“ನನ್ನ ಆ ಶೋಕದ ಕಾವ್ಯ ಸಂಕಲನವನ್ನು ಪಕ್ಕದಲ್ಲಿಟ್ಟುಕೊಂಡು ಮಡಿದ ಒಬ್ಬ ಹುಡುಗ ರಕ್ತ ಕಾರುತ್ತಾ ಬಿದ್ದಿದ್ದ. ಆತನ ಆತ್ಮಹತ್ಯೆಗೆ ನಾನೇ ಕಾರಣ ಎನ್ನಿಸಿ ದುಗುಡಗೊಂಡೆ” ಎನ್ನುತ್ತಾನೆ ಕವಿ ನೆರೂಡ
ಮನುಷ್ಯನ ಮನಸ್ಸು ಕೇಡನ್ನು ಸುಲಭವಾಗಿ ಆವಾಹಿಸಿಕೊಳ್ಳುತ್ತದೆ. ಕೇಡಿಗೆ ನೆಪಗಳನ್ನು, ಸಮರ್ಥನೆಗಳನ್ನು ಹುಡುಕಿಕೊಳ್ಳುತ್ತದೆ. ಕೇಡಿನ ಮೂಲಕ ಭ್ರಮೆ, ಕಾಲ್ಪನಿಕತೆ, ಅವಾಸ್ತವಿಕತೆಗಳ ಬೆನ್ನೇರುತ್ತದೆ. ದ್ವೇಷ, ಅಸೂಯೆ, ತರತಮ, ಹತಾಷೆ, ಅಪರಾಧಗಳನ್ನು ನೆಲೆಯಾಗಿಸಿಕೊಳ್ಳುತ್ತದೆ. ಕೇಡು ಕಲಾತ್ಮಕ ರೂಪವನ್ನು ಪಡೆದು, ಸಾರ್ವಜನಿಕ ಸಮ್ಮತಿಗೆ ಅವಣಿಸುತ್ತದೆ. ಬಂಧನಗಳನ್ನೇ ಬಂಡವಾಳವೆಂದು ಭಾವಿಸಿ, ಅದನ್ನೇ ಲೋಕದ ವ್ಯವಹಾರದಲ್ಲಿ ಹೂಡಿ ಲಾಭವನ್ನು ಪಡೆದುಕೊಳ್ಳಲು ಮನಸ್ಸು ಯತ್ನಿಸುತ್ತದೆ. ಇಲ್ಲಿ ಮನುಷ್ಯ ಸಂಬಂಧಗಳು ಲಾಭ ನಷ್ಟದ ಲೆಕ್ಕಾಚಾರಕ್ಕೆ ಒಳಪಡುತ್ತವೆ. ಎಲ್ಲ ವಿಕ್ಷಿಪ್ತತೆಗಳನ್ನು ಅನುಕೂಲಕರವಾಗಿಸಿಕೊಳ್ಳುವ ಯತ್ನದಲ್ಲಿ ಕೇಡು ನಮ್ಮನ್ನು ಕ್ರೌರ್ಯದತ್ತ ಎಳೆಯುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳದೆ ದುಃಖವನ್ನೇ ನಾವು ನಿಜವೆಂದು ಭಾವಿಸುತ್ತೇವೆ. ದುಃಖದಲ್ಲೇ ಲಾಭವನ್ನು ಗಿಟ್ಟಿಸಿಕೊಳ್ಳಲು ಯತ್ನಿಸುತ್ತೇವೆ. ಅತಿ ಭಾವುಕತೆಗೂ ಕೇಡಿನ ಸೋಂಕಿದೆ. ನಮ್ಮ ಕೇಡು ಸೃಷ್ಟಿಸುವ ಭಾವುಕ ಜಗತ್ತಿಗೆ ಸಮ್ಮತಿಯ ಮುದ್ರೆಯೊತ್ತಿಸಲು ಮನಸ್ಸು ದಾರಿಗಳನ್ನು ಹುಡುಕುತ್ತದೆ. ಕಲೆಯೂ ಕೂಡ ಇದರ ಭಾಗವಾಗುತ್ತದೆ.
ನಮ್ಮ ಬಹುತೇಕ ಕಲಾಸೃಷ್ಟಿಗಳು (ಸಿನಿಮಾ, ಸಾಹಿತ್ಯ, ಚಿತ್ರಕಲೆ ಇತ್ಯಾದಿ) ನಮ್ಮನ್ನು ನೆನಪಿನ ಸಾಗರದಲ್ಲಿ ಮುಳುಗಿಸುತ್ತವೆ, ವಾಸ್ತವಗಳಿಗೆ ಬೆನ್ನು ತಿರುಗಿಸುವಂತೆ ಪ್ರೇರೇಪಿಸುತ್ತವೆ. ಅತಿ ಭಾವುಕತೆಯೂ ಕೇಡಿನ ಸ್ವರೂಪವಾಗಿ ರೂಪುಗೊಳ್ಳುತ್ತದೆ. ದುಃಖದ ಗಳಿಗೆಯಲ್ಲಿ ಇಂತಹ ಕಲೆ, ಸಾಹಿತ್ಯದ ಬೆನ್ನೇರಿದರೆ ಅಲ್ಲಿ ನಮ್ಮ ಮನಸ್ಸಿಗೆ ಸಮರ್ಥನೆಗಳು ಸಿಕ್ಕಿ ಮತ್ತಷ್ಟು ಘಾಸಿಯಾಗುತ್ತಾ, ಬದುಕು ಛಿದ್ರಗೊಳ್ಳುತ್ತಾ ಹೋಗುತ್ತದೆ.
ಕೇಡಿನಿಂದ ಹೊರಬರಲು ಮನಸ್ಸು ಬಿಡುವುದಿಲ್ಲ. ಅದಕ್ಕೆ ಯಾವುದಾದರೊಂದರ ಸಮರ್ಥನೆಯ ಊರುಗೋಲು ಬೇಕು. ನಮ್ಮ ಬದುಕಿನ ಪಲ್ಲಟಗಳಿಗೆ, ನಮ್ಮೆದುರಿಗಿನ ಕಲಾತ್ಮಕ ಜಗತ್ತಿನ ಭ್ರಮಾತ್ಮಕತೆಯಲ್ಲಿ ಅರ್ಥಗಳನ್ನು ಒಡ್ಡಿಕೊಂಡು ಮತ್ತೆ ಮತ್ತೆ ಘಾಸಿಗೊಳ್ಳುತ್ತೇವೆ. ಮನಸ್ಸಿನಲ್ಲಿ ಹುಟ್ಟಿಕೊಳ್ಳುವ ರೂಪಕಗಳು ನಮ್ಮನ್ನು ವಾಸ್ತವಗಳಿಗೆ ಬೆನ್ನು ತಿರುಗಿಸುವಂತೆ ಒತ್ತಾಯಿಸುತ್ತವೆ. ಅಂದಹಾಗೆ ಇಡೀ ಕಲಾಪ್ರಪಂಚವೇ ನಮ್ಮನ್ನು ಕೇಡಿನತ್ತ ಅಥವಾ ಕ್ರೌರ್ಯದತ್ತ ಎಳೆಯುತ್ತದೆ ಎಂಬ ಬಾಲಿಷ ವಾದವನ್ನು ಇಲ್ಲಿ ಮಾಡುತ್ತಿಲ್ಲ. ಕಲೆಯಲ್ಲಿ ವಿರಚನ ಪ್ರಕ್ರಿಯೆಯನ್ನು ಸಾಧ್ಯವಾಗಿಸುವ ಮಾರ್ಗಗಳೂ ಇವೆ, ಕೇಡಿಗೆ ಪ್ರೇರೇಪಿಸುವ ಸರಕುಗಳೂ ಇವೆ. ಆದರೆ ವಿರಚನೆ ಎಷ್ಟು ಮಂದಿಗೆ ಸಾಧ್ಯ? ವೆಬ್ ಸಿರೀಸ್ ನಿಂದ ಪ್ರೇರೇಪಿತರಾಗಿ, ಯಾವುದೋ ಒಂದು ಸಿನಿಮಾದಿಂದ ಪ್ರಚೋದಿತರಾಗಿ ಪಾತಕಗಳನ್ನು ಎಸಗಿದ ಅದೆಷ್ಟು ವರದಿಗಳನ್ನು ನಾವು ಈವರೆಗೆ ನೋಡಿಲ್ಲ!?
ಅರಿಸ್ಟಾಟಲ್ ಪ್ರತಿಪಾದಿಸಿದ ‘ಕಥಾರ್ಸಿಸ್’ (ಶೋಧನೆ) ಪರಿಕಲ್ಪನೆಯು ಕಲಾಮಾಧ್ಯಮದಿಂದಾಗುವ ವಿರಚನೆಯ ಬಗ್ಗೆ ಒಳನೋಟಗಳನ್ನು ನೀಡಿತು. ದುರಂತ ನಾಟಕವು ಕರುಣಾಜನಕ, ಭಯಾನಕ ಘಟನೆಗಳ ಪ್ರದರ್ಶನದ ಮೂಲಕ ‘ಕರುಣೆ’ ಮತ್ತು ‘ಭೀತಿ’ಯನ್ನು ಶೋಧಿಸುತ್ತದೆ ಎಂಬ ಅರಿಸ್ಟಾಟಲ್‌ನ ಅಭಿಪ್ರಾಯಕ್ಕೆ ತರಹೇವಾರಿ ವಿಶ್ಲೇಷಣೆಗಳು ಬಂದಿವೆ. “ರುದ್ರ ನಾಟಕಗಳು ನಮ್ಮ ಮಾನಸಿಕ ಆರೋಗ್ಯಕ್ಕೆ ಸಾಧನೆಗಳೇ ಹೊರತು ಶತ್ರುಗಳಲ್ಲ” ಎಂಬ ಅನಿಸಿಕೆಗಳನ್ನು ಸಾಹಿತ್ಯ ವಿಮರ್ಶಕರು ತಾಳಿದರು. ದುರಂತ ನಾಟಕದ ತಾತ್ವಿಕತೆ, ಮನುಷ್ಯನನ್ನು ದುರಂತದ ಕುರಿತು ಯೋಚಿಸದಂತೆ ಪ್ರೇರೇಪಿಸುತ್ತದೆ, ಅಂಕದ ಮೇಲೆ ಪ್ರದರ್ಶನಗೊಂಡ ದುರಂತಗಳು ನಮ್ಮ ಸ್ಮೃತಿಪಟಲದಲ್ಲಿ ತುಂಬಿಕೊಂಡ ನೋವು, ಹತಾಷೆ, ದುಗುಡ, ವಿಷಣ್ಣತೆಯನ್ನು ವಿಮರ್ಶೆಗೆ ಒಡ್ಡುತ್ತವೆ ಎಂಬುದು ಕಥಾರ್ಸಿಸ್ ಥಿಯರಿಯ ತಾತ್ಪರ್ಯ. ಆದರೆ ಇದಕ್ಕೆ ತದ್ವಿರುದ್ಧ ಮಾನಸಿಕ ಪಲ್ಲಟಗಳೂ ಆಗುವ ಸಂಭವಗಳಿರುತ್ತವೆ ಎಂಬುದನ್ನು ತಳ್ಳಿಹಾಕಲಾಗದು.
ಪಿ.ಲಂಕೇಶ್ ಅವರ ‘ಗುಣಮುಖ’ ನಾಟಕದ ಕಥಾನಾಯಕ ‘ನಾದಿರ್ ಶಾ’ನ ಅಹಂ, ಮನುಷ್ಯ ಜಗತ್ತಿನ ಕುರಿತ ಸಿನಿಕತನ, ಅನುಮಾನ ಆತನ ಮನಸ್ಸನ್ನು ಮತ್ತಷ್ಟು ರೋಗಿಷ್ಟನನ್ನಾಗಿ ರೂಪಿಸುತ್ತವೆ. ಆದರೆ ಹಕೀಮ ಹಲಾವಿ ಪ್ರವೇಶಿಸಿ ಆತನ ರೋಗದ ಮೂಲವನ್ನು ಶೋಧಿಸುತ್ತಾನೆ, ನಿರ್ಭಿಡೆಯಿಂದ ಆತನ ಅಹಂ ಕುರಿತು ನುಡಿಯುತ್ತಾನೆ. ಪ್ರೇಕ್ಷಕನ ಒಳಗೂ ನಾದಿರ್ ಥರದ ವ್ಯಕ್ತಿತ್ವ ಇರಬಹುದು, ಪ್ರತಿ ನಾದಿರ್‌ಗೂ ಹಕೀಮ ಹಲಾವಿಯ ಅಗತ್ಯತೆ ಇರುತ್ತದೆ. ಆದರೆ ನಾದಿರ್‌ನನ್ನು ಮತ್ತು ಆತನ ಹುಚ್ಚುತನವನ್ನು ವೈಭವೀಕರಣ ಮಾಡುವುದರಿಂದ ಆತನೊಳಗಿನ ಕ್ರೌರ್ಯಕ್ಕೆ ಸಮ್ಮತಿಯನ್ನು ಅಥವಾ ಆತನ ಮನಸ್ಸನ್ನು ಪ್ರೇಕ್ಷಕ ಒಪ್ಪಿಕೊಳ್ಳುವ ಉದಾರತೆಯನ್ನು ಸೃಷ್ಟಿಸಿದಂತೆ ಭಾಸವಾಗುತ್ತದೆ. ಮುಂದುವರಿದು ಹೇಳುವುದಾದರೆ ಲಂಕೇಶ್ ಅವರು ತಮ್ಮ ಪತ್ರಿಕೆಯಲ್ಲಿ ಆರಂಭಿಸಿದ ‘ರೂಪಕ ಲೇಖಕರು’ ಸರಣಿಯಲ್ಲಿ ದಾಖಲಿಸಿದ ಪಾಶ್ಚಾತ್ಯ ಲೇಖಕರ ವ್ಯಕ್ತಿ ಚಿತ್ರಣ, ಅವರ ಸಾಹಿತ್ಯದ ಪರಿಚಯ ಏನನ್ನು ಹೇಳುತ್ತಿದ್ದವು? ಯಾವುದನ್ನು ಪ್ರತಿಪಾದಿಸುತ್ತಿದ್ದವು? ಜಗತ್ತಿನ ಮೊದಲ ನವ್ಯ ಸಾಹಿತ್ಯ ಲೇಖಕ ಎಂದು ಪರಿಗಣಿತವಾದ ಚಾರ್ಲ್ಸ್ ಬೋದಿಲೇರ್ ಬರೆದ ‘ಪಾಪದ ಹೂವುಗಳು’ ಕೃತಿಯನ್ನು ಕನ್ನಡಕ್ಕೆ ತಂದರು. ಆದರೆ ಬೋದಿಲೇರ್ ಮನುಷ್ಯನ ವಿಕೃತಿಗಳಿಗೆ (ಆತನೊಳಗಿನ ವಿಕೃತಿಯೂ ಹೌದು) ಅಥವಾ ದುರಂತಗಳಿಗೆ ಕಾವ್ಯದ ಚೌಕಟ್ಟನ್ನು ನೀಡಿದ. ಮನುಷ್ಯನಾಳದ ಅಸ್ವಸ್ಥತೆಯನ್ನು ಸಾರ್ವತ್ರಿಕ ಸತ್ಯಗಳಾಗಿ ಚಿತ್ರಿಸಲು ಯತ್ನಿಸಿದ. ಅದನ್ನು ಓದಿ ಪ್ರೇರೇಪಿತರಾದರೆ, ಅಥವಾ ಅಂತಹ ಸಾಹಿತ್ಯಕ್ಕೆ ಜನಮನ್ನಣೆ ಸಿಕ್ಕರೆ ಮನುಷ್ಯನನ್ನು ದುಃಖಕ್ಕೆ, ಕಾಮದ ಕೊಳಕ್ಕೆ, ಮನುಷ್ಯನಾಳದ ವಾಂಛೆಗೆ ದೂಡಿದಂತೆ; ಅವುಗಳಿಗೆ ನೀರೆರೆದಂತೆ ಎಂದೂ ನಮಗೆ ಅನಿಸಬೇಕು. “ಮನುಷ್ಯ ಯಾವಾಗಲೂ ಕುಡಿದ ಸ್ಥಿತಿಯಲ್ಲಿರಬೇಕು, ಏನನ್ನು ಕುಡಿಯುವುದು? ವೈನ್, ಕಾವ್ಯ, ಋಜತ್ವ” ಎನ್ನುತ್ತಾನೆ ಬೋದಿಲೇರ್. ಆದರೆ ಈ ಸಾಲುಗಳಿಗೆ ಸಾರ್ವಜನಿಕ ಮನ್ನಣೆ ದೊರೆತಾಗ ಮನುಷ್ಯನ ಕ್ಷುದ್ರ ಮನಸ್ಸು ಮದ್ಯದತ್ತ ಹೆಚ್ಚು ಪ್ರಚೋದಿತವಾಗುತ್ತದೆ ಎಂದು ಅನಿಸುವುದಿಲ್ಲವೇ?
ಲಂಕೇಶ್ ಅವರು ತಮ್ಮ ‘ಟೀಕೆ- ಟಿಪ್ಪಣಿ’ಯ ಲೇಖನವೊಂದರಲ್ಲಿ ಚಿಲಿ ದೇಶದ ಕವಿ ನೆರೂಡನ ಸಂದರ್ಶನವೊಂದನ್ನು ದಾಖಲಿಸಿದ್ದಾರೆ. ಸಂದರ್ಶಕಿ ರೀಟಾ ಕೇಳಿದ ಪ್ರಶ್ನೆಯೊಂದು ಹೀಗಿದೆ: “ನಿಮ್ಮದೊಂದು ಕವನ ಸಂಕಲನದ ಬಗ್ಗೆ ಹೇಳುತ್ತ, ‘ಅವು ಜನರು ಬದುಕಲು ಸಹಾಯ ಮಾಡುವುದಿಲ್ಲ, ಸಾಯಲು ನೆರವಾಗುತ್ತವೆ’ ಅಂದಿದ್ದೀರಿ’- ಅದರ ಅರ್ಥ?”
ಇದಕ್ಕೆ ನೆರೂಡ ನೀಡಿರುವ ಉತ್ತರ ಸ್ವಾರಸ್ಯಕರವಾಗಿದೆ. “ಅವನ್ನು ಬರೆದಾಗ ನಾನು ಮಾನಸಿಕ ತೊಂದರೆಯಲ್ಲಿದ್ದೆ. ಕಾವ್ಯ ಜನರನ್ನು ಸಾಯಿಸಬಾರದು. ಅಮೆರಿಕದ ಫ್ರಾಸ್ಟ್ ಕವಿ, ‘ದುಃಖವನ್ನು ಕಾವ್ಯಕ್ಕೆ ಬಿಡಿ’ ಎಂದು ಹೇಳಿದ್ದರೂ ನಿಮ್ಮ ಕಾವ್ಯ ದುರಂತಕ್ಕೆ ಎಡೆಗೊಟ್ಟಾಗ ತುಂಬಾ ಬೇಸರವಾಗುತ್ತದೆ. ಏನಾಯಿತೆಂದರೆ, ನನ್ನ ಆ ಶೋಕದ ಕಾವ್ಯ ಸಂಕಲನವನ್ನು ಪಕ್ಕದಲ್ಲಿಟ್ಟುಕೊಂಡು ಮಡಿದ ಒಬ್ಬ ಹುಡುಗ ರಕ್ತ ಕಾರುತ್ತಾ ಬಿದ್ದಿದ್ದ. ಆತನ ಆತ್ಮಹತ್ಯೆಗೆ ನಾನೇ ಕಾರಣ ಎನ್ನಿಸಿ ದುಗುಡಗೊಂಡೆ.” ನೆರೂಡನ ಮಾತು ಎಚ್ಚರಿಕೆಯೂ ಹೌದು.
ನಮ್ಮ ಕಲಾಜಗತ್ತು ಬಹುತೇಕ ಶೋಕಮಯವಾಗಿದೆ, ಅದು ವಿರಚನ ಮಾಡಿದ್ದಕ್ಕಿಂತ ದುರಂತಕ್ಕೆ ಪ್ರೇರೇಪಿಸಿದ್ದೇ ಹೆಚ್ಚು. ರೂಪಕಗಳನ್ನು ಬೆನ್ನೇರುವ ಕವಿಯ ಮನಸ್ಸು ವೈಯಕ್ತಿಕ ನೋವುಗಳ ದುಗುಡವನ್ನು ತುಂಬಿಕೊಂಡಿರುವ, ಬದುಕಿನ ಆಸೆಗಳು ಕೈಗೂಡದಿದ್ದಾಗ ಸಾಯಲಾಗದೆ ಕಾವ್ಯದ ಮೂಲಕ ಮತ್ತಷ್ಟು ಛಿದ್ರಗೊಳ್ಳುವ ವ್ಯವಸಾಯ ಮಾಡುತ್ತದೆ. ದಲಿತ ಕವಿ ಎನ್.ಕೆ.ಹನುಮಂತಯ್ಯ ಅವರ ಕಾವ್ಯವನ್ನು ಓದುತ್ತಿದ್ದರೆ ರೂಪಕಗಳು ದಿಡ್ಡಿಯಾಗಿ ಸಿಗುತ್ತವೆ. ಅತಿ ಭಾವುಕತೆಯನ್ನು ಕವಿ ಒದ್ದ ಕಾರಣ, ಅತಿ ಸಂವೇದನೆಯ ಚಡಪಡಿಕೆಯೂ, ಓದುಗರಲ್ಲಿ ಅವಾಸ್ತವಿಕ ವಿಚಾರಧಾರೆಯೂ ಪ್ರಚೋದಿತವಾಗಲು ಕಾರಣವಾಗುತ್ತಾರೆ. ಅವರು ಬಳಸುವ ಭಾಷೆ ಕಾರುಣ್ಯವನ್ನು ಧ್ಯಾನಿಸಿದೆಯೋ, ಕೇಡನ್ನು ಉಸಿರಾಡಿದೆಯೋ ಎಂಬುದು ಸ್ಪಷ್ಟವಾಗುವುದಿಲ್ಲ. ಎನ್.ಕೆ.ಯವರ ಪ್ರಸಿದ್ಧ ಎರಡು ಕವನಗಳನ್ನು ಉದಾಹರಣೆಯಾಗಿ ನೋಡಿರಿ.
ಚಿತ್ರದ ಬೆನ್ನು
ಈ ಇರುವೆಯ ಮೇಲೆ
ನನ್ನ ಭಾರದ ಹೆಜ್ಜೆಯನ್ನಿಟ್ಟೆ
ತುಸು ಕಾಲದ ನಂತರ ತೆಗೆದೆ
ಇರುವೆ ಮತ್ತೆ ಚಲಿಸುತ್ತಿದೆ
ಏ ಸೂಜಿಯ ಗಾತ್ರದ ಜೀವವೇ
ನನ್ನ ಭಾರ ಹೊರುವ ನಿನ್ನ
ಬೆನ್ನಿಗೆ ಶರಣು
ಆ ಬೇಲಿಯ ದಡದಿ
ನಿಧಾನಕ್ಕೆ ತೆವಳುತ್ತಿರುವ
ಬಸವನ ಹುಳುವೇ
ನನ್ನ ಭಾರ ಹೊರಲಾರದ
ನಿನ್ನ ಮೃದುತ್ವಕ್ಕೆ
ಶರಣು
ಅಲ್ಲಿ ಆ ಗಿಡದಲ್ಲಿ
ನೂಲಿನ ಗಾತ್ರದ ಕಡ್ಡಿಯ ಮೇಲೆ
ಉಯ್ಯಾಲೆಯಾಡುವ ಹಕ್ಕಿಯೇ
ಕಡ್ಡಿ ಮುರಿಯದೆ ಆಡುವ ನಿನ್ನ
ತೂಕಕ್ಕೆ ಶರಣು
ಅಗ್ನಿ ಮಾಂಸದ ಕುಲುಮೆಯಲಿ
ನನ್ನ ಕಾಯಿಸಿ ಬಣ್ಣವ ಮಾಡಿ
ಮರಳಿ ನನ್ನ ರೂಪವನೇ ಕಡೆವ
ಏ ನನ್ನಾಳದ ಅಳುವೇ
ನನ್ನ ಚಿತ್ರಕೇಕೆ ಬೆನ್ನು ಬರೆವೆ
****
ಹೆಜ್ಜೆಯ ಹಿಂದೆ…
ಬಾ ಗೆಳತಿ
ಚೂರಾದ ಮುಖಗಳನು ಆಯೋಣ
ಎಲ್ಲಾದರೂ
ನಗು ಮೆತ್ತಿಕೊಂಡಿದ್ದರೆ,
ನಮ್ಮ ತುಟಿಗಳಿಗೆ ತುಂಬಿಕೊಳ್ಳೋಣ…
ಎಲ್ಲಾದರೂ
ಅಳು ಅಂಟಿಕೊಂಡಿದ್ದರೆ,
ನಮ್ಮ ಕಣ್ಣುಗಳಿಗೆ ಬಸಿದುಕೊಳ್ಳೋಣ…
ಬಾ ಗೆಳತಿ
ಚೂರಾದ ಎದೆಗಳನು ಆಯೋಣ
ಎಲ್ಲಾದರೂ ಹದವಿದ್ದರೆ,
ಅಲ್ಲಿ ಬೀಜಗಳಾಗಿ ಮೊಳೆಯೋಣ…
ಅತ್ಯಂತ ಸಂವೇದನಾಶೀಲವೂ ಅನಿಸಿದ ಇಲ್ಲಿನ ಮೊದಲ ಕವನವು ಕವಿಯ ಅಂತರಾಳದ ದುಗುಡವನ್ನು, ವಿಷಾದವನ್ನು ದಾಟಿಸುತ್ತದೆ. ಇಲ್ಲಿನ ಭಾಷೆಯ ಆರ್ದ್ರತೆಯನ್ನು ನೋಡಿ ಇದು ಕವಿಯೊಳಗಿನ ಆಧ್ಯಾತ್ಮಿಕತೆ ಎಂದು ಭಾವಿಸಿದರೆ ತಪ್ಪಾದೀತು. ಈ ತೀವ್ರವಾದ ನೋವಿನಲ್ಲಿ ಬುದ್ಧನ ಸಮಚಿತ್ತತೆಯನ್ನು ಹುಡುಕುವುದಾದರೂ ಹೇಗೆ? ‘ನನ್ನಾಳದ ಅಳು’ ಎಂದು ಕವಿ ದುಃಖಿತನಾಗಿ ತನ್ನ ನೋವಿಗೆ ರೂಪಕಗಳನ್ನು ಕೊಟ್ಟು, ಆ ನೋವಿಗೆ ಸಾರ್ವತ್ರಿಕ ಒಪ್ಪಿಗೆಗೆ ಯತ್ನಿಸಿದಂತೆ, ತನ್ನ ನೋವನ್ನು ಓದುಗನ ನೋವನ್ನಾಗಿಯೂ ರೂಪಿಸಲು ಪ್ರಯತ್ನಿಸಿದಂತೆ ಕಾಣುತ್ತದೆ.
ಎರಡನೇ ಕವಿತೆಯಲ್ಲೂ ಅದೇ ವಿಷಾದದ ಛಾಯೆ. ಭಗ್ನಪ್ರೇಮಿಯೊಬ್ಬನ ಅಳಲು ಇಲ್ಲಿ ರಾಚುತ್ತದೆ. ಇಡೀ ಜಗತ್ತಿನ ನೋವುಗಳನ್ನೆಲ್ಲ ತನ್ನದಾಗಿಸಿಕೊಂಡ ಭ್ರಮಾತ್ಮಕತೆಯಲ್ಲಿ ತನ್ನ ಸಂಗಾತಿಯನ್ನೂ ನೋವಿಗೆ ದೂಡಲು, ಕವಿಯೊಳಗಿನ ಅತೃಪ್ತ ಭಾವಗಳು ರೂಪಕದ ಬೆನ್ನೇರಿವೆ ಅನಿಸುವುದಿಲ್ಲವೇ? ಹೀಗೆ ವಿಷಣ್ಣತೆ, ವೈಯಕ್ತಿಕ ನೆಲೆಯ ಅತಿ ಭಾವುಕತೆಯನ್ನು ಉಸಿರಾಡಿದ ರೂಪಕ ಕವಿಗಳು ಬದುಕನ್ನು ಛಿದ್ರ ಮಾಡಿಕೊಂಡರು. ಕುಡಿತ, ಅಪರಾಧ, ಕೇಡಿನ ಸುಳಿಗೆ ಸಿಲುಕಿ ಚಿಕ್ಕ ವಯಸ್ಸಿನಲ್ಲೇ ಬಹುತೇಕರು ಸಾವಿಗೀಡಾದರು. ಇಷ್ಟು ಆರ್ದ್ರವಾದ ರೂಪಕಗಳನ್ನು ನೀಡಿದ ಎನ್.ಕೆ. ಕೂಡ ಆತ್ಮಹತ್ಯೆ ಮಾಡಿಕೊಂಡರು.
ಹಾಗೆಂದು ಕಾವ್ಯದಲ್ಲಿನ ಭಾವುಕ ಜಗತ್ತು, ರೂಪಕಗಳು ಸಂಪೂರ್ಣ ತಪ್ಪೆಂದು ವಾದಿಸುತ್ತಿಲ್ಲ. ಅಲ್ಲಿ ಕವಿ ತನ್ನ ವೈಯಕ್ತಿಕ ಲಾಲಸೆ, ತೊಳಲಾಟವನ್ನಷ್ಟೇ ಚಿಂತಿಸುತ್ತಿದ್ದರೆ ಅವುಗಳಿಗೆ ಸಾವಿನ ಸ್ಪರ್ಶವಿರುತ್ತದೆ. ಆದರೆ ಕವಿ ಸಾರ್ವಜನಿಕ, ಸಾಮಾಜಿಕ ಅನಿಷ್ಟಗಳ ವಿರುದ್ಧ ಸಿಡಿದೆದ್ದು ಕಾವ್ಯವಾಗಿಸಿದರೆ (ರೂಪಕವಾಗಿಸಿದರೆ) ಅದು ಕ್ರಾಂತಿಕಾರಕ, ಸ್ವೀಕಾರಾರ್ಹ ಅಭಿವ್ಯಕ್ತಿಯಾಗುತ್ತದೆ. ಕವಿ ಸಿದ್ದಲಿಂಗಯ್ಯನವರ ‘ಹೊಲೆ ಮಾದಿಗರ ಹಾಡು’ ಅಂತಹ ಸ್ವೀಕಾರಾರ್ಹ ಮಾದರಿಗೊಂದು ಬಹುದೊಡ್ಡ ಉದಾಹರಣೆ. “ಹಸಿವಿನಿಂದ ಸತ್ತೋರು, ಸೈಜುಗಲ್ಲು ಹೊತ್ತೋರು ನನ್ನ ಜನಗಳು” ಎಂಬ ಸಾಲು ವೈಯಕ್ತಿಕ ಪರಿಧಿಯಾಚೆಯ ಸಾಮಾಜಿಕ ಲೋಕ. “ಒಡೆಯರ ಸುಂದರ ತೋಟದ ಒಳಗೆ, ಅರಳುವ ಹೂವಿನ ದಳದಳದಲ್ಲಿ ಅಪ್ಪನ ಬೆವರಿನ ರಕ್ತವು ಸೋರಿ ಕೆಂಪಾದವು ಹೂವು” ಎಂಬ ರೂಪಕ ಎಲ್ಲ ದುಡಿವ ಜನರ ನೋವಿನ ಚಿತ್ರಣ. ಇಲ್ಲಿ ಪ್ರಾಸಂಗಿಕವಾಗಿ ಎರಡು ಮಾದರಿಯ ಕಾವ್ಯವನ್ನು ಉದಾಹರಣೆಯಾಗಿ ನೀಡಲಾಗಿದೆಯಷ್ಟೇ. ಹಾಗೆಂದು ಕವಿಯೊಬ್ಬ ತನ್ನ ಜೀವಿತವಧಿಯುದ್ಧಕ್ಕೂ ಸಾಮಾಜಿಕವಾಗಿಯೋ ಅಥವಾ ವೈಯಕ್ತಿಕವಾಗಿಯೋ ಬರೆಯುತ್ತಾ ಕೂತಿರುತ್ತಾನೆ ಎಂಬುದು ಅತ್ಯಂತ ಕೀಳುಮಟ್ಟದ ಗ್ರಹಿಕೆಯಾಗುತ್ತದೆ. ಎನ್.ಕೆ. ಅವರ ‘ಗೋವು ತಿಂದು ಗೋವಿನಂತಾದವನು’ ಕವಿತೆ ವೈಯಕ್ತಿಕತೆಯಾಚೆಯ ಸಾಮಾಜಿಕ ಆಯಾಮವನ್ನು ಧ್ಯಾನಿಸಿತ್ತು ಎಂಬುದನ್ನು ಕಡೆಗಣಿಸಲಾದೀತೆ? ಲಂಕೇಶರ ‘ಅವ್ವ’ ಕವನವು ಈ ನಾಡಿದ ಶೂದ್ರ ಮಹಿಳೆಯನ್ನು ವಾಸ್ತವ ನೆಲೆಗಟ್ಟಿನಲ್ಲಿ ನೋಡಿತು ಎಂಬುದನ್ನು ಅಲ್ಲಗಳೆಯಲಾದೀತೆ? ಮನುಷ್ಯನೊಳಗೆ ಕಾರುಣ್ಯವೂ ಇದೆ, ಕ್ರೌರ್ಯವೂ ಇದೆ. ಕಾರುಣ್ಯ ಉದ್ದೀಪನಗೊಂಡಿದ್ದಕ್ಕಿಂತ ಕ್ರೌರ್ಯವೇ ಆಪ್ಯಾಯಮಾನ ಅನಿಸಿದ್ದು ವಿಪರ್ಯಾಸ.
ಇಲ್ಲಿ ಹೇಳಲು ಹೊರಟಿದ್ದು ಇಷ್ಟೆ; ಕಾವ್ಯವೆಂಬುದು ಮನುಷ್ಯನ ವೈಯಕ್ತಿಕ ಕಾಮ, ಹತಾಷೆ, ದುಗುಡವನ್ನು ಹಿಮ್ಮಡಿಗೊಳಿಸಿದರೆ ಸಾಹಿತ್ಯವೆಂಬುದು ಕೂಡ ಸಾವಿಗೆ ಪ್ರೇರೇಪಣೆ ನೀಡುತ್ತದೆ. ಇದು ಈ ಲೇಖಕನನ್ನೂ ಬಿಟ್ಟಿಲ್ಲ!
ಮನಸ್ಸು ಕೇಡಿಗೆ ಈಡಾಯಿತೆಂದರೆ ಕ್ರೌರ್ಯದತ್ತ ಧಾವಿಸುತ್ತದೆ, ಕೆಡುಕುಗಳಿಗೆ ಕಲಾತ್ಮಕತೆಯ ಸ್ಪರ್ಶ ನೀಡಿ ಅದನ್ನೇ ಸಮರ್ಥಿಸಲು ಯತ್ನಿಸುತ್ತದೆ. ಇದು ಅರ್ಥವಾದ ತಕ್ಷಣ ನಾವು ಮತ್ತೆ ಬುದ್ಧನಲ್ಲಿಗೋ, ಅಲ್ಲಮನಲ್ಲಿಗೋ, ಒಟ್ಟಾರೆ ಶ್ರಮಣಾದಿ ಪರಂಪರೆಯತ್ತಲೋ ಓಡಲು ಆರಂಭಿಸುತ್ತೇವೆ. ಹೊಳೆಯ ಸುಳಿಗೆ ಸಿಲುಕಿದವನಿಗೆ ಬಳ್ಳಿಯೊಂದರ ಆಸರೆ ಸಿಕ್ಕಂತೆ, ಬುದ್ಧ, ಅಲ್ಲಮಾದಿ ಪ್ರಾಜ್ಞರ ನುಡಿಗಳು ಕೇಳಲಾರಂಭಿಸುತ್ತವೆ. ಅಲ್ಲಮನ ನುಡಿಗಳು ಚಿಕಿತ್ಸಕ ದೃಷ್ಟಿಕೋನವನ್ನು ನೀಡುತ್ತವೆ. ಭಾಷೆಗಿರುವ ಮಿತಿಯ ಮೂಲಕವೇ ಇವರು ನಮಗೆ ಆಸರೆಯಾಗುತ್ತಿದ್ದಾರೋ ಅನಿಸತೊಡಗುತ್ತದೆ. ಬುದ್ಧನ ಬೆಳಕಿನಲ್ಲಿ ಆನಂದದ ಹುಡುಕಾಟ ಆರಂಭವಾಗುತ್ತದೆ. ಅದು ತನ್ನನ್ನೇ ತಾನು ಕಂಡುಕೊಳ್ಳುವ ಹುಡುಕಾಟ.
ಕಾರುಣ್ಯವೇ ನಿಜವಾದ ಕಾವ್ಯಪ್ರಜ್ಞೆಯಾಗಬೇಕು. ನಿರಸನಗೊಂಡ ಮನಸ್ಸಿನ ಮೂಲಕ ಮನುಷ್ಯನ ದುಃಖವನ್ನು ನೋಡಿದಾಗ ದಕ್ಕುವ ಒಳನೋಟಗಳು ಕಾರುಣ್ಯವನ್ನು ಸ್ಫುರಿಸುತ್ತವೆ, ಪ್ರಶಾಂತ ಪ್ರತಿಕ್ರಿಯೆಯೂ ಅದಾಗಿರುತ್ತವೆ. “ರಸ, ಧ್ವನಿ, ಅಲಂಕಾರ ಇತ್ಯಾದಿ ಭಾಷಾ ಕೇಂದ್ರಿತವಾದ ಕಾವ್ಯ ಮೀಮಾಂಸೆಗಿಂತ, ಮೌನ ಕೇಂದ್ರಿತವಾದ ಬೌದ್ಧ ಮೀಮಾಂಸೆ ವಿಶಿಷ್ಟವಾದದ್ದು. ಸರಹಪಾದನಂತಹ ಬೌದ್ಧಸಿದ್ಧರು ರಸ ಸಿದ್ಧಾಂತವನ್ನು ಒಪ್ಪದಿರುವುದಕ್ಕೆ ಕಾರಣಗಳೇನು? ಭಾಷೆಯನ್ನು ಬೆನ್ನೇರುವ ಕಾವ್ಯ ಮೀಮಾಂಸೆಯು ದುಃಖದಿಂದ ಮನುಷ್ಯನನ್ನು ಬಿಡುಗಡೆ ಮಾಡುವುದಿಲ್ಲ. ರಸ ಸಿದ್ಧಾಂತದ ಮೂಲವೇ ತೊಳಲಾಟ, ಕಾಲ್ಪನಿಕತೆ. ಬೌದ್ಧ ತಾತ್ವಿಕತೆಯಲ್ಲಿ ಭಾಷೆ ಆದ್ಯತೆಯ ಸಂಗತಿಯಲ್ಲ. ಜಗತ್ತಿನ ಬಗ್ಗೆ ಕರುಣಾ ಮೈತ್ರಿಯನ್ನು ಹೊಂದಿದ್ದ ಬೌದ್ಧರು, ಮುಂದಿನ ಪೀಳಿಗೆಗೆ ಪ್ರಜ್ಞಾ ವಿಜ್ಞಾನವನ್ನು ದಾಟಿಸಲು ಭಾಷೆಯನ್ನು ಅನಿವಾರ್ಯ ಸಾಧನವಾಗಿ ಬಳಸಿದರೆ ಹೊರತು, ಅದು ಕಟ್ಟಕಡೆಯ ಆಯ್ಕೆಯಾಗಿ ಉಳಿದಿತ್ತು” ಎಂಬುದು ಅರಿವಿಗೆ ಬರಲಾರಂಭಿಸುತ್ತದೆ. ನುಡಿಯು ಪ್ರಜ್ಞೆಯ ಆಂತರ್ಯದಿಂದ ಹುಟ್ಟಿದಾಗ ಮಾತ್ರ ಅದು ನಿಜದ ಪ್ರತಿಕ್ರಿಯೆ ಅನಿಸುವುದು ಅರ್ಥವಾಗುತ್ತದೆ. ಹೀಗಾಗಿ ಭಾವುಕ ಕಾವ್ಯ ಮೀಮಾಂಸೆಯನ್ನು ಕಡೆಗಣಿಸುವುದು ಕೂಡ ದುಃಖವನ್ನು ನೀಗಿಸಿಕೊಳ್ಳುವ ಮಾರ್ಗವಾಗುತ್ತದೆ. ಕಾರುಣ್ಯ ನಮ್ಮದಾಗದಿದ್ದರೆ ಬದುಕಿನ ವಾಸ್ತವಗಳಿಗೆ ಬೆನ್ನುತೋರಿ, ಕಾಲ್ಪನಿಕ ಜಗತ್ತಿನಲ್ಲಿ ಮುಳುಗಿ ಹತಾಷೆ, ಕ್ರೋಧ, ಈಡೇರದ ಬಯಕೆಗಳಿಗೆ ಜೋತುಬೀಳುತ್ತೇವೆ.
ಮನುಷ್ಯ ಕಾರುಣ್ಯರೂಪಿಯೂ ಹೌದು, ಕ್ರೌರ್ಯರೂಪಿಯೂ ಹೌದು. ಆದರೆ ಕ್ರೌರ್ಯಕ್ಕೆ ಹೆಚ್ಚು ತೆರೆದುಕೊಂಡಿದ್ದೇವೆ. ಮನುಸ್ಸು ಆಲೋಚಿಸುವ ಕೇಡಿಗೆ ಕಾಲ್ಪನಿಕತೆಯ ರೂಪವಿದೆ. ಅದು ಏನೇನೋ ಕಲ್ಪಿಸಿಕೊಂಡು ಅಪರಾಧದಲ್ಲಿ ತೊಡಗುತ್ತದೆ. ಹೀಗಾಗಿ ಬುದ್ದಗುರು ‘ಅಕಾಲ್ಪನಿಕತೆ’, ‘ಅನಾತ್ಮ’ದ ಬಗ್ಗೆ ಹೇಳಿದ. ಪ್ರತಿ ಕ್ಷಣ ಬದಲಾಗುವ ಲೋಕಪ್ರವಾಹವನ್ನು ಅದಿರುವಂತೆ ಗ್ರಹಿಸು ಮತ್ತು ಸ್ವೀಕರಿಸು ಎಂದು ನುಡಿದ.
ಅನಗತ್ಯ ನೋವುಗಳನ್ನೆಲ್ಲ ತನ್ನದಾಗಿಸಿಕೊಳ್ಳುತ್ತಾ ಮನುಷ್ಯ ದುಃಖಕ್ಕೆ ಈಡಾಗುತ್ತಾನೆ. ಅಲ್ಲಿ ನೆನಪಿನ ಸಂಕೋಲೆಗಳಿವೆ. ಬದುಕಿನಲ್ಲಿ ದುರ್ವಾಸನೆ ಎದ್ದಾಗ, ನಮ್ಮನ್ನು ಕುಕ್ಕಿ ತಿನ್ನಲು ಹದ್ದಿನ ರೀತಿ ನಮ್ಮ ತಲೆಯ ಮೇಲೆಯೇ ನೆನಪುಗಳು ಹಾರಾಡುತ್ತವೆ. ಹಾಗೆಂದು ಲೋಕಪ್ರವಾಹಕ್ಕೆ ಬೆನ್ನು ತಿರುಗಿಸಲು ಸಾಧ್ಯವೇ? ಇಲ್ಲ. ಲೋಕದ ಪ್ರತಿಯೊಂದು ವಿದ್ಯಮಾನವೂ ಪ್ರತಿಕ್ರಿಯೆಯೂ ನಿರಸನಗೊಂಡ ಸ್ವರೂಪದಲ್ಲಿ ನಮ್ಮನ್ನು ಪ್ರವೇಶಿಸಬೇಕು. ಬುದ್ಧ, ಅಲ್ಲಮನಂಥವರ ಎದುರು ಎಲ್ಲಾ ಅನುಭವಗಳೂ ನಿರಸನಗೊಂಡು ಪ್ರವೇಶಿಸುತ್ತವೆ. ಯಾವುದೂ ಮನಸ್ಸಿನಲ್ಲಿ ಸಂಚಯಗೊಳ್ಳುವುದಿಲ್ಲ. ಯಾವುದೂ ಮನದೊಳಗೆ ಉಳಿಯುವುದಿಲ್ಲ. ಎದುರಾದ ಎಲ್ಲ ಭಾವಗಳು ತಡವೊಡೆದ ಮಡಿಕೆಯೊಳಗೆ ಪ್ರವೇಶಿಸಿದಂತೆ. ಸಂಗ್ರಹವೇ ಕ್ರೌರ್ಯ, ನಿರಸನವೇ ಕಾರುಣ್ಯ. ಯಾವುದನ್ನೂ ತಡೆಯದೆ, ತನ್ನತ್ತ ಧಾವಿಸಿದ್ದನ್ನು ಇಟ್ಟುಕೊಳ್ಳದೆ ಇರುವ ಸಮಚಿತ್ತ ಅಥವಾ ಪ್ರಜ್ಞೆಯೇ ಕಾರುಣ್ಯ. ನಮ್ಮ ಹೆಚ್ಚಿನ ಕಾವ್ಯಾದಿ ಕಲಾಪ್ರಕಾರಗಳು ನಿರಸನವನ್ನು ಧ್ಯಾನಿಸಿದ್ದಕ್ಕಿಂತ, ಕೂಡಿಡುವುದಕ್ಕೆ, ಈ ಸಂಗ್ರಹಗಳೇ ನಮ್ಮ ಬದುಕೆಂದು ಭ್ರಮಿಸುವುದಕ್ಕೆ ಕಾರಣವಾಗಿವೆ. ಕಾರುಣ್ಯಕ್ಕೆ ಇಂತಹ ಸಂಗ್ರಹವೂ ಅಡೆತಡೆಯಾಗಿದೆ. ಕೇಡು ಅರ್ಥಾತ್ ಕ್ರೌರ್ಯವೇ ಕಲಾಪ್ರಕಾರದ ಸ್ಥಾಯಿಭಾವಗಳಾಗಿ ಹೊಮ್ಮಿವೆ. ನಿರಸನವಲ್ಲದ, ಪ್ರಜ್ಞೆಯ ಗೈರಿನಲ್ಲಿ ಹೊಮ್ಮುವ ಯಾವುದೇ ಕಲೆಯಲ್ಲಿ ಕೇಡು ಸುಪ್ತವಾಗಿರುವ ಸಾಧ್ಯತೆ ಇರುತ್ತದೆ. ಅಂಥವುಗಳು ಕವಿ ಅಥವಾ ಕಲಾವಿದನ ಮನೋ ಸಂಚಗಳ ಅಭಿವ್ಯಕ್ತಿಯೇ ಹೊರತು ಮತ್ತೇನೂ ಅಲ್ಲ. ಮನಸ್ಸು ಕುಣಿಸಿದಂತೆ ಕುಣಿದು, ಪ್ರಜ್ಞೆಗೆ ಕುರುಡಾದಾಗ ಹುಟ್ಟುವ ಪ್ರತಿಕ್ರಿಯೆಗಳು ಹತಾಷೆಯ ಸಂಕೇತಗಳೂ ಹೌದು. ಕವಿ, ಕಲಾವಿದನ ಆಂತರ್ಯವು ‘ಪ್ರಜ್ಞಾಸ್ವರೂಪಿ’ಯಾಗಲು ನಮ್ಮ ಶ್ರಮಣ ಪರಂಪರೆಗಳು ಪ್ರೇರೇಪಿಸುತ್ತವೆ. ಭಾಷೆಗೆ ಬೆಡಗನ್ನು ಮತ್ತು ಬೆಳಗನ್ನು ತಂದುಕೊಡುತ್ತವೆ. ಕಾರುಣ್ಯಕ್ಕೆ ಒಳಗಾದ ಕಲಾಸೃಷ್ಟಿಗೆ ನಮ್ಮ ಪ್ರತಿಭೆಯನ್ನು ಪ್ರಚೋದಿಸುತ್ತವೆ. ಬುದ್ಧನ ರೂಪಕಗಳಿಗೂ ಹತಾಷೆಗೊಂಡ ಕವಿಯ ರೂಪಕಗಳಿಗೂ ವ್ಯತ್ಯಾಸ ಗೋಚರವಾಗುತ್ತದೆ. ಬುದ್ಧ ಬಳಸುವ ರೂಪಕಗಳು ದುಃಖ ನಿವಾರಕವಾಗಿರುವುದು ಅರಿವಾಗುತ್ತದೆ.
ಬುದ್ಧ ನೀಡುವ ರೂಪಕಕ್ಕೆ ಉದಾಹರಣೆಯಾಗಿ ಈ ಪ್ರಸಂಗವನ್ನು ನೋಡಿರಿ. (ಕವಿ ಮೂಡ್ನಾಕೂಡು ಚಿನ್ನಸ್ವಾಮಿಯವರು ಬರೆದಿರುವ ‘ಬಹುತ್ವ ಭಾರತ ಮತ್ತು ಬೌದ್ಧತಾತ್ವಿಕತೆ’ ಕೃತಿಯಲ್ಲಿನ ಪಠ್ಯವನ್ನು ಇಲ್ಲಿ ನೀಡಲಾಗಿದೆ.)
“ಒಮ್ಮೆ ಬುದ್ಧ ಭಗವಾನರು ಕೋಸಾಂಬಿಗೆ ಹೋಗಲು ಈಶಾನ್ಯ ದಿಕ್ಕಿನತ್ತ ಚಲಿಸುತ್ತಿದ್ದ ಗಂಗಾ ನದಿಯ ತಟದಲ್ಲಿ ಸಾಗುತ್ತಿದ್ದರು. ನದಿಯ ಕೆಳಹರಿವಿನಲ್ಲಿ ಕೊಚ್ಚಿಹೋಗುತ್ತಿದ್ದ ಮರದ ದಿಮ್ಮಿಯೊಂದನ್ನು ಕಂಡು ಕ್ಷಣಕಾಲ ನಿಂತು ಭಿಕ್ಕುಗಳನ್ನು ಉದ್ದೇಶಿಸಿ ಹೀಗೆ ಹೇಳಿದರು: ಭಿಕ್ಕುಗಳೆ, ಆ ಮರದ ತುಂಡು ನದಿಯ ದಂಡೆಯಲ್ಲಿ ಸಿಕ್ಕಿಹಾಕಿಕೊಳ್ಳದಿದ್ದರೆ, ಅಥವಾ ಮುಳುಗದಿದ್ದರೆ, ಒಂದುವೇಳೆ ಮರಳ ಕಟ್ಟೆಗೆ ಕಟ್ಟಿಹಾಕದಿದ್ದರೆ ಅಥವಾ ಅದನ್ನು ನೀರಿನಿಂದ ಹೊರಗೆ ತೆಗೆದುಹಾಕದಿದ್ದರೆ, ನೀರಿನ ಸುಳಿಗೆ ಸಿಲುಕದಿದ್ದರೆ ಅಥವಾ ಒಳಗಿನಿಂದಲೇ ಕೊಳೆತು ಹೋಗದಿದ್ದರೆ ಅದು ಸಮುದ್ರದವರೆಗೂ ಹಾಗೆಯೆ ತೇಲಿಕೊಂಡುಹೋಗುತ್ತದೆ. ನೀವೂ ಹಾಗೆಯೇ, ನದಿಯ ದಂಡೆಯಲ್ಲಿ ಸಿಕ್ಕಿಹಾಕಿಕೊಳ್ಳದಿದ್ದರೆ, ಮುಳುಗದಿದ್ದರೆ, ಮರಳಕಟ್ಟೆಯಲ್ಲಿ ಕಟ್ಟಿಹಾಕಲ್ಪಡದೇ ಇದ್ದರೆ, ನೀರಿನಿಂದ ಹೊರತೆಗೆಯದಿದ್ದರೆ, ಸುಳಿಯಲ್ಲಿ ಸಿಲುಕದಿದ್ದರೆ, ಒಳಗಿನಿಂದಲೇ ಕೊಳೆತುಹೋಗದಿದ್ದರೆ ಖಂಡಿತವಾಗಿಯೂ ನೀವು ಜ್ಞಾನೋದಯ ಮತ್ತು ಮುಕ್ತಿಯೆಂಬ ಮಹಾಸಮುದ್ರವನ್ನು ಸೇರುತ್ತೀರಿ.
ಭಿಕ್ಕುಗಳ ಗೊಂದಲವನ್ನು ಬಗೆಹರಿಸಲು ಬುದ್ಧನು ಮುಂದುವರಿದು ಹೀಗೆ ಹೇಳುತ್ತಾನೆ. “ಭಿಕ್ಕುಗಳೆ, ನದಿಯ ದಂಡೆಯಲ್ಲಿ ಸಿಲುಕುವುದು ಎಂದರೆ ಆರು ಇಂದ್ರಿಯಗಳು (senses) ಮತ್ತು ಅವುಗಳ ಆಯತನಗಳಿಗೆ (objects) ಜೋತುಬೀಳುವುದು, ನೀವು ದಮ್ಮವನ್ನು ಎಚ್ಚರದಿಂದ ಪಾಲಿಸಿದರೆ ಭಾವನೆಗಳಿಗೆ ಕಟ್ಟುಬೀಳುವುದಿಲ್ಲ. ಭಾವನೆಗಳಿಗೆ ಕಟ್ಟುಬಿದ್ದರೆ ಇಂದ್ರಿಯ ಮತ್ತು ಇಂದ್ರಿಯಾಯತನಗಳು ಕೂಡಿದಾಗ ಉಂಟಾಗುವ ಪರಿಣಾಮ ನಿಮ್ಮನ್ನು ದಾರಿತಪ್ಪಿಸುತ್ತದೆ. ಮುಳುಗುವುದೆಂದರೆ ಆಸೆ ಮತ್ತು ಲೋಭಕ್ಕೆ ಗುಲಾಮರಾಗುವುದು. ಅದು ನಿಮ್ಮ ಅಭ್ಯಾಸಕ್ಕೆ ಅಗತ್ಯವಾಗಿರುವ ಸಂಕಲ್ಪ ಶಕ್ತಿಯನ್ನೆ ನಾಶಮಾಡುತ್ತದೆ. ಮರಳುಕಟ್ಟೆಯಲ್ಲಿ ಕಟ್ಟಿಹಾಕುವುದೆಂದರೆ ನಿಮ್ಮ ಬಗ್ಗೆಯೇ ಸದಾ ಚಿಂತಿಸುತ್ತಿರುವುದು, ಸ್ವಾರ್ಥಪರ ಅನುಕೂಲ, ಪ್ರತಿಷ್ಠೆಗಾಗಿ ಹೋರಾಡುವುದು. ಜ್ಞಾನೋದಯದ ಗುರಿಯನ್ನೆ ಮರೆಯುವುದು. ನೀರಿನಿಂದ ಹೊರತೆಗೆಯುವುದು ಎಂದರೆ ಚಂಚಲತೆಯಲ್ಲಿ ಕಳೆದುಹೋಗುವುದು ದಮ್ಮಪಾಲನೆಯನ್ನು ಮರೆತು ಅನರ್ಹರೊಡನೆ ಅಲೆಯುತ್ತಿರುವುದು, ಸುಳಿಯಲ್ಲಿ ಸಿಲುಕುವುದೆಂದರೆ ಐದು ತೆರನಾದ ಕೃಷ್ಣಗಳಾದ ರುಚಿಯಾದ ಆಹಾರ, ಕಾಮಾಸಕ್ತಿ, ಹಣ, ಕೀರ್ತಿ ಮತ್ತು ಅತಿಯಾದ ನಿದ್ದೆ ಇವುಗಳಿಂದ ಬಂಧಿಸಲ್ಪಡುವುದು. ಒಳಗಿನಿಂದಲೇ ಕೊಳೆತುಹೋಗುವುದು ಎಂದರೆ ಹುಸಿ ಪ್ರತಿಷ್ಠೆಯಿಂದ ಬದುಕುವುದು, ಸಂಘಕ್ಕೆ ದ್ರೋಹ ಬಗೆಯುವುದು, ಧರ್ಮವನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವುದು…”
ಮತ್ತೊಂದೆಡೆ ಮೂಡ್ನಾಕೂಡು ಹೀಗೆ ಬರೆಯುತ್ತಾರೆ: “ಬೌದ್ಧ ಪರಂಪರೆಯಲ್ಲಿ ಪ್ರಾರ್ಥನೆಗೆ ಮಹತ್ವವಿಲ್ಲ. ಮೈತ್ರಿ ಭಾವನೆಗೆ ಇದೆ. ತಾನು, ತನ್ನದು ಎನ್ನುವ ಸೀಮಿತ ವಲಯವನ್ನು ಮೀರಿ, ಕೆಟ್ಟದು ಒಳ್ಳೆಯದು ಎಂಬ ಭೇದವನ್ನು ತೋರದೆ, ಎಲ್ಲರನ್ನೂ ಒಳಗೊಂಡು ಪ್ರೀತಿಸುವುದು. ಭೂಮಿ, ನೀರು, ಆಕಾಶದಲ್ಲಿರುವ ಎಲ್ಲ ಜೀವಿಗಳ ಮೇಲೆಯೂ ಆದರ ಬೆಳೆಸಿಕೊಳ್ಳುವುದು ಮೈತ್ರಿ ಭಾವದ ವೈಶಿಷ್ಟ್ಯ. ದುಃಖದಿಂದ ಬಳಲುತ್ತಿರುವವರಿಗೆ ಬೇಕಾಗಿರುವುದು ಸಾಂತ್ವನ. ಅದು ಕರುಣೆಯಿಂದ ಸಾಧ್ಯವಾಗುತ್ತದೆ…”
ಮನುಷ್ಯನ ಅಡೆತಡೆಗಳು ಯಾವುದೆಂದು ಬುದ್ದ ಹೇಳಿದ್ದನ್ನೇ ಅಲ್ಲಮ ತನ್ನದೇ ಬೆಡಗಿನ ನುಡಿಯಲ್ಲಿ ಹೀಗೆ ತಿಳಿಸುತ್ತಾನೆ:
ಕಾಲುಗಳೆಂಬುವು ಗಾಲಿ ಕಂಡಯ್ಯಾ
ದೇಹವೆಂಬುದು ತುಂಬಿದ ಬಂಡಿ ಕಂಡಯ್ಯಾ
ಬಂಡಿಯ ಹೊಡೆವರೈವರು ಮಾನಿಸರು
ಒಬ್ಬರಿಗೊಬ್ಬರು ಸಮವಿಲ್ಲಯ್ಯ
ಆದರಿಚ್ಛೆಯನರಿದು ಹೊಡೆಯದಿರ್ದಡೆ
ಅದರಚ್ಚು ಮುರಿಯಿತ್ತು- ಗುಹೇಶ್ವರಾ
ಇಂದ್ರಿಯಗಳ ಚಂಚಲತೆಯ ಬಗ್ಗೆ ಅಲ್ಲಮ ಇಲ್ಲಿ ಹೇಳುತ್ತಿದ್ದಾನೆ. ಮನುಷ್ಯನೆಂದರೆ, ಈ ಐದು ಪಂಚೇಂದ್ರಿಗಳು (ಕಣ್ಣು- ರೂಪ, ಕಿವಿ- ಶಬ್ಧ, ನಾಸಿಕ- ವಾಸನೆ, ನಾಲಗೆ- ರುಚಿ, ಚರ್ಮ- ಸ್ಪರ್ಶ) ಒಂದಕ್ಕೊಂದು ಸಮವಿಲ್ಲ. ಈ ದೇಹವೆಂಬ ಬಂಡಿಯನ್ನು ಈ ಐವರು ಮಾನಿಸರು ಓಡಿಸುತ್ತಿದ್ದಾರೆ. ಅವುಗಳ ಇಚ್ಛೆಯನ್ನು ಸರಿಯಾಗಿ ಅರಿತು, ಅವುಗಳನ್ನು ಹೋಗಲಾಡಿಸದಿದ್ದರೆ ಗಾಲಿಯ (ಬದುಕಿನ) ಅಚ್ಚುಗಳು ಮುರಿದುಬಿದ್ದು ಚಲನೆ ಇಲ್ಲವಾಗುತ್ತದೆ. ಬದುಕು ಸ್ಥಾವರವಾಗುತ್ತದೆ. ನೋಟ, ಶಬ್ಧ, ವಾಸನೆ, ರುಚಿ, ಸ್ಪರ್ಶ- ಈ ಐದು ಇಂದ್ರಿಯಗಳೇ ಮನುಷ್ಯನ ತೊಡಕುಗಳು.
ಹೀಗಾಗಿಯೇ ಅಲ್ಲಮ-
“ಶಬ್ದವೆಂಬೆನೆ ಶ್ರೋತ್ರದೆಂಚಲು, ಸ್ಪರ್ಶವೆಂಬನೆ ತ್ವಕ್ಕಿನೆಂಜಲು
ರೂಪವೆಂಬೆನೆ ನೇತ್ರದೆಂಜಲು, ರುಚಿಯೆಂಬೆನೆ ಜಿಹ್ವೆಯೆಂಜಲು
ಪರಿಮಳವೆಂಬನೆ ಘ್ರಾಣದೆಂಜಲು, ನಾನೆಂಬೆನೆ ಅರಿವಿನೆಂಜಲು
ಎಂಜಲೆಂಬ ಭಿನ್ನವಳಿದ ಬೆಳಗಿನೊಳಗಣ ಬೆಳಗು ಗುಹೇಶ್ವರಲಿಂಗವು”
ಎಂದು ನುಡಿದನು. ಇದು ಅಲ್ಲಮನ ಬಯಲಿನ ವಿಜ್ಞಾನ.
‘ನಾನು’ ಎಂಬ ಆರನೆಯ ಇಂದ್ರಿಯವೇ ಮನಸ್ಸು. ಬೌದ್ಧ ತಾತ್ವಿಕತೆಯು ಆರನೆಯ ಇಂದ್ರಿಯದ ಕುರಿತು ಹೆಚ್ಚಿನದಾಗಿ ಬೆಳಕು ಚೆಲ್ಲಿದೆ. ಈ ಆರು ಇಂದ್ರಿಯಗಳ ಸಂಯೋಜನೆಯನ್ನು ಒಟ್ಟಿಗೆ ನೋಡಬೇಕಾಗುತ್ತದೆ. ಬುದ್ಧನ ಪ್ರಜ್ಞಾವಿಜ್ಞಾನ ನಮ್ಮದಾಗದಿದ್ದರೆ ‘ಕಾರುಣ್ಯ’ ನೆಲೆಸುವುದಿಲ್ಲ. ಕರುಣಾಮೈತ್ರಿ ನಮ್ಮೊಳಗೆ ಇರುವುದಿಲ್ಲ. ಕಲಾ ಅಭಿವ್ಯಕ್ತಿಯೂ ಆರು ಇಂದ್ರಿಯಗಳಿಗೆ ಸಿಕ್ಕಿ ನರಳುತ್ತದೆ.
ಕೊನೆಯ ಮಾತು: ಕ್ರೌರ್ಯ ಮತ್ತು ಕಾರುಣ್ಯ ಎರಡೂ ನಮ್ಮೊಳಗೆ ಇವೆ. ಕ್ರೌರ್ಯವು ಮನಸ್ಸಿನ ಅಭಿವ್ಯಕ್ತಿಯಾದರೆ, ಕಾರುಣ್ಯವು ಪ್ರಜ್ಞೆಯ ನೆಲೆಯದ್ದು. ಕಾರುಣ್ಯವನ್ನು ಹೆಚ್ಚಿಸುವ, ದ್ವಿಗುಣಗೊಳಿಸುತ್ತಾ ಹೋಗುವ, ನಮ್ಮ ಉಸಿರಾಟದ ಲಯವನ್ನು, ಮನಸ್ಸಿನ ತೊಳಲಾಟವನ್ನು ಎಚ್ಚರಿಕೆಯಿಂದ ‘ಗಮನಿಸುವ’ ಕಾರ್ಯ ಹೆಚ್ಚಾದಂತೆ ನಮ್ಮ ಪ್ರತಿಭಾ ಶಕ್ತಿಯು ನಿಜವಾದ ಸೃಜನಾತ್ಮಕತೆಯನ್ನು ಪಡೆದುಕೊಳ್ಳಲು ಸಾಧ್ಯ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.