ಸಭೆಯ ಮುಖ್ಯ ಉದ್ದೇಶ ಖನಿಜ ಒಪ್ಪಂದದ ಕುರಿತಾಗಿರುತ್ತದೆ. ದೇಶಗಳ ವ್ಯಾಪಾರ ವ್ಯವಹಾರ ಸಂಬಂಧಗಳ ಮಾತುಕತೆಗಳನ್ನು ನಾಯಕರುಗಳು ಮುಚ್ಚಿದ ಕಚೇರಿಯೊಳಗೆ ನಡೆಸಿ, ಪಲಿತಾಂಶವನ್ನು ನಂತರದಲ್ಲಿ ಪತ್ರಿಕಾಗೋಷ್ಠಿಗೆ ತಿಳಿಸುವುದು ವಾಡಿಕೆ. ಆದರೆ, ಆಶ್ಚರ್ಯವೆಂಬಂತೆ, ಇಲ್ಲಿ ಮಾತುಕತೆಯೂ ಸಹ ಪತ್ರಕರ್ತರ ಸಮ್ಮುಖದಲ್ಲಿಯೇ ನಡೆಯುತ್ತದೆ! ಮತ್ತು ಝೆಲೆನ್ಸ್ಕಿಯವರು ಅಮೆರಿಕಕ್ಕೆ ಬರುವ ಮೊದಲೇ ಈ ಖನಿಜ ಸಂಪನ್ಮೂಲ ಒಪ್ಪಂದವನ್ನು ಸಾರ್ವಜನಿಕ ಮಾಡಲಾಗಿರುತ್ತದೆ!
ಮತದಾನ ಹೆಚ್ಚಳಕ್ಕೆ 21 ಮಿಲಿಯನ್ ಡಾಲರ್‌ಗಳನ್ನು ಭಾರತಕ್ಕೆ ಕೊಡಮಾಡಲು ನಿಗದಿಯಾದ ಮೊತ್ತದ ಕುರಿತು ಮಿತ್ರ ಟ್ರಂಪ್‍ರವರ ಹೇಳಿಕೆಗಳು ಬಿಜೆಪಿ ಐಟಿ ಸೆಲ್ ಹಾಗೂ ಗೋದಿ ಮಿಡಿಯಾಗಳಿಗೆ ದಿನಪೂರ್ತಿ ಕೆಲಸ ಕೊಟ್ಟಿತ್ತು. ಈ ದೇಶದ ವಿರೋಧ ಪಕ್ಷಗಳು, ಸ್ವಯಂಸೇವಾ ಸಂಸ್ಥೆಗಳು, ಚಳವಳಿಗಳು ಮತ್ತು ಸ್ವತಂತ್ರ ಪತ್ರಕರ್ತರು… ಹೀಗೆ ಎಲ್ಲರೂ USAID ಎಂಬ ದೇಶಮುರುಕ ವಿದೇಶಿ ಸಂಸ್ಥೆಯ ಜೊತೆಯಾಗಿ ಇಲ್ಲಿನ ಚುನಾವಣಾ ಪ್ರಕ್ರಿಯೆಯನ್ನು ಭಂಗಪಡಿಸುವ ಮೂಲಕ ಆಡಳಿತ ಪಕ್ಷವನ್ನು ಸೋಲಿಸಲು ಸಂಚು ಮಾಡಿದ್ದರು ಎಂಬ ಜ್ಞಾನಸುಧೆಯನ್ನು ಹರಿಸತೊಡಗಿದ್ದರು. ಆದರೆ, ಮಿತ್ರ ಟ್ರಂಪ್‍ರವರ ಕೊನೆಯ ಹೇಳಿಕೆ ಎಲ್ಲರನ್ನು ಮೌನಗೊಳಿಸಿ, ಕಟ್ಟಿದ್ದ ನಾಟಕಕ್ಕೆ ತೆರೆ ಎಳೆಯುತ್ತಿದ್ದಂತೆ, ಅಮೆರಿಕದ ದೊಡ್ಡಣ್ಣ ಟ್ರಂಪ್‍ರವರು ಮಹಾನ್ ಘೋರ ಸಭೆಯೊಂದನ್ನು ನಡೆಸಿ ಜಾಗತಿಕ ಮಟ್ಟದಲ್ಲಿ ಬಹುದೊಡ್ಡ ಸುದ್ದಿ ಮಾಡುತ್ತಾರೆ. ಇದು ಕೇವಲ ಸುದ್ಧಿ ಮಾಡಿ ಮರೆಯಾಗದೆ, ಈ ಸಭೆಯ ಪರಿಣಾಮಗಳು ಬೇರೆ ಬೇರೆ ದೇಶಗಳಿಗೆ ವಿವಿಧ ರೀತಿಯಲ್ಲಿ ತೆರೆದುಕೊಳ್ಳುವ ಸಾಧ್ಯತೆಗಳಿವೆ.
ಇತ್ತಿಚೆಗೆ ಅಧಿಕಾರ ವಹಿಸಿಕೊಂಡ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರವರು ತಮ್ಮ ಮಿತ್ರಕೂಟದ ದೇಶಗಳ ನಾಯಕರೊಂದಿಗೆ ವಿದೇಶಿ ನೀತಿಯ ಕುರಿತು ಚರ್ಚಿಸಲು ಸಭೆಗಳನ್ನು ನಡೆಸಿದ್ದರು. ಭಾರತದ ಪ್ರಧಾನಿಯವರೊಂದಿಗೂ ಸಹ ಇಂತಹ ಸಭೆ ನಡೆದಿತ್ತು.
ಫೆಬ್ರುವರಿ 28ರಂದು, ಉಕ್ರೇನ್ ದೇಶದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯವರೊಂದಿಗೆ ಅಮೆರಿಕದ ಶ್ವೇತಭವನದಲ್ಲಿ ಸಭೆ ನಡೆಸುತ್ತಾರೆ. ಈ ಸಭೆಯು ಉಕ್ರೇನಿನ ಖನಿಜ ಸಂಪನ್ಮೂಲಗಳನ್ನು ಅಮೆರಿಕ ಪಡೆಯುವ ಒಪ್ಪಂದಕ್ಕೆ ಸಹಿ ಮಾಡುವ ಕುರಿತಾಗಿದ್ದು, ಸಭೆಯಲ್ಲಿ ಅಮೆರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್, ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹಾಗೂ ಉಕ್ರೇನ್ ಅಧ್ಯಕ್ಷರಾದ ಝೆಲೆನ್ಸ್ಕಿ ಇರುತ್ತಾರೆ. ಈ ಸಭೆಯ ಕುರಿತು ಹೇಳುವ ಮೊದಲು ಉಕ್ರೇನ್ ಮತ್ತು ರಷ್ಯಾ ನಡುವೆ ಮೂರು ವರ್ಷಗಳಿಂದ ನಡೆಯುತ್ತಿರುವ ಯುದ್ಧದ ಬಗ್ಗೆ ಕೆಲವು ಸಾಲುಗಳನ್ನು ಹೇಳಬೇಕಾಗುತ್ತದೆ.
ಉಕ್ರೇನ್ ಸೇರಿದಂತೆ ಸುಮಾರು 15 ದೇಶಗಳು ಮೊದಲಿಗೆ ರಷ್ಯಾದ ಸಂಯುಕ್ತ ರಾಷ್ಟ್ರದ ಭಾಗವಾಗಿದ್ದು, 1991ರಲ್ಲಿ ಸ್ವತಂತ್ರ ರಾಷ್ಟ್ರಗಳಾಗುತ್ತವೆ. ಅನೇಕ ಐತಿಹಾಸಿಕ ಘಟನೆಗಳ ಕಾರಣಗಳಿಂದಾಗಿ ಫೆಬ್ರುವರಿ 2022ರಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧವು ಶುರುವಾಗಿ ಇನ್ನೂ ನಡೆಯುತ್ತಿದೆ. ರಷ್ಯಾವು 2015ರ ಮಿನ್ಸ್ಕ್ ಒಪ್ಪಂದವನ್ನು ಮುರಿದು ಈ ಯುದ್ಧವನ್ನು ಆರಂಭಿಸುತ್ತದೆ. ಅಮೆರಿಕ ಮತ್ತು ಯುರೋಪಿಯನ್ ದೇಶಗಳು ಉಕ್ರೇನ್ ಪರವಾಗಿ ನಿಲ್ಲುತ್ತವೆ. ತನ್ನ ಮಿತ್ರ ರಾಷ್ಟ್ರವಾದ ಉಕ್ರೇನಿನ ಯುದ್ಧಕ್ಕೆ ಶಸ್ತ್ರಾಸ್ತ್ರಗಳನ್ನು ಅಮೆರಿಕದ ಹಿಂದಿನ ಸರ್ಕಾರಗಳು ಒದಗಿಸುತ್ತಿದ್ದರೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇವರೊಂದಿಗಿನ ಈಗಿನ ಅಧ್ಯಕ್ಷ ಟ್ರಂಪ್‍ರವರ ಸ್ನೇಹ ಸಂಬಂಧವೂ ಸಹ ಜೊತೆಯಾಗಿ ಸಾಗಿ ಬಂದಿದೆ. ಮುಂದಿನ ವಿಷಯಕ್ಕೆ ಇದಿಷ್ಟು ಹಿನ್ನೆಲೆ ಸಾಕೆನಿಸುತ್ತದೆ.

ಟ್ರಂಪ್‍ರವರ ಸಭೆಯಲ್ಲಿ ನಡೆದಿದ್ದೇನು?
ಸಭೆಯ ಮುಖ್ಯ ಉದ್ದೇಶ ಖನಿಜ ಒಪ್ಪಂದದ ಕುರಿತಾಗಿರುತ್ತದೆ. ದೇಶಗಳ ವ್ಯಾಪಾರ ವ್ಯವಹಾರ ಸಂಬಂಧಗಳ ಮಾತುಕತೆಗಳನ್ನು ನಾಯಕರುಗಳು ಮುಚ್ಚಿದ ಕಚೇರಿಯೊಳಗೆ ನಡೆಸಿ, ಪಲಿತಾಂಶವನ್ನು ನಂತರದಲ್ಲಿ ಪತ್ರಿಕಾಗೋಷ್ಠಿಗೆ ತಿಳಿಸುವುದು ವಾಡಿಕೆ. ಆದರೆ, ಆಶ್ಚರ್ಯವೆಂಬಂತೆ, ಇಲ್ಲಿ ಮಾತುಕತೆಯೂ ಸಹ ಪತ್ರಕರ್ತರ ಸಮ್ಮುಖದಲ್ಲಿಯೇ ನಡೆಯುತ್ತದೆ! ಮತ್ತು ವೊಲೊಡಿಮಿರ್ ಝೆಲೆನ್ಸ್ಕಿಯವರು ಅಮೆರಿಕಕ್ಕೆ ಬರುವ ಮೊದಲೇ ಈ ಖನಿಜ ಸಂಪನ್ಮೂಲ ಒಪ್ಪಂದವನ್ನು ಸಾರ್ವಜನಿಕ ಮಾಡಲಾಗಿರುತ್ತದೆ!!
ಸಭೆಯ ಮೊದಲ ಹೆಚ್ಚಿನ ಭಾಗದ ಚರ್ಚೆಗಳು ಸರಾಗವಾಗಿ ನಡೆದರೂ, ಕೊನೆಯ 10 ನಿಮಿಷಗಳ ಮಾತುಕತೆಗಳ ವರಸೆ ನಾಯಕರ ಘನತೆಯ ಮಟ್ಟದ್ದಾಗಿರದೆ, ಮಾತುಗಳು ಸಭ್ಯತೆಯ ಎಲ್ಲೆ ಮೀರುತ್ತವೆ. ರಷ್ಯಾ-ಉಕ್ರೇನ್ ನಡುವೆ ಕದನವಿರಾಮಕ್ಕೆ ತಾವು ಪ್ರಯತ್ನಿಸಿದ್ದು, ಪುಟಿನ್ ಅವರೊಂದಿಗೆ ಮಾತನಾಡಿದ್ದೇನೆ ಹಾಗೂ ಅವರು ಒಪ್ಪಿರುವುದಾಗಿ ಟ್ರಂಪ್ ನಯವಾಗಿಯೇ ಹೇಳುತ್ತಾರೆ. ಆಗ ಝೆಲೆನ್ಸ್ಕಿಯವರು ರಷ್ಯಾದೊಂದಿಗೆ ಆಗಿರುವ ತಮ್ಮ ಹಿಂದಿನ ಕೆಟ್ಟ ಅನುಭವವನ್ನು ಹೇಳುತ್ತಾ, ಪುಟಿನ್‍ರವರು ಈ ಮೊದಲಿನ ಒಪ್ಪಂದವನ್ನು ಮುರಿದು ನಮ್ಮ ಜನರನ್ನು ಹತ್ಯೆಗೊಳಿಸಿದ್ದಾರೆ. ಅದು ಮತ್ತೆ ಆಗದಿರಲು ಸುರಕ್ಷತೆಯ ಗ್ಯಾರಂಟಿ ಏನು ಎಂಬ ಮಾತುಗಳನ್ನು ಸ್ವಲ್ಪ ಖಾರವಾಗಿಯೇ ವ್ಯಕ್ತಪಡಿಸುತ್ತಾರೆ. ಇಲ್ಲಿಂದ ಜೆಡಿ ವ್ಯಾನಸ್ ಚರ್ಚೆಯ ದಿಕ್ಕನ್ನು ತಪ್ಪಿಸುತ್ತಾರೆ. 350 ಬಿಲಿಯನ್ ಡಾಲರ್ಸ್ ಸಹಾಯ ಮಾಡಿರುವ ಅಮೆರಿಕ ದೇಶಕ್ಕೆ ಇವರು ಧನ್ಯರಾಗಿಲ್ಲ ಮತ್ತು ಅಮೆರಿಕದ ಆಡಳಿತವನ್ನು ಅವಮಾನಿಸಿದ್ದಾರೆ ಎನ್ನುತ್ತಲೇ, ಟ್ರಂಪ್‍ರವರು ಇದನ್ನೇ ಮತ್ತೆ ಮತ್ತೆ ಉಚ್ಚರಿಸಿ ಈ ದೇಶವನ್ನು ಅವಮಾನಿಸುತ್ತಿದ್ದೀರಿ ಎನ್ನುತ್ತಾರೆ. ಅಂತಿಮವಾಗಿ ನೀವು ಯಾವುದನ್ನು ಹೇಳುವ ಸ್ಥಾನದಲ್ಲಿಲ್ಲ, ತಕ್ಷಣವೇ ಕದನವಿರಾಮಕ್ಕೆ ಒಪ್ಪಿ ಎಂದು ಆದೇಶಿಸುವಂತೆ ಹೇಳುತ್ತಾರೆ.
ಇದಿಷ್ಟೇ ಆಗಿದ್ದರೆ ಪರವಾಗಿರಲಿಲ್ಲ, ಈ ಸಭೆಯಲ್ಲಿ ಮಾನವೀಯತೆಯ ಘನತೆಯನ್ನು ಮೀರಿದ ಕೆಲವು ಘಟನೆಗಳೂ ನಡೆಯುತ್ತವೆ; ಝೆಲೆನ್ಸ್ಕಿಯವರನ್ನು ಸ್ವಾಗತಿಸುವಾಗಲೇ ಟ್ರಂಪ್‍ರವರು “ಹೊ ನೀವಿಂದು ಸರಿಯಾದ ಉಡುಗೆಯುಟ್ಟು ಬಂದಿದ್ದೀರಿ” ಎಂದು ಅಣಕವಾಡುತ್ತಾರೆ. ಸಭೆಯಲ್ಲಿ ಪತ್ರಕರ್ತರೊಬ್ಬರು “ನೀವೇಕೆ ಸೂಟ್ ಹಾಕಿಲ್ಲ” ಎಂದು ಪ್ರಶ್ನೆ ಕೇಳುತ್ತಾರೆ. “ಟ್ರಂಪ್ ಶಾಂತಿ ಪ್ರಿಯರಾದರೆ, ವೊಲೊಡಿಮಿರ್ ಝೆಲೆನ್ಸ್ಕಿಯವರು ಕದನವಿರಾಮಕ್ಕೆ ತಯಾರಿಲ್ಲ, ಅವರು ಸರ್ವಾಧಿಕಾರಿ ಮತ್ತು ಅಮೆರಿಕದಿಂದ ಈವರೆಗೆ ಪಡೆದ ಸಹಾಯಕ್ಕೆ ಕೃತಜ್ಞರಾಗದೆ, ಅವಮಾನ ಮಾಡುತ್ತಿದ್ದಾರೆ ಹಾಗೂ ಮೂರನೇ ಮಹಾ ಯುದ್ಧವನ್ನು ಆಹ್ವಾನಿಸುತ್ತಿದ್ದಾರೆ” ಎಂಬ ಮಾತುಗಳ ಮಳೆಯಾಗುತ್ತದೆ. ಕೊನೆಗೆ, ಒಪ್ಪಂದಕ್ಕೆ ಸಹಿಯಾಗದೆ, ಝೆಲೆನ್ಸ್ಕಿಯವರನ್ನು ಶ್ವೇತಭವನದಿಂದ ಕಳಿಸಲಾಗುತ್ತದೆ.
ಘನತೆ ಸಮ್ಮಾನವಿಲ್ಲದ ಮಾತುಕತೆಗಳ ಈ ಸಭೆ ನಡೆದ ರೀತಿ ನೀತಿಗಳು ಪ್ರಪಂಚದ ನಾಯಕರಿಗೆ ಆಘಾತ ನೀಡಿದೆ. ಮಾಧ್ಯಮಗಳ ಎದುರು ಮಿತ್ರ ರಾಷ್ಟ್ರವೊಂದರ ಅಧ್ಯಕ್ಷರನ್ನು ನಡೆಸಿಕೊಂಡ ರೀತಿ ಒಪ್ಪುವಂತಿರಲಿಲ್ಲ ಮತ್ತು ಮಾತಿನ ವರಸೆಯು ಗೌರವದ ಗಡಿಯನ್ನು ದಾಟಿಯಾಗಿತ್ತು. ಈ ಘಟನೆಯು ಜಾಗತಿಕ ರಾಜಕೀಯ ವಿದ್ಯಮಾನಗಳ ಮೇಲೆ ಪರಿಣಾಮ ಬೀರಲಿದೆ ಎಂದು ಅಂತಾರಾಷ್ಟ್ರೀಯ ರಾಜಕೀಯ ತಜ್ಞರು ಹೇಳುತ್ತಿದ್ದಾರೆ. ಅಲ್ಲದೆ, ಮಾಧ್ಯಮಗಳ ಮುಂದೆ ವ್ಯವಹಾರಿಕ ಸಭೆ ನಡೆಸುವ ಅಗತ್ಯವೇನಿತ್ತು? ಈಗಾಗಲೇ ಒಪ್ಪಂದ ಮುರಿದ ರಷ್ಯಾದ ಬಗ್ಗೆ ನಂಬಿಕೆ ಇಡುವುದಾದರೂ ಹೇಗೆ? ಇಲ್ಲಿಯವರೆಗೆ ವಿರೋಧಿಯಾಗಿದ್ದ ರಷ್ಯಾ ಸ್ನೇಹಿತನಾಗಿ, ಮಿತ್ರ ರಾಷ್ಟ್ರವು ವಿರೋಧಿಯಾಗಿ ಕಂಡುಬರುತ್ತಿರುವುದು ಯಾಕೆ? ಕದನವಿರಾಮದ ನಿರ್ಣಯದಲ್ಲಿ ಪುಟಿನ್ ಅವರದು ಮೇಲ್ಗೈ ಎಂಬಂತಹ ಧೋರಣೆಯನ್ನು ವ್ಯಕ್ತಪಡಿಸಿದ್ದು ಸರಿಯೇ? ಇದು ಕದನವಿರಾಮದ ಚರ್ಚೆಯಾಗಿದ್ದಲ್ಲಿ, ಅಲ್ಲಿ ರಷ್ಯಾದ ಪ್ರತಿನಿಧಿತ್ವ ಇರಬೇಕಿತ್ತಲ್ಲವೇ? ಈ ಸಭೆಯ ರೀತಿ ಪೂರ್ವ ನಿಯೋಜಿತವಾಗಿತ್ತೇ? ಎಂಬಂತಹ ಪ್ರಶ್ನೆಗಳೂ ಸಹ ಕೇಳಿಬರುತ್ತಿವೆ. ರಷ್ಯಾ ಬಲಾಢ್ಯ ರಾಷ್ಟ್ರವಾದ ಕಾರಣ ಅದನ್ನು ಸೋಲಿಸುವುದು ಕಷ್ಟ ಮತ್ತು ಅಪಾಯಕರವಾದ ಕಾರಣ, ಉಕ್ರೇನ್ ಹಿಂದೆ ಸರಿಯುವಂತೆ ಮಾಡುವುದು ಉತ್ತಮವೆಂದು ಟ್ರಂಪ್ ಅವರ ತರ್ಕ ಎನ್ನುವ ಅಭಿಪ್ರಾಯವೂ ಕೇಳಿಬಂದಿದೆ.

ಹಾಗೆಯೇ, ಝೆಲೆನ್ಸ್ಕಿಯವರ ಮಾತಿನ ವರಸೆ ಒರಟಾಗಿದ್ದು, ದೊಡ್ಡ ನಾಯಕರೊಂದಿಗೆ ರಾಜತಾಂತ್ರಿಕವಾಗಿ ವ್ಯವಹರಿಸುವುದು ಗೊತ್ತಿಲ್ಲದೆ ತಮ್ಮನ್ನು ಮತ್ತು ತಮ್ಮ ದೇಶವನ್ನು ಕಷ್ಟಕ್ಕೆ ತಳ್ಳಿಕೊಂಡರು ಎನ್ನುವ ಅಭಿಪ್ರಾಯಗಳೂ ಇವೆ. ಇವರು ತಮ್ಮ ಹಳೆಯ ಅನುಭವವನ್ನು ಬಿಚ್ಚಿಡುವ ಮೂಲಕ ಇತಿಹಾಸದ ಪಾಠವನ್ನು ಅಮೆರಿಕ ಅಧ್ಯಕ್ಷರಿಗೆ ಕಲಿಸುವುದಾಗಲಿ, ಅಥವಾ ಎಲ್ಲದ್ದಕ್ಕೂ ಅವರಿಗೆ ಉತ್ತರಿಸುವ ಔಚಿತ್ಯವಾದರೂ ಎನಿತ್ತು ಎನ್ನುವುದು ಅನುಭವಸ್ಥರ ಮಾತುಗಳಾಗಿವೆ. ಅನೇಕ ಬಾರಿ ಟ್ರಂಪ್‍ರವರು ಭಾವುಕತೆಯಿಂದು ಮನಸ್ಸಿಗೆ ಹಠಾತ್ತನೆ ಬಂದಿದ್ದನ್ನು ಹೇಳುತ್ತಾರೆ. ಅವುಗಳ ಹಿಂದೆ ಯಾವ ತಂತ್ರಗಾರಿಗೆ ಇಲ್ಲವಾದರೂ, ಕೆಲವು ಬಾರಿ ಆ ಮಾತುಗಳ ಹಿಂದೆ ತರ್ಕ ಮತ್ತು ಸತ್ಯವಿರುತ್ತದೆ. ಹಾಗೆಯೇ, ಝೆಲೆನ್ಸ್ಕಿಯವರು ಯುದ್ಧ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿಲ್ಲ ಎಂಬ ಟ್ರಂಪ್ ಅಪಾದನೆಯಲ್ಲಿಯೂ ಸ್ವಲ್ಪ ಸತ್ಯವಿದೆ ಎಂದು ನಿವೃತ್ತ ವಿದೇಶಿ ಕಾರ್ಯದರ್ಶಿಗಳಾದ ಕೃಷ್ಣನ್ ಶ್ರೀನಿವಾಸನ್ ಹೇಳುತ್ತಾ, ಅದನ್ನು ಪುಷ್ಠೀಕರಿಸಲು ಕೆಲವು ಉದಾಹರಣೆಗಳನ್ನು ಸಹ ನೀಡುತ್ತಾರೆ. (ದಿ ವೈರ್ ಕರಣ್ ಥಾಪರ್ ಇವರಿಗೆ ನೀಡಿರುವ ಸಂದರ್ಶನದಲ್ಲಿ).
“ಯುದ್ಧವು ಯಾರಿಗೂ ಬೇಕಾಗಿಲ್ಲ. ಟ್ರಂಪ್‍ರವರ ನಿಜ ಉದ್ದೇಶ ಶಾಂತಿ ಕಾಪಾಡುವುದೇ ಆಗಿದ್ದರೆ ಅದನ್ನು ಎಲ್ಲರೂ ಸ್ವಾಗತಿಸಲೇಬೇಕು. ಆದರೆ, ಸಹಾಯ ಕೊಡಮಾಡಿದ ಕಾರಣಕ್ಕೆ ಬಲಹೀನರು ಸಮಾನರಲ್ಲ, ಅವರ ಮೇಲೆ ಬಲಾಢ್ಯರು ಏನನ್ನು ಬೇಕಾದರೂ ಹೇರಿಕೆ ಮಾಡಬಹುದು ಎಂಬ ತುಳಿತದ ಮನಸ್ಥಿತಿ ಈ ಸಭೆಯಲ್ಲಿ ವ್ಯಕ್ತವಾಗಿದೆ. ಬಲಾಢ್ಯರು ಎಂಬ ಕಾರಣಕ್ಕೆ ಟ್ರಂಪ್‍ರವರು ಅಪಹಾಸ್ಯ ಮಾಡಬಹುದು, ಸರ್ವಾಧಿಕಾರಿ ಎನ್ನಬಹುದು ಮತ್ತು ಭಾವುಕರಾಗಿ ಮನಸ್ಸಿಗೆ ಬಂದಿದ್ದನ್ನು ಹೇಳಬಹುದು ಎಂದು ನಂಬುವ ವ್ಯವಸ್ಥೆಯು ಅದೇ ತರ್ಕವನ್ನು ಝೆಲೆನ್ಸ್ಕಿಯವರಿಗೆ ಅನ್ವಯಿಸುವುದಿಲ್ಲ, ಬದಲಿಗೆ ಅವರಿಂದ ವಿನಯವನ್ನು ನಿರೀಕ್ಷಿಸುತ್ತದೆ!? ದೇಶದ ನಾಯಕನೊಬ್ಬ ಒಪ್ಪಿ ಸಹಿ ಮಾಡುವ ಒಪ್ಪಂದದಲ್ಲಿ ತನ್ನ ದೇಶಕ್ಕೆ ಒಳಿತಿದೆಯೇ ಎಂದು ಚಿಂತಿಸುವುದು ಮತ್ತು ಅದಕ್ಕಾಗಿ ಒತ್ತಾಯಿಸುವುದು ಆ ನಾಯಕನ ಕರ್ತವ್ಯವಾಗಿರುವಾಗ ಅದು ಅಹಂಕಾರ ಹೇಗಾದಿತು?
ಟ್ರಂಪ್‍ರವರು 350 ಮಿಲಿಯನ್ ಡಾಲರ್‌ಗಳನ್ನು ಉಕ್ರೇನಿಗೆ ನೀಡಿದ್ದರು, ಅದಕ್ಕಾಗಿ ಝೆಲೆನ್ಸ್ಕಿ ಅಮೆರಿಕಕ್ಕೆ ಋಣಿಯಾಗಿರಬೇಕು ಎಂದು ಬಯಸುತ್ತಾರೆ. ಝೆಲೆನ್ಸ್ಕಿಯವರು ಮೊದಲೇ ಹಲವು ವಿಧಗಳಲ್ಲಿ ಧನ್ಯವಾದ ಹೇಳಿರುವ ವಿಡಿಯೋವಿದೆ. 350 ಮಿಲಿಯ ಡಾಲರ್ ಕೊಡಲಾಗಿದೆ ಎಂಬುದು ಸುಳ್ಳಾಗಿದ್ದು, ವಾಸ್ತವದಲ್ಲಿ ಉಕ್ರೇನಿಗೆ ನೀಡಿರುವುದು 180 ಮಿಲಿಯ ಡಾಲರುಗಳಷ್ಟೇ, ಮತ್ತು ಅದರಲ್ಲಿ 70% ಮೊತ್ತವು ಶಸ್ತ್ರಾಸ್ತ್ರ ತಯಾರಿಸುವ ಅಮೆರಿಕ ಕಂಪನಿಗಳೇ ಪಡೆದಿರುವುದಾಗಿ ಮಾಧ್ಯಮಗಳು ಬಿತ್ತರಿಸಿವೆ. ನಾಯಕರು ಆಡುವ ಪ್ರತಿಮಾತು ತಪ್ಪಾಗಿರಲು ಅಥವಾ ಸುಳ್ಳಾಗಿರಲು ಸಾಧ್ಯವಿಲ್ಲದ ವಚನವಾಗಿದ್ದು, ಜನರು ಅದರಿಂದ ಪ್ರಭಾವಕ್ಕೊಳಗಾಗುವ ಕಾರಣ ಅದಕ್ಕೊಂದು ತೂಕವಿರುತ್ತದೆ. ಆ ಮೌಲ್ಯಗಳು ಕಾಣೆಯಾಗುತ್ತಿದ್ದು, ನಾಯಕರು ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವುದೇ ಒಪ್ಪಿತ ಮಾದರಿಯಾಗುತ್ತಿದೆ.
ಟೀಶರ್ಟ್ ಧರಿಸಿ ತನ್ನ ಮಕ್ಕಳೊಂದಿಗೆ ಶ್ವೇತಭವನದ ಕಚೇರಿಯಲ್ಲಿ ಟ್ರಂಪ್‍ರವರ ಜೊತೆ ಇರುವ ಎಲಾನ್ ಮಸ್ಕ್ ರನ್ನು (ಸರ್ಕಾರಿ ದಕ್ಷತಾ ಇಲಾಖೆ ಮುಖ್ಯಸ್ಥ ಮತ್ತು ಟ್ರಂಪ್ ಬಂಟ) ಅಲ್ಲಿನ ಪತ್ರಕರ್ತರು ಪ್ರಶ್ನಿಸುವುದಿಲ್ಲ, ಬದಲಿಗೆ ಬಡರಾಷ್ಟ್ರದ ಅಧ್ಯಕ್ಷರೊಬ್ಬರು ಸರಿಯಾದ ಉಡುಗೆ ತೊಟ್ಟರೂ ಸೂಟ್ ಧರಿಸದಿರುವುದು ನಗೆಪಾಟಲಾಗುತ್ತದೆ! ಇಡೀ ಪ್ರಪಂಚಕ್ಕೆ ಹರಕು ಜೀನ್ಸ್‌ಗಳನ್ನು ಹಾಕಲು ಕಲಿಸಿದ ಅಮೆರಿಕಕ್ಕೆ ಸೂಟ್ ಧರಿಸದಿರುವುದು ತೊಂದರೆಯಾಗಿದೆ!!

ಝೆಲೆನ್ಸ್ಕಿಯವರು ಅಮೆರಿಕಕ್ಕೆ ಬರುವ ಮೊದಲೇ ಖನಿಜ ಒಪ್ಪಂದವನ್ನು ಸಾರ್ವಜನಿಕಗೊಳಿಸುವುದು, ನಾವು ಸಹಾಯ ಮಾಡಿದ್ದೇವೆ ನೀವು ಋಣಿಯಾಗಿರಬೇಕೆಂಬ ಒತ್ತಾಯ, ಒಳಗಡೆ ನಡೆಯಬೇಕಾದ ಚರ್ಚೆಯನ್ನು ಬೀದಿರಂಪ ಮಾಡಿದ್ದು, ರಷ್ಯಾದ ಅನುಪಸ್ಥಿತಿಯಲ್ಲಿ ಅವರ ಪರ ವಕೀಲಿತನ ವಹಿಸುವುದು, ಝೆಲೆನ್ಸ್ಕಿಯವರು ತಮ್ಮ ಪರಿಸ್ಥಿತಿಯನ್ನು ಹೇಳಲು ಅವಕಾಶ ನೀಡದೆ ಕದನ ವಿರಾಮದ ಹೇರಿಕೆ ಮಾಡುವುದು, ನಮ್ಮಂತಹ ಪೋಷಾಕು ಧರಿಸಿಲ್ಲವೆಂದು ಅಣಕಿಸುವುದು – ಇವೆಲ್ಲವೂ ತುಳಿದು ಆಳುವ ಮನಸ್ಥಿತಿಯಾಗಿದ್ದವು. ಅಲ್ಲಿ ಮಾನವೀಯ ಮೌಲ್ಯಗಳು ಕುಸಿದು ಕೇವಲ ವ್ಯವಹಾರ ಕುದುರಿಸುವ ಸಂತೆಕಟ್ಟೆಯಂತಿದ್ದ ಈ ಸಭೆಯಲ್ಲಿ ಯದ್ಧಕ್ಕೆ ಬಲಿಯಾಗುತ್ತಿರುವ ಎರಡೂ ರಾಷ್ಟ್ರಗಳ ಸಾಮಾನ್ಯರ ಬಗ್ಗೆ ಯಾವ ಕಳಕಳಿಯು ಕಾಣಿಸಲಿಲ್ಲ.
ಏನೇ ಆದರೂ, ಈ ಘಟನೆಯು ಝೆಲೆನ್ಸ್ಕಿ ಮತ್ತು ಅವರ ದೇಶವನ್ನು ಕಷ್ಟಕ್ಕೆ ದೂಡಿದೆ ಎನ್ನುವುದಂತೂ ನಿಜ. ಯುರೋಪ್ ರಾಷ್ಟ್ರಗಳು ಅವರ ಬೆನ್ನಿಗೆ ನಿಂತಿವೆಯಾದರೂ ಅದೆಷ್ಟು ಸಹಾಯವಾಗಬಲ್ಲದು ಎಂದು ಕಾದು ನೋಡಬೇಕಿದೆ. ಭಾನುವಾರ ಸುಮಾರು 15 ದೇಶಗಳು ಲಂಡನ್ನಿನಲ್ಲಿ ಸೇರಿದ್ದು ‘ಉಕ್ರೇನ್ ಶಾಂತಿ ಯೋಜನೆಯ ಚೌಕಟ್ಟನ್ನು’ ಹೊರತರುವ ವಿಷಯ ಹೇಳಲಾಗಿದೆ. ಝೆಲೆನ್ಸ್ಕಿಯವರು ಈಗಲೂ ಅಮೆರಿಕದೊಂದಿಗೆ ಖನಿಜ ಒಡಂಬಡಿಕೆಗೆ ಸಹಿ ಹಾಕಲು ತಯಾರಿದ್ದಾರೆಂದು, ಮತ್ತು ಅಮೆರಿಕದೊಂದಿಗೆ ನಡೆದ ವಿಘಟಿತ ಸಭೆಯ ನಂತರವೂ ಅವರೊಂದಿಗೆ ರಚನಾತ್ಮಕ ಮಾತುಕತೆ ನಡೆಸಲು ತಯಾರಿದ್ದು, ಉಕ್ರೇನಿಯನ್ನರ ಪರಿಸ್ಥಿತಿಯ ಬಗ್ಗೆ ಕೇಳಿಸಿಕೊಳ್ಳಬೇಕೆಂದು ಬಯಸುತ್ತಾರೆ ಎಂದಿರುವುದನ್ನು ಬಿಬಿಸಿ ವರದಿ ಮಾಡಿದೆ.
ಇದನ್ನೂ ಓದಿ ಸ್ವಸಹಾಯ ಸಂಘವೆಂಬ ಸತ್ತುಹೋದ ಮೌನ ಕ್ರಾಂತಿ
ಹೀಗಿರುವಾಗ, ರಷ್ಯಾ ಮತ್ತು ಚೀನಾಗೆ ಈ ಘಟನೆಯು ದೊಡ್ಡ ಅವಕಾಶವಾಗಿದೆ. ರಷ್ಯಾ ತಾನು ಕಣ್ಣಿಟ್ಟಿರುವ ಯುರೋಪ್ ದೇಶಗಳನ್ನು ಕಬಳಿಸಲು ಇದು ದಾರಿ ಮಾಡಬಹುದು. ಚೀನಾಗೆ ತೈವಾನ್ ಹಾಗೂ ಭಾರತದ ಗಡಿ ಪ್ರದೇಶಗಳನ್ನು ಕಸಿದುಕೊಳ್ಳುವ ಸಾಧ್ಯತೆಯನ್ನು ಹಿಗ್ಗಿಸಬಹುದು. ಮಾತಿಗೊಮ್ಮೆ ಮಿತ್ರ ಮಿತ್ರ ಎಂದೆನ್ನುವ ಈ ಅಮೆರಿಕ ಹಿರಿಯಣ್ಣನ ಸಹವಾಸವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಭಾರತ.

ಲತಾಮಾಲ
ಗ್ರಾಮೀಣಾಭಿವೃದ್ಧಿ ತಜ್ಞರು ಮತ್ತು ಲೇಖಕರು