ನಗರಕ್ಕೆ ವಲಸೆ ಬರುವ ಕಾರ್ಮಿಕರ ಮಕ್ಕಳು ಅತಿ ಅಪಾಯಕರ ಸ್ಥಿತಿಯಲ್ಲಿ ಬದುಕಿದ್ದು, ವಯಸ್ಸಿಗನುಗುಣವಾಗಿ ಪೌಷ್ಟಿಕ ಆಹಾರ ಮತ್ತು ಶಿಕ್ಷಣ ದೊರೆಯದೆ ನರಳುತ್ತಿವೆ. ಒಂದು ಮಾಹಿತಿಯ ಪ್ರಕಾರ 1977-78ರಲ್ಲಿ ನಗರದಲ್ಲಿದ್ದ 35.7% ಮಹಿಳಾ ಕೂಲಿಕಾರರ ಸಂಖ್ಯೆಯು 2017-18ರಲ್ಲಿ 60.7%ಕ್ಕೇರಿದ್ದು, ಇದು ಏರಿದ ಮಕ್ಕಳ ಸಂಖ್ಯೆ ಮತ್ತು ಹೆಚ್ಚುತ್ತಿರುವ ಅವರ ದುಸ್ಥಿತಿಯನ್ನೂ ಸಹ ಸೂಚಿಸುತ್ತದೆ.
ಏಳನೇ ತರಗತಿಯಲ್ಲಿದ್ದಾಗ ಋತುಮತಿಯಾದ ಗೀತಾಳನ್ನು (ಹೆಸರು ಬದಲಿಸಿದೆ) ಪ್ರೌಢ ಶಾಲೆ ದೂರವಿದ್ದ ಕಾರಣ ಶಾಲೆಯಿಂದ ಬಿಡಿಸಲಾಗುತ್ತದೆ. ತಂದೆಯಂತೆ ಎತ್ತರ ಬೆಳೆದು ಚೆಂದವಿದ್ದ ಗೀತಾಳನ್ನು ನೋಡಿದಾಗಲೆಲ್ಲಾ ‘ಬೆಳೆದ ಮಗಳನ್ನು ಮನೆಯಲ್ಲಿ ಕೂರಿಸಿಕೊಂಡಿದ್ದಿರಲ್ಲಾ! ಮದುವೆ ಮಾಡಬಾರದೇ?’ ಎಂಬ ಊರವರ ತಗಾದೆ ಜೊತೆಗೆ ಮಗಳ ಜವಾಬ್ದಾರಿ ಕಳೆದುಕೊಳ್ಳಬೇಕೆಂಬ ಅಪ್ಪಅಮ್ಮನ ಇರಾದೆಯೂ ಸೇರಿ, ಗೀತಾಳಿಗೆ 17 ತುಂಬುವುದರಲ್ಲಿ ಮದುವೆಯಾಗುತ್ತದೆ.
ಬೆಂಗಳೂರಿನಲ್ಲಿ ಗಾರೆ ಕೆಲಸ ಹಿಡಿದಿರುವ ಸಂಬಂಧಿ ಹುಡುಗನೊಂದಿಗೆ ಮದುವೆಯಾದ ಗೀತಾ ಮತ್ತೊಂದು ವರ್ಷಕ್ಕೆ ಗಂಡು ಕೂಸು ಹೆರುತ್ತಾಳೆ. ಬಾಣಂತನ ಮುಗಿಸಿ, ಹಳ್ಳಿಯಿಂದ ಬೆಂಗಳೂರಿಗೆ ಬರುವ ಅವಳು ನೀರು, ಶೌಚ ಯಾವುದೂ ಇಲ್ಲದ ಖಾಲಿ ಸೈಟಿನ ಒಂದು ಪುಟ್ಟ ಶೆಡ್ಡಿನಲ್ಲಿ ಖುಷಿಯಾಗಿಯೇ ಸಂಸಾರ ಹೂಡುತ್ತಾಳೆ. ಆದರೆ, ಗಂಡನ ದುಡಿಮೆ ಅವನ ಕುಡಿತಕ್ಕೆ ಮಾತ್ರ ಎಂಬ ಸತ್ಯ ಗೊತ್ತಾದಾಗ ಅವಳ ಖುಷಿ ಕರಗಿ, ವಿಧಿ ಇಲ್ಲದೆ ಕೂಸನ್ನು ಹೊತ್ತು ಹತ್ತಿರದಲ್ಲೇ ಮನೆಗೆಲಸ ಹಿಡಿಯುತ್ತಾಳೆ. ಕೂಸಿನ ರಗಳೆಯಿಂದಾಗಿ ಮನೆ ಮಾಲೀಕರು ಬೇಸರಿಸಿಕೊಳ್ಳುವ ಕಾರಣ ಮಗುವನ್ನು ಮನೆಯೊಳಗೆ ಕೂಡಿ ಕೆಲಸಕ್ಕೆ ಹೋಗಬೇಕಾಗುತ್ತದೆ. ಮನೆಗೆ ಬರುವಷ್ಟರಲ್ಲಿ ಮಗು ಎದ್ದು ಅಲ್ಲೇ ಎಲ್ಲವನ್ನು ಮಾಡಿಕೊಂಡು ಅತ್ತು ಬಸವಳಿದಿರುತ್ತದೆ. ಅದು ಹಾಲಿಗಾಗಿ ಹಂಬಲಿಸಿದಾಗ, ಸರಿಯಾಗಿ ಊಟ ಮಾಡದ ಗೀತಾಳಲ್ಲಿ ಹೆಚ್ಚು ಹಾಲು ಕೂಡ ಒಸರುವುದಿಲ್ಲ. ಬರುಬರುತ್ತಾ ಬೆಳವಣಿಗೆ ಇಲ್ಲದೆ ಮಗು ಬಡಕಲಾಗಿ ಸೊರಗುತ್ತದೆ.
ಮಾಲೀಕರು ಆಗೊಮ್ಮೆ ಈಗೊಮ್ಮೆ ಹಣ್ಣು ಹಾಲು ಕೊಟ್ಟು, ಅಂಗನವಾಡಿಗೆ ಹೋಗಿ ಪೌಷ್ಟಿಕ ಅಹಾರ ತರಲು ಹೇಳುತ್ತಾರೆ. ಹೆರಿಗೆ ಊರಲ್ಲಿ ಆಗಿದ್ದು, ಇಲ್ಲಿ ಅವಳ ಹೆಸರು ನೋಂದಣಿ ಆಗಿಲ್ಲವೆಂದು ಆಹಾರ ಸಿಗುವುದಿಲ್ಲ. ಸಿಕ್ಕರೂ ಬಿಡುವಿಲ್ಲದ ಅವಳು ಪ್ರತಿದಿನ ಅಂಗನವಾಡಿಗೆ ಹೋಗಿ ಅದನ್ನು ತರುವುದಾದರೂ ಹೇಗೆ? ಆಗಾಗ್ಗೆ ಗಂಡ ಊರಿನಿಂದ ತರುವ ಹಿಟ್ಟು, ಧಾನ್ಯ ಎರಡು ತಿಂಗಳಿಗೆ ಮುಗಿಯುತ್ತದೆ. ತಾಯಿ ಮಗುವಿಗೆ ಸದಾ ಶೀತ ಕೆಮ್ಮು. ಮಗುವಿಗಾದರೂ ಊರಿನಲ್ಲಿದ್ದಾಗ ಹಾಕಿಸಿದ ಲಸಿಕೆಯಷ್ಟೇ. ಈ ಮಧ್ಯೆ ಸೈಟ್ ಮಾಲಿಕರು ಮನೆ ಕಟ್ಟುವ ಕಾರಣ ಹೇಳಿ ಜಾಗ ಖಾಲಿ ಮಾಡಿಸಿದಾಗ, ಕಾಡಿ ಬೇಡಿ ಪಡೆದ ಮತ್ತೊಂದು ಶಿಟ್ ಮನೆಗೆ ಹೋಗುತ್ತಾರೆ. ಇಷ್ಟರಲ್ಲಿ ಎರಡು ವರ್ಷ ತುಂಬಿದ ಮಗನನ್ನು ಮನೆಯಲ್ಲಿ ಕೂಡಿ ಕೆಲಸಕ್ಕೆ ಹೋದಾಗ, ನೀರಿನ ಬಕೆಟ್ ಒಳಗಡೆ ಕೂರುವುದು, ಹಿಟ್ಟನ್ನು ನೀರಿನೊಳಗೆ ಹಾಕುವುದು, ಸ್ಟೌ ಎಳೆದಾಡುವಂತಹ ಅವನ ಆಟಗಳು ಗೀತಾಳಿಗೆ ಸಾಕುಸಾಕಾಗಿ ಕೊನೆಗೆ ತಾನು ಕೆಲಸ ಮಾಡುವ ಮನೆಗಳ ಮುಂದೆ ಅವನನ್ನು ಆಡಲು ಬಿಡುತ್ತಾಳೆ. ಆದರೆ, ಮಗು ಎಲ್ಲಿ ಹೋಗುತ್ತದೋ, ಯಾವ ಗಾಡಿಯ ಕೆಳಗೆ ಸಿಕ್ಕುತ್ತದೋ ಎನ್ನುವುದೇ ಚಿಂತೆ ಅವಳಿಗೆ. ಮಗುವಿಗೆ ಮೂರು ತುಂಬಿದಾಗ, ಅಂಗನವಾಡಿಗೆ ಕಳಿಸಿಲ್ಲವೇಕೆ ಎನ್ನುವ ಪ್ರಶ್ನೆಗೆ, “ಅಲ್ಲಿಂದ ಬಂದ ಮೇಲೆ ಎಲ್ಲಿಗೆ ಕಳಿಸಲಿ” ಎಂಬ ಮರುಪ್ರಶ್ನೆ ಅವಳದು. ಜೊತೆಗೆ ವಿಳಾಸದ ಪುರಾವೆ ಇಲ್ಲದ ಕಾರಣ ಮಗುವನ್ನು ಸೇರಿಸಿಕೊಳ್ಳಲಾಗದು ಎಂದರಂತೆ. ಈಗ ಗೀತಾ ತನ್ನ ಗಂಡನ ಜೊತೆ ಕಟ್ಟಡ ಕೆಲಸಕ್ಕೆ ಹೋಗುತ್ತಿದ್ದು, ಜೊತೆಯಲ್ಲಿಯೇ ಮಗನನ್ನೂ ಕರೆದುಕೊಂಡು ಹೋಗುತ್ತಾಳಂತೆ.
ದೇಶದ ಲಕ್ಷಾಂತರ ವಲಸಿಗ ಮಕ್ಕಳ ಸ್ಥಿತಿ ಇದೇ ಆಗಿದೆ. ಮುಖ್ಯವಾಗಿ ನಗರಕ್ಕೆ ವಲಸೆ ಬರುವ ಕಾರ್ಮಿಕರ ಮಕ್ಕಳು ಅತಿ ಅಪಾಯಕರ ಸ್ಥಿತಿಯಲ್ಲಿ ಬದುಕಿದ್ದು, ವಯಸ್ಸಿಗನುಗುಣವಾಗಿ ಪೌಷ್ಟಿಕ ಆಹಾರ ಮತ್ತು ಶಿಕ್ಷಣ ದೊರೆಯದೆ ನರಳುತ್ತಿವೆ. ಒಂದು ಮಾಹಿತಿಯ ಪ್ರಕಾರ 1977-78ರಲ್ಲಿ ನಗರದಲ್ಲಿದ್ದ 35.7% ಮಹಿಳಾ ಕೂಲಿಕಾರರ ಸಂಖ್ಯೆಯು 2017-18ರಲ್ಲಿ 60.7%ಕ್ಕೇರಿದ್ದು, ಇದು ಏರಿದ ಮಕ್ಕಳ ಸಂಖ್ಯೆ ಮತ್ತು ಹೆಚ್ಚುತ್ತಿರುವ ಅವರ ದುಃಸ್ಥಿತಿಯನ್ನೂ ಸಹ ಸೂಚಿಸುತ್ತದೆ.

ಕೂಸೊಂದು ಹುಟ್ಟಿತೆಂದರೆ ಅದರ ಪಾಲನೆ ಕೇವಲ ತಾಯಿಯ ಅಥವಾ ಕುಟುಂಬದ ಹೊಣೆಯಷ್ಟೇ ಆಗಿರದೆ, ಅದು ಸಮುದಾಯ ಮತ್ತು ಸರ್ಕಾರದ ಹೊಣೆಯೂ ಆಗಿರುತ್ತದೆ. 18 ವರ್ಷದ ವಯೋಮಿತಿಯೊಳಗಿನ ಎಲ್ಲರನ್ನು ‘ಮಕ್ಕಳು’ ಎನ್ನಲಾಗಿದ್ದರೂ, ಉಸಿರು ಉದರದಲ್ಲಿ ಶುರುವಾದಾಗಿನಿಂದ ಆರು ವರ್ಷದೊಳಗಿನ ಮಕ್ಕಳ ಪಾಲನೆ, ಪೋಷಣೆ, ರಕ್ಷಣೆ ಮತ್ತು ಕಲಿಕೆಗಳು ಬಹು ಮುಖ್ಯವಾಗಿದೆ. ಜೀವವು ಒಡಲಾಚೆಗೆ ಬಂದ ನಂತರವಂತೂ ಮಿದುಳು ಬಹು ವೇಗವಾಗಿ ವಿಕಸಿತಗೊಳ್ಳತೊಡಗುತ್ತದೆ. ಈ ಸಮಯದಲ್ಲಾಗುವ ಅರಿವು, ದೈಹಿಕ, ಮತ್ತು ಭಾವನಾತ್ಮಕ ಬೆಳವಣಿಗೆಗಳು ಹಾಗೂ ಕಲಿಕೆಯ ಸಾಮರ್ಥ್ಯಗಳು ಮುಂದೆ ಪ್ರೌಢಾವಸ್ಥೆಯ ಸಾಮರ್ಥ್ಯವನ್ನು ಹೆಚ್ಚಿಸಿ, ಬದುಕನ್ನು ಗಟ್ಟಿಯಾಗಿ ಕಟ್ಟಿಕೊಳ್ಳಲು ಸಹಕರಿಸುವುದರಿಂದ ಈ ವಯಸ್ಸಿನಲ್ಲಿ ಅತ್ಯಂತ ಕಾಳಜಿಯುತ ಪಾಲನೆ, ಪೋಷಣೆ, ರಕ್ಷಣೆ ಮತ್ತು ಪ್ರೀತಿಯ ಪರಿಸರ, ಜೊತೆಗೆ ಸೃಜನಶೀಲ ಕಲಿಕೆಗಳಿಗೆ ಹೆಚ್ಚು ಪೂರಕ ಅವಕಾಶಗಳನ್ನು ಒದಗಿಸಬೇಕಾಗುತ್ತದೆ. ಇದನ್ನು ಪೋಷಕರು ಮತ್ತು ಕುಟುಂಬವು ನಿರ್ವಹಿಸಬೇಕು ನಿಜ. ಆದರೆ ಗೀತಾಳಂತಹ ಕುಟುಂಬಗಳ ಪರಿಸ್ಥಿತಿಯ ಕಾರಣದಿಂದ ದೇಶದಲ್ಲಿ ಲಕ್ಷಾಂತರ ಮಕ್ಕಳ ಬೆಳವಣಿಗೆ ಕುಗ್ಗುತ್ತಿದ್ದು, ಅವರು ಅತಿ ಅಪಾಯಕಾರಿ ವಾತಾವರಣದಲ್ಲಿ ಬೆಳೆಯುವಂತಾಗಿದೆ.
ಮಕ್ಕಳ ವಯಸ್ಸಿನ ಸೂಕ್ಷ್ಮತೆ ಮತ್ತು ಅಪಕ್ವ ಮನಸ್ಸನ್ನು ಗಮನಿಸಿ ಭಾರತದ ಸಂವಿಧಾನವು ಅವರ ಹಕ್ಕುಗಳನ್ನು ಗುರುತಿಸಿದೆ. ಮಕ್ಕಳ ಬದುಕುಳಿಯುವ ಹಕ್ಕು, ಬಾಲ್ಯದ ಬೆಳವಣಿಗೆ, ಮನಸ್ಸು ಮತ್ತು ಮಿದುಳಿನ ವಿಕಸನಕ್ಕೆ ಶಿಕ್ಷಣ, ಮುಗ್ದತೆಯ ರಕ್ಷಣೆ, ಸಮಗ್ರ ಬೆಳವಣಿಗೆ, ಭಾಗವಹಿಸುವಿಕೆ, ಆರೋಗ್ಯ ಮತ್ತು ಕ್ಷೇಮ, ವ್ಯಕ್ತಿತ್ವ ಗುರುತಿಸುವಿಕೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ತಾರತಮ್ಯರಹಿತ ಮತ್ತು ರಕ್ಷಿತ ಪರಿಸರದ ಹಕ್ಕುಗಳನ್ನು ಸಂವಿಧಾನವು ಮಕ್ಕಳಿಗೆ ಖಾತರಿ ಮಾಡಿದೆ.

ಮಕ್ಕಳನ್ನು ಕೇಂದ್ರಬಿಂದುವಾಗಿಸಿರುವ ಕಾಯ್ದೆ, ನೀತಿ ಮತ್ತು ಕಾರ್ಯಕ್ರಮಗಳನ್ನು ರಚಿಸಿ ಅನುಷ್ಟಾನಗೊಳಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮತ್ತು ಇಲಾಖೆಯು ಕಾರ್ಯ ನಿರ್ವಹಿಸುತ್ತಿದ್ದು, 0-6 ವರ್ಷದ ಮಕ್ಕಳಿಗೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಪೋಷಣ್, ಮಧ್ಯಾಹ್ನದ ಊಟ ಇತ್ಯಾದಿ ಯೋಜನೆಗಳನ್ನು ಹಮ್ಮಿಕೊಂಡಿರುತ್ತದೆ. ಕರ್ನಾಟಕದಲ್ಲಿ 62,580 ಅಂಗನವಾಡಿಗಳು ಹಾಗೂ 3,331 ಕಿರು ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿದ್ದು, ಗರ್ಭಿಣಿ, ಬಾಣಂತಿ ಹಾಗೂ 0-6ರ ಮಕ್ಕಳಿಗೆ ಬಾಲ್ಯಾವಸ್ಥೆ ಆರೈಕೆ, ಪೂರಕ ಪೌಷ್ಟಿಕ ಆಹಾರ, ಶಿಶುಗೃಹಗಳು, ಮಮತೆಯ ತೊಟ್ಟಿಲು, ಶಾಲಾಪೂರ್ವ ಶಿಕ್ಷಣ, ಆರೈಕೆ-ಸಮಾಲೋಚನೆ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ.
ಇದಲ್ಲದೆ, 2009-10ರಿಂದ ಅಪಾಯದಲ್ಲಿರುವ ಮಕ್ಕಳ ರಕ್ಷಣೆಗಾಗಿಯೇ ‘ಸಮಗ್ರ ಮಕ್ಕಳ ರಕ್ಷಣಾ ಯೋಜನೆʼಯನ್ನು ಪ್ರಾರಂಭಿಸಿದ್ದು, ಕರ್ನಾಟಕವು ಇದಕ್ಕಾಗಿಯೇ ಮೀಸಲಾದ ನಿರ್ದೇಶನಾಲಯವನ್ನು ಸ್ಥಾಪಿಸಿದೆ. ಅಪಾಯಕ್ಕೊಳಗಾದ ಮಕ್ಕಳ ಗುರುತಿಸುವಿಕೆ, ಕಾನೂನುಬದ್ಧ ದತ್ತು ಪ್ರಕ್ರಿಯೆ, ನಗರ ಮತ್ತು ಪಟ್ಟಣಗಳಲ್ಲಿ ಅವಶ್ಯವಿರುವ ಮಕ್ಕಳಿಗೆ ತೆರೆದ ತಂಗುದಾಣಗಳು, ಅಪರಾಧಿ ಮಕ್ಕಳ ರಕ್ಷಣೆ ಮತ್ತು ಮಕ್ಕಳ ಆರೈಕೆ ಸಂಸ್ಥೆಗಳು ಹಾಗೂ ಮಕ್ಕಳ ಕಲ್ಯಾಣ ಸಮಿತಿಗಳ ನಿರ್ವಹಣೆಯಂತಹ ಸೇವೆಗಳನ್ನು ಒದಗಿಸುತ್ತಿದೆ. ಇಷ್ಟೇ ಅಲ್ಲದೆ, ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಮತ್ತು ಮಕ್ಕಳ ಕುರಿತಾದ ಕಾಯ್ದೆಗಳ ಮೇಲ್ವಿಚಾರಣೆ ನಡೆಸುವ ಸಲುವಾಗಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ರಾಷ್ಟ್ರೀಯ ಆಯೋಗಗಳು ಸಹ ಕಾರ್ಯ ನಿರ್ವಹಿಸುತ್ತಿವೆ.
ಹೀಗೆ ಅನೇಕ ಯೋಜನೆ ಮತ್ತು ಸೇವೆಗಳ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಕ್ಕಳ ರಕ್ಷಣೆ, ಪಾಲನೆ ಪೋಷಣೆಗಾಗಿ ತನ್ನೆಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದರೂ, ದುಡಿಮೆಗಾಗಿ ನಗರಗಳಿಗೆ ವಲಸೆ ಬಂದು ಸಣ್ಣ ಪುಟ್ಟ ಕೆಲಸಗಳಲ್ಲಿ ತೊಡಗಿರುವ ಮಹಿಳೆಯರ ಸಾವಿರಾರು ಮಕ್ಕಳು ಸರ್ಕಾರದ ವ್ಯವಸ್ಥೆಯಿಂದ ಹೊರಗುಳಿಯುತ್ತಿದ್ದಾರೆ. ಮನೆ, ಕಟ್ಟಡ, ಮಾಲ್ ಇತ್ಯಾದಿಗಳಿಗೆ ಮುಂಜಾನೆಯೇ ಕೆಲಸಕ್ಕೆ ತೆರಳಿ ಕತ್ತಲ ವೇಳೆಗೆ ಮರಳುವ ಅನೇಕ ಮಹಿಳೆಯರ 3 ವರ್ಷದೊಳಗಿನ ಮಕ್ಕಳಿಗೆ ಆರೈಕೆ, ಪಾಲನೆ ಪೋಷಣೆಗಳು ಸಿಗದೆ ಬೆಳವಣಿಗೆ ಕುಂಠಿತಗೊಂಡು, ಅತಿ ಅಪಾಯಕರ ಪರಿಸ್ಥಿತಿಯಲ್ಲಿದ್ದಾರೆ. ಬೆಂಗಳೂರು ನಗರವೊಂದರಲ್ಲೇ ಸುಮಾರು 12-15 ಸಾವಿರ ಇಂತಹ ಮಕ್ಕಳಿದ್ದು, ಇವರ ಕುಟುಂಬಗಳು ತಮ್ಮ ವಾಸವನ್ನು ನಿರಂತರ ಬದಲಿಸುವ ಕಾರಣ ನಿಖರ ದಾಖಲೆ ಕಷ್ಟವೆನ್ನಲಾಗಿದೆ. ಮುಂದೆ ಈ ಮಕ್ಕಳು ಬಾಲ ಕಾರ್ಮಿಕರೋ ಅಥವಾ ಬಾಲಪರಾಧಿಗಳಾಗಿಯೋ ಆಗಿ ಬೆಳೆಯುವ ಸಂಭವ ಹೆಚ್ಚಿರುತ್ತದೆ.

ಮಕ್ಕಳ ಸಾವುಗಳು, ಅಲ್ಪ ಮತ್ತು ದೀರ್ಘ ಕಾಲದ ತೀವ್ರ ಅನಾರೋಗ್ಯ, ಅಂಗವೈಕಲ್ಯಗಳು, ರಕ್ಷಣೆ ಮತ್ತು ಆರೈಕೆ ಕೊರತೆ, ಅಪೌಷ್ಟಿಕತೆ, ಕುಂಠಿತ ಬೆಳವಣಿಗೆ, ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳು, ಮಕ್ಕಳ ಕಳ್ಳತನ, ಬಾಲ ಕಾರ್ಮಿಕರು, ಬಾಲಪರಾಧಿಗಳು, ವಲಸೆ, ಅಪಾಯಕರ ಜೀವನ ಪರಿಸ್ಥಿತಿ, ಹಾನಿಕರ ನಂಬಿಕೆ/ಆಚರಣೆಗಳು – ಹೀಗೆ ಬಡ ಹಾಗೂ ದುರ್ಬಲ ವರ್ಗದ ಮಕ್ಕಳು ಅನೇಕ ರೀತಿಯ ಅಪಾಯಕ್ಕೆ ಸಿಲುಕಿರುವ ಬಗ್ಗೆ ಸರ್ಕಾರದ್ದೇ ಬೇಕಾದಷ್ಟು ಅಂಕಿ ಅಂಶಗಳು ದೊರೆಯುತ್ತವಾದರೂ, ಮನಸ್ಸುಗಳಿರುವ ಕಣ್ಣುಗಳಿಗೆ ಅದರ ಅಗತ್ಯವಿಲ್ಲ. ಸುತ್ತಮುತ್ತಲು ಸ್ವಲ್ಪ ಗಮನ ಹರಿಸಿದರೂ ಸಾಕು, ನಮ್ಮ ನಡುವೆಯೇ ನಡೆಯುತ್ತಿರುವ ಗೀತಾಳಂತಹ ಅನೇಕ ಆಯಾಮದ ಕಥೆಗಳು ಬೇಡವೆಂದರೂ ಕಣ್ಣಿಗೆ ರಾಚುತ್ತವೆ.
ಪುಟ್ಟ ಕಂದಮ್ಮಗಳನ್ನು ಮಡಿಲಲ್ಲಿ ಹೊತ್ತು ಸಿಗ್ನಲ್‌ಗಳಲ್ಲಿ ಭಿಕ್ಷೆ ಬೇಡುವ ತಾಯಂದಿರು, ಕಟ್ಟಡ ನಿರ್ಮಾಣ ಜಾಗಗಳಲ್ಲಿ ಸಿಮೆಂಟ್-ಜಲ್ಲಿಯಲ್ಲಿ ಆಡುತ್ತಿರುವ ಸಣ್ಣ ಮಕ್ಕಳು, ಅಲ್ಲಿಯೇ ಕೆಲಸ ಮಾಡುತ್ತಿರುವ ದೊಡ್ಡ ಮಕ್ಕಳು, ಈ ಪುಟ್ಟ ಮಕ್ಕಳನ್ನು ಮುದ್ದಾಡುವ ಮೇಸ್ತ್ರಿ ಅಂಕಲ್ ಮತ್ತು ಗಂಡಾಳುಗಳು, ಬೀಗ ಹಾಕಿದ ಶೀಟ್ ಮನೆಯೊಳಗಿಂದ ಕೇಳಿಸುವ ಕಂದಮ್ಮಗಳ ಆಕ್ರಂದನ, ಕಸ ಆಯುತ್ತಿರುವ ಮಕ್ಕಳು, ಹೋಟೆಲುಗಳಲ್ಲಿ ನಮ್ಮ ಟೇಬಲ್ ಸ್ವಚ್ಛಗೊಳಿಸುವ ಅಥವಾ ವರ್ಕ್‌ಶಾಪ್‍ನಲ್ಲಿ ಕೆಲಸ ಮಾಡುವ ಬಾಲಕರು, ಗೊತ್ತು ಗುರಿಯಿಲ್ಲದೇ ಅಲೆಯುತ್ತಿರುವ ಮತ್ತು ಅಲ್ಲೆಲ್ಲೋ ಕಸ ತುಂಬಿರುವ ಓಣಿಗಳಲ್ಲಿ ಕುಳಿತು ನಶೆ ಏರಿಸಿಕೊಳ್ಳುತ್ತಿರುವ ಮಕ್ಕಳು – ಹೀಗೆ ಸಾವಿರಾರು ಕಂದಮ್ಮಗಳು ಹಾಗೂ ಬೆಳೆದ ಮಕ್ಕಳು ನಮ್ಮ ಮನಸ್ಸನ್ನು ಕಲಕದೇ ಇರಲು ಸಾಧ್ಯವಿಲ್ಲ. ಏನೆಲ್ಲಾ ಪ್ರಯತ್ನಗಳ ನಡುವೆಯೂ ನಮ್ಮೆದುರಿಗೆ ನಿತ್ಯವೂ ಕಾಣುವ ಈ ಮಕ್ಕಳೇಕೆ ಇನ್ನೂ ಅಭಿವೃದ್ಧಿಯ ವ್ಯವಸ್ಥೆಯಿಂದ ಹೊರಗುಳಿದಿದ್ದಾರೆ ಎನ್ನುವ ಪ್ರಶ್ನೆ ಸುಳಿಯುತ್ತಾದರೂ, ಉತ್ತರ ಹುಡುಕುವಷ್ಟು ಸಮಯ ನಮಗಿಲ್ಲ.
ಯಾವುದೇ ಅಭಿವೃದ್ಧಿಯ ನೀತಿ ನಿಯಮಗಳು ಕಡು ಬಡವರು ಮತ್ತು ದುರ್ಬಲರನ್ನು ಮುಖ್ಯವಾಹಿನಿಯಿಂದ ವ್ಯವಸ್ಥಿತವಾಗಿ ಹೊರಗಿಡುತ್ತವೆ. ಇದು ಹೀಗೇಕೆ ಎಂಬುದು ಇನ್ನೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಮುಂಜಾನೆಯೇ ದುಡಿಮೆಗೆ ಹೊರಟು ಕತ್ತಲ ವೇಳೆಗೆ ಮರಳುವ ತಾಯಂದಿರು ತಮ್ಮ ಕೂಸುಗಳನ್ನು ಅಲ್ಲೆಲ್ಲೋ ದೂರದಲ್ಲಿರುವ ತಂಗುದಾಣ ಅಥವಾ ಇನ್ನಾವುದೋ ಆರೈಕೆ ಕೇಂದ್ರಕ್ಕೆ ಪ್ರತಿದಿನ ಕರೆತರಲು ಸಾಧ್ಯವೇ? ಬೆಂಗಳೂರಿನಲ್ಲಿ ಸುಮಾರು ನಾಲ್ಕು ಶಿಶುಗೃಹಗಳಿದ್ದು, ಈ ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮೂಲಕ ಅಲ್ಲಿಗೆ ಬಿಡಬಹುದು. ಮಕ್ಕಳು ಅಲ್ಲೇ ಇರುತ್ತಾರೆ. ಬೇಕೆನಿಸಿದಾಗ ಸಮಿತಿಯ ಅನುಮತಿ ಮೇರೆಗೆ ವಾಪಸ್ಸು ಕರೆದೊಯ್ಯಬಹುದು. ಆದರೆ, ತಮ್ಮ ಮಕ್ಕಳು ತಮ್ಮೊಂದಿಗೆ ಬದುಕಬೇಕೆಂದು ಬಯಸುವ ಪೋಷಕರು ಈ ವ್ಯವಸ್ಥೆಯನ್ನು ಬಳಸಲು ಒಪ್ಪುವುದಿಲ್ಲ. ಒಪ್ಪಿದರೂ, ಕಟು ನಿಯಮಗಳನ್ನು ನಿಭಾಯಿಸುವ ಮಾಹಿತಿ/ಶಕ್ತಿ ಅವರಿಗಿಲ್ಲ. ಮಕ್ಕಳು ತಮ್ಮೊಂದಿಗೆ ಇರಬೇಕೆಂದಾಗಲಿ ಅಥವಾ ಮಕ್ಕಳಿಗೆ ತಂದೆತಾಯಿ ಜೊತೆ ಇರಬೇಕೆನಿಸುವುದಾಗಲಿ ಸಹಜ ಹಾಗೂ ಅದವರ ಹಕ್ಕು. ಆದರೆ, ಬಡವರೆಂಬ ಕಾರಣಕ್ಕೆ ಈ ಕುಟುಂಬಗಳು ಮಕ್ಕಳನ್ನು ತೊರೆದು ಬದುಕಲಿ ಎನ್ನುವ ಸರ್ಕಾರದ ಅಲೋಚನೆಯು ಎಷ್ಟೊಂದು ಅಸಹಜ!

ವಾರ್ಡಿಗೊಂದು ಮುಂಜಾನೆಯಿಂದ ರಾತ್ರಿ ತನಕ ಕೆಲಸ ನಿರ್ವಹಿಸುವ ಸುಸಜ್ಜಿತ ವ್ಯವಸ್ಥೆಯ ಮೊಬೈಲ್, ಅದಕ್ಕೆ ತಾಗಿದ ಹಗಲು ಆರೈಕೆ ಕೇಂದ್ರ, ಅಪಾರ್ಟ್‍ಮೆಂಟ್‌ಗಳ ಮತ್ತು ಕಾರ್ಮಿಕ ಇಲಾಖೆ (ಕಾರ್ಮಿಕ ಇಲಾಖೆಯ ಮಕ್ಕಳ ಆಶ್ರಯಗಳು ಮುಚ್ಚಿವೆ ಎನ್ನಲಾಗಿದೆ) ಸಹಭಾಗಿತ್ವದಲ್ಲಿ ಮಕ್ಕಳಿಗೆ ಅಲ್ಲಿಯೇ ಶಿಶು ಮಂದಿರಗಳು – ಇಂತಹ ಅನೇಕ ಮಾರ್ಗಗಳ ಮೂಲಕ ಈ ವರ್ಗದ ಮಕ್ಕಳು ಪೋಷಿತ ವಾತಾವರಣದಲ್ಲಿ ಬದುಕಲು ಅವಕಾಶ ಕಲ್ಪಿಸಬಹುದಾಗಿದೆ. ಇದೆಲ್ಲವು ಸರ್ಕಾರಕ್ಕೆ ಆಗದ ಅಥವಾ ತಿಳಿದಿಲ್ಲದ ವಿಚಾರವೇನಲ್ಲ. ದೊಡ್ಡ ವೆಚ್ಚದ ಯೋಜನೆಗಳು ಈ ಬಡವರಿಗೇಕೆ ಎಂಬ ಧೋರಣೆ, ಜೊತೆಗೆ ಬೇರೆ ರಾಜ್ಯಗಳಿಂದ ಬಂದ ವಲಸಿಗ ಮಕ್ಕಳ ಜವಾಬ್ದಾರಿ ನಮ್ಮದಲ್ಲ ಎಂಬ ಅಲೋಚನೆ ಹಾಗೂ ಧ್ವನಿ ಇಲ್ಲದ ಈ ಮಕ್ಕಳ ಕಡೆಗಿನ ನಿರ್ಲಕ್ಷ್ಯತೆಯಾಗಿದೆ.
ವಾಸ್ತವದಲ್ಲಿ ಸರ್ಕಾರವು ಈ ವಯಸ್ಸಿನ ವಲಸಿಗ ಮಕ್ಕಳ ಸಮಸ್ಯೆಯ ಪರಿಹಾರಕ್ಕೆ ಯಾವ ನಿರ್ದಿಷ್ಟ ಯೋಜನೆಯನ್ನು ರೂಪಿಸಿದಂತೆ ಕಾಣುವುದಿಲ್ಲ. ಗ್ರಾಮಗಳಲ್ಲಿ ಈ ಮಕ್ಕಳನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರಾದರೂ ಇರುತ್ತಾರೆ ಅಥವಾ ಮಗು ನೆರೆಹೊರೆಯವರ ಸಹಾಯದಲ್ಲಿ ಬೆಳೆಯುತ್ತದೆ. ಅಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಮನೆಗೆ ಭೇಟಿ ಮಾಡಿ ಆರೋಗ್ಯ ಮತ್ತು ಪೌಷ್ಟಿಕ ಆಹಾರದ ಸೇವೆಗಳನ್ನು ನಗರಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದ್ದಾರೆ. ನಗರಗಳಲ್ಲಿ ಕುಟುಂಬ, ಸಮುದಾಯ ಮತ್ತು ಸರ್ಕಾರದ ನಿಗಾ ಇಲ್ಲವಾದ ಕಾರಣ ಈ ಮಕ್ಕಳು ದಿನ ನಿತ್ಯ ಸರಿಸುಮಾರು 10 ರಿಂದ 12 ಗಂಟೆಗಳು ಅಪಾಯದ ಅಂಚಿನಲ್ಲಿ ಬದುಕುವ ಪರಿಸ್ಥಿತಿಯಾಗಿದೆ.
ಇದನ್ನೂ ಓದಿ ಅಂಗನವಾಡಿ | ಗುಜರಾತ್ ಹೈಕೋರ್ಟ್ ತೀರ್ಪು ಭರವಸೆಯ ಬೆಳಕಷ್ಟೇ; ಜಾರಿಗೆ ಇದೆ ನೂರೆಂಟು ಅಡೆತಡೆ
ನಗರ-ಪಟ್ಟಣಗಳಲ್ಲಿ ಈ ವಯಸ್ಸಿನ ವಲಸಿಗ ಮಕ್ಕಳು ಎಷ್ಟಿವೆ? ಬೇರೆ ರಾಜ್ಯದಿಂದ ವಲಸೆ ಬಂದ ಮಕ್ಕಳಿಗೂ ಸಮಾನ ನಿಗಾ ಕೊಡುವುದು ಹೇಗೆ? ಜನನ ಪತ್ರ ಮತ್ತು ವಿಳಾಸದ ಗುರುತನ್ನು ಹೊಂದದ ಸಣ್ಣ ಕಾರಣಕ್ಕೆ ಮಗು ಬೆಳೆಯುವ ಮತ್ತು ಕಲಿಯುವ ಅವಕಾಶಗಳಿಂದ ವಂಚಿತಗೊಳ್ಳಬೇಕೆ? ಈ ವಯಸ್ಸಿನ ವಲಸಿಗ ಮಕ್ಕಳ ರಕ್ಷಣೆ ಮತ್ತು ಪೋಷಣೆಗೆ ಸೂಕ್ತ ಮತ್ತು ಸರಳ ಮಾರ್ಗವೇನು? ಮೂರು ವರ್ಷ ತುಂಬಿದ ಎಲ್ಲಾ ಮಕ್ಕಳು ಅಂಗನವಾಡಿಗೆ ಬರುತ್ತಿವೆಯೇ? ಇಲ್ಲವಾದರೆ ಎಲ್ಲಿದ್ದಾರೆ? ಮಧ್ಯಾಹ್ನಕ್ಕೆ ಮುಚ್ಚುವ ಅಂಗನವಾಡಿಯಿಂದ ಬಂದ ವಲಸಿಗ ಮಕ್ಕಳು ಎಲ್ಲಿರಬೇಕು? ನಗರ ಮತ್ತು ಪಟ್ಟಣಗಳಲ್ಲಿ ಕೆಲಸಕ್ಕೆ ಹೋಗುವ ತಾಯಂದಿರಿಗೆ ಮತ್ತು ಮಕ್ಕಳಿಗೆ ಪೋಷಕ ಆಹಾರ ತಲುಪುತ್ತಿದೆಯೇ? ಇಂತಹ ಇನ್ನೂ ಅನೇಕ ಪ್ರಮುಖ ಪ್ರಶ್ನೆಗಳಿಗೆ ಉತ್ತರ ಹುಡುಕಿ, ಹೊರಗುಳಿದ ಎಲ್ಲಾ ವಲಸಿಗ ಮಕ್ಕಳನ್ನು ವ್ಯವಸ್ಥೆಯ ತೆಕ್ಕೆಯೊಳಗೆ ತುಂಬಿಕೊಳ್ಳಲು ವಿಶೇಷ ಗಮನ ನೀಡಿದಾಗ ಮಾತ್ರ ಈ ವಲಸಿಗ ಮಕ್ಕಳೂ ಸಹ ತಮ್ಮ ಪ್ರತಿ ದಿನಗಳನ್ನು ಖುಷಿಯಿಂದ ಆಚರಿಸಿಕೊಳ್ಳಲು ಸಾಧ್ಯವಾಗುತ್ತದೆ.

ಲತಾಮಾಲ
ಗ್ರಾಮೀಣಾಭಿವೃದ್ಧಿ ತಜ್ಞರು ಮತ್ತು ಲೇಖಕರು