SIR ಬಂದಿದ್ದು ಯಾಕೆ? ಮತಪಟ್ಟಿಯಲ್ಲಿ ನಿಮ್ಮ ಹೆಸರು ಉಳಿಸಿಕೊಳ್ಳಲು ಏನೆಲ್ಲಾ ಮಾಡಬೇಕು? ಇಲ್ಲಿದೆ ಡೀಟೇಲ್‌

Date:

ಭಾರತ ದೇಶದ ವಿಶೇಷತೆಯೆಂದರೆ ಸ್ವಾತಂತ್ರ್ಯ ಚಳವಳಿಯ ಭಾಗವಾಗಿ ಬಂದ ಸಂವಿಧಾನ ರಚನಾ ಸಭೆಯು ಸಂವಿಧಾನ ಜಾರಿಯಾದ ದಿನದಿಂದಲೇ ಯಾವುದೇ ತಾರತಮ್ಯ ಇಲ್ಲದೇ ಈ ದೇಶದ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಿತು. ಬಹಳಷ್ಟು ಮುಂದುವರಿದ ದೇಶಗಳು ಅನಿಸಿಕೊಂಡವರು ಸಹ ಮಹಿಳೆಯರಿಗೆ ಮತದಾನದ ಹಕ್ಕು ನೀಡಲು ಬಹಳಷ್ಟು  ವರ್ಷ ತೆಗೆದುಕೊಂಡವು. ಇಂತಹ  ಮಹತ್ವದ ಮತದಾನದ ಹಕ್ಕನ್ನು ಇಂದು ಭಾರತದಲ್ಲಿ ವಾಪಸ್ ಕಸಿದುಕೊಳ್ಳುವ ಕೆಲಸ ನಡೆಯುತ್ತಿದೆ. ಅದಕ್ಕೆ ನೀಡಿರುವ ಹೆಸರು ಮತದಾರರ ವಿಶೇಷ ಪರಿಷ್ಕರಣೆ ಎಂಬುದಾಗಿದೆ.

- Advertisement -

ಮತದಾರರ ಪಟ್ಟಿ ಪರಿಷ್ಕರಣೆ ಮಾಡುವುದು ಒಳ್ಳೆಯದು ಅಲ್ಲವೇ? ಪಟ್ಟಿ ಶುದ್ಧವಾಗಿರಬೇಕು, ಡುಪ್ಲಿಕೇಟ್ ಮತಗಳಿರಬಾರದು ಅಲ್ಲವೇ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ಖಂಡಿತ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕು. ಇದುವರೆಗೂ 13ಕ್ಕೂ ಹೆಚ್ಚು ಬಾರಿ ತೀವ್ರ ಪರಿಷ್ಕರಣೆ ನಡೆದಿದೆ. ಆಗ ಮತದಾರರ ವಿವರಗಳನ್ನು ಪರಿಶೀಲಿಸಿ ಪಟ್ಟಿಗೆ ಸೇರಿಸುವುದು, ತೆಗೆಯುವುದು ಸರ್ಕಾರದ ಕರ್ತವ್ಯವಾಗಿತ್ತು. ಬಿಎಲ್‌ಒಗಳು ಪ್ರತಿ ಮನೆಗೂ ಭೇಟಿ ನೀಡಿ ವಿಚಾರಿಸಿ, 18 ವರ್ಷ ತುಂಬಿದವರನ್ನು ಪಟ್ಟಿಗೆ ಸೇರಿಸುತ್ತಿದ್ದರು. ಮೃತರಾದವರ ಹೆಸರು ಡಿಲೀಟ್ ಮಾಡುತ್ತಿದ್ದರು. ಬೇರೆಡೆಗೆ ವಲಸೆ ಹೋದವರು ಅಲ್ಲಿ ಪಟ್ಟಿಗೆ ಸೇರಿದ್ದರೆ ಇಲ್ಲಿ ಡಿಲೀಟ್ ಮಾಡುತ್ತಿದ್ದರು. ಈ ಕೆಲಸವನ್ನು ವರ್ಷ ಪೂರ್ತಿ ಮಾಡಲಿ. ಚುನಾವಣೆ ನಡೆಯುವ ಒಂದು ತಿಂಗಳು ಬಿಟ್ಟು ಉಳಿದಂತೆ 24*7 ಮಾಡಬೇಕು ಎಂಬುದೇ ನಮ್ಮ ಆಗ್ರಹ. ಅತ್ಯುತ್ತಮ ತಂತ್ರಜ್ಞಾನ ಬಳಸಿ ಇದನ್ನು ಮಾಡಿದರೆ ನಮ್ಮ ಅಭ್ಯಂತರವಿಲ್ಲ.

ಆದರೆ, ಈಗ ಮಾಡುತ್ತಿರುವ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಪ್ರತಿ ಮತದಾರರು 2025 ಮತ್ತು 2002ರ ಮತದಾರರ ಪಟ್ಟಿಯಲ್ಲಿನ ತಮ್ಮ ಹೆಸರು, ತಂದೆಯ/ಗಂಡನ ಹೆಸರು, ಅವರ ಮತ್ತು ಅವರ ಪೋಷಕರ ಸೀರಿಯಲ್ ನಂಬರ್, ಬೂತ್ ನಂಬರ್, ಎಪಿಕ್ ನಂಬರ್ ಇತ್ಯಾದಿ ಮಾಹಿತಿಗಳನ್ನು ಹುಡುಕಿ ಎನ್ಯುಮರೇಷನ್ ಫಾರ್ಮ್ ತುಂಬಬೇಕು. ಅದನ್ನು ತೆಗೆದುಕೊಂಡು ಬಿಎಲ್‌ಒಗಳು ಸಾಫ್ಟವೇರ್‌ಗೆ ಅಪ್ಡೇಟ್ ಮಾಡಬೇಕು. ಸಾಪ್ಟ್‌ವೇರ್ ರನ್ ಮಾಡಿ ಕರಡು ಮತದಾರರ ಪಟ್ಟಿ ಕೊಡುತ್ತದೆ. ಒಂದೇ ಒಂದು ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ದರೂ ನಿಮ್ಮ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಇರುವುದಿಲ್ಲ.

ಆಗ ನೀವು, ‘ನಾನೇ ಆ ಮತದಾರ’ ಎಂದು ನಿರೂಪಿಸಲು ತನ್ನ ದಾಖಲೆ ಮತ್ತು ತನ್ನ ತಂದೆ ತಾಯಿಗಳು ಭಾರತೀಯರು ಎಂದು ನಿರೂಪಿಸುವ ಪೌರತ್ವದ ದಾಖಲೆಗಳನ್ನು ಬಿಎಲ್‌ಒಗೆ ಕೊಡಬೇಕು. ಅವರಿಗೆ ಅದು ಸಮಂಜಸ ಅನಿಸಿದರೆ ನಿಮ್ಮನ್ನು ಫೈನಲ್ ಮತದಾರರ ಪಟ್ಟಿಗೆ ಸೇರಿಸುತ್ತಾರೆ. ಹೆಚ್ಚು ಸ್ಪೆಲ್ಲಿಂಗ್ ಮಿಸ್ಟೇಕ್ ಇರುವವರಿಗೆ, ಮತದಾರನ ತಂದೆ – ತಾಯಿಗೂ, ಮತದಾರನಿಗೂ ವಯಸ್ಸಿನ ಅಂತರ 14 ವರ್ಷಕ್ಕಿಂತ ಕಡಿಮೆ ಮತ್ತು 45 ವರ್ಷಕ್ಕಿಂತ ಹೆಚ್ಚು ಇರುವವರು ಮತ್ತು ಯಾವುದೇ ದಂಪತಿಗಳಿಗೆ 6ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಆ ಮಕ್ಕಳಿಗೆಲ್ಲ ಲಾಜಿಕಲ್ ಡಿಸ್ಕ್ರಿಪ್ರೆನ್ಸಿ ಹೆಸರಿನಲ್ಲಿ ನೋಟಿಸ್ ಕಳಿಸಿ ವಿಚಾರಣೆಗೆ ಹಾಜರಾಗಲು ಸೂಚಿಸಲಾಗುತ್ತದೆ. ಆಗ ಅವರು ತಹಶೀಲ್ದಾರ್, ಎಸಿ ಅಥವಾ ಡಿಸಿ ಎದುರು ವಿಚಾರಣೆಗೆ ಹಾಜರಾಗಿ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಒದಗಿಸಿದರೆ ಮಾತ್ರ ಅವರು ಹೆಸರು ಮತದಾರರ ಪಟ್ಟಿಯಲ್ಲಿ ಉಳಿದುಕೊಳ್ಳುತ್ತದೆ. ಇಲ್ಲ ಅಂದ್ರೆ ಡಿಲೀಟ್ ಆಗುತ್ತದೆ.

ಇಷ್ಟೆಲ್ಲ ಪ್ರಕ್ರಿಯೆಯನ್ನು ನಮ್ಮ ದೇಶದ ಬಡವರು, ಮಹಿಳೆಯರು ಮಾಡಲು ಸಾಧ್ಯವೇ? ಅವರಿಗೆ 2002ರ ಮತದಾರರ ಪಟ್ಟಿಯನ್ನು ಡೌನ್ಲೋಡ್ ಮಾಡಿ ತಮ್ಮ ಹೆಸರು, ಕ್ರಮ ಸಂಖ್ಯೆ ಹುಡುಕಲು ಸಾಧ್ಯವೇ? ಬಹಳಷ್ಟು ಮಂದಿಗೆ 2002ರಲ್ಲಿ ತಮ್ಮ ಬೂತ್ ಯಾವುದು, ಅದರ ನಂಬರ್ ಏನು ಎಂಬುದೇ ಗೊತ್ತಿರುವುದಿಲ್ಲ. ಅವರೆಲ್ಲ ಏನು ಮಾಡಬೇಕು?

ಮುಸ್ಲಿಂ

ಇನ್ನೂ ದಾಖಲೆಗಳು ಅಂದರೆ ಸರ್ಕಾರವೇ ನೀಡಿರುವ ಆಧಾರ್ ಕಾರ್ಡ್, ರೇಷನ್ ಕಾರ್ಡ್, ವೋಟರ್ ಐಡಿ ಇವು ಯಾವುವು ಆಗುವುದಿಲ್ಲವಂತೆ. ಬದಲಾಗಿ ಪಾಸ್‌ಪೋರ್ಟ್, ಮಾರ್ಕ್ಸ್ ಕಾರ್ಡ್, ಟಿ.ಸಿ, ಪರ್ಮನೆಂಟ್ ರೆಸಿಡೆನ್ಸ್ ಸರ್ಟಿಫಿಕೇಟ್ ರೀತಿಯ ದಾಖಲೆ ತನ್ನಿ ಅಂತಿದ್ದಾರೆ.  ಬಡವರು, ಕೂಲಿ ಕಾರ್ಮಿಕರು ಹೊಟ್ಟೆಪಾಡು ಬಿಟ್ಟು ದಾಖಲೆಗಳಿಗಾಗಿ ತಹಶೀಲ್ದಾರ್ ಕಚೇರಿ ಅಲೆಯಬೇಕಾ? ಬಡಜನರು ಅಂದು ದುಡಿದು ಅಂದು ತಿನ್ನುವವರು. ಅವರು ದಾಖಲೆ ಮಾಡಿಸಲು ಎರಡು ಮೂರು ದಿನ ರಜೆ ಹಾಕಿ ತಿರುಗಾಡಬೇಕು. ಇದೆಲ್ಲಾ ಸಾಧ್ಯವೇ? ಸರಿಯಾದ ದಾಖಲೆ ಕೊಡಲಿಲ್ಲ ಎಂದು ಇವರ ಮತದಾನದ ಹಕ್ಕು ಕಿತ್ತುಕೊಳ್ಳುವುದು ಕ್ರೂರತನ ಅಲ್ಲದೇ ಮತ್ತೇನು? ಆನಂತರ ಅವರು ಈ ದೇಶದ ಪೌರರೇ ಅಲ್ಲ ಎಂದರೆ ಏನು ಮಾಡುವುದು?

ಈಗಾಗಲೇ 6 ಕೋಟಿಗೂ ಅಧಿಕ ಮತದಾರರು ಪಟ್ಟಿಯಿಂದ ಡಿಲೀಟ್ ಆಗಿದ್ದಾರೆ. ಇಲ್ಲೇ ಹುಟ್ಟಿ ಬೆಳೆದ ಅವರನ್ನು ಎರಡನೇ ದರ್ಜೆಯ ಪ್ರಜೆಯನ್ನಾಗಿ ಮಾಡಿರುವುದು ಪ್ರಜಾಪ್ರಭುತ್ವವೇ?

ಹಾಗಾದರೆ SIR ಏಕೆ ತರಲಾಯಿತು?

ಬಿಜೆಪಿ – ಆರ್‌ಎಸ್‌ಎಸ್‌ನ ಉದ್ದೇಶ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವುದು. ಆದರೆ ನಮ್ಮ ಸಂವಿಧಾನ ಅದಕ್ಕೆ ವಿರುದ್ಧವಾಗಿದೆ. ಆದರೂ 2019ರಲ್ಲಿ ಕೇಂದ್ರ ಸರ್ಕಾರವು ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಎಂಬ ಸಂವಿಧಾನ ವಿರೋಧಿ ಕಾನೂನುಗಳನ್ನು ಜಾರಿಗೆ ತರಲು ಮುಂದಾದರು. ಆದರೆ ಈ ದೇಶದ ಜನರು ಅದರ ವಿರುದ್ಧ ದಿಟ್ಟ ಹೋರಾಟ ನಡೆಸಿ ಹಿಮ್ಮೆಟ್ಟಿಸಿದರು. ಸಂವಿಧಾನ ಮತ್ತು ಭಾರತದ ತ್ರಿವರ್ಣ ಧ್ವಜ ಹೋರಾಟ ನಿರತ ಜನರ ಅಸ್ತ್ರವಾಗಿತ್ತು.

ಹಾಗಾಗಿ, ಬಿಜೆಪಿ ಆರ್‌ಎಸ್‌ಎಸ್‌ ಈ ದೇಶದ ಸಂವಿಧಾನವನ್ನು ಒಪ್ಪುವುದಿಲ್ಲ. ಅದನ್ನು ಬದಲಾಯಿಸುತ್ತೇವೆಂದು ಹಲವಾರು ಬಾರಿ ಬಹಿರಂಗವಾಗಿ ಘೋಷಿಸಿದ್ದಾರೆ. 2024ರಲ್ಲಿ ಅವರು ಚಾರ್‌ ಸೌ ಕೆ ಪಾರ್ ಎಂಬ ಘೋಷಣೆ ಇಟ್ಟುಕೊಂಡು ಲೋಕಸಭಾ ಚುನಾವಣೆ ಎದುರಿಸಿದರು. ಏಕೆಂದರೆ ಸಂವಿಧಾನ ಬದಲಿಸಲು ನಮಗೆ 2/3 ಬಹುಮತ ಬೇಕೆಂದು, 400ಕ್ಕೂ ಅಧಿಕ ಸ್ಥಾನ ಬೇಕೆಂದು ಹೇಳಿದ್ದರು. ಆದರೆ ಸಂವಿಧಾನ ಬದಲಿಸಲು ಹೊರಟ ಬಿಜೆಪಿಗೆ ಈ ದೇಶದ ಸಾಮಾನ್ಯ ಜನರು ತಕ್ಕ ಪಾಠ ಕಲಿಸಿದರು. ಅವರನ್ನು 240ಕ್ಕೆ ಇಳಿಸಿ ಸೋಲಿಸಿದರು. ಕೊನೆಗೆ ಎನ್‌ಡಿಎ ಸರ್ಕಾರ ಬಂತು.

image 139

ಈ ಸಾಮಾನ್ಯ ಜನ ಅಂದ್ರೆ ಯಾರು? ಬಡವರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ಮಹಿಳೆಯರು ಬಿಜೆಪಿ ವಿರುದ್ಧ ಮತ ಹಾಕಿದರು. ಆ ಸೇಡು ತೀರಿಸಿಕೊಳ್ಳಲು ಬಿಜೆಪಿ ಈಗ ಚುನಾವಣಾ ಆಯೋಗದ ಮೂಲಕ ಎಸ್‌ಐಆರ್ ಎಂಬ ಅಸ್ತ್ರ ಪ್ರಯೋಗಿಸುತ್ತಿದೆ. ಆ ಮೂಲಕ ತಮ್ಮ ವಿರುದ್ಧ ಮತ ಹಾಕಿದ ಮತದಾರರ ಓಟು ಹಾಕುವ ಹಕ್ಕನ್ನೇ ಕಸಿದುಕೊಳ್ಳುತ್ತಿದೆ. ಅವರನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಿಸುತ್ತಿದೆ. ಈಗಾಗಲೇ 12ರಾಜ್ಯಗಳಲ್ಲಿ 6 ಕೋಟಿಗೂ ಅಧಿಕ ಮತದಾರರನ್ನು ಪಟ್ಟಿಯಿಂದ ಹೊರಗಟ್ಟಿದೆ. ಅವರಲ್ಲಿ ಬಹುತೇಕರು ಬಡವರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ಮಹಿಳೆಯರೇ ಆಗಿದ್ದಾರೆ. ಪಟ್ಟಿಯಲ್ಲಿ ಹೆಸರಿಲ್ಲದವರಿಗೆ ಸರ್ಕಾರದ ಸೌಲಭ್ಯಗಳು ಸಿಗುವುದಿಲ್ಲ ಎಂದು ಹೆದರಿಸುತ್ತಿದ್ದಾರೆ, ನಾಳೆ ನೀವು ಈ ದೇಶದವರೇ ಅಲ್ಲ ಅನ್ನುತ್ತಾರೆ. ಅಲ್ಲಿಗೆ ಹಿಂಬಾಗಿಲ ಮೂಲಕ ಎನ್‌ಆರ್‌ಸಿ ಜಾರಿಗೆ ತರುವುದು ಬಿಜೆಪಿಯ ಉದ್ದೇಶ. ಹಾಗಾಗಿ ಎಸ್‌ಐಆರ್ ಸಮರ್ಥಿಸುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಸುವೆಂಧು ಅಧಿಕಾರಿ ಎಸ್‌ಐಆರ್ ನಡೆದರೆ ನಮಗೆ ಪೈಪೋಟಿಯೇ ಇರುವುದಿಲ್ಲ, ಸುಲಭವದಲ್ಲಿ ಗೆಲ್ಲುತ್ತೇವೆ ಎಂದಿದ್ದರು. ಈಗ ಹಾಗೆಯೇ ಆಗಿದೆ. ಕರ್ನಾಟಕಕ್ಕೆ ಬಂದಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಎಸ್‌ಐಆರ್ ನಡೆದರೆ ಇನ್ನ 50 ವರ್ಷ ಬಿಜೆಪಿ ಗೆಲ್ಲುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಅಲ್ಲಿಗೆ ತಮ್ಮ ವಿರೋಧಿಗಳ ಮತ ಡಿಲೀಟ್ ಮಾಡಿಸಿ ಚುನಾವಣೆ ಗೆಲ್ಲುವುದು ಅವರ ಎರಡನೇ ಉದ್ದೇಶವಾಗಿದೆ.

SIR ನಡೆಸುವುದು ಬಿಜೆಪಿ ಅಲ್ಲ, ಬದಲಿಗೆ ECI ಅಲ್ಲವೇ?

ಹೌದು, ನಿಜ ಚುನಾವಣಾ ಆಯೋಗವೇ ಎಸ್‌ಐಆರ್ ನಡೆಸುತ್ತದೆ. ಬಿಜೆಪಿ ಅಲ್ಲ. ಆದರೆ ECI ಬಿಜೆಪಿ ಪಕ್ಷದ ಬೇಟೆ ನಾಯಿಯಾಗಿದೆ. ಬಿಜೆಪಿಯು CBI, ED, IT ರೀತಿಯಲ್ಲಿ ECI ಅನ್ನು ಕೂಡ ತನ್ನ ಕೈಗೊಂಬೆ ಮಾಡಿಕೊಂಡಿದೆ.

ಪಶ್ಚಿಮ ಬಂಗಾಳದಲ್ಲಿ SIR ಉಸ್ತುವಾರಿಯಾಗಿದ್ದ ಐಎಎಸ್ ಅಧಿಕಾರಿ ಸುಬ್ರತಾ ಗುಪ್ತಾ ಈಗ ಮುಖ್ಯಮಂತ್ರಿಯವರ ಅಧಿಕೃತ ಸಲಹೆಗಾರರನ್ನಾಗಿ ನೇಮಿಸಿಕೊಳ್ಳಲಾಗಿದೆ. ಅದೇ ರೀತಿಯಲ್ಲಿ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಮನೋಜ್ ಕುಮಾರ್ ಅಗರ್ವಾಲ್ ಈತ ನೂತನ ಸರ್ಕಾರದ ಮುಖ್ಯ ಕಾರ್ಯದರ್ಶಿ ಆಗಿದ್ದಾರೆ. ಈಗ ಹೇಳಿ ಚುನಾವಣಾ ಆಯೋಗ ಸ್ವತಂತ್ರ ಸಂಸ್ಥೆಯೇ?

ಈಗ ನಾವೇನು ಮಾಡಬೇಕು?

ಎಸ್‌ಐಆರ್ ವಿರುದ್ಧ ಜನಜಾಗೃತಿ ಮೂಡಿಸಬೇಕು. ಚುನಾವಣಾ ಆಯೋಗದ ವಿರುದ್ಧ ದನಿ ಎತ್ತಬೇಕು. ಯಾಕೆ ಎಸ್‌ಐಆರ್ ತರುತ್ತಿದ್ದಾರೆ ಎಂದು ಜನರಿಗೆ ಅರ್ಥವಾಗುವ ಹಾಗೆ ಸಾರಿ ಹೇಳಬೇಕು. ಅದರ ಜೊತೆಗೆ ಸುಪ್ರೀಂ ಕೋರ್ಟ್ ಕೂಡ ಎಸ್‌ಐಆರ್ ಒಪ್ಪಿರುವುದರಿಂದ ನಾವು ಎಸ್‌ಐಆರ್‌ನಲ್ಲಿ ಪೂರ್ವ ತಯಾರಿಯೊಂದಿಗೆ ಭಾಗವಹಿಸಿ ಅರ್ಹ ವ್ಯಕ್ತಿಗಳ ಒಂದು ಮತ ಡಿಲೀಟ್ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ನಮ್ಮ ಮೇಲಿದೆ.

ಮೊದಲಿಗೆ ನಾವಿರುವ ಊರುಗಳಲ್ಲಿ 2025ರ ಮತದಾರರ ಪಟ್ಟಿ ಮತ್ತು 2002ರ ಮತದಾರರ ಪಟ್ಟಿ ಡೌನ್ಲೋಡ್ ಮಾಡಿಕೊಂಡು 2025ರ ಮತದಾರರ ಪಟ್ಟಿಯಲ್ಲಿ ಇರುವ ಎಲ್ಲರ ಹೆಸರು ಅಥವಾ ಅವರ ತಂದೆ ತಾಯಿಗಳ ಹೆಸರು 2002ರ ಪಟ್ಟಿಯಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಸರಿ ಇದೆಯೇ ಎಂದು ಚೆಕ್ ಮಾಡಬೇಕು. ಸರಿ ಇದ್ದವರಿಗೆ ಎನ್ಯುಮರೇಷನ್ ಫಾರ್ಮ್ ತುಂಬಲು ಸಹಾಯ ಮಾಡಬೇಕು. ಸರಿ ಇಲ್ಲದವರಿಗೆ ದಾಖಲೆಗಳನ್ನು ಹೊಂದಿಸಲು ಸಹಾಯ ಮಾಡಬೇಕು. ಯಾರಿಗಾದರೂ ನೋಟಿಸ್ ಬಂದರೆ ಅವರ ದಾಖಲೆಗಳನ್ನು ಹೊಂದಿಸಿ ವಿಚಾರಣೆಗೆ ಕರೆದುಕೊಂಡು ಹೋಗಿ ಸಮಂಜಸ  ಹೇಳಿಕೆ ನೀಡಿ ಅವರು ಹೆಸರು ಅಂತಿಮ ಮತದಾರರ ಪಟ್ಟಿಯಲ್ಲಿ ಉಳಿಯುವಂತೆ ಮಾಡಬೇಕು. ಆಗ ಎಲ್ಲರ ಮತಗಳನ್ನು ಉಳಿಸಿಕೊಳ್ಳಲು ಸಾಧ್ಯ.

ಎಸ್‌ಐಆರ್, ಚುನಾವಣಾ ಆಯೋಗ, ಕಾಂಗ್ರೆಸ್‌, ಎಸ್‌ಐಆರ್‌ ವಿರೋಧಿ ಕರ್ನಾಟಕ, SIR, Election Commission, Congress, Anti-SIR Karnataka,

2002ರ ನಿಮ್ಮ ಬೂತ್ ನಂಬರ್ ಹುಡುಕಿ, ಮತದಾರರ ಪಟ್ಟಿ ಡೌನ್‌ಲೋಡ್ ಮಾಡುವುದು ಹೇಗೆ?

SIR ನಲ್ಲಿ ಎನ್ಯುಮರೇಷನ್ ಫಾರ್ಮ್ ತುಂಬಲೇಬೇಕು. ಇಲ್ಲದಿದ್ದರೆ ನಿಮ್ಮ ಓಟು ಡಿಲೀಟ್ ಆಗುತ್ತದೆ. ಫಾರ್ಮ್ ತುಂಬಲು 2002ರಲ್ಲಿ ಕೊನೆಯ ಇಂಟೆನ್ಸಿವ್ ರಿವಿಷನ್ ನಡೆದಾಗ ನಿಮ್ಮ ವಿಧಾನಸಭಾ ಕ್ಷೇತ್ರ ಯಾವುದಿತ್ತು, ನಿಮ್ಮ ಬೂತ್ ನಂಬರ್ ಮತ್ತು ಕ್ರಮ ಸಂಖ್ಯೆ ಯಾವುದಿತ್ತು ಎಂದು ಕಡ್ಡಾಯವಾಗಿ ತಿಳಿದುಕೊಳ್ಳಬೇಕಾಗಿದೆ. 2008ರಲ್ಲಿ ಕ್ಷೇತ್ರಗಳ ಮರುವಿಂಗಡಣೆ ಆದ ಕಾರಣ ನಿಮ್ಮ ಊರಿನ ಬೂತ್ ಸಂಖ್ಯೆ ಬದಲಾಗಿತ್ತದೆ. ಹಾಗಾಗಿ 2002ರ ನಿಮ್ಮ ಬೂತ್ ನಂಬರ್ ಹುಡುಕುವುದು ಹೇಗೆ ಎಂಬುದನ್ನು ಸರಳವಾಗಿ ತಿಳಿಯೋಣ.

ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಗೂಗಲ್‌ನಲ್ಲಿ Ecinet ಎಂದು ಸರ್ಚ್ ಮಾಡಿದರೆ ಚುನಾವಣಾ ಆಯೋಗದ ವೆಬ್‌ಸೈಟ್ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ Voter Services ನಲ್ಲಿ Serch Your Name In Voter List ಎಂಬ ಆಯ್ಕೆ ಸೆಲೆಕ್ಟ್ ಮಾಡಿ. ನಂತರ  Serch Your Name In SIR ಮೇಲೆ ಕ್ಲಿಕ್ ಮಾಡಿದರೆ ಕಾಣುವ ಕಾಲಂಗಳಲ್ಲಿ ಮೊದಲು ರಾಜ್ಯ, ಜಿಲ್ಲೆ ಆಯ್ಕೆ ಮಾಡಿ. Assembly Constituency ನಲ್ಲಿ 2002ರಲ್ಲಿ ನಿಮ್ಮ ವಿಧಾನಸಭಾ ಕ್ಷೇತ್ರ ಯಾವುದಿತ್ತು ಎಂದು ನಿಮ್ಮ ಹಿರಿಯರನ್ನು ಕೇಳಿ. ಕೆಲವರದು ಈಗ ಇರುವ ಕ್ಷೇತ್ರವೇ ಇರುತ್ತದೆ, ಆದರೆ ಕೆಲವರದು ಬದಲಾಗಿರುತ್ತದೆ. 1999ರಲ್ಲಿ ಎಸ್‌ಎಂ ಕೃಷ್ಣರವರು ಮುಖ್ಯಮಂತ್ರಿಯಾಗಿದ್ದಾಗ ಅಥವಾ 2004ರಲ್ಲಿ ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ನಿಮಗೆ ಯಾರು ಶಾಸಕರಾಗಿದ್ದರು ಎಂಬ ಆಧಾರದಲ್ಲಿ ಆಗ ನಿಮ್ಮ ಕ್ಷೇತ್ರ ಯಾವುದಿತ್ತು ಎಂದು ತಿಳಿಯಬಹುದು.

image 138



ಉದಾಹರಣೆಗೆ 2002ರಲ್ಲಿ ನಮ್ಮ ಮಾದೇಗೌಡನಕೊಪ್ಪಲು ಬೂತ್ ಕೆರಗೋಡು ವಿಧಾನಸಭಾ ಕ್ಷೇತ್ರವಾಗಿತ್ತು. ಹಾಗಾಗಿ ನಾನು Assembly Constituency ನಲ್ಲಿ ಕೆರಗೋಡು ಆಯ್ಕೆ ಮಾಡಿದೆ. ನಂತರ Polling Station No And Name ಇರುವಲ್ಲಿ ನಿಮ್ಮ ಬೂತ್‌ನ ಹೆಸರು ಟೈಪ್ ಮಾಡಲು ಹೊರಟರೆ ಸಾಕು ನಿಮ್ಮ ಬೂತ್ ನಂಬರ್ ಸಮೇತ ಸಿಕ್ಕಿಬಿಡುತ್ತದೆ. ನಾನು Madegowndakoppalu ಅಂತ ಟೈಪ್ ಮಾಡಿದ ಕೂಡಲೇ 137 – GHPS Madegowndakoppalu ಅಂತ ಬಂದುಬಿಡ್ತು. ನಮ್ಮ ಬೂತ್ ನಂಬರ್ 137 ಅಂತ ಗೊತ್ತಾಯಿತು.

ಈಗ 2002ರ ನಿಮ್ಮ ವೋಟರ್ ಲಿಸ್ಟ್ ಡೌನ್‌ ಲೋಡ್ ಮಾಡುವುದು ಹೇಗೆ ನೋಡೋಣ

ಗೂಗಲ್‌ನಲ್ಲಿ ceo karnataka ಎಂದು ಸರ್ಚ್ ಮಾಡಿದರೆ ಸಿಗುವ ಕರ್ನಾಟಕ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಕಾಣುವ 3 ಗೆರೆಗಳ ಮೇಲೆ ಒತ್ತಿ. ಎರಡನೇ ಆಪ್ಶನ್ ಆಗಿ ಕಾಣುವ ELECTORAL ROLL 2002 ಮೇಲೆ ಕ್ಲಿಕ್ ಮಾಡಿ. ನಂತರ View/Download 2002 Electoral roll ಮೇಲೆ ಕ್ಲಿಕ್ ಮಾಡಿ. ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರ ಆಯ್ಕೆ ಮಾಡಿ ಪಾರ್ಟ್ ನಂಬರ್ ಎಂಬಲ್ಲಿ ಈಗಾಗಲೇ ಕಂಡುಕೊಂಡ ನಿಮ್ಮ 2002ರ ಬೂತ್ ನಂಬರ್ ಸೆಲೆಕ್ಟ್ ಮಾಡಿ View/Download PDF ಮೇಲೆ ಕ್ಷಿಕ್ ಮಾಡಿದರೆ ನಿಮ್ಮ 2002ರ ಮತದಾರರ ಪಟ್ಟಿ ಡೌನ್‌ಲೋಡ್ ಆಗುತ್ತದೆ.

image 140

ಅದನ್ನು ಓಪನ್ ಮಾಡಿಕೊಂಡು ಅದರಲ್ಲಿ ನಿಮ್ಮ ಅಥವಾ ನಿಮ್ಮ ತಂದೆ ತಾಯಿಯ ಹೆಸರು ಯಾವ ಕ್ರಮ ಸಂಖ್ಯೆಯಲ್ಲಿದೆ ಎಂಬುದನ್ನು ಗುರುತು ಹಾಕಿಕೊಂಡಿದರೆ ಸುಲಭವಾಗಿ ಎನ್ಯುಮರೇಷನ್ ಫಾರ್ಮ್ ತುಂಬಬಹುದು. ಅದೇ ರೀತಿ ನಿಮ್ಮ ಊರಿನ ಎಲ್ಲರದು ಸರಿಯಿದೆಯೆ ಎಂದು ನೀವು ಚೆಕ್ ಮಾಡಬಹುದು.

2025ರ ನಿಮ್ಮ ಬೂತ್‌ನ ಮತದಾರರ ಪಟ್ಟಿ ಡೌನ್‌ಲೋಡ್ ಮಾಡುವುದು ಹೇಗೆ?

ಗೂಗಲ್‌ನಲ್ಲಿ ceo karnataka ಎಂದು ಸರ್ಚ್ ಮಾಡಿದರೆ ಸಿಗುವ ಕರ್ನಾಟಕ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಕಾಣುವ 3 ಗೆರೆಗಳ ಮೇಲೆ ಒತ್ತಿ. ಮೂರನೇ ಆಪ್ಶನ್ ಆಗಿ ಕಾಣುವ ELECTORAL ROLL 2025/26 ಮೇಲೆ ಕ್ಲಿಕ್ ಮಾಡಿ. ರಾಜ್ಯ ಆಯ್ಕೆ ಮಾಡಿ, Year Of Revision ನಲ್ಲಿ 2025 ಆಯ್ಕೆ ಮಾಡಿ. ನಂತರ ನಿಮ್ಮ ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರ ಆಯ್ಕೆ ಮಾಡಿ. ಲಾಂಗ್ವೇಜ್ ಕನ್ನಡ ಸೆಲೆಕ್ಟ್ ಮಾಡಿದ ಕೂಡಲೇ ನಿಮ್ಮ ವಿಧಾನಸಭಾ ಕ್ಷೇತ್ರದ ಎಲ್ಲಾ ಬೂತ್‌ಗಳು ಕೆಳಗೆ ಕಾಣುತ್ತವೆ. ಅದರಲ್ಲಿ ನಿಮ್ಮ ಊರಿನ ಬೂತ್ ಯಾವುದು ಎಂದು ಹುಡುಕಿ ಸೆಲೆಕ್ಟ್ ಮಾಡಿ ಮೇಲೆ ಕಾಣುವ ಕ್ಯಾಪ್ಚ ಎಂಟ್ರಿ ಮಾಡಿದ ನಂತರ Download Selected PDFs ಮೇಲೆ ಕ್ಲಿಕ್ ಮಾಡಿದರೆ 2025ರ ನಿಮ್ಮ ಬೂತ್ ಮತದಾರರ ಪಟ್ಟಿ ಸಿಗುತ್ತದೆ.

image 141

ಅದನ್ನು ಓಪನ್ ಮಾಡಿಕೊಂಡು ನಿಮ್ಮ ಊರಿನಲ್ಲಿ ಎಷ್ಟು ಜನ ಮತದಾರರಿದ್ದಾರೆ, ನಿಮ್ಮ ಮತ ಯಾವ ಕ್ರಮ ಸಂಖ್ಯೆಯಲ್ಲಿದೆ? ಎಲ್ಲವನ್ನು ನೋಡಬಹುದು. ಇಲ್ಲಿರುವ ನಿಮ್ಮ ಹೆಸರು ಮತ್ತು 2002ರ ಪಟ್ಟಿಯಲ್ಲಿರುವ ನಿಮ್ಮ ಹೆಸರು ಒಂದೇ ರೀತಿ ಇದ್ದರೆ ಎನ್ಯುಮರೇಷನ್ ಫಾರ್ಮ್ ತುಂಬಿದ ನಂತರ ನಿಮ್ಮ ಹೆಸರು ಡ್ರಾಫ್ಟ್ ಲಿಸ್ಟ್‌ನಲ್ಲಿ ಬರುತ್ತದೆ. ಆದರೆ 2025ರ ಪಟ್ಟಿ ಮತ್ತು 2002ರ ಪಟ್ಟಿಗೂ ನಿಮ್ಮ ಹೆಸರಿನಲ್ಲಿ ಸ್ಪೆಲ್ಲಿಂಗ್ ಮೀಸ್ಟೇಕ್ ಇದ್ದರೆ, 2002ರ ಪಟ್ಟಿಯಲ್ಲಿ ನಿಮ್ಮ ಹೆಸರಿರದೇ ನಿಮ್ಮ ತಂದೆ-ತಾಯಿಯ ಹೆಸರಿದ್ದು ಅವರ ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ದರೆ ನೀವು ಎನ್ಯುಮರೇಷನ್ ಫಾರ್ಮ್ ತುಂಬಿದರೂ ಸಹ ನಿಮ್ಮ ಹೆಸರು ಡ್ರಾಫ್ಟ್‌ ಲಿಸ್ಟ್‌ನಲ್ಲಿ ಬರದೇ ಹೋಗಬಹುದು. ಆಗ ನೀವು ಟಿಸಿ, ಮಾರ್ಕ್ಸ್ ಕಾರ್ಡ್, ರೆಸಿಡೆಂಟ್ ಸರ್ಟಿಫೀಕೇಟ್ ರೀತಿಯ ದಾಖಲೆಗಳನ್ನು ಕೊಡಬೇಕಾಗುತ್ತದೆ. ಹಾಗಾಗಿ ನಿಮ್ಮ ಮತ್ತು ನಿಮ್ಮ ತಂದೆ ತಾಯಿಯ ಹೆಸರು ಸ್ಪೆಲ್ಲಿಂಗ್ ಮಿಸ್ಟೇಕ್ ಇಲ್ಲದೇ ಸರಿ ಇದೆಯೇ ಎಂದು ಈಗಲೇ ಚೆಕ್ ಮಾಡಿಕೊಳ್ಳಿ.

SIR ನಲ್ಲಿ ಎನ್ಯುಮರೇಷನ್ ಫಾರ್ಮ್ ತುಂಬುವುದು ಹೇಗೆ?

ನಿಮ್ಮದು ಮ್ಯಾಪಿಂಗ್ ಆಗಿರಲಿ, ಬಿಡಲಿ ಎನ್ಯುಮರೇಷನ್ ಫಾರ್ಮ್ ಅನ್ನು ಸರಿಯಾಗಿ ತುಂಬಿ ಬಿಎಲ್‌ಒಗೆ ಕೊಡುವುದು ಕಡ್ಡಾಯವಾಗಿದೆ. ಎನ್ಯುಮರೇಷನ್ ಫಾರ್ಮ್ ತುಂಬಿದಿದ್ದರೆ ನಿಮ್ಮ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಬರವುದಿಲ್ಲ ಹಾಗಾಗಿ ತಪ್ಪದೇ ತುಂಬಿ. ಎನ್ಯುಮರೇಷನ್ ಫಾರ್ಮ್ ಅನ್ನು ಸರಿಯಾಗಿ ತುಂಬುವುದು ಹೇಗೆ ನೋಡೋಣ ಬನ್ನಿ.

ಜೂನ್ 30ರಿಂದ ನಿಮ್ಮ ಬೂತ್‌ನ ಬಿಎಲ್‌ಎಗಳು ನಿಮಗೆ ಎರಡು ಎನ್ಯುಮರೇಷನ್ ಫಾರ್ಮ್ ಕೊಟ್ಟು ತುಂಬಲು ಹೇಳುತ್ತಾರೆ. ಅದರಲ್ಲಿ ಮೇಲಿನ ಕಾಲಂಗಳಲ್ಲಿ ನಿಮ್ಮ ವಿವರಗಳು ಅಂದರೆ ಹೆಸರು, ಎಪಿಕ್ ನಂಬರ್, ಕ್ರಮ ಸಂಖ್ಯೆ, ವಿಳಾಸ 2025ರ ಪಟ್ಟಿಯಲ್ಲಿ ಹೇಗಿದೆಯೋ ಹಾಗೆ ಪ್ರಿ ಪ್ರಿಂಟ್ ಆಗಿರುತ್ತವೆ. ನಿಮ್ಮ ಫೋಟೊ ಸಹ ಇರಲಿಲದ್ದು, ಬಲಭಾಗದಲ್ಲಿ ನಿಮ್ಮ ಹೀಗಿನ ಪಾಸ್‌ಪೋರ್ಟ್ ಸೈಜ್‌ನ ಫೋಟೊ ಅಂಟಿಸಬೇಕು.

ನಂತರ ಎಡಭಾಗದ ಕಾಲಂ ಅಂದರೆ ಕಳೆದ SIR ನ ಮತದಾರರ ಪಟ್ಟಿಯಲ್ಲಿರುವ ಮತದಾರರ ವಿವರಗಳು ಕಾಲಂ ನಲ್ಲಿ 42 ವರ್ಷಕ್ಕಿಂತ ಹೆಚ್ಚಿನವರು ಎಂದರೆ 1987ಕ್ಕಿಂತ ಮುಂಚೆ ಹುಟ್ಟಿರುವವರು (2002ರ ಮತಪಟ್ಟಿಯಲ್ಲಿ ಹೆಸರಿರುವವರು) ತುಂಬಬೇಕಿರುತ್ತದೆ. ಅವರ ಹೆಸರು, ವೋಟರ್ ಐಡಿ ನಂಬರ್ ಇದ್ದರೆ ಅದನ್ನು ತುಂಬಬೇಕು. ಸಂಬಂಧಿಕರ ಹೆಸರು ಜಾಗದಲ್ಲಿ ತಮ್ಮ ತಂದೆ ಅಥವಾ ತಾಯಿಯ ಹೆಸರು ಬರೆದು ನಂತರದ ಕಾಲಂ ನಲ್ಲಿ ಅವರು ನಿಮಗೆ ಹೇಗೆ ಸಂಬಂಧಿ ಎಂದರೆ ತಂದೆ ಅಥವಾ ತಾಯಿ ಎಂದು ತುಂಬಬೇಕು. ಜಿಲ್ಲೆ, ರಾಜ್ಯ ಮತ್ತು ವಿಧಾನಸಭಾ ಕ್ಷೇತ್ರವನ್ನು ತುಂಬಬೇಕು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ 2002ರಲ್ಲಿ ನಿಮ್ಮ ಹೆಸರು ಯಾವ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿತ್ತು ಅದನ್ನು ತುಂಬಿ ಅದರ ಕೆಳಗಿನ ಕಾಲಂ ನಲ್ಲಿ ವಿಧಾನ ಸಭಾ ಕ್ಷೇತ್ರದ ನಂಬರ್, ಪಾರ್ಟ್ ನಂಬರ್ ಅಂದರೆ ಆಗಿನ ನಿಮ್ಮ ಬೂತ್ ನಂಬರ್ ಮತ್ತು 2002ರ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಯಾವ ಕ್ರಮ ಸಂಖ್ಯೆಯಲ್ಲಿದೆ ಅದನ್ನು ನಮೂದಿಸಬೇಕು.

ನಂತರ 2002ರ ಮತಪಟ್ಟಿಯಲ್ಲಿ ಹೆಸರಿರುವವರು ಬಲಭಾಗದ ಕಾಲಂ ತುಂಬುವ ಅಗತ್ಯವಿಲ್ಲ. ಕೆಳಗಿನ ಕಾಲಂಗಳಲ್ಲಿ ನಿಮ್ಮ ಜನ್ಮದಿನಾಂಕ, ಆಧಾರ್ ನಂಬರ್ ಇದ್ದರೆ ಹಾಕಿ ಮೊಬೈಲ್ ನಂಬರ್ ತುಂಬಬೇಕು. ಜೊತೆಗೆ ತಂದೆ/ಪೋಷಕರ ಹೆಸರು, ತಾಯಿ ಹೆಸರು ಮತ್ತು ಸಂಗಾತಿಯ ಹೆಸರು ಬರೆದು ಅವರ ಎಪಿಕ್ ನಂಬರ್ ಅಂದರೆ ವೋಟರ್ ಐಡಿ ನಂಬರ್ ಇದ್ದರೆ ಅವುಗಳನ್ನು ತುಂಬಿ ಕೆಳಗೆ ಸಹಿ ಮಾಡಿ ಒಂದು ಪ್ರತಿಯನ್ನು ನೀವು ಇಟ್ಟುಕೊಂಡು ಇನ್ನೊಂದು ಪ್ರತಿಯನ್ನು ಬಿಎಲ್‌ಓಗೆ ಕೊಡಬೇಕು.

ಈ ಲೇಖನ ಓದಿದ್ದೀರಾ?: ಪ್ರಜಾಪ್ರಭುತ್ವ ದಮನಕ್ಕೆ ಮೋದಿ ‘SIR’ ಅಸ್ತ್ರ ಬಳಸುತ್ತಿರುವುದು ಯಾಕೆ?

ಇನ್ನು 1987ರ ನಂತರ ಹುಟ್ಟಿರುವ ಅಂದರೆ 2002ರ ಪಟ್ಟಿಯಲ್ಲಿ ಹೆಸರಿರದ ಕೇವಲ 2025ರ ಪಟ್ಟಿಯಲ್ಲಿ ಹೆಸರಿರುವ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎನ್ಯುಮರೇಷನ್ ಫಾರ್ಮ್ ಹೇಗೆ ತುಂಬಬೇಕೆಂದರೆ ಅವರ ವಿವರಗಳು ಸಹ ಮೇಲೆ ಪ್ರಿ ಪ್ರಿಂಟೆಂಡ್ ಆಗಿರುತ್ತವೆ. ಅವರು ಕಳೆದ SIR ನ ಮತದಾರರ ಪಟ್ಟಿಯಲ್ಲಿರುವ ಮತದಾರರ ವಿವರಗಳು ಎಂಬ ಎಡಗಡೆಯ ಕಾಲಂ ಅನ್ನು ತುಂಬುವ ಅಗತ್ಯವಿಲ್ಲ. ಏಕೆಂದರೆ 2002ರಲ್ಲಿ ಅವರ ಹೆಸರಿರಲಿಲ್ಲ. ಬದಲಿಗೆ ಅವರು ಬಲ ಭಾಗದ ಹಿಂದಿನ ಅಂಕಣದಲ್ಲಿ ನೀಡಿರುವ ಸಂಬಂಧಿಕರ ಕಳೆದ SIR ನ ವಿವರಗಳು ಎಂಬಲ್ಲಿ ತಮ್ಮ ತಂದೆ ಅಥವಾ ತಾಯಿಯ 2002ರ ವಿವರಗಳನ್ನು ತುಂಬಬೇಕು.

ಹೆಸರು, ಎಪಿಕ್ ನಂಬರ್ ಇದ್ದರೆ ತುಂಬಬೇಕು. ಅವರ ಸಂಬಂಧಿಕರ ಹೆಸರು ತಂಬಬೇಕು. ನಾಲ್ಕನೇ ಕಾಲಂ ಸಂಬಂಧದಲ್ಲಿ ನಿಮಗೆ ಅವರು ಏನು ಆಗಬೇಕು ಎಂಬುದನ್ನು ತುಂಬಬೇಕು. ಆನಂತರ ಜಿಲ್ಲೆ, ರಾಜ್ಯ, ಅಸೆಂಬ್ಲಿ ಕ್ಷೇತ್ರ 2002ರಲ್ಲಿ ಯಾವುದಿತ್ತು ಅದನ್ನು ತುಂಬಬೇಕು. ಕೊನೆಯದಾಗಿ ಬಹಳ ಮಖ್ಯವಾಗಿ ವಿಧಾನ ಸಭಾ ಕ್ಷೇತ್ರದ ನಂಬರ್, ಪಾರ್ಟ್ ನಂಬರ್ ಅಂದರೆ ಆಗಿನ ನಿಮ್ಮ ಬೂತ್ ನಂಬರ್ ಮತ್ತು 2002ರ ಮತದಾರರ ಪಟ್ಟಿಯಲ್ಲಿನ ಅವರ ಹೆಸರು ಯಾವ ಕ್ರಮ ಸಂಖ್ಯೆಯಲ್ಲಿದೆ ಅದನ್ನು ನಮೂದಿಸಬೇಕು.

ಅದರ ನಂತರ ಕೆಳಗಿನ ಕಾಲಂಗಳಲ್ಲಿ ನಿಮ್ಮ ಜನ್ಮದಿನಾಂಕ, ಆಧಾರ್ ನಂಬರ್ ಇದ್ದರೆ ಹಾಕಿ ಮೊಬೈಲ್ ನಂಬರ್ ತುಂಬಬೇಕು. ಜೊತೆಗೆ ತಂದೆ/ಪೋಷಕರ ಹೆಸರು, ತಾಯಿ ಹೆಸರು ಮತ್ತು ಸಂಗಾತಿಯ ಹೆಸರು ಬರೆದು ಅವರ ಎಪಿಕ್ ನಂಬರ್ ಅಂದರೆ ವೋಟರ್ ಐಡಿ ನಂಬರ್ ಇದ್ದರೆ ಅವುಗಳನ್ನು ತುಂಬಿ ಕೆಳಗೆ ಸಹಿ ಮಾಡಿ ಒಂದು ಪ್ರತಿಯನ್ನು ನೀವು ಇಟ್ಟುಕೊಂಡು ಇನ್ನೊಂದು ಪ್ರತಿಯನ್ನು ಬಿಎಲ್‌ಓಗೆ ಕೊಡಬೇಕು.

ಇದನ್ನು ಸರಿಯಾಗಿ ತುಂಬಬೇಕು. ಇದನ್ನು ನೋಡಿಕೊಂಡೇ ಬಿಎಲ್‌ಓಗಳು ತಮ್ಮ ಮೊಬೈಲ್ ಆಪ್‌ನಲ್ಲಿ ಅಪ್ಲೋಡ್ ಮಾಡುತ್ತಾರೆ. ಅದರ ಆಧಾರದಲ್ಲಿಯೇ ನಿಮ್ಮ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಬರುತ್ತದೆ. ಒಂದು ವೇಲೆ ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ದರೆ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ.

ಇದಿಷ್ಟು ಪ್ರಕ್ರಿಯೆ ಎಸ್‌ಐಆರ್‌ನಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಇದು ಜೂನ್ 30ರಿಂದ ಜುಲೈ 29ರವರೆಗೂ ಒಂದು ತಿಂಗಳು ನಡೆದು ಆಗಸ್ಟ್ 5 ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗುತ್ತದೆ. ಅಲ್ಲಿ ನಿಮ್ಮ ಹೆಸರು ಇದ್ದರೆ ಆಗ ನಿಮ್ಮ ಮತ ಉಳಿದುಕೊಂಡಂತೆ. ಒಂದು ವೇಳೆ ಸ್ಪೆಲ್ಲಿಂಗ್ ಮಿಸ್ಟೇಕ್ ಇತ್ಯಾದಿ ಕಾರಣಕ್ಕೆ ಇಲ್ಲವಾದರೆ ಆಗ ನೀವು ದಾಖಲೆಗಳನ್ನು ಕೊಟ್ಟು ಫಾರ್ಮ್ 6 ಜೊತೆಗೆ ಡಿಕ್ಲರೇಷನ್ ಅನ್ನು ತುಂಬಿಕೊಡಬೇಕು. ನಿಮಗೆ ನೋಟಿಸ್ ಬಂದರೆ ದಾಖಲೆಗಳ ಜೊತೆ ವಿಚಾರಣೆಗೆ ಹೋಗಬೇಕು. ಅಲ್ಲಿ ಸಮಂಜಸ ಅನಿಸಿದರೆ ಅಂತಿಮ ಮತದಾರರ ಪಟ್ಟಿಗೆ ನಿಮ್ಮ ಹೆಸರು ಸೇರಿಸುತ್ತಾರೆ.

ಒಟ್ಟಿನಲ್ಲಿ ಎಸ್‌ಐಆರ್ ಎಂಬುದು ಅಗತ್ಯವಿಲ್ಲದ, ಕಿರುಕುಳ ನೀಡುವ, ದಾಖಲೆಗಾಗಿ ಅಲೆದಾಡುವ ಪ್ರಕ್ರಿಯೆಯಾಗಿದೆ. ಹಾಗಾಗಿ ಇದರ ವಿರುದ್ಧ ನಿರಂತಹ ಹೋರಾಟ ಮಾಡುವುದು ಸಹ ಅಗತ್ಯವಾಗಿದೆ. ಹಾಗಾಗಿ ಎಲ್ಲರೂ ಇದರ ವಿರುದ್ಧ ದನಿ ಎತ್ತಿ, ಜೊತೆಗೆ ಎಸ್‌ಐಆರ್‌ನಲ್ಲಿ ಎಲ್ಲರ ಮತ ಉಳಿದುಕೊಳ್ಳಲು ನೀವು ಸಹ ಸಹಾಯ ಮಾಡಿ.

SIR ನಡೆದ ರಾಜ್ಯಗಳ ಪರಿಸ್ಥಿತಿ – ಡಿಲೀಟ್ ಆದ ಮತದಾರರ ಸಂಖ್ಯೆ
ಬಿಹಾರ: 47 ಲಕ್ಷ                                        
ಗುಜರಾತ್: 68 ಲಕ್ಷ
ಮಧ್ಯ ಪ್ರದೇಶ: 34 ಲಕ್ಷ
ರಾಜಸ್ಥಾನ: 31 ಲಕ್ಷ
ಛತ್ತೀಸ್‌ಘಡ: 25 ಲಕ್ಷ
ಕೇರಳ:  9 ಲಕ್ಷ
ತಮಿಳುನಾಡು: 74 ಲಕ್ಷ
ಉತ್ತರ ಪ್ರದೇಶ: 2 ಕೋಟಿ 4 ಲಕ್ಷ
ಪಶ್ಚಿಮ ಬಂಗಾಳ; 91 ಲಕ್ಷ

ಪೋಸ್ಟ್ ಹಂಚಿಕೊಳ್ಳಿ:

ಮುತ್ತುರಾಜು
ಮುತ್ತುರಾಜು
ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಬಲೇಶ್ವರ ನಾಕಾ ರಸ್ತೆ ಕಾಮಗಾರಿ ವಿಳಂಬಕ್ಕೆ ಆಪ್ ಆಕ್ರೋಶ; ಪಾಲಿಕೆಗೆ ಒಂದು ವಾರ ಗಡುವು

ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ಬಬಲೇಶ್ವರ ನಾಕಾದಿಂದ ನಾಯರಾ ಪೆಟ್ರೋಲ್ ಪಂಪ್‌ವರೆಗಿನ ರಸ್ತೆಯ...

ಭಾರತ & ಚೀನಾದ H-1B ಉದ್ಯೋಗಿಗಳಿಂದ ಅಮೆರಿಕನ್ನರ ಉದ್ಯೋಗಕ್ಕೆ ಕುತ್ತು; ಸಂಸದ ರಿಲೆ ಮೂರ್ ಆರೋಪ

ಅಮೆರಿಕದ ಕಂಪ್ಯೂಟರ್‌ ಸೈನ್ಸ್‌ ಪದವೀಧರರ ಉದ್ಯೋಗಾವಕಾಶಗಳನ್ನು ಭಾರತ ಮತ್ತು ಚೀನಾದಿಂದ ಬರುವ...

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ; ಸುಪ್ರೀಂನದ್ದು ದ್ವಂದ್ವ ನಿಲುವಲ್ಲವೇ?

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ...

ದೇಶ ತೊರೆಯುವಂತೆ ನೋಟಿಸ್‌; ಹೈಕೋರ್ಟ್ ಮೆಟ್ಟಿಲೇರಿದ ನಟ ಇಮ್ರಾನ್ ಖಾನ್

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆದ...