ಹೆಡ್ಗೆವಾರ್ ಅವರಿಂದ ಹಿಡಿದು ಮೋಹನ್ ಭಾಗವತ್ ವರೆಗೆ ಆರ್ಎಸ್ಎಸ್ ಭಾರೀ ದೂರ ಸಾಗಿದೆ. ಕೋಮುದ್ವೇಷ ಮತ್ತು ಪ್ರತೀಕಾರದೊಂದಿಗೆ ಬೆಳೆದುಬಂದಿದೆ. ಭಾರತವನ್ನು ಹಿಂದು ರಾಷ್ಟ್ರವನ್ನಾಗಿ ಮಾಡುತ್ತೇವೆಂದು ಪ್ರತಿಪಾದಿಸುತ್ತಲೇ ಬಿಜೆಪಿಯನ್ನು ಅಧಿಕಾರದ ಕೇಂದ್ರಕ್ಕೆ ತಂದು ಕೂರಿಸಿದೆ. ಈಗ ಬಿಜೆಪಿ-ಆರ್ಎಸ್ಎಸ್ ನಡುವೆಯೇ ತಿಕ್ಕಾಟ ನಡೆಯುತ್ತಿದೆ...!
ಬಿಜೆಪಿ – ಆರ್ಎಸ್ಎಸ್ಗೆ ಕೋಮುವಾದವೇ ಅಜೆಂಡಾ, ಜೀವಾಳ, ರಾಜಕೀಯ ಅಸ್ತ್ರ. ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಬಿಜೆಪಿ -ಆರ್ಎಸ್ಎಸ್ನ ಎಲ್ಲ ನಾಯಕರೂ ಕೋಮುದ್ವೇಷವನ್ನೇ ಉಸಿರಾಡುತ್ತಾ, ಅದನ್ನೇ ಉಂಡು ಹಂಚುತ್ತಿದ್ದಾರೆ. ರಾಜಕೀಯ ಬೇಳೆ ಬೇಯಿಸಿಕೊಂಡು, ಅಧಿಕಾರದ ಲಾಭ ಪಡೆಯುತ್ತಿದ್ದಾರೆ. ಕೋಮುದ್ವೇಷವನ್ನೇ ಉಗುಳುವ, ಕಾರಿಕೊಳ್ಳುವ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಬಾಯಲ್ಲಿ ಇದ್ದಕ್ಕಿದ್ದಂತೆ ಸೌಹಾರ್ದತೆಯ ಅಣಿಮುತ್ತುಗಳ ಉದುರಿವೆ. ಇವು ಸ್ವತಃ ಬಿಜೆಪಿ-ಆರ್ಎಸ್ಎಸ್ ನಾಯಕರನ್ನೇ ದಿಗ್ಭ್ರಾಂತಿಗೊಳಿಸಿದೆ.
ಕಳೆದ ಸೋಮವಾರ, ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದ ಮಹಾನುಭಾವ ಆಶ್ರಮದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, “ಧರ್ಮದ ಸರಿಯಾದ ಅರ್ಥ ಗೊತ್ತಿಲ್ಲದ ಕಾರಣದಿಂದಾಗಿಯೇ ಇಂದು ವಿಶ್ವದಲ್ಲಿ ಧರ್ಮದ ಹೆಸರಲ್ಲಿ ಕಿರುಕುಳ ಮತ್ತು ದೌರ್ಜನ್ಯದ ಘಟನೆಗಳು ನಡೆಯುತ್ತಿವೆ. ಧರ್ಮ ಅತ್ಯಂತ ಮಹತ್ವವಾದುದು ಮತ್ತು ಅದನ್ನು ಸರಿಯಾದ ರೀತಿಯಲ್ಲಿ ಹೇಳಿಕೊಡುವ ಅಗತ್ಯವಿದೆ. ಇಲ್ಲದಿದ್ದಲ್ಲಿ ಧರ್ಮದ ಕುರಿತು ಪರಿಪೂರ್ಣವಲ್ಲದ ಜ್ಞಾನವು ನಮ್ಮನ್ನು ಅಧರ್ಮದ ಕಡೆಗೆ ಕೊಂಡೊಯ್ಯುತ್ತದೆ. ಧರ್ಮ ಎಂದೆಂದಿಗೂ ಇದ್ದೇ ಇರುತ್ತದೆ ಮತ್ತು ಎಲ್ಲವೂ ಅದರಂತೆಯೇ ನಡೆಯುತ್ತದೆ. ಧರ್ಮದ ನಡವಳಿಕೆಯೇ ಧರ್ಮವನ್ನು ಕಾಪಾಡುತ್ತದೆ” ಎಂದು ಹೇಳುವ ಮೂಲಕ ಅಬ್ಬರಿಸಿ ಬೊಬ್ಬಿರಿದಿದ್ದಾರೆ.
ಅವರ ಈ ಹೇಳಿಕೆಯ ಹಿಂದೆ ನಾನಾ ಕಾರಣಗಳಿವೆ ಎಂದು ಹೇಳಲಾಗುತ್ತಿದೆ. ಅದರಲ್ಲಿ, ಅವರಿಗೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಮೇಲಿನ ಅಸಮಾಧಾನವೂ ಪ್ರಮುಖ ಕಾರಣವಾಗಿದೆ. ಮೋದಿ-ಶಾ ವಿರುದ್ಧದ ಅಸಹನೆ ವ್ಯಕ್ತಪಡಿಸುವುದಕ್ಕಾಗಿಯೇ ಇಂತಹ ಹೇಳಿಕೆಗಳು ಭಾಗವತ್ ಅವರ ಬಾಯಿಂದ ಹೊರಬರುತ್ತಿವೆ ಎಂಬ ಅಭಿಪ್ರಾಯಗಳಿವೆ.
ಭಾಗವತ್ ಅವರು ತಮ್ಮ ಸಂಘಪರಿವಾರದ ಸುದೀರ್ಘ ಜೀವನದಲ್ಲಿ ಮೊದಲ ಬಾರಿಗೆ ಕೋಮು ಸೌಹಾರ್ದತೆಯ ಅಗತ್ಯಗಳ ಬಗ್ಗೆ ಮಾತನಾಡಿದ್ದಾರೆ. ಎಲ್ಲರನ್ನೂ ಒಳಗೊಳ್ಳಬೇಕೆಂದು ಹೇಳಿದ್ದಾರೆ. ಸಮೃದ್ಧವಾದ ಭಾರತದಲ್ಲಿ ಬದುಕಲು ಬಯಸುವ ಪ್ರತಿಯೊಬ್ಬರ ಕೈಗಳನ್ನು ಹಿಡಿದು ಪ್ರಯಾಣಿಸಬೇಕು ಎಂಬ ಮಾತುಗಳನ್ನಾಡಿದ್ದಾರೆ. ಇದು, ಪ್ರಸ್ತುತ ಕೋಮುದ್ವೇಷವೇ ಹೊತ್ತಿ ಉರಿಯುತ್ತಿರುವ, ಪರಸ್ಪರರನ್ನು ದ್ವೇಷಿಸುತ್ತಿರುವ ಸಂದರ್ಭದಲ್ಲಿ ಭಾಗವತ್ ಸೌಹಾರ್ದತೆಯ ಬಗ್ಗೆ ಮಾತನಾಡಿದ್ದಾರೆ. ಹಾಗೆಂದ ಮಾತ್ರಕ್ಕೆ, ಭಾಗವತ್ ಆಗಲೀ, ಆರ್ಎಸ್ಎಸ್ ಆಗಲೀ, ಬಿಜೆಪಿಯಾಗಲೀ ಇನ್ನು ಮುಂದೆ ಕೋಮು ದ್ವೇಷ, ಕೋಮು ಹಿಂಸೆಯನ್ನು ಪ್ರಚೋದಿಸುವುದಿಲ್ಲ. ಮುಸ್ಲಿಂ, ಕ್ರಿಶ್ಚಿಯನ್ನರ ವಿರುದ್ಧ ದ್ವೇಷದ ಜ್ವಾಲೆ ಉಗುಳುವುದಿಲ್ಲ ಎಂದೇನೂ ಇಲ್ಲ. ಸದ್ಯಕ್ಕೆ ಅವರ ಹೇಳಿಕೆ, ಸಂಘಪರಿವಾರದ ಭಕ್ತರಲ್ಲಿ ಗೊಂದಲವನ್ನಂತೂ ಹುಟ್ಟುಹಾಕಿದೆ.
ನಮ್ಮ ಭಾರತ ಬಹುತ್ವದ ನಾಡು. ಬಹು ಜನಾಂಗ, ಧರ್ಮ, ಸಮುದಾಯಗಳು ನೆಲೆಸಿರುವ ರಾಷ್ಟ್ರ. ಬಹುತೇಕ ಜಗತ್ತಿನ ಎಲ್ಲ ಧಾರ್ಮಿಕ ಸಮುದಾಯಗಳೂ ಭಾರತದಲ್ಲಿ ನೆಲೆಸಿವೆ. ಆದರೆ, ಆ ಎಲ್ಲ ಸಮುದಾಯಗಳ ಮೇಲೆ ಆರ್ಎಸ್ಎಸ್ – ಬಿಜೆಪಿಯ ಕೋಮು ರಾಜಕಾರಣದ ಕಾರಣದಿಂದಾಗಿ ಹಿಂದುತ್ವ ದ್ವೇಷದ ಸವಾರಿ ಮಾಡುತ್ತಿದೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿ ತೀರ್ಪು ನೀಡಿದ ಬಳಿಕ, ಅಯೋಧ್ಯೆಯಲ್ಲಿ ರಾಮಮಂದಿರ ತಲೆ ಎತ್ತಿದ ನಂತರ, ಕಾಶಿ, ಮಥುರಾ, ಸಂಭಲ್, ಶ್ರೀರಂಗಪಟ್ಟಣ ಸೇರಿದಂತೆ ದೇಶದ ಪ್ರತಿ ಮಸೀದಿಯಲ್ಲೂ ದೇವರ ವಿಗ್ರಹಗಳು, ದೇವಾಲಯಗಳನ್ನು ಹುಡುಕುವ, ಮಸೀದಿಗಳನ್ನು ವಿವಾದದ ಸ್ಥಳಗಳನ್ನಾಗಿಸುವ ಕುತಂತ್ರ, ಹುನ್ನಾರಗಳು ನಡೆಯುತ್ತಿವೆ. ಇಂತಹ ಸಮಯದಲ್ಲಿಯೇ ಭಾಗವತ್ ಅವರು ‘ಪ್ರತಿ ಮಸೀದಿಯಲ್ಲೂ ಶಿವಲಿಂಗವನ್ನು ಹುಡುಕುವ ಅಗತ್ಯವಿಲ್ಲ’ ಎಂದು ಪ್ರತಿಪಾದಿಸಿದ್ದಾರೆ. ಸಲಹೆ ನೀಡಿದ್ದಾರೆ. ಅವರ ಹೇಳಿಕೆ ಮಹತ್ವದ್ದಾಗಿದೆ.
ಅಂದಹಾಗೆ, ಜಾತ್ಯತೀತ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯಿಂದ ಅಯೋಧ್ಯೆಯಲ್ಲಿ ಹಿಂದು ದೇವಾಲಯದ ಶಂಕು ಸ್ಥಾಪನೆ ಮಾಡಿಸಿ, ಅದೇ ಪ್ರಧಾನಿಯಿಂದ ಅದೇ ದೇವಾಲಯವನ್ನು ಉದ್ಘಾಟನೆ ಮಾಡಿಸಿದ್ದೂ ಇದೇ ಮೋಹನ್ ಭಾಗವತ್ ಅವರು. ಅಲ್ಲದೆ, ಸಂಸತ್ನ ಹೊಸ ಕಟ್ಟಡವನ್ನು ಸಾವರ್ಕರ್ ಜನ್ಮದಿನ (ಮೇ 28)ರಂದು ಧಾರ್ಮಿಕ ಶ್ಲೋಕಗಳ ಪಠಣದೊಂದಿಗೆ ಉದ್ಘಾಟಿಸುವಂತೆ ಮಾಡಿದ್ದೂ ಕೂಡ ಇದೇ ಭಾಗವತ್ ಅವರು. ಚುನಾವಣಾ ಭಾಷಣಗಳಲ್ಲಿ ಪ್ರಧಾನಿ ಮೋದಿ ಅವರು ಮುಸ್ಲಿಮರ ವಿರುದ್ಧ ಬಹಿರಂಗವಾಗಿ ದ್ವೇಷಪೂರಿತ ಭಾಷಣ ಮಾಡುವಂತೆ ಮಾಡಿದ್ದೂ ಕೂಡ ಇದೇ ಭಾಗವತ್.
ಮೋದಿ ಪ್ರಧಾನಿ ಹುದ್ದೆಯನ್ನೂ, ಭಾಗವತ್ ಆರ್ಎಸ್ಎಸ್ ಚುಕ್ಕಾಣಿಯನ್ನೂ ಹಿಡಿದ ಬಳಿಕ ಮತೀಯವಾದ ದೇಶದ ಉದ್ದಗಲಕ್ಕೂ ಎಲ್ಲ ಕ್ಷೇತ್ರಗಳನ್ನೂ, ಎಲ್ಲ ಸಮುದಾಯಗಳನ್ನೂ ಅವರಿಸಿದೆ. ನ್ಯಾಯಾಂಗ ವ್ಯವಸ್ಥೆಯೊಳಗೆ ನುಸುಳಿಕೊಂಡಿದೆ. ಇತ್ತೀಚೆಗೆ ನಿವೃತ್ತರಾದ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರು ನಾನು ಅಯೋಧ್ಯೆ ತೀರ್ಪು ನೀಡುವ ಮುನ್ನ ದೇವರ ಮುಂದೆ ಗಂಟೆಗಳ ಕಾಲ ಕುಳಿತು ದೇವರ ಆಜ್ಞೆ ಪಡೆದಿದ್ದೆ ಎಂದು ಹೇಳಿಕೊಂಡಿದ್ದಾರೆ. ಇನ್ನು, ಅಲಹಾಬಾದ್ ಹೈಕೋರ್ಟ್ನ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ಆರ್ಎಸ್ಎಸ್ ಸಭೆಯೊಂದರಲ್ಲಿ ಭಾಗಿಯಾಗಿ, ಬಹುಸಂಖ್ಯಾತರ ಇಚ್ಛೆಗೆ ಅನುಗುಣವಾಗಿ ದೇಶದ ಕಾನೂನುಗಳು ನಡೆಯುತ್ತದೆ. ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.
ಪೊಲೀಸರು ಸೇರಿದಂತೆ ಕಾರ್ಯಾಂಗದ ಭಾಗವಾಗಿರುವ ಅಧಿಕಾರಿಗಳು ಬಿಜಿಪಿ- ಆರ್ಎಸ್ಎಸ್ನ ಕೈಗೊಂಬೆಗಳಾಗಿದ್ದಾರೆ. ಕೋಮುದ್ವೇಷ ಕಾರುತ್ತಿದ್ದಾರೆ. ಪೊಲೀಸರ ಸಮ್ಮುಖದಲ್ಲಿಯೇ ಮುಸ್ಲಿಂ-ಕ್ರೈಸ್ತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಮುಸ್ಲಿಮನೆಂಬ ಕಾರಣಕ್ಕೆ ಸಹ ಪ್ರಯಾಣಿಕನನ್ನು ಹತ್ಯೆಗೈಯುವ ಹಂತಕ್ಕೆ ಸಮಾಜ ಬಂದು ನಿಂತಿದೆ. ಕೋಮುದ್ವೇಷದ ವಿಷ ಇಡೀ ಭಾರತವನ್ನು ವ್ಯಾಪಿಸುತ್ತಿದೆ.
ಇಂತಹ ಗಂಭೀರ, ಭೀಕರ ಪರಿಸ್ಥಿತಿಯಲ್ಲಿ ಮೋಹನ್ ಭಾಗವತ್ ಸೌಹಾದರ್ತೆಯ ಮಂತ್ರ ಪಠಿಸುತ್ತಿದ್ದಾರೆ. ಇದಕ್ಕೆ, ಆಡಳಿತಾರೂಢ ಬಿಜೆಪಿ ಸಲಹುತ್ತಾ ಬಂದಿರುವ ಆರ್ಎಸ್ಎಸ್ ನಡುವಿನ ವೈರುದ್ಯ ಕಾರಣವೇ?
ಹೆಡ್ಗೆವಾರ್ ಅವರಿಂದ ಹಿಡಿದು ಮೋಹನ್ ಭಾಗವತ್ ವರೆಗೆ ಆರ್ಎಸ್ಎಸ್ ಭಾರೀ ದೂರ ಸಾಗಿದೆ. ಕೋಮುದ್ವೇಷ ಮತ್ತು ಪ್ರತೀಕಾರದೊಂದಿಗೆ ಬೆಳೆದುಬಂದಿದೆ. ಭಾರತವನ್ನು ಹಿಂದು ರಾಷ್ಟ್ರವನ್ನಾಗಿ ಮಾಡುತ್ತೇವೆಂದು ಪ್ರತಿಪಾದಿಸುತ್ತಲೇ ಬಿಜೆಪಿಯನ್ನು ಅಧಿಕಾರದ ಕೇಂದ್ರಕ್ಕೆ ತಂದು ಕೂರಿಸಿದೆ.
ಭಾಗವತ್ ಅವರು ಮೋದಿಯನ್ನು ಅಡ್ವಾಣಿ ಅವರ ಉತ್ತರಾಧಿಕಾರಿಯಾಗಿ ಮುನ್ನೆಲೆಗೆ ತಂದರು. ಮೋದಿ, ಮೋದಿ ಎನ್ನುತ್ತಲೇ ಏಕವ್ಯಕ್ತಿಯ ಅಡಿಯಲ್ಲಿ ಬಿಜೆಪಿಯನ್ನು ಮುನ್ನಡೆಸಲು ಆರ್ಎಸ್ಎಸ್ ಮುಂದಾಯಿತು. ಆದರೆ, ಅದೇ ಅಡ್ವಾಣಿಯನ್ನು ಕಾಲಕಸದಂತೆ ನೋಡಿದ ಮೋದಿ, ಆರ್ಎಸ್ಎಸ್ ಮಾತನ್ನೂ ಮೀರಿ ನಡೆಯಲಾರಂಭಿಸಿದರು. ಆದರೆ, ಇದನ್ನು ಆರ್ಎಸ್ಎಸ್ಗೆ ಅರಗಿಸಿಕೊಳ್ಳಲಾಗಲಿಲ್ಲ. ಹಾಗಂತ, ತಾನೇ ಸೃಷ್ಟಿಸಿದ ಮೋದಿ ಅಲೆಯಲ್ಲಿ ಮೋದಿಯನ್ನು ಅಧಿಕಾರದಿಂದ ಬದಲಿಸಲೂ ಆರ್ಎಸ್ಎಸ್ಗೆ ಸಾಧ್ಯವಾಗುತ್ತಿಲ್ಲ.
ಈಗ, ಮೋದಿ-ಶಾ ನೇತೃತ್ವದಲ್ಲಿ ಬಿಜೆಪಿ ಆರ್ಎಸ್ಎಸ್ ಅನ್ನು ಬದಿಗೊತ್ತಿ, ತನ್ನದೇ ಅಜೆಂಡಾದೊಂದಿಗೆ ರಾಜಕೀಯ ಮಾಡಲು ಮುಂದಾಗಿದೆ. ಆ ಕಾರಣದಿಂದಲೇ ಬಿಜೆಪಿ ಅಧ್ಯಕ್ಷ ಹುದ್ದೆಯಲ್ಲಿ ಜೆ.ಪಿ ನಡ್ಡಾ ಅವರ ಅವಧಿ ಮುಗಿದು ಸುಮಾರು 1 ವರ್ಷವೇ ಕಳೆದಿದ್ದರೂ, ಈವರೆಗೆ ಹೊಸ ಅಧ್ಯಕ್ಷರನ್ನು ನೇಮಿಸಲಾಗಿಲ್ಲ. ಇದು, ಬಿಜೆಪಿ- ಆರ್ಎಸ್ಎಸ್ ನಡುವಿನ ಕಂದಕವನ್ನು ಎತ್ತಿ ತೋರಿಸುತ್ತಿದೆ.
ತನ್ನ ಹಿಡಿತದಿಂದ ಬಿಡಿಸಿಕೊಂಡು ಹೋಗುತ್ತಿರುವ ಬಿಜೆಪಿಯನ್ನು ಮತ್ತೆ ಹಿಡಿತಕ್ಕೆ ತೆಗೆದುಕೊಳ್ಳಲು ಆರ್ಎಸ್ಎಸ್ ಅರ್ಥಾತ್ ಭಾಗವತ್ ಹರಸಾಹಸ ಪಡುತ್ತಿದ್ದಾರೆ. ಹೀಗಾಗಿಯೇ, ಮಸೀದಿಗಳನ್ನು ಗುರಿಯಾಗಿಸಿಕೊಂಡು ವಿವಾದ ಸೃಷ್ಟಿಸಿ ರಾಜಕೀಯ ಮಾಡಲು ಮುಂದಾಗಿರುವ ಬಿಜೆಪಿಗೆ ಆರ್ಎಸ್ಎಸ್ ಅಡ್ಡಗಾಲು ಹಾಕುತ್ತಿದೆ. ಹಿಂದುತ್ವದ ನಾಯಕನಾಗಲು ಮಸೀದಿಗಳನ್ನು ಗುರಿಯಾಗಿಸಿ, ವಿವಾದ ಸೃಷ್ಟಿಸುವ ಅಗತ್ಯವಿಲ್ಲವೆಂದು ಹೇಳುತ್ತಿದ್ದಾರೆ. ಧರ್ಮದ ಪಾಠ ಮಾಡಬೇಕೆಂದು ಹೇಳುತ್ತ ಸೌಹಾರ್ದತೆಯ ಮಾತನಾಡುತ್ತಿದ್ದಾರೆ.
ಬಹುಶಃ, ಈ ಹೇಳಿಕೆಗಳು ಭಾಗವತ್ ಅವರಿಗೆ ಕೆಲವು ಲಾಭವನ್ನು ನೀಡಬಹುದು. ಸದ್ಯಕ್ಕೆ, ಯಾವುದೇ ಮಸೀದಿಗಳ ಸಮೀಕ್ಷೆಗೆ ಅವಕಾಶ ನೀಡಬಾರದು ಎಂದು ವಿಚಾರಣಾ ನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ. ಇದನ್ನೂ ತಮ್ಮ ಹೇಳಿಕೆಯೊಂದಿಗೆ ತಳುಕು ಹಾಕಿಕೊಂಡು ಭಾಗವತ್ ಬಿಜೆಪಿಯನ್ನು ಆರ್ಎಸ್ಎಸ್ ನಿಯಂತ್ರಣಕ್ಕೆ ತರಲು ಬಳಸಿಕೊಳ್ಳಬಹುದು.
ಈ ಸುದ್ದಿ ಓದಿದ್ದೀರಾ? ಅಮಿತ್ ಶಾ ಅವರೇ, ದೇವರ ಬಗ್ಗೆ ಬಾಬಾ ಸಾಹೇಬರು ಬರೆದದ್ದೇನು ಗೊತ್ತೆ?
ಮುಸ್ಲಿಂ ವಿರೋಧಿ ಧೋರಣೆ, ಕೋಮುದ್ವೇಷವನ್ನು ತನ್ನ ಡಿಎನ್ಎಯಲ್ಲಿಯೇ ಒಳಗೊಂಡಿರುವ ಆರ್ಎಸ್ಎಸ್ ಸೌಹಾರ್ದ ಭಾರತದ ಮಾತನಾಡುವುದು ಹಾಸ್ಯವೆಸುತ್ತದೆ. ಆದಾಗ್ಯೂ, ಅಖಿಲ ಭಾರತೀಯ ಸಂತ ಸಮಿತಿಯು ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಟೀಕಿಸಿದೆ. “ಮಂದಿರ ಮತ್ತು ಮಸೀದಿಗಳ ಕುರಿತಾದ ವಿಚಾರಗಳ ಬಗ್ಗೆ ಧಾರ್ಮಿಕ ಮುಖಂಡರು ನಿರ್ಧರಿಸುತ್ತಾರೆಯೇ ಹೊರತು ಆರ್ಎಸ್ಎಸ್ ಅಲ್ಲ. ರಾಜಕೀಯ ನಾಯಕರಿಗೆ ಅಧಿಕಾರ ಬೇಕು ಎಂದಾಗ ದೇವಸ್ಥಾನಗಳ ಬಗ್ಗೆ ಮಾತನಾಡುತ್ತಿದ್ದರು. ಈಗ ಅವರಿಗೆ ಅಧಿಕಾರವಿದೆ. ಹೀಗಾಗಿ, ದೇವಸ್ಥಾನಗಳ ಕುರಿತು ಸಮೀಕ್ಷೆ ನಡೆಸಬಾರದು ಎಂದು ಸಲಹೆ ನೀಡುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಭಾವಿ ಹಿಂದುತ್ವವಾದಿ ಸಂಘಟನೆಯೊಂದರ ಮುಖ್ಯಸ್ಥರಾಗಿರುವ ಭಾಗವತ್ ಅವರ ಬಾಯಿಯಿಂದ ಕೋಮು ಸೌಹಾರ್ದದ ಕರೆ ಬರುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಈ ಮಾತಿನಿಂದ ಭಾಗವತ್ ಮತ್ತೆ ಯಾವಾಗ ಉಲ್ಟಾ ಹೊಡೆಯುವರೋ ಅದನ್ನೂ ಕಾದು ನೋಡಬೇಕಿದೆ.