ಸದ್ಯ ತೆಂಗು ಬೆಳೆಗಾರರಿಗೆ ಸುವರ್ಣ ಕಾಲ. ರಾಜ್ಯದಲ್ಲಿ ತೆಂಗು ಮತ್ತು ಕೊಬ್ಬರಿಯ ಬೆಲೆ ದಿನೇ ದಿನೆ ಏರಿಕೆಯಾಗುತ್ತಲೇ ದೆ. ಕೊಬ್ಬರಿ ಬೆಲೆಯಂತೂ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಪ್ರಸ್ತುತ ಕ್ವಿಂಟಲ್ ಕೊಬ್ಬರಿ ಧಾರಣೆ ಬರೋಬ್ಬರಿ ₹30,000 ದಾಟಿ ಮುನ್ನುಗ್ಗುತ್ತಿದೆ. ಇದು ಕೊಬ್ಬರಿ ಧಾರಣೆ ಇತಿಹಾಸದಲ್ಲೇ ಮೊದಲು. ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುತ್ತಲೇ ಇದೆ ಎನ್ನುವುದು ಇನ್ನೊಂದು ವಿಶೇಷ.
ಏಷ್ಯಾದಲ್ಲೇ ಅತಿದೊಡ್ಡ ಮಾರುಕಟ್ಟೆ ಎಂದು ಹೆಸರಾಗಿರುವ ತುಮಕೂರಿನ ʼತಿಪಟೂರು ಎಪಿಎಂಸಿ ಕೊಬ್ಬರಿ ಮಾರುಕಟ್ಟೆʼಯಲ್ಲಿ ಕಳೆದ ಒಂದು ತಿಂಗಳಿಂದ ಕೊಬ್ಬರಿ ಬೆಲೆ ಏರುತ್ತಲೇ ಸಾಗಿದೆ. ಜೂನ್ 23ರ ಸೋಮವಾರದಂದು ನಡೆದ ಕೊಬ್ಬರಿ ಹರಾಜಿನಲ್ಲಿ ಕ್ವಿಂಟಲ್ ಕೊಬ್ಬರಿಗೆ ಐತಿಹಾಸಿಕ ದಾಖಲೆಯ ₹26,167 ತಲುಪಿ ಹೊಸ ಸಾರ್ವಕಾಲಿಕ ದಾಖಲೆ ಬರೆದಿತ್ತು. ಗುರುವಾರದ ಹರಾಜಿನಲ್ಲಿ ಕ್ವಿಂಟಲ್ ಕೊಬ್ಬರಿ ₹29,118 ದಾಖಲೆ ಬೆಲೆಗೆ ಮಾರಾಟವಾಗಿದೆ. ಈ ಪಾಟಿ ಬೆಲೆ ಏರಿಕೆ ಕಂಡಿರುವುದು ಇದೇ ಮೊದಲು ಎನ್ನಲಾಗುತ್ತಿದೆ. ಕೇವಲ ಮೂರು ದಿನಗಳಲ್ಲಿ ಮೂರು ಸಾವಿರ ರೂ ಏರಿಕೆ ಕಂಡಿರುವುದು ತೆಂಗು ಬೆಳೆಗಾರರಲ್ಲಿ ಸಂತಸದ ಜತೆ ಅಚ್ಚರಿಯನ್ನೂ ಮೂಡಿಸಿದೆ.
ಸೋಮವಾರ ಮತ್ತು ಗುರುವಾರ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಕೊಬ್ಬರಿ ಹರಾಜು ನಡೆಯುವುದು ವಾಡಿಕೆ. ಕಳೆದ ಎರಡು ತಿಂಗಳಿನಿಂದ ಪ್ರತಿ ಹರಾಜಿನಲ್ಲಿಯೂ 200 ರಿಂದ 500 ರೂ ಏರಿಕೆ ಕಾಣುತ್ತಿದ್ದ ಕೊಬ್ಬರಿ ಬೆಲೆ ಕಳೆದ ಸೋಮವಾರ ಒಂದೇ ದಿನ ಎರಡು ಸಾವಿರ ರೂ ಏರಿಕೆ ಕಂಡು 26 ಸಾವಿರ ದಾಟಿತ್ತು. ಈಗ ಗುರುವಾರ (ಜೂ.26) ನಡೆದ ಹರಾಜಿನಲ್ಲಿ ಒಂದೇ ದಿನ ಮೂರು ಸಾವಿರ ಏರಿಕೆ ಕಂಡು ₹29,118 ಮುಟ್ಟಿದೆ. ಈ ಮೂಲಕ ಕೇವಲ ಎರಡು ತಿಂಗಳಿನಲ್ಲಿ ಕ್ವಿಂಟಲ್ ಕೊಬ್ಬರಿ ಬೆಲೆ ಬರೋಬ್ಬರಿ 11 ಸಾವಿರ ರೂಗಳಷ್ಟು ಏರಿಕೆ ಕಂಡು ಇತಿಹಾಸದಲ್ಲೇ ಕಂಡಿರದಷ್ಟು ದಾಖಲೆ ಬರೆದಿದೆ.

ಕೊಬ್ಬರಿ ಬೆಲೆ ಏರಿಕೆಗೆ ಕಾರಣಗಳೇನು?
ಕಳೆದ ವರ್ಷಗಳಲ್ಲಿ ಕ್ವಿಂಟಲ್ ಕೊಬ್ಬರಿ ಬೆಲೆ 9-10 ಸಾವಿರದ ಆಸುಪಾಸಿತ್ತು. ಕೊಬ್ಬರಿ ಬೆಲೆ ಕುಸಿತದಿಂದ ಕಂಗಾಲಾಗಿದ್ದ ತೆಂಗು ಬೆಳೆಗಾರರು ಬೆಂಬಲ ಬೆಲೆಗಾಗಿ ಬೃಹತ್ ಹೋರಾಟವನ್ನೇ ಮಾಡಿದರು. ರೈತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಕೊನೆಗೆ ಕ್ವಿಂಟಲ್‌ಗೆ ₹12 ಸಾವಿರ ಬೆಂಬಲ ಬೆಲೆ ನೀಡುವುದಾಗಿ ಘೋಷಿಸಿತು. ಇತ್ತ ರಾಜ್ಯ ಸರ್ಕಾರ ₹1500 ನೀಡಲು ಮುಂದಾಯಿತು. ಅಂತಿಮವಾಗಿ ರೈತರಿಗೆ ₹13500 ಬೆಂಬಲ ಬೆಲೆ ಸಿಗುತ್ತಿದೆ. ಈ ವರ್ಷದಿಂದ ಎಪಿಎಂಸಿ ನಿಯಮಗಳಲ್ಲಿ ಬಹಳಷ್ಟು ಬದಲಾವಣೆ ತರಲಾಗಿದೆ. ಮಾರುಕಟ್ಟೆಯನ್ನು ನಿಯಂತ್ರಿಸುತ್ತಿದ್ದ ಕೆಲವು ಕಾಳಸಂತೆಯ ನಿಸ್ಸೀಮರಿಂದ ತಪ್ಪಿಸಿ, ರೈತ ಸ್ನೇಹಿ ವಾತಾವರಣ ನಿರ್ಮಿಸಿದರ ಫಲವಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಉತ್ತರ ಭಾರತದಿಂದ ಕೊಬ್ಬರಿ ಬೇಡಿಕೆ ಹೆಚ್ಚುತ್ತಿರುವುದು ಈ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ತಮಿಳುನಾಡು ಮತ್ತು ಕೇರಳಕ್ಕೆ ಇಲ್ಲಿನ ಕೊಬ್ಬರಿ ಹೆಚ್ಚು ಹೋಗುತ್ತಿದ್ದು, ಅಲ್ಲಿನ ಕೊಬ್ಬರಿ ಇಳುವರಿ ಕಡಿಮೆಯಾಗಿರುವುದು ಇಷ್ಟು ಬೆಲೆ ಏರಲು ಕಾರಣವಾಗಿದೆ. ಅಲ್ಲದೆ ಮಾರುಕಟ್ಟೆಗೆ ಕೊಬ್ಬರಿ ಆವಕ ಪ್ರಮಾಣ ಕಡಿಮೆಯಾಗಿರುವುದು, ಮಾರುಕಟ್ಟೆಯಲ್ಲಿ ಯಥೇಚ್ಛವಾಗಿ ನಡೆಯುತ್ತಿದ್ದ ಸೆಕೆಂಡ್ಸ್ ದಂಧೆಗೆ ಕಡಿವಾಣ ಹಾಕಿದ್ದೂ ಇಷ್ಟು ಬೆಲೆ ಏರಿಕೆಗೆ ಕಾರಣವಾಗಿದೆ.
“ಎಪಿಎಂಸಿ ಜಾರಿಗೊಳಿಸಿದ ನೂತನ ಕ್ರಮಗಳಿಂದ ಕೊಬ್ಬರಿ ಬೆಲೆಯನ್ನು ವ್ಯಾಪಾರಸ್ಥರು ನಿಗದಿಪಡಿಸುವುದು ತಪ್ಪಿತು. ತನ್ನ ಕೊಬ್ಬರಿಗೆ ರೈತನೇ ಬೆಲೆ ನಿಗದಿ ಮಾಡುವ ಕಾಲ ಬಂದಿದೆ. ಎಪಿಎಂಸಿಯಲ್ಲಿ ಅಡ್ಜೆಸ್ಟ್‌ಮೆಂಟ್ ಟೆಂಡರ್ ನಿಂತಿದೆ. ಟೆಂಡರ್ ಬೆಲೆಗೆ ಕೊಬ್ಬರಿ ಕೊಡಬೇಕೋ ಬಿಡಬೇಕೋ ಅನ್ನುವುದನ್ನೂ ರೈತನೇ ತೀರ್ಮಾನ ಮಾಡುತ್ತಾನೆ. ತೆಂಗು ಇಳುವರಿ ಈ ವರ್ಷ ತುಂಬಾ ಕಡಿಮೆಯಾಗಿಲ್ಲ. ಆದರೂ, ಮುಂದಿನ ವರ್ಷ ಇಳುವರಿ ಕುಂಠಿತಗೊಳ್ಳಬಹುದು. ಮಾರುಕಟ್ಟೆಯನ್ನು ಇದೇ ರೀತಿ ಬಿಗಿಯಾಗಿ ನಿರ್ವಹಿಸಿದರೆ ಇನ್ನೂ ಎರಡು ವರ್ಷ ಬೆಲೆ ಕಡಿಮೆಯಾಗುವುದಿಲ್ಲ. ಇದರಿಂದ ರೈತರಿಗೆ ಬಹಳ ಅನುಕೂಲವಾಗುತ್ತದೆ” ಎಂದು ತಿಪಟೂರು ಎಪಿಎಂಸಿ ಕಾರ್ಯದರ್ಶಿ ನ್ಯಾಮಗೌಡ ಹೇಳಿರುವುದಾಗಿ ವರದಿಯಾಗಿದೆ.
ಕೊಬ್ಬರಿ ಬೆಲೆ ಏರಿಕೆ ಕುರಿತು ಈ ದಿನ ಡಾಟ್ ಕಾಮ್‌ನೊಂದಿಗೆ ಮಾತನಾಡಿದ ಸಿ ಎಸ್ ಪುರದ ರೈತ ಪ್ರಕಾಶ್ ಸಿ ಕೆ, “ಕಳೆದ ಕೆಲ ವರ್ಷಗಳಲ್ಲಿ ಅದರಲ್ಲೂ ಕೊರೋನಾ ಹೆಚ್ಚಾಗಿದ್ದ ವರ್ಷಗಳಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯಲಿಲ್ಲ. ದೇವಸ್ಥಾನ, ಹೋಟೆಲ್ ಉದ್ಯಮ ಎಲ್ಲವೂ ಸ್ಥಗಿತಗೊಂಡಿತ್ತು. ಹಾಗಾಗಿ ಕಾಯಿ, ಕೊಬ್ಬರಿಗೆ ಬೆಲೆ ತೀರಾ ಕಡಿಮೆಯಾಗಿತ್ತು. ಕಳೆದ ವರ್ಷವೂ ಇಳುವರಿ ಹೆಚ್ಚೇನೋ ಆಗಿತ್ತು. ಆದರೆ, ಉತ್ತಮ ಬೆಲೆ ಸಿಕ್ಕಿರಲಿಲ್ಲ. ಇನ್ನು ಈ ವರ್ಷ ಇಳುವರಿಯೇ ಕಡಿಮೆಯಾಗಿದೆ. ಹತ್ತಿರತ್ತಿರ ಶೇ.60ರಷ್ಟು ಇಳುವರಿ ಇಲ್ಲ. ಇರುವ 40% ಫಸಲನ್ನೇ ಹಸಿಕಾಯಿ, ಕೊಬ್ಬರಿ, ಕೊಬ್ಬರಿ ಉತ್ಪನ್ನಗಳಿಗೆ ಕೊಡಬೇಕು. ಬೇಸಿಗೆಯಲ್ಲಿ ಉತ್ತರ ಭಾರತಕ್ಕೆ ಇಲ್ಲಿನ ಎಳನೀರು ಹೆಚ್ಚಾಗಿ ರಫ್ತಾಯಿತು. ಹಾಗಾಗಿ ಕೊಬ್ಬರಿ ಪ್ರಮಾಣವೂ ಕಡಿಮೆಯಾಯಿತು. ಈ ಎಲ್ಲಾ ಕಾರಣಗಳಿಂದ ಈ ವರ್ಷ ಇತಿಹಾಸದಲ್ಲೇ ಕಂಡು ಕೇಳರಿಯದಷ್ಟು ಬೆಲೆ ಬಂದಿದೆ. ಕಷ್ಟ ಪಟ್ಟು ಬೆಳೆದ ಬೆಳೆಗೆ ಇಷ್ಟು ಒಳ್ಳೆಯ ಬೆಲೆ ಸಿಕ್ಕಿರುವುದು ನಿಜಕ್ಕೂ ಖುಷಿಯ ಸಂಗತಿ. ಮುಂದಿನ ಶ್ರಾವಣ ಮಾಸಕ್ಕೆ ಬೆಲೆ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದೆ” ಎಂದು ಸಂತಸ ಹಂಚಿಕೊಂಡರು.
ಇದನ್ನೂ ಓದಿ: ‘ಕಲ್ಪವೃಕ್ಷ’ ತೆಂಗು ‘ರೋಗವೃಕ್ಷ’ವಾಗಿರುವುದೇಕೆ?
ಕೊಬ್ಬರಿ ಬೆಲೆ ಏರಿಕೆಯಿಂದ ಕೊಬ್ಬರಿ ಎಣ್ಣೆಯ ಬೆಲೆಯೂ ಏರುಮುಖವಾಗಿದೆ. ತೆಂಗಿನ ಎಲ್ಲ ಉತ್ಪನ್ನಗಳು ಒಂದಲ್ಲ, ಒಂದು ರೀತಿಯಲ್ಲಿ ಜನಕ್ಕೆ ಉಪಯೋಗವೇ ಆಗಿವೆ. ತೆಂಗಿನ ಖಾಲಿ ಚಿಪ್ಪಿಗೂ ದಾಖಲೆಯ ಬೆಲೆ ಇದೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕೆ.ಬಿ.ಕ್ರಾಸ್ ನಲ್ಲಿ ತೆಂಗಿನ ಖಾಲಿ ಚಿಪ್ಪು ₹34 ಸಾವಿರ ರೂಪಾಯಿಗೆ ಮಾರಾಟವಾಗುತ್ತಿದೆ. ಕೊಬ್ಬರಿ ಧಾರಣೆಯ ನಾಗಾಲೋಟ ಮುಂದಿನ ದಿನಗಳಲ್ಲಿ ಮತ್ತೂ ಮುಂದುವರೆಯುವ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗುತ್ತಿದೆ.
ಈ ನಾಗಾಲೋಟದ ಕೊಬ್ಬರಿ ಬೆಲೆ ಏರಿಕೆ ರಾಜ್ಯದ ತೆಂಗು ಬೆಳೆಗಾರರ ಜೀವನದಲ್ಲಿ ಸಾಂದರ್ಭಿಕವಾಗಿ “ಸುವರ್ಣಯುಗ”ವನ್ನು ಮೂಡಿಸಿದೆ ಎನ್ನಬಹುದು. ವರ್ಷಗಳ ಸುದೀರ್ಘ ಸಂಕಷ್ಟ, ಬೆಂಬಲ ಬೆಲೆಗಾಗಿ ಹೋರಾಟ ಮತ್ತು ಮಾರುಕಟ್ಟೆಯಲ್ಲಿನ ಅಸಮತೋಲನದ ನಡುವೆ, ಇದೀಗ ತೆಂಗು ಬೆಳೆಗೆ ಬಂದಿರೋ ಬಂಗಾರದ ಬೆಲೆ, ಒಂದು ಹದವಾದ ಆಶಾಕಿರಣವಾಗಿದೆ. ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆದ ಪರಿಷ್ಕೃತ ವ್ಯವಸ್ಥೆಗಳು ರೈತರಿಗೆ ಒಳ್ಳೆಯದನ್ನೇ ಮಾಡಿವೆ.
ಈ ಬದಲಾವಣೆಗಳು ಕೇವಲ ಬೆಲೆ ಮಾತ್ರವಲ್ಲ, ರೈತರ ಆತ್ಮವಿಶ್ವಾಸ, ಮಾರಾಟದ ಹಕ್ಕು ಮತ್ತು ನಿತ್ಯ ಉಪಯೋಗದ ಕೊಬ್ಬರಿ ಉತ್ಪನ್ನಗಳ ಮೌಲ್ಯವರ್ಧನೆಯತ್ತ ಮುಂದೆ ದಾರಿ ತೋರಿಸಬಲ್ಲವು. ಆದರೆ, ಇಂತಹ ಸ್ಥಿತಿಗತಿಗಳು ನಿರಂತರವಾಗಿರಲು, ಉತ್ಪಾದನೆ ಹಾಗೂ ಬೇಡಿಕೆಯ ನಡುವಣ ಸಮತೋಲನ, ಮಾರುಕಟ್ಟೆ ಮೇಲ್ವಿಚಾರಣೆಯ ಶಿಸ್ತು ಹಾಗೂ ರೈತರು ಮತ್ತು ಗ್ರಾಹಕರ ನಡುವಣ ನಂಬಿಕೆಯೂ ಸ್ಥಿರವಾಗಿರುವುದು ಅವಶ್ಯಕ.
ಸರ್ಕಾರ, ಎಪಿಎಂಸಿ ಮಂಡಳಿ, ರೈತ ಸಂಘಟನೆಗಳು ಹಾಗೂ ತಜ್ಞರು ಕಾಪಾಡಬೇಕಾದ ಜವಾಬ್ದಾರಿ, ಈ ಪರಿಸ್ಥಿತಿಯನ್ನು ದೀರ್ಘಕಾಲಿಕ ಅನುಕೂಲವನ್ನಾಗಿ ಪರಿವರ್ತಿಸಲು ಯತ್ನಿಸಬೇಕು. ಮುಂದಿನ ದಿನಗಳಲ್ಲಿ ಬೆಲೆ ಏರು ಪೇರಾಗುವ, ಕನಿಷ್ಟ ಮಟ್ಟಕ್ಕೆ ಇಳಿಯುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. ಹೇಗಿರುತ್ತವೆ ಎಂಬುದು ಸಮಗ್ರ ಯೋಜನೆ, ಭದ್ರ ಮಾರುಕಟ್ಟೆ ವ್ಯವಸ್ಥೆ ಮತ್ತು ವೈಜ್ಞಾನಿಕ ಕೃಷಿ ನೀತಿಯ ಮೇಲೆ ನಿಂತಿದೆ.