ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಜೈಲಿನಲ್ಲಿರುವ ಕನ್ನಡ ಸಿನಿಮಾ ನಟಿ ರನ್ಯಾ ರಾವ್ ಅವರಿಗೆ ಒಂದು ವರ್ಷದ ಬಳಿಕ ಇದೀಗ ಜಾಮೀನು ಲಭಿಸಿದೆ. ಆರ್ಥಿಕ ಅಪರಾಧಗಳ ತಡೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
2025ರ ಮಾರ್ಚ್‌ನಲ್ಲಿ ರನ್ಯಾ ಅವರು ದುಬೈನಿಂದ ಬೆಂಗಳೂರಿಗೆ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ‘ರೆಡ್ ಹ್ಯಾಂಡ್’ಆಗಿ ಸಿಕ್ಕಿಬಿದ್ದಿದ್ದರು. ಅವರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಅವರ ದೇಹದಲ್ಲಿ ಬಚ್ಚಿಟ್ಟಿದ್ದ 12.56 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ 14.2 ಕೆಜಿಯನ್ನು ವಶಪಡಿಸಿಕೊಳ್ಳಲಾಗಿತ್ತು.
ಇದನ್ನು ಓದಿದ್ದೀರಾ? ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಜಾಲ ಆಫ್ರಿಕಾದಿಂದ ದುಬೈಗೆ ಭಾರತಕ್ಕೆ ವಿಸ್ತರಿಸಿದೆ: ಇಡಿ
ಇನ್ನು ಇತ್ತೀಚೆಗೆ ಜಾರಿ ನಿರ್ದೇಶನಾಲಯ (ಇಡಿ) ನಟಿ ರನ್ಯಾ ರಾವ್ ಆಫ್ರಿಕಾದಿಂದ ದುಬೈಗೆ ಅಲ್ಲಿಂದ ಭಾರತಕ್ಕೆ 102 ಕೋಟಿ ರೂ. ಚಿನ್ನದ ಕಳ್ಳಸಾಗಣೆ ದಂಧೆಯನ್ನು ನಡೆಸುತ್ತಿದ್ದರು ಎಂದು ಹೇಳಿತ್ತು. ಸಂಸ್ಥೆಯು ತನ್ನ ಆರೋಪಪಟ್ಟಿಯಲ್ಲಿ ಬಳ್ಳಾರಿ ಮೂಲದ ಚಿನ್ನದ ವ್ಯಾಪಾರಿ ತರುಣ್ ಕೊಂಡೂರು ಅವರನ್ನು ನಟಿಯ ಸಹಚರ ಎಂದು ಹೆಸರಿಸಿತ್ತು.
ರನ್ಯಾ ಮತ್ತು ಅವರ ಸಹಚರರು 2024ರ ಮಾರ್ಚ್ ಮತ್ತು 2025ರ ಮಾರ್ಚ್ ನಡುವೆ 102.55 ಕೋಟಿ ರೂ. ಮೌಲ್ಯದ 127.28 ಕೆಜಿ ಚಿನ್ನವನ್ನು ಭಾರತಕ್ಕೆ ಕಳ್ಳಸಾಗಣೆ ಮಾಡಿದ್ದಾರೆ ಎಂದು ಹೇಳಿತ್ತು.
ಇನ್ನು ರನ್ಯಾ ತಂದೆ (ಮಲತಂದೆ) ಕೆ. ರಾಮಚಂದ್ರ ರಾವ್ ಹಿರಿಯ ಐಪಿಎಸ್ (IPS) ಅಧಿಕಾರಿಯಾಗಿದ್ದಾರೆ. ರನ್ಯಾ ತನ್ನ ತಂದೆಯ ಹೆಸರು ಹೇಳಿಕೊಂಡೇ ಕಸ್ಟಮ್ಸ್ ಅಧಿಕಾರಿಗಳಿಂದ ತಪ್ಪಿಸಿಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ. ಹಾಗೆಯೇ ಈ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಆ ಸಮಯದಲ್ಲಿ ರಾವ್ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿತ್ತು. ನಂತರ 2025ರ ಆಗಸ್ಟ್‌ನಲ್ಲಿ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿಯಾಗಿ ಮರುನೇಮಕ ಮಾಡಲಾಯಿತು. ಆದರೆ 2026ರ ಜನವರಿಯಲ್ಲಿಆಕ್ಷೇಪಾರ್ಹ ವಿಡಿಯೋಗಳು ವೈರಲ್ ಆದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.





