ಅಲಹಾಬಾದಿನಲ್ಲಿ ನಡೆದ ‘ಪ್ಯಾಲೆಸ್ತೀನ್ ಚಳವಳಿ ಸಮ್ಮೇಳನ’ ದ ಅಧ್ಯಕ್ಷತೆಯನ್ನು ಬಿ. ಶ್ಯಾಮ್ ಸುಂದರ್ ವಹಿಸಿದ್ದರು. ಅಂದು ಅವರ ಮಾಡಿದ ಭಾಷಣವನ್ನು ದಲಿತ್ವಾಯ್ಸ್ ಪತ್ರಿಕೆಯು ತನ್ನ 2001ರ ಅಕ್ಟೋಬರ್ 16ರ ಸಂಚಿಕೆಯಲ್ಲಿ ಮೊದಲ ಬಾರಿಗೆ ಇಂಗ್ಲೀಷಿನಲ್ಲಿ ಪ್ರಕಟಿಸಿತ್ತು. ಇಸ್ರೇಲಿನ ಅಟ್ಟಹಾಸಗಳು ಎಗ್ಗಿಲ್ಲದೆ ಸಾಗುತ್ತಿರುವ ಹೊತ್ತಿನಲ್ಲಿಯೇ Dalit History Month ಅನ್ನು ಆಚರಿಸುತ್ತಿದ್ದೇವೆ. ಈ ಹಿನ್ನಲೆಯಲ್ಲಿ ಜಿಯೋನಿಸ್ಟರ ಸಂಚನ್ನು ಬಯಲಿಗೆಳೆಯುವ ಶ್ಯಾಮ್ ಸುಂದರ್ ಅವರ ಭಾಷಣವನ್ನು ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ಜ್ಞಾನಶಾಸ್ತ್ರ ವಿಭಾಗದಲ್ಲಿ ಅರೆಕಾಲಿಕ ಉಪನ್ಯಾಸಕರಾಗಿರುವ ಶಶಾಂಕ್ ಎಸ್ ಆರ್ ತಮ್ಮ ಓದಿಗಾಗಿ ಅನುವಾದಿಸಿದ್ದಾರೆ
(ಬಿ.ಶ್ಯಾಮ್ ಸುಂದರ್ ಅವರು ಹೈದರಾಬಾದ್ ಮೂಲದ ಪ್ರಖ್ಯಾತ ಚಿಂತಕರು, ಸಂಸದೀಯ ಪಟು ಮತ್ತು ‘ಭೀಮ್ ಸೇನೆ’ಯ ಸ್ಥಾಪಕರು. ಅವರು ಕರ್ನಾಟಕದ ದಲಿತ ಚಳವಳಿಗೆ ಹೈದರಾಬಾದ್- ಕರ್ನಾಟಕದಲ್ಲಿ ಅಪಾರ ಕೊಡುಗೆ ನೀಡಿದವರು. ಡಾ.ಬಿ.ಆರ್.ಅಂಬೇಡ್ಕರ್ ಅವರ ನಿಕಟವರ್ತಿಯಾಗಿಯೂ ಆಗಿದ್ದ ಶ್ಯಾಮ್ ಸುಂದರರು ದಲಿತ ಮತ್ತು ಶೋಷಿತ ಸಮುದಾಯಗಳ ಹಕ್ಕುಗಳಿಗಾಗಿ ಹೋರಾಡುವುದರ ಜೊತೆಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಮಾನವ ಹಕ್ಕುಗಳ ಪರವಾಗಿಯೂ ದನಿ ಎತ್ತಿದವರು.
ಇತ್ತೀಚಿನ ದಿನಗಳಲ್ಲಿ ಪ್ಯಾಲೆಸ್ತೀನಿನ ಮತ್ತು ಇರಾನಿನ ಮೇಲೆ ಇಸ್ರೇಲ್ ನಡೆಸುತ್ತಿರುವ ನಿರಂತರ ದಾಳಿಗಳು ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿವೆ. ಇಂತಹ ಸಂದರ್ಭದಲ್ಲಿ, ಬಿ. ಶ್ಯಾಮ್ ಸುಂದರ್ ಅವರು 1969ರಲ್ಲಿ ಅಲಹಾಬಾದ್ನಲ್ಲಿ ನಡೆದ ‘ಪ್ಯಾಲೆಸ್ತೀನ್ ಚಳವಳಿ ಸಮ್ಮೇಳನ’ದ ಅಧ್ಯಕ್ಷತೆ ವಹಿಸಿ ಮಾಡಿದ ಭಾಷಣವು ಇಂದಿಗೂ ಅತ್ಯಂತ ಪ್ರಸ್ತುತ ಎನಿಸುತ್ತದೆ. ದಲಿತ ಇತಿಹಾಸ ಮಾಸದ (Dalit History Month) ಅಂಗವಾಗಿ, ತುಳಿತಕ್ಕೊಳಗಾದವರ ಪರವಾಗಿ ದನಿ ಎತ್ತುವ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಹಾಗೂ ನ್ಯಾಯವನ್ನು ಪ್ರತಿಪಾದಿಸುವ ಅವರ ಆಶಯಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವುದು ಇಲ್ಲಿನ ಉದ್ದೇಶ. ಇಸ್ರೇಲಿನ ಜಿಯೋನಿಷ್ಟ್ ಸಿದ್ಧಾಂತವನ್ನೂ ಅದರ ಹಿಂದಿನ ಬಂಡವಾಳಶಾಹಿಗಳ ಹಿತಾಸಕ್ತಿಯನ್ನು ಅವರು ಅಂದೇ ಬಟಾಬಯಲುಗೊಳಿಸಿದ್ದರು ಮಾತ್ರವಲ್ಲ, ಭಾರತದ ದಲಿತರೂ ಮಧ್ಯಪ್ರಾಚ್ಯದ ಅರಬ್ಬರೂ ದಮನಿತ ಸಮುದಾಯಗಳೇ ಆಗಿರುವುದರಿಂದ ಭಾರತದ ಜನರು ಅರಬ್ಬರ ಸಂಕಷ್ಟಗಳಿಗೆ ಮಿಡಿಯಬೇಕೆಂದು ಪ್ರತಿಪಾದಿಸಿದ್ದರು. ಆ ಕಾರಣಕ್ಕೆ ಅವರು ಅಂದು ಮಾಡಿದ ಭಾಷಣದ ಕನ್ನಡ ಅನುವಾದವನ್ನು ಪ್ರಸ್ತುತ ಪಡಿಸುತ್ತಿದ್ದೇವೆ. ಇಂದು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಗಳ ಹಿನ್ನೆಲೆಯಲ್ಲಿ ಗಮನಿಸಿದರೆ ಅವರ ಭಾಷಣವನ್ನು ಹೊಸ ಆಯಾಮ ಮತ್ತು ದೃಷ್ಟಿಕೋನಗಳಿಂದಲೂ ನೋಡಬಹುದು)
ಸ್ನೇಹಿತರೇ,
ಅಲಹಾಬಾದಿನಲ್ಲಿ ನಡೆಯುತ್ತಿರುವ “ಪ್ಯಾಲೆಸ್ತೀನಿ ಚಳವಳಿಯ ಸಮ್ಮೇಳನ”ದ ಅಧ್ಯಕ್ಷತೆ ವಹಿಸಬೇಕು ಎಂದು ಲಖನೌನಿಂದ ಪತ್ರ ತಲುಪಿದಾಗ, ನಾನು ಆ ಪ್ರಸ್ತಾಪದ ಬಗ್ಗೆ ಸ್ವಲ್ಪ ಸಮಯ ಯೋಚಿಸಿದೆ. ನಂತರಷ್ಟೇ ನಾನದನ್ನು ಒಪ್ಪಿಕೊಂಡೆ. ಅದಕ್ಕೆ ಕಾರಣ ಅರಬ್ಬರಂತೆ ತಮ್ಮದೇ ನಾಡಿನಲ್ಲಿ, ತಮ್ಮದೇ ಸ್ವಂತ ನೆಲದಲ್ಲಿ ನಿರಾಶ್ರಿತರಾಗಿರುವ ದಮನಿತ ಮತ್ತು ತುಳಿತಕ್ಕೊಳಗಾದ ಜನರನ್ನೇ ನಾನೂ ಕೂಡಾ ಪ್ರತಿನಿಧಿಸುತ್ತಿದ್ದೇನೆ ಎಂಬುದೇ ಆಗಿದೆ. ಇಸ್ರೇಲಿನ ಆಡಳಿತಗಾರು [ಪ್ಯಾಲೆಸ್ತೀನಿಗೆ] ಎಷ್ಟು ಪರಕೀಯರೋ; ಇಂದು ನಮ್ಮನ್ನು ಆಳುತ್ತಿರುವ, ಭಾರತದ ಮೇಲೆ ಆಕ್ರಮಣ ನಡೆಸಿದ ಆರ್ಯರು ಕೂಡಾ ಈ ದೇಶಕ್ಕೆ ಅಷ್ಟೇ ಪರಕೀಯರು ಎಂಬ ವಿಚಾರ ಜಗತ್ತಿಗಿನ್ನೂ ತಿಳಿದಿಲ್ಲ. ತಮ್ಮ ಪುರೋಹಿತರ ಕೃಪೆಯಿಂದಾಗಿ ಹಾಗೂ ತಮ್ಮ ದೇವರ ಹಾಗೂ ಧರ್ಮದ ಹೆಸರಿನಲ್ಲಿ ಅವರು ನಮ್ಮ ಭೂಮಿಯನ್ನು ವಶಪಡಿಸಿಕೊಂಡರು. ನಮ್ಮ ಆಸ್ತಿಗಳನ್ನು ಕಿತ್ತುಕೊಂಡರು. ನಮ್ಮ ಸಂಸ್ಕೃತಿಯನ್ನೇ ಹಾಳುಗೆಡವಿ ಇಂದು ನಮ್ಮನ್ನು ಈ ಹಂತಕ್ಕೆ – ಅಂದರೆ, ನಾವು ಹಿಂದೂ ಸಮುದಾಯದ ದಾಸರು (ಸರ್ಫ್ಸ್) ಮತ್ತು ಆಶ್ರಿತರು (ಡಿಪೆಂಡೆಂಟ್ಸ್) ಎಂದು ಕರೆಯಲ್ಪಡುವ ಮಟ್ಟಿಗೆ ತಂದು ನಿಲ್ಲಿಸಿದ್ದಾರೆ.
ಅರಬ್ಬರು ಕೂಡಾ ಭಾರತದ ದಲಿತರಂತೆ ಗುಲಾಮರಾಗಲಿದ್ದಾರೆ
ಕಾಲ ಮಿಂಚಿ ಹೋಗುವ ಮುನ್ನ ಅರಬ್ಬರು ಒಂದುಗೂಡಿ ವಿದೇಶಿ ನುಸುಳುಕೋರರನ್ನು ಹೊರಹಾಕದಿದ್ದರೆ ಅವರ ಸ್ಥಿತಿಯೂ ನಮ್ಮಂತೆಯೇ ಆಗುತ್ತದೆ ಎಂಬ ಭಯ ನನ್ನದು. ಈ ಭಯವೇ ನನ್ನನ್ನು ಇಲ್ಲಿಗೆ ಬಂದು, ನಿಮ್ಮ ಮುಂದೆ ಈ ವಿಚಾರದ ಬಗ್ಗೆ ನನ್ನ ಅಭಿಪ್ರಾಯಗಳನ್ನು ಮಂಡಿಸುವಂತೆ ಪ್ರೇರೇಪಿಸಿತು. ನಿಜವಾಗಿಯೂ ಹೇಳಬೇಕೆಂದರೆ, ಭಾರತದ ಖಾಕ್ಸರ್ ಚಳವಳಿ ದಮನಿತ ಜನಾಂಗಗಳ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕಾಗಿ ದನಿಯೆತ್ತಿದೆ. ವಿದೇಶಿ ನೊಗದಿಂದ ಇತ್ತೀಚೆಗಷ್ಟೇ ಬಿಡಿಸಿಕೊಂಡ ಭಾರತೀಯರಾದ ನಾವು ಅರಬ್ಬರ ಹೋರಾಟವನ್ನು ಬೆಂಬಲಿಸುವುದು ಸಮಂಜಸವೇ ಆಗಿದೆ. ಕಾರಣ, ಅರಬ್ಬರು ಕೂಡಾ ವಿದೇಶಿ ಪ್ರಾಬಲ್ಯಕ್ಕೆ ಸಿಲುಕಿ ಅತೀವ ತೊಂದರೆಗೆ ಒಳಗಾಗುತ್ತಿದ್ದಾರೆ.
ಸ್ನೇಹಿತರೇ, ಜಾಗತಿಕ ರಾಜಕಾರಣದ ಸಂದರ್ಭದಲ್ಲಿ “ಇಂಟರ್ ನ್ಯಾಷನಲ್ ಜ್ಯೂರಿ” (ಅಂತರಾಷ್ಟ್ರೀಯ ಯಹೂದಿ ಸಮುದಾಯ) ಎಂಬ ಪದವನ್ನು ಮೊದಲು ಪೂರ್ತಿಯಾಗಿ ಅರ್ಥೈಸಿಕೊಳ್ಳೋಣ. ಪ್ಯಾಲೆಸ್ತೀನಿ ಚಳವಳಿಯ ತುಡಿತಗಳನ್ನು [ನಿಜವಾಗಿಯೂ ಅರಿತು] ಪ್ರಶಂಶಿಸಬೇಕೆಂದರೆ ಇದು ಅವಶ್ಯಕ. ಮೇಲುನೋಟಕ್ಕೆ ಜಗತ್ತು ಅಮೆರಿಕ ನೇತೃತ್ವದ ಬಂಡವಾಳಶಾಹಿ ದೇಶಗಳು ಮತ್ತು ರಷ್ಯಾ ನೇತೃತ್ವದ ಕಮ್ಯುನಿಸ್ಟ್ ದೇಶಗಳೆಂಬ ಎರಡು ಬಣಗಳಾಗಿ ಒಡೆದಿವೆ. ಆದರೆ ವಾಸ್ತವದಲ್ಲಿ ಬಂಡವಾಳಶಾಹಿ ಬಣವು ಮೂಲಭೂತವಾಗಿ ಯಹೂದಿ ಪ್ರೇರಿತವಾಗಿದೆ. “ಅಂತರ ರಾಷ್ಟ್ರೀಯ ಯಹೂದಿ ಸಮುದಾಯವು” ಪ್ರಪಂಚದ ರಾಜಕೀಯ ಇತಿಹಾಸದಲ್ಲಿ ಪ್ರಬಲ ಪಾತ್ರವೊಂದನ್ನು ವಹಿಸಿದೆ.
ಬ್ರಿಟನ್, ಫ್ರಾನ್ಸ್ ಮತ್ತು ವಿಶೇಷವಾಗಿ ಅಮೆರಿಕವು ಯಹೂದಿಗಳ ಪ್ರಭಾವದಲ್ಲಿವೆ ಎಂಬುದು ಹೆಚ್ಚೂ-ಕಡಿಮೆ ಎಲ್ಲರಿಗೂ ತಿಳಿದಿರುವ ಮತ್ತು ಎಲ್ಲರೂ ಒಪ್ಪಿಕೊಳ್ಳುವಂತಹ ವಿಚಾರವೇ ಆಗಿದೆ. ಆದರೆ ಕಮ್ಯುನಿಸ್ಟ್ ಚಳವಳಿಯ ಅತ್ಯುನ್ನತ ಚಿಂತಕರೂ ಕೂಡಾ ಯಹೂದಿಗಳೇ ಆಗಿದ್ದಾರೆ ಎಂದು ಹೇಳಿದರೆ, ಅನೇಕರು ಹುಬ್ಬೇರಿಸುತ್ತಾರೆ. ಕಾರ್ಲ್ ಮಾರ್ಕ್ಸ್ ಒಬ್ಬ ಯಹೂದಿ. ಟ್ರಾಟ್ಸ್ಕಿ ಮತ್ತು ಲೆನಿನ್ ಕೂಡಾ ಯಹೂದಿ ಮೂಲದವರೇ ಆಗಿದ್ದರು. ಲೆನಿನ್ ರಷ್ಯಾ ಪ್ರವೇಶಿಸಿದ ಕೂಡಲೇ, ಟ್ರಾಟ್ಸ್ಕಿ ಕೂಡ ಅಮೆರಿಕದಿಂದ 300 ಯಹೂದಿಗಳ ತಂಡದೊಂದಿಗೆ ಅಲ್ಲಿಗೆ ಬಂದಿಳಿದರು. ನಂತರ ಈ ಎಲ್ಲಾ ಯಹೂದಿಗಳು ರಷ್ಯಾದ ಇತರ ಪ್ರಗತಿಪರ ಗುಂಪುಗಳೊಂದಿಗೆ ಸೇರಿ ರಷ್ಯಾದ ಕ್ರಾಂತಿಯ ರೂಪುರೇಷೆಗಳನ್ನು ತಯಾರಿಸಿ ಅದನ್ನು ಜಾರಿಗೆ ತಂದರು.
ಯಹೂದಿ ಪಿತೂರಿಯ ರಹಸ್ಯ ಪುಸ್ತಕ
ಇಡೀ ಜಗತ್ತನ್ನೇ ತಮ್ಮ ಹತೋಟಿಗೆ ತಂದುಕೊಳ್ಳಬೇಕೆಂದು ಬಹಳ ಸಮಯದಿಂದಲೇ ಜಿಯೋನಿಸ್ಟರು ಯೋಜಿಸುತ್ತಿದ್ದಾರೆ. ಅವರು 1897 ರಿಂದ 1905 ರವರೆಗೆ ಹತ್ತು-ಹಲವು ರಹಸ್ಯ ಸಭೆಗಳನ್ನು ನಡೆಸಿದ್ದರು ಮಾತ್ರವಲ್ಲ ಜಿಯೋನಿಸಂನ ಹಿತಾಸಕ್ತಿಗಳಿಗೆ ಅನುಗುಣವಾದ ತತ್ವಗಳನ್ನೂ ಕಾರ್ಯಕ್ರಮಗಳನ್ನೂ ರೂಪಿಸಿಕೊಂಡಿದ್ದರು. ಅವರು ತಮ್ಮ ನೀತಿಗಳು, ಕಾರ್ಯತಂತ್ರಗಳು ಮತ್ತು ಬಳಸಬೇಕಾದ ತಂತ್ರಗಳ ವಿವರಗಳನ್ನೆಲ್ಲಾ ಬರವಣಿಗೆಗೆ ಇಳಿಸಿ “ದ ಪ್ರೊಟೊಕಾಲ್ಸ್ ಆಫ್ ದಿ ಲರ್ನ್ಡ್ ಎಲ್ಡರ್ಸ್ ಆಫ್ ಜಿಯೋನ್” ಎಂಬ ಪುಸ್ತಕದಲ್ಲಿ ಸಂಕಲಿಸಿದ್ದರು. ಹೀಗಿರುವಾಗ, ಈ ರಹಸ್ಯ ದಾಖಲೆಯನ್ನು ಹೊಂದಿರುವ ಎಲ್ಲರನ್ನೂ ತಕ್ಷಣವೇ ಮರಣದಂಡನೆಗೆ ಗುರಿಪಡಿಸಲಾಗುತ್ತಿತ್ತು ಎಂಬುದರಲ್ಲಿ ಆಶ್ಚರ್ಯವೇ ಇಲ್ಲ. ಇದರ ಹಿಂದಿನ ಕಾರಣ ಬಹಳ ಸ್ಪಷ್ಟ. ಈ ದಾಖಲೆಯು ಚಲಾವಣೆಗೆ ಬಂದರೆ ಜಿಯೋನಿಸಂನ ಅಂತಿಮ ವಿನ್ಯಾಸ ಜಗಜ್ಜಾಹಿರಗೊಳುತ್ತದೆ ಎಂಬುದೇ ಆಗಿತ್ತು.
ಕಾರ್ಲ್ ಮಾರ್ಕ್ಸ್ ಮತ್ತು ಲೆನಿನ್ ಮಂಡಿಸಿದ ಅಂತರಾಷ್ಟ್ರೀಯ ಕಮ್ಯುನಿಸಂನ ಪರಿಕಲ್ಪನೆಯು ಜಿಯೋನಿಸ್ಟರ ಮಹತ್ವಾಕಾಂಕ್ಷೆಯ ಈ ಯೋಜನೆಯನ್ನು ವಿಫಲಗೊಳಿಸಿಬಿಡುತ್ತಿತ್ತು. ಲೆನಿನ್ನಿನ ಮರಣದ ನಂತರ ಸ್ಟಾಲಿನ್ ಟ್ರಾಟ್ಸ್ಕಿಯನ್ನು ಸೋಲಿಸಿದ್ದು ಅಂತರಾಷ್ಟ್ರೀಯ ಕಮ್ಯುನಿಸಂ ಪರಿಕಲ್ಪನೆಯನ್ನು ಕೊನೆಗಾಣಿಸಿತು. ಇದು ಅಂತರ ರಾಷ್ಟ್ರೀಯ ಜಿಯೋನಿಸಂಗೆ ಇಂಬು ನೀಡಿತು. ಟ್ರಾಟ್ಸ್ಕಿ ಮಾರ್ಕ್ಸ್ ವಾದದ ಅಪ್ರತಿಮ ಬೆಂಬಲಿಗರಾಗಿದ್ದರು ಮಾತ್ರವಲ್ಲ, ಜಿಯೋನಿಸಮ್ಮಿನ ವಿರುದ್ಧವಾಗಿ ಅಂತರ ರಾಷ್ಟ್ರೀಯ ಕಮ್ಯುನಿಸಂನ ಬೆಂಬಲಿಗರಾಗಿದ್ದರು.
ವಿಶ್ವಸಂಸ್ಥೆ (UNO) ಸ್ಥಾಪನೆಗೊಂಡಾಗ ಆಂಗ್ಲೋ-ಅಮೆರಿಕನ್ ಜಿಯೋನಿಸಮ್ಮಿನ [ಪ್ರತಿಪಾದಕರು] ಅಂತರ ರಾಷ್ಟ್ರೀಯ ಮಟ್ಟದಲ್ಲಿ ಅಧಿಕಾರವನ್ನು ವಶಪಡಿಸಿಕೊಳ್ಳಲು ಮತ್ತೊಂದು ಅವಕಾಶವನ್ನು ಕಂಡುಕೊಂಡರು. ಹೀಗೆ ಮಾಡಿದರೆ ಕಾಲಾಂತರದಲ್ಲಿ ಹಿಂದುಳಿದ ಏಷ್ಯನ್ ಮತ್ತು ಆಫ್ರಿಕನ್ ಜನರ ಮೇಲೆ ತಮ್ಮ ಆರ್ಥಿಕ ಪ್ರಾಬಲ್ಯವನ್ನು ಸ್ಥಾಪಿಸಿಕೊಂಡು ಆ ಮೂಲಕ ಜನ ಚಳವಳಿಯನ್ನು ಸೋಲಿಸಬಹುದು ಎಂಬುದನ್ನು ಆಂಗ್ಲೋ-ಅಮೆರಿಕನ್ ಜಿಯೋನಿಸಂ ಕಂಡುಕೊಂಡಿತು.
ಸ್ನೇಹಿತರೇ, ವಾಸ್ತವದಲ್ಲಿ ಆಂಗ್ಲೋ-ಅಮೆರಿಕನ್ ಜಿಯೋನಿಸಂ ತನ್ನ ಅಂತರ ರಾಷ್ಟ್ರೀಯ ಮಟ್ಟದ ಕುತಂತ್ರಗಳನ್ನು ಚಲಾವಣೆಗೆ ತರಲು ಬಳಸುವ ವಾಹನಗಳಲ್ಲಿ ವಿಶ್ವಸಂಸ್ಥೆಯೂ ಒಂದಾಗಿದೆ ಎಂಬುದನ್ನು ನೀವು ನಂಬುವಿರಾ? ವಿಶ್ವಸಂಸ್ಥೆಯ ಅತ್ಯಂತ ಪ್ರಮುಖ ಶಾಖೆಗಳಲ್ಲಿ, ಕನಿಷ್ಠ 73 ಯಹೂದಿಗಳು ಅತ್ಯುನ್ನತ ಮಟ್ಟದ ಹುದ್ದೆಗಳನ್ನು ಹೊಂದಿದ್ದಾರೆ. ವಿಶ್ವಸಂಸ್ಥೆಯ ಸೆಕ್ರೆಟರಿಯೆಟ್ಟಿನಲ್ಲಿ, ಯುನೆಸ್ಕೋ (UNESCO)ವಿನ 22 ಅತ್ಯಂತ ಪ್ರಮುಖ ವಿಭಾಗಗಳ ಮುಖ್ಯಸ್ಥರು ಯಹೂದಿಗಳೇ ಆಗಿದ್ದಾರೆ. ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ (ILO) ಮೂರು ಶಾಖೆಗಳು ಇಂತಹ ಯಹೂದಿ ಅಧಿಕಾರಿಗಳ ಕೈಯಲ್ಲಿವೆ. ಆಹಾರ ಮತ್ತು ಕೃಷಿ ಸಂಸ್ಥೆಯ (FAO) ಪ್ರಮುಖ ವಿಭಾಗಗಳ ಮುಖ್ಯಸ್ಥರಾಗಿ 11 ಜನರು ಯಹೂದಿಗಳಿದ್ದಾರೆ. ವಿಶ್ವ ಬ್ಯಾಂಕ್ ಮತ್ತು ಅಂತರ ರಾಷ್ಟ್ರೀಯ ಹಣಕಾಸು ನಿಧಿ (IMF)ಯಲ್ಲಿ ಕ್ರಮವಾಗಿ ಆರು ಮತ್ತು ಒಂಬತ್ತು ಇಲಾಖೆಗಳನ್ನು ಮುನ್ನಡೆಸುತ್ತಿರುವ ಮುಖ್ಯಸ್ಥರು ವಿಶ್ವ ಯಹೂದಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ನ್ಯೂಯಾರ್ಕ್ನ ಪ್ರಸಿದ್ಧ ಯಹೂದಿ ವಕೀಲ ಹೆನ್ರಿ ಕ್ಲೈನ್ ತಮ್ಮ “ಜಿಯೋನ್ಸ್ ರೂಲ್ ದಿ ವರ್ಲ್ಡ್” ಎಂಬ ಪುಸ್ತಕದಲ್ಲಿ ಹೀಗೆ ಬರೆದಿದ್ದಾರೆ:
“ವಿಶ್ವಸಂಸ್ಥೆ ಜಿಯೋನಿಸಮ್ಮೇ ಆಗಿದೆ. 1897-1905ರ ನಡುವೆ ರೂಪಿಸಲಾದ ಪ್ರೊಟೊಕಾಲ್ಸ್ ಆಫ್ ದಿ ಲರ್ನ್ಡ್ ಎಲ್ಡರ್ಸ್ ಆಫ್ ಜಿಯೋನ್ ನಲ್ಲಿ ಹಲವು ಬಾರಿ ಉಲ್ಲೇಖಿಸಲಾದ ಸೂಪರ್ ಗವರ್ನಮೆಂಟ್ ವಿಶ್ವಸಂಸ್ಥೆಯೇ ಆಗಿದೆ.”
ಯಹೂದಿಗಳು ಅರಬ್ಬರನ್ನು ದಾರಿತಪ್ಪಿಸಿದರು
ಯಹೂದಿ ಇಸ್ರೇಲೈಟ್ ಅಲೈಯನ್ಸ್ ಯೂನಿವರ್ಸೆಲ್ಲೇ ನ ಸದಸ್ಯರಾದ ಜೀನ್ ಇಜೌಲೆಟ್ 1931ರಲ್ಲಿ “ಪ್ಯಾರಿಸ್ ಲಾ ಕ್ಯಾಪಿಟಲ್ ಡೆಸ್ ರಿಲಿಜಿಯನ್ಸ್“ ನ ಲೇಖನದಲ್ಲಿ ಹೀಗೆ ಬರೆದಿದ್ದಾರೆ:
“ಕಳೆದ ಶತಮಾನದ ಇತಿಹಾಸದಿಂದ ಅರ್ಥವಾಗುವುದು ಏನೆಂದರೆ, ಮುನ್ನೂರು ಯಹೂದಿ ಬಂಡವಾಳಿಗರು ಇಂದು ಜಗತ್ತನ್ನು ಆಳುತ್ತಿದ್ದಾರೆ ಎಂಬುದು. ಇವರೆಲ್ಲರೂ ಲಾಡ್ಜುಗಳ ಮಾಲೀಕರೇ ಆಗಿದ್ದಾರೆ [ಎಂಬುದನ್ನೂ ಗಮನಿಸಬೇಕು].”
ಜಿಯೋನಿಸ್ಟರು ಅಂತರ ರಾಷ್ಟ್ರೀಯ ಕಮ್ಯುನಿಸಂನ ಹೆಸರಿನಲ್ಲಿ ಜನರ ಕಣ್ಣಿಗೆ ಮಣ್ಣೆರಚಲು ಸಹ ಪ್ರಯತ್ನಿಸಿದ್ದಾರೆ. ಜಿಯೋನಿಸಮ್ಮಿನ ಮೂಲ ಸಂಚುಕೋರ ಥಿಯೋಡರ್ ಹ್ಲರ್ಜ್ ಅವರ ಬರವಣಿಗೆಯಿಂದ ಅಂತಹ ಮನೋಭಾವದ ಮಾದರಿಯನ್ನು ಅರಿಯಬಹುದಾಗಿದೆ. ಅವರು ತಮ್ಮ “ದಿ ಜ್ಯೂಯಿಷ್ ಸ್ಟೇಟ್“ (1896) ಪುಸ್ತಕದಲ್ಲಿ ಹೀಗೆ ಹೇಳುತ್ತಾರೆ:
“ನಾವು ಮುಳುಗಿದಾಗ, ಕ್ರಾಂತಿಕಾರಿ ಕಾರ್ಮಿಕ ವರ್ಗವಾಗುತ್ತೇವೆ. ಹೀಗೆ, ಕ್ರಾಂತಿಕಾರಿ ಪಕ್ಷದ ಅಧೀನರಾಗಿ ಕೆಲಸ ಮಾಡುವ ಕೆಳ ಹಂತದ ಅಧಿಕಾರಿಗಳಾಗುತ್ತೇವೆ; ಆದರೆ ಮೈಕೊಡವಿ ಮೇಲೆದ್ದಾಗ, ನಮ್ಮ ಜೇಬಿನಲ್ಲಿರುವ ಹಣದ ಶಕ್ತಿಯೂ ಭಯಂಕರವಾಗಿ ಬೆಳೆಯುತ್ತದೆ.”
ಅಂತರ ರಾಷ್ಟ್ರೀಯ ಜಿಯೋನಿಸಮ್ಮಿನ ಬಗ್ಗೆ ಇಷ್ಟು ತಿಳಿದದ್ದು ಸಾಕೆನಿಸುತ್ತದೆ. ಈಗ ಮಧ್ಯಪ್ರಾಚ್ಯದ ಪರಿಸ್ಥಿತಿಯನ್ನು ಗಮನಿಸೋಣ. 1917ರಲ್ಲಿ, ಲಾರ್ಡ್ ಬಾಲ್ಫರ್ ಪ್ಯಾಲೆಸ್ತೀನಿನಲ್ಲಿ ಯಹೂದಿಗಳಿಗಾಗಿ “ತಾಯ್ನಾಡು, ಇಲ್ಲವೇ ನ್ಯಾಷನಲ್ ಹೋಮ್” ಕಲ್ಪಿಸುವುದಾಗಿ ಕುಖ್ಯಾತ ಘೋಷಣೆಯೊಂದನ್ನು ಹೊರಡಿಸಿದಾಗ ಪ್ಯಾಲೆಸ್ತೀನಿನ ಜನಸಂಖ್ಯೆಯ ಶೇ. 92 ರಷ್ಟು ಅರಬ್ಬರಿದ್ದರು ಮತ್ತು ಪ್ಯಾಲೆಸ್ತೀನಿನಲ್ಲಿ ಇದ್ದದ್ದು ಕೇವಲ 56,000 ಯಹೂದಿಗಳು. ಈ ಘೋಷಣೆಯು ಅನೈತಿಕವೂ, ಅನ್ಯಾಯಕಾರಿಯೂ ಮತ್ತು ಕಾನೂನುಬಾಹಿರವೂ ಆಗಿತ್ತು. ಅಲ್ಲದೇ ಅದು ಕೇವಲ ಬ್ರಿಟಿಷ್ ಸಾಮ್ರಾಜ್ಯಶಾಹಿ ಹಿತಾಸಕ್ತಿಗಳನ್ನು ಒಳಗೊಂಡಿತ್ತು ಎಂಬುದು ಇಡೀ ಜಗತ್ತಿಗೆ ತಿಳಿದ ವಿಷಯ.
ಇಸ್ರೇಲಿನ ರಚನೆಯಲ್ಲಿ ಅಮೆರಿಕದ ಹಸ್ತ
ವಿಶ್ವ ಯಹೂದಿ ಸಮುದಾಯಕ್ಕೆ ಪ್ಯಾಲೆಸ್ತೀನನ್ನು ಉಡುಗೊರೆಯಾಗಿ ನೀಡಿದ್ದು ಏಕಪಕ್ಷೀಯ ನಿರ್ಧಾರವಾಗಿತ್ತು. ಇಂತಹ ನಿರ್ಧಾರವನ್ನು ಕೈಗೊಳ್ಳುವಾಗ ಜನಸಂಖ್ಯೆಯಲ್ಲಿ ಬಹುಸಂಖ್ಯಾತರಾಗಿದ್ದ ಅರಬ್ಬರನ್ನು ಗಣನೆಗೆ ತೆಗೆದುಕೊಳ್ಳಲಾಗಿರಲಿಲ್ಲ. ಅಲ್ಲದೇ ಇದು ಪ್ಯಾಲೆಸ್ತೀನಿನ ಅರಬ್ಬರ ಸ್ವಯಂ-ನಿರ್ಣಯದ (self-determination) ಹಕ್ಕಿನ ನಿರಾಕರಣೆಯಾಗಿತ್ತು.
ನಂತರ ಹಿಟ್ಲರಿನ ಜರ್ಮನಿಯಲ್ಲಿ ಯಹೂದಿಗಳ ಮೇಲೆ ನಡೆದ ತೀವ್ರ ಹಿಂಸಾಚಾರಕ್ಕೆ ಪ್ರತಿಕ್ರಿಯೆಯಾಗಿ ಎಲ್ಲಡೆ ಚದುರಿಹೋಗಿದ್ದ ಅಂತರ ರಾಷ್ಟ್ರೀಯ ಯಹೂದಿಗಳಿಗೆ “ತಾಯ್ನಾಡು ಇಲ್ಲವೇ ನ್ಯಾಷನಲ್ ಹೋಮ್ ಲ್ಯಾಂಡ್” ಅನ್ನು ಒದಗಿಸಲು ಪ್ರಯತ್ನಿಸಿಲಾಯಿತು.
ಇಸ್ರೇಲ್ ಆಂಗ್ಲೋ-ಅಮೆರಿಕನ್ ರಾಜತಾಂತ್ರಿಕತೆಯ ಸೃಷ್ಟಿಯೇ ಆಗಿರುವುದು ನಮ್ಮೆಲ್ಲರಿಗೂ ತಿಳಿದಿದೆ. ಇಸ್ರೇಲಿನ ರಚನೆಯೊಂದಿಗೆ ಆಂಗ್ಲೋ-ಅಮೆರಿಕನ್ ಬಂಡವಾಳಶಾಹಿ ಹಿತಾಸಕ್ತಿಯೂ ಬೆಳೆಯುತ್ತಲೇ ಸಾಗಿತು ಎಂಬುದೂ ಕೂಡಾ ನಮಗೆ ಈಗಾಗಲೇ ತಿಳಿದಿದೆ.
ಪ್ಯಾಲೆಸ್ತೀನನ್ನು ಬ್ರಿಟಿಷಿನವರು ಆಕ್ರಮಿಸಿಕೊಂಡು ಆಡಳಿತ ನಡೆಸಿದ 1918 ಮತ್ತು 1948ರ ನಡುವಿನ 30 ವರ್ಷಗಳಲ್ಲಿ, ಜಿಯೋನಿಸ್ಟರು ಪ್ಯಾಲೆಸ್ತೀನಿನ ಕೇವಲ 3.5% ರಷ್ಟು ಭೂ-ಭಾಗವನ್ನು ಮಾತ್ರವೇ ವಶಪಡಿಸಿಕೊಳ್ಳಲು ಸಾಧ್ಯವಾಯಿತು. ಬ್ರಿಟಿಷರು ಪ್ಯಾಲೆಸ್ತೀನಿನ ಸಮಸ್ಯೆಯನ್ನು ವಿಶ್ವಸಂಸ್ಥೆಯ ಮಡಿಲಿಗೆ ಹಾಕಿದಾಗ ಇಸ್ರೇಲ್ ಭಯೋತ್ಪಾದನೆ ಮತ್ತು ಸಾಮೂಹಿಕ ಹತ್ಯೆಗಳ ಮೂಲಕ ಪ್ಯಾಲೆಸ್ತೀನಿನ ಒಟ್ಟು ವಿಸ್ತೀರ್ಣದ ಶೇ. 77 ರಷ್ಟನ್ನು ಆಕ್ರಮಿಸಿಕೊಂಡಿತು. ಅಂತರ ರಾಷ್ಟ್ರೀಯ ರೆಡ್ ಕ್ರಾಸಿನ ಪ್ರತಿನಿಧಿಯಾಗಿದ್ದ ಪ್ರತ್ಯಕ್ಷದರ್ಶಿ ದೀರ್ ಯಸ್ಸೀನ್ ಅವರ ವರದಿಯ ಪ್ರಕಾರ, ಏಪ್ರಿಲ್ 9 ರಂದು ಅರಬ್ಬರ ಗ್ರಾಮವೊಂದರ ಮೇಲೆ ಎರಡು ಯಹೂದಿ ಗುಂಪುಗಳು ದಾಳಿ ನಡೆಸಿದವು. ಈ ದಾಳಿಯಲ್ಲಿ ಅರಬ್ಬಿ ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನೂ ಸೇರಿದಂತೆ ಒಟ್ಟು 254 ಜನರ ದೇಹಗಳನ್ನು ತುಂಡು-ತುಂಡಾಗಿಸಿಲಾಯಿತು ಮಾತ್ರವಲ್ಲ, ಅವರ ದೇಹಗಳನ್ನೆಲ್ಲಾ ಬಾವಿಯೊಂದರಲ್ಲಿ ಬಿಸುಟಲಾಯಿತು. ನಂತರ, ಆಕ್ರಮಿತ ಪ್ರದೇಶಗಳಲ್ಲಿ ಇಸ್ರೇಲಿ ಸೈನಿಕರು ಅರಬ್ಬರ ಮನೆಗಳನ್ನು ಸ್ಫೋಟಿಸಿದರು. ಇಸ್ರೇಲಿ ಅಧಿಕಾರಿಗಳು ವಿಧಿಸಿದ ಕರ್ಫ್ಯೂ ಸಂದರ್ಭವನ್ನು ಬಳಸಿಕೊಂಡು ಅನೇಕರನ್ನು ಕೊಲ್ಲಲಾಯಿತು.
ಪ್ಯಾಲೆಸ್ತೀನಿನಲ್ಲಿ ಯಹೂದಿ ರಾಷ್ಟ್ರ ಸ್ಥಾಪಿನೆಗಾಗಿ ಮಂಡಿಸಲಾಗಿದ್ದ ನಿರ್ಣಯಕ್ಕೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಬಹುಮತ ದೊರೆಯಲಿಲ್ಲ. ಆದರೂ, ಆಫ್ರೋ-ಏಷ್ಯನ್ ದೇಶಗಳ ಮೇಲೆ ಅಮೆರಿಕದ ಹೇರುತ್ತಿದ್ದ ಒತ್ತಡವು ಮಧ್ಯಪ್ರಾಚ್ಯದಲ್ಲಿ ಯಹೂದಿ ರಾಷ್ಟ್ರದ ರಚನೆಗೆ ದಾರಿಮಾಡಿಕೊಟ್ಟಿತು. ಅಮೆರಿಕದ ಸೆನೆಟರ್ ಲಾರೆನ್ಸ್ ಹೆಚ್. ಸ್ಮಿತ್ ಅವರು ಕಾಂಗ್ರೆಸ್ನಲ್ಲಿ ಮಾಡಿದ ಭಾಷಣದಲ್ಲಿ
“ನಮ್ಮ ನಿಯೋಗದವರು, ನಮ್ಮ ಅಧಿಕಾರಿಗಳು ಮತ್ತು ಅಮೆರಿಕದ ಖಾಸಗಿ ನಾಗರಿಕರು ಹೇರಿದ ಒತ್ತಡವು ಅವರ[ಅರಬ್ಬರ] ವಿರುದ್ಧದ ಮತ್ತು ನಮ್ಮ ವಿರುದ್ಧ ನಾವೇ ಹೂಡಿಕೊಂಡ ಅತ್ಯಂತ ಖಂಡನೀಯ ನಡವಳಿಕೆಯಾಗಿದೆ” ಎಂದು ಪರಿತಪಿಸಿದರು.
ಪ್ಯಾಲೆಸ್ತೀನನ್ನು ವಿಭಜಿಸುವ ಯೋಜನೆಯ ಅಡಿ ಪ್ಯಾಲೆಸ್ತೀನಿನ ಒಟ್ಟು ಭೂಪ್ರದೇಶದಲ್ಲಿನ 56% ರಷ್ಟು ಭೂಪ್ರದೇಶದಲ್ಲಿ ಯಹೂದಿ ರಾಷ್ಟ್ರವನ್ನೂ, 2% ರಷ್ಟು ಭೂಪ್ರದೇಶದಲ್ಲಿ ಜೆರುಸಲೆಮ್ನ ಅಂತರ ರಾಷ್ಟ್ರೀಯ ವಲಯವನ್ನೂ ಮತ್ತು ಉಳಿದ 42% ರಷ್ಟು ಭೂ ಪ್ರದೇಶದಲ್ಲಿ ಅರಬ್ ರಾಷ್ಟ್ರವನ್ನು ಸ್ಥಾಪಿಸುವ ಪ್ರಸ್ತಾಪಿಸಲಾಗಿತ್ತು. ಆದರೆ ತೋಳ್ಬಲ ಮತ್ತು ಅಂತರ ರಾಷ್ಟ್ರೀಯ ಪಿತೂರಿಗಳಿಂದಾಗಿ ಇಸ್ರೇಲ್ಗೆ ಒಟ್ಟು ಭೂಪ್ರದೇಶದಲ್ಲಿ 77% ರಷ್ಟನ್ನು ನೀಡಲಾಯಿತು.
ವಿಶ್ವಸಂಸ್ಥೆಯ ಪರವಾಗಿ ಮಧ್ಯಸ್ಥಿಕೆ ವಹಿಸಲು ಹೋದವನ ಕೊಲೆ
ವಿಶ್ವಸಂಸ್ಥೆಯು ಕೌಂಟ್ ಫೋಲ್ಕೆ ಬರ್ನಾಡೋಟ್ ಎಂಬುವವರನ್ನು ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಪ್ಯಾಲೆಸ್ತೀನಿಗೆ ಕಳುಹಿಸಿತು. ಯಹೂದಿಗಳು ಅತನನ್ನೇ ಕೊಂದು ಬಿಟ್ಟರು. ಆತ ತನ್ನ ಕಟ್ಟಕಡೆಯ ವರದಿಯಲ್ಲಿ “ಯಹೂದಿ ರಾಷ್ಟ್ರವು ಜನಸಿದ್ದು ನವೆಂಬರ್ 29, 1947ರ ನಿರ್ಣಯದಲ್ಲಿ ಆಶಿಸಿದಂತೆ, ಶಾಂತಿಯಿಂದಲ್ಲ. ಬದಲಿಗೆ ಹಿಂಸೆ ಮತ್ತು ರಕ್ತಪಾತದಿಂದ.” ಎಂಬುದಾಗಿ ಬರೆದಿದ್ದನು.
ಅಲ್ಲದೇ, ಆತನ ಹತ್ಯೆಯ ಹಿಂದಿನ ದಿನ, ಅವನು
“ಪ್ರಸ್ತುತ ಉಂಟಾಗುತ್ತಿರುವ ಭಯೋತ್ಪಾದನೆ ಮತ್ತು ಯುದ್ಧಗಳಿಂದ ಉಂಟಾದ ಹಾನಿಗಳಿಂದಾಗಿ ತಮ್ಮ ಮನೆಗಳಿಂದಲೇ ಹೊರದೂಡಲ್ಪಟ್ಟ ಮುಗ್ಧ ಜನರಿಗೆ ಅವರ ಮನೆಗಳಿಗೆ ಹಿಂದಿರುಗುವಂತಹ ಹಕ್ಕನ್ನು ದೃಢೀಕರಿಸಬೇಕು ಮಾತ್ರವಲ್ಲ, ಅದನ್ನು ಜಾರಿಗೆ ತರಬೇಕು” ಎಂದೂ ಘೋಷಿಸಿದ್ದನು.
ನವ ಯಹೂದಿ ರಾಷ್ಟ್ರವಾದ ಮತ್ತು ಅಂತರ ರಾಷ್ಟ್ರೀಯ ಜಿಯೋನಿಸಮ್ಮಿನ ಹೊಸ ತಾಯ್ನಾಡಾಗಿರುವ ಇಸ್ರೇಲನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಗಳಲ್ಲಿ 1967ರಿಂದ ಇಲ್ಲಿಯವರೆಗೆ ಬರೋಬ್ಬರಿ 14 ಬಾರಿ ಖಂಡಿಸಲಾಗಿದೆ. ಸಾಲದೆಂಬಂತೆ, ಅರಬ್ ದೇಶಗಳ ಮೇಲಿನ ಸಶಸ್ತ್ರ ದಾಳಿಗಳಿಗಾಗಿ ಅದು 30 ಕ್ಕೂ ಹೆಚ್ಚು ಬಾರಿ ಖಂಡಿನೆಗೆ ಒಳಗಾಗಿದೆ. 1967ರ ಆಕ್ರಮಣದ ಪರಿಣಾಮವಾಗಿ, ಇಸ್ರೇಲ್ ತನ್ನ ಹಿಂದಿನ ಗಾತ್ರಕ್ಕಿಂತಲೂ ಮೂರು ಪಟ್ಟು ದೊಡ್ಡದಾದ ಭೂಪ್ರದೇಶವನ್ನು ಸ್ವಾಧೀನಪಡಿಸಿಕೊಂಡಿದೆ. ಅಲ್ಲದೇ 1.5 ಮಿಲಿಯನ್ನಿಗಿಂತಲೂ ಹೆಚ್ಚು ಅರಬ್ಬರನ್ನು ತಮ್ಮ ಮನೆಗಳಿಂದ ಮತ್ತು ಜಮೀನುಗಳಿಂದ ಹೊರದೂಡಲಾಗಿದೆ. ಡಾನ್ ಪೆರೆಟ್ಜ್ ಅವರ 1954ರಷ್ಟು [ಹಳೆಯ] ಅಂದಾಜಿನ ಪ್ರಕಾರವೇ 1948ರ ನಂತರ ಸ್ಥಾಪಿಸಲಾದ ಸರಿಸುಮಾರು 400 ಯಹೂದಿ ವಸಾಹತುಗಳಲ್ಲಿ 350 ವಸಾಹತುಗಳು ನಿರ್ಮಾಣಗೊಂಡಿದ್ದು ನಿರಾಶ್ರಿತರ ಆಸ್ತಿಗಳಲ್ಲಿಯೇ. ಅಲ್ಲದೇ, ಇಸ್ರೇಲ್ ಸ್ವಾಧೀನಪಡಿಸಿಕೊಂಡ ಕೃಷಿ ಭೂಮಿಯಲ್ಲಿ ಮೂರನೇ ಎರಡರಷ್ಟು ಜಮೀನುಗಳು ನಿರಾಶ್ರಿತರಿಗೆ ಸೇರಿದ್ದ ಜಮೀನುಗಳೇ ಆಗಿದ್ದವು.
ಅರಬ್ಬರು ಏಕೆ ಒಂದಾಗುತ್ತಿಲ್ಲ?
ಪ್ರಾರಂಭದಿಂದಲೂ ಈ ನವ ಯಹೂದಿ ರಾಷ್ಟ್ರದ ನೀತಿಗಳೆಲ್ಲಾ ಜನವಿರೋಧಿ, ಅರಬ್ ವಿರೋಧಿ ಮತ್ತು ಓರಿಯಂಟಲ್ ಯಹೂದಿಗಳ ವಿರೋಧಿಯೇ (anti-oriental jews) ಆಗಿವೆ. ಅವು ಎತ್ತಿಹಿಡಿದದ್ದು ಆಂಗ್ಲೋ-ಅಮೆರಿಕನ್ ಹಿತಾಸಕ್ತಿಗಳನ್ನು ಮಾತ್ರ. ವಿಶ್ವಸಂಸ್ಥೆಯಲ್ಲಿ ಬಹುಪಾಲು ಸದಸ್ಯರ ಆಶಯಗಳು ಮೇಲುಗೈ ಸಾಧಿಸಲು ಆಂಗ್ಲೋ-ಅಮೆರಿಕನ್ ಬಣವು ಅವಕಾಶವೇ ಕೊಡಲಿಲ್ಲ.
ಸ್ವತಃ ಯಹೂದಿಯಾಗಿರುವ ಐಸಾಕ್ ಡ್ಯೂಷರ್ ತಮ್ಮ ಮರಣೋತ್ತರ ಕೃತಿ “ದ ನಾನ್–ಜ್ಯೂಯಿಷ್ ಜ್ಯೂ, ಅಂಡ್ ಅದರ್ ಎಸ್ಸೇಸ್“ (1967) ನಲ್ಲಿ ಪ್ಯಾಲೆಸ್ತೀನಿನಲ್ಲಿ ನಡೆಯುತ್ತಿದ್ದ ಅರಬ್-ಇಸ್ರೇಲಿನ ಸಂಘರ್ಷದ ಬಗೆಗಿನ ಪರಿಸ್ಥಿತಿಯನ್ನು ಒಟ್ಟಾಗಿ ಹೀಗೆ ಮಂಡಿಸುತ್ತಾರೆ:
“ಯುರೋಪಿಯನ್ ಯಹೂದಿಗಳ ದುರಂತದ, ಆಶ್ವಿಟ್ಜ್ (Auschwitz), ಮಜ್ದಾನೆಕ್ (Majdanek) ಮತ್ತು ಘೆಟ್ಟೋಗಳಲ್ಲಿ ನಡೆಯುತ್ತಿರುವ ಹತ್ಯೆಗಳ ಸಂಪೂರ್ಣ ಜವಾಬ್ದಾರಿಯನ್ನು ನಮ್ಮ ಪಾಶ್ಚಿಮಾತ್ಯ ಬೂರ್ಜ್ವಾ ನಾಗರಿಕತೆ ಹೊರಬೇಕಾಗುತ್ತದೆ. ನಾಜಿಸಂ ಎಂಬುದು ಈ ನಾಗರಿಕತೆಯ ಕಾನೂನುಬದ್ಧ, ಆದರೆ ವಿಕೃತ ಸಂತತಿಯಾಗಿತ್ತು. ಆದರೂ ಯಹೂದಿಗಳ ಮೇಲೆ ಪಶ್ಚಿಮವು ಎಸೆಗಿದ ಅಪರಾಧಗಳಿಗೆ ಅರಬ್ಬರು ಬೆಲೆ ತೆರುವಂತೆ ಮಾಡಲಾಯಿತು. ಪಶ್ಚಿಮದ (West ನ) ಅಪರಾಧಿ ಪ್ರಜ್ಞೆಯು ಸಹಜವಾಗಿಯೇ ಇಸ್ರೇಲ್ ಪರ ಮತ್ತು ಅರಬ್ ವಿರೋಧಿಯಾಗಿದೆ. ಹಾಗಾಗಿ, ಅರಬ್ಬರು ಈಗಲೂ ಅದಕ್ಕೆ ಬೆಲೆ ತೆರುತ್ತಲೇ ಇದ್ದಾರೆ. ಈ ಸುಳ್ಳು ಅಪರಾಧಿ ಪ್ರಜ್ಞೆಯ ಹಣದಲ್ಲಿ (false conscience money) ಪಾಲು ಪಡೆದು, ಮೋಸ ಹೋಗುವುದಕ್ಕೆ ಇಸ್ರೇಲ್ ಒಪ್ಪಿಕೊಂಡಿದೆ”.
ಆಂಗ್ಲೋ-ಅಮೆರಿಕನ್ ಸಾಮ್ರಾಜ್ಯಶಾಹಿಯ ಬೆಂಬಲ ಪಡೆದಂತಹ ಯಹೂದಿಗಳು ನಡೆಸಿದ ಆಕ್ರಮಣಗಳು ಮತ್ತು ಅವರು ಬಗೆದ ದ್ರೋಹಗಳ ಇನ್ನಿತರೆ ವಿವರಗಳು ಎಲ್ಲರಿಗೂ ತಿಳಿದೇ ಇರುವ ಕಾರಣ ಮತ್ತೊಮ್ಮೆ ಅದರ ವಿವರಗಳನ್ನು ನೀಡುತ್ತಾ ನಾನು ಈಗಾಗಲೇ ತೆಗೆದುಕೊಂಡಿರುವುದಕ್ಕಿಂತಲೂ ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ. ಆದರೆ ನನ್ನನ್ನು ಗೊಂದಲಕ್ಕೀಡು ಮಾಡುವುದು ಏನೆಂದರೆ: ಅರಬ್ಬರು ಇನ್ನೂ ಏಕೆ ಒಗ್ಗಟ್ಟಾಗದೆ ತಮ್ಮೆದುರಿಗಿರುವ ಅಪಾಯವನ್ನು ಅರಿಯುತ್ತಿಲ್ಲ? ಎಂಬುದು. ಗ್ರೇಟರ್ ಇಸ್ರೇಲ್ ಯೋಜನೆಯು ಇಡೀ ಸಿರಿಯಾ, ಲೆಬನಾನ್, ಜೋರ್ಡಾನ್, ಇರಾಕ್, ದಕ್ಷಿಣ ಟರ್ಕಿ, ಸಿನಾಯ್ ಮತ್ತು ಇಡೀ ನೈಲ್ ಡೆಲ್ಟಾ ಪ್ರದೇಶ, ಹಿಜಾಜ್ ಮತ್ತು ನಜ್ದ್ನ ಉತ್ತರ ಭಾಗಗಳನ್ನು ಒಳಗೊಂಡಿದೆ ಎಂಬುದು ಅವರಿಗೆ ತಿಳಿದಿಲ್ಲವೇ?
” ಓ ಇಸ್ರೇಲ್, ನಿನ್ನ ಗಡಿಗಳು ಯೂಫ್ರೇಟಿಸ್ನಿಂದ ನೈಲ್ ವರೆಗೂ ವಿಸ್ತರಿಸಿವೆ” ಎಂಬ ಘೋಷಣೆಯನ್ನು ಯಹೂದಿ ಸಂಸತ್ತು ಅನುಮೋದಿಸಿದೆ ಎಂಬುದನ್ನು ಅವರು ಮರೆತಿದ್ದಾರೆಯೇ?
ಆಂಗ್ಲೋ-ಅಮೆರಿಕನ್ ಬಂಡವಾಳಶಾಹಿ
ಸಾವಿರಾರು ಅರಬ್ಬರನ್ನು ನಿರಾಶ್ರಿತರನ್ನಾಗಿಸಿ ನಿರ್ಗತಿಕರನ್ನಾಗಿಸಿದರೂ ಇಸ್ರೇಲಿಗೆ ತೃಪ್ತಿಯಿಲ್ಲ. ತನ್ನ ಮಹತ್ವಾಕಾಂಕ್ಷೆ ಪೂರೈಸಿಕೊಳ್ಳುವುದಕ್ಕೆ ಮಾತ್ರವಲ್ಲದೆ, ಇತರೆ ಸಾಮ್ರಾಜ್ಯಶಾಹಿ ಶಕ್ತಿಗಳ ಹಿತಾಸಕ್ತಿಗಳಿಗೂ ತನ್ನ ಕಾಣ್ಕೆ ಸಲ್ಲಿಸುವುದಕ್ಕಾಗಿ ಮಧ್ಯಪ್ರಾಚ್ಯದಂತಹ ಆಯಕಟ್ಟಿನ ಪ್ರದೇಶವನ್ನು ತನ್ನ ನಿಯಂತ್ರಣದಲ್ಲಿರಿಸಿಕೊಳ್ಳಲು ಇಸ್ರೇಲ್ ಬಯಸುತ್ತದೆ.
[ಆದರೆ], ಇಲ್ಲೊಂದು ಗಂಭೀರ ಪ್ರಶ್ನೆ ಎದುರಾಗುತ್ತದೆ. ಯಹೂದಿಗಳಿಗೆ ಅಮೆರಿಕ, ಬ್ರಿಟನ್, ಫ್ರಾನ್ಸ್ ಮತ್ತು ಇತರ ಯುರೋಪಿಯನ್ ದೇಶಗಳ ಸಂಪೂರ್ಣ ರಾಜಕೀಯ ಮತ್ತು ಮಿಲಿಟರಿ ಬೆಂಬಲವಿದೆ ಎಂದು ನಮಗೆ ತಿಳಿದಿದೆ. ಆದ್ದರಿಂದ ಅರಬ್ಬರು ಇಸ್ರೇಲ್ ನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸೋವಿಯತ್ ರಷ್ಯಾವನ್ನು ಮಾತ್ರ ಅವಲಂಬಿಸಬೇಕಿದೆ.
ಇಸ್ರೇಲ್ ನಿರಾಶ್ರಿತ ಯಹೂದಿ ಜನರನ್ನು ಮಾತ್ರವೇ ಪ್ರತಿನಿಧಿಸುವುದಿಲ್ಲ. ವಾಸ್ತವವಾಗಿ ಅದು ಆಂಗ್ಲೋ-ಅಮೆರಿಕನ್ ಬಂಡವಾಳಶಾಹಿ ಬೆಂಬಲಿತ ಅಂತರ ರಾಷ್ಟ್ರೀಯ ಜಿಯೋನಿಸಂ ಅನ್ನು ಪ್ರತಿನಿಧಿಸುತ್ತದೆ ಮತ್ತು ಮಧ್ಯಪ್ರಾಚ್ಯದಲ್ಲಿ ಮತ್ತು ಆ ಮೂಲಕ ಏಷ್ಯಾ ಮತ್ತು ಆಫ್ರಿಕಾದಲ್ಲಿ ಕಮ್ಯುನಿಸ್ಟ್ ಚಿಂತನೆಯ ಹರಡುವಿಕೆಯನ್ನು ತಡೆಯುವ ಗುರಿಯನ್ನು ಕೂಡಾ ಅದು ಹೊಂದಿದೆ. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಕಮ್ಯುನಿಸ್ಟ್ ಸಿದ್ಧಾಂತದ ವಿರುದ್ಧದ ಹೋರಾಟಕ್ಕೊಂದು ನೆಲೆಯಾಗಿದೆ. ಇದರ ತತ್ ಕ್ಷಣದ ಉದ್ದೇಶವು ಏಷ್ಯಾದ ಹಿಂದುಳಿದ ಮತ್ತು ದುರ್ಬಲ ದೇಶಗಳನ್ನು, ಅದರಲ್ಲಿಯೂ ವಿಶೇಷವಾಗಿ ಅರಬ್ಬರನ್ನು ಹತ್ತಿಕ್ಕುವುದು ಮತ್ತು ಬೆದರಿಸುವುದಾಗಿದೆ. ಈ ಹಿಂದೆ ಬ್ರಿಟಿಷ್ ಮತ್ತು ಅಮೆರಿಕನ್ ಹಿತಾಸಕ್ತಿಗಳು ಅರಬ್ಬರ ವಿರುದ್ಧ ಬಹಿರಂಗವಾಗಿ ಕಾರ್ಯಾಚರಣೆ ನಡೆಸುತ್ತಿದ್ದವು. ಆದರೆ ಸೂಯೆಜ್ ಸೋಲಿನ ಮತ್ತು ವಿಶ್ವಸಂಸ್ಥೆಯಯಲ್ಲಿ ಆಫ್ರೋ-ಏಷ್ಯನ್ ಬಣವು ನಮ್ಮ ಮಹಾನ್ ಪ್ರಧಾನಿ ಜವಾಹರಲಾಲ್ ನೆಹರೂ ಅವರ ನೇತೃತ್ವದಲ್ಲಿ ಪ್ರಮುಖ ಪಾತ್ರ ವಹಿಸಿದ ನಂತರದಲ್ಲಿ, ಬ್ರಿಟಿಷ್ ಮತ್ತು ಅಮೆರಿಕನ್ ಹಿತಾಸಕ್ತಿಗಳು ಹೀಗೆ ಬಹಿರಂಗವಾಗಿ ಕಾರ್ಯಾಚರಣೆ ನಡೆಸುವುದನ್ನು ನಿಲ್ಲಿಸಿದವು. [ಅಲ್ಲದೇ] ಇಸ್ರೇಲ್ ಅನ್ನು ಅವು ಪ್ರಮುಖ ಶಕ್ತಿಯಾಗಿ ಮುಂದು ಮಾಡಿದವು. ವಾಸ್ತವದಲ್ಲಿ ಇದು ಏಕಸ್ವಾಮ್ಯವಾದಿ ಮತ್ತು ಪ್ರಗತಿಪರ ಶಕ್ತಿಗಳ ನಡುವಿನ ಸಂಘರ್ಷ. ಸೂಯೆಜ್ನ ರಾಷ್ಟ್ರೀಕರಣದ ವಿಚಾರದಲ್ಲಿರಲಿ, ತೈಲ ಕಂಪನಿಗಳ ರಾಷ್ಟ್ರೀಕರದ ವಿಚಾರದಲ್ಲಿರಲಿ ಇಲ್ಲವೇ ನಮ್ಮದೇ ಭಾರತೀಯ ಬ್ಯಾಂಕುಗಳ ರಾಷ್ಟ್ರೀಕರಣದ ವಿಚಾರದಲ್ಲಿಯೇ ಇರಲಿ, ಇದರ ಹಿಂದೆ ಅಡಗಿರುವ ರಾಜಕೀಯ ಶಕ್ತಿಗಳ ಸಮೀಕರಣ ಒಂದೇ ಆಗಿದೆ. ಪ್ರಗತಿಪರ ಮತ್ತು ಪ್ರತಿಗಾಮಿ ಶಕ್ತಿಗಳ ನಡುವಿನ ಹೋರಾಟ ಚಾಲ್ತಿಯಲ್ಲಿದೆ.
ಪಶ್ಚಿಮದ ಕೈಗೊಂಬೆಯಾಗಿ ನಾಸರ್
ಈಗ ಅರಬ್ಬರಲ್ಲಿ ಯಾರೂ ಕೂಡಾ ಇಸ್ರೇಲ್ ಅನ್ನು ನಿರ್ಮೂಲನೆ ಮಾಡಲು ಬಯಸುವುದಿಲ್ಲ ಎಂದು ಅಧ್ಯಕ್ಷ ನಾಸರ್ ಅವರು ನ್ಯೂಯಾರ್ಕ್ ಟೈಮ್ಸ್ ನ ವರದಿಗಾರರಿಗೆ ನೀಡಿದ ಹೇಳಿಕೆಯು ನಾಸರ್ ಅವರ ವಾಸ್ತವವಾದಿ ಮತ್ತು [ಎಲ್ಲರ ಹಿತಾಸಕ್ತಿಗಳನ್ನು] ಸರದೂಗಿಸಿಕೊಂಡು ಹೋಗುವ ನೀತಿಯ ಲಕ್ಷಣವಾಗಿದೆ. ಮುಂದುವರೆದು, ಅಧ್ಯಕ್ಷ ನಾಸರ್ ಅವರು
“ಹೊರದೂಡಲ್ಪಟ್ಟ ಪ್ಯಾಲೆಸ್ತೀನಿಯನ್ನರಿಗೆ 7 ವರ್ಷಗಳ ಹಿಂದೆ ವಿಶ್ವಸಂಸ್ಥೆಯ ನಿರ್ಣಯದ ಮೂಲಕ ಖಾತ್ರಿಗೊಳಿಸಲಾಗಿದ್ದ ಜೀವಿಸುವ ಹಕ್ಕು ಮತ್ತು ತಮ್ಮ ಆಸ್ತಿಯನ್ನು ಮರಳಿಪಡೆಯುವ ಹಕ್ಕನ್ನು ಅವರು ಹೊಂದಿರಬೇಕು ಎಂಬುದನ್ನೇ ಅರಬ್ಬರು ಕೂಡಾ ಬಯಸಿದ್ದರು.” ಎಂಬ ಹೇಳಿಕೆ ನೀಡಿದರು.
ಯಹೂದಿಗಳನ್ನೂ ಸರಿದೂಗಿಸಿಕೊಂಡು ಹೋಗುವ ಅಧ್ಯಕ್ಷ ನಾಸರ್ ಅವರ ನೀತಿಗೆ ನಾನು ನಿಮಗೆ ಮತ್ತೊಂದು ಪುರಾವೆ ನೀಡುತ್ತೇನೆ:
ಬಿಬಿಸಿ ಪ್ರತಿನಿಧಿಯು ಅಧ್ಯಕ್ಷ ನಾಸರ್ ಅವರನ್ನು ಸಂದರ್ಶಿಸಿ “ಇಸ್ರೇಲ್ ಎಂಬ ರಾಜ್ಯವೊಂದನ್ನು ಕೊನೆಗಾಣಿಸಲು ನಿಮ್ಮ ಬಳಿ ಯಾವುದಾದರೂ ಉಪಾಯವಿದೆಯೇ?” ಎಂದು ಕೇಳಿದರು. ಇದಕ್ಕೆ ಉತ್ತರಿಸುತ್ತಾ, ಅವರು “ಪ್ಯಾಲೆಸ್ತೀನಿನ ನಿರಾಶ್ರಿತರು ತಾವು ಕಳೆದುಕೊಂಡ ಆಸ್ತಿಯನ್ನು ಮರಳಿ ಪಡೆಯಲಿಕ್ಕಾಗಿ ತಮ್ಮ ಮನೆಗಳಿಗೆ ಮರಳಲು ಬಯಸಿದ್ದರು. ಇಲ್ಲಿಯವರೆಗೂ ಇಸ್ರೇಲ್ ಈ ಹಕ್ಕನ್ನು ನಿರಾಕರಿಸಿದೆ” ಎಂದರು. ಅದಕ್ಕೆ ಸಂದರ್ಶಕರು “ಅರಬ್ಬರೆಲ್ಲರೂ ಪ್ಯಾಲೆಸ್ತೀನಿಗೆ ಮರಳಿದರೆ ಏನಾಗುತ್ತದೆ?” ಎಂದು ಕೇಳಿದರು. ಅದಕ್ಕೆ ಕಣ್ಣು ಕೂಡಾ ಮಿಟುಕಿಸದ ನಾಸರ್ “ಇದು (ಅರಬ್ಬರು ಮತ್ತು ಇಸ್ರೇಲ್ ನಡುವಿನ) ಉದ್ವಿಗ್ನತೆಯನ್ನು ನಿವಾರಿಸುತ್ತದೆ” ಎಂಬುದಾಗಿ ಉತ್ತರಿಸಿದರು.
3-2-1969 ರಂದು ನ್ಯೂಸ್ವೀಕ್ ಗೆ ನೀಡಿದ ಮತ್ತೊಂದು ಸಂದರ್ಶನದಲ್ಲಿ ನಾಸರ್, “ಇಸ್ರೇಲ್ ಒಂದು ದೇಶವಾಗಲು ಇರುವ ಏಕೈಕ ಮಾರ್ಗವೆಂದರೆ ಅದು ಧರ್ಮಾಧಾರಿತವಾಗದೆ ಎಲ್ಲಾ ಧರ್ಮಗಳನ್ನು ಆಧರಿಸಿದ ದೇಶವಾಗುವುದು. ಅದು ಯಹೂದಿಗಳು, ಮುಸ್ಲಿಮರು ಮತ್ತು ಕ್ರೈಸ್ತರು – ಹೀಗೆ ಎಲ್ಲರ ದೇಶವಾಗಬೇಕು. ಶತಮಾನಗಳಿಂದಲೂ ಅವರು ಒಟ್ಟಿಗೆ, ಹೆಚ್ಚಿನ ಸಮಸ್ಯೆಗಳಿಲ್ಲದೆಯೇ ವಾಸಿಸುತ್ತಿದ್ದರು” ಎಂದರು.
ಹೀಗಿದ್ದರೂ ಸಹ ಇಸ್ರೇಲಿನ ಅಧಿಪತಿಗಳು ಅರಬ್ ಪ್ರದೇಶಗಳನ್ನು ತಮ್ಮ ಹಿಡಿತದಲ್ಲಿರಿಸಿಕೊಂಡು ಅಧ್ಯಕ್ಷ ನಾಸರ್ ಅವರನ್ನು ಅವಮಾನಿಸಲು ಪ್ರಯತ್ನಿಸುತ್ತಿದ್ದಾರೆ.
ಅವರು ದ್ವಿ-ರಾಷ್ಟ್ರೀಯತೆಯನ್ನು ಹೊಂದಿರುವಂತಹ ಅರಬ್-ಇಸ್ರೇಲ್ ದೇಶ (bi-national Arab-Israel state)ವನ್ನು ಒಂದು ಆಯ್ಕೆಯಾಗಿಯೂ ಸಹ ಪರಿಗಣಿಸಲು ಸಿದ್ಧರಿಲ್ಲ. ಹೊಸದಾಗಿ ಆಕ್ರಮಿಸಿಕೊಳ್ಳಲಾಗಿರುವ ಪ್ರದೇಶಗಳಲ್ಲಿ ಅರಬ್ಬರನ್ನು ಒಳಗೊಳ್ಳುವ ಇಸ್ರೇಲಿನ ಸಾಮರ್ಥ್ಯದ ಕುರಿತಾದ ಪ್ರಶ್ನೆಗೆ ಉತ್ತರವಾಗಿ ಮೋಷೆ ದಯಾನ್
“ಆರ್ಥಿಕವಾಗಿ ಅದು ಸಾಧ್ಯ. ಆದರೆ ಅದು ನಮ್ಮ ಭವಿಷ್ಯದ ಗುರಿಗಳಿಗೆ ಅನುಗುಣವಾಗಿಲ್ಲ ಎಂದೇ ನಾನು ಭಾವಿಸುತ್ತೇನೆ. ಅದು ಇಸ್ರೇಲನ್ನು ಯಹೂದಿ ರಾಷ್ಟ್ರವನ್ನಾಗಿಸುವ ಬದಲು ದ್ವಿ-ರಾಷ್ಟ್ರೀಯತೆಯನ್ನು (bi-national) ಹೊಂದಿರುವ ಇಲ್ಲವೇ ಅರಬ್ ಬಹುಸಂಖ್ಯಾತರನ್ನು ಹೊಂದಿರುವ ಯಹೂದಿ ರಾಷ್ಟ್ರವಾನ್ನಾಗಿ (poly-Arab Jewish nation) ಪರಿವರ್ತಿಸುತ್ತದೆ. ನಾವು ಹೊಂದಲು ಬಯಸುವುದು ಯಹೂದಿ ರಾಷ್ಟ್ರವನ್ನು” ಎಂಬುದಾಗಿ ತಿಳಿಸಿದರು.
ಸ್ನೇಹಿತರೇ, ಇಸ್ರೇಲನ್ನು ಗುರುತಿಸುವುದೆಂದರೆ ಪ್ಯಾಲೆಸ್ತೀನಿನ ಅರಬ್ಬರ ಅಸ್ತಿತ್ವದ ಹಕ್ಕನ್ನೇ ನಿರಾಕರಿಸುವುದು ಎಂದರ್ಥ. ಜಿಯೋನಿಸ್ಟರು ಮತ್ತವರ ಬೆಂಬಲಿಗರು ಹಿಟ್ಲರನ ತಂತ್ರಗಳನ್ನು ಅನುಸರಿಸುತ್ತಿದ್ದಾರೆ ಮತ್ತು ರಾಜಕೀಯ ವಿಚಾರಗಳಲ್ಲಿ ಜನಾಂಗೀಯ ಮತ್ತು ಧಾರ್ಮಿಕ ದ್ವೇಷಗಳನ್ನು ಬಿತ್ತುತ್ತಿದ್ದಾರೆ. ಅಲ್ ಅಕ್ಸಾ ಮಸೀದಿಗೆ ಬೆಂಕಿ ಹತ್ತಿಸಿದ್ದರ ಹಿಂದೆ ಅಡಗಿರುವುದು ಮತ್ತು ಹಿಟ್ಲರ್ ಅಧಿಕಾರಕ್ಕೆ ಬಂದ ಕೂಡಲೇ ಬರ್ಲಿನ್ನಲ್ಲಿ ನಡೆದ ‘ರೈಚ್ಸ್ಟ್ಯಾಗ್ ಫೈರ್’ (Reichstag Fire)ನ ಹಿಂದಿದ್ದ ತಂತ್ರಗಳು ಮತ್ತು ಉದ್ದೇಶಗಳು ಒಂದೇ ಆಗಿದೆ. ಆದರೆ ಏಕೆ? ಏಕೆಂದರೆ ನಾಸರ್ ಆಂಗ್ಲೋ-ಅಮೆರಿಕನ್ ಆರ್ಥಿಕ ಪ್ರಾಬಲ್ಯದ ಮುಂದೆ ಶರಣಾಗಲು ನಿರಾಕರಿಸಿ, ಸೂಯೆಜ್ ಬಿಕ್ಕಟ್ಟು ಮತ್ತು ಅಸ್ವಾನ್ ಅಣೆಕಟ್ಟಿನ ನಿರ್ಮಾಣ – ಈ ಎರಡೂ ವಿಚಾರಗಳಲ್ಲಿ ಅವರು ರಷ್ಯಾದೆಡೆಗೆ ಒಲವು ತೋರಿದರು; ಮತ್ತು ಬಹಿರಂಗವಾಗಿ ರಷ್ಯಾದೊಂದಿಗೆ ಗುರುತಿಸಿಕೊಂಡರು ಎಂಬುದು.
ಮೊದಲನೆಯದಾಗಿ ಮಧ್ಯಪ್ರಾಚ್ಯದ ಬಗೆಗಿನ ಆಂಗ್ಲೋ-ಅಮೆರಿಕನ್ ಷಡ್ಯಂತ್ರವನ್ನು ವಿರೋಧಿಸುವ; ಮತ್ತು ಎರಡನೆಯದಾಗಿ ಏಷ್ಯಾ ಮತ್ತು ಆಫ್ರಿಕಾದ ರಾಷ್ಟ್ರಗಳನ್ನು ಒಂದು ಸಿದ್ಧಾಂತಕ್ಕಾಗಿ ಒಗ್ಗೂಡಿಸುವ ಮೂಲಕ ಅಧ್ಯಕ್ಷ ನಾಸರ್ ಮತ್ತು ಅರಬ್ ನಾಯಕರು ಇನ್ನೂ ಕೂಡಾ ತಮಗಿರುವ ಐತಿಹಾಸಿಕ ಪಾತ್ರವನ್ನು ನಿರ್ವಹಿಸಬೇಕಿದೆ. ಇದರಲ್ಲಿ ಅವರು ರಷ್ಯಾ ಮತ್ತು ಚೀನಾದಿಂದ ಸಹಾಯಹಸ್ತ ಪಡೆಯಬಹುದು. ಸೂಯೆಜ್ ಬಿಕ್ಕಟ್ಟಿನ ಸಮಯದಲ್ಲಿಯೂ ಚೀನಾ ಪ್ರಮುಖ ಪಾತ್ರ ವಹಿಸಿತ್ತು.





