ಕರ್ನಾಟಕ ಹೈಕೋರ್ಟ್‌ನಲ್ಲಿ ಎರಡು ದಿನಗಳಲ್ಲಿ ನಾಲ್ವರು ಬಿಜೆಪಿ ಮುಖಂಡರ ಮೇಲಿದ್ದ ದ್ವೇಷ ಭಾಷಣ ಪ್ರಕರಣಗಳನ್ನು ರದ್ದುಪಡಿಸಲಾಗಿದೆ. ಬದುಕಿಲ್ಲದ ಸಾವರ್ಕರ್ ವಿರುದ್ಧ 2022ರಲ್ಲಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ 2025, ಜ.15ರಂದು ವಿಚಾರಣೆಗೆ ಹಾಜರಾಗಲು ಲಕ್ನೋ ಕೋರ್ಟ್ ಸಮನ್ಸ್ ಜಾರಿಗೊಳಿಸಿದೆ.
ಜನತಂತ್ರದ ಮೂರು ಮೂಲ ಸ್ತಂಭಗಳಲ್ಲಿ ಒಂದು ನ್ಯಾಯಾಂಗ. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ವಿಮರ್ಶೆಗೆ ಗುರಿಯಾಗುತ್ತಿದೆ. ಇದೊಂದು ಆರೋಗ್ಯಕರ ಲಕ್ಷಣ. ನಾನಾ ರಾಜ್ಯಗಳ ಹೈಕೋರ್ಟ್ ನೀಡುತ್ತಿರುವ ಆದೇಶ, ತೀರ್ಪುಗಳ ಬಗ್ಗೆ ಜನಸಾಮಾನ್ಯರು ಸಂದೇಹ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗೆ ಕರ್ನಾಟಕ ಹೈಕೋರ್ಟ್‌ನ ಜನಪ್ರತಿನಿಧಿಗಳ ಪೀಠ ನೀಡುತ್ತಿರುವ ತೀರ್ಪುಗಳು, ಬಿಜೆಪಿ ನಾಯಕರ ಮೇಲಿನ ದ್ವೇಷ ಭಾಷಣ, ಸುಳ್ಸುದ್ದಿ ಹರಡಿದ ಪ್ರಕರಣಗಳನ್ನು ರದ್ದು ಮಾಡುತ್ತಿರುವ ಆದೇಶಗಳು ವಿಮರ್ಶೆಗೆ ಗುರಿಯಾಗುತ್ತಿವೆ. ಯಾವುದು ಕಾನೂನು ಬಾಹಿರ, ವ್ಯಕ್ತಿಗಳ ಮೂಲಭೂತ ಹಕ್ಕಿನ ಉಲ್ಲಂಘನೆ, ಮಾನಹಾನಿಕರ ಎಂದು ನಮ್ಮ ಸಂವಿಧಾನ, ಕಾನೂನು ವಿವರಿಸುತ್ತೋ ಅದನ್ನು ಕೋರ್ಟ್‌ಗಳು ಎತ್ತಿ ಹಿಡಿಯುತ್ತವೆ ಎಂಬುದು ಸಾಮಾನ್ಯ ನಂಬಿಕೆ. ಸಾರ್ವಜನಿಕರ ಈ ನಂಬಿಕೆಯನ್ನು ಎತ್ತಿ ಹಿಡಿಯುವುದು ನ್ಯಾಯಾಂಗದ ಆದ್ಯ ಕರ್ತವ್ಯ.
ಸುಪ್ರೀಂ ಕೋರ್ಟ್‌ನ ಸಿಜೆಐ ಮೊದಲುಗೊಂಡು ನ್ಯಾಯಮೂರ್ತಿಗಳು ನಿವೃತ್ತರಾಗುತ್ತಿದ್ದದಂತೆ ರಾಜ್ಯಸಭಾ ಸದಸ್ಯರಾಗುವುದು, ರಾಜ್ಯಪಾಲರಾಗಿ ನಿಯುಕ್ತಿಗೊಳ್ಳುವುದು, ಚುನಾವಣೆಗೆ ಸ್ಪರ್ಧಿಸುತ್ತಿರುವುದನ್ನು ನೋಡಿದರೆ ನ್ಯಾಯಾಂಗವೂ ಆಮಿಷ, ಪಕ್ಷಪಾತಕ್ಕೆ ಹೊರತಾಗಿಲ್ಲ ಎಂಬ ಸಂದೇಹಗಳು ಇತ್ತೀಚಿನ ವರ್ಷಗಳಲ್ಲಿ ದಟ್ಟಗೊಳ್ಳುತ್ತಿವೆ.
ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಗಳ ಆಸ್ತಿಯನ್ನು ಕಿತ್ತು ಮುಸ್ಲಿಮರಿಗೆ ನೀಡಲಾಗುತ್ತದೆ ಎಂಬ ಮುಸ್ಲಿಂ ದ್ವೇಷವನ್ನು ಸಮಾಜದಲ್ಲಿ ಹುಟ್ಟು ಹಾಕುವ ಅನಿಮೇಟೆಡ್ ವಿಡಿಯೋವನ್ನು ಬಿಜೆಪಿಯ ಸಾಮಾಜಿಕ ಜಾಲತಾಣಗಳ ಅಧಿಕೃತ ಖಾತೆಯೇ ಹಂಚಿಕೊಂಡಿತು. ಬಿಜೆಪಿ ಸಾಮಾಜಿಕ ಮಾಧ್ಯಮ ಮುಖ್ಯಸ್ಥ ಅಮಿತ್ ಮಾಳವೀಯ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ವಿರುದ್ಧ ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲಾಗಿತ್ತು. ಪ್ರಕರಣವನ್ನು ರದ್ದುಪಡಿಸುವಂತೆ ಜನ ಪ್ರತಿನಿಧಿಗಳ ನ್ಯಾಯಾಲಯದಲ್ಲಿ ಆರೋಪಿಗಳು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಎಫ್ ಐಆರ್ ರದ್ದುಪಡಿಸಿದೆ. ಅಮಿತ್ ಮಾಳವೀಯ ವಿರುದ್ಧ ಈ ಮೊದಲೂ ಹಲವು ಪ್ರಕರಣಗಳು ದಾಖಲಾಗಿದ್ದವು. ಫೇಕ್ ಸುದ್ದಿ ಹಂಚಿ ಹಲವು ಸಲ ಡಿಲೀಟ್ ಮಾಡಿದ್ದುಂಟು. ತಿರುಚಿದ ವಿಡಿಯೋ, ಫೋಟೋ ಹಂಚುತ್ತಲೇ ಬಂದಿದ್ದಾರೆ ಮಾಳವೀಯ. ಅವರ ಈ ಪ್ರವೃತ್ತಿ ಸಾಮಾಜಿಕ ಶಾಂತಿ ಸೌಹಾರ್ದತೆಯ ದೃಷ್ಟಿಯಿಂದ ಸರಿಯಲ್ಲ ಎಂದು ನ್ಯಾಯಪೀಠಗಳಿಗೆ ಮನವರಿಕೆ ಆದಂತಿಲ್ಲ. ಸಾಮರಸ್ಯ ಕದಡುವವರಿಗೆ ಒಂದು ಪ್ರಕರಣದಲ್ಲಾದರೂ ಶಿಕ್ಷೆಯಾಗಿದರೆ, ಬಹಿರಂಗ ಕ್ಷಮೆಯಾಚಿಸುವ, ದಂಡ ಕಟ್ಟುವ ಕ್ರಮವಾಗಿದ್ದರೆ ಮುಂದೆ ಇಂತಹ ಕೃತ್ಯ ಮಾಡಲು ಹಿಂಜರಿಯುತ್ತಾರೆ. ಆದರೆ ನ್ಯಾಯಾಲಯಗಳು ಇಂತಹವರ ವಿರುದ್ಧದ ಪ್ರಕರಣಗಳನ್ನು ರದ್ದುಪಡಿಸುವ ಮೂಲಕ ಯಾವ ಸಂದೇಶ ಕೊಡುತ್ತಿವೆ?

ಕರ್ನಾಟಕದಲ್ಲಿ ಬಿಜೆಪಿಯ ಹಲವು ನಾಯಕರ ವಿರುದ್ಧದ ಪ್ರಕರಣಗಳಿಗೆ ಹೈಕೋರ್ಟಿನಲ್ಲಿ ಆಗಾಗ ತಡೆಯಾಜ್ಞೆ ದೊರೆಯುತ್ತಿರುವುದು ದುರದೃಷ್ಟಕರ. ಇತ್ತೀಚೆಗೆ ವಕ್ಫ್ ವಿಚಾರದಲ್ಲಿ ಸುಳ್ಳು ಸುದ್ದಿ ಹರಡಿದ್ದ ಸಂಸದ ತೇಜಸ್ವಿ ಸೂರ್ಯ ಮತ್ತು ರಾಹುಲ್ ಗಾಂಧಿ ಬಗ್ಗೆ ಅವಹೇಳನಕರ ಹೇಳಿಕೆ ನೀಡಿದ್ದ ಯತ್ನಾಳರ ವಿರುದ್ಧದ ಪ್ರಕರಣರವನ್ನು ನ್ಯಾಯಾಲಯ ರದ್ದುಪಡಿಸಿತು. ಸಮಾಜದಲ್ಲಿ ಕೋಮುದ್ವೇಷ ಹರಡುವುದರಲ್ಲಿ ತೇಜಸ್ವಿ ಸೂರ್ಯ ಆಗಾಗ ಸುದ್ದಿಯಲ್ಲಿರುವ ಯುವ ನಾಯಕ. 2022ರಲ್ಲಿ ಸಾಲಬಾಧೆಯಿಂದ ಹಾವೇರಿಯ ಆತ್ಮಹತ್ಯೆ ರೈತ ಮಾಡಿಕೊಂಡ ವಿಚಾರವನ್ನು “ಪಹಣಿಯಲ್ಲಿ ವಕ್ಫ್ ಎಂದು ನಮೂದಾಗಿದ್ದ ಕಾರಣಕ್ಕೆ ರೈತರ ಆತ್ಮಹತ್ಯೆ ಮಾಡಿಕೊಂಡಿದ್ದ” ಎಂಬ ಫೇಕ್ ನ್ಯೂಸ್ ಟ್ವೀಟ್ ಮಾಡಿ ಕಿಚ್ಚು ಹಚ್ಚುವ ಪ್ರಯತ್ನ ತೇಜಸ್ವಿ ಸೂರ್ಯ ಮಾಡಿದ್ದರು. ಆದರೆ ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ರೈತನ ಕುಟುಂಬದವರು ಕೊಟ್ಟ ದೂರಿನಲ್ಲಿ ಉಲ್ಲೇಖವಾಗಿರುವುದನ್ನು ಎಸ್‌ಪಿಯವರ ಮಾಧ್ಯಮಗಳ ಮುಂದೆ ಬಹಿರಂಗಪಡಿಸಿ ಸ್ಪಷ್ಟನೆ ನೀಡಿದ ನಂತರ ಸಂಸದರು ಟ್ವೀಟ್ ಡಿಲಿಟ್ ಮಾಡಿದ್ದರು.
ಬಾಯಿ ತೆರೆದರೆ ಕಾಂಗ್ರೆಸ್ ನಾಯಕರು, ಮುಸ್ಲಿಂ ಸಮುದಾಯದ ಬಗ್ಗೆ ದ್ವೇಷ ಕಾರುವ ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ರಾಹುಲ್ ವಿರುದ್ಧ ಆಕ್ಷೇಪಾರ್ಹ ಪದಪ್ರಯೋಗ ಮಾಡಿದ್ದರು. ದ್ವೇಷದ ಮಾತುಗಳು, ಕೋಮುಪ್ರಚೋದಕ ಮಾತುಗಳಿಗೆ ನ್ಯಾಯಾಲಯ ಬ್ರೇಕ್ ಹಾಕದಿದ್ದರೆ ಬೇರೆ ಯಾರು ಹಾಕಬೇಕು?

ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಐತ್ತೂರಿನ ಮರ್ಧಾಳದ ಬದ್ರಿಯಾ ಜುಮ್ಮಾ ಮಸೀದಿಯ ಆವರಣದೊಳಗೆ ಸೆ. 24ರಂದು ನುಗ್ಗಿದ ಇಬ್ಬರು ಹಿಂದೂಗಳಾದ ಕೀರ್ತನ್ ಕುಮಾರ್ ಮತ್ತು ಸಚಿನ್ ಕುಮಾರ್ ಜೈ ಶ್ರೀರಾಮ್ ಘೋಷಣೆ ಕೂಗಿದ್ದಲ್ಲದೇ, “ಬ್ಯಾರಿಗಳೇ ನಿಮ್ಮನ್ನು ಬದುಕಲು ಬಿಡಲ್ಲ” ಎಂದು ಬೆದರಿಕೆ ಹಾಕಿದ್ದರು. ಮಸೀದಿಯ ಆಡಳಿತ ಮಂಡಲಿ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು. ಪ್ರಕರಣ ರದ್ದು ಕೋರಿ ಆರೋಪಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣವನ್ನು ಕೇವಲ ಒಂದು ತಿಂಗಳೊಳಗೆ ಅ.16ರಂದು ಹೈಕೋಟ್ ರದ್ದುಪಡಿಸಿದೆ.
“ದೂರುದಾರರು ಖುದ್ದು ಹೇಳಿರುವಂತೆ ಆ ಭಾಗದಲ್ಲಿ ಹಿಂದೂಗಳು ಮತ್ತು ಮುಸಲ್ಮಾನರು ಒಟ್ಟಾಗಿ ಸೌರ್ಹಾದತೆಯಿಂದ ಬದುಕುತ್ತಿದ್ದಾರೆ. ಆದರೆ ಅರ್ಜಿದಾರರ ವಿರುದ್ಧ ಐಪಿಸಿ ಸೆಕ್ಷನ್ 295 ಎ ( ಧರ್ಮ, ಧಾರ್ಮಿಕ ಭಾವನೆ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವುದು) ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಜೈ ಶ್ರೀರಾಮ ಎಂದು ಘೋಷಣೆ ಕೂಗುವುದು ಧಾರ್ಮಿಕ ಭಾವನೆಗೆ ಹೇಗೆ ಧಕ್ಕೆಯಾಗುತ್ತದೆ ಎಂದು ಅರ್ಥವಾಗುತ್ತಿಲ್ಲ. ಅಲ್ಲದೆ, ಪ್ರಕರಣದಲ್ಲಿ ಯಾವುದೇ ಅಪರಾಧ ಕಂಡು ಬರುತ್ತಿಲ್ಲ. ಹೀಗಿರುವಾಗ ಅರ್ಜಿದಾರರ ವಿರುದ್ಧ ಮುಂದಿನ ಪ್ರಕ್ರಿಯೆಗಳಿಗೆ ಅನುಮತಿ ನೀಡುವುದು ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗುತ್ತದೆ” ಎಂದು ಪೀಠ ಅಭಿಪ್ರಾಯಪಟ್ಟಿದೆ. ಮಸೀದಿಯವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಡಿ 16ರಂದು ಅರ್ಜಿಯ ವಿಚಾರಣೆ ನಡೆಯಲಿದೆ.
ಒಂದು ಧರ್ಮದ ಪ್ರಾರ್ಥನಾ ಮಂದಿರದ ಆವರಣದೊಳಗೆ ಹೋಗಿ ಮತ್ತೊಂದು ಧರ್ಮದ ಘೋಷಣೆ ಕೂಗುವುದರಲ್ಲಿ ಘರ್ಷಣೆಯ ಉದ್ದೇಶ, ಕೆಣಕುವ ಉದ್ದೇಶ ಬಿಟ್ಟರೆ ಏನಿದ್ದೀತು? ಇದೇ ರೀತಿ ಹಿಂದೂಗಳ ದೇವಸ್ಥಾನದ ಆವರಣದೊಳಗೆ ಮುಸ್ಲಿಮರು ಪ್ರವೇಶಿಸಿ ಅಲ್ಲಾನ ಘೋಷಣೆ ಕೂಗಿದರೆ ಆಗಲೂ ಯಾರ ಭಾವನೆಗೂ ಧಕ್ಕೆ ಆಗುವುದಿಲ್ಲ ಎನ್ನಬಹುದೇ?
ಕಲ್ಲಡ್ಕ ಪ್ರಭಾಕರ ಭಟ್ಟ ಎಂಬ ಆರೆಸ್ಸೆಸ್ ಮುಖಂಡ ಶ್ರೀರಂಗಪಟ್ಟಣದಲ್ಲಿ ಮುಸ್ಲಿಂ ಮಹಿಳೆಯರ ಬಗ್ಗೆ ಅವಮಾನಕರ ಹೇಳಿಕೆ ನೀಡಿದ ಪ್ರಕರಣದಲ್ಲಿ ಆತನ ಬಂಧನಕ್ಕೆ ತಡೆಯಾಜ್ಞೆ, ಜಾಮೀನು ದೊರೆತಿದೆ. ಮಂಗಳೂರಿನ ವಿಹಿಂಪ ಮುಖಂಡ ದ್ವೇಷ ಭಾಷಣಕಾರ ಶರಣ್ ಪಂಪ್ವೆಲ್ ತುಮಕೂರಿನಲ್ಲಿ ಮುಸ್ಲಿಮರ ವಿರುದ್ಧ ದ್ವೇಷದ ಹೇಳಿಕೆ ನೀಡಿದ ಪ್ರಕರಣದಲ್ಲೂ ನಿರೀಕ್ಷಣಾ ಜಾಮೀನು ದೊರೆಯಿತು. ಬಿಜೆಪಿ ಶಾಸಕರಾದ ಹರೀಶ್ ಪೂಂಜಾ, ಸಿ ಟಿ ರವಿ, ಡಾ ಅಶ್ವತ್ಥನಾರಾಯಣ ವಿರುದ್ಧದ ಪ್ರಕರಣಗಳಲ್ಲೂ ನ್ಯಾಯಾಂಗ ಉದಾರವಾಗಿ ವರ್ತಿಸಿದಂತಿದೆ. ಕೆ ಎಸ್ ಈಶ್ವರಪ್ಪ ವಿರುದ್ಧವೂ ದ್ವೇಷ ಭಾಷಣ ಪ್ರಕರಣ ದಾಖಲಾಗಿದೆ. ಕರ್ನಾಟಕದಲ್ಲಿ ದ್ವೇಷಭಾಷಣ ಮಾಡಿದ ಯಾವೊಬ್ಬ ಬಿಜೆಪಿ ಮುಖಂಡರನ್ನೂ ಬಂಧಿಸಲಾಗುತ್ತಿಲ್ಲ. ದ್ವೇಷ ಭಾಷಣಕ್ಕೆ ಕಡಿವಾಣ ಬಿದ್ದಿಲ್ಲ. ಆದರೆ ಬಿಜೆಪಿಯೇತರ ಪಕ್ಷಗಳ ನಾಯಕರ ಮೇಲೆ ಕ್ಷುಲ್ಲಕ ಪ್ರಕರಣಗಳನ್ನೂ ವರ್ಷಗಳ ಕಾಲ ನಡೆಸಲಾಗುತ್ತದೆ. ಎರಡು ವರ್ಷಗಳ ಹಿಂದೆ ಐದು ವರ್ಷಗಳ ಹಿಂದಿನ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರ ಸಂಸದ ಸ್ಥಾನವನ್ನು ಅಮಾನತು ಮಾಡಿದ್ದನ್ನು ದೇಶ ನೋಡಿದೆ.

ಬದುಕಿಲ್ಲದ ಸಾವರ್ಕರ್ ಟೀಕೆಗೆ ರಾಹುಲ್ ಗಾಂಧಿಗೆ ಸಮನ್ಸ್!
2022ರ ಡಿಸೆಂಬರ್ 17ರಂದು ಮಹಾರಾಷ್ಟ್ರದ ಅಕೋಲಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಾವರ್ಕರ್ ಅವರ ಬಗ್ಗೆ ಅವಮಾನಕಾರಿ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ವಕೀಲ ನೃಪೇಂದ್ರ ಪಾಂಡೆ ದೂರು ದಾಖಲಿಸಿದ್ದರು. ಆ ಪ್ರಕರಣ ಇನ್ನೂ ಜೀವಂತವಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು 2025ರ ಜನವರಿ 10ರಂದು ವಿಚಾರಣೆಗೆ ಹಾಜರಾಗುವಂತೆ ಲಕ್ನೋ ಹೈಕೋರ್ಟ್ ಸಮನ್ಸ್ ನೀಡಿದೆ.
ಅಷ್ಟಕ್ಕೂ ರಾಹುಲ್ ಏನು ಹೇಳಿದ್ದರು ಗೊತ್ತೇ? ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ರಾಹುಲ್ ಗಾಂಧಿ ಅವರು, “ಸಾವರ್ಕರ್ ವಸಾಹತುಶಾಹಿ ಅವಧಿಯಲ್ಲಿ ಬ್ರಿಟಿಷರೊಂದಿಗೆ ಸಹಕರಿಸಿದ್ದರು. ಬ್ರಿಟಿಷರಿಗೆ ಪತ್ರಗಳನ್ನು ಬರೆದು, ಅವರ ಪರವಾಗಿ ಉಳಿಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಭಯದಿಂದ ಕ್ಷಮೆಯಾಚಿಸುವುದಾಗಿಯೂ ಹೇಳಿದ್ದರು. ಈ ಮೂಲಕ ಸಾವರ್ಕರ್ ಮಹಾತ್ಮ ಗಾಂಧಿ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರಿಗೆ ದ್ರೋಹ ಮಾಡಿದ್ದಾರೆ” ಎಂದು ಆರೋಪಿಸಿದ್ದರು. ಇದು ದ್ವೇಷವನ್ನು ಹರಡುವ ಪ್ರಯತ್ನದ ಭಾಗವಾಗಿದೆ ಎಂದು ಪಾಂಡೆ ವಾದಿಸಿದ್ದರು. ಕೋರ್ಟ್ ಈ ವಾದವನ್ನು ಮಾನ್ಯ ಮಾಡಿದೆ. ರಾಹುಲ್ ಹೇಳಿರುವ ವಿಷಯಕ್ಕೆ ದಾಖಲೆಗಳಿವೆ, ಸಾವರ್ಕರ್ ಬರೆದ ಪತ್ರಗಳ ಪುರಾವೆಯಿದೆ.
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರಿಗೆ ಅನ್ವಯವಾಗುವ ಅವೇ ಕಾನೂನುಗಳು ಸಂಸದ ತೇಜಸ್ವಿ ಸೂರ್ಯ, ಶಾಸಕ ಯತ್ನಾಳ್, ಅಮಿತ್ ಮಾಳವೀಯ ಅವರಿಗೆ ಯಾಕೆ ಅನ್ವಯ ಆಗುವುದಿಲ್ಲ?

ಉಮರ್ ಖಾಲಿದ್, ಸಿದ್ದಿಕಿ ಕಪ್ಪನ್ ಮಾಡಿರುವ ತಪ್ಪೇನು?
ದೆಹಲಿ ಗಲಭೆಯ ಪಿತೂರಿ ಆರೋಪದಲ್ಲಿ ನಾಲ್ಕೂವರೆ ವರ್ಷಗಳಿಂದ ಜೆಎನ್‌ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ವಿಚಾರಣಾಧೀನ ಕೈದಿಯಾಗಿ ದೆಹಲಿಯ ಜೈಲಿನಲ್ಲಿದ್ದಾರೆ. ಅವರ ಟ್ರಯಲ್ ಕೂಡ ನಡೆಸಿಲ್ಲ. 2020ರಲ್ಲಿ, ಅಂದ್ರೆ ನಾಲ್ಕು ವರ್ಷಗಳ ಹಿಂದೆ ಉತ್ತರಪ್ರದೇಶದ ಹಾಥರಸ್ ನಲ್ಲಿ ದಲಿತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ವರದಿಗೆ ಹೋದ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರ ಮೇಲೆ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿ ಉತ್ತರಪ್ರದೇಶದಲ್ಲಿ ಜೈಲಿನಲ್ಲಿಡಲಾಗಿತ್ತು. ಎರಡು ವರ್ಷಗಳ ನಂತರ 2023 ಫೆಬ್ರವರಿನಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಪ್ರಕರಣ ರದ್ದಾಗಿಲ್ಲ. ಅತ್ಯಾಚಾರ ಪ್ರಕರಣದ ವರದಿ ಮಾಡಲು ಹೋದ ಸಿದ್ದಿಕಿ ಅವರಿಗೆ ನಿಷೇಧಿತ ಸಂಘಟನೆಯ ನಂಟು ಎಲ್ಲಿಂದ ಬರಬೇಕು? ಹೀಗೆ ಅನ್ಯಾಯವಾಗಿ ದುರುದ್ದೇಶದಿಂದ ದಾಖಲಿಸುವ ಪ್ರಕರಣಗಳಲ್ಲಿ ಕೋರ್ಟ್‌ಗಳೂ ʼಬಲಿಪಶುʼಗಳ ಪರ ನಿಲ್ಲದಿದ್ದರೆ ಹೇಗೆ?
ಇದನ್ನೂ ಓದಿ ಈ ದಿನ ಸಂಪಾದಕೀಯ | ಹೆಚ್ಚುತ್ತಿರುವ ನಿರುದ್ಯೋಗ ಬಿಕ್ಕಟ್ಟು ನಿವಾರಣೆಗೆ ಆಗಬೇಕಾದ್ದು ಬಹಳಷ್ಟಿದೆ

ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.
ಇವತ್ತಿನ ಪ್ರಜಾವಾಣಿಯಲ್ಲಿ ಪ್ರಕಟವಾದ ವರದಿಗಳನ್ನು ಎರಡೆರಡು ಬಾರಿ ಓದಿದೆ. ಕಡೆಗೆ ಇಲ್ಲಿನ ನಿಮ್ಮ ಲೇಖನ ಓದಿದಾಗ ಖಚಿತವಾಯಿತು. ಧನ್ಯವಾದಗಳು ನಿಮಗೆ.