ಸಂಡೂರು, ಚನ್ನಪಟ್ಟಣ ಹಾಗೂ ಶಿಗ್ಗಾಂವಿ ಕ್ಷೇತ್ರಗಳಿಗೆ ನವೆಂಬರ್ 13ರಂದು ಉಪಚುನಾವಣೆ ನಡೆಯಲಿದೆ. ಈ ಮೂರು ಕ್ಷೇತ್ರಗಳ ಪೈಕಿ ಶಿಗ್ಗಾಂವಿ ವಿಶಿಷ್ಟ ಕ್ಷೇತ್ರವಾಗಿದೆ. ಅತೀ ಹೆಚ್ಚು ಮುಸ್ಲಿಮರೇ ಇರುವ ಈ ಕ್ಷೇತ್ರದಲ್ಲಿ ಕಳೆದ ಹಲವು ದಶಕಗಳಿಂದ ಬಿಜೆಪಿಗರೇ ಗೆಲ್ಲುತ್ತಾ ಬಂದಿದ್ದಾರೆ. ಅಲ್ಲದೇ, ಮುಸ್ಲಿಂ ಅಭ್ಯರ್ಥಿಯೇ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೂ ಕೂಡ ಗೆಲುವು ಮರಿಚೀಕೆಯಾಗಿದೆ. ಈ ಬಾರಿಯೂ ಮುಸ್ಲಿಂ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಹೆಚ್ಚಾಗಿ ಕೇಳಿಬರುತ್ತಿತ್ತು. ಅಂತೆಯೇ, ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಇತ್ತ ಬಿಜೆಪಿ ಕಾರ್ಯಕರ್ತರನ್ನ ಕಡೆಗಣಿಸಿ ಕುಟುಂಬ ರಾಜಕಾರಣವನ್ನ ಮುನ್ನಡೆಸಲು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಲಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದರು. ಟಿಕೆಟ್ ದಕ್ಕದೇ ಇರುವವರು ಬಂಡಾಯ ಎದ್ದಿದ್ದಾರೆ. ಈ ಬಂಡಾಯವನ್ನು ಶಮನ ಮಾಡುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಬಂಡಾಯದ ಪರಿಣಾಮ ಚುನಾವಣಾ ಕಣದಲ್ಲಿ ಸ್ಪಷ್ಟವಾಗಲಿದೆ.
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಪಠಾಣ ಅವರು ತಮ್ಮ ಪಕ್ಷದ ನಾಯಕರ ನೇತೃತ್ವದಲ್ಲಿ ಶಕ್ತಿ ಪ್ರದರ್ಶನ ಮಾಡಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಟಿಕೆಟ್ ತಡವಾಗಿ ಘೋಷಣೆಯಾದ ಹಿನ್ನೆಲೆ ಬೆಂಗಳೂರಿನಿಂದ ತರಾತುರಿಯಲ್ಲಿ ಶಿಗ್ಗಾವಿಗೆ ತೆರಳಿದ ಯಾಸೀರ್ ಅಹ್ಮದ್ ಖಾನ್ ಅವರು ಸೂಚಕರ ಜೊತೆ ಸೇರಿ ಚುನಾವಣಾಧಿಕಾರಿಗೆ ಮೊದಲ ನಾಮಪತ್ರ ಸಲ್ಲಿಸಿದರು. ಮಧ್ಯಾಹ್ನ ಮುಖಂಡರ ಜೊತೆ ಸೇರಿ ಎರಡನೇ ಬಾರಿ ಉಮೇದುವಾರಿಕೆ ಸಲ್ಲಿಸಿದರು.
“ನಾನು ಯಾವುದೇ ಮುಖ್ಯಮಂತ್ರಿಯ ಮಗನಲ್ಲ. ಸಾಮಾನ್ಯ ರೈತ ಕುಟುಂಬದ ಮಗ. ನನ್ನಂಥ ಸಾಮಾನ್ಯ ಕಾರ್ಯಕರ್ತನಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದಕ್ಕೆ ಕೃತಜ್ಞತೆಗಳು. ಜನರ ಸಮಸ್ಯೆಗಳ ಅರಿವು ನನಗಿದೆ. ಸೋತರೂ ಕ್ಷೇತ್ರದಲ್ಲಿದ್ದು, ಸಂಘಟನೆ ಮಾಡಿದ್ದೇನೆ. ನಿಮ್ಮ ಆಶೀರ್ವಾದ ನನ್ನ ಮೇಲಿರಲಿ’ ಎಂದು ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಪಠಾಣ ಹೇಳಿದರು.
ಬಿಜೆಪಿ ನಾಯಕರ ಜತೆಗೆ ಶಕ್ತಿ ಪ್ರದರ್ಶನ ತೋರಿಸಿ, ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ, “ತಂದೆ ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರ ಅಭಿವೃದ್ಧಿಗಾಗಿ ಕನಸು ಕಂಡಿದ್ದರು. ಆ ಕನಸನ್ನು ನನಸು ಮಾಡುತ್ತೇನೆ. ಇದೇ ನನ್ನ ಕೆಲಸ. ಕ್ಷೇತ್ರದ ರೈತರು, ಹಿಂದುಳಿದವರು, ಪರಿಶಿಷ್ಟ ಜಾತಿ–ಪಂಗಡದವರು ಸೇರಿದಂತೆ ಎಲ್ಲರ ಏಳ್ಗೆಗಾಗಿ ಶ್ರಮಿಸುವೆ. ಪ್ರತಿಯೊಬ್ಬರು ಮತದ ರೂಪದಲ್ಲಿ ನನಗೆ ಆಶೀರ್ವಾದಿಸಬೇಕು” ಎಂದರು.
ಟಿಕೆಟ್ ದಕ್ಕಿದ್ದವರ ಸಂತಸ ಇಷ್ಟಾದರೇ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದ ಅಜ್ಜಂಪೀರ್ ಖಾದ್ರಿ ಮತ್ತು ಮಂಜುನಾಥ್ ಕುನ್ನೂರು ಅವರು ಬಂಡಾಯ ಎದ್ದಿದ್ದರು. ಖಾದ್ರಿ ಅವರು ಕೊನೆ ಘಳಿಗೆಯಲ್ಲಿ ಬೈಕ್‌ನಲ್ಲಿ ತೆರಳಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಮಂಜುನಾಥ್ ಅವರೂ ಕೂಡ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಇನ್ನು ಬಂಡಾಯ ಎದ್ದಿದ್ದ ಅಜ್ಜಂಪೀರ ಖಾದ್ರಿ ಅವರನ್ನು ಸಮಾಧಾನಪಡಿಸಲು ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಅವರು ತೆರಳಿದ್ದ ವೇಳೆ, ಅವರ ಕಾರಿನ ಮೇಲೆ ಖಾದ್ರಿ ಬೆಂಬಲಿಗರು ಕಲ್ಲು ತೂರಾಟ ನಡೆಸಿದ್ದಾರೆ. ಆದಾಗ್ಯೂ, ಖಾತ್ರಿ ಅವರ ಮನವಲಿಸುವಲ್ಲಿ ಕಾಂಗ್ರೆಸ್ ನಾಯಕರು ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ.
ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇರುವ ಕ್ಷೇತ್ರದಲ್ಲಿ, ಕೆಆರ್‌ಎಸ್ ಪಕ್ಷ, ಇಂಡಿಯನ್ ಪೊಲಿಟಿಕಲ್ ಕಾಂಗ್ರೆಸ್, ಉತ್ತಮ ಪ್ರಜಾಕೀಯ ಪಕ್ಷ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್, ಟಿಪ್ಪು ಸುಲ್ತಾನ್ ಪಾರ್ಟಿ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.
ಶಿಗ್ಗಾಂವಿ ಒಟ್ಟು ಮತದಾರರ ಸಂಖ್ಯೆ 2,99,081, ಈ ಪೈಕಿ ಮುಸ್ಲಿಮರ ಮತಗಳು ಪ್ರಬಲ್ಯ ಸಾಧಿಸಿವೆ. ಕ್ಷೇತ್ರದಲ್ಲಿ 81,853 ಮುಸ್ಲಿಂ ಮತದಾರರಿದ್ದಾರೆ. ಅಂದರೆ, ಜನಸಂಖ್ಯೆಯ ಒಟ್ಟು 27.37%. ಆದರೂ ಕೂಡ ಮುಸ್ಲಿಂರನ್ನು ವಿರೋಧಿಸೋ ಬಿಜೆಪಿ ಕಳೆದ 20 ವರ್ಷದಿಂದ ಗೆಲುತ್ತಿದೆ. ಮುಸ್ಲಿಂ ಜನಸಂಖ್ಯೆಯೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗಳ ಸೋಲುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ಆಶ್ಚರ್ಯ ಹುಟ್ಟಿಸಬಹುದು. ಆದರೂ ಕೂಡ ಇದು ಸತ್ಯ. 27% ಮುಸ್ಲಿಮರಿದ್ದರೂ, ಉಳಿದ 73% ಮುಸ್ಲಿಮೇತರ ಮತಗಳನ್ನು ಭಾಗಶಃ ಒಗ್ಗೂಡಿಸುವಲ್ಲಿ ಬಿಜೆಪಿ ಸಫಲವಾಗುತ್ತಿದೆ.
ಶಿಗ್ಗಾಂವಿ ಕ್ಷೇತ್ರದಲ್ಲಿ ಈ ಹಿಂದೆ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಪಕ್ಷೇತರ್ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದೇ ಹೆಚ್ಚು. ಆದರೆ, ಕಳೆದ 20 ವರ್ಷದಿಂದ ಈ ಕ್ಷೇತ್ರದಲ್ಲಿ ಬಿಜೆಪಿಯ ಬಸವರಾಜ್ ಬೊಮ್ಮಾಯಿ ಗೆಲುವನ್ನ ಕಂಡಿದ್ದಾರೆ. ಈ ಅರೆಮಲೆನಾಡುವಿನಿಂದ ಇಬ್ಬರು ಮುಖ್ಯಮಂತ್ರಿ ಪಟ್ಟ ಏರಿದ್ದಾರೆ. ಬೊಮ್ಮಾಯಿಗೆ ರಾಜಕೀಯ ಮರುಹುಟ್ಟು ಕೊಟ್ಟಿದೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಮೈಲಾರ ಮಹದೇವಪ್ಪ ಅವರ ಜತೆಯಲ್ಲಿದ್ದ ಸ್ವಾತಂತ್ರ್ಯ ಹೋರಾಟಗಾರ ಫಕಿರಪ್ಪ ಸಿದ್ಧಪ್ಪ ತಾವರೆ ಅವರೂ ಈ ಕ್ಷೇತ್ರದಿಂದಲೇ ಸ್ಪರ್ಧಿಸಿ, ಶಾಸಕರಾಗಿದ್ದರು.
ಮುಸ್ಲಿಂ ಮತದಾರರನ್ನು ಗಣನೀಯ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ನಾಲ್ಕು ಬಾರಿ ಮಾತ್ರವೇ ಮುಸ್ಲಿಂ ಅಭ್ಯರ್ಥಿಗಳು ಗೆದ್ದಿದ್ದಾರೆ. ಅವರಲ್ಲಿ, ಕಾಂಗ್ರೆಸ್‌ನ ನದಾಫ್ ಎಂ ಮರ್ದಾನ್ ಸಾಬ್ ಅವರೇ ಸತತ ಮೂರು ಬಾರಿ ಗೆದ್ದು ಶಾಸಕರಾಗಿದ್ದರು. ಮುಸ್ಲಿಂ ಸಮುದಾಯದ ಮುಖಂಡರಾದ ಖಾದ್ರಿ 1999ರ ಅವಧಿಯಲ್ಲಿ ಶಾಸಕರಾಗಿ ಕೆಲಸ ಮಾಡಿದ್ದರು. ಪಂಚಮಸಾಲಿ ಲಿಂಗಾಯತ ಸಮುದಾಯದ ಮಂಜುನಾಥ್ ಕುನ್ನೂರು ಅವರು 1989 ಹಾಗೂ 1994ರ ಅವಧಿಯಲ್ಲಿ ಎರಡು ಬಾರಿ ಶಾಸಕರಾಗಿದ್ದರು.
ಆದಾಗ್ಯೂ, ಕಳೆದ 5 ಚುನಾವಣೆಗಳಲ್ಲೂ ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಮುಸ್ಲಿಂ ಅಭ್ಯರ್ಥಿ ಸೋಲುತ್ತಾ ಬಂದಿದ್ದಾರೆ. 1999ರಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿ ಬಿಜೆಪಿ ಅಭ್ಯರ್ಥಿ ಶಂಕರಗೌಡ ಪಾಟೀಲ್ ವಿರುದ್ಧ ಗೆದ್ದಿದ್ದ ಖಾದ್ರಿ ಸೈಯದ್ ಅಜಂಪೀರ್ ಖಾದರ್ ಬಾಷಾ ಅವರು 2004ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿ ಪಕ್ಷೇತರ ಅಭ್ಯರ್ಥಿ ವಿರುದ್ಧ ಸೋಲು ಕಂಡಿದ್ದರು. ಅಲ್ಲದೇ, 2008, 2013 ಹಾಗೂ 2018ರಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ಅವರ ವಿರುದ್ಧ ಸ್ಪರ್ಧೆ ಮಾಡಿ ಸೋಲುಂಡಿದ್ದರು. 2023ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಯಾಸೀರ್ ಅಹ್ಮದ್ ಖಾನ್ ಪಠಾಣ್ ಅವರು ಬಸವರಾಜ್ ಬೊಮ್ಮಾಯಿ ವಿರುದ್ಧ ಸ್ಪರ್ಧೆ ಮಾಡಿ ಸೋತಿದ್ದರು.
ಕಳೆದ ನಾಲ್ಕು ಅವಧಿಯಲ್ಲಿ ಶಿಗ್ಗಾಂವಿ – ಸವಣೂರು ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ್ದ ಬಸವರಾಜ್ ಬೊಮ್ಮಾಯಿ ಅವರಿಗೆ ಈ ಬಾರಿ ಮಗನನ್ನ ಗೆಲ್ಲಿಸಿಕೊಂಡು ಬರುವ ಹೊಣೆ ಹೊತ್ತಿದ್ದಾರೆ. ಇನ್ನು ಕಳೆದ 20 ವರ್ಷಗಳ ಸೋಲಿನ ಸೇಡು ತೀರಿಸಿಕೊಳ್ಳಲು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸಜ್ಜಾಗಿದ್ದಾರೆ. ಈ ಬಾರಿ ಈ ಕ್ಷೇತ್ರದಲ್ಲಿ ಗೆಲ್ಲಲೇ ಬೇಕು ಎಂಬ ಪಣ ತೊಟ್ಟು, ಸಂಘಟನೆ ಚುರುಕುಗೊಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅಯೋಧ್ಯೆ ವಿವಾದ | ಮೂಲದಾವೆಯಲ್ಲಿ ದೇವರೇ ಕಕ್ಷಿದಾರ; ದೇವರನ್ನೇ ಪರಿಹಾರ ಕೇಳಿದ ಸಿಜೆಐ
ಶಿಗ್ಗಾಂವಿಯಲ್ಲಿ ಪ್ರಬಲ ಪಂಚಮಸಾಲಿ ಲಿಂಗಾಯತರ ಪ್ರಭಾವ ಹೆಚ್ಚಿದೆ. ಸವಣೂರು ಹೋಬಳಿಯಲ್ಲಿ ಮುಸ್ಲಿಮರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಲಿಂಗಾಯತ ಮತ್ತು ಮುಸ್ಲಿಂ ಸಮುದಾಯ ಹೊರತುಪಡಿಸಿ ಇತರ ಸಮುದಾಯದವರ ಪ್ರಭಾವ ಕಡಿಮೆ. ಒಟ್ಟು 2,21,994 ಮತದಾರರಿರುವ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದವರು 27.37% ಇದ್ದರೇ, ಪಂಚಮಸಾಲಿ ಲಿಂಗಾಯತ್ ಜನಸಂಖ್ಯೆ 28,661 ಇದೆ. ಕುರುಬ 8.83%, ಎಸ್ ಟಿ ವಾಲ್ಮೀಖಿ6.01%, ವಿರಶೈವ ಲಿಂಗಾಯತ 5.96% ಇದ್ದಾರೆ. 25 ಸಾವಿರ ಎಸ್ಟಿ-ಎಸ್ಟಿ, 22 ಸಾವಿರ ಲಂಬಾಣಿ ಮತ್ತು 20 ಸಾವಿರದಷ್ಟು ಸಣ್ಣಪುಟ್ಟ ಸಂಖ್ಯೆಯ ಜಾತಿಯ ಮತದಾರರಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದಲ್ಲಿ ಶೇ.79.94 ರಷ್ಟು ಮತದಾನವಾಗಿದೆ. ಈ ಬಾರಿಯ ಉಪಚುನಾವಣೆಯಲ್ಲಿ ಮಗನನ್ನ ಗೆಲ್ಲಿಸಿಕೊಂಡು ಬರುವ ಪ್ರತಿಷ್ಠೆಯ ವಿಷಯ ಬಸವರಾಜ್ ಬೊಮ್ಮಾಯಿ ಮೇಲಿದ್ದರೇ, ಕಳೆದ 20 ವರ್ಷದಿಂದ ಈ ಕ್ಷೇತ್ರದಲ್ಲಿ ನೆಲೆಯನ್ನೇ ಕಾಣದ ಕಾಂಗ್ರೆಸ್ ತನ್ನ ನೆಲೆಯನ್ನೂ ಕಂಡುಕೊಳ್ಳಬೇಕಾಗಿದೆ. ಈ ಕ್ಷೇತ್ರದಲ್ಲಿ ಈ ಬಾರಿ ಮತದಾರರ ಪ್ರಭು ಯಾರಿಗೆ ಒಲಯಲಿದ್ದಾರೆ ಕಾದು ನೋಡಬೇಕಿದೆ.