ಒಳಮೀಸಲಾತಿ ಸಂಬಂಧ ದೇವನೂರರು ಮುಖ್ಯಮಂತ್ರಿಗೆ ಬರೆದ ಪತ್ರಕ್ಕೆ ಗೋವಿಂದಯ್ಯನವರು ಮೆಚ್ಚುಗೆ ಸೂಚಿಸಿ ಬರೆದ ಮಾತುಗಳಿಗೆ ಒಮ್ಮೆಲೇ ಹೃದಯ ತುಂಬಿ ಬಂದಂತಾಯಿತು. ನಿಜಕ್ಕೂ ದೇವನೂರ ಮಹಾದೇವ, ಗೋವಿಂದಯ್ಯ, ಕೋಟಿಗಾನಹಳ್ಳಿ ರಾಮಯ್ಯ ಒಂದಾಗಿ ಹೊಸ ತಲೆಮಾರಿನ ಒಂದು ಪಡೆ ಹಾಗೂ ಹಳೆಯ ದಸಂಸದ ಸಮನ್ವಯತೆ ಸಾಧಿಸಿಬಿಟ್ಟರೆ ನಿಜಕ್ಕೂ ಎಂತಹ ಲೋಕ ಸೃಷ್ಟಿಯಾಗುತ್ತದೆ! ಅದು ಬೇರೆ ಯಾವ ಲೋಕವು ಅಲ್ಲ ಬುದ್ದಪ್ರಜ್ಞೆಯ ಲೋಕ.
ಪರಿಶಿಷ್ಟ ಜಾತಿ-ಪಂಗಡಗಳಲ್ಲಿ ಇರುವ ನೂರೊಂದು ಜಾತಿಗಳಲ್ಲಿ ಮೀಸಲಾತಿ ಸೌಲಭ್ಯದಿಂದ ವಂಚಿತರಾದ ತಬ್ಬಲಿ ಜಾತಿಗಳನ್ನು ಒಳಮೀಸಲಾತಿಗೆ ಒಳಪಡಿಸಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಅವರಿಗೆ ಸಮಾನ ಪಾಲು ಸಿಗುವಂತೆ ಮಾಡುವುದು ಒಳಮೀಸಲಾತಿಯ ಧಮ್ಮಪದ! ಇದಕ್ಕೂ ಮುಂಚೆ ದಲಿತ ಸಂಘರ್ಷ ಸಮಿತಿಗೆ ಬರೋಣ. ನಮ್ಮ ತಂದೆ ಸಮಾಜವಾದಿ ಚಳವಳಿಯ ಪ್ರಭಾವಕ್ಕೆ ಒಳಗಾಗಿ ಜೆ.ಪಿ. ಚಳವಳಿಯಲ್ಲಿ ಜೈಲಿಗೆ ಹೋಗಿದ್ದರು ಎಂಬುದನ್ನು ಅರಿಯುವ ಹೊತ್ತಿಗೆ ಅವರ ಸೈದ್ದಾಂತಿಕ ಹಿನ್ನಲೆಯ ಕಾರಣಗಳನ್ನು ತಡಕಾಡಲು ಶುರುಮಾಡಿದೆ. ಆಗ ಅವರ ಪುಸ್ತಕ ಸಂಗ್ರಹದಲ್ಲಿ ಸಹಜವಾಗಿ ಲೋಹಿಯಾ, ಸಂಕ್ರಮಣ, ರುಜುವಾತು ಮತ್ತೆ ಪಾತ್ರೆ ಅಂಗಡಿಗೆ ಬರುತ್ತಿದ್ದ ಲಂಕೇಶ್ ಪತ್ರಿಕೆಗಳು ಕಣ್ಣಿಗೆ ಬೀಳುತ್ತಿತ್ತು. ಅದರ ನಂತರ ಕನ್ನಡ ಸಾಹಿತ್ಯದ ಪುಸ್ತಕಗಳು, ಜಗತ್ತಿನ ಬೇರೆ ಬೇರೆ ಸಾಹಿತ್ಯ ಪರಂಪರೆಯ ಪರಿಚಯವು ಅಸ್ಪಷ್ಟವಾಗಿ ಆಗಲು ಶುರುವಾಯಿತು. ಇಲ್ಲಿ ಕಂಡದ್ದೆ ದ್ಯಾವನೂರು, ಒಡಲಾಳ, ಕಪ್ಪು ಜನರ ಕೆಂಪು ಕಾವ್ಯ ಮುಂತಾದವು. ಈ ಮೂಲಕ ದೇವನೂರು, ಪ್ರೊ ಎಚ್ ಗೋವಿಂದಯ್ಯ ಮುಂತಾದವರು ಕಣ್ಣಿಗೆ ಬಿದ್ದರು. ಗಾಂಧಿ ಚಿತ್ರ ನೋಡಿದೆ ಆಕಾಶಕ್ಕೆ ಮೂರೇ ಗೇಣು ಒಂದು ವಿಚಿತ್ರ ಥರವಾಗಿ ಸೆಳೆದ ಲೇಖನ. ಅಲ್ಲಿ ಗೋವಿಂದಯ್ಯನವರು ಹೇಳಿದ್ದಕ್ಕೆ ಈ ಚಿತ್ರ ನೋಡಿದೆ ಅಂತ ದೇವನೂರು ಹೇಳುತ್ತಾರೆ. ಆ ನಂತರ ಕುಸುಮಬಾಲೆಯಲ್ಲಿ ಬರುವ ದಸಂಸ ಜಾಥದಲ್ಲಿ ಕೆ.ಬಿ. ಸಿದ್ದಯ್ಯ, ಕೋಟಿಗಾನಹಳ್ಳಿ ರಾಮಯ್ಯನವರ ಆದಿಯಾಗಿ ಎಲ್ಲರೂ ಬರುತ್ತಾರೆ.
ಅಪ್ಪ ಮತ್ತು ಸ್ನೇಹಿತರು ಲಂಕೇಶರ ಪ್ರಗತಿರಂಗದ ಸಭೆಗಳನ್ನು ಆಯೋಜಿಸುತ್ತಿದ್ದರೂ, ದ.ಸಂ.ಸ ಸಂಘಟನೆಗೆ ದೇವನೂರರು ಚಾಮರಾಜನಗರಕ್ಕೆ ಬಂದಾಗ ಸೈಕಲ್ ನಲ್ಲಿ ಹಿಂದೆ ಕ್ಯಾರಿಯರ್ ನಲ್ಲಿ ಕೂರಿಸಿ ಕರೆದುಕೊಂಡು ಹೋಗುವುದಿತ್ತಂತೆ. ಆ ನಂತರ ಶಂಕರಪ್ಪನವರು ದ.ಸಂ.ಸಕ್ಕಾಗಿ ಬರೆದ ಬುದ್ದಬರಲಿ ನಮ್ಮ ಊರಿಗೆ ಪುಸ್ತಕವು ಗಮನ ಸೆಳೆಯಿತು. ಅಷ್ಟರಲ್ಲಿ ರಾಜಕೀಯ ಸ್ಥಿತ್ಯಂತರಗಳು ಎಲ್ಲಾ ಸಂಘಟನೆಗಳ ಮೇಲೆ ಪ್ರಭಾವ ಬೀರಿ ಮೊರಾರ್ಜಿ ದೇಸಾಯಿಗಳ ಸರ್ಕಾರ, ಆನಂತರದಲ್ಲಿ ಕರ್ನಾಟಕದಲ್ಲಿ ಜನತಾದಳ ಸ್ವಲ್ಪ ಸಮಾಜವಾದಿ ಹಿನ್ನಲೆಯವರನ್ನು ಆಕರ್ಷಿಸಿತ್ತು. ಆಗ ಚಿತ್ರಕಲಾವಿದ ಕೆ.ಟಿ ಶಿವಪ್ರಸಾದರು ಲಂಕೇಶ್ ಪತ್ರಿಕೆಯಲ್ಲಿ ರೈತಸಂಘ ಬಿಟ್ಟು ದಸಂಸಗೆ ಯಾಕೆ ಹೋದೆ ಎನ್ನುವ ರೀತಿಯ ಬರಹ ಬಂದಿತ್ತು. ಇದು ಒಂದು ರೀತಿಯಲ್ಲಿ ತೀವ್ರವಾಗಿ ಆಕರ್ಷಿಸಿದ ವಿದ್ಯಮಾನ. ಯಾಕೆಂದರೆ ದಸಂಸದ ತಾತ್ವಿಕತೆಯ ಬಗ್ಗೆ ದಲಿತರಲ್ಲದ ಅವರು ಹೆಚ್ಚು ಕಕ್ಕುಲಾತಿಯಿಂದ ಬರೆದಿದ್ದರು. ಇನ್ನು ಆಗ ಸಿದ್ದರಾಮಯ್ಯನವರು ಕಾಂಗ್ರೆಸ್ಗೆ ಹೋಗುವ ಸಂದರ್ಭದಲ್ಲಿ ಕರ್ನಾಟಕದ ಎಲ್ಲಾ ಸಾಹಿತಿ, ಬುದ್ದಿಜೀವಿಗಳ ಸಭೆ ಕರೆದಿದ್ದರು. ಇದಕ್ಕೆ ಸಾರಥ್ಯ ವಹಿಸಿದವರೇ ಪ್ರೊ ಗೋವಿಂದಯ್ಯನವರು. ಆನಂತರ ಅವರು ಚಾಮರಾಜನಗರ ಸಂಸತ್ ಸ್ಥಾನದ ಅಭ್ಯರ್ಥಿಯಾಗಿ ಬಂದಾಗ ಮನೆಗೆ ಉಳಿದುಕೊಳ್ಳಲು ಎರಡು ಬಾರಿ ಬಂದ ನೆನಪು. ಇಷ್ಟರಲ್ಲಾಗಲೇ ಅಂಬೇಡ್ಕರ್ ಓದಲು ಪ್ರೇರಣೆ ಸಿಕ್ಕಿತ್ತು. ಅದರಲ್ಲೂ ಲೋಹಿಯಾ ತಮ್ಮ ಸಮಾಜವಾದಿ ಪಕ್ಷಕ್ಕೆ ಅಂಬೇಡ್ಕರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ನಡೆಸಿದ ಪತ್ರ ವ್ಯವಹಾರ ಅಂಬೇಡ್ಕರ್ ಅವರ ಸಾವಿನಿಂದ ಕೊನೆಯುಸಿರೆಳೆಯಿತು. ಇದು ಒಂದು ರೀತಿಯ ಗಮನ ಸೆಳೆಯುವಂತೆ ಮಾಡಿತ್ತು.

ನನ್ನ ಕಾಲೇಜು ಹಂತಗಳು ಸ್ಥಗಿತವಾಗುವಷ್ಟರಲ್ಲಿ ನಾಟಕದ ನಟನೆ, ಲೇಖನಗಳನ್ನು ಬರೆಯುವುದು, ನಾಟಕ ನಿರ್ದೇಶನ ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ತೊಡಗಿಸಿಕೊಳ್ಳುವ ಹೊತ್ತಿನಲ್ಲಿ ನಾನು ಹೆಗ್ಗವಾಡಿಯ ಒಂದು ಹಳ್ಳಿಯ ದಲಿತರೆ ವಾಸವಿದ್ದ ರಂಗಸಿರಿ ಎಂಬ ತಂಡಕ್ಕೆ ಮಂಟೇಸ್ವಾಮಿ ಕಥಾ ಪ್ರಸಂಗ ನಾಟಕ ನಿರ್ದೇಶಿಸಿದ್ದೆ. ಆಗ ಗೋವಿಂದಯ್ಯನವರೂ ಮಂಟೇಸ್ವಾಮಿ ಪರಂಪರೆಯನ್ನು ಒಂದು ಸಾಂಸ್ಕೃತಿಕ ವಿದ್ಯಮಾನವಾಗಿ ರೂಪಿಸಲು ಪ್ರಯತ್ನಿಸುತ್ತಿದ್ದರು. ಅಲ್ಲದೆ ಅದಕ್ಕೊಂದು ರಾಜಕೀಯ, ಸಾಮಾಜಿಕ ಆಲೋಚನೆಯನ್ನು ಕೊಡಲು ಶ್ರಮಿಸುತ್ತಿದ್ದರು. ಅವರು ನನ್ನ ಮಂಟೇಸ್ವಾಮಿ ನಾಟಕ ನೋಡಲು ಬಂದಿದ್ದರು. ಅಷ್ಟರಲ್ಲಿ ಚಾಮರಾಜನಗರಕ್ಕೆ ತುಮಕೂರಿನ ರೈತಸಂಘದ ಕಾರ್ಯಕರ್ತ ಹಾಗೂ ಲೋಹಿಯಾ ಸಮಾಜವಾದದ ಆಳವಾದ ಅಧ್ಯಯನವನ್ನು ಮಾಡಿದ ಶ್ರೀನಿವಾಸ್ ಕುಮಾರ್ ಬಂದಿದ್ದರು. ಅವರು ನಮಗೆ ಕೆ.ಬಿ. ಸಿದ್ದಯ್ಯನವರ ಪರಿಚಯ ಮಾಡಿಸಿದರು. ಕೆ.ಎಂ ಶಂಕರಪ್ಪನವರನ್ನು ಭೇಟಿ ಮಾಡಿಸಿದರು. ಸಮಾಜವಾದಿ ಕಿಷನ್ ಪಟ್ನಾಯಕರನ್ನು ಕರೆಸಿ ಅವರು ರೈತ, ದಲಿತ ಹಾಗೂ ಕರ್ನಾಟಕದ ಬರಹಗಾರರನ್ನು ಒಂದು ಮಾಡುವ ಆಲೋಚನೆಯನ್ನು ಕರ್ನಾಟಕದಲ್ಲಿ ಹೇಗೆ ಬಿತ್ತಿದರು ಎಂದು ಹೇಳುತ್ತಿದ್ದರು. ಜೊತೆಗೆ ಬಕಾಲ, ದಕ್ಲ ಕಥಾದೇವಿ ಕಾವ್ಯ, ಅನಾತ್ಮ ಮುಂತಾದವು ಹಾಗೂ ಕೆ.ಬಿಯವರ ಬರಹಗಳು ಅಂತರಂಗಕ್ಕೆ ಇಳಿಯುತ್ತಾ ಹೋಯಿತು.
ಇದರ ಮಧ್ಯೆ ಪ್ರೊ ಎಂ.ಡಿ. ನಂಜುಂಡಸ್ವಾಮಿಯವರ ರೈತಸಂಘವು ಪ್ರವರ್ಧಮಾನಕ್ಕೆ ಬಂದಿತ್ತು. ದೇವನೂರರ ಎಂ.ಡಿ.ಎನ್ ಬಗೆಗಿನ ಲೇಖನ, ಕಣ್ಣೆದುರೆ ಕಳೆದು ಹೋದ ಸಮಾಜವಾದಿ ಪಕ್ಷ ಮುಂತಾದ ಲೇಖನಗಳ ಜೊತೆ ಕುಸುಮಬಾಲೆ, ಒಡಲಾಳ, ಅಮಾಸ ಮುಂತಾದ ಕೃತಿಗಳ ಪಾತ್ರಗಳು ಹಾಗೆ ನಲಿಯಲು, ನೋಯಿಸಲು, ಕಾಡಲು ಶುರುಹಚ್ಚಿತ್ತು. ಆನಂತರ ಸರ್ವೋದಯ ಕರ್ನಾಟಕದ ಯುಗ ಇವೆಲ್ಲ ಆಗುವಷ್ಟರಲ್ಲಿ ಇದ್ದಕ್ಕಿದ್ದಂತೆ ಎಡ- ಬಲದ ಚರ್ಚೆಗಳು ಮೈಸೂರಿನಲ್ಲಿ ಎಡ- ಬಲದ ನಾಯಕರ ಸಮನ್ವಯದ ಸಭೆಗಳು ಹೀಗೆ ಮುಂದುವರೆಯುತ್ತಿದ್ದಂತೆ ಇದ್ಯಾವುದನ್ನು ತಲೆಕೆಡಿಸಿಕೊಳ್ಳದ ನಾವು ದೇಮ, ಗೋವಿಂದಯ್ಯ, ಕೆ.ಬಿ. ಯವರನ್ನು ಒಂದು ರೀತಿಯಲ್ಲಿ ಅವರ ಸಾಹಿತ್ಯ, ಚಳವಳಿಯ ಕಾರಣದಿಂದ ಬೇರೆಯಾಗಿ ನೋಡಲು ಸಾಧ್ಯವೇ ಇಲ್ಲದಂತೆ ಆಗಿತ್ತು. ಆದರೆ ಇದು ಹೆಚ್ಚು ದಿನ ಉಳಿಯಲಿಲ್ಲ. ಗೋವಿಂದಯ್ಯನವರು ಮಾತಂಗಮುನಿಯ ಬೃಹದ್ದೇಸಿಯ ಬಗ್ಗೆ, ಬುದ್ದನ ಬಗ್ಗೆ ಮಾತಾಡಲು ಕರೆದಾಗ ಹೋಗಿ ನನಗೆ ತೋಚಿದ್ದು ಮಾತಾಡಿ ಬಂದಿದ್ದೆ. ಆಗ ಮೈಸೂರಿನ ಕರೆಂಟ್ ಗೋವಿಂದರಾಜು, ಇವರು ದಲಿತರಲ್ಲದಿದ್ದರೂ ದಸಂಸ ಕಾರ್ಯಕರ್ತರು!! ಇವರ ಮಗನಿಗೆ ಪಂಚಮ ಎಂದು ಹೆಸರಿಟ್ಟಿದ್ದರು. ಇವರು ಮಹದೇವರ ಆಪ್ತ ಬಳಗದಲ್ಲಿ ಇದ್ದವರು. ಗೋವಿಂದಯ್ಯನವರೊಡನೆ ಗುರುತಿಸಿಕೊಂಡಿದ್ದಕ್ಕೆ ಉರಿದುಬೀಳುತ್ತಿದ್ದರು. ಒಮ್ಮೆ ತುಮಕೂರಿನಲ್ಲಿ ಕೆ.ಬಿ. ಸಿದ್ದಯ್ಯನವರು ಪೇಜಾವರರನ್ನು ಮನೆಗೆ ಆಹ್ವಾನಿಸಿದ್ದನ್ನೆ ನೆಪಮಾಡಿಕೊಂಡು ಅವರ ಮೇಲೂ ರೇಗಲು ಶುರುಮಾಡಿದರು. ಇದು ಒಂದು ರೀತಿಯ ಎಡ- ಬಲದ ವಿದ್ಯಮಾನ ಒಂದು ರೀತಿಯಲ್ಲಿ ಉತ್ತುಂಗ ಸ್ಥಿತಿಯನ್ನು ತಲುಪುತ್ತಿದ್ದ ಹೊತ್ತು. ನಮಗೆ ಇದೇನಪ್ಪ ನಮ್ಮ ಕಣ್ಣೆದುರೆ ಆದರ್ಶದ ಉತ್ತುಂಗದಲ್ಲಿದ್ದ ಈ ನಾಯಕರು ಎಡಬಲದ ವಿಚಾರಕ್ಕೆ ಬೇರೆಯಾಗಿಬಿಟ್ಟರಲ್ಲ ಅಂತ ಒಳಗೊಳಗೆ ನೋವು. ದೇವನೂರರು ನನ್ನ ಸಂವಾದ ಮಾಸ ಪತ್ರಿಕೆಯ ನಮ್ಮೊಳಗೆ ಬುದ್ದ ಪೂರ್ಣಿಮೆ ಲೇಖನದ ಬಗ್ಗೆ ಅಭಿಮಾನದ ಮಾತಾಡಿದ್ದರು. ಒಮ್ಮೆ ಮನೆಗೆ ಹೋಗಿದ್ದಾಗ ಸುಮಿತ್ರಾ ಮೇಡಂರನ್ನು ಪರಿಚಯಿಸಿ ಇವನೆ ನೋಡು ಅಪೂರ್ವ ಎಂದು ಹೇಳಿದ್ದರು. ಅಷ್ಟರ ಮಟ್ಟಿಗೆ ಹೊಸಬರನ್ನು, ಯುವಕರನ್ನು ಬೆಳೆಸುತ್ತಿದ್ದರು.

ದೇವನೂರರು ಒಮ್ಮೆ ಎಂ.ಡಿ.ಎನ್. ಸಮಾಧಿ ಸ್ಥಳ ಅಮೃತಭೂಮಿಗೆ ಬಂದಿದ್ದರು. ಅಲ್ಲಿಗೆ ಅವತ್ತು ಯೋಗೆಂದ್ರ ಯಾದವ್, ಮೇಧಾ ಪಾಟ್ಕರ್ ಕೂಡ ಬಂದಿದ್ದರು. ಮನೆಮಂಚಮ್ಮನ ಲೇಖನಕ್ಕೆ ನೋ ಮೈಂಡ್ ತಲೆ ಇಲ್ಲದ ಬುದ್ಧನನ್ನು ಹಾಕಿದ್ದೀನಿ ಎಂದಿದ್ದರು. ಆಗ ಮೈಸೂರು ವಿಶ್ವವಿದ್ಯಾಲಯದ ಯಾವುದೋ ಸಭೆಯ ವಿಚಾರವನ್ನು ಪ್ರಸ್ತಾಪಿಸಿ ಎಡಬಲದ ವಿಚಾರವನ್ನು ನೇರವಾಗಿ ಹೇಳುವ ಬದಲು ಕಲೆಯಾಗಿ, ರೂಪಕದ ಭಾಷೆಯಲ್ಲಿ ಹೇಳಬೇಕಾಗಿತ್ತು ಎಂದು ಒಬ್ಬ ಸಾಹಿತಿ ಎಂದೇನೋ ಪ್ರಸ್ತಾಪ ಮಾಡಿದ್ದರು. ನಾಮಪದ ಬಳಸಿರಲಿಲ್ಲ. ಆ ಮಾತನ್ನು ಇದು ಎಡ-ಬಲವನ್ನು ಒಂದುಗೂಡಿಸುವ ಮಾರ್ಗವಲ್ಲವೇ ಎಂಬಂತೆ ಕೆ.ಬಿ ಸಿದ್ದಯ್ಯನವರೊಡನೆ ಪ್ರಸ್ತಾಪಿಸಿದಾಗ “ನೋಡು ನನ್ನ ಹೆಸರೇಳದೆ ನನ್ನ ಮಾತನ್ನು ಹೇಳಿದ್ದಾರೆ” ಎಂದು ಕೆಂಡಮಂಡಲವಾದರು. ನನಗೆ ಅಯ್ಯೋ ಈ ಮಾತನ್ನು ಯಾಕಾರು ತೆಗೆದೆ ಅಂತ ಅನಿಸಲು ಪ್ರಾರಂಭಿಸಿತು.
ಗೋವಿಂದಯ್ಯನವರು ಎಲ್ಲೆ ಸಿಕ್ಕರೂ ಪ್ರೀತಿಯಿಂದ ಮಾತಾಡುತ್ತಿದ್ದವರು. ತುಮಕೂರಿನ ಒಂದು ಮಂತ್ರಮಾಂಗಲ್ಯದ ಮದುವೆಯಲ್ಲಿ ಅದೇಕೋ ಏನೋ ಕೃತಕವಾಗಿ ನಕ್ಕಂತೆ ಮಾಡಿ ಯಾರೋ ಸ್ನೇಹಿತರೊಂದಿಗೆ ಮಾತಾಡಲು ಹೋದರು. ನನಗಾಗ ಅನಿಸಿದ್ದು ಇವರು ದೇವನೂರು ಬಣವಾಗಿ ನನ್ನ ಗುರುತಿಸುತ್ತಿದ್ದಾರೆಂದು. ಇನ್ನು ಕೆ.ಬಿ. ಬಲದ ಶಾಸಕರಾದ ಪರಮೇಶ್ವರ್ ಅವರಿಗೆ ಮಾದಿಗರ ಓಟು ಸಿಗದೆ ಇರೋ ಥರ ಮಾಡಿ ಸೋಲಿಸಿದರು ಎಂದು ಗುಲ್ಲೆಬ್ಬಿತು. ಈ ಕಡೆ ಗೋವಿಂದಯ್ಯನವರು ಹೆಚ್.ಸಿ. ಮಹದೇವಪ್ಪನವರನ್ನು ಸೋಲಿಸಲು ಎಡದ ಓಟುಗಳನ್ನು ಕೀಳಲು ಪ್ರಯತ್ನಿಸಿದರು ಎಂದು ಗುಲ್ಲೆಬ್ಬಿತು. ಆನಂತರ ಕೆ.ಬಿ. ಯವರಿಂದ ಎದೆಗೆ ಬಿದ್ದ ಅಕ್ಷರ ಎದೆಗೆ ಬಿದ್ದ ಬೆಂಕಿಯಾಯಿತು. ಈ ಕಡೆ ಯಾವುದೇ ವೇದಿಕೆ ಸಿಗಲಿ ಗೋವಿಂದಯ್ಯನವರು ದೇವನೂರರೇ ದಸಂಸ ಒಡೆಯಲು ಕಾರಣ ಎಂದು ಹೇಳಲು ಶುರು ಮಾಡಿದರು. ನಿಜಕ್ಕೂ ಆಗ ನಮ್ಮಂಥವರು ತಬ್ಬಲಿಗಳಾದೆವು.
ಯಾರು ಮಾತಾಡಿಸಲಿ, ಮಾತಾಡಿಸದೆ ಇರಲಿ ಎಡಬಲವನ್ನು ಮೂಲ ದಸಂಸದ ಅಂತರಂಗದ ಒಂದೇ ಮಿಡಿತವಾಗಿ ನೋಡುವ ಕಣ್ಣುಗಳನ್ನು, ಅನುಭವಿಸುವ ಮನಸ್ಸನ್ನು ಕಳೆದುಕೊಳ್ಳಲಾರೆ ಎಂದು ಅನಿಸಿ ಈ ದೇವನೂರರೂ ಬೇಕು, ಗೋವಿಂದಯ್ಯನವರು ಬೇಕು, ನಮ್ಮ ಬಕಾಲ ಮುನಿಯೂ ಬೇಕು ಎಂದು ಸಿಕ್ಕಿದ್ದಲ್ಲೆಲ್ಲ ಬರೆಯುತ್ತಿದ್ದೆ. ಗೋವಿಂದಯ್ಯನವರ ಮಗಳು ಚರಿತಾ ಅವರ ಜೊತೆಗೂ ಈ ಬಗ್ಗೆ ಚರ್ಚೆ, ವಾಗ್ವಾದಗಳು ನಡೆಯುತ್ತಿದ್ದವು. ಈಗ ಒಳಮೀಸಲಾತಿಯ ಸಂದರ್ಭದಲ್ಲಿ ದೇವನೂರರು ಮುಖ್ಯಮಂತ್ರಿಗೆ ಬರೆದ ಪತ್ರಕ್ಕೆ ಗೋವಿಂದಯ್ಯನವರು ಮೆಚ್ಚುಗೆ ಸೂಚಿಸಿ ಬರೆದ ಮಾತುಗಳಿಗೆ ಒಮ್ಮೆಲೇ ಹೃದಯ ತುಂಬಿ ಬಂದಂತಾಯಿತು. ನಿಜಕ್ಕೂ ದೇವನೂರ ಮಹಾದೇವ, ಗೋವಿಂದಯ್ಯ, ಕೋಟಿಗಾನಹಳ್ಳಿ ರಾಮಯ್ಯ ಒಂದಾಗಿ ಹೊಸ ತಲೆಮಾರಿನ ಒಂದು ಪಡೆ ಹಾಗೂ ಹಳೆಯ ದಸಂಸದ ಸಮನ್ವಯತೆ ಸಾಧಿಸಿಬಿಟ್ಟರೆ ನಿಜಕ್ಕೂ ಎಂಥ ಲೋಕ ಸೃಷ್ಟಿಯಾಗುತ್ತದೆ. ಅದು ಬೇರೆ ಯಾವ ಲೋಕವು ಅಲ್ಲ ಬುದ್ದಪ್ರಜ್ಞೆಯ ಲೋಕ.
ಇದನ್ನೂ ಓದಿ ‘ಸಂಬಂಜ ಅನ್ನೋದು ದೊಡ್ಡದು ಕನಾ’; ದಲಿತ ಚಳವಳಿಯ ಹಿರಿಯರನ್ನು ಒಗ್ಗೂಡಿಸಿದ ಒಳಮೀಸಲಾತಿ ಹೋರಾಟ
ಹೌದು ನಾನು ದಲಿತನಲ್ಲ. ಆದರೆ ಇಂಥ ದಲಿತ ನಾಯಕರಿಂದ ಅವರ ಬರಹಗಳಿಂದ ಪ್ರೇರಿತನಾದವನು. ಅದೂ ಅಲ್ಲದೆ ಲೋಹಿಯಾರ ಸಮನ್ವಯ ತತ್ವವನ್ನು ಇವರಲ್ಲಿ ಕಂಡವನು. ಈಗಲೂ ಈ ನಾಯಕರು ಒಟ್ಟಾಗಿ ಮೀಸಲಾತಿ ಸಿಗದ ತಬ್ಬಲಿಗಳಿಗೆ ಒಳಮೀಸಲಾತಿ ಕೊಡಿ ಅನ್ನುತ್ತಿದ್ದಾರೆ. ನಾಗಮೋಹನ್ ದಾಸ್ ಕಮಿಟಿ ಯಥಾವತ್ತಾಗಿ ಜಾರಿ ಮಾಡಿ ಮುಂದೆ ಏನೇ ಸಮಸ್ಯೆಗಳಿದ್ದರೂ ಸರಿಮಾಡಿಕೊಳ್ಳೋಣ ಅನ್ನುತ್ತಿದ್ದಾರೆ. ಈ ಮೂವರ ದಾರ್ಶನಿಕ ಮಾತಿಗೆ ನೂರೊಂದು ಜಾತಿಗಳು ಒಂದಾದರೆ ಎಂಥಾ ಕ್ರಾಂತಿ! ಇವರು ಅಷ್ಟಕ್ಕೆ ಸುಮ್ಮನಾಗುವವರಲ್ಲ; ಜೊತೆಗೆ ರೈತರನ್ನು, ಸ್ತ್ರೀಯರನ್ನು ಒಳಗೊಳ್ಳುವ ಸರ್ವೋದಯದ ಹರಿಕಾರರಾಗುತ್ತಾರೆನ್ನುವುದು ಎಲ್ಲರಿಗೂ ಗೊತ್ತು. ನಿಜಕ್ಕೂ ಈಗ ಸಮಾಜವಾದಿ ಚಳವಳಿ ಇಲ್ಲ. ರೈತಸಂಘ, ದಸಂಸ ಹಲವು ರೀತಿಯ ಒಡಕಿನಿಂದ ತತ್ತರಿಸಿದೆ. ಕೆ.ಬಿಯವರ ದಲಿತ, ರೈತ, ಸ್ತ್ರೀ ಜೊತೆಗೆ ಕನ್ನಡವೂ ಸೇರಿಬಿಟ್ಟರೆ ಅದ್ಬುತ ಪ್ರಾದೇಶಿಕ ಪಕ್ಷವಾಗುತ್ತದೆ. ಇಲ್ಲದಿದ್ದರೆ ಚಳವಳಿಯಾಗಿಯಾದರೂ ಮುಂದುವರೆಯಲಿ. ಈ ನಾಯಕರು ಜೊತೆಗೂಡಿದರೆಂದರೆ ಅಲ್ಲಿ ಕರುಣೆ, ಮೈತ್ರಿಯ ಬುದ್ದ, ಒಂದಕ್ಕೊಂದರ ಸಂಬಂಧದ ಕುವೆಂಪುರವರ ವಿಶ್ವಮಾನವ ಪ್ರಜ್ಞೆ ಇದ್ದೆ ಇರುತ್ತದೆ.

https://shorturl.fm/eu5nO