ಸದ್ಯ ಹರಿಯಾಣ ಮತ್ತು ಜಮ್ಮು ಕಾಶ್ಮೀರ ಚುನಾವಣೆ ನಡೆದು ಫಲಿತಾಂಶವೂ ಹೊರಬಿದ್ದಿದೆ. ಹರಿಯಾಣದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ್ದರೆ, ಜಮ್ಮು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಅಧಿಕಾರಕ್ಕೇರಿವೆ. ಈ ನಡುವೆ, ಕರ್ನಾಟಕದಲ್ಲಿ ಮತ್ತೆ ಚುನಾವಣೆ ಸದ್ದು ಕೇಳಿ ಬರುತ್ತಿದೆ. ಎಚ್.ಡಿ.ಕುಮಾರಸ್ವಾಮಿ ಸಂಸದರಾಗಿ ಆಯ್ಕೆಯಾದ ಬಳಿಕ, ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲಿ, ಉಪಚುನಾವಣೆ ನಡೆಯಬೇಕು. ”ಇನ್ನೊಂದು ವಾರದಲ್ಲಿ ಬೈ ಎಲೆಕ್ಷನ್ ದಿನಾಂಕ ಘೋಷಣೆ ಆಗುತ್ತದೆ” ಎಂದು ಎಚ್.ಡಿ ಕುಮಾರಸ್ವಾಮಿ ಅವರೇ ಸುಳಿವು ಕೊಟ್ಟಿದ್ದಾರೆ.
ಚನ್ನಪಟ್ಟಣ ಉಪಚುನಾವಣೆ ಡಿಕೆ ಮತ್ತು ಎಚ್‌ಡಿಕೆ ಕುಟುಂಬಗಳ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ರಾಜ್ಯದಲ್ಲಿ ಆಡಳಿತದಲ್ಲಿರುವ, ಉಪಮುಖ್ಯಮಂತ್ರಿಯೂ ಆಗಿರುವ ಡಿ.ಕೆ ಶಿವಕುಮಾರ್ ಶತಾಯ ಗತಾಯ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಬಾವುಟ ಹಾರಿಸಬೇಕು ಎಂದು ಪಣತೊಟ್ಟಿದ್ದಾರೆ. ತಮ್ಮ ಕ್ಷೇತ್ರವನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಎಚ್.ಡಿ ಕುಮಾರಸ್ವಾಮಿ ಪ್ರತಿತಂತ್ರ ಹೆಣೆಯುತ್ತಿದ್ದಾರೆ. ಕುಮಾರಸ್ವಾಮಿಗೆ ಮಂತ್ರಿಗಿರಿ ಕೊಟ್ಟಿರುವ ಬಿಜೆಪಿ, ಕ್ಷೇತ್ರದಲ್ಲಿ ತಮ್ಮದೇ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಯತ್ನಿಸುತ್ತಿದೆ. ಸದ್ಯ, ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ಜಟಾಪಟಿ ನಡೆಯುತ್ತಿದೆ. ಕಾಂಗ್ರೆಸ್‌ನಿಂದ ಯಾವ ಅಭ್ಯರ್ಥಿ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಬಗ್ಗೆ ನಾನಾ ಚರ್ಚೆಗಳು ಆರಂಭವಾಗಿವೆ.
ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಅವರಿಂದ ತೆರವಾಗಿರುವ ಕ್ಷೇತ್ರದ ಮೇಲೆ ಈಗಾಗಲೇ ಅವರ ರಾಜಕೀಯ ಎದುರಾಳಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಣ್ಣಿಟ್ಟಿದ್ದಾರೆ. ”ಚನ್ನಪಟ್ಟಣ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಯಾರೇ ಅಭ್ಯರ್ಥಿ ಆದರೂ ನನಗೆ ಮತ ಹಾಕಿದಂತೆ, ಚನ್ನಪಟ್ಟಣ ಅಭ್ಯರ್ಥಿ ನಾನೇ” ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಅಂತೆಯೇ, ಡಿಕೆಶಿ ಕಳೆದ ಹಲವು ತಿಂಗಳುಗಳಿಂದ ಚನ್ನಪಟ್ಟಣ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದು, ಜನಸ್ಪಂದನ ಕಾರ್ಯಕ್ರಮ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ. ಉದ್ಯೋಗ ಮೇಳದಂತಹ ಕಾರ್ಯಕ್ರಮಗಳನ್ನು ಮಾಡುತ್ತಾ ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳಲು ಯತ್ನಿಸುತ್ತಿದ್ದಾರೆ. ಚುನಾವಣಾ ಉಸ್ತುವಾರಿಗೆ ಹೋಬಳಿಗೆ ಒಬ್ಬೊಬ್ಬ ಶಾಸಕರನ್ನು ನಿಯೋಜಿಸಿ ಗೆಲುವಿಗೆ ತಂತ್ರ ಹೆಣೆಯುತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸೋಲು ಅನುಭವಿಸಿರುವ ಕಾಂಗ್ರೆಸ್ ನಾಯಕ ಡಿ.ಕೆ ಸುರೇಶ್ ಅವರು ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳು ಆರಂಭದಲ್ಲಿ ಕೇಳಿಬಂದಿದ್ದವು. ಆದರೆ, “ನಮ್ಮ ಪಕ್ಷದಿಂದ ಅಚ್ಚರಿ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ” ಎಂದು ಡಿ.ಕೆ ಸುರೇಶ್ ಸ್ಪಷ್ಟನೆ ನೀಡಿದ್ದರು. ಇನ್ನೊಂದೆಡೆ, ಬಿಜೆಪಿಯಿಂದ ಕಣಕ್ಕೆ ಇಳಿಯುವುದಕ್ಕೆ ಸಿ.ಪಿ ಯೋಗೇಶ್ವರ್ ತುದಿಗಾಲ ಮೇಲೆ ನಿಂತಿದ್ದಾರೆ.
ಇನ್ನು ಟಿಕೆಟ್ ವಿಷಯಕ್ಕಾಗಿ ದೆಹಲಿ ಯಾತ್ರೆಯನ್ನ ಮುಗಿಸಿಕೊಂಡು ಬಂದ ಬಳಿಕ ಸಿ.ಪಿ.ಯೋಗೇಶ್ವರ್, ”ಟಿಕೆಟ್ ವಿಷಯದಲ್ಲಿ ವರಿಷ್ಠರ ನಿರ್ಧಾರಕ್ಕೆ ಬದ್ಧ” ಎಂದು ಕೊಂಚ ಬೇಸರಗೊಂಡಿದ್ದರು. ಆದರೆ, ಈಗ ಮತ್ತೆ ಹುರುಪಿನಿಂದ ಓಡಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಾ ಪಕ್ಷದ ಸ್ಥಳೀಯ ಮುಖಂಡರು ಹಾಗೂ ಹಿತೈಷಿಗಳನ್ನು ಭೇಟಿ ಮಾಡುತ್ತಾ ಬೆಂಬಲ ಕೋರುತ್ತಿದ್ದಾರೆ.
ಇನ್ನೊಂದೆಡೆ, ಚನ್ನಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರ ಓಡಾಟ ಜೋರಾಗಿದ್ದು, ಜೆಡಿಎಸ್ ಅಭ್ಯರ್ಥಿಯೇ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿ ಮುನ್ನೆಲೆಗೆ ಬಂದಿದೆ. ಒಂದು ವೇಳೆ ಬಿಜೆಪಿ ಹೈಕಮಾಂಡ್, ಮೈತ್ರಿ ಕಾರಣಕ್ಕೆ ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟರೆ, ಸಿ.ಪಿ. ಯೋಗೇಶ್ವರ್ ಸ್ವತಂತ್ರ ಅಭ್ಯರ್ಥಿಯಾಗುತ್ತಾರೆ ಇಲ್ಲವೇ, ಕಾಂಗ್ರೆಸ್ ಸೇರಿ, ಮೈತ್ರಿ ಅಭ್ಯರ್ಥಿಯನ್ನು ಸೋಲಿಸಲು ಶ್ರಮಿಸುತ್ತಾರೆ ಎಂಬ ಮಾತಿದೆ.
ಇನ್ನು ಚನ್ನಪಟ್ಟಣ ಕ್ಷೇತ್ರದಲ್ಲಿ ಬಿಜೆಪಿ ಚುನಾವಣಾಪೂರ್ವ ಸಮೀಕ್ಷೆಯೊಂದನ್ನು ನಡೆಸಿದೆ ಎಂದು ಹೇಳಲಾಗಿದೆ. ಈ ಸಮೀಕ್ಷೆಯಲ್ಲಿ ಹೇಳಿರುವಂತೆ ಬಿಜೆಪಿ – ಜೆಡಿಎಸ್ ಅಭ್ಯರ್ಥಿಯಾಗಿ ಯೋಗೇಶ್ವರ್ ಹೊರತುಪಡಿಸಿ ಬೇರಾರೇ ನಿಂತರೂ ಗೆಲುವು ಕಷ್ಟ ಎಂಬುದು ತಿಳಿದುಬಂದಿದೆ.
ಜೊತೆಗೆ ಪಕ್ಷದ ಪ್ರತಿಷ್ಠೆಯಾಗಿಯೂ, ಗೆಲುವನ್ನು ಮಾನದಂಡವಾಗಿ ಪರಿಗಣಿಸಿಯೂ ಯೋಗೇಶ್ವರ್ ಅಭ್ಯರ್ಥಿಯಾದರೆ ಅನುಕೂಲ ಎಂಬುದು ರಾಜ್ಯ ಬಿಜೆಪಿಯ ನಿರ್ಧಾರವಾಗಿದೆ. ಈ ಎಲ್ಲ ಬೆಳವಣಿಗೆಗಳು ಯೋಗೇಶ್ವರ್ ಅವರಲ್ಲಿ ಮತ್ತೆ ಟಿಕೆಟ್ ಆಸೆ ಚಿಗುರುವಂತೆ ಮಾಡಿದೆ.
ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್ ಅಶೋಕ್ ನೇತೃತ್ವದ ಬಿಜೆಪಿ ಮುಖಂಡರ ಗುಂಪೊಂದು ಚನ್ನಪಟ್ಟಣ ಉಪಚುನಾವಣೆಯಲ್ಲಿ ಯೋಗೇಶ್ವರ್ ಅವರಿಗೆ ಟಿಕೆಟ್ ನೀಡಬೇಕೆಂದು ಲಾಬಿ ನಡೆಸುತ್ತಿದೆ. ಬಿಜೆಪಿ ಹೈಕಮಾಂಡ್ ಮಾತ್ರ ಈ ಕುರಿತ ನಿರ್ಧಾರವನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರಿಗೆ ಬಿಟ್ಟಿದೆ ಎಂಬ ಮಾತು ಇದೆ.
ಬಿಜೆಪಿ ಹೈಕಮಾಂಡ್‌ನ ಈ ನಿರ್ಧಾರ ಮೈತ್ರಿ ಪಕ್ಷ ಜೆಡಿಎಸ್‌ಗೆ ಮತ್ತಷ್ಟು ಶಕ್ತಿ ನೀಡಿದಂತಾಗಿದೆ. ಹೀಗಾಗಿ, ಕುಮಾರಸ್ವಾಮಿಯವರು ಇದೀಗ ಚನ್ನಪಟ್ಟಣ ಕ್ಷೇತ್ರದಲ್ಲಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ ಎಂಬ ಮಾತುಗಳು ಮುನ್ನೆಲೆಗೆ ಬಂದಿವೆ. ಟಿಕೆಟ್‌ಗೆ ಸಂಬಂಧಿಸಿದ ಬೆಳವಣಿಗೆಗಳ ಮಧ್ಯೆಯೇ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ಒಂದೆಡೆ ಸಿ.ಪಿ.ಯೋಗೇಶ್ವರ್ ತಾನೇ ಸ್ಪರ್ಧಿಸುವುದಾಗಿ ಹಠಕ್ಕೆ ಬಿದ್ದರೆ, ಇತ್ತ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯವರು, ”ಚನ್ನಪಟ್ಟಣದಲ್ಲಿ ನಾವು ಎರಡು ಬಾರಿ ಗೆದ್ದಿದ್ದೇವೆ. ಕಾರ್ಯಕರ್ತರ ಒಮ್ಮತವಿಲ್ಲದೆ ನಾನು ಯಾವುದೇ ನಿರ್ಧಾರ ಮಾಡಲು ಸಾಧ್ಯವಿಲ್ಲ. ಯೋಗೇಶ್ವರ್ ಪರವಾಗಿ ಬಿಜೆಪಿ ಮುಖಂಡರು ಒತ್ತಾಯ ಮಾಡುತ್ತಿದ್ದಾರೆ. ಅದು ಅವರ ಪಕ್ಷದ ಸಂಘಟನೆ ದೃಷ್ಟಿಯಿಂದ ಇರಬಹುದು. ಅದನ್ನು ನಾನು ತಪ್ಪು ಎಂದು ಹೇಳಲ್ಲ. ಆದರೆ, ಈ ಕ್ಷಣದವರೆಗೆ ಅಂತಹ ಯಾವುದೇ ಒಪ್ಪಂದ ಆಗಿಲ್ಲ” ಎಂದಿದ್ದಾರೆ.
ಮುಂದುವರೆದು, ”ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ರಾಮನಗರದಿಂದ ಸ್ಪರ್ಧಿಸುವಂತೆ ಯೋಗೇಶ್ವರ್ ಅವರಿಗೆ ನಾನೇ ತಿಳಿಸಿದ್ದೆ. ಏಳೆಂಟು ತಿಂಗಳ ಹಿಂದೆಯೇ ಅವರಿಗೆ ಸ್ಪರ್ಧೆ ಮಾಡಿ ಎಂದಿದ್ದೆ. ಆದರೆ, ಅಮಿತ್ ಶಾ ಅವರು ನನಗೆ ಕರೆ ಮಾಡಿ ಮಂಜುನಾಥ್ ಅವರನ್ನು ಅಭ್ಯರ್ಥಿ ಮಾಡಿ ಎಂದಿದ್ದರು. ನಂತರ ನಾವು ಮಂಜುನಾಥ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆವು” ಎಂದು ಹೆಚ್‌ಡಿಕೆ ಹೇಳಿದ್ದಾರೆ.
ಇನ್ನು ನಾನೇ ಅಭ್ಯರ್ಥಿ ಎಂದು ಹೇಳುತ್ತಿರುವ ಡಿಕೆ ಶಿವಕುಮಾರ್ ಮಾತಿನ ಹಿಂದೆ ರಾಜಕೀಯ ಲೆಕ್ಕಾಚಾರಗಳಿವೆ. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಅವರಿಗೆ ರಾಮನಗರ ಜಿಲ್ಲೆಯನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಬೇಕೆಂಬ ಹಂಬಲವಿದೆ. ಸದ್ಯ, ರಾಮನಗರ ಜಿಲ್ಲೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಗಳನ್ನು ಕುಮಾರಸ್ವಾಮಿ ಭದ್ರಕೋಟೆ ಮಾಡಿಕೊಂಡಿದ್ದಾರೆ. ಈ ಕೋಟೆಯನ್ನು ಒಡೆಯಬೇಕೆಂಬುದು ಅವರ ಮೊದಲ ಗುರಿ. ಈಗಾಗಲೇ, ರಾಮನಗರವನ್ನು ಮತ್ತೆ ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಈಗ ಉಳಿದಿರುವುದು ಚನ್ನಪಟ್ಟಣ, ಅದನ್ನೂ ಒಮ್ಮೆ ತಮ್ಮ ತೆಕ್ಕೆಗೆ ತೆಗೆದುಕೊಂಡರೆ, ನಂತರದಲ್ಲಿ ಕ್ಷೇತ್ರವು ಒಬ್ಬರ ಅಥವಾ ಒಂದು ಪಕ್ಷದ ಕೋಟೆಯಾಗಿ ಉಳಿಯುವುದಿಲ್ಲ. ಕುಮಾರಸ್ವಾಮಿ ಅವರ ನೆಲೆಯನ್ನು ಅಲುಗಾಡಿಸಿದರೆ, ಜೆಡಿಎಸ್ ಮೂಲೆಗುಂಪಾಗುತ್ತದೆ.
ಈ ಸುದ್ದಿ ಓದಿದ್ದೀರಾ? ಪ್ರಾದೇಶಿಕ ಪಕ್ಷಗಳ ಭಸ್ಮಾಸುರ – ಬಿಜೆಪಿ
ಏಕೆಂದರೆ, ಲೋಕಸಭಾ ಚುನಾವಣೆಯ ಸಮಯದಲ್ಲಿ ಮಂಡ್ಯದಿಂದ ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡಲ್ಲ ಎಂದಿದ್ದ ಅವರು, ಮಂಡ್ಯದಿಂದಲೇ ಲೋಕಸಭೆಗೆ ಸ್ಪರ್ಧೆ ಮಾಡಿ ಸಚಿವರೂ ಆದರು. ಅಂತೆಯೇ ಚನ್ನಪಟ್ಟಣ ಬೈ ಎಲೆಕ್ಷನ್‌ನಲ್ಲಿಯೂ ಕೂಡ ಅವರು ತಮ್ಮ ರಾಜಕೀಯ ತಂತ್ರವನ್ನ ಮುಂದುವರೆಸಬಹುದು. ಇತ್ತ ಬಿಜೆಪಿಯ ಅಧಿಕೃತ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ನಿಲುವೇನು ಎಂಬುದೇ ಸದ್ಯದ ಪ್ರಶ್ನೆಯಾಗಿದೆ.
ಆಸ್ತಿ ಮತ್ತು ಸಾಮ್ರಾಜ್ಯ ವಿಸ್ತರಣೆಗಾಗಿ ಡಿಕೆಶಿ ಮತ್ತು ಎಚ್‌ಡಿಕೆಗೆ ಈ ಚನ್ನಪಟ್ಟಣ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಇಬ್ಬರ ನಡುವಿನ ಯುದ್ದಕ್ಕೆ ಮತ್ತೊಮ್ಮೆ ಸಾಕ್ಷಿಯಾಗಲಿದೆ. ಸದ್ಯ ಟಿಕೆಟ್ ವಿಚಾರವಾಗಿ ರಾಜಕೀಯ ವಲಯದಲ್ಲಿ ಬೆಳವಣಿಗೆಗಳು ನಡೆಯುತ್ತಿದ್ದು, ಅಂತಿಮವಾಗಿ ಅಭ್ಯರ್ಥಿಗಳು ಯಾರಾಗಲಿದ್ದಾರೆ ಎನ್ನುವುದನ್ನ ಕಾದು ನೋಡಬೇಕಿದೆ.