ಚನ್ನಪಟ್ಟಣ ಉಪಚುನಾವಣೆ | ಟಿಕೆಟ್ ಯಾರಿಗೆ? ಸಂದಿಗ್ಧದಲ್ಲಿ ‘ಸೈನಿಕ’

Date:

Advertisements

2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಮೂವರು ಶಾಸಕರು ಗೆದ್ದು ಸಂಸದರಾದ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕಿದೆ. ಈ ಮೂರು ಕ್ಷೇತ್ರಗಳಿಗೂ ನವೆಂಬರ್ 13ರಂದು ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಿಸಿದೆ. ಈಗಾಗಲೇ ಮೂರು ಪಕ್ಷಗಳು ಕೂಡ ಚುನಾವಣೆ ತಯಾರಿಯಲ್ಲಿ ತೊಡಗಿವೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಷ್ಠೆಯ ಕಣವಾಗಿರುವ ಚನ್ನಪಟ್ಟಣ ಉಪಚುನಾವಣೆ ಇಡೀ ರಾಷ್ಟ್ರದ ಗಮನ ಸೆಳೆದಿದೆ.

ಜೆಡಿಎಸ್ ಭದ್ರಕೋಟೆಯಾಗಿರುವ ಚನ್ನಪಟ್ಟಣದಲ್ಲಿ ಈ ಬಾರಿ ಯಾವ ಪಕ್ಷದಿಂದ ಯಾವ ಅಭ್ಯರ್ಥಿ ಸ್ಪರ್ಧೆ ಮಾಡಲಿದ್ದಾರೆ ಎಂಬ ಕುತೂಹಲ ಸದ್ಯ ರಾಜಕೀಯ ವಲಯದಲ್ಲಿ ಮನೆ ಮಾಡಿದೆ. ಇತ್ತ ಮೊದಲಿನಿಂದಲೂ ಡಿಕೆಶಿ ಕಾಂಗ್ರೆಸ್ ಪಕ್ಷದಿಂದ ಯಾರೇ ಕಣಕ್ಕಿಳಿದರೂ, ಆ ಅಭ್ಯರ್ಥಿ ನಾನೇ ಎಂದು ಭಾವಿಸಿ ಮತ ನೀಡಿ ಎಂದು ಹೇಳುತ್ತಿದ್ದವರು, ಈಗ ಅವರೇ ಚನ್ನಪಟ್ಟಣ ಉಪಚುನಾವಣೆಗೆ ನಿಲ್ಲೋದು ಬಹುತೇಕ ಪಕ್ಕಾ ಆಗಿದೆ. ಮತ್ತೊಂದೆಡೆ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ಮತ್ತೊಂದು ಪರೀಕ್ಷೆ ಎದುರಾಗಿದೆ.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ಕ್ಷೇತ್ರದ ಮೇಲೆ ಸದ್ಯ ಎಲ್ಲರ ಕಣ್ಣಿದೆ. ಈ ಕ್ಷೇತ್ರ ಇಬ್ಬರು ಪ್ರಮುಖ ರಾಜಕಾರಣಿಗಳ ಪ್ರತಿಷ್ಠೆಯ ಕಣವಾಗಿದೆ. ಡಿಕೆಶಿ ಮತ್ತು ಎಚ್‌ಡಿಕೆ ಕುಟುಂಬಗಳ ನಡುವಿನ ಸಮರ ಎಂದರು ತಪ್ಪಾಗುವುದಿಲ್ಲ.

Advertisements

ಜೆಡಿಎಸ್ ಭದ್ರಕೋಟೆಯನ್ನ ಒಡೆದು ಇಡೀ ರಾಮನಗರ ಜಿಲ್ಲೆಯನ್ನ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಹಾಗೂ ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಡಿ.ಕೆ.ಶಿವಕುಮಾರ್ ಪ್ರಯತ್ನಿಸುತ್ತಿದ್ದರೆ, ಎಚ್‌ಡಿಕೆ ತನ್ನ ನೆಲೆಯನ್ನ ಗಟ್ಟಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಹಾಗೆಯೇ, ನಿರಂತರ ಸೋಲಿನಿಂದ ಕಂಗೆಟ್ಟಿರುವ ತಮ್ಮ ಮಗ ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸಿಕೊಳ್ಳಬೇಕೆಂದು ಕುಮಾರಸ್ವಾಮಿ ಹವಣಿಸುತ್ತಿದ್ದಾರೆ.

ಪ್ರತಿ ಬಾರಿ ನಾನೇ ಚನ್ನಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ಎಂದು ಹೇಳುತ್ತಿದ್ದ ಡಿ.ಕೆ ಶಿವಕುಮಾರ್ ಅವರು ಚನ್ನಪಟ್ಟಣ ಚುನಾವಣೆಗೆ ನನ್ನ ಕುಟುಂಬದವರಲ್ಲ, ನಾನೇ ಅಭ್ಯರ್ಥಿ ಎಂಬ ಸಂದೇಶ ನೀಡಿದ್ದಾರೆ.

ಈ ಸಂದೇಶದ ಹಿಂದೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಡಾ. ಸಿ.ಎನ್ ಮಂಜುನಾಥ್ ವಿರುದ್ಧ ಸೋತ ಸಹೋದರ ಡಿ.ಕೆ ಸುರೇಶ್‌ಗೆ ರಾಜಕೀಯ ನೆಲೆ ಕಲ್ಪಿಸಬೇಕಾಗಿದೆ. ಚನ್ನಪಟ್ಟಣದಲ್ಲಿ ತಾವೇ ಚುನಾವಣೆಗೆ ನಿಂತು, ಗೆದ್ದರೆ… ಕನಕಪುರಕ್ಕೆ ರಾಜೀನಾಮೆ ನೀಡಿ ಅಲ್ಲಿಗೆ ಸಹೋದರ ಸುರೇಶ್‌ರನ್ನು ಪ್ರತಿಷ್ಠಾಪಿಸಬಹುದು. ಇಬ್ಬರೂ ಸೇರಿ ವಿಧಾನಸೌಧದಲ್ಲಿ ತಮ್ಮ ಹಿಡಿತವನ್ನು ಹೆಚ್ಚಿಸಿಕೊಳ್ಳಬಹುದು. ಜೊತೆಗೆ, ಸುರೇಶ್‌ ಅವರಿಗೂ ಮಂತ್ರಿಗಿರಿ ಕೊಡಿಸಬಹುದು ಎಂಬ ಲೆಕ್ಕಾಚಾರಗಳೂ ಡಿ.ಕೆ.ಶಿವಕುಮಾರ್‌ ಅವರಲ್ಲಿದೆ. ಹೀಗಾಗಿ, ಚನ್ನಪಟ್ಟಣ ಉಪಚುನಾವಣೆ ಅವರಿಗೆ ಬಹುಮುಖ್ಯವಾಗಿದೆ.

ಇನ್ನೊಂದೆಡೆ, ಕೇಂದ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಇದ್ದು, ಟಿಕೆಟ್ ವಿಚಾರವಾಗಿ ಮೈತ್ರಿ ಪಕ್ಷದಲ್ಲಿನ ದಂಗಲ್‌ಗೆ ಕಾರಣವಾಗಿದೆ. ಲೋಕಸಭೆಯಲ್ಲಿ ಜೋಡೆತ್ತಿನ ರೀತಿ ಒಂದಾಗಿದ್ದ ಬಿಜೆಪಿ-ಜೆಡಿಎಸ್ ನಾಯಕರು ಇದೀಗ ಚುನಾವಣೆಗೆ ಪ್ರತ್ಯೇಕವಾಗಿ ರಣತಂತ್ರ ರೂಪಿಸುವಲ್ಲಿ ನಿರತರಾಗಿದ್ದಾರೆ. ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್ ಅಶೋಕ್ ನೇತೃತ್ವದ ಬಿಜೆಪಿ ಮುಖಂಡರ ಗುಂಪು ಸೇರಿದಂತೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಚನ್ನಪಟ್ಟಣದಿಂದ ಸಿ.ಪಿ.ಯೋಗೇಶ್ವರ್ ಅವರಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಹಲವು ಸುತ್ತು ದೆಹಲಿಗೆ ಭೇಟಿ ನೀಡಿ, ನಮ್ಮ ಬಿಜೆಪಿ ಪಕ್ಷದವರೇ ಮೈತ್ರಿ ಅಭ್ಯರ್ಥಿಯಾಗಬೇಕು. ಇಲ್ಲದಿದ್ದರೆ ಈ ಭಾಗದಲ್ಲಿ ಬಿಜೆಪಿ ಇಲ್ಲದಂತಾಗುತ್ತದೆ. ಹೇಗಾದರೂ ಮಾಡಿ ಕುಮಾರಸ್ವಾಮಿಯವರ ಮನವೊಲಿಸಬೇಕು ಎಂದು ಹೈಕಮಾಂಡ್‌ಗೆ ಮನವಿ ಮಾಡಿ ಬಂದಿದ್ದಾರೆ. ಇತ್ತ ಟಿಕೆಟ್ ತನ್ನಲ್ಲೇ ಉಳಿಸಿಕೊಳ್ಳಲು ಜೆಡಿಎಸ್ ಕಸರತ್ತು ನಡೆಸುತ್ತಿದೆ.

ಬಿಜೆಪಿ ಹೈಕಮಾಂಡ್ ಕೂಡ ಚನ್ನಪಟ್ಟಣ ಉಪಚುನಾವಣೆಗೆ ಟಿಕೆಟ್ ನೀಡುವ ವಿಚಾರವನ್ನ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಅವರಿಗೆ ಬಿಟ್ಟಿದೆ ಎಂಬ ಮಾತುಗಳು ಕೂಡ ಇವೆ. ಬಿಜೆಪಿ ಹೈಕಮಾಂಡ್‌ನ ಈ ನಿರ್ಧಾರ ಜೆಡಿಎಸ್‌ಗೆ ಮತ್ತಷ್ಟು ಶಕ್ತಿ ನೀಡಿದಂತಾಗಿದೆ.

ಇದೀಗ ಚನ್ನಪಟ್ಟಣದಲ್ಲಿ ತಮ್ಮ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಪುತ್ರನನ್ನು ಕಣಕ್ಕಿಳಿಸಲು ಎಚ್‌ಡಿಕೆ ಕಾರ್ಯತಂತ್ರ ರೂಪಿಸಿದ್ದಾರೆ. ಅದಕ್ಕಾಗಿ ಅವರು ಮೂರು ದಿನಗಳ ಹಿಂದೆ ಬಿಡದಿ ಸಮೀಪದ ಕೇತಗಾನಹಳ್ಳಿಯ ತಮ್ಮ ತೋಟದಲ್ಲಿ ಚನ್ನಪಟ್ಟಣ ಕ್ಷೇತ್ರದ ಕಾರ್ಯಕರ್ತರು, ಮುಖಂಡರ ಸಭೆ ಕರೆದು ಸಮಾಲೋಚನೆ ನಡೆಸಿದ್ದಾರೆ.

ಚನ್ನಪಟ್ಟಣ ಉಪಚುನಾವಣೆಯಲ್ಲಿ ಜೆಡಿಎಸ್–ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಅವರನ್ನು ಕಣಕ್ಕಿಳಿಸುವ ಸುಳಿವನ್ನು ಕುಮಾರಸ್ವಾಮಿ ಅವರು ನೀಡಿದ್ದಾರೆ. ಮುಂದುವರೆದು, ʼʼಚನ್ನಪಟ್ಟಣ ಉಪ ಚುನಾವಣೆಗೆ ಸ್ಪರ್ಧಿಸುವಂತೆ ನಿಖಿಲ್ ಮೇಲೆ ಹೆಚ್ಚಿನ ಒತ್ತಡವಿದೆ. ಕ್ಷೇತ್ರದ ಶೇ.95ರಷ್ಟು ಮುಖಂಡರು ಹಾಗೂ ಕಾರ್ಯಕರ್ತರು ನಿಖಿಲ್ ಅವರನ್ನೇ ಕಣಕ್ಕಿಳಿಸಿ ಎನ್ನುತ್ತಿದ್ದಾರೆ. ನಾನು ಮತ್ತು ಎಚ್.ಡಿ.ದೇವೇಗೌಡರು ಬಿಜೆಪಿ ನಾಯಕರೊಂದಿಗೆ ಚರ್ಚಿಸಿ ವಾರದೊಳಗೆ ಅಭ್ಯರ್ಥಿ ತೀರ್ಮಾನಿಸುತ್ತೇವೆ” ಎಂದು ತಿಳಿಸಿದ್ದಾರೆ.

ಇನ್ನು ಚನ್ನಪಟ್ಟಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ ಅದು ಜೆಡಿಎಸ್ ಜೊತೆಗಿನ ಮೈತ್ರಿಗೆ ಪೆಟ್ಟು ಬೀಳಬಹುದು. ಹಾಗಾಗಿ, ಕುಮಾರಸ್ವಾಮಿಯವರು ಯಾರನ್ನು ಸೂಚಿಸುತ್ತಾರೋ ಅವರೇ ಅಭ್ಯರ್ಥಿಯಾಗಲಿ ಎಂಬುದು ಕೆಲವು ಬಿಜೆಪಿ ನಾಯಕರ ನಿಲುವಾಗಿದೆ.

ಚನ್ನಪಟ್ಟಣ ಕ್ಷೇತ್ರ ಜೆಡಿಎಸ್‌ ಭದ್ರಕೋಟೆಯಾಗಿದೆ. ಒಂದು ವೇಳೆ ಈ ಕ್ಷೇತ್ರದ ಟಿಕೆಟ್‌ ಬಿಜೆಪಿಗೆ ದಕ್ಕದೇ ಹೋದರೆ, ಬಿಜೆಪಿಯ ಶಕ್ತಿ ಕುಸಿದು ಹೋಗುತ್ತದೆ. ಹಳೆ ಮೈಸೂರಿನ ಜಿಲ್ಲೆಗಳಲ್ಲಿ ಜೆಡಿಎಸ್‌ನದ್ದೇ ಪ್ರಾಬಲ್ಯವಿದೆ. ಈ ಭಾಗದಲ್ಲಿ ಬಿಜೆಪಿ ಕುಸಿಯುವುದನ್ನ ತಡೆಯುವುದಕ್ಕಾದರೂ ಚನ್ನಪಟ್ಟಣದ ಟಿಕೆಟ್ ಬಿಜೆಪಿ ಅಭ್ಯರ್ಥಿಗೆ ಕೊಡಬೇಕು. ಹಾಗೆಯೇ, ಬಿಜೆಪಿ ಅಭ್ಯರ್ಥಿಗೆ ಟಿಕೆಟ್ ದೊರೆತರೆ, ಜೆಡಿಎಸ್ ಕಳೆದುಕೊಳ್ಳುವುದೇನೂ ಇಲ್ಲ. ಚನ್ನಪಟ್ಟಣದಲ್ಲಿ ಈ ಸಲ ಮಿತ್ರಕೂಟದ ಟಿಕೆಟ್ ಜೆಡಿಎಸ್‌ಗೆ ಸಿಕ್ಕರೆ ಅದರ ಅಭ್ಯರ್ಥಿ ಗೆಲ್ಲುವುದಿಲ್ಲ. ಹಾಗೇನಾದರೂ ಆದರೆ, ಅದು ಕುಮಾರಸ್ವಾಮಿ ಅವರಿಗೆ ಡ್ರಾ ಬ್ಯಾಕ್ ಆಗುತ್ತದೆ. ಮುಖ್ಯವಾಗಿ ಬಿಜೆಪಿಗೆ ಟಿಕೆಟ್ ಸಿಗದಿದ್ದರೆ ಬಿಜೆಪಿ-ಜೆಡಿಎಸ್ ಮಿತ್ರಕೂಟದಲ್ಲಿ ಒಡಕುಂಟಾಗುವುದು ನಿಶ್ಚಿತ. ಹಾಗಾಗಿ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬುದು ರಾಜ್ಯ ಬಿಜೆಪಿಯ ಹಲವು ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಬಗ್ಗೆ ವಸ್ತುಸ್ಥಿತಿಯ ವಿವರ ನೀಡುವಂತೆ ಜೆ.ಪಿ ನಡ್ಡಾ ಅವರು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನದಾಸ್ ಅಗರ್ವಾಲ್ ಅವರಿಗೆ ಸೂಚಿಸಿದ್ದಾರೆ ಎಂಬುದು ತಿಳಿದುಬಂದಿದೆ. ಅಂತೆಯೇ, ರಾಧಾಮೋಹನದಾಸ್ ಅಗರ್ವಾಲ್ ವಿವರವಾದ ವರದಿಯೊಂದನ್ನು ಇತ್ತೀಚೆಗೆ ದೆಹಲಿಗೆ ರವಾನಿಸಿದ್ದಾರೆ.

ಈ ವರದಿಯಲ್ಲಿ ಚನ್ನಪಟ್ಟಣದ ಟಿಕೆಟ್ ಜೆಡಿಎಸ್‌ಗೆ ಹೋದರೆ ಮಿತ್ರಕೂಟಕ್ಕೇನೂ ಹಾನಿಯಿಲ್ಲ. ಆದರೆ, ಅದು ಜೆಡಿಎಸ್ ಪಕ್ಷದ ಕೈ ತಪ್ಪಿದರೆ ಮಿತ್ರಕೂಟಕ್ಕೆ ತೊಂದರೆಯಾಗುವುದು ನಿಶ್ಚಿತ ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದು ತಿಳಿದುಬಂದಿದೆ.

ದಿನದಿಂದ ದಿನಕ್ಕೆ ಕರ್ನಾಟಕದಲ್ಲಿ ಜೆಡಿಎಸ್‌ ಜತೆಗಿನ ಮೈತ್ರಿ ಬಿಜೆಪಿಗೆ ಹೆಚ್ಚು ಅನಿವಾರ್ಯವಾಗುತ್ತಿದೆ. ಏಕೆಂದರೆ ಇತ್ತೀಚಿನ ಬೆಳವಣಿಗೆಗಳು ಕರ್ನಾಟಕದಲ್ಲಿ ಬಿಜೆಪಿಯ ಶಕ್ತಿಯನ್ನು ಕುಗ್ಗಿಸುತ್ತಿದೆಯೇ ವಿನಃ ಜೆಡಿಎಸ್‌ನ ಶಕ್ತಿಯನ್ನಲ್ಲ. ಇವತ್ತಿನ ಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಅನ್ನು ಬಿಜೆಪಿಯ ಫ್ರಂಟ್ ಲೈನ್ ನಾಯಕರಿಗಿಂತ ಪರಿಣಾಮಕಾರಿಯಾಗಿ ಎದುರಿಸುತ್ತಿರುವವರು ಎಚ್.ಡಿ ಕುಮಾರಸ್ವಾಮಿ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಚನ್ನಪಟ್ಟಣ ಜೆಡಿಎಸ್‌ ಕ್ಷೇತ್ರ. ನಮ್ಮ ಪಕ್ಷದ ಪವರ್ ಬೆಳೆಸಿಕೊಳ್ಳಲು ಈ ಕ್ಷೇತ್ರ ಬಿಟ್ಟುಕೊಡಿ ಎಂದು ಕೇಳುವುದು ಮೈತ್ರಿ ಧರ್ಮಕ್ಕೆ ವಿರುದ್ಧ. ಇನ್ನೊಂದು ವಿಚಾರ ಏನೆಂದರೆ, ಬಿಜೆಪಿ ಜತೆಗಿನ ಹೊಂದಾಣಿಕೆಯ ನಂತರ ಜೆಡಿಎಸ್ ಪಕ್ಷ ಮೈತ್ರಿ ಧರ್ಮವನ್ನು ಉಲ್ಲಂಘಿಸಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಒಂದು ವೇಳೆ ಜೆಡಿಎಸ್‌ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಧರ್ಮವನ್ನು ಉಲ್ಲಂಘಿಸಿದ್ದರೆ, ಮಿತ್ರಕೂಟಕ್ಕೆ 19 ಸೀಟು ದಕ್ಕಲು ಸಾಧ್ಯವೇ ಇರಲಿಲ್ಲ. ನಮ್ಮ ಶಕ್ತಿ ಹೆಚ್ಚಿರುವ ಉತ್ತರ ಕರ್ನಾಟಕದ ಕ್ಷೇತ್ರಗಳಲ್ಲಿ ಬಿಜೆಪಿ ಹೆಚ್ಚು ಕಳೆದುಕೊಂಡಿದೆ. ಜೆಡಿಎಸ್ ಪ್ರಾಬಲ್ಯ ಹೆಚ್ಚಿರುವ ಹಳೆ ಮೈಸೂರಿನ ಕ್ಷೇತ್ರಗಳಲ್ಲಿ ಹೆಚ್ಚು ಪಡೆದುಕೊಂಡಿದೆ ಎಂಬ ಮಾಹಿತಿಯನ್ನು ರಾಧಾಮೋಹನದಾಸ್ ಅಗರ್ವಾಲ್ ಅವರು ದೆಹಲಿ ವರಿಷ್ಠರಿಗೆ ರವಾನಿಸಿದ್ದಾರೆ ಎಂಬುದು ತಿಳಿದುಬಂದಿದೆ.

ಈ ಸುದ್ದಿ ಓದಿದ್ದೀರಾ? ಭಾರತ ಹಸಿವು ಮುಕ್ತ ಆಗೋದು ಯಾವಾಗ ಮೋದಿಜೀ?

ಇದರಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿ, ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರಿಗೆ ಹಿನ್ನೆಡೆಯಾಗುವ ಸಾಧ್ಯತೆಯಿದೆ. ಹಾಗೊಂದು ವೇಳೆ, ಬಿಜೆಪಿ ಪಕ್ಷದಿಂದ ಸಿ.ಪಿ.ಯೋಗೇಶ್ವರ್ ಅವರಿಗೆ ಟಿಕೆಟ್ ದೊರೆಯದಿದ್ದರೆ ಅವರ ಮುಂದಿನ ನಡೆ ಏನು ಎನ್ನುವ ಕುರಿತು ಚನ್ನಪಟ್ಟಣ ಕ್ಷೇತ್ರದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

ಯೋಗೇಶ್ವರ್ ಅವರು ಈಗಾಗಲೇ ಚುನಾವಣೆಗೆ ಸಿದ್ಧತೆ ಆರಂಭಿಸಿ, ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಪಕ್ಷದ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಈ ನಡುವೆ ಪಕ್ಷದಿಂದ ಟಿಕೆಟ್ ಸಿಗದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಸಲು ಯೋಗೇಶ್ವರ್ ಅವರು ನಿರ್ಧರಿಸಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಸಿ.ಪಿ.ಯೋಗೇಶ್ವರ್ ಅವರು ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡುವುದು ಕಷ್ಟಕರವಾಗುವುದರಿಂದ ಬಿಜೆಪಿ ಕೇಂದ್ರ ನಾಯಕತ್ವ ಹಾಗೂ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಮಧ್ಯಸ್ಥಿಕೆ ವಹಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ಮತ್ತೊಂದು ಪರೀಕ್ಷೆ ಎದುರಾಗಿರುವ ಈ ಉಪಚುನಾವಣೆಯಲ್ಲಿ ಟಿಕೆಟ್ ವಿಚಾರದಲ್ಲಿ ಭಾರೀ ಗೊಂದಲಗಳಿದ್ದರೆ, ಇನ್ನು ಟಿಕೆಟ್ ಘೋಷಣೆಯಾದ ನಂತರ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವುದು ಮತ್ತೊಂದು ಸವಾಲಿನ ಕೆಲಸವಾಗಲಿದೆ.

e4c01bd9b2970ccfecae47b47af65a36?s=150&d=mp&r=g
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X