ಮತ್ತೆ ಹೆಚ್ಚುತ್ತಿದೆ ಕೋವಿಡ್ ರೂಪಾಂತರ ತಳಿಯ ಸೋಂಕು; ಇರಲಿ ಮುನ್ನೆಚ್ಚರಿಕೆ

Date:

Advertisements

2019ರ ಕೊನೆಯಲ್ಲಿ ಆರಂಭವಾದ ಕೊರೋನಾ ಮಹಾಮಾರಿ ತೀವ್ರ ಅಲೆಗಳನ್ನು ಎಬ್ಬಿಸಿ, ವಿಶ್ವದಾದ್ಯಂತ ಲಕ್ಷಾಂತರ ಜೀವಗಳನ್ನು ಬಲಿತೆಗದುಕೊಂಡದ್ದು ಸುಲಭಕ್ಕೆ ಮರೆಯುವಂಥದ್ದಲ್ಲ. ಭಾರತದಲ್ಲೂ ಸಹ ಈ ಪ್ಯಾಂಡಮಿಕ್‌ ‌ಆರೋಗ್ಯ ವ್ಯವಸ್ಥೆಯಿಂದ ಹಿಡಿದು ಆರ್ಥಿಕ ನಿಲುವುಗಳವರೆಗೆ ಹಲವು ಬದಲಾವಣೆಗಳನ್ನು ತಂದಿತು. ಇದೀಗ 2025ರ ಮಧ್ಯಭಾಗದಲ್ಲಿ ಕೋವಿಡ್-19 ಮತ್ತೆ ಹೊಸ ರೂಪದಲ್ಲಿ ತಲೆ ಎತ್ತುತ್ತಿರುವ ನಡುವೆ, ಆರೋಗ್ಯದ ದೃಷ್ಟಿಯಿಂದ ಸಾರ್ವಜನಿಕ ಬದುಕು ಇನ್ನಷ್ಟು ಜವಾಬ್ದಾರಿಯುತವಾಗಿ ಸಾಗಬೇಕಾದ ಅಗತ್ಯವಿದೆ.

ಹಾಂಗ್ ಕಾಂಗ್, ಸಿಂಗಪೂರ್, ಚೀನಾ ಮತ್ತು ಥೈಲ್ಯಾಂಡ್‌ ‌ಸೇರಿದಂತೆ ಆಗ್ನೇಯ ಏಷ್ಯಾ ದೇಶಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿರುವುದನ್ನು ಆರೋಗ್ಯ ಇಲಾಖೆಗಳ ವರದಿಗಳು ಹೇಳುತ್ತಿವೆ. ಕಳೆದ ಬಾರಿ ಜಾಗತಿಕ ಮಟ್ಟದಲ್ಲಿ ಆವರಿಸಿದ್ದ ಕೊರೋನಾ ಬಹಳ ದೊಡ್ಡ ಸಂಖ್ಯೆಯಲ್ಲಿ ಹಾನಿ ಮಾಡಿತ್ತು. ಆಗ ವಿಶ್ವ ಆರೋಗ್ಯ ಸಂಸ್ಥೆ ಕೊರೋನಾವನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಿತು. ಇದೀಗ 5 ವರ್ಷಗಳ ಬಳಿಕ ವೈರಸ್‌ನ ರೂಪಾಂತರಿಗಳು ಮರುಹುಟ್ಟು ಪಡೆದುಕೊಂಡಿವೆ.

ಸಿಂಗಪೂರ್‌ ಪರಿಸ್ಥಿತಿ ಹೀಗಿದೆ…

Advertisements

ಸಿಂಗಪೂರ್‌ನ ಆರೋಗ್ಯ ಸಚಿವಾಲಯವು ಮೇ ಮೊದಲ ವಾರದಲ್ಲಿ 14,200 ಪ್ರಕರಣಗಳು ಬೆಳಕಿಗೆ ಬಂದಿವೆ ಎಂದಿದೆ. ಪ್ರತಿದಿನ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ 30% ರಷ್ಟು ಹೆಚ್ಚಳವಾಗಿದೆ. ಸುಮಾರು ಒಂದು ವರ್ಷದ ನಂತರ ಸರ್ಕಾರವು ಪ್ರಕರಣಗಳ ಅಪ್‌ಡೇಟ್‌ಗಳನ್ನು ಈ ರೀತಿ ಬಿಡುಗಡೆ ಮಾಡಿರುವುದು ಇದೇ ಮೊದಲು. ಸಿಂಗಪೂರ್ ಸಚಿವಾಲಯದ ಪ್ರಕಾರ, ಪ್ರಕರಣಗಳು ಹೆಚ್ಚಾಗಲು ಜನಸಂಖ್ಯೆಯ ರೋಗನಿರೋಧಕ ಶಕ್ತಿ ಕಡಿಮೆಯಾಗುವುದು ಒಂದು ಕಾರಣವಾಗಿರಬಹುದು, ಆದರೆ ಪ್ರಸ್ತುತ ಹರಡುತ್ತಿರುವ ರೂಪಾಂತರವು ಹೆಚ್ಚು ಗಂಭೀರವಾಗಿಲ್ಲ ಎನ್ನಲಾಗಿದೆ.

ಥೈಲ್ಯಾಂಡ್‌ನಲ್ಲಿ ಪ್ರಕರಣಗಳು ದ್ವಿಗುಣ:

ಮೇ ಮೂರನೇ ವಾರದಲ್ಲಿ 33,030 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದು ಹಿಂದಿನ ವಾರದ (ಮೇ 2ನೇ ವಾರ) 16,000 ಪ್ರಕರಣಗಳಿಗಿಂತ ದ್ವಿಗುಣವಾಗಿದೆ. ಬ್ಯಾಂಕಾಕ್ (6,290), ಚೋನ್ ಬುರಿ (2,573), ರೇಯಾಂಗ್ (1,680) ಮತ್ತು ನೊಂಥಾಬುರಿ (1,482) ಹೆಚ್ಚು ಪರಿಣಾಮ ಬೀರಿದ ಜಿಲ್ಲೆಗಳಾಗಿವೆ. 30 ರಿಂದ 39 ವರ್ಷ ವಯಸ್ಸಿನ ಜನರಲ್ಲಿ ಹೆಚ್ಚಿನ ಪ್ರಕರಣಗಳು ಕಂಡುಬಂದಿವೆ ಎಂದು ಥೈಲ್ಯಾಂಡ್‌ನ ರೋಗ ನಿಯಂತ್ರಣ ಇಲಾಖೆ ವರದಿ ಬಿಡುಗಡೆ ಮಾಡಿದೆ. ಅಪಾಯದಲ್ಲಿರುವ ಜನರು ಬೂಸ್ಟರ್ ಡೋಸ್ ತೆಗೆದುಕೊಳ್ಳುವಂತೆ ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಹಾಂಗ್‌ ಕಾಂಗ್‌ನಲ್ಲಿ ಪರಿಸ್ಥಿತಿ ಹೇಗಿದೆ?

ಹಾಂಗ್‌ ಕಾಂಗ್‌ನಲ್ಲಿ ಕೋವಿಡ್-19‌ ಪ್ರಕರಣಗಳ ಸಂಖ್ಯೆ ಈ ವರ್ಷದಲ್ಲೇ ಅತಿ ಹೆಚ್ಚು ದಾಖಲಾಗಿದ್ದು, ನಾಲ್ಕು ವಾರಗಳ ಹಿಂದೆ ಶೇ. 6.21ರಷ್ಟಿದ್ದ ಪರೀಕ್ಷಾ ಪಾಸಿಟಿವ್‌ ದರ ಮೇ.10ರ ಹೊತ್ತಿಗೆ ಶೇ.13.66ಕ್ಕೆ ಏರಿಕೆಯಾಗಿದೆ. ಅಂದರೆ 972 ರಿಂದ 1042ಕ್ಕೆ ಏರಿದೆ. ಮೇ ಮೊದಲ ವಾರದಲ್ಲಿ 81 ತೀವ್ರತರವಾದ ಪ್ರಕರಣಗಳು ಮತ್ತು 31 ಸಾವುಗಳು ವರದಿಯಾಗಿವೆ.

ಭಾರತದಲ್ಲಿ ಪರಿಸ್ಥಿತಿ ಸ್ಥಿರ; ಆದರೆ, ಎಚ್ಚರಿಕೆ ಅಗತ್ಯ..

ಭಾರತದಲ್ಲಿ ಸದ್ಯ 257 ಸಕ್ರಿಯ ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. “ಹೆಚ್ಚಿನ ಜಾಗರೂಕತೆಯೊಂದಿಗೆ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಹೊಸ ಕೋವಿಡ್‌ ಪ್ರಕರಣಗಳಲ್ಲಿ ತೀವ್ರತರವಾದ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ. ಜೀವ ಹಾನಿಯ ಸಂಭವ ಕಡಿಮೆ” ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಈ ನಡುವೆ ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ಸೋಮವಾರ ಇಬ್ಬರು ಕೋವಿಡ್ ಪಾಸಿಟಿವ್ ರೋಗಿಗಳು ಸಾವನ್ನಪ್ಪಿದ್ದಾರೆ ಎನ್ನಲಾಗಿತ್ತು. ಆದರೆ, ಅವರು ಕೋವಿಡ್‌ನಿಂದಾಗಿ ಸಾವನ್ನಪ್ಪಿಲ್ಲ, ದೀರ್ಘಕಾಲದ ಕಾಯಿಲೆಗಳಿಂದ ಸಾವನ್ನಪ್ಪಿದ್ದಾರೆ. ಒಬ್ಬ ರೋಗಿಗೆ ಬಾಯಿಯ ಕ್ಯಾನ್ಸರ್ ಮತ್ತು ಇನ್ನೊಬ್ಬರಿಗೆ ನೆಫ್ರೋಟಿಕ್ ಸಿಂಡ್ರೋಮ್ ಎಂಬ ಮೂತ್ರಪಿಂಡದ ಕಾಯಿಲೆ ಇತ್ತು ಎಂದು ವೈದ್ಯರು ಹೇಳಿದ್ದಾರೆ.

ಇನ್ನು ಕರ್ನಾಟಕದಲ್ಲಿ ಪ್ರಸ್ತುತ 16 ಕೋವಿಡ್‌ ಪ್ರಕರಣಗಳು ವರದಿಯಾಗಿವೆ. “ಈ ವೈರಾಣುಗಳು ಸದಾ ಇರುತ್ತವೆ. ಪರೀಕ್ಷೆಗೊಳಪಟ್ಟಾಗ ದೃಢವಾಗಬಹುದು. ಆದರೆ, ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಕೇಂದ್ರ ಸರ್ಕಾರದ ಜತೆ ನಿತ್ಯ ಸಂಪರ್ಕದಲ್ಲಿದ್ದೇವೆ. ತಾಂತ್ರಿಕ ಸಮಿತಿ ಸದಸ್ಯರೊಟ್ಟಿಗೂ ಚರ್ಚಿಸಲಾಗುತ್ತಿದೆ. ಮಳೆಗಾಲದ ಋತುವಿನಲ್ಲಿ ಜನ ಸಾಮಾನ್ಯವಾಗಿ ಜ್ವರ ಸಂಬಂಧಿ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವುದು ಸಹಜ. ಈ ವೇಳೆ ಮಾಸ್ಕ್‌ ಧರಿಸುವುದು ಸೇರಿದಂತೆ ಮುನ್ನೆಚ್ಚರಿಕೆಗಳನ್ನು ಅನುಸರಿಸುವುದು ಸೂಕ್ತ” ಎಂದು ಆರೋಗ್ಯ ಸಚಿವ ಗುಂಡೂರಾವ್‌ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಕೇರಳ, ಮಹಾರಾಷ್ಟ್ರ ಹಾಗೂ ತಮಿಳುನಾಡಿನಲ್ಲಿ ಕೋವಿಡ್‌ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿವೆ ಎಂದು ವರದಿಯಾಗಿದೆ.

ಮೇ ತಿಂಗಳಲ್ಲಿ ಮುಂಬೈನಲ್ಲಿ 95 ಹೊಸ ಕೋವಿಡ್-19 ಪ್ರಕರಣಗಳು ಕಂಡುಬಂದಿವೆ. ಜನವರಿಯಿಂದ ಏಪ್ರಿಲ್ ವರೆಗೆ ಮಹಾರಾಷ್ಟ್ರದಲ್ಲಿ ವರದಿಯಾದ 106 ಪ್ರಕರಣಗಳಿಗೆ ಹೋಲಿಸಿದರೆ ಇದು ದೊಡ್ಡ ಜಿಗಿತವಾಗಿದೆ. ಕನಿಷ್ಠ 16 ರೋಗಿಗಳು ಪ್ರಸ್ತುತ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ ಎನ್ನಲಾಗಿದೆ.

“ಸಮಯ ಕಳೆದಂತೆ ದೇಹದಲ್ಲಿನ ಪ್ರತಿಕಾಯಗಳು ಸ್ವಾಭಾವಿಕವಾಗಿ ಕಡಿಮೆಯಾಗುತ್ತವೆ. ಇದನ್ನು ‘ರೋಗನಿರೋಧಕ ಶಕ್ತಿಯ ಕುಗ್ಗುವಿಕೆ’ ಎನ್ನಲಾಗುತ್ತದೆ. ಇದರಿಂದ ಮನುಷ್ಯರು ಮತ್ತೆ ಸೋಂಕಿಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದಲೇ, ಈ ಮೊದಲು ಕೋವಿಡ್‌ ಸೋಂಕು ಬಂದವರು ಅಥವಾ ಲಸಿಕೆ ಪಡೆದವರಿಗೂ ಮತ್ತೆ ಸೋಂಕು ಬರುವ ಸಂಭವವಿದೆ,” ಎಂದು ಕೊಚ್ಚಿನ್‌ನ ಭಾರತೀಯ ವೈದ್ಯಕೀಯ ಸಂಘ (ಐಎಂಎ)ದ ಮಾಜಿ ಅಧ್ಯಕ್ಷ ಡಾ. ರಾಜೀವ್ ಜಯದೇವನ್ ತಿಳಿಸಿದ್ದಾರೆ.

ಕೋವಿಡ್‌ ಮರು ಹುಟ್ಟಿಗೆ ಕಾರಣವೇನು?

ಓಮಿಕ್ರಾನ್‌ ಕುಟುಂಬಕ್ಕೆ ಸೇರಿದ ಜೆಎನ್.1‌ (JN.1) ರೂಪಾಂತರಿ ಹಾಗೂ ಅದರ ಸಂಬಂಧಿತ ವೈರಸ್‌ಗಳು ಏಷ್ಯಾದ್ಯಂತ ಕೋವಿಡ್‌ ಹರಡುವಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ. ಸಿಂಗಪೂರ್‌ ಆರೋಗ್ಯ ಅಧಿಕಾರಿಗಳ ಪ್ರಕಾರ ರೂಪಾಂತರಿ ವೈರಸ್‌ಗಳಾದ ಎಲ್‌ಎಫ್.7‌ (LF.7) ಮತ್ತು ಎನ್‌ಬಿ 1.8 (NB1.8) ರೂಪಾಂತರಿಗಳು ಹೆಚ್ಚು ವೇಗವಾಗಿ ಹರಡುತ್ತಿವೆಯಂತೆ.

ಸಾರ್ಸ್-ಕೋವ್-2 (SARS-CoV-2) ವೈರಸ್‌ ಕೆಲ ಆನುವಂಶಿಕ ಬದಲಾವಣೆಗಳಿಗೆ ಒಳಗಾಗುತ್ತದೆ. ಈ ಬದಲಾವಣೆಗಳ ಮೂಲಕ ಅದು ಹಳೆಯ ರೂಪಾಂತರಗಳ ವಿರುದ್ಧ ಮಾನವನ ದೇಹ ನಿರ್ಮಾಣ ಮಾಡಿಕೊಂಡ ರೋಗನಿರೋಧಕ ಶಕ್ತಿಯಿಂದ ತಪ್ಪಿಸಿಕೊಳ್ಳಬಹುದು ಅರ್ಥಾತ್‌ ಮಾನವನ ದೇಹ ಸೇರಿ, ರೋಗ ನಿರೋಧಕ ಶಕ್ತಿ ಕುಂದಿಸಿ, ಆರೋಗ್ಯ ಹಾನಿಗೆ ಕಾರಣವಾಗಬಹುದು. ಈ ಜೀನ್ ಬದಲಾವಣೆಗಳಿಂದಾಗಿಯೇ ವೈರಸ್‌ ಮತ್ತೆ ಸುಲಭವಾಗಿ ಮಾನವ ದೇಹ ಪ್ರವೇಶಿಸಲು ಸಾಧ್ಯವಾಗುತ್ತದೆ.

ಮತ್ತೊಂದು ಕಾರಣವೆಂದರೆ, ಅಂತಾರಾಷ್ಟ್ರೀಯ ಪ್ರಯಾಣದ ಪ್ರಮಾಣವು ಹೆಚ್ಚಿರುವುದು. ಇದು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ವೈರಸ್‌ ತ್ವರಿತವಾಗಿ ಹರಡಲು ಸಲೀಸಾಗುತ್ತದೆ.

ಈ ಪರಿಸ್ಥಿತಿಯಲ್ಲಿ ತುರ್ತು ಕ್ರಮಗಳ ಅಗತ್ಯವಿದ್ದರೂ, ತಜ್ಞರ ಅಭಿಪ್ರಾಯದ ಪ್ರಕಾರ ಈ ಹೊಸ ರೂಪಾಂತರಿಗಳು ಹಳೆಯದರಷ್ಟು ಗಂಭೀರವಲ್ಲ. ಎಚ್ಚರಿಕೆಯ ಅಗತ್ಯವಿದೆ ಎಂದು ಆರೋಗ್ಯ ತಜ್ಞರು ಸಲಹೆಯಿತ್ತಿರುವುದು ಕೊಂಚ ಸಮಾಧಾನಕರ.

ವೈರಸ್‌ನಿಂದ ಉಂಟಾಗುವ ಕಾಯಿಲೆಗಳು ಕೆಲವೊಮ್ಮೆ ದೀರ್ಘಕಾಲ ಶಾಂತವಾಗಿರುತ್ತವೆ. ದಿನ ಕಳೆದಂತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಇದಕ್ಕೆ ಮುಖ್ಯವಾಗಿ ಜನರ ದೇಹದಲ್ಲಿ ರೋಗನಿರೋಧಕ ಶಕ್ತಿ ಕ್ರಮೇಣ ಕಡಿಮೆಯಾಗುವುದೇ ಆಗಿದೆ.

ಇದನ್ನೂ ಓದಿ: Ground Report | ಹತ್ಯೆಯೋ, ಆತ್ಮಹತ್ಯೆಯೋ? ಕೆ.ಆರ್‌.ಪೇಟೆ ದಲಿತ ಯುವಕನ ಸಾವಿನ ಸುತ್ತ ಹಬ್ಬಿದ ಅನುಮಾನ!

ಕೋವಿಡ್‌ ಹೊಸ ಉಪ ರೂಪಾಂತರಿಯ ರೋಗ ಲಕ್ಷಣಗಳು:

ಹೊಸ ಕೋವಿಡ್ ಉಪ ರೂಪಾಂತರಿಗಳು ಸೌಮ್ಯವಾದ ಲಕ್ಷಣಗಳನ್ನು ಹೊಂದಿರುತ್ತದೆ. ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೂ ತೀವ್ರವಾಗಿರುವುದಿಲ್ಲ. ಕೆಲವು ಸಾಮಾನ್ಯ ಲಕ್ಷಣಗಳಲ್ಲಿ ಜ್ವರ, ಮೂಗು ಸೋರುವುದು, ಗಂಟಲು ನೋವು, ತಲೆನೋವು, ತೀವ್ರ ಆಯಾಸ, ಸ್ನಾಯು ದೌರ್ಬಲ್ಯ, ಬಳಲಿಕೆ ಮತ್ತು ಸಣ್ಣ ಜಠರ, ಕರುಳಿನ ಸಮಸ್ಯೆಗಳನ್ನು ಎದುರಿಸಬಹುದು. ಕೆಲವು ಸಂದರ್ಭಗಳಲ್ಲಿ, ಹೊಸ ರೂಪಾಂತರವು ಹಸಿವಾಗದಿರುವುದು ಮತ್ತು ನಿರಂತರ ವಾಕರಿಕೆಯೊಂದಿಗೆ ಸಹ ಕಾಣಿಸಿಕೊಳ್ಳಬಹುದು. ಈ ಸಮಸ್ಯೆಗಳು ಸೌಮ್ಯವಾಗಿದ್ದು, ನಾಲ್ಕರಿಂದ ಐದು ದಿನಗಳಲ್ಲಿ ಸುಧಾರಿಸುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ತಿಳಿಸಿದೆ.

ಪ್ರಕರಣಗಳು ವೇಗವಾಗಿ ಹರಡುತ್ತಿರುವ ಹಿನ್ನೆಲೆ ವೈಯಕ್ತಿಕ ಜಾಗ್ರತೆ ಮುಖ್ಯ. ಹೊರಗೆ ಓಡಾಡುವಾಗ ಮಾಸ್ಕ್‌ ಧರಿಸುವುದು, ಸಾಧ್ಯವಾದಷ್ಟು ಜನರ ಗುಂಪುಗಳಿಂದ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಇತರ ಕೋವಿಡ್‌-19 ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಬೇಕಾಗಿದೆ.

ಮೊದಲನೆಯ ಅಲೆ (2020)ಯಲ್ಲಿ ಸರ್ಕಾರವು ಲಾಕ್‌ಡೌನ್, ಧಾರ್ಮಿಕ/ಸಾಂಸ್ಕೃತಿಕ ಸಂಚಲನಗಳಿಗೆ ನಿರ್ಬಂಧ, ಮತ್ತು ಲಸಿಕೆ ಅಭಿವೃದ್ಧಿಗೆ ನೆರವು ನೀಡಿತ್ತು. ಎರಡನೆಯ ಅಲೆ (2021) ಡೆಲ್ಟಾ ರೂಪಾಂತರದ ರೂಪದಲ್ಲಿ ಬೃಹತ್ ಪ್ರಮಾಣದಲ್ಲಿ ಜನಜೀವನವನ್ನು ಬಾಧಿಸಿತು. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ, ಬೆಡ್ ಇಲ್ಲದ ಪರಿಸ್ಥಿತಿ, ಮತ್ತು ಅಧಿಕೃತ ಮೃತರ ಸಂಖ್ಯೆ 5 ಲಕ್ಷಕ್ಕೂ ಮೀರಿ ಹೋಗಿದ್ದರೂ, ಹಲವಾರು ಅಂತಾರಾಷ್ಟ್ರೀಯ ಅಧ್ಯಯನಗಳು (ಉದಾ: WHO, Lancet) ನಿಜವಾದ ಸಾವಿನ ಸಂಖ್ಯೆ 35-50 ಲಕ್ಷಗಳ ನಡುವೆ ಇರಬಹುದೆಂದು ಅಂದಾಜಿಸಿವೆ.

ಸಂಧಿಗ್ದ ಪರಿಸ್ಥಿತಿ ಎದುರಾಗದಂತೆ ನಾವೇನು ಮಾಡಬಹುದು?

ಇನ್ನು, ಜನರು ಆರಂಭದಲ್ಲಿ ಕೊರೋನ ಸೋಂಕಿಗಿಂತ ಲಾಕ್‌ಡೌನ್‌ ಎಂಬ ಭೂತದಿಂದಲೂ, ಸೋಂಕಿನಿಂದ ತಮ್ಮವರನ್ನು ಕಳೆದುಕೊಂಡ ಆಘಾತದಿಂದಲೂ ಹೆಚ್ಚು ತತ್ತರಿಸಿ ಹೋಗಿದ್ದರು ಎಂಬುದು ಮರೆಯಲಾಗದ ವಿಚಾರ. ಆದರೆ ಈ ಬಾರಿ ಅದಾವುದಕ್ಕೂ ಆಸ್ಪದ ಕೊಡದೆ ಸಮರ್ಥವಾಗಿ ನಿಭಾಯಿಸುವ ಅಗತ್ಯತೆ ಇದೆ.

  • ಹೆಚ್ಚು ಜನಜಂಗುಳಿಯಿರುವ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು
  • ಕೈಗಳನ್ನು ನಿಯಮಿತವಾಗಿ ಸಾಬೂನು ಅಥವಾ ಸ್ಯಾನಿಟೈಸರ್‌ನಿಂದ ತೊಳೆದುಕೊಳ್ಳುವುದು
  • ಪದೇ ಪದೆ ಮುಖ, ಮೂಗು, ಕಣ್ಣಿಗೆ ಕೈಹಾಕುವುದನ್ನು ತಪ್ಪಿಸುವುದು
  • ಹೆಚ್ಚು ಜನಸಂಖ್ಯೆ ಇರುವ ಸಭೆಗಳಲ್ಲಿ ನಿರಂತರವಾಗಿ ಭಾಗವಹಿಸುವುದನ್ನು ತಡೆಯುವುದು
  • ಜ್ವರ, ಕೆಮ್ಮು, ಗಂಟಲು ನೋವು ಇತರೆ ಶೀತ ಸಂಬಂಧೀ ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು.. ಸೇರಿದಂತೆ ಇವೇ ಮೊದಲಾದ ಕೋವಿಡ್-19‌ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವುದು ಅಥವಾ ಹಳೆಯ ಅಭ್ಯಾಸವನ್ನು ಪುನಃ ಶುರುಮಾಡುವುದು ಮಾಡಬೇಕಾಗಿದೆ.

ಕೊವಿಡ್-19 ಎಂಬುದೊಂದು ಸದಾ ಪುಟತಿರುಗಿಸುತ್ತಿರುವ ನವೀನ ಸಾಂಕ್ರಾಮಿಕ ಕಥೆ. ಹಾಂಗ್ ಕಾಂಗ್, ಸಿಂಗಪೂರ್, ಥೈಲ್ಯಾಂಡ್ ಹಾಗೂ ಚೀನಾ– ಈ ಎಲ್ಲ ದೇಶಗಳಲ್ಲಿ ಪ್ರಕರಣಗಳ ಏರಿಕೆಯು, ಭಾರತದಲ್ಲೂ ಅಲ್ಪ ಪ್ರಮಾಣದ ಸಕ್ರಿಯ ಪ್ರಕರಣಗಳ ಮೂಲಕ ನಾವು ಎಚ್ಚರಿಕೆಯಾಗಬೇಕಾದ ಅವಶ್ಯಕತೆಯನ್ನು ಒತ್ತಿಹೇಳುತ್ತಿದೆ.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷಗಳು: ಆಗಿದ್ದೇನು, ಆಗಬೇಕಿರುವುದೇನು?

ಮಾನವ ದೇಹದಲ್ಲಿ ಪ್ರತಿರೋಧ ಶಕ್ತಿ ಕಾಲ ಕಳೆದಂತೆ ಕುಸಿಯುವುದು ಸಹಜ. ಹೊಸ ರೂಪಾಂತರಗಳು ಬರುವುದೂ ಸಹ ಅನಿವಾರ್ಯ. ಇವೆಲ್ಲಕ್ಕೂ ನಡುವಿನಲ್ಲಿ ನಾವೆಷ್ಟು ಜಾಗರೂಕರಾಗಿರಬೇಕು ಎಂಬುದಷ್ಟೇ ಮುಖ್ಯ. ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದು, ರೋಗಲಕ್ಷಣಗಳಿದ್ದರೆ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳುವುದು ಮತ್ತು ಬೂಸ್ಟರ್ ಲಸಿಕೆಗಳನ್ನು ತಗೊಳ್ಳುವುದು ಮುಂತಾದ ಪ್ರತಿಯೊಂದು ಚಿಕ್ಕ ಹೆಜ್ಜೆಯೂ ಸಮುದಾಯದ ಆರೋಗ್ಯವನ್ನು ರಕ್ಷಿಸುವಲ್ಲಿ ದೊಡ್ಡ ಪಾತ್ರ ವಹಿಸಬಹುದು. ನಾವು ಭವಿಷ್ಯದಲ್ಲಿ ಮತ್ತೆ ಲಾಕ್‌ಡೌನ್ ಅಥವಾ ತೀವ್ರ ಪರಿಸ್ಥಿತಿಗೆ ಹೋದರೆ ಅದನ್ನು ತಡೆಯುವಲ್ಲಿ ಇಂದು ನಾವು ತೆಗೆದುಕೊಳ್ಳುವ ಮುನ್ನೆಚ್ಚರಿಕೆಗಳು ನಿರ್ಣಾಯಕವಾಗಿರುತ್ತವೆ.

ಕೋವಿಡ್ ನಮಗೆ ಬೋಧಿಸಿದ ಪಾಠವೆಂದರೆ “ಅನಿಶ್ಚಿತತೆಯೊಂದಿಗೆ ಬದುಕುವುದು”. ಆದರೆ ಈ ಬಾರಿ ನಮಗೆ ಅನುಭವ, ವೈಜ್ಞಾನಿಕ ಅರಿವು ಮತ್ತು ಹೆಚ್ಚು ಜವಾಬ್ದಾರಿ ಎಲ್ಲವೂ ಇದೆ. ಸರ್ಕಾರ ಮಾತ್ರವಲ್ಲ, ನಾಗರಿಕರಾಗಿ ನಾವೂ ಈ ಸಮಯದಲ್ಲಿ ಜಾಗರೂಕರಾಗಬೇಕು. ತೀವ್ರ ತೊಂದರೆ ಬೀರುವ ಸಾಧ್ಯತೆ ಕಡಿಮೆ ಇದ್ದರೂ, ಜಾಣ್ಮೆಯಿಂದ ನಡೆದುಕೊಂಡರೆ ಮತ್ತೊಂದು ಸಂಕಷ್ಟವನ್ನು ತಡೆಯುವುದು ಸಾಧ್ಯ…

WhatsApp Image 2025 05 16 at 6.54.26 PM
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X