ಕ್ರಿಸ್‌ಮಸ್‌ ಹಬ್ಬ | ಯುದ್ಧಗ್ರಸ್ತ ನಾಡು, ದಮನಿತರ ಎದೆಯಲಿ ಭರವಸೆಯ ಸಿಂಚನ ಮೂಡಿಸಲಿ

Date:

Advertisements

ಜಗತ್ತು ಇಂದು ‘ಯುದ್ಧಕಾಲ’ವೆಂಬ ವಿಷಮ ಕಾಲಘಟ್ಟದಲ್ಲಿ ಚಲಿಸುತ್ತಿದೆ. ಉಕ್ರೇನ್, ಪ್ಯಾಲೆಸ್ತೀನ್ ಸೇರಿದಂತೆ ವಿವಿಧ ದೇಶಗಳಲ್ಲಿ ಮಾನವ ನಿರ್ಮಿತ ಯುದ್ಧದ ಕಾರಣ ಲಕ್ಷಾಂತರ ಜನರು ತಮ್ಮದಲ್ಲದ ತಪ್ಪಿಗೆ ಉಸಿರು ಚೆಲ್ಲುತ್ತಿದ್ದಾರೆ. ಈ ನಡುವೆಯೇ ಇಂದು (ಡಿ.25)ವಿಶ್ವದೆಲ್ಲೆಡೆ ಸಂಭ್ರಮದಿಂದ ಆಚರಿಸುವ ‘ಕ್ರಿಸ್‌ಮಸ್‌’ ಕೂಡ ಬಂದಿದೆ.

ಅದು ಸಮಸ್ತ ಯೆಹೂದ್ಯ ಜನಾಂಗ ಮೆಸ್ಸಾಯ(ಲೋಕೋದ್ಧಾರಕ)ನನ್ನು ನಿರೀಕ್ಷಿಸುತ್ತಿದ್ದ ಕಾಲ. ದೇವರು ತನ್ನ ಪುತ್ರನನ್ನು ಮನುಕುಲದ ರಕ್ಷೆಗಾಗಿ ಕಳುಹಿಸುವ ವಾಗ್ದಾನ ಪ್ರತಿ ಯೆಹೂದ್ಯನ ಹೃದಯದಲ್ಲಿ ಮಾರ್ದನಿಸುತ್ತಿದ್ದ ಕಾಲ. ಆ ಸಮಯಕ್ಕೆ ನೀಡಿದ ವಾಗ್ದಾನವನ್ನು ನೆರವೇರಿಸಿದ ದೇವರು, ‘ಗೇಬ್ರಿಯಲ್’ ದೇವದೂತನನ್ನು ಮರಿಯಳೆಂಬ ಕನೈಯ ಬಳಿಗೆ ಕಳುಹಿಸುತ್ತಾರೆ. “ಮರಿಯಾ.. ಕನ್ಯೆಯಾದ ನೀನು ಪವಿತ್ರಾತ್ಮರ ಪ್ರಭಾವದಿಂದ ಗಂಡು ಮಗುವಿಗೆ ಜನ್ಮವೀಯುವೆ. ಆತ ಮಹಾಪುರುಷನಾಗುವನು ಹಾಗೂ ಪರಮಾತ್ಮರ ದೇವರ ಪುತ್ರನೆನಿಸಿಕೊಳ್ಳುವನು” ಎಂಬ ಮುನ್ಸೂಚನೆಯನ್ನು ನೀಡುತ್ತಾನೆ. ಅಂತೆಯೆ ಮರಿಯ ಕ್ರಿಸ್ತನಿಗೆ ದನದ ಕೊಟ್ಟಿಗೆಯಲ್ಲಿ ಜನ್ಮ ನೀಡುತ್ತಾಳೆ. ಇದು ‘ಕ್ರಿಸ್ತನೆಂಬ ಮಹಾಕಾವ್ಯ’ದ ಮುನ್ನುಡಿ.

ಕ್ರಿಸ್‌ಮಸ್‌ ಯೇಸುಕ್ರಿಸ್ತನ ಜನನದ ಸುದಿನ. ಕ್ರೈಸ್ತರ ಹಬ್ಬಗಳಲ್ಲಿ ಇದೊಂದು ಮಹತ್ವಪೂರ್ಣ ಹಬ್ಬವಾಗಿದ್ದು, ಡಿಸೆಂಬರ್ ತಿಂಗಳಿನ ಆರಂಭದಿಂದಲೆ ಸಕಲ ಸಿದ್ಧತೆಗಳಿಗೆ ಸಜ್ಜುಗೊಳ್ಳುವ ಹಬ್ಬ. ಕ್ರಿಶ್ಚಿಯನ್ ಕ್ಯಾಲೆಂಡರ್ ಪ್ರಕಾರ ಕ್ರೈಸ್ತರಿಗೆ ವರ್ಷದಲ್ಲಿ ನಾಲ್ಕು ಕಾಲಗಳು, ಆಗಮನ ಕಾಲ, ಸಾಧಾರಣ ಕಾಲ, ತಪಸ್ಸು, ಕಾಲ ಹಾಗೂ ಪಾಸ್ಮ ಕಾಲ. ಆಗಮನ ಕಾಲ ಕ್ರಿಸ್ತನ ಜನನದ ಮುನ್ಸೂಚನೆ. ಕ್ರಿಸ್ತನ ಬರುವಿಕೆಗಾಗಿ ಸಂತೋಷ ಸಂಭ್ರಮದಿಂದ, ಬಾಹ್ಯ ಮತ್ತು ಆತ್ಮಶುದ್ಧಿಯಿಂದ ಕಾತರತೆಯಿಂದ ಎದುರು ನೋಡುವ ಕಾಲ.

Advertisements

ಕ್ರಿಸ್‌ಮಸ್‌ ಪದದ ಅರ್ಥವೇನು?

ಕ್ರಿಸ್‌ಮಸ್‌ (Christmas) ಎಂದರೆ ಕ್ರೈಸ್ಟ್ ಮಾಸ್ ಎಂದರ್ಥ. ಕನ್ನಡದಲ್ಲಿ ಕ್ರಿಸ್ತನ ಪೂಜೆ ಎಂಬುದು ಇದರ ತಾತ್ಪರ್ಯ. ಪಾಪಿಗಳ ಪಾಪ ಪರಿಹಾರಕ್ಕಾಗಿ ಧರೆಗಿಳಿದ ಕ್ರಿಸ್ತನ ಜನನದ ಆಚರಣೆಯೇ ಕ್ರಿಸ್ತ ಜಯಂತಿ. ಕ್ರಿಸ್ಮಸ್ ಹಬ್ಬದ ವಿಶೇಷತೆಗಳೆಂದರೆ ಗೋದಲಿ(crib), ನಕ್ಷತ್ರಗಳು ಮತ್ತು ಕ್ರಿಸ್ಮಸ್ ತಾತ (Santa Claus). ಈ ಮೂರೂ ವಿಶೇಷತೆಗಳ ಹಿನ್ನೆಲೆಯನ್ನು ನೋಡೋಣ.

ಗೋದಲಿ – ಕ್ರಿಸ್ತ ಹುಟ್ಟಿದ್ದು ದನದ ಕೊಟ್ಟಿಗೆಯೊಳಗಿನ ಗೋದಲಿಯಲ್ಲಿ. ಇದರ ಹಿನ್ನೆಲೆ ತಿಳಿಯ ಬೇಕೆಂದರೆ ನಾವು ಹದಿಮೂರನೆಯ ಶತಮಾನಕ್ಕೆ ಕಣ್ಣಾಯಿಸಬೇಕು. ಹದಿಮೂರನೆ ಶತಮಾನದ ಮೊದಲಾರ್ಧದಲ್ಲಿ ಇಟಲಿ ದೇಶದ ಅಸಿಸಿ ಎಂಬ ಪಟ್ಟಣದಲ್ಲಿ ಒಬ್ಬ ತರುಣನಿಂದ ಶುರುವಾದ ಇದು ಇಂದು ವಿಶ್ವ ಪ್ರಸಿದ್ಧಿಯನ್ನು ಪಡೆದಿದೆ.

CRIB

ಆ ತರುಣನ ಹೆಸರು ಫ್ರಾನ್ಸಿಸ್. ಈ ಫ್ರಾನ್ಸಿಸ್ ಮುಂದೆ ಸಂತ ಫ್ರಾನ್ಸಿಸ್ ಅಸಿಸ್ಸಿಯಾದ, ಶ್ರೀಮಂತ ಕುಟುಂಬದಲ್ಲಿ ಜನಿಸಿದ ಫ್ರಾನ್ಸಿಸ್ ಯೌವ್ವನದ ದಿನಗಳಲ್ಲಿ ಮೋಜುಗಾರ ಸೊಗಸುಗಾರ, ಒಮ್ಮೆ ಕ್ರಿಸ್ತನ ಧ್ವನಿಗೆ ಓಗೊಟ್ಟು ಮನಪರಿವರ್ತನೆಗೊಂಡು, ವೈರಾಗ್ಯ ತಾಳಿ ಸನ್ಯಾಸಿಯಾದ. ಕ್ರಿಸ್‌ಮಸ್‌ ಹಬ್ಬವನ್ನು ಅರ್ಥಪೂರ್ಣವಾಗಿ ಕೊಂಡಾಡುವ ಸಲುವಾಗಿ ತನ್ನ ಗೆಳೆಯ ಜಾನ್ ಎಂಬುವವನಿಗೆ ದನ ಕರುಗಳ ಒಂದು ನೈಜ ಕೊಟ್ಟಿಗೆಯನ್ನು ಸಿದ್ಧಪಡಿಸಲು ಫ್ರಾನ್ಸಿಸ್ ಹೇಳುತ್ತಾನೆ. ಈ ರೀತಿಯಲ್ಲಿ ಅಂದು ಕ್ರಿಸ್‌ಮಸ್‌ ಹಬ್ಬವನ್ನು ನೈಜ ಚಿತ್ರಣದ ಮೂಲಕ ಕೊಂಡಾಡುತ್ತಾರೆ. ಹೀಗೆ ಆರಂಭವಾದ ಕ್ರಿಸ್ತನ ಜನನದ ರೂಪಕದ ಮರುಸೃಷ್ಟಿಯು ಇಂದು ಜಗತ್ತನ್ನು ವ್ಯಾಪಿಸಿ, ಡಿಸೆಂಬರ್ ತಿಂಗಳ ಪ್ರಮುಖ ಆಕರ್ಷಣೆಯಾಗಿರುವುದನ್ನು ನಾವು ಕಾಣುತ್ತಿದ್ದೇವೆ.

ನಕ್ಷತ್ರಗಳ ವಿಶೇಷತೆಯೆಂದರೆ ಅಂದು ಕ್ರಿಸ್ತನ ಜನನವಾದಾಗ ಕ್ರಿಸ್ತನನ್ನು ಕಂಡು ಆರಾಧಿಸಲು ದೂರ ದೇಶಗಳಿಂದ ಮೂರು ಅರಸರು ಅಥವಾ ಜ್ಞಾನಿಗಳು ಬರುತ್ತಾರೆ. ಆದರೆ ಅವರಿಗೆ ಕ್ರಿಸ್ತನ ಜನನದ ಸ್ಥಳ ತಿಳಿಯುವುದಿಲ್ಲ. ಆಗ ಬಾನಿನಲ್ಲಿ ಉದಯಿಸಿದ ತಾರೆಯೊಂದು ಅವರ ಮುಂದೆ ಮುಂದೆ ಸಾಗಿ ಕ್ರಿಸ್ತನ ಜನನದ ಸ್ಥಳವನ್ನು ತೋರಿಸುತ್ತದೆ. ಅದರ ಸಂಕೇತವಾಗಿ ಕ್ರಿಸ್‌ಮಸ್‌ ಹಬ್ಬದಂದು ಎಲ್ಲರ ಮನೆಗಳಲ್ಲಿ ನಕ್ಷತ್ರಗಳನ್ನು ತೂಗಿಹಾಕುತ್ತಾರೆ. ಶಾಂತಿಯ ರಾಜಕುಮಾರನಾದ ಕ್ರಿಸ್ತ ಕಂದ ನಮ್ಮ ಮನೆಯಲ್ಲಿಯೂ ಜನಿಸಿದ್ದಾನೆ ಎಂದು ತೋರಿಸುವುದು ಇದರ ಅರ್ಥ.

ಇದನ್ನು ಓದಿದ್ದೀರಾ? ಕ್ರಿಸ್‌ಮಸ್ ಹಬ್ಬ | ಸೌಹಾರ್ದತೆಯ ಸೋಗು ಹಾಕಿದ ಕೋಮುವಾದಿ ಮೋದಿ

‘ಸ್ಯಾಂಟ ಕ್ಲಾಸ್’ ಅಥವಾ ‘ಕ್ರಿಸ್ಮಸ್ ತಾತ’ ಎಂಬ ಆಕರ್ಷಣೆಯ ಹಿನ್ನೆಲೆ ಬಹಳ ಸ್ವಾರಸ್ಯಕರ ಮಾತ್ರವಲ್ಲದೇ, ಅರ್ಥಪೂರ್ಣವೂ ಆಗಿದೆ. ನಾಲ್ಕನೇ ಶತಮಾನದಲ್ಲಿ ಮೆಡಿಟರೇನಿಯನ್ ಪ್ರದೇಶ (ಈಗಿನ ಟರ್ಕಿ) ದಲ್ಲಿ ಜೀವಿಸಿದ ನಿಕೋಲಾಸ್ ಎಂಬ ಕ್ರೈಸ್ತ ಪಾದ್ರಿ ತನ್ನ ಸರಳ ಜೀವನ, ಆಧ್ಯಾತ್ಮಿಕತೆ, ದಾನಶೀಲತೆ ಹಾಗೂ ಇತರರಿಗೆ ನೆರವಾಗುವ ಸದ್ಗುಣದಿಂದ ಹೆಸರುವಾಸಿಯಾಗಿದ್ದ. ಅಂದಿನ ಕಾಲಘಟ್ಟದಲ್ಲಿ ಬಡವರು, ನಿರ್ಗತಿಕರು ಹಾಗೂ ದಮನಿತರಿಗೆ ಅವರ ಅವಶ್ಯಕತೆಗಳನ್ನು ಮನಗೊಂಡು ನೆರವಾಗುತ್ತಿದ್ದ.

WhatsApp Image 2024 12 25 at 1.07.25 PM

ಈತನ ನೆರವಿನ ವಿಶೇಷತೆ ಎಂದರೆ ಯಾರಿಗೂ ಕಾಣದಂತೆ ಸಹಾಯ ಮಾಡುವುದು. ಹೀಗೆ, ಜನರ ನಡುವೆ ಬೆರೆತು ಅವರ ಕಷ್ಟ- ಕಾರ್ಪಣ್ಯಗಳನ್ನು ಅರಿತುಕೊಳ್ಳುತ್ತಿದ್ದ ಪಾದ್ರಿ ನಿಕೋಲಾಸ್ ರಾತ್ರಿಯ ವೇಳೆ ಅವರ ಮನೆಗಳ ಬಳಿ ಅವರ ಆವಶ್ಯಕತೆಯನ್ನು ಪೂರೈಸುವಷ್ಟು ಹಣವನ್ನೂ, ಚಿನ್ನವನ್ನೋ ಅಥವಾ ಮತ್ಯಾವುದೋ ಬೆಲೆ ಬಾಳುವ ವಸ್ತುವನ್ನೊ ಇಟ್ಟು ಅಲ್ಲಿಂದ ಹೊರಟು ಬಿಡುತ್ತಿದ್ದ. ಹೀಗೆ ಕ್ರಮೇಣ ಜನರಿಗೆ, ಅನಾಮಧೇಯವಾಗಿ ನೆರವಾಗುತ್ತಿರುವುದು ಪಾದ್ರಿ ನಿಕೋಲಾಸ್ ಎಂದು ಅರಿವಾಯಿತು. ಆತನ ಸಮ್ಮಣ, ವಿನಯಶೀಲತೆ ಹಾಗೂ ದಾನ ಮನೋಭಾವವನ್ನು ಅರಿತಿದ್ದ ಜನರು ಆತನನ್ನು ಸಂತ ನಿಕೋಲಾಸ್ (ಸೇಂಟ್ ನಿಕೋಲಾಸ್) ಎಂದು ಕರೆಯುತ್ತಿದ್ದರು. ಈ ಸೇಂಟ್ ನಿಕೋಲಾಸ್ ಎಂಬ ಹೆಸರು ಕ್ರಮೇಣ ಬಾಯಿಂದ ಬಾಯಿಗೆ ಹರಡಿ, ಅಪಭ್ರಂಶವಾಗಿ “ಇಂದಿನ ಸ್ಯಾಂಟ ಕ್ಲಾಸ್” ಆಗಿದೆ ಎಂಬುದು ವಾಸ್ತವ!

ಇದನ್ನು ಓದಿದ್ದೀರಾ? ದೇವಾಲಯಗಳ ಆಸ್ತಿ ರಕ್ಷಣೆಗೆ ಮಹತ್ವದ ಕ್ರಮ ವಹಿಸಿದ ರಾಜ್ಯ ಸರ್ಕಾರ: ಉಳಿಯಿತು 10,700 ಎಕರೆ ‘ದೇವರ ಸ್ವತ್ತು’

ಈ ಮೇಲೆ ಹೇಳಿರುವ ಕ್ರಿಸ್ಮಸ್ ವಿಶೇಷತೆಗಳೇನೇ ಇರಲಿ, ಇವುಗಳೆಲ್ಲವನ್ನೂ ದಾಟಿ ಕ್ರಿಸ್‌ಮಸ್‌ ಅಥವಾ ಕ್ರಿಸ್ತ ಜಯಂತಿ ಎಂಬುದು ನೀಡುವ ಸಂದೇಶ ಸರ್ವಕಾಲಕ್ಕೂ ಸಲ್ಲುವ ಸಂದೇಶವಾಗಿದೆ. ಶಾಂತಿ, ಪ್ರೀತಿ ಮತ್ತು ಭರವಸೆ ಎಂಬ ಮೂರು ಮಾನವೀಯ ತತ್ತ್ವಗಳನ್ನು ಸಾರುವ ಯೇಸುಕ್ರಿಸ್ತರ ಜನನ ಕ್ರೈಸ್ತ ಧರ್ಮವನ್ನೂ ದಾಟಿ ವಿಶ್ವದ ಎಲ್ಲ ಮಾನವರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿರುವ ಅಳವಡಿಸಿಕೊಳ್ಳಬಹುದುದಾದ ಸಂದೇಶವಾಗಿದೆ.

gaza girl

ಜಗತ್ತು ಇಂದು ‘ಯುದ್ಧಕಾಲ’ವೆಂಬ ವಿಷಮ ಕಾಲಘಟ್ಟದಲ್ಲಿ ಚಲಿಸುತ್ತಿದೆ. ಉಕ್ರೇನ್, ಪ್ಯಾಲೆಸ್ತೀನ್ ಸೇರಿದಂತೆ ವಿವಿಧ ದೇಶಗಳಲ್ಲಿ ಮಾನವ ನಿರ್ಮಿತ ಯುದ್ಧದ ಕಾರಣ ಲಕ್ಷಾಂತರ ಜನರು ತಮ್ಮದಲ್ಲದ ತಪ್ಪಿಗೆ ಉಸಿರು ಚೆಲ್ಲುತ್ತಿದ್ದಾರೆ. ಮುಗ್ಧ ಮಕ್ಕಳು ಈ ನರಮೇಧದ ಮೂಖ ಸಾಕ್ಷಿಗಳಾಗಿ ಮಡಿಯುತ್ತಿದ್ದಾರೆ. ಹಸುಲೆಗಳ ಹೊತ್ತ ತಾಯಂದಿರ ಆಕ್ರಂದನ ಅರಣ್ಯರೋಧನೆಯಾಗಿ ಪರಿಣಮಿಸಿ, ಆಳುವ ಸರ್ಕಾರಗಳು, ವಿಶ್ವದ ನಾಯಕರುಗಳು ಸುಳ್ಳು, ಕಪಟ, ಸ್ವಲಾಭ, ಧರ್ಮಾಂಧತೆಗಳೆಂಬ ಪರಿಧಿಯ ಹಿಂದೆ ಬಚ್ಚಿಟ್ಟುಕೊಂಡಿರುವ ಈ ಹೊತ್ತಿನಲ್ಲಿ ಇಂದಿನ ಕ್ರಿಸ್ತನ ಜನನ ದಮನಿತರೆದೆಯಲಿ ಭರವಸೆಯ ಸಿಂಚನವನ್ನು ಮೂಡಿಸಲಿ. ಕಾರ್ಗತ್ತಲಿನ ಈ ದಿನಗಳು ಕಳೆದು ಬೆಳಕು ಮೂಡಲಿದೆ ಎಂಬ ಭಾವ ಅವರ ಎದೆಗಳಲ್ಲಿ ಪ್ರೇರೇಪಿಸಲಿ ಎಂದು ಹಾರೈಸೋಣ. ಈ ದಿನ ಡಾಟ್ ಕಾಮ್‌ ಓದುಗರಿಗೆ ಹಾಗೂ ನಾಡಿನ ಜನತೆಗೆ ಕ್ರಿಸ್‌ಮಸ್‌ ಹಬ್ಬದ ಶುಭಾಶಯಗಳು.

(ಲೇಖಕರು ಬೆಂಗಳೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆಯಲ್ಲಿದ್ದಾರೆ.)

WhatsApp Image 2024 12 25 at 11.05.58
ಅಜಯ್ ಕುಮಾರ್ ಅಬ್ರಹಾಂ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X