ಸೀಟ್ ಬ್ಲಾಕಿಂಗ್ ಸಮಸ್ಯೆಯು ಕೇವಲ ಆರ್ಥಿಕ ವಂಚನೆಯಷ್ಟೇ ಅಲ್ಲ, ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕುಸಿಯುವಂತೆ ಮಾಡಿದೆ. ಅರ್ಹ ವಿದ್ಯಾರ್ಥಿಗಳ ಅವಕಾಶ ಕಸಿದುಕೊಂಡು, ಆರ್ಥಿಕವಾಗಿ ಸದೃಢರಾದವರಿಗೆ ನೀಡುವ ಈ ಪದ್ಧತಿಯು, ಶಿಕ್ಷಣದ ಸಮಾನತೆಯ ತತ್ವಕ್ಕೆ ವಿರುದ್ಧವಾಗಿದೆ...
ಕರ್ನಾಟಕದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ, ವಿಶೇಷವಾಗಿ ಸಿಇಟಿ ಮೂಲಕ ಪ್ರವೇಶ ಪಡೆಯುವ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ವೃತ್ತಿಪರ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಸೀಟ್ ಬ್ಲಾಕಿಂಗ್ ಸಮಸ್ಯೆಯು ಕೆಲವು ದಶಕಗಳಿಂದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಗೆ ಗಂಭೀರ ಸಮಸ್ಯೆಯಾಗಿದೆ. ವಿದ್ಯೆಯನ್ನೇ ನಂಬಿ ಸಾಲಸೋಲ ಮಾಡಿ ವೈದ್ಯ, ಇಂಜಿನಿಯರ್ ಆಗಬೇಕೆಂಬ ಬಡವರು, ಗ್ರಾಮೀಣ ಭಾಗ ಹಾಗೂ ಶೋಷಿತ ಸಮುದಾಯದವರ ಕನಸನ್ನು ವಂಚಕ ವ್ಯವಸ್ಥೆ ಕಿತ್ತುಕೊಳ್ಳುತ್ತಲೇ ಇದೆ. ನಿನ್ನೆಯಷ್ಟೆ ಎಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬೆಂಗಳೂರಿನ ಮೂರು ಪ್ರತಿಷ್ಠಿತ ಕಾಲೇಜು ಸೇರಿ 18ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿ ಆರೋಪಿಗಳಿಗೆ ಸೇರಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ವಾಸ್ತವ ಏನಂದರೆ ಈ ಅಕ್ರಮ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(ಕೆಇಎ) ಅಧಿಕಾರಿಗಳು ಕಳೆದ ವರ್ಷ ಮಲ್ಲೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕೆಇಎ ಸೀಟು ಹಂಚಿಕೆಯಲ್ಲಿ ಸೀಟು ಪಡೆದಿದ್ದ 2625 ಅಭ್ಯರ್ಥಿಗಳು ಕಾಲೇಜಿಗೆ ಪ್ರವೇಶ ಪಡೆದಿರಲಿಲ್ಲ. ಈ ಸಂಬಂಧ ಅಭ್ಯರ್ಥಿಗಳಿಗೆ ಕೆಇಎ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಇದರಲ್ಲಿ 2208 ಮಂದಿ ಶುಲ್ಕ ಪಾವತಿಸಿರಲಿಲ್ಲ. 95 ಮಂದಿ ಪಾವತಿಸಿದ್ದರೂ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡಿರಲಿಲ್ಲ. 45 ಮಂದಿ ಅಲ್ಪ ಶುಲ್ಕ ಪಾವತಿಸಿದ್ದರು. ಬೇಡಿಕೆಯಿರುವ ಕಾಲೇಜುಗಳಲ್ಲಿಯೇ 40 ರಿಂದ 90ರವರೆಗೂ ಸೀಟುಗಳನ್ನು ಬ್ಲಾಕ್ ಮಾಡಿದ್ದರು. ಈ ರೀತಿ ಉಳಿಕೆಯಾಗಿರುವ ಸೀಟುಗಳನ್ನು ಅಂತಿಮವಾಗಿ ಮ್ಯಾನೇಜ್‌ಮೆಂಟ್ ಕೋಟಾಕ್ಕೆ ಹಿಂದಿರುಗಿಸಿರುವುದರಿಂದ ಇದನ್ನು ಹೆಚ್ಚಿನ ಹಣಕ್ಕೆ ಮಾರಿಕೊಳ್ಳಲು ಕಾಲೇಜುಗಳಿಗೆ ಅಭ್ಯರ್ಥಿಗಳೇ ಅವಕಾಶ ಮಾಡಿಕೊಟ್ಟಿದ್ದರು. ಬ್ಲಾಕ್ ಮಾಡಿದ್ದ ಸೀಟುಗಳನ್ನು 60 ರಿಂದ 70 ಲಕ್ಷಕ್ಕೆ ಮಾರಾಟ ಮಾಡಿದ್ದರು. ಮಧ್ಯವರ್ತಿಗಳು ಅಭ್ಯರ್ಥಿಗಳ ಲಾಗಿನ್ ಪಾಸ್‌ವರ್ಡ್, ಸೀಕ್ರೆಟ್ ಕೀ ಬಳಸಿ ಅಭ್ಯರ್ಥಿ ಪರ ಆಯ್ಕೆ ಮಾಡಿಸಲಾಗಿತ್ತು ಎಂಬುದು ತನಿಖೆಯಿಂದ ಬಳಕಿಗೆ ಬಂದಿತ್ತು.
ರಾಜ್ಯ ಸರ್ಕಾರ ಮತ್ತು ಕರ್ನಾಟಕ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಸಂಘದ ನಡುವಿನ ಒಮ್ಮತದ ಒಪ್ಪಂದದ ಪ್ರಕಾರ, ಸಿಇಟಿ ಮೂಲಕ ಮೂರು ಸುತ್ತಿನ ಹಂಚಿಕೆಯ ನಂತರ ಉಳಿದ ಸೀಟುಗಳು ಹಾಗೂ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡ ನಂತರ ಪ್ರವೇಶ ಪಡೆಯದ ಸೀಟುಗಳನ್ನು ಖಾಸಗಿ ಕಾಲೇಜುಗಳು ಮ್ಯಾನೇಜ್‌ಮೆಂಟ್ ಕೋಟಾದ ಮೂಲಕ ಭರ್ತಿ ಮಾಡಿಕೊಳ್ಳಬಹುದು. ಇದು ಸಿಟ್ ಬ್ಲಾಕಿಂಗ್ ದಂಧೆಯ ಮೂಲ. ವೈದ್ಯಕೀಯ ಕೋರ್ಸ್ ಆಕಾಂಕ್ಷಿಯಾಗಿರುವ, ಸಿಇಟಿಯಲ್ಲಿ ಉನ್ನತ ಶ್ರೇಣಿಯಲ್ಲಿರುವ ವಿದ್ಯಾರ್ಥಿಗಳು ಎಂಜನಿಯರಿಂಗ್ ಸೀಟು ಹಂಚಿಕೆಯಲ್ಲಿ ಭಾಗವಹಿಸುವಂತೆ ಮಾಡಿ, ಕೊನೆಯ ಸುತ್ತಿನವರೆಗೂ ಪ್ರವೇಶ ಪಡೆಯದೇ ಸೀಟು ಕಾಯ್ದಿರಿಸಲಾಗುತ್ತದೆ. ಹೀಗೆ ಬೇಡಿಕೆ ಇರುವ ಕೃತಕ ಬುದ್ಧಿಮತ್ತೆ, ಕಂಪ್ಯೂಟರ್ ಸೈನ್ಸ್ ಮೊದಲಾದ ಕೋರ್ಸ್‌ಗಳಿಗೆ ಆಡಳಿತ ಮಂಡಳಿಗಳು ಒಂದು ಸೀಟಿಗೆ 60 ಲಕ್ಷಕ್ಕೂ ಹೆಚ್ಚಿನ ದರದವರೆಗೂ ಸೀಟು ಮಾರಾಟ ಮಾಡಿಕೊಳ್ಳುತ್ತವೆ.
ವೈದ್ಯಕೀಯ ಕಾಲೇಜುಗಳಲ್ಲೂ ಸೀಟ್ ಬ್ಲಾಕಿಂಗ್ ದಂಧೆ
ಇ.ಡಿ ಅಧಿಕಾರಿಗಳು ಸೀಟ್ ಬ್ಲಾಕಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸುತ್ತಿರುವುದು ಇದೇ ಮೊದಲೇನಲ್ಲ. ಆಗಾಗ ದಾಳಿ ನಡೆಯುತ್ತಿರುತ್ತದೆ. ಕೆಲವು ವರ್ಷಗಳ ಹಿಂದೆ ವೈದ್ಯಕೀಯ ಕಾಲೇಜುಗಳಲ್ಲಿ ಸೀಟ್ ಬ್ಲಾಕಿಂಗ್ ದಂಧೆ ನಡೆದಿರುವುದನ್ನು ಜಾರಿ ನಿರ್ದೇಶನದ ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಈ ಹಗರಣದಲ್ಲಿ ಕಾಲೇಜುಗಳ ಮಾಲೀಕರು ಭಾಗಿಯಾಗಿದ್ದರು. ಪ್ರಕರಣದ ಅನುಸಾರ ಖಾಸಗಿ ವೈದ್ಯಕೀಯ, ದಂತ ವೈದ್ಯಕೀಯ ಕಾಲೇಜುಗಳು ಮಾಲೀಕರು ಹಾಗೂ ಮುಖ್ಯಸ್ಥರು ತಮ್ಮ ಏಜೆಂಟ್ ಹಾಗೂ ಮಧ್ಯವರ್ತಿಗಳ ಮೂಲಕ ನಾನಾ ಆಮಿಷಗಳನ್ನೊಡ್ಡಿ ಅಭ್ಯರ್ಥಿಗಳನ್ನು ದಾಖಲಾತಿಯಿಂದ ಹಿಂದೆ ಸರಿಯುವಂತೆ ಮಾಡಿದ್ದರು. ನಂತರ, ಈ ಸೀಟುಗಳು ಖಾಲಿ ಉಳಿದ ನಂತರ ಸಂಬಂಧಪಟ್ಟ ಕಾಲೇಜುಗಳು ಕೆಇಎಗೆ ಒಪ್ಪಿಸಿ, ಇವುಗಳನ್ನು ಮ್ಯಾನೇಜ್‌ಮೆಂಟ್ ಸೀಟ್‌ಗಳನ್ನಾಗಿ ಪರಿವರ್ತಿಸಿ ಕಡಿಮೆ ಅಂಕ ಪಡೆದ ಅಭ್ಯರ್ಥಿಗಳಿಗೆ ಹೆಚ್ಚಿನ ಮೊತ್ತಕ್ಕೆ ಮಾರಿಕೊಳ್ಳಲಾಗಿತ್ತು. ಹಾಗೆ ನೋಡಿದರೆ ಮ್ಯಾನೇಜ್‌ಮೆಂಟ್ ಕೋಟಾದ ಅಡಿಯಲ್ಲಿ ಅಕ್ರಮವಾಗಿ ಭಾರಿ ಹಣ ಸಂಪಾದಿಸುವುದು ‘ಕರ್ನಾಟಕ ಶಿಕ್ಷಣ ಸಂಸ್ಥೆಗಳು (ಕ್ಯಾಪಿಟೇಷನ್ ಶುಲ್ಕ ನಿಷೇಧ) ಕಾಯಿದೆ-1984’ರ ಅನ್ವಯ ಕಾನೂನುಬಾಹಿರವಾಗಿದೆ.
1990 ದಶಕದಿಂದಲೇ ಸೀಟ್ ಬ್ಲಾಕಿಂಗ್ ಆರಂಭ
ಸೀಟ್ ಬ್ಲಾಕಿಂಗ್ ಹಗರಣದ ಇತಿಹಾಸವನ್ನು ಗಮನಿಸಿದರೆ 1990ರ ದಶಕದಿಂದಲೇ ಈ ದಂಧೆ ಹುಟ್ಟುಕೊಂಡಿದೆ. ಮೊದಲು ಇದು ಬಹುತೇಕ ಕೆಲವು ಖಾಸಗಿ ಕಾಲೇಜುಗಳ ಮಟ್ಟಿಗೆ ಸೀಮಿತವಾಗಿತ್ತು. ಆಡಳಿತ ಮಂಡಳಿಯವರು ಹಾಗೂ ಅವರ ಜೊತೆ ನಿಕಟ ಸಂಪರ್ಕ ಹೊಂದಿದ ಏಜೆಂಟ್‌ಗಳು ಸಿಇಟಿ ಮೂಲಕ ಬೇಡಿಕೆಯಿರುವ ಸೀಟುಗಳನ್ನು ಸುಳ್ಳು ಹೆಸರುಗಳಲ್ಲಿ ಅಥವಾ ಒತ್ತಡ, ಮತ್ತಿತ್ತರದ ಮೂಲಕ ‘ಬ್ಲಾಕ್’ ಮಾಡುತ್ತಿದ್ದರು. ಬಳಿಕ ಈ ಸೀಟ್‌ಗಳನ್ನು ಕಡಿಮೆ ಅಂಕ ಬಂದ ವಿದ್ಯಾರ್ಥಿಗಳಿಗೆ ‘ಡೊನೇಷನ್’ ಅಥವಾ ‘ಮ್ಯಾನೇಜ್‌ಮೆಂಟ್ ಕೋಟಾ’ ಎಂಬ ಹೆಸರಿನಲ್ಲಿ ಹೆಚ್ಚಿನ ಮೊತ್ತಕ್ಕೆ ಮಾರಲಾಗುತ್ತಿತ್ತು. ಇದರಿಂದಾಗಿ ಅರ್ಹತೆ ಇರುವ ವಿದ್ಯಾರ್ಥಿಗಳು ಸೀಟು ತಪ್ಪಿಸಿಕೊಳ್ಳಬೇಕಾಗಿ ಬರುತ್ತಿತ್ತು. ಮತ್ತೊಂದೆಡೆಯಿಂದ ಹಣವಿರುವವರಿಗೆ ಸುಲಭ ಪ್ರವೇಶ ಸಿಗುತ್ತಿತ್ತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಧಿಕಾರಸ್ಥರು ಅನ್ನ ತಿನ್ನುವವರೇ ಆದರೆ, ಭೂ ಸ್ವಾಧೀನ ಕೈಬಿಡಲಿ
ಈ ತಂತ್ರ ಕಾಲಕ್ರಮೇಣ ಹಲವಾರು ಮಾದರಿಗಳಲ್ಲಿ ರೂಪಾಂತರಗೊಂಡಿತು. 2000ರ ನಂತರ ಆಧುನಿಕ ತಂತ್ರಜ್ಞಾನಗಳು ಬಂದ ಮೇಲೆ ಈ ಬ್ಲಾಕಿಂಗ್ ವ್ಯವಸ್ಥೆಯು ಇನ್ನಷ್ಟು ಜಟಿಲವಾಗಿತ್ತಾದರೂ ಸುಲಭವಾಗಿ ನಿರ್ವಹಿಸಬಹುದಾದಂತೆಯೂ ಆಗಿತ್ತು. ಇತ್ತೀಚಿನ ವರ್ಷಗಳಲ್ಲಿ ಇಂಟರ್ನೆಟ್ ಹಾಗೂ ಡಿಜಿಟಲ್ ಬಂದ ನಂತರವೂ ಈ ದುರಾಚಾರ ಕಡಿಮೆಯಾಗಿಲ್ಲ. ವಂಚಕರು ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಕೆಲವರು ಬೇರೆ ವಿದ್ಯಾರ್ಥಿಗಳ ಹೆಸರಿನಲ್ಲಿ ವಿವಿಧ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಿ, ತಕ್ಷಣವೇ ಅವರಿಗೆ ಒದಗುವ ಸೀಟ್‌ಗಳನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಿ ಇಟ್ಟುಕೊಳ್ಳುತ್ತಾರೆ. ಈ ವಿಧದ ಬ್ಲಾಕಿಂಗ್ ಕೊನೆಗೆ ಅಧಿಕ ಮೊತ್ತದ ಹಣ ನೀಡಲು ಸಿದ್ಧವಿರುವ ಖಾಸಗಿ ವ್ಯಕ್ತಿಗಳಿಗೆ ಮಾರಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಇಂತಹ ಬ್ಲಾಕ್ ಸೀಟ್‌ಗಳ ಬೆಲೆ 50 ಲಕ್ಷದಿಂದ 1 ಕೋಟಿಗೂ ಅಧಿಕ ಮೊತ್ತಕ್ಕೆ ಮಾರಾಟವಾಗುತ್ತವೆ.
ದಂಧೆಕೋರರು ಕಾಲಮಿತಿ ಹಾಗೂ ಆಯ್ಕೆ ಕ್ರಮದ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಿಇಟಿಯಲ್ಲಿ ಒಂದು ಬಾರಿ ಯಾರಾದರೂ ಒಬ್ಬ ವಿದ್ಯಾರ್ಥಿ ಒಂದು ಕೋರ್ಸ್ ಅಥವಾ ಒಂದು ಕಾಲೇಜನ್ನು ಆಯ್ಕೆ ಮಾಡಿದರೆ, ಅದರ ಮೇಲೆ ಬೇರೆ ಯಾರಿಗೂ ಪ್ರವೇಶ ದೊರೆಯುವುದಿಲ್ಲ. ಆದರೆ ಕೆಲವರು ತಮ್ಮದೇ ಏಜೆಂಟ್‌ಗಳ ಮೂಲಕ ಅಥವಾ ನಕಲಿ ಹೆಸರುಗಳಲ್ಲಿ ತಮಗೆ ಬೇಕಾದ ಕೋರ್ಸ್‌ಗಳಿಗೆ ಅರ್ಜಿ ಹಾಕಿಸುತ್ತಾರೆ. ಆದರೆ ಪ್ರವೇಶ ತೆಗೆದುಕೊಳ್ಳದೆ ಆ ಸೀಟ್ ಅನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡುತ್ತಾರೆ. ಇದು ‘ಕೌನ್ಸೆಲಿಂಗ್ ಹ್ಯಾಕಿಂಗ್’ ಎನ್ನಲಾಗುವ ತಂತ್ರ. ನಂತರ ಆ ಸೀಟ್ ಬಿಡುಗಡೆ ಆಗುವವರೆಗೆ ಬಹುಮಟ್ಟಿಗೆ ಪ್ರಾಮಾಣಿಕ ವಿದ್ಯಾರ್ಥಿಗಳು ನಿರೀಕ್ಷೆಯಲ್ಲಿ ಕಾಯಬೇಕಾಗುತ್ತದೆ ಅಥವಾ ಬೇಸರದಿಂದ ಬೇರೆ ಕೋರ್ಸ್‌ಗಳಿಗೆ ಸೇರಿಕೊಳ್ಳುತ್ತಾರೆ. ಇತ್ತ ಮಧ್ಯವರ್ತಿಗಳು ಹಾಗೂ ವಂಚಕರು ಅವರು ತಾವು ಬ್ಲಾಕ್ ಮಾಡಿಟ್ಟ ಸೀಟ್‌ಅನ್ನು ಹೆಚ್ಚು ಹಣಕ್ಕೆ ಮಾರಿಕೊಳ್ಳುತ್ತಾರೆ.
ಇದಲ್ಲದೆ ಇನ್ನೊಂದು ರೀತಿಯಲ್ಲಿಯೂ ಬ್ಲಾಕಿಂಗ್ ದಂಧೆ ನಡೆಯುತ್ತಿದೆ. ಕೆಲ ಖಾಸಗಿ ಕಾಲೇಜುಗಳು ತಮ್ಮ ಮ್ಯಾನೇಜ್‌ಮೆಂಟ್ ಕೋಟಾ ಸೀಟ್‌ಗಳನ್ನು ಸರ್ಕಾರದ ಸಿಇಟಿ ಲೆಕ್ಕಾಚಾರಕ್ಕೆ ನೀಡಿದಂತೆಯೇ ತೋರಿಸುತ್ತವೆ. ಆದರೆ ನಿಜವಾಗಿ ಆ ಸೀಟ್‌ಗಳು ಮಾರಾಟವಾಗಿರುತ್ತವೆ ಅಥವಾ ಈ ಹಿಂದೆ ಬ್ಲಾಕ್ ಆಗಿರುತ್ತವೆ. ಕಾನೂನುಬದ್ಧವಾಗಿಯೇ ಎಲ್ಲವೂ ನಡೆದಂತೆ ತೋರುವ ಈ ಪ್ರಕ್ರಿಯೆಯ ಹಿಂದಿರುವ ನಿಖರ ಮಾಹಿತಿಯನ್ನು ರಾಜ್ಯ ಸರ್ಕಾರ ಅಥವಾ ಕೌನ್ಸೆಲಿಂಗ್ ಆಯೋಜಕ ಸಂಸ್ಥೆಗಳಿಗೆ ಸಹ ಖಚಿತವಾಗಿ ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. 2015ರ ಸುಮಾರಿಗೆ, ಬೆಂಗಳೂರಿನ ಕೆಲವು ಮುಖ್ಯ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಈ ರೀತಿಯ ವಂಚನೆಯ ಆರೋಪಗಳು ಕೇಳಿಬಂದವು, ಆದರೆ ಈ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಕಷ್ಟವಾಗಿತ್ತು.
ಸೀಟ್ ಬ್ಲಾಕಿಂಗ್ ಸಮಸ್ಯೆಯು ಕೇವಲ ಆರ್ಥಿಕ ವಂಚನೆಯಷ್ಟೇ ಅಲ್ಲ, ಇದು ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕುಸಿಯುವಂತೆ ಮಾಡಿದೆ. ಅರ್ಹ ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಕಸಿದುಕೊಂಡು, ಆರ್ಥಿಕವಾಗಿ ಸಮರ್ಥರಾದವರಿಗೆ ಮಾತ್ರ ಸೀಟುಗಳನ್ನು ನೀಡುವ ಈ ಪದ್ಧತಿಯು, ಶಿಕ್ಷಣದ ಸಮಾನತೆಯ ತತ್ವಕ್ಕೆ ವಿರುದ್ಧವಾಗಿದೆ. ಈ ಸಮಸ್ಯೆಯನ್ನು ಸಂಪೂರ್ಣವಾಗಿ ತಡೆಗಟ್ಟಲು, ಕೆಇಎ ಮತ್ತು ಕಾಮೆಡ್-ಕೆನಂತಹ ಸಂಸ್ಥೆಗಳು ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಸಿಇಟಿಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಆಧಾರ್ ದೃಢೀಕರಣ, ಒಂದು ಮೊಬೈಲ್ ಸಂಖ್ಯೆಯಿಂದ ಒಂದು ಅರ್ಜಿ ಮಾತ್ರ ಸಲ್ಲಿಕೆಗೆ ಅವಕಾಶ, ಒಟಿಪಿ ನಮೂದು ಮುಖ ಚಹರೆ ದಾಖಲಾತಿ ಕಡ್ಡಾಯ, ಗ್ರಾಮ ಒನ್ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ, ಆಯ್ಕೆ ನಮೂದಿಸಿದರೂ ದಂಡ ಸಹಿತ ಮುಂದಿನ ಸುತ್ತಿಗೆ ಅವಕಾಶಗಳಂತಹ ಸೀಟು ಹಂಚಿಕೆಯ ಪ್ರಕ್ರಿಯೆಗಳನ್ನು ಇನ್ನಷ್ಟು ಪಾರದರ್ಶಕಗೊಳಿಸಬೇಕು. ಹಾಗೆಯೇ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುವುದು ಕೂಡ ಅಗತ್ಯವಾಗಿದೆ, ಇದರಿಂದ ದಲ್ಲಾಳಿಗಳ, ವಂಚಕರ ಜಾಲಕ್ಕೆ ಬೀಳುವುದನ್ನು ತಪ್ಪಿಸಬಹುದು.
“ಆಡಳಿತ ನೆಡೆಸುವವರ ಪಾಲು ಇದೆ“
ಸಿಇಟಿ ಆರಂಭವಾದಾಗಿನಿಂದ ಬ್ಲಾಕಿಂಗ್ ಸೇರಿದಂತೆ ಹಲವು ವಂಚನೆಗಳು ನಡೆಯುತ್ತಲಿವೆ. ಮೂರು ದಶಕದಿಂದ ಆಡಳಿತ ನಡೆಸಿದ ಸರ್ಕಾರಗಳು ಕೂಡ ಇದರಲ್ಲಿ ಭಾಗಿಯಾಗಿವೆ. ಕೆಲವು ವರ್ಷಗಳ ಹಿಂದೆ ಇದೇ ರೀತಿಯ ಅನುಭವವಾಗಿ ವಂಚನೆಯಲ್ಲಿ ಬೀಳದೆ ಸ್ವಲ್ಪದರಲ್ಲಿಯೇ ಪಾರಾದ ಹೆಸರೇಳಲಿಚ್ಛಿಸದ ವ್ಯಕ್ತಿಯೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
“ನಾನು ಕೆಲವು ವರ್ಷಗಳ ಹಿಂದೆ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಸಿಇಟಿ ಕೌನ್ಸಲಿಂಗ್‌ನಲ್ಲಿ ಭಾಗವಹಿಸಿದಾಗ, ಮಧ್ಯವರ್ತಿಯೊಬ್ಬ ದೊಡ್ಡ ಮೊತ್ತಕ್ಕೆ ಸೀಟ್ ಭರವಸೆ ನೀಡಿದ. ಆದರೆ, ಅವನ ಮಾತಿನಲ್ಲಿ ವಂಚನೆಯ ವಾಸನೆ ಕಂಡು, ನಾನು ಎಚ್ಚರಿಕೆಯಿಂದ ಯೋಚಿಸಿದೆ. ಅವನ ಮಾತನ್ನು ಗಮನಿಸಿದರೆ ಕಾಲೇಜು ಮಂಡಳಿಯ ಬೆಂಬಲವಿಲ್ಲದೆ ಈ ರೀತಿ ಮಾಡುವುದಿಲ್ಲ ಎಂದು ತಿಳಿಯಿತು. ನಾನು ಸ್ವತಃ ಕೌನ್ಸಲಿಂಗ್ ಪ್ರಕ್ರಿಯೆಯನ್ನು ಗಮನಿಸಿ, ನಿಯಮಗಳನ್ನು ಅನುಸರಿಸಿ, ನಾನು ಇಷ್ಟಪಟ್ಟ ಕಾಲೇಜು ಸಿಗದಿದ್ದರೂ ಸ್ವಲ್ಪ ದೂರವಿದ್ದ ಕಾಲೇಜಿನಲ್ಲಿ ಪ್ರವೇಶ ಪಡೆದು ಇಂಜಿನಿಯರಿಂಗ್ ಪೂರ್ಣಗೊಳಿಸಿದೆ. ವಂಚನೆಯಿಂದ ಸ್ವಲ್ಪದರಲ್ಲೇ ಪಾರಾದೆ. ವಿದ್ಯಾರ್ಥಿಗಳಿಗೆ ನನ್ನ ಸಲಹೆ ಏನಂದರೆ ಮಧ್ಯವರ್ತಿಗಳಿಗೆ ಬಲಿಯಾಗದೆ, ಎಲ್ಲರೂ ಎಚ್ಚರಿಕೆಯಿಂದ ಕೌನ್ಸಲಿಂಗ್‌ನಲ್ಲಿ ಭಾಗವಹಿಸಿ, ನಿಮ್ಮಿಷ್ಟದ ಕಾಲೇಜು ಇಲ್ಲದಿದ್ದರೂ ಸಾಧಾರಣ ಕಾಲೇಜಿನಲ್ಲಿ ಪ್ರವೇಶ ದೊರಕುತ್ತದೆ’ ಎಂದು ಹೇಳಿದರು.