ಅಂಗನವಾಡಿಗಳು ಕೇವಲ ಅಕ್ಷರ ಕಲಿಯುವ ಜಾಗಗಳಲ್ಲ. ಅವು ಹಸುಳೆಗಳ ಮನದಲ್ಲಿ ಸಮಾನತೆಯ ಬೀಜ ಬಿತ್ತುವ ತಳಹದಿ. ಮಕ್ಕಳ ಮನಸ್ಸಲ್ಲಿ ಜಾತಿಯ ವಿಷ ಬೀಜ ಬಿತ್ತುವ ಕೆಲಸ ನಿಲ್ಲದಿದ್ದರೆ, ಭವಿಷ್ಯದಲ್ಲಿ ದೇಶದ ಸ್ವಾಸ್ಥ್ಯ ಕೆಡುವುದು ಖಂಡಿತ. ಸರ್ಕಾರ, ಸಮಾಜ ಮತ್ತು ಪ್ರತಿಯೊಬ್ಬ ನಾಗರಿಕನೂ ಸೇರಿ ಈ ಜಾತೀಯತೆಯ ಅದೃಶ್ಯ ಗೋಡೆಗಳನ್ನು ಧ್ವಂಸಗೊಳಿಸಬೇಕಿದೆ. ಆಗ ಮಾತ್ರ ಬುದ್ಧ, ಬಸವ, ಅಂಬೇಡ್ಕರ್ ಕನಸು ಕಂಡ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ.
ಮಗು ಹುಟ್ಟಿದಾಗ ಯಾವುದೇ ಜಾತಿ, ಧರ್ಮದ ಅರಿವಿರುವುದಿಲ್ಲ. ಈ ಜಾತಿ ಗೋಡೆ ದಾಟಿ ಬೆಳೆಯಬೇಕಾಗಿರುವುದು ಮುಖ್ಯ. ಎಲ್ಲ ಮಕ್ಕಳೂ ಒಂದೇ ಎಂಬ ಸದಾಶಯದೊಂದಿಗೆ, ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳ ಬಡ ಮಕ್ಕಳಿಗೆ ಪೌಷ್ಟಿಕ ಆಹಾರ ಹಾಗೂ ಆರಂಭಿಕ ಶಿಕ್ಷಣ ನೀಡಲು ಸರ್ಕಾರ ‘ಅಂಗನವಾಡಿ’ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಆದರೆ ಪ್ರಸ್ತುತ ಈ ಹಸುಳೆಗಳ ಊಟ- ಆಟದ ಅಂಗಳಗಳಲ್ಲಿ ಜಾತಿಭೂತದ ಅದೃಶ್ಯ ಗೋಡೆಗಳು ಎದ್ದಿವೆ. ಕೋಮಲ ಮನಸ್ಸಿನ ಹಸುಳೆಗಳ ಆಟದ ಅಂಗಳ, ಪೌಷ್ಟಿಕಾಂಶದ ಆಹಾರ ಉಣಬಡಿಸುವ ಕೇಂದ್ರಗಳಾಗಬೇಕಿದ್ದ ಅಂಗನವಾಡಿಗಳು ಇಂದು ಜಾತೀಯತೆಯ ವಿಷವರ್ತುಲಕ್ಕೆ ಸಿಲುಕುತ್ತಿವೆ. ಜಾತಿಭೂತವು ಈ ಅಂಗನಾಡಿಗಳನ್ನು ಮಾತ್ರವಲ್ಲ ಇಡೀ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿವೆ.
ದೇಶ, ರಾಜ್ಯ ಎಷ್ಟೇ ಅಭಿವೃದ್ಧಿಯಾದರೂ ಹಲವು ಅಂಗನವಾಡಿಗಳಲ್ಲಿ ಇಂದಿಗೂ ಆಟ-ಊಟದ ವೇಳೆ ಎಲ್ಲ ಮಕ್ಕಳು ಜತೆಯಾಗುವುದಿಲ್ಲ. ಬುಡಕಟ್ಟು ಸಮುದಾಯ ಅಥವಾ ದಲಿತ ಮಕ್ಕಳು ಕೊಂಚ ದೂರವೇ ನಿಂತು ಉಳಿದ ಮಕ್ಕಳ ಆಟವನ್ನು ನೋಡುವ ಅಥವಾ ತಾವಷ್ಟೇ ಆಡುವ ದೃಶ್ಯಗಳನ್ನು ಇಂದಿಗೂ ನಾವು ಹಲವು ಅಂಗನವಾಡಿಗಳಲ್ಲಿ ನೋಡಬಹುದು. ಊಟದ ಸಮಯಲ್ಲಂತೂ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಜಾತಿ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳುವ ಮುನ್ನವೇ ಆ ಹಸುಳೆಗಳು “ನಾವು ಅವರನ್ನು ಮುಟ್ಟಬಾರದು” “ನಾವು ಅವರಿಂದ ಮುಟ್ಟಿಸಿಕೊಳ್ಳಬಾರದು” ಎಂಬ ನೀಚ ಅಸ್ಪೃಶ್ಯತೆ ಪಾಲಿಸುವ ಹಂತಕ್ಕೆ ಅಂಗನವಾಡಿಗಳು ಮಕ್ಕಳನ್ನು ಬೆಳೆಸುತ್ತಿವೆ.
ಇದನ್ನು ಓದಿದ್ದೀರಾ? ಬೀದರ್ | ಶಿಕ್ಷಕಿ ‘ದಲಿತೆ’ ಎಂಬ ಕಾರಣಕ್ಕೆ ಅಂಗನವಾಡಿ ಬಹಿಷ್ಕರಿಸಿದ ʼಪ್ರಬಲ ಜಾತಿʼ ಪೋಷಕರು
ಕೆಲವು ಅಂಗನವಾಡಿಗಳಲ್ಲಿ ಎಲ್ಲ ಮಕ್ಕಳಿಗೆ ಅನ್ನ, ಬೇಳೆಯನ್ನು ಬಡಿಸಿದರೆ, ಕೆಲವು ‘ದೊಡ್ಡ’ ಜಾತಿ ಎಂದೆಣಿಸಿಕೊಂಡ ಜಾತಿಗೆ ಸೇರಿದವರ ಮಕ್ಕಳು ಮಾತ್ರ ಮನೆಯಿಂದ ಊಟ ತರುತ್ತಾರೆ. ಕಾರಣ ಇಷ್ಟೇ… ಅಲ್ಲಿರುವ ಬುಡಕಟ್ಟು, ದಲಿತ ಸಮುದಾಯಕ್ಕೆ ಸೇರಿದ ಅಂಗನವಾಡಿ ಸಹಾಯಕಿ ತಯಾರಿಸಿದ ಆಹಾರವನ್ನು ತಿನ್ನಬಾರದು ಎಂಬ ಅಸ್ಪೃಶ್ಯತೆ! ಹೀಗೆ ರಾಜ್ಯದ ವಿವಿಧ ಭಾಗಗಳಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ ಇಂದಿಗೂ ದಲಿತ ಮಕ್ಕಳನ್ನು ಮತ್ತು ಕಾರ್ಯಕರ್ತೆಯರನ್ನು ಪ್ರತ್ಯೇಕವಾಗಿರಿಸುವ, ಅಸ್ಪೃಶ್ಯತೆ ಆಚರಿಸುವ ಘಟನೆಗಳು ವರದಿಯಾಗುತ್ತಲೇ ಇವೆ.
ದಲಿತ ಸಹಾಯಕಿ ತಯಾರಿಸಿದ ಊಟ ತಿನ್ನದ ಮಕ್ಕಳು
ದಲಿತರು ಎಂಬ ಕಾರಣಕ್ಕೆ ಅಂಗನಾಡಿಗಳಲ್ಲಿ ಜಾತೀಯತೆಯ ಪಿಡುಗು ಕೇವಲ ಮಕ್ಕಳಿಗೆ ಮಾತ್ರ ಸೀಮಿತವಾಗಿಲ್ಲ. ಅಲ್ಲಿ ಕೆಲಸ ಮಾಡುವ ದಲಿತ ಸಮುದಾಯದ ಮಹಿಳೆಯರನ್ನೂ ಈ ಜಾತಿಭೂತ ಬಿಟ್ಟಿಲ್ಲ. ಒಂದು ವೇಳೆ ಅಂಗನವಾಡಿಗೆ ದಲಿತ ಸಮುದಾಯದ ಶಿಕ್ಷಕಿ, ಸಹಾಯಕಿ ನೇಮಕಗೊಂಡರೆ, ಆ ಕೇಂದ್ರಕ್ಕೆ ಮೇಲ್ಜಾತಿ ಎನಿಸಿಕೊಂಡವರ ಪೋಷಕರು ತಮ್ಮ ಮಕ್ಕಳನ್ನು ಕಳುಹಿಸುವುದನ್ನು ನಿಲ್ಲಿಸುವ ಘಟನೆಗಳು ನಡೆಯುತ್ತಿವೆ. “ಅವರು ದಲಿತರು, ಅವರು ಮುಟ್ಟಿದ ಆಹಾರವನ್ನು ನಮ್ಮ ಮಕ್ಕಳು ತಿನ್ನಬಾರದು” ಎಂಬ ಮೊಂಡು ವಾದವನ್ನು ಮುಂದಿಡಲಾಗುತ್ತಿದೆ. ಇನ್ನು ದಲಿತರು ವಾಸಿಸುವ ಓಣಿ ಅಥವಾ ಕಾಲೋನಿಗಳಲ್ಲಿ ಅಂಗನವಾಡಿ ಕೇಂದ್ರಗಳಿದ್ದರೆ, ಅಲ್ಲಿಗೆ ಬರಲು ಮೇಲ್ಜಾತಿಯವರು ನಿರಾಕರಿಸುತ್ತಾರೆ. ಇದರಿಂದಾಗಿ ಕೇಂದ್ರಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಒತ್ತಡ ಹೇರಿದ ಉದಾಹರಣೆಗಳೂ ಇವೆ.
ಅಂಗನವಾಡಿಗಳಲ್ಲಿ ದಲಿತ ಸಮುದಾಯದ ಮಕ್ಕಳಿಗೆ ನೀಡುವ ಆಹಾರ ಮತ್ತು ನೀರಿನಲ್ಲಿ ತಾರತಮ್ಯ ಎಸಗುವ, ಅಸ್ಪೃಶ್ಯತೆಯ ಕ್ರೂರ ರೂಪ ಇಂದಿಗೂ ಇದೆ. ಕೆಲವು ಹಳ್ಳಿಗಳಲ್ಲಿ ಮೇಲ್ಜಾತಿಯ ಮಕ್ಕಳು ಒಂದು ಕಡೆ ಕುಳಿತು ಊಟ ಮಾಡಿದರೆ, ದಲಿತ ಸಮುದಾಯದ ಮಕ್ಕಳನ್ನು ಪ್ರತ್ಯೇಕವಾಗಿ ಅಥವಾ ದೂರದಲ್ಲಿ ಕುಳ್ಳಿರಿಸುವ ಘಟನೆಗಳು ನಡೆದಿವೆ. ದಲಿತ ಮಕ್ಕಳಿಗೆ ಪ್ರತ್ಯೇಕ ತಟ್ಟೆಗಳನ್ನು ಇಡುವುದು ಅಥವಾ ಅವರ ತಟ್ಟೆಗಳನ್ನು ಅವರೇ ತೊಳೆದು ಇಡಬೇಕು ಎಂಬ ಕಾನೂನುಬಾಹಿರ ನಿಯಮಗಳನ್ನು ಕೆಲವು ಅಂಗನವಾಡಿಗಳಲ್ಲಿ ಜಾರಿಗೊಂಡಿವೆ. ಇವೆಲ್ಲವೂ ಮುಖ್ಯವಾಗಿ ಈ ಮುಗ್ಧ ಮನಸ್ಸುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಬಾಲ್ಯದಲ್ಲೇ ಈ ಮಕ್ಕಳ ಮನಸ್ಸಿನಲ್ಲಿ ಕೀಳರಿಮೆ ಬಿತ್ತಲಾಗುತ್ತಿದೆ. ಮಕ್ಕಳು ಬಾಲ್ಯದಲ್ಲೇ ಅನುಭವಿಸುವ ಇಂತಹ ತಾರತಮ್ಯಗಳು ಅವರ ಕೋಮಲ ಮನಸ್ಸಿನ ಮೇಲೆ ಆಳವಾದ ಗಾಯವನ್ನುಂಟು ಮಾಡುತ್ತಿವೆ.
ದೇಶಾದ್ಯಂತ ಅಂಗನವಾಡಿಗಳ ಹೊಕ್ಕ ಜಾತಿಭೂತ
ಅಷ್ಟಕ್ಕೂ ಇದು ಒಂದೆರಡು ಅಂಗನವಾಡಿಗಳಲ್ಲಿ ನಡೆಯುವ ಘಟನೆಗಳಲ್ಲ. ಬದಲಾಗಿ ದೇಶಾದ್ಯಂತ ಅನೇಕ ಅಂಗನವಾಡಿಗಳಲ್ಲಿ ನಡೆಯುವ ನೀಚ ಆಚರಣೆ. ಸಮಾನತೆ, ಘನತೆ, ಪೋಷಣೆ ಮತ್ತು ಕಲಿಕೆಗಾಗಿ ಇರುವ ಅಂಗನವಾಡಿಗಳು ಇಂದು ಮಕ್ಕಳಿಗೆ ಜಾತಿ ವ್ಯವಸ್ಥೆಯನ್ನು ಕಲಿಸುವ ಕೇಂದ್ರಗಳಾಗಿವೆ. ಮಕ್ಕಳು ವರ್ಣಮಾಲೆಯನ್ನು ಕಲಿಯುವ ಮುನ್ನ, ತಾನು ಯಾರೊಂದಿಗೆ ಕೂರಬೇಕು/ಕೂರಬಾರದು, ಯಾರನ್ನು ಮುಟ್ಟಬಹುದು/ಮುಟ್ಟಬಾರದು, ಯಾರು ತಂದ ಅಥವಾ ತಯಾರಿಸಿದ ಆಹಾರ ತಿನ್ನಬಹುದು/ತಿನ್ನಬಾರದು ಎಂಬ ಸಮಾಜದ ಅಧಮ ಸಂಪ್ರದಾಯವನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ ಎಂಬುದು ಆತಂಕಕಾರಿ.
ಇದನ್ನು ಓದಿದ್ದೀರಾ? ಬೆಂಗಳೂರು ಗ್ರಾ. | ಅಂಗನವಾಡಿಗೆ ದಲಿತ ಶಿಕ್ಷಕಿಗೆ ಪ್ರವೇಶ ನಿರಾಕರಣೆ; 10 ತಿಂಗಳಿಂದ ಹೊರಗೆ ನಿಲ್ಲುತ್ತಿರುವ ಶಿಕ್ಷಕಿ
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹತ್ಯಾಲ್ ಗ್ರಾಮದಲ್ಲಿ ದಲಿತ ಮಹಿಳೆಯೊಬ್ಬರನ್ನು ಅಂಗನವಾಡಿ ಸಹಾಯಕರನ್ನಾಗಿ ನೇಮಿಸಿದಾಗ, ಮೇಲ್ವರ್ಗದ ಜನರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸದೆ ಬಹಿಷ್ಕಾರ ಹಾಕಿದ್ದರು. ರಾಜಸ್ಥಾನದಲ್ಲಿ ಮೇಲ್ಜಾತಿ ಎನಿಸಿಕೊಂಡ ವಿದ್ಯಾರ್ಥಿಗಳಿಗಾಗಿ ಇಟ್ಟ ನೀರಿನ ಪಾತ್ರೆ ಮುಟ್ಟಿದ್ದಕ್ಕೆ ಒಂಬತ್ತು ವರ್ಷದ ದಲಿತ ಬಾಲಕನನ್ನು ಥಳಿಸಿ ಕೊಲೆ ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿ ಮಧ್ಯಾಹ್ನದ ಊಟದ ಸಮಯದಲ್ಲಿ ದಲಿತ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಕೂರಿಸಿರುವ ಘಟನೆಗಳು ಹಲವು ಬಾರಿ ವರದಿಯಾಗಿದೆ. ತಮಿಳುನಾಡಿನಲ್ಲಿ, ದಲಿತ ಮಕ್ಕಳಿಂದ ಕೊಠಡಿಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡಿಸಿರುವುದು ಬಹಿರಂಗಗೊಂಡಿವೆ. ಇಂತಹ ಘಟನೆಗಳು ನಮಗೆ ಯಥೇಚ್ಛವಾಗಿ ಸಿಗುತ್ತವೆ.
ಡಿಜಿಟಲ್ ಪ್ರಗತಿಯೊಂದಿಗೆ ಬೆಳೆಯುತ್ತಿರುವ ಜಾತಿ ಗೋಡೆ
ದೇಶದಲ್ಲಿ ಶಿಕ್ಷಣ ವಲಯದಲ್ಲಿ ಹಲವು ಡಿಜಿಟಲ್ ಪ್ರಗತಿಗಳಾಗಿವೆ. ಡಿಜಿಟಲ್ ತರಗತಿ ಕೊಠಡಿಗಳಿವೆ. ದಾಖಲಾತಿ ದರಗಳೂ ಹೆಚ್ಚಾಗುತ್ತಿವೆ. ಹಳ್ಳಿಗಳಲ್ಲಿ ಈಗ ಸ್ಮಾರ್ಟ್‌ಫೋನ್‌ಗಳು, ಇಂಟರ್ನೆಟ್ ಸಂಪರ್ಕ ಮತ್ತು ಡಿಜಿಟಲ್ ಕಲಿಕಾ ವೇದಿಕೆಗಳಿವೆ. ಆದರೆ ಇಂದಿಗೂ ಅನೇಕ ಮಕ್ಕಳು ಮುಕ್ತವಾಗಿ ಜತೆಯಾಗಿ ಕೂತು ಊಟವನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಮಾನತೆ ಇಲ್ಲದೆ ಆಧುನಿಕತೆ ಎಂದಿಗೂ ಅಪೂರ್ಣವಲ್ಲವೆ?
ಈ ಅದೃಶ್ಯ ಗೋಡೆಗಳನ್ನು ಕೆಡವುವುದಾದರೂ ಹೇಗೆ?
ದೇಶದಲ್ಲಿ ಜಾತಿ ಮುಕ್ತ ಸಮಾಜ ನಿರ್ಮಾಣವಾಗಬೇಕಾದರೆ, ಅದರ ಆರಂಭ ಮಕ್ಕಳ ಆಟದ ಅಂಗಳದಿಂದಲೇ ಆಗಬೇಕು. ಅಂಗನವಾಡಿಗಳಲ್ಲಿ ಜಾತೀಯತೆ ಅಥವಾ ಅಸ್ಪೃಶ್ಯತೆ ಆಚರಿಸುವವರ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಕಠಿಣ ಮೊಕದ್ದಮೆ ದಾಖಲಿಸುವುದು ಮುಖ್ಯ. ಅದಕ್ಕೂ ಹೆಚ್ಚಾಗಿ ತಾರತಮ್ಯ ಮಾಡುವ ಪೋಷಕರಿಗೂ ಕಾನೂನು ಪಾಠ ಕಲಿಸಬೇಕು. ಇಲಾಖೆಯ ಉನ್ನತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುವ ಕ್ರಮಗಳೂ ಹೆಚ್ಚಾಗಬೇಕಿದೆ. ಆದರೆ ದುರಾದೃಷ್ಟ ಈ ಉನ್ನತ ಅಧಿಕಾರಿಗಳೂ ಜಾತಿ ಸಂಕೋಲೆಯನ್ನು ಮೈತುಂಬಿಕೊಂಡು, ಹೊತ್ತು ಓಡಾಡುತ್ತಿದ್ದಾರೆ!
ಮುಖ್ಯವಾಗಿ ಅಂಗನವಾಡಿಗಳು ಕೇವಲ ಅಕ್ಷರ ಕಲಿಯುವ ಜಾಗಗಳಲ್ಲ. ಅವು ಹಸುಳೆಗಳ ಮನದಲ್ಲಿ ಸಮಾನತೆಯ ಬೀಜ ಬಿತ್ತುವ ತಳಹದಿ. ಮಕ್ಕಳ ಮನಸ್ಸಲ್ಲಿ ಜಾತಿಯ ವಿಷ ಬೀಜ ಬಿತ್ತುವ ಕೆಲಸ ನಿಲ್ಲದಿದ್ದರೆ, ಭವಿಷ್ಯದಲ್ಲಿ ದೇಶದ ಸ್ವಾಸ್ಥ್ಯ ಕೆಡುವುದು ಖಂಡಿತ. ಸರ್ಕಾರ, ಸಮಾಜ ಮತ್ತು ಪ್ರತಿಯೊಬ್ಬ ನಾಗರಿಕನೂ ಸೇರಿ ಈ ಜಾತೀಯತೆಯ ಅದೃಶ್ಯ ಗೋಡೆಗಳನ್ನು ಧ್ವಂಸಗೊಳಿಸಬೇಕಿದೆ. ಆಗ ಮಾತ್ರ ಬುದ್ಧ, ಬಸವ, ಅಂಬೇಡ್ಕರ್ ಕನಸು ಕಂಡ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ.
ಆಧಾರ : ಡೆಕ್ಕನ್ ಹೆರಾಲ್ಡ್ ಲೇಖನ- ಸುಧಾ ಶ್ರೀನಿವಾಸ ರೆಡ್ಡಿ
https://www.deccanherald.com/india/karnataka/invisible-walls-caste-in-early-learning-spaces-4022004

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




