ಬುದ್ಧ ಮೊಗೆದಷ್ಟೂ ಖಾಲಿಯಾಗದ ಕಡಲು…

Date:

Advertisements
ಬುದ್ಧ ಜಯಂತಿಯ ನೆಪದಲ್ಲಿ... ದುಡಿಯುವವರು, ದಲಿತರು ಬುದ್ಧನನ್ನು ಬಿಡುಗಡೆಯ ಬೆಳಕು ಎಂದು ನಂಬಿದ್ದಾರೆ. ದುಡಿಮೆಯ ಧ್ಯಾನ ಬುದ್ಧನನ್ನು ಹತ್ತಿರವಾಗಿಸಿದೆ ಅವರಿಗೆ. ನಾವು ಧ್ಯಾನವನ್ನು ನಿರಾಕರಿಸುತ್ತಿದ್ದೇವೆ. ಐಷಾರಾಮಿ ಧ್ಯಾನವನ್ನು ಆರಾಧಿಸುತ್ತಿದ್ದೇವೆ.

ಬುದ್ಧ. ಮೊಗೆದಷ್ಟೂ ಖಾಲಿಯಾಗದ ಕಡಲು. ಜಗದ ಮಾನಸವನ್ನು ಮತ್ತೆ ಮತ್ತೆ ಕಾಡುವ, ಅದು ಕೆಸರ ಕತ್ತಲಲ್ಲಿ ಮುಳುಗಿದಾಗಲೆಲ್ಲ ಬೆಳದಿಂಗಳ ಕೋಲಾಗಿ ಕೈ ಹಿಡಿದೆತ್ತುವ ಚೈತನ್ಯ . ಐನ್ ಸ್ಟೈನ್ ನಂಥ ವಿಜ್ಞಾನಿ ಬುದ್ಧತತ್ವ ಮನುಷ್ಯ ಲೋಕಕ್ಕೆ ಬೆಳಗು ಎಂದ. ಜಗತ್ತಿನ ಧರ್ಮಗಳಲ್ಲೆ ಹೆಚ್ಚು ತಾರ್ಕಿಕವಾದ, ವಿಜ್ಞಾನದ ತಳಹದಿ ಗಟ್ಟಿಯಾಗಿರುವ, ಭಿನ್ನತೆಗಳನ್ನು ಗೌರವಿಸುವ, ಇರುವುದರಲ್ಲಿ ಹಂಚಿ ತಿನ್ನಲು ಹೇಳುವ, ಅನ್ಯರ ಕುರಿತು ಅಸಹ್ಯ ಪಡದ, ಒಳಗೊಳ್ಳುವಿಕೆಯನ್ನು ಪ್ರತಿಪಾದಿಸುವ, ಪ್ರೇಮವೇ ಆತ್ಯಂತಿಕ ಎಂದು ನಂಬುವ, ಕಲಿತಿದ್ದನ್ನು ಅನ್ವಯ ಮಾಡಿ ತಾಳೆ ನೋಡುವ, ಚಲನೆಯಲ್ಲಿ ನಂಬಿಕೆ ಇಟ್ಟ ತಾರ್ಕಿಕ ತತ್ವ ಬುದ್ಧನದು.

ಹಾಗಿದ್ದರೆ ಅದು ಯಾಕಿಷ್ಟೊಂದು ಅಪಾರ್ಥಗಳಿಗೆ ಒಳಗಾಗಿದೆ? ಶಿಲೆಯಾದ ಧರ್ಮವಾಗಿ ಇತರ ಧರ್ಮಗಳಂತೆಯೆ ಯಾಕೆ ನಂಜು ಕಾರುತ್ತಿದೆ? ಓಶೋ ಒಂದು ಕಡೆ ಹೇಳುತ್ತಾರೆ, “ಬುದ್ಧನಷ್ಟು ಅಪಾರ್ಥಕ್ಕೊಳಗಾದ ವ್ಯಕ್ತಿ ಯಾರೂ ಇಲ್ಲ. ಆತ ಅಪಾರ್ಥಕ್ಕೆ ಒಳಗಾಗದೆ ಇರಲು ಸಾಧ್ಯವೂ ಇಲ್ಲ. ಯಾರು ಪ್ರಜ್ಞೆಗೆ ಅತೀತವಾದುದನ್ನು ಪ್ರಜ್ಞೆಗೆ ಲಿಂಕ್ ಮಾಡಿಕೊಂಡು ಅರಿವನ್ನು ದಾಟಿಸಬಲ್ಲರೊ ಅವರಿಗಷ್ಟೆ ಬುದ್ಧ ಅರ್ಥವಾಗಲು ಸಾಧ್ಯ. ಆತ ಸ್ಪಷ್ಟವಾಗಿ ಹೇಳಿದ್ದಾನೆ, ನಾನು ದೇವರು, ರಾಜ, ಮರ, ನದಿ, ಅಲ್ಲ. ನಾನೊಂದು ಎಚ್ಚರ ಎಂದು.” ವಾಸ್ತವದ ಕತ್ತಲಿಗೆ ಎಚ್ಚರ ಎನ್ನುವುದೊಂದು ದೊಡ್ಡ ಬಿಡುಗಡೆ. ಎಲ್ಲ ಧರ್ಮಗಳೂ ಕತ್ತಲ ಸುಖ ಬಯಸುತ್ತವೆ. ಅವಕ್ಕೆ ಅಂಧಕಾರದ ಸಂಭ್ರಮ ಬೇಕು. ಆದರೆ ಎಚ್ಚರ ಮತ್ತು ಪ್ರಜ್ಞೆಗಳು ನೀನು ಶಾಶ್ವತವಲ್ಲ ಎನ್ನುತ್ತವೆ; ಜನ್ಮ, ಕರ್ಮಗಳನ್ನು ಸಂದೇಹಿಸುತ್ತವೆ. ಸ್ವರ್ಗ, ನರಕಗಳನ್ನು ನಿರಾಕರಿಸುತ್ತವೆ.

ರಾಜರಿಗೆ, ಪುರೋಹಿತರಿಗೆ, ಕುಲೀನರಿಗೆ ಇದು ಬೇಡ. ದ್ವೇಷ, ಒಡಕುಗಳಿದ್ದರೆ ಆಳುವವರಿಗೆ ಸಲೀಸು. ಬರ್ಮಾ, ಶ್ರೀಲಂಕಾದಲ್ಲಿ ಬುದ್ದ ಸತ್ತು ನಾರುತ್ತಿದ್ದಾನೆ. ನಮ್ಮಲ್ಲೂ, ಬೇರೆಲ್ಲ ಕಡೆಯೂ ವಾಸನೆ ತಪ್ಪಿಸಿಕೊಳ್ಳಲು ಊದು ಬತ್ತಿ ಹಚ್ಚಿ, ಧೂಪ ಹಾಕಿ ಸುವಾಸನೆ ಎಬ್ಬಿಸುತ್ತಿದ್ದೇವೆ.

Advertisements

ದುಡಿಯುವವರು, ದಲಿತರು ಬುದ್ಧನನ್ನು ಬಿಡುಗಡೆಯ ಬೆಳಕು ಎಂದು ನಂಬಿದ್ದಾರೆ. ದುಡಿಮೆಯ ಧ್ಯಾನ ಬುದ್ಧನನ್ನು ಹತ್ತಿರವಾಗಿಸಿದೆ ಅವರಿಗೆ. ನಾವು ಧ್ಯಾನವನ್ನು ನಿರಾಕರಿಸುತ್ತಿದ್ದೇವೆ. ಐಷಾರಾಮಿ ಧ್ಯಾನವನ್ನು ಆರಾಧಿಸುತ್ತಿದ್ದೇವೆ. ಧ್ಯಾನದ ತುರೀಯ ಸ್ಥಿತಿ ಎಚ್ಚರ ಮತ್ತು ಕಣ್ಣು ಕೋರೈಸುವ ಬೆಳಕು. ನಾವು ಮಕ್ಕಳನ್ನೂ ಅಂಧಕಾರಕ್ಕೆ ಅದುಮುತ್ತಿದ್ದೇವೆ. ಬುದ್ಧತ್ವ ಎಂದರೆ ವಿಗ್ರಹ. ಇಂದು ಶಬ್ಧ.
ಇಷ್ಟಾದರೂ ಬುದ್ಧ ಅಮೂರ್ತನಲ್ಲ. ಕೈಚಾಚಿದರೆ ಹಿಡಿದೆತ್ತುವಷ್ಟು ಹತ್ತಿರದಲ್ಲಿದೆ ಅವನ ಕೈ. ಆಳದಲ್ಲಿ ಸಮಾಜವಾದಿಯಾಗಿದ್ದ ಬಾಬಾ ಸಾಹೇಬರು ಬುದ್ಧನೆಂಬ ಆದಿಮ ಸಮಾಜವಾದಿಯ ಕೈ ಹಿಡಿದು ಎದ್ದು ಬಂದರು. ಸಂಕೋಲೆಗಳಲ್ಲಿದ್ದ ಬುದ್ಧನನ್ನೂ ಬಯಲಿಗೆ ತಂದರು. ಬುದ್ಧತ್ವವನ್ನು ಬಂಗಾರದ ಕೋಳ ಎಂದವರಿಗೆ ಬೆಳಕು ಬೆಂಕಿ ಮಾತ್ರವಾಗಿ ಕಾಣುತ್ತದೆ.

ಬುದ್ಧ , ಮಾರ್ಕ್ಸ್, ಗಾಂಧಿ ಕುರಿತ ಅದ್ಭುತ ತೌಲನಿಕ ವಿಶ್ಲೇಷಣೆಯ ಮೂಲಕ ಬಾಬಾ ಸಾಹೇಬರು, ಬುದ್ಧನ ಸಮಾಜವಾದ ಮತ್ತು ಮಾರ್ಕ್ಸ್ ನ ಸಮತಾವಾದದ ನಡುವೆ ಶೇ 80 ತಾಳೆಯಿದೆ, ಆದರೆ ಆಚರಣೆಯ ದಾರಿ ಮತ್ತು ಆಸೆಯ ತತ್ವಗಳ ದೃಷ್ಟಿಯಿಂದ ಬುದ್ಧ ತತ್ವದಲ್ಲಿ ಹೆಚ್ಚು ಪ್ರೇಮವಿದೆ ಎಂದು ಭಾವಿಸಿದರು.

ಬುದ್ಧ ದೇವರ ಅವತಾರವಲ್ಲ. ರಾಜಕೀಯ ಬಿಕ್ಕಟ್ಟಿನ ಶಿಶು ಎಂದು ತೋರಿಸಿದರು. ಸುಮಾರು ಎರಡು ಸಾವಿರ ವರ್ಷಗಳ ನಂತರ ಅಶ್ವಘೋಷ ಹೊದಿಸಿದ್ದ ಪೀತಾಂಬರದ ಪೊರೆಯನ್ನು ಹರಿದು ತೆಗೆದರು.

ಇದನ್ನು ಓದಿದ್ದೀರಾ?: ಯುದ್ಧದ ಭೀಕರತೆಯೂ… ಕುವೆಂಪು ನೀಡಿರುವ ಎಚ್ಚರಿಕೆಯೂ…

ಯಾಕೆ ಬುದ್ಧ ಇಷ್ಟೊಂದು ಕಾಡುತ್ತಿದ್ದಾನೆ ನಮ್ಮನ್ನು. ಬರಿ ನಮ್ಮನ್ನಷ್ಟೆ ಅಲ್ಲ ಶಂಕರನನ್ನೂ, ಶಂಕರನ ಪೂರ್ವ ಸೂರಿಗಳನ್ನೂ, ಕೊನೆಗೆ ಭೈರಪ್ಪನವರನ್ನೂ? ಅದೂ ಮಹಾವೀರ ಕಾಡದೆ ಇರುವಷ್ಟು? ಮಹಾವೀರನ ವಾರಸುದಾರರಿಗೆ, ತತ್ವಗಳಿಗೆ ದೇಶ ಬಿಟ್ಟು ಹೋಗುವ ಪರಿಸ್ಥಿತಿ ಬರಲೇ ಇಲ್ಲ. ಬುದ್ದ ತತ್ವ ಮಾತ್ರ ರಕ್ತ ಸುರಿಸುತ್ತಲೇ ಇದೆ. ಹೊರಗೆ ಹೋದ ಕಾರಣದಿಂದ ಜಗದ ಬುದ್ಧತ್ವ ಜಗದ ಮಾರ್ಗವಾಗಿದೆ. ಪಾಪ ಜಿನ ತತ್ವಕ್ಕೆ ಈ ಅದೃಷ್ಟ ಸಿಗಲಿಲ್ಲ. ಇರಲಿ ದೇಶದಿಂದ ಹೊರ ಹಾಕಿದ್ದ ಬುದ್ಧನ ಅರಿವನ್ನು ಕಲ್ಲುಗುಂಡು ಮಾಡಿ ಅಶ್ವಘೋಷ ಹೊತ್ತು ತಂದ. ಬುದ್ಧ ಎಲ್ಲರಂತಾದ. ಆದರೆ ಅರಿವೆಂಬ ಬೆಳಕಿನ ಅಲೆಯನ್ನು ಹಿಡಿದು ಶಿಲೆ ಮಾಡಲು ಯಾರಿಂದಲೂ ಸಾಧ್ಯವಾಗಲಿಲ್ಲ. ಆ ಸಿಟ್ಟಿಗೆ ಶಿಲೆಗೆ ಬಾಂಬು ಇಟ್ಟು ಒಡೆದು ಹಾಕಿ ಬುದ್ಧನನ್ನು ಸೋಲಿಸಿದೆವು ಎಂದು ಸಂಭ್ರಮಿಸಿದೆವು. ಆಗಲೂ ಬುದ್ಧನ ಕಣ್ಣಲ್ಲಿ ನೀರು ಬಂದಿದ್ದು ಕಾಣೆ. ಬುದ್ಧ ಪ್ರೀತಿಯಿಂದ ಕಾಡುತ್ತಿದ್ದಾನೆ ಪ್ರೀತಿಸುವವರಿಗೆ. ದ್ವೇಷಿಸುವವರಿಗೂ ಅವನ ಪ್ರೀತಿ ಕಾಡುತ್ತಲೇ ಇದೆ. ಎಷ್ಟೊಂದು ಶಂಕರರು ಬಂದರು,ಬುದ್ಧ ಸೋಲಲಿಲ್ಲ. ಯಾಕೆಂದರೆ ಅವನು ಸ್ಥಾವರವಲ್ಲ.

ನಮ್ಮ ಹೊಸ ತಲೆಮಾರು ಜ್ಞಾನದ ಹಂಬಲಕ್ಕೆ ಬೀಳಬೇಕು. ಅದು ಹೇಗಿರಬೇಕೆಂದು ಧರ್ಮನಂದ ಕೋಸಾಂಬಿಯವರನ್ನು(ಡಿ.ಡಿ ಕೋಸಾಂಬಿಯವರ ತಂದೆ) ನೋಡಿ ಕಲಿಯಬೇಕು. ಗೌಡ ಸಾರಸ್ವತ ಕೊಂಕಣಿ ಕುಟುಂಬದಲ್ಲಿ ಹುಟ್ಟಿ ಇವರು ಬರಿಗೈಯಲ್ಲಿ ಭರತ ಖಂಡವನ್ನೆಲ್ಲ ಬುದ್ಧನನ್ನು ಹುಡುಕಿ ಓಡಾಡುತ್ತಾರೆ. ಅನೇಕ ಸಾರಿ ಯಮನ ಕೈ ಕುಲುಕುತ್ತಾರೆ. ಆದರೂ ಬೆಳಕಿನ ಹಂಬಲ ನಿಲ್ಲುವುದಿಲ್ಲ. (ನಾನು ಅವರಂತೆ ಮನೆ ಮಾರು ,ಮಕ್ಕಳು,ಮಡದಿ ಬಿಟ್ಟು ಹೊರಡಬೇಕು ಅನ್ನುತ್ತಿಲ್ಲ. ಅರಿವಿನ ಹುಡುಕಾಟ ಅಷ್ಟೊಂದು ತ್ಯಾಗವನ್ನೇನೂ ಕೇಳುವುದಿಲ್ಲ ಈಗ).

ಕೋಸಾಂಬಿಯವರಿಗೆ ಇಂಥ ಹುಚ್ಚು ಹತ್ತಿದ್ದರೂ ಅವರ ಕೈಯಲ್ಲಿದ್ದುದು ಅಶ್ವಘೋಷ ಹಾಕಿಕೊಟ್ಟ ನಕಾಶೆಯೇ. ಅದಕ್ಕೆ ಅವರು ಭಗವಾನ್ ಬುದ್ಧ ಎನ್ನುತ್ತಾರೆ. ಆದರೆ ಅವರ ಹುಡುಕಾಟದ ತೀವ್ರತೆಗೆ ಅಶ್ವಘೋಷನ ನಕ್ಷೆ ಅನೇಕ ಸಾರಿ ಛಿದ್ರವಾಗುತ್ತದೆ. ಅಂಥ ಕಡೆ ಆರ್ಯ-ದಸ್ಯು ಕದನ,ಗಣರಾಜ್ಯಗಳ ನಾಶ, ವೈದಿಕ ಸಂಸ್ಕೃತಿಯ ವಿನಾಶಕರ ನಿಲುವುಗಳ ಬಗ್ಗೆ ಬರೆಯುತ್ತಾರೆ( ಜ್ಞಾನ ದಾಹವಿರುವ ನಮ್ಮ ಹುಡುಗರೆಲ್ಲರೂ ಶ್ರೀರಂಗರು ಅನುವಾದ ಮಾಡಿರುವ ಧರ್ಮಾನಂದ ಕೋಸಂಬೀ ಯವರ ಭಗವಾನ್ ಬುದ್ಧ (1956) ಪುಸ್ತಕ ಓದಲೇಬೇಕು).

ಅಂಬೇಡ್ಕರಿಗೆ ಈ ಸಮಸ್ಯೆಯಾಗಲಿಲ್ಲ. ಅವರ ಕೈಯಲ್ಲಿ ಪಶ್ಚಿಮದ ಪ್ರಕಾಶಮಾನವಾದ ದೀಪ ಇತ್ತು. ಹೆಚ್ಚು ನಿಖರವಾದ ನಕ್ಷೆಯೂ ಇತ್ತು. ಹಾಗಾಗಿ ಅವರಿಗೆ ರಾರಾಜಿಸುವ ಕಸವರದ ಗಣಿಯೇ ಸಿಕ್ಕಿತು. ಬುದ್ಧ ಮೈಕೊಡವಿ ಬಾಬಾಸಾಹೇಬರ ಬಳಿಗೆ ಬಂದ, ಬಚಾವಾದ. ಅಣುಬಾಂಬಿನ ಕತ್ತಲಲ್ಲಿದ್ದ ಐನ್ ಸ್ಟೈನ್ ಬಳಿಗೂ ನಡೆದು ಹೋದ. ಅವನ ಮುಖದಲ್ಲಿ ಭರವಸೆ ಹುಟ್ಟಿಸಿದ. ದ್ವೇಷದ ಗರಗಸ ನಮ್ಮ ಸುತ್ತ ಹಲ್ಲು ಮಸೆಯುತ್ತಿರುವಾಗ ದೇವನೂರರಿಗೆ ಬುದ್ಧ ಪ್ರೀತಿ -ಸಮತೆಯ ವಜ್ರವಾಗಿ ಕಾಣಿಸಿಕೊಂಡ.

ನನಗೆ ಅನ್ನಿಸುತ್ತಿದೆ. ಬುದ್ಧ, ದೊಡ್ಡ ಸಾಮ್ರಾಜ್ಯಗಳು ಹುಟ್ಟುವಾಗ ಬುಡಕಟ್ಟುಗಳು ಕಿತ್ತಾಡಬಾರದು ಎಂದ. ಗಣತತ್ವಕ್ಕಿಂತ ಚೆಂದದ ವ್ಯವಸ್ಥೆ ಬೇರೆ ಇಲ್ಲ ಎಂದು ಹೇಳಿದ. ಕೊನೆಗೆ ಬಿಂಬಸಾರನಂತಹ ರಾಜರಿಗೆ ಆಸೆ ದುಃಖಕ್ಕೆ ಮೂಲ ಎಂದು ತೋರಿಸಲೆತ್ನಿಸಿದ. ದೊಡ್ಡ ರಾಜರುಗಳು ಬುದ್ಧನ ಕರುಣೆಗೆ, ಸಮದರ್ಶಿತ್ವಕ್ಕೆ, ಪ್ರೀತಿಗೆ ತಲೆಬಾಗಿದರು. ಅದಾದ ಎಷ್ಟೋ ವರ್ಷಗಳ ನಂತರ ಅಶೋಕ, ಬುದ್ಧ ಹಚ್ಚಿದ ಸೊಡರನ್ನು ಹಿಡಿದು ಓಡಾಡಿದ. ಯುದ್ಧೋನ್ಮಾದಿ ರಾಷ್ಟ್ರವಾದಿಗಳು, ಅಶೋಕ ಖಡ್ಗ ಕೆಳಗೆ ಇಳಿಸಿದ್ದನ್ನು ನಖಶಿಖಾಂತ ವಿರೋಧಿಸುತ್ತಾರೆ. ಕ್ಷಾತ್ರ ತ್ಯಾಗ ದುಬಾರಿಯಾಯಿತು ಎನ್ನುತ್ತಾರೆ. ಆದರೆ ಅವರೂ ಸಹ ವಿಶ್ವಶಾಂತಿಯ ಬಗ್ಗೆ ಮಾತನಾಡುತ್ತಾರೆ. ಮರದ ನೆರಳು ಮತ್ತು ಎದೆಯ ಪ್ರೀತಿಗಳು ಜಗತ್ತನ್ನು ಬಹುಕಾಲ ಉಳಿಸಬಲ್ಲವು ಎಂದು ಅಶೋಕ ಅರಿತುಕೊಂಡಿದ್ದ. ಇದು ಬುದ್ಧ ಪ್ರಜ್ಞೆ ದಾಟಿಸಿದ್ದ ಅರಿವು. ಈ ಅರಿವು ಸಾವಿರಾರು ಎದೆಗಳ ಆಕ್ರಂದನದ ಮೂಲಕ ಹುಟ್ಟಿತ್ತು. ನಾವು ಇಂದು ಧ್ಯಾನಿಸುತ್ತಿರುವುದು ಇದನ್ನೆ ಅಲ್ಲವೆ? ಆದರೆ ಇಂದಿನ ದೊರೆಗಳಿಗೇಕೆ ಆಕ್ರಂದನಗಳು ಕೇಳುತ್ತಿಲ್ಲ? ಶಿಲೆಯ ಬುದ್ಧನನ್ನು ಹೊತ್ತು ನಡೆವವರಿಗೆ ವಿಷದ ಹೊಳೆಯೂ ಅಮೃತ ಸಮಾನವೆ.

ರಾಜ ಪ್ರಭುತ್ವಗಳು ಉತ್ತುಂಗಕ್ಕೇರಿದರೂ ರಾಜಗೃಹ ಮುಂತಾದ ಕಡೆ ಹೆಚ್ಚು ಹೈರಾರ್ಕಿಗಳಿರಲಿಲ್ಲ ಎಂದು Karen Armstrong ಬರೆಯುತ್ತಾಳೆ. ಪೌರಾತ್ಯ ದೇಶಗಳ ಬಹುಪಾಲು ಧರ್ಮಗಳ ಬಗ್ಗೆ ತೀವ್ರವಾಗಿ ಹುಡುಕಾಡಿರುವ ಈಕೆ Buddha ಎಂಬ ಹೊತ್ತಿಗೆಯನ್ನು ಹೊತ್ತಿಸಿದ್ದಾಳೆ. ಪರಂಪರೆಯನ್ನು ಹೀಗೂ ಓದಲು ಸಾಧ್ಯ ಎಂದು ತೋರಿಸುವ ಪುಸ್ತಕ ಇದು. ಆದರೆ ಇದಕ್ಕೂ ಅಶ್ವಘೋಷನ ಮರುಳು ತುಸು ತಾಗಿದೆ.

ಬುದ್ಧ1

ನನ್ನೊಳಗೆ ಇದೊಂದು ಕುತೂಹಲ ಉರಿಯುತ್ತಿದೆ ವಿವಿಗಳಲ್ಲಿರುವವರು ಯಾರಾದರೂ ಇದರ ಬೆನ್ನುಹತ್ತಿ ನೋಡಬಹುದು. ಬುದ್ದ ಭಾಷೆ ಪಾಳಿ. ಶಂಬಾ ಜೋಷಿಯವರು ಪಶುಪಾಲಕರ ಭಾಷೆ ಪಾಳಿಯಾಗಿತ್ತು, ಅದು ಯಮುನೆಯಿಂದ ಚಿತ್ರದುರ್ಗದವರೆಗೆ ಹಬ್ಬಿಕೊಂಡಿತ್ತು ಎನ್ನುತ್ತಾರೆ. ಅಶೋಕ ಸಾಂಚಿಯಿಂದ ಪೂರ್ವಭಾರತದ ಮೂಲಕ ರಾಯಚೂರು, ಕೊಪ್ಪಣ, ಚಿತ್ರದುರ್ಗದವರೆಗೆ ಶಾಸನಗಳನ್ನು ಪಾಳಿ-ಪ್ರಾಕೃತಗಳಲ್ಲಿ ಕೆತ್ತಿಸಿದ್ದನ್ನು ಷ. ಶೆಟ್ಟರ್ ವಿಶೇಷವಾಗಿ ವಿವರಿಸುತ್ತಾರೆ. ಅಂದರೆ ಭಾಷೆ ಗೊತ್ತಿದ್ದ ಪ್ರದೇಶಗಳ ಜನರ ಮಧ್ಯೆ ಅಶೋಕ ತನ್ನ ಗುರುತನ್ನು ಹೇಳಿಕೊಂಡನೆ? ಸಂವಹನ ಸಾಧ್ಯವಿದ್ದ ಕಡೆ ಸಂವಹನ ಮಾಡಿದನೆ?

ಹುಣ್ಣಿಮೆ ಮೋಹಕ. ಚಾಂದ್ರಮಾನ ಪ್ರತಿಭೆಯವರಿಗೆ ಸೋಲು ಖಚಿತ ಎನ್ನುತ್ತಾರೆ ಶಂಬಾ. ಆದರೆ ಹಗಲು ದಮನಿಸಿದ ಆಚರಣೆಗಳು ಬೆಳದಿಂಗಳಲ್ಲಿ ಜೀವತಳೆಯುತ್ತವೆ. ಬೌದ್ಧವೂ ಹೀಗೆ ತಾಂತ್ರಿಕವಾಗಿದೆ. ರಾತ್ರಿಗಳು ಮನುಷ್ಯರನ್ನು ಎಲ್ಲ ಕಡೆ ತಾರತಮ್ಯರಹಿತರನ್ನಾಗಿಸುತ್ತದೆ. ಪ್ರತಿಮಾತ್ಮಕರನ್ನಾಗಿಸುತ್ತದೆ. ಸಂಕೇತಗಳು ಯಾರಿಗೆ ಯಾವಾಗ ಮುಟ್ಟಿಸಬೇಕೊ ಆಗ ಮುಟ್ಟುತ್ತದೆ. ಅರ್ಥವಾಗಬೇಕಾದಾಗ ಅರ್ಥವಾಗುತ್ತದೆ. ಆದರೆ ಆಚರಣೆ ಆರಾಧನೆಯಾಗುತ್ತದೆ.ಆರಾಧನೆ ತರ್ಕ ರಹಿತವಾಗುತ್ತದೆ. ಆರೂಢರಲ್ಲಿ ಇದು ಇನ್ನೂ ಹೆಚ್ಚು. ಆದರೂ ಬಂಡೆ ಸಿಡಿಸಿಯೇ ಚಿನ್ನ ಹೆಕ್ಕಿಕೊಳ್ಳಬೇಕಲ್ಲವೆ?

ಅಂದ ಹಾಗೆ ಸ್ತ್ರೀಯನ್ನು ಬ್ರಹ್ಮಚರ್ಯದ ಪಾತಾಳ ಎನ್ನುತ್ತದೆ ಸುತ್ತ ಪಿಟಕ. ಇಂಥ ಹಲವು‌ ಕಂದಕಗಳಿವೆ ಅದರಲ್ಲಿ. ಚಂದ್ರನ ಮೇಲಿನ ಕಂದಕಗಳು ಹುಣ್ಣಿಮೆಯಲ್ಲಿ ಇನ್ನೂ ಸ್ಪಷ್ಟ ಮತ್ತು ಮೋಹಕ. ಮಕ್ಕಳಲ್ಲಿ ಮೋಡಿ ಮಾಡುತ್ತವೆ. ಆದರೆ ವಾಸ್ತವ ಇಷ್ಟೊಂದು ಮೋಹಕವಾಗಿರಲು ಸಾಧ್ಯವೆ?

ಡಾ.ವೆಂಕಟೇಶಯ್ಯ ನೆಲ್ಲುಕುಂಟೆ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X