ರೆಡ್ಡಿ-ಕಾಪು ಸಮುದಾಯಗಳ ಗುಂಪು ಕಠಾರಿಯಂಥ ಹರಿತ ಆಯುಧ, ನೇಗಿಲ ಕುಳಗಳಿಂದ ಪೊಲೀಸರ ಎದುರಲ್ಲೇ ಹತ್ತು ದಲಿತ ಯುವಕರನ್ನು ಕತ್ತರಿಸಿ ಹಾಕಿತ್ತು. ಈ ಹತ್ಯಾಕಾಂಡ ಅದೆಷ್ಟು ಭೀಭತ್ಸವಾಗಿತ್ತೆಂದರೆ, ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯ ಡಾ ರವಿಕುಮಾರ್ ಖಿನ್ನತೆಗೆ ಜಾರಿ ಕಡೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ರವಿಕುಮಾರ್ ಸ್ವತಃ ದಲಿತರಾಗಿದ್ದರು.
ಸುಪ್ರೀಂಕೋರ್ಟ್‌ನ ಗ್ರಂಥಾಲಯದಲ್ಲಿ ‘ಲೇಡಿ ಆಫ್ ಜಸ್ಟಿಸ್’ ಅಂದರೆ ನ್ಯಾಯ ದೇವತೆಯ ಹೊಸ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಹೊಸ ಪ್ರತಿಮೆಯ ಕಣ್ಣಿನ ಕಪ್ಪು ಪಟ್ಟಿ ತೆಗೆಯಲಾಗಿದೆ. ಇದು ಇಲ್ಲಿಯವರೆಗೆ ಕಾನೂನು ಕುರುಡು ಎಂದು ಸೂಚಿಸುತ್ತಿದ್ದ ಪಟ್ಟಿ. ಕೈಯಲ್ಲಿನ ಖಡ್ಗ ತೆಗೆದು ಅದರ ಬದಲು ಸಂವಿಧಾನದ ಪುಸ್ತಕವನ್ನು ನೀಡಲಾಗಿದೆ. ನ್ಯಾಯ ಕುರುಡಲ್ಲ; ಎಲ್ಲರನ್ನೂ ಸಮಾನವಾಗಿ ನೋಡುತ್ತದೆ ಎಂದು ಮರು ವ್ಯಾಖ್ಯಾನ ಮಾಡಲು ಸಿಜೆಐ ಚಂದ್ರಚೂಡ್ ಈ ತೀರ್ಮಾನ ಮಾಡಿದ್ದರಂತೆ. ಅದರರ್ಥ ಇನ್ನು ಮುಂದೆ ನ್ಯಾಯ ತೀರ್ಮಾನಗಳು ಯಾವುದೇ ಪ್ರಭಾವಕ್ಕೆ ಒಳಗಾಗದೆ, ನಿಷ್ಪಕ್ಷಪಾತವಾಗಿ ಆಗಲಿವೆ ಎಂದುಕೊಂಡರೆ ಅದು ಮೂರ್ಖತನವಾದೀತು. ಇದೇ ಸುಪ್ರೀಂ ಕೋರ್ಟಿನಲ್ಲೇ ದಲಿತರ ಹತ್ಯಾಕಾಂಡಕ್ಕೆ ಸಂಬಂಧಿಸಿದ ಅದೆಷ್ಟೋ ಪ್ರಕರಣಗಳು ದಶಕಗಳಿಂದ ಧೂಳು ತಿನ್ನುತ್ತಿವೆ. ಅತ್ಯಾಚಾರಿಗಳು, ಕೊಲೆ ಪಾತಕಿಗಳಿಗೆ ಬಿಡುಗಡೆಯ ಭಾಗ್ಯ ಸಿಗುತ್ತಿದೆ. ಬಹುಕೋಟಿ ಆರ್ಥಿಕ ಅಪರಾಧಿಗಳಿಗೆ ಕ್ಲೀನ್‌ಚಿಟ್ ಸಿಗುತ್ತಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದ ದಲಿತರ ಮೇಲೆ ದೌರ್ಜನ್ಯ ನಡೆಸಿದ್ದ 98 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅತಿ ಅಪರೂಪದ ನ್ಯಾಯದಾನವಿದು. ಆದರೆ ಜಿಲ್ಲಾ ನ್ಯಾಯಾಲಯದ ಈ ತೀರ್ಪು ನ್ಯಾಯದಾನದ ನಿರೀಕ್ಷೆಯಲ್ಲಿರುವ ದೇಶದ ದಲಿತರ ಹತ್ತಾರು ನರಮೇಧ ಪ್ರಕರಣಗಳನ್ನು ನೆನಪಿಸುವಂತೆ ಮಾಡಿದೆ.
ಆಂಧ್ರಪ್ರದೇಶದ ಚುಂಡೂರಿನಲ್ಲಿ 1991ರ ಆಗಸ್ಟ್ 6ರಂದು ನಡೆದ ದಲಿತರ ನರಮೇಧ ಒಂದರ್ಥದಲ್ಲಿ ವ್ಯವಸ್ಥಿತ ನರಬಲಿಯೇ ಆಗಿದೆ. ಇದು ದಲಿತರ ಮೇಲೆ ಸ್ವತಂತ್ರ ಭಾರತದಲ್ಲಿ ನಡೆದ ಅತ್ಯಂತ ಘೋರ ಕೃತ್ಯ ಎಂದೇ ದಾಖಲಾಗಿದೆ. ಅಷ್ಟೇ ಅಲ್ಲ ಈ ಘಟನೆ ಆಂಧ್ರ ಪ್ರದೇಶದಲ್ಲಿ ದಲಿತ ಚಳವಳಿಯ ಹೊಸ ಶಕೆ ಆರಂಭಕ್ಕೆ ಕಾರಣವಾಯಿತು. ಆದರೆ ಮೂರು ದಶಕಗಳೇ ಉರುಳಿದ್ದರೂ ಅಪರಾಧಿಗಳಿಗೆ ಇನ್ನೂ ಶಿಕ್ಷೆ ಆಗಿಲ್ಲ. ನ್ಯಾಯಾಲಯಗಳಿಗೆ ಸಾಕ್ಷ್ಯಾದಾರಗಳ ಕೊರತೆಯಂತೆ!
ಆಂಧ್ರದ ಬಲಿಷ್ಠ ರೆಡ್ಡಿ ಮತ್ತು ಕಾಪು ಸಮುದಾಯಗಳು ಪೊಲೀಸರು ಮತ್ತು ರಾಜಕೀಯ ಪ್ರಭಾವಿಗಳ ಬೆಂಬಲದಿಂದ 21 ರಿಂದ 40ರ ವಯೋಮಾನದ 10 ಮಂದಿ ದಲಿತ ಯುವಕರನ್ನು ಕಡಿದು ಕೊಂದು ಹಾಕಿದ ಭೀಕರ ಹತ್ಯಾಕಾಂಡವಿದು. ಹತ್ಯೆ ಮಾಡಿದ ಪಾಪಿಗಳು ಮೃತದೇಹಗಳನ್ನು ಕಾಲುವೆಗೆ ಎಸೆದಿದ್ದರು. ಮೂರು ದಿನಗಳ ನಂತರ ಆಗಸ್ಟ್ 9ರಂದು ಮೃತದೇಹಗಳನ್ನು ಮೇಲಕ್ಕೆತ್ತಲಾಯ್ತು. ಈ ಹತ್ಯಾಕಾಂಡಕ್ಕೆ ಪೊಲೀಸರ ಸಕ್ರಿಯ ಬೆಂಬಲ ಇತ್ತು. ರೆಡ್ಡಿಗಳು ದಾಳಿ ಮಾಡಲು ಬರುತ್ತಿದ್ದಾರೆ ತಪ್ಪಿಸಿಕೊಳ್ಳಿ ಎಂದು ಪೊಲೀಸರೇ ಆ ದಲಿತ ಯುವಕರ ಮನೆಗೆ ಹೋಗಿ ಹೇಳಿ ಅವರು ಹೊಲ ಗದ್ದೆಗಳ ಕಡೆ ಪರಾರಿ ಆಗುವಂತೆ ಮಾಡಿದ್ದೇ ಪೊಲೀಸರು. ಹಾಗೆ ಹೊಲದ ಕಡೆ ಯುವಕರು ಹೋದಾಗ ರೆಡ್ಡಿ-ಕಾಪುಗಳ ಗುಂಪು ಕಠಾರಿಯಂಥ ಹರಿತ ಆಯುಧಗಳನ್ನು, ನೇಗಿಲ ಕುಳಗಳನ್ನು ಹಿಡಿದು ಬಲಿಗೆ ಕಾಯುತ್ತಿತ್ತು. ಪೊಲೀಸರ ಎದುರಲ್ಲೇ ಹನ್ನೆರಡು ಯುವಕರನ್ನು ಕತ್ತರಿಸಿ ಹಾಕಿತ್ತು ಆ ರಾಕ್ಷಸರ ಪಡೆ. ಈ ಹತ್ಯಾಕಾಂಡ ಅದೆಷ್ಟು ಭೀಭತ್ಸವಾಗಿತ್ತೆಂದರೆ, ಮೃತದೇಹಗಳ ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯ ಡಾ ರವಿಕುಮಾರ್ ಖಿನ್ನತೆಗೆ ಜಾರಿ ಕಡೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ರವಿಕುಮಾರ್ ಸ್ವತಃ ದಲಿತರಾಗಿದ್ದರು.
ಈ ನರಮೇಧದ ವಿಚಾರಣೆಗೆಂದು ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿತ್ತು. ಘಟನೆ ನಡೆದ ಊರಿನಲ್ಲಿಯೇ ನ್ಯಾಯಾಲಯ ಸ್ಥಾಪಿಸಿದ್ದು ಈ ದೇಶದಲ್ಲಿ ಅದೇ ಮೊದಲು. ಹದಿಮೂರು ವರ್ಷಗಳ ನಂತರ 2014ರಲ್ಲಿ ಚುಂಡೂರಿನ ನ್ಯಾಯಾಲಯ 21 ಮಂದಿಗೆ ಜೀವಾವಧಿ ಶಿಕ್ಷೆ ಮತ್ತು 35 ಅಪರಾಧಿಗಳಿಗೆ ತಲಾ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಈ ಶಿಕ್ಷೆಯನ್ನು ಆಂಧ್ರ ಹೈಕೋರ್ಟ್ ಸೂಕ್ತ ಸಾಕ್ಷ್ಯಗಳ ಕೊರತೆಯ ಕಾರಣ ನೀಡಿ ವಜಾ ಮಾಡಿತ್ತು. ಇದಲ್ಲವೇ ನ್ಯಾಯಾಂಗದ ವಿಡಂಬನೆ! ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಕೆಯಾಗಿದೆ. ಅದಿನ್ನೂ ತೀರ್ಪು ನೀಡಿಲ್ಲ. ಇಂತಹ ಘೋರ ನರಮೇಧದ ವಿಚಾರಣೆಗೆ ವಿಶೇಷ ಕೋರ್ಟ್ ಸ್ಥಾಪಿಸಿ ಅದು ವರ್ಷಗಟ್ಟಲೆ ಸಾಕ್ಷಿಗಳ ವಿಚಾರಣೆ ನಡೆಸಿ ಆರೋಪ ಸಾಬೀತು ಮಾಡಿ ತೀರ್ಪು ಕೊಟ್ಟ ಮೇಲೂ ಅದನ್ನು ಹೈಕೋರ್ಟ್ ವಜಾ ಮಾಡಿದೆ ಅಂದ್ರೆ ದೀನದಲಿತರ ಪಾಲಿಗೆ ನ್ಯಾಯ ಎಂಬುದು ಮರೀಚಿಕೆ ಅಲ್ಲವೇ? ಪಾತಕಿಗಳು ಪ್ರಬಲರು, ಬಲಿಯಾದವರು ದುರ್ಬಲ ದಲಿತರು. ನ್ಯಾಯ ಯಾರ ಕಡೆ ವಾಲಿದೆ ಎಂಬುದು ಬೆಳಕಿನಷ್ಟೇ ಸ್ಪಷ್ಟ.

ಚುಂಡೂರು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪುಟ್ಟ ಹಳ್ಳಿ. ಈ ಊರಿಗೊಂದು ವಿಶೇಷತೆಯಿದೆ. ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಈ ಊರಿಗೆ ಭೇಟಿ ನೀಡಿದ್ದರಂತೆ. ಅಷ್ಟೇ ಅಲ್ಲ ಬ್ರಿಟಿಷರು ಈ ಪ್ರದೇಶದಲ್ಲಿ ತಮ್ಮ ಮೊದಲ ಪೊಲೀಸ್ ಠಾಣೆಯೊಂದನ್ನು ಸ್ಥಾಪಿಸಿದ್ದರು. ಕೃಷ್ಣಾ ನದಿ ಪಾತ್ರದ ಈ ಭೂಮಿ ಸಹಜವಾಗಿಯೇ ಫಲವತ್ತಾದ ಭೂಮಿ. ಹಾಗಾಗಿ ಇಲ್ಲಿ ಅಪಾರ ಜಮೀನು ಇರುವವರು ಮೇಲ್ವರ್ಗದ ಕುಳಗಳು, ಜಮೀನ್ದಾರಿ ವರ್ಗದ ಜನರೇ ಬಹುಸಂಖ್ಯಾತರು. ಮೂರು ಸಾವಿರ ಎಕರೆ ಜಮೀನಿನಲ್ಲಿ ಎರಡೂವರೆ ಸಾವಿರ ಎಕರೆ ರೆಡ್ಡಿಗಳ ಕೈಯಲ್ಲಿದೆ ಎಂದರೆ ಅವರೆಷ್ಟು ಪ್ರಭಾವಶಾಲಿಯಾಗಿರಬೇಡ ಎಂಬ ಅಂದಾಜು ಸಿಗುತ್ತದೆ. ದಲಿತರು ರೆಡ್ಡಿಗಳ ಹೊಲದಲ್ಲಿ ಕೂಲಿಯಾಳುಗಳು. ಇದು ಚೆನ್ನೈ-ಕೋಲ್ಕತ್ತಾ ರೈಲು ಮಾರ್ಗದ ಸಮೀಪದಲ್ಲಿದೆ. ಹಳಿಗಳೇ ಮೇಲ್ವರ್ಗ ಮತ್ತು ದಲಿತರ ಕೇರಿಯನ್ನು ಪ್ರತ್ಯೇಕಗೊಳಿಸಿವೆ. ರಸ್ತೆಯ ಒಂದು ಬದಿಯಲ್ಲಿರುವ ಅಂಬೇಡ್ಕರ್ ಕಾಲೋನಿಯಲ್ಲಿ ಚುಂಡೂರಿನ ದಲಿತರು ವಾಸಿಸುತ್ತಿದ್ದರೆ, ಇನ್ನೊಂದು ಬದಿಯಲ್ಲಿ ಮೇಲ್ವರ್ಗದವರು ವಾಸಿಸುತ್ತಿದ್ದರು. ದಲಿತರು ವಾಸಿಸುವ ಅಂಬೇಡ್ಕರ್ ಕಾಲೋನಿಯನ್ನು ಮೇಲ್ವರ್ಗದ ಕಾಲೋನಿಯಿಂದ ಬೇರ್ಪಡಿಸುವ ಮುಖ್ಯ ರಸ್ತೆಯಲ್ಲಿ ಅಂಬೇಡ್ಕರ್ ಪ್ರತಿಮೆಯೂ ಇದೆ. ಇದೆಲ್ಲ ಮೇಲ್ವರ್ಗದ ಕಣ್ಣು ಕೆಂಪಾಗಿಸಿತ್ತು.
1991ರಲ್ಲಿಇಲ್ಲಿನ ದಲಿತ ಯುವಕರು ಕೃಷಿ ಕಾರ್ಮಿಕರಾಗಿ ತೆನಾಲಿಗೆ ತೆರಳುತ್ತಾರೆ. ಹಾಗೆ ಹೋದ ಹೆಚ್ಚಿನ ಯುವಕರು ಅಲ್ಲಿನ ಅಂಬೇಡ್ಕರ್ ಕಾಲೇಜಿನಲ್ಲಿ ಪದವೀಧರರಾಗುತ್ತಾರೆ. ಅಲ್ಲಿ ಅಂಬೇಡ್ಕರ್, ಫುಲೆ ಮತ್ತು ಪೆರಿಯಾರ್ ಅವರನ್ನು ಓದಿದ ವಿದ್ಯಾವಂತ ಯುವಕರು ಚುಂಡೂರಿಗೆ ಬಂದು ತಮ್ಮ ಜನರನ್ನು ಸಂಘಟಿಸಲು ಪ್ರಾರಂಭಿಸುತ್ತಾರೆ. ಹಳ್ಳಿಯ ದಲಿತ ಮಕ್ಕಳಿಗೆ ತರಗತಿಗಳನ್ನು ನಡೆಸುತ್ತಾರೆ. ಜೊತೆಗೆ ಅಂಬೇಡ್ಕರ್ ಮತ್ತು ದಲಿತ ಸಂಸ್ಕೃತಿಯ ಕುರಿತಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಸಂಘಟಿತರಾಗುತ್ತಾರೆ. ಇದು ಪ್ರಬಲ ಜಾತಿಯವರನ್ನು ಕೆರಳಿಸುತ್ತದೆ. ಈ ಕಾರಣಕ್ಕೆ ದಲಿತ ಮತ್ತು ರೆಡ್ಡಿ ಯುವಕರ ನಡುವೆ ಘರ್ಷಣೆಗಳು ನಡೆಯುತ್ತಲೇ ಇರುತ್ತವೆ. ರೆಡ್ಡಿಗಳು ಸೇಡಿಗಾಗಿ ತಹತಹಿಸಿದ್ದರು. ಅವರ ಪ್ರತೀಕಾರ ರೂಪ ಪಡೆದದ್ದು ಚುಂಡೂರು ದಲಿತ ನರಮೇಧ.
ಚುಂಡೂರು ಹತ್ಯಾಕಾಂಡಕ್ಕೆ ದಾರಿ ಮಾಡಿದ ನೆವವಾದರೂ ಏನು ಗೊತ್ತೇ?
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಕೂಕಿನ ಮರಕುಂಬಿಯ ಘಟನೆಗೆ ಯಾವುದು ನೆವವಾಗಿ ಒದಗಿತ್ತೋ, ಅದೇ ಚುಂಡೂರಿನಲ್ಲೂ ಒದಗಿತ್ತು. ಚಿತ್ರಮಂದಿರದಲ್ಲಿ ಸಿನಿಮಾ ನೋಡುತ್ತಿದ್ದಾಗ ಮುಂದಿನ ಸೀಟಿನಲ್ಲಿದ್ದ ರೆಡ್ಡಿ ಮಹಿಳೆಯೊಬ್ಬರಿಗೆ ಆಕಸ್ಮಿಕವಾಗಿ ದಲಿತ ಯುವಕ ರವಿಯ ಕಾಲು ತಾಗಿತ್ತು. ಕಾಲಮೇಲೆ ಕಾಲು ಹಾಕಿ ಕುಳಿತುಕೊಳ್ಳುವಾಗ ಈ ಅಚಾತುರ್ಯ ನಡೆದಿತ್ತು. ಆತ ತಕ್ಷಣ ಕ್ಷಮೆ ಕೇಳಿದ್ದ. ಪ್ರತೀಕಾರವನ್ನು ನಿರೀಕ್ಷಿಸಿದ ದಲಿತ ಯುವಕನ ಕುಟುಂಬ ಆತನನ್ನು ತಲೆ ಮರೆಸಿಕೊಳ್ಳುವಂತೆ ಬೇರೆ ಊರಿಗೆ ಸಾಗಹಾಕುತ್ತದೆ. ರೆಡ್ಡಿಗಳು ಆತನ ತಂದೆ ತಾಯಿಯನ್ನು ಕಂಬಕ್ಕೆ ಕಟ್ಟಿ ಥಳಿಸಿ ಚಿತ್ರಹಿಂಸೆಗೆ ಗುರಿ ಮಾಡುತ್ತಾರೆ. ಮಗ ಎಲ್ಲಿದ್ದಾನೆ ಮತ್ತು ಯಾವಾಗ ವಾಪಸು ಬರುತ್ತಾನೆಂದು ಬಾಯಿ ಬಿಡಿಸುತ್ತಾರೆ. ಆತ ವಾಪಸ್ಸು ಬರುತ್ತಿದ್ದಂತೆ ಹಿಡಿದು ಥಳಿಸಿ, ಬಲವಂತವಾಗಿ ಮದ್ಯ ಕುಡಿಸಿ ಪೊಲೀಸ್ ಠಾಣೆಗೆ ಕರೆದೊಯ್ದು, “ಕುಡಿದು ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದ” ಎಂದು ದೂರು ನೀಡಿದ್ದರು. ಇದೇ ರೀತಿ ರಾಜಬಾಬು ಎಂಬ ದಲಿತ ಯುವಕನ ಮೇಲೂ ರೆಡ್ಡಿ ಹೆಣ್ಣುಮಕ್ಕಳಿಗೆ ಕಿರುಕುಳ ಕೊಟ್ಟಿದ್ದನೆಂದು ಆರೋಪಿಸಿ ಚಾಕುವಿನಿಂದ ಇರಿದಿದ್ದರು.

ಊರಿನ ದಲಿತರು ಹಲ್ಲೆಗೊಳಗಾದ ಯುವಕರನ್ನು ಬೆಂಬಲಿಸಿದ್ದರು. ಈ ಕಾರಣಕ್ಕೆ ಇಡೀ ದಲಿತ ಸಮುದಾಯಕ್ಕೆ ರೆಡ್ಡಿಗಳು ಬಹಿಷ್ಕಾರ ಹಾಕಿದ್ದರು. ತಿಂಗಳುಗಟ್ಟಲೆ ಕೂಲಿ ಕೆಲಸವಿಲ್ಲದೇ ದಲಿತ ಕುಟುಂಬಗಳು ಕಂಗಾಲಾಗುತ್ತವೆ. ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ 1989ರ ಮೂಲಕ ಕಾನೂನು ನ್ಯಾಯ ಪಡೆಯಲು ದಲಿತರು ಸಾಮೂಹಿಕವಾಗಿ ಹೋರಾಟಕ್ಕೆ ಧುಮುಕುತ್ತಾರೆ. ಕೂಲಿಗಾಗಿ ಎಷ್ಟೇ ಕಷ್ಟವಾದರೂ ತೆನಾಲಿ ಮತ್ತು ಓಂಗೋಲ್‌ಗೆ ಹೋಗಲು ಶುರು ಮಾಡುತ್ತಾರೆ. ಅಷ್ಟೇ ಅಲ್ಲ ಮಕ್ಕಳಿಗೆ ಶಿಕ್ಷಣ ಕೊಡಿಸುವುದನ್ನು ಮುಂದುವರಿಸುತ್ತಾರೆ. ಇದು ರೆಡ್ಡಿಗಳನ್ನು ಇನ್ನಷ್ಟು ಕೆರಳಿಸುತ್ತದೆ. ದಲಿತರು ಅಸ್ಪೃಶ್ಯರಾಗಿ ತಮ್ಮ ಹೊಲದ ಕೂಲಿಗಳಾಗಿ ಜೀತದಾಳುಗಳಂತೆ ಬಿದ್ದಿರಬೇಕೆಂದು ಬಯಸುತ್ತಾರೆ. ದಲಿತರು ಶಿಕ್ಷಣ ಪಡೆದು ಸಾಮಾಜಿಕವಾಗಿ ಮೇಲೇರಿ ತಮ್ಮ ಹಿಡಿತದಿಂದ ಜಾರಿ ಪಾರಾಗುತ್ತಾರೆ, ನಮ್ಮ ಅಡಿಯಾಳುಗಳಾಗಿ ಉಳಿಯಲ್ಲ ಎಂಬ ಅಸೂಯೆಯಿಂದ ಯುವಕರನ್ನು ಮುಗಿಸಲು ಷಡ್ಯಂತ್ರ ರೂಪಿಸುತ್ತಾರೆ.
ಇದನ್ನೂ ಓದಿ ಈ ದಿನ ವಿಶೇಷ | ಮರಕುಂಬಿ ಬೆಳಕಿನಲ್ಲಿ ಕಂಬಾಲಪಲ್ಲಿಯ ಕತ್ತಲು
ಅಂದಿನ ಆಂಧ್ರದ ಮುಖ್ಯಮಂತ್ರಿ ನೇದರುಮಲ್ಲಿ ಜನಾರ್ದನ ರೆಡ್ಡಿಯವರನ್ನು ಭೇಟಿ ಮಾಡಿ ಹತ್ಯಾಕಾಂಡಕ್ಕೆ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ದಲಿತರನ್ನು ರಕ್ಷಿಸಬೇಕಾದ ಪೊಲೀಸರು ರೆಡ್ಡಿಗಳ ಕುತಂತ್ರದೊಂದಿಗೆ ಕೈ ಜೋಡಿಸುತ್ತಾರೆ. ಪೊಲೀಸರನ್ನು ದಲಿತರ ಮನೆಗಳಿಗೆ ಕಳಿಸಿ, ದಲಿತ ಯುವಕರು ತಲೆ ತಪ್ಪಿಸಿಕೊಳ್ಳಲು ಊರಾಚೆ ಬರುವಂತೆ ಬಲೆ ಬೀಸುತ್ತಾರೆ. ಮಾಡಿದ್ದರು. ಪೂರ್ವ ಯೋಜನೆಯಂತೆ 6 ಆಗಸ್ಟ್ 1991 ರಂದು ಬೆಳಿಗ್ಗೆ 11.00 ಗಂಟೆಯ ಸುಮಾರಿಗೆ, ಪೊಲೀಸ್ ಪಡೆಗಳು ಮಾಲಾ ದಲಿತ ಕುಟುಂಬಗಳ ಮನೆಗಳಿಗೆ ಇದ್ದಕ್ಕಿದ್ದಂತೆ ಪ್ರವೇಶಿಸುತ್ತವೆ. ಯುವಕರು ಮಹಿಳೆಯರ ಒತ್ತಾಯದ ಮೇರೆಗೆ ಹೊಲಗಳಿಗೆ ಓಡಿಹೋಗುತ್ತಾರೆ. ಅಲ್ಲಿ ಶಸ್ತ್ರಸಜ್ಜಿತ ರೆಡ್ಡಿ ಹಂತಕರು ಕಾದು ಕುಳಿತಿರುತ್ತಾರೆ. ತಲೆ ಮರೆಸಿಕೊಳ್ಳಲು ಹೊಲ ಗದ್ದೆಗಳಿಗೆ ನುಗ್ಗುವ ದಲಿತ ಯುವಕರನ್ನು ರೆಡ್ಡಿ ಹಂತಕರು ಕಡಿದು ಕೊಚ್ಚಿ ಕೊಲ್ಲುತ್ತಾರೆ. ಕೆಲವು ಶವಗಳನ್ನು ಹತ್ತಿರದ ಹೊಲಗಳಿಗೆ ಎಸೆದರೆ ಮತ್ತೆ ಕೆಲವನ್ನು ಕೃಷ್ಣಾ ನದಿಗೆ ಎಸೆಯಲಾಗಿತ್ತು. ಈ ಹತ್ಯಾಕಾಂಡವನ್ನು ತಡೆಯಲು ಸ್ಥಳೀಯ ಪೊಲೀಸರು ಯಾವುದೇ ಪ್ರಯತ್ನ ಮಾಡಿಲ್ಲ ಎಂದು ವರದಿಯಾಗಿತ್ತು. ದಲಿತ ಮಹಿಳೆಯೊಬ್ಬರು ಗ್ರಾಮದಿಂದ ತಪ್ಪಿಸಿಕೊಂಡು 17 ಮೈಲುಗಳಷ್ಟು ದೂರ ನಡೆದು ಗುಂಟೂರಿನಲ್ಲಿ ಜಿಲ್ಲಾಧಿಕಾರಿಗಳಿಗೆ ತಿಳಿಸುವವರೆಗೂ 24 ಗಂಟೆಗಳ ಕಾಲ ಈ ದಾಳಿ ಹೊರಜಗತ್ತಿಗೆ ತಿಳಿಯುವುದೇ ಇಲ್ಲ. ಹತ್ಯಾಕಾಂಡದ ನಂತರ, ಉಳಿದ ದಲಿತರು ತೆನಾಲಿಗೆ ಪರಾರಿಯಾಗಿ ಅಲ್ಲಿ ಸಾಲ್ವೇಶನ್ ಆರ್ಮಿ ಚರ್ಚ್ ನ ಆಶ್ರಯ ಪಡೆಯುತ್ತಾರೆ.
ಇದನ್ನೂ ಓದಿ ಅಯೋಧ್ಯೆ ವಿವಾದ | ಮೂಲದಾವೆಯಲ್ಲಿ ದೇವರೇ ಕಕ್ಷಿದಾರ; ದೇವರನ್ನೇ ಪರಿಹಾರ ಕೇಳಿದ ಸಿಜೆಐ
ಘಟನೆಗೆ ಸಂಬಂಧಿಸಿದಂತೆ ಒಟ್ಟು 12 ಪ್ರತ್ಯೇಕ ಪ್ರಕರಣ ದಾಖಲಿಸಿ 212 ಮಂದಿಯ ಮೇಲೆ ಆರೋಪ ಹೊರಿಸಲಾಗಿತ್ತು. 33 ಪ್ರತಿವಾದಿಗಳು ವಿಚಾರಣೆಯ ಹಂತದಲ್ಲೇ ಮರಣಹೊಂದಿದರು. ವಿಶೇಷ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದರೂ ಆಂಧ್ರ ಹೈಕೋರ್ಟ್ ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ಪ್ರಕರಣವನ್ನು ವಜಾ ಮಾಡುತ್ತದೆ. ಸುಪ್ರೀಂ ಕೋರ್ಟ್ ಮೇಲ್ಮನವಿಯ ವಿಚಾರಣೆ ಇನ್ನೂ ಬಾಕಿ ಇದೆ. ಸಂತ್ರಸ್ತ ಕುಟುಂಬಗಳು ನ್ಯಾಯಕ್ಕಾಗಿ 33 ವರ್ಷಗಳಿಂದ ಕಾಯುತ್ತಿವೆ. ಇಷ್ಟು ದೊಡ್ಡ ಹತ್ಯಾಕಾಂಡ ಪ್ರಕರಣದಲ್ಲಿ ನ್ಯಾಯ ಮರೀಚಿಕೆ ಆಗುತ್ತದೆ! ನ್ಯಾಯ ದೇವತೆಯ ಕಣ್ಣಿಗೆ ಕಟ್ಟಿದ್ದ ಪಟ್ಟಿ ಈಗ ತೆರವಾಗಿದೆ. ಆದರೆ ಚುಂಡೂರು ಮೇಲ್ಮನವಿ ವಿಚಾರಣೆಯ ಸುಳಿವಿಲ್ಲ. ಕಣ್ಣು ತೆರೆದಿರುವ ನ್ಯಾಯ ದೇವತೆ ದೀನ ದಲಿತರ ಕುಟುಂಬಗಳ ಕಣ್ಣೀರನ್ನು ಎಂದಿಗೆ ಒರೆಸುತ್ತಾಳೋ ಗೊತ್ತಿಲ್ಲ. ಕರ್ನಾಟಕದ ಮರಕುಂಬಿ ತೀರ್ಪು, ಸುಪ್ರೀಂ ಕೋರ್ಟಿನ ಕಣ್ಣು ತೆರೆಸುತ್ತಾ ಕಾದು ನೋಡಬೇಕಿದೆ.

ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.