಯಕ ಜನತಾ ಪಕ್ಷ) ಈ ಬಾರಿ ಶೂನ್ಯ ಸ್ಥಾನಗಳನ್ನ ಸಂಪಾದನೆ ಮಾಡಿದೆ. ಅಂತೆಯೇ ಜಮ್ಮು-ಕಾಶ್ಮೀರದಲ್ಲೂ 2015ರಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಪಿಡಿಪಿ ಕೇವಲ 3 ಸ್ಥಾನಗಳನ್ನ ಮಾತ್ರ ಗಳಿಸಿದೆ.

ಹೌದು, 2019ರ ಹರಿಯಾಣ ವಿಧಾನಸಭಾ ಚುನಾವಣೆ ಬಳಿಕ, ‘ಜನನಾಯಕ ಜನತಾ ಪಕ್ಷ’(ಜೆಜೆಪಿ) ಕಿಂಗ್ ಮೇಕರ್ ಆಗಿತ್ತು. ಆದರೀಗ, 2024ರಲ್ಲಿ ನಡೆದ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನ ಗೆಲ್ಲಲ್ಲಾಗದೇ ಹೀನಾಯವಾಗಿ ಸೋತಿದೆ. ಹಲವೆಡೆ ಜೆಜೆಪಿ ಅಭ್ಯರ್ಥಿಗಳು ಠೇವಣಿಯನ್ನೂ ಉಳಿಸಿಕೊಳ್ಳಲಾಗದಷ್ಟು ಮತಗಳನ್ನು ಪಡೆದಿದ್ದು, ಪಕ್ಷ ಮುಜುಗರ ಅನುಭವಿಸಿದೆ. ಹರಿಯಾಣ ರಾಜಕೀಯದಲ್ಲಿ ಜೆಜೆಪಿ ಈಗ ಇದ್ದೂ ಇಲ್ಲದಂತಾಗಿದೆ. ಜಮ್ಮು ಕಾಶ್ಮೀರದಲ್ಲೂ ಪಿಡಿಪಿ ಬಹುತೇಕ ಕಾಣೆಯಾಗಿದೆ. ಇದೇ ರೀತಿ, ಈ ಹಿಂದೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದ ಹಲವು ಪ್ರಾದೇಶಿಕ ಪಕ್ಷಗಳು ನಿರ್ನಾಮದ ಹಾದಿ ಹಿಡಿದಿವೆ ಎಂದರೇ, ತಪ್ಪಾಗೋದಿಲ್ಲ.

2019ರ ಹರಿಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕ ಅತಂತ್ರ ವಿಧಾನಸಭೆ ಸೃಷ್ಠಿಯಾಗಿತ್ತು. ಯಾವುದೇ ಪಕ್ಷಕ್ಕೆ ಬಹುಮತ ಬಂದಿರಲಿಲ್ಲ. ಆಗ, ಬಿಜೆಪಿ 40, ಕಾಂಗ್ರೆಸ್ 31 ಹಾಗೂ ಜೆಜೆಪಿ 10 ಸ್ಥಾನಗಳನ್ನು ಗಳಿಸಿತ್ತು. ಸರ್ಕಾರ ರಚಿಸಲು ಕನಿಷ್ಠ 46 ಸ್ಥಾನಗಳು ಬೇಕಿದ್ದರಿಂದ ಜೆಜೆಪಿ ಕಿಂಗ್ ಮೇಕರ್ ಆಗಿತ್ತು. ಅಂತಿಮವಾಗಿ ಬಿಜೆಪಿ ಜೊತೆಗೆ ಜೆಜೆಪಿ ಕೈಜೋಡಿಸಿತ್ತು. ಬಿಜೆಪಿ 2ನೇ ಬಾರಿಗೆ ಸರ್ಕಾರ ರಚಿಸಲು ನೆರವು ನೀಡಿತ್ತು. ಬಿಜೆಪಿ ಸರ್ಕಾರದಲ್ಲಿ ಜೆಜೆಪಿ ಕೆಲ ಇಲಾಖೆಗಳ ಸಚಿವ ಸ್ಥಾನವನ್ನೂ ಪಡೆದುಕೊಂಡಿತ್ತು. ಆದರೆ, ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ 3 ರೈತ ವಿರೋಧಿ ಕೃಷಿ ಕಾಯ್ದೆಗಳ ವಿರುದ್ಧ 2020ರಲ್ಲಿ ಭುಗಿಲೆದ್ದ ರೈತ ಹೋರಾಟ ಮತ್ತು ರೈತರ ಮೇಲೆ ಬಿಜೆಪಿ ಸರ್ಕಾರ ಎಸಗಿದ ದೌರ್ಜನ್ಯ, ಹಿಂಸೆ ಹಾಗೂ ಹರಿಯಾಣ ನಿರುದ್ಯೋಗ, ಹಣದುಬ್ಬರ, ರೈತರಿಗೆ ನೀಡಿದ್ದ ಭರವಸೆಯನ್ನು ಈಡೇರಿಸದ ಮೋದಿ ಸರ್ಕಾರದ ನಡೆಯನ್ನ ಖಂಡಿಸಿ ಕಳೆದ ಲೋಕಸಭಾ ಚುನಾವಣೆ ವೇಳೆ, ಬಿಜೆಪಿ ಜೊತೆ ಜೆಜೆಪಿ ಮೈತ್ರಿ ಮುರಿದುಕೊಂಡು ಹೊರಬಂದಿತು.

Advertisements

ಆದಾಗ್ಯೂ, ಜೆಜೆಪಿ ರೈತರು, ಯುವಜನರು ಹಾಗೂ ಹರಿಯಾಣ ಜನರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಕಾಂಗ್ರೆಸ್ ಜಾಟ್ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರೆ, ಬಿಜೆಪಿ ಜಾಟ್ಯೇತರ ಸಮುದಾಯಗಳನ್ನು ಒಗ್ಗೂಡಿಸಿ, ಮತಗಳಿಸುವಲ್ಲಿ ಸಫಲವಾಗಿದೆ. ಆದರೆ, ಜೆಜೆಪಿ ಯಾವುದೇ ಸಮುದಾಯವನ್ನು ತನ್ನತ್ತ ಸೆಳೆಯಲಾಗಿಲ್ಲ. ಮಾತ್ರವಲ್ಲದೆ, ರಾಜ್ಯದಲ್ಲಿ 2020ರಲ್ಲಿ ರೈತರ ವಿರುದ್ಧ ದಮನ ಮಾಡಿದ್ದ ಹಿಂದಿನ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸರ್ಕಾರವನ್ನು ಜೆಜೆಪಿ ಖಂಡಿಸಿರಲಿಲ್ಲ. ರೈತ ಹೋರಾಟದ ವಿಚಾರದಲ್ಲಿ ಮೌನವಾಗಿತ್ತು. ಇದು, ರೈತರ ಸಿಟ್ಟಿಗೆ ಕಾರಣವಾಗಿತ್ತು. ಆ ಸಿಟ್ಟನ್ನು ಶಮನಗೊಳಿಸುವಲ್ಲಿ ಜೆಜೆಪಿ ವಿಫಲವಾಗಿದೆ. ಬಿಜೆಪಿ ಜೊತೆಗೂಡಿ ಜೆಜೆಪಿ ತನ್ನ ಗುಂಡಿಯನ್ನು ತಾನೇ ತೊಡಿಕೊಂಡಿದೆ.

ಇನ್ನು, ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ಕತೆಯೂ ಇದೇ ಆಗಿದೆ. ಜಮ್ಮು ಕಾಶ್ಮೀರ ವಿಧಾನಸಭೆಗೆ ಈ ಹಿಂದೆ, ಚುನಾವಣೆ ನಡೆದಿದ್ದದ್ದು 10 ವರ್ಷಗಳ ಹಿಂದೆ, ಅಂದರೆ, 2014ರಲ್ಲಿ ಆ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗಳಿಸಿದ್ದ ಪಿಡಿಪಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಸರ್ಕಾರ ರಚಿಸಲು ಹಕ್ಕು ಮಂಡಿಸುವ ಅಧಿಕಾರವನ್ನೂ ಪಡೆದುಕೊಂಡಿತ್ತು. ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತ್ತು. ಜಮ್ಮು-ಕಾಶ್ಮೀರದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬರಲೂ ಕಾರಣವಾಯಿತು. ಪಿಡಿಪಿ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ, ಕೇಂದ್ರದಲ್ಲೂ ತನ್ನದೇ ಸರ್ಕಾರ ಇದ್ದುದ್ದರಿಂದ ತನ್ನ ಜನವಿರೋಧಿ ಆಟ ಶುರುಮಾಡಿತು. ಜಮ್ಮು-ಕಾಶ್ಮೀರದ ಮೇಲೆ ತನ್ನ ಕೋಮುವಾದಿ ಸಿದ್ಧಾಂತವನ್ನು ಹೇರಹೊರಟಿತು. ಕೊನೆಗೆ, ಜಮ್ಮು-ಕಾಶ್ಮಿರದ ವಿಶೇಷ ಸ್ಥಾನಮಾನ ಮತ್ತು ರಾಜ್ಯತ್ವಕ್ಕೇ ಕೈಹಾಕಲು ಮುಂದಾಯಿತು.

ಬಿಜೆಪಿಯ ಧೋರಣೆಯನ್ನು ಸಹಿಸದ ಪಿಡಿಪಿ 2018ರಲ್ಲಿ ಬಿಜೆಪಿ ಜೊತೆಗಿನ ಮೈತ್ರಿಯನ್ನು ಮುರಿದುಕೊಂಡಿತು. ಸರ್ಕಾರವೂ ಉರುಳಿತು. ಆದರೂ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೇರಲು ಪಿಡಿಪಿಯೇ ಕಾರಣ ಎಂಬ ಕಪ್ಪು ಚುಕ್ಕೆ, ಮುಫ್ತಿ ಅವರ ಪಕ್ಷಕ್ಕೆ ಅಂಟಿಕೊಂಡಿತು. ಅದೇ ಕಪ್ಪು ಚುಕ್ಕೆ ಈಗ ಪಿಡಿಪಿ ನೆಲ ಕಚ್ಚಲು ಕಾರಣವಾಗಿದೆ.

ಬಿಜೆಪಿ ಜತೆ ಪಿಡಿಪಿ ಮೈತ್ರಿ ಮುರಿದುಕೊಂಡರೂ, ಇದಾದ ಕೆಲವೇ ತಿಂಗಳುಗಳಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರಕ್ಕಿದ್ದ ರಾಜ್ಯತ್ವವನ್ನು ಕಸಿದುಕೊಂಡಿತು. ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿತು. ಜಮ್ಮು-ಕಾಶ್ಮೀರಿಗರ ಹಕ್ಕುಗಳನ್ನು ಕಿತ್ತುಕೊಂಡು, ರಾಜ್ಯವನ್ನು ಇಬ್ಬಾಗ ಮಾಡಿ, ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿತು. ಜಮ್ಮು-ಕಾಶ್ಮೀರದ ಬುನಾದಿಯನ್ನೇ ಬಿಜೆಪಿ ಸರ್ಕಾರ ಒಡೆದು ಹಾಕಿತು. ಆದರೆ, ಈ ವೇಳೆ ಪಿಡಿಪಿ ಹೆಚ್ಚು ಗಟ್ಟಿಯಾಗಿ ದನಿ ಎತ್ತಲಿಲ್ಲ.

ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಪಿಡಿಪಿ ವಿರುದ್ಧ ಎನ್ಸಿ ಭಾರೀ ಪ್ರಚಾರ ಮಾಡಿತು. ವಾಗ್ದಾಳಿ ನಡೆಸಿತು. ತನ್ನ ವಿರುದ್ಧದ ಆರೋಪಗಳಿಂದ ಹೊರಬರಲು ಸಾಧ್ಯವಾಗದೆ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಏಕೈಕ ಕಾರಣದಿಂದ ಇಂದು ಪಿಡಿಪಿ ಧೂಳಿಪಟವಾಗಿದೆ. 10 ವರ್ಷಗಳ ಹಿಂದೆ ಹೆಚ್ಚು ಸ್ಥಾನಗಳನ್ನು ಗೆದ್ದು, ದೊಡ್ಡ ಪಕ್ಷವಾಗಿದ್ದ ಪಿಡಿಪಿ, ಈಗ 3 ಸ್ಥಾನಗಳೊಂದಿಗೆ ತನ್ನ ರಾಜಕೀಯ ನೆಲೆಯನ್ನೇ ಕಳೆದುಕೊಂಡಿದೆ.

ಇದು ಕೇವಲ ಹರಿಯಾಣ, ಜಮ್ಮು-ಕಾಶ್ಮೀರ ಅಥವಾ ಜೆಜೆಪಿ, ಪಿಡಿಪಿಗಳ ಕತೆಯಲ್ಲ. ಎಲ್ಲೆಲ್ಲಿ ಬಿಜೆಪಿ ಸ್ಥಳೀಯಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದೆಯೋ, ಅಲ್ಲೆಲ್ಲ, ಬಿಜೆಪಿ ಜತೆ ಸೇರಿದ್ದ ಪಕ್ಷಗಳು ನೆಲೆ ಕಳೆದುಕೊಂಡಿವೆ. ಈ ಹಿಂದೆ ಒಡಿಶಾದಲ್ಲಿ 2009ರಲ್ಲಿ ಬಿಜೆಪಿ ಜೊತೆ ನವೀನ್ ಪಟ್ನಾಯಕ್ ಅವರ ಬಿಜೆಡಿ ಮೈತ್ರಿ ಮಾಡಿಕೊಂಡಿತ್ತು. ಆದರೆ, ಬಿಜೆಪಿಯ ಅತಿಕ್ರಮಣಕಾರಿ ನಡೆಯಿಂದ ಮೈತ್ರಿ ಮುರಿದು ಬಿದ್ದಿತ್ತು.

ಬಿಜೆಪಿಯಿಂದ ಬಿಜೆಡಿ ದೂರ ಸರಿದ ಬಳಿಕ, ರಾಜ್ಯದಲ್ಲಿ ಬಿಜೆಪಿ ಸಂಪೂರ್ಣವಾಗಿ ನೆಲೆ ಕಳೆದುಕೊಳ್ಳಲಾರಂಭಿಸಿತ್ತು. ಆದರೆ, 2014ರ ಬಳಿಕ ಮೋದಿ ಅಲೆಯು ಬಿಜೆಪಿಗೆ ಕೊಂಚ ನೆಲೆ ನೀಡಿತು. ಅದನ್ನೇ ಇಟ್ಟುಕೊಂಡು, ಹಿಂದುತ್ವ, ರಾಮಮಂದಿರದ ವಿಚಾರದೊಂದಿಗೆ ಬಿಜೆಪಿ ಮತ್ತೆ ಮುನ್ನೆಲೆಗೆ ಬಂದಿತು.

ಆದಾಗ್ಯೂ, 2019ರಲ್ಲಿ ಒಡಿಶಾದ 21 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಡಿ 12 ಸ್ಥಾನಗಳನ್ನು ಗೆದ್ದಿದ್ದರೆ, ಬಿಜೆಪಿ 8 ಮತ್ತು ಕಾಂಗ್ರೆಸ್ ಒಂದರಲ್ಲಿ ಗೆಲುವು ಸಾಧಿಸಿತ್ತು. ಆ ವರ್ಷ, ಎರಡು ಪಕ್ಷಗಳು (ಬಿಜೆಡಿ-ಬಿಜೆಪಿ) ರಹಸ್ಯ ಒಪ್ಪಂದ ಮಾಡಿಕೊಂಡು ಈ ಸಾಧನೆ ಮಾಡಿವೆ ಎಂಬ ಆರೋಪವೂ ಇದೆ. ಈ ನಡುವೆ, ಇತ್ತೀಚೆಗೆ ನಡೆದ ಲೋಕಸಭೆ ಮತ್ತು ಒಡಿಶಾ ವಿಧಾನಸಭೆ ಚುನಾವಣೆ ವೇಳೆ, ಬಿಜೆಪಿ-ಬಿಜೆಡಿ ಮತ್ತೆ ಮೈತ್ರಿಗಾಗಿ ಮಾತುಕತೆ ನಡೆಸಿದ್ದವು. ಆದರೆ, ಮೈತ್ರಿ ಮಾತುಕತೆ ಮುರಿದು ಬಿದ್ದಿತ್ತು. ಬಿಜೆಪಿ ಜೊತೆ ಬಿಜೆಡಿಯ ಒಳಒಪ್ಪಂದವು ಪಶ್ಚಿಮ ಒಡಿಶಾದಲ್ಲಿ ಬಿಜೆಪಿಯ ಬೆಳವಣಿಗೆಗೆ ಕಾರಣವಾಯಿತು. ಇದೇ ಬೆಳವಣಿಕೆಯನ್ನಿಟ್ಟುಕೊಂಡು ಬಿಜೆಡಿಯನ್ನೇ ಮಣಿಸಿ, ಇದೀಗ ಬಿಜೆಪಿ ಅಧಿಕಾರಕ್ಕೇರಿದೆ. ಒಡಿಶಾದಲ್ಲಿ ತನ್ನ ಬೆಳವಣಿಗೆಗೆ ಅವಕಾಶ ಕೊಟ್ಟ ಬಿಜೆಪಿಯನ್ನೇ ಬಿಜೆಪಿ ಮೂಲೆ ಗುಂಪು ಮಾಡುತ್ತಿದೆ.

ಇನ್ನು ತಮಿಳುನಾಡಿನಲ್ಲಿ ಬಿಜೆಪಿ ಜೊತೆ ಎಐಎಡಿಎಂಕೆ ಮೈತ್ರಿ ಮಾಡಿಕೊಂಡಿತ್ತು. ಗಮನಿಸಬೇಕಾದ ವಿಚಾರವೆಂದರೆ, ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವುದರಿಂದ ಎಐಎಡಿಎಂಕೆಗೆ ರಾಜ್ಯದಲ್ಲಿ ಯಾವುದೇ ಉಪಯೋಗ ಇರಲಿಲ್ಲ. ತಮಿಳುನಾಡಿನಲ್ಲಿ ಬಿಜೆಪಿಗೆ ಇಂದಿಗೂ ಸರಿಯಾದ ನೆಲೆ ಇಲ್ಲ. ಆದರೆ, ಕೇಂದ್ರದಲ್ಲಿ ಯಾವುದಾದರೂ ಖಾತೆ ದೊರೆಯಬಹುದೆಂಬ ಆಸೆಯನ್ನ ಎಐಎಡಿಎಂಕೆ ಹೊಂದಿತ್ತು. ಬಿಜೆಪಿಯ ಕೋಮುವಾದಿ ಧೋರಣೆಯನ್ನು ತಮಿಳುನಾಡಿನಲ್ಲಿ ಹೇರಲು ಎಐಎಡಿಎಂಕೆ ತನ್ನ ಆಡಳಿತಾವಧಿಯಲ್ಲಿ ಅವಕಾಶ ಮಾಡಿಕೊಟ್ಟಿತು. ಆದಾಗ್ಯೂ, ತಮಿಳಿಗರು ಬಿಜೆಪಿಗೆ ಹೆಚ್ಚಿನ ಮಣೆ ಹಾಕುತ್ತಿಲ್ಲ.

2016ರ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ತನ್ನೊಂದಿಗೆ ಬಿಜೆಪಿಯನ್ನು ಸೇರಿಸಿಕೊಂಡಿತು. ಆ ಚುನಾವಣೆಯಲ್ಲಿ ಎಐಎಡಿಎಂಕೆ ಬರೋಬ್ಬರಿ 136 ಸ್ಥಾನಗಳನ್ನು ಗೆದ್ದು, ಸರ್ಕಾರ ರಚಿಸಿತು. ಆಗ ಬಿಜೆಪಿ ಒಂದೂ ಸ್ಥಾನವನ್ನು ಗೆಲ್ಲಲಾಗಿರಲಿಲ್ಲ. ಆದರೆ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಪರಿಣಾಮ, ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ, 2019ರ ಲೋಕಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಕೇವಲ 1 ಸ್ಥಾನವನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಇನ್ನು, 2021ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಅಧಿಕಾರ ಕಳೆದುಕೊಂಡಿತು. ಎಐಎಡಿಎಂಕೆ 66 ಸ್ಥಾನಗಳಿಗೆ ಕುಸಿದರೆ, ಬಿಜೆಪಿ ನಾಲ್ಕು ಸ್ಥಾನಗಳನ್ನು ಗೆದ್ದುಕೊಂಡಿತು. ತನ್ನ ನೆಲೆಯೂರಿತು. ಇನ್ನು, 2024ರ ಲೋಕಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ತನಗಿದ್ದ ಒಂದು ಸ್ಥಾನವನ್ನೂ ಕಳೆದುಕೊಂಡು ಶೂನ್ಯ ಸಾಧನೆ ಮಾಡಿತು.

ತಮಿಳುನಾಡಿನಲ್ಲಿ ಬಿಜೆಪಿಗೆ ಅವಕಾಶಕೊಟ್ಟ ಏಕೈಕ ಕಾರಣಕ್ಕೆ ತಮಿಳಿಗರು ಎಐಎಡಿಎಂಕೆಯನ್ನೂ ತಿರಸ್ಕರಿಸಿದ್ದಾರೆ. ಈಗ, ಬಿಜೆಪಿಗೆ ನೆಲೆ ಕೊಡುವುದಿರಲಿ, ತನ್ನ ನೆಲೆಯನ್ನೂ ಉಳಿಸಿಕೊಳ್ಳಲು ಪಕ್ಷವು ಹೆಣಗಾಡುವ ಪರಿಸ್ಥಿತಿ ಎದುರಾಗಿದೆ.

ಮಧ್ಯಪ್ರದೇಶದ ವಿಚಾರದಲ್ಲಿ ಬಿಜೆಪಿ ಭಾರೀ ಕೊಳಕು ರಾಜಕಾರಣ ಮಾಡಿತ್ತು. ಅದರ ಈ ಕೊಳಕು ರಾಜಕಾರಣಕ್ಕೆ ಎರಡು ಸ್ಥಳೀಯ ಪಕ್ಷಗಳು ಬಲಿಯಾಗಿ, ಒಡೆದು ಹೋಗಿವೆ. 1995ರಿಂದಲೂ ಬಿಜೆಪಿ ಜೊತೆ ಶಿವಸೇನೆ ಮೈತ್ರಿ ಮಾಡಿಕೊಂಡಿತ್ತು. ಬಿಜೆಪಿ-ಶಿವಸೇನೆ ಮೈತ್ರಿಯಲ್ಲಿ ಎರಡು ಬಾರಿ ಸರ್ಕಾರವನ್ನೂ ನಡೆಸಿವೆ. ಶಿವಸೇನೆ ಮತ್ತು ಬಿಜೆಪಿ ಎರಡೂ ಪಕ್ಷಗಳು ಹಿಂದುತ್ವದ ಮೇಲೆಯೂ ಅಧಿಕಾರ ನಡೆಸುವ ಕಾರಣ ಬಿಜೆಪಿ ವೇಗವಾಗಿ ಮಹಾರಾಷ್ಟ್ರದಲ್ಲಿ ಬೆಳೆಯಲು ಮುಂದಾಯಿತು. 2014-19ರ ನಡುವಿನ ಬಿಜೆಪಿಯ ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ-ಶಿವಸೇನಾ ಮೈತ್ರಿ ಸರ್ಕಾರದ ಅವಧಿಯನ್ನು ಬಿಜೆಪಿ ತನ್ನ ಬೆಳವಣಿಗೆಗೆ ಬಳಸಿಕೊಂಡಿತು. ಇದು ಶಿವಸೇನೆಗೆ ತನ್ನ ನೆಲೆಯ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿತು.

ಈ ಸುದ್ದಿ ಓದಿದ್ದೀರಾ? ಫಲಿತಾಂಶಕ್ಕೂ ಮುನ್ನವೇ ಹೆದರಿದ ಬಿಜೆಪಿ; ಜಮ್ಮು- ಕಾಶ್ಮೀರದಲ್ಲಿ 5 ಶಾಸಕರ ನಾಮನಿರ್ದೇಶನಕ್ಕೆ ಗವರ್ನರ್‌ಗೆ ಅಧಿಕಾರ

ಆದಾಗ್ಯೂ, ಮೂರನೇ ಬಾರಿಗೆ ಬಿಜೆಪಿ-ಶಿವಸೇನೆ ಜಂಟಿಯಾಗಿ ಚುನಾವಣೆ ಎದುರಿಸಲು 2019ರಲ್ಲಿ ಮುಂದಾಗಿದ್ದವು. ಆದರೆ, ಆ ವೇಳೆಯಿದ್ದ ಮೋದಿ ಅಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಗರು ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆಗೆ ಹೆಚ್ಚು ಕ್ಷೇತ್ರಗಳನ್ನು ಬಿಟ್ಟುಕೊಡಲು ತಕರಾರು ತೆಗೆದಿದ್ದರು. ಪರಿಣಾಮ, ಮೈತ್ರಿ ಮುರಿದುಬಿದ್ದಿತ್ತು. ಬಳಿಕ, 2019ರ ವಿಧಾನಸಭಾ ಚುನಾವಣೆ ಬಳಿಕ, ಕಾಂಗ್ರೆಸ್-ಎನ್ಸಿಪಿ ಜೊತೆಗೂಡಿ ಸರ್ಕಾರ ರಚಿಸಿದರು. ಉದ್ಧವ್ ಠಾಕ್ರೆ ಮುಖ್ಯಮಂತ್ರಿಯೂ ಆಗಿದ್ದರು. ಆದರೆ, ಬಿಜೆಪಿ ಉದ್ಧವ್ ಅವರ ಶಿವಸೇನೆ ಮತ್ತು ಶರದ್ ಪವಾರ್ ಅವರ ಎನ್ಸಿಪಿಯನ್ನು ಎರಡೆರಡು ಬಣಗಳಾಗಿ ವಿಭಜಿಸಿತು.

2022ರ ಜೂನ್ನಲ್ಲಿ ಶಿವಸೇನೆ ಮತ್ತು ಎನ್ಸಿಪಿಯನ್ನು ಒಡೆದು, ಶಿವಸೇನೆಯ ಏಕನಾಥ್ ಶಿಂಧೆ ಬಣ ಮತ್ತು ಎನ್ಸಿಪಿಯ ಅಜಿತ್ ಪವಾರ್ ಬಣವನ್ನು ಒಳಗೊಂಡು ಬಿಜೆಪಿ ಸರ್ಕಾರ ರಚಿಸಿತು. ಏಕನಾರ್ಥ ಶಿಂಧೆ ಅವರನ್ನು ಮುಖ್ಯಮಂತ್ರಿ ಮಾಡಿತು. ಸತತ 25 ವರ್ಷಗಳ ಕಾಲ ಬಿಜೆಪಿ ಜೊತೆಗಿದ್ದ ಶಿವಸೇನೆ, ಬಿಜೆಪಿಯ ಅವಕಾಶವಾದಿ, ಹಿಂಬಾಗಿಲಿನ ರಾಜಕಾರಣದಿಂದ ಒಡೆದು ಹೋಗಿದೆ. ಅದರಲ್ಲೂ ಶಿಂಧೆ ಬಣ ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇವಲ 1 ಸ್ಥಾನ ಗೆದ್ದು, ಮಣ್ಣುಮುಕ್ಕಿದೆ. ಬಹುಶಃ ಮುಂದಿನ ನಾಲ್ಕೈದು ವರ್ಷಗಳಲ್ಲಿ ಶಿವಸೇನೆ ಶಿಂಧೆ ಬಣ ಬಿಜೆಪಿಯಲ್ಲಿ ಲೀನವಾಗಬಹುದು. ಆಥವಾ ಇಲ್ಲವಾಗಬಹುದು. ಉದ್ಧವ್ ಠಾಕ್ರೆ ಈಗ ಎಚ್ಚೆತ್ತುಕೊಂಡಿದ್ದಾರೆ. ಬಿಜೆಪಿ ವಿರುದ್ದವೇ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಒಂದು ವೇಳೆ, ಹಿಂದುತ್ವಕ್ಕೆ ಜನ ಮಣೆ ಹಾಕಿದರೆ, ಉದ್ಧವ್ ಅವರ ಶಿವಸೇನೆಯೂ ನೆಲೆ ಕಳೆದುಕೊಳ್ಳಬಹುದು.

ಇನ್ನು, ನಮ್ಮದೇ ರಾಜ್ಯ ಕರ್ನಾಟಕದಲ್ಲಿಯೂ ಬಿಜೆಪಿ ಅಧಿಕಾರಕ್ಕೇರಲು ಮೆಟ್ಟಿಲಾಗಿದ್ದು ಜೆಡಿಎಸ್. 2007ರಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಬಳಿಕ, ಮೈತ್ರಿಯೊಳಗಿನ ಕಚ್ಚಾಟದಿಂದ ಮೈತ್ರಿ ಮುರಿದುಬಿದ್ದಿತ್ತು. ಇದೀಗ, ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮೈತ್ರಿ ಮಾಡಿಕೊಂಡಿದೆ. ಈವರೆಗೆ ಹಳೇ ಮೈಸೂರು ಭಾಗ ಜೆಡಿಎಸ್ನ ಭದ್ರಕೋಟೆಯಾಗಿತ್ತು. ಬಹುತೇಕ ಜೆಡಿಎಸ್ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತಿತ್ತು. ಕಾಂಗ್ರೆಸ್-ಜೆಡಿಎಸ್ ನಡುವಿನ ಹೋರಾಟದಲ್ಲಿ ಬಿಜೆಪಿ ಮೂರನೇ ಸ್ಥಾನದಲ್ಲಿತ್ತು. ಆದರೆ, ಇಂದಿನ ಮೈತ್ರಿ ಬಿಜೆಪಿ ಹಳೇ ಮೈಸೂರು ಭಾಗವನ್ನೂ ಆಕ್ರಮಿಸಿಕೊಳ್ಳಲು ನೆರವಾಗಿದೆ. ಈಗಾಗಲೇ, ಜೆಡಿಎಸ್ ಒಂದು ಕುಟುಂಬದ ಪಕ್ಷವಾಗಿ ಮೂಲೆ ಗುಂಪಾಗುತ್ತಿದೆ. ಹಳೇ ಮೈಸೂರು ಭಾಗದ ಯುವಜನರು ಬಿಜೆಪಿಯ ಹಿಂದುತ್ವಕ್ಕೆ ಮರಳಾಗುತ್ತಿದ್ದಾರೆ. ಒಕ್ಕಲಿಗರನ್ನು ಜೆಡಿಎಸ್ ಅಕ್ಷರಶಃ ಕುಮಾರಸ್ವಾಮಿ ಅವರೇ ಕೊಂಡೊಯ್ದು ಬಿಜೆಪಿಯ ಕೈಗಿಟ್ಟಿದ್ದಾರೆ. ಹೀಗಾಗಿ, ಜೆಡಿಎಸ್ ಕೂಡ ನಿರ್ನಾಮವಾಗುವ ದಿನಗಳು ದೂರವಿಲ್ಲ. ಕುಮಾರಸ್ವಾಮಿ ಅವರು ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಜೆಡಿಎಸ್ ಅಂತ್ಯಸಂಸ್ಕಾರಕ್ಕೆ ಗುಂಡಿ ತೋಡಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಹೀಗೆ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಹಲವಾರು ಸ್ಥಳೀಯ ಪಕ್ಷಗಳು ಇಂದು ಅವನತಿಯ ಹಾದಿಯಲ್ಲಿವೆ. ಹಲವು ರಾಜ್ಯಗಳಲ್ಲಿ ಬಿಜೆಪಿ ಬೆಳೆಯಲು ಅವಕಾಶ ಮಾಡಿಕೊಟ್ಟ ಪ್ರಾದೇಶಿಕ ಪಕ್ಷಗಳನ್ನೇ ನುಂಗಿ ಬಿಜೆಪಿ ಹೆಬ್ಬಾವಿನ ರೀತಿಯಲ್ಲಿ ಬೆಳೆದಿದೆ. ಇನ್ನೂ, ಆಂಧ್ರ-ತೆಲಂಗಾಣದಲ್ಲಿ ಟಿಡಿಪಿ, ಪಂಜಾಬ್ನಲ್ಲಿ ಶಿರೋಮಣಿ ಅಕಾಲಿ ದಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಜೆಪಿ ಸ್ಥಳೀಯ ಪಕ್ಷಗಳನ್ನು ಬಳಸಿಕೊಂಡು ಮೇಲೇಳುತ್ತಿದೆ. ಇದರ ಪರಿಣಾಮವನ್ನು ಪ್ರದೇಶಿಕ ಪಕ್ಷಗಳೇ ಅನುಭವಿಸುತ್ತಿವೆ.

e4c01bd9b2970ccfecae47b47af65a36?s=150&d=mp&r=g
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಕರ್ನಾಟಕದಲ್ಲಿ ಅಧಿಕಾರದ ಆಶೆಗೆ ಮನುವ್ಯಾದಿಗಳ ಬಾಗಿಲು ಕಾಯುವ ಚೌಕಿದಾರ ಆಗಿರುವ ಮಾಜಿ ಜಾತ್ಯತೀತರ ಹಣೆಬರಹವೂ ಇಷ್ಟೇ,,, ಕಾಂಗ್ರೆಸ್ ವಿರುದ್ಧ ಮತ್ತು ತಮ್ಮದೇ ಪಕ್ಷದವರಿಗೆ ಒಬ್ಬ ಪರ್ಯಾಯ ಬೇಕಿತ್ತು ಇವರನ್ನು ಉಪಯೋಗಿಸಿಕೊಂಡು ಬಳಸಿಕೊಂಡು ಮುಚ್ಚಿಬಿಡುವರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X