‘ದಲಿತ ಸಂಘಟನೆ ಮತ್ತು ರಾಜಕೀಯ ಅಸ್ಮಿತೆ’ ಕುರಿತು ಅತ್ಯಂತ ಸಂದಿಗ್ದ ಕಾಲದಲ್ಲಿ ಈ ಚರ್ಚೆ ಮಾಡಬೇಕಾಗಿ ಬಂದಿದೆ. ‘ದಲಿತ ಸಂಘಟನೆ ಮತ್ತು ರಾಜಕೀಯ ಅಸ್ಮಿತೆ’ ಕುರಿತು ಮಾತಾನಾಡುವ ಸಂದರ್ಭದ(ಜನಪರ ಉತ್ಸವ) ಆಯೋಜನೆ ಹಿಂದೆ ಜನಚಳವಳಿಯ ಮರುಹುಟ್ಟು ಮತ್ತು ದಲಿತರ ಸ್ವಾಭಿಮಾನಿ ರಾಜಕಾರಣದ ಕಳಕಳಿಯೊಂದು ಅಡಗಿದೆ ಎಂದು ಭಾವಿಸಿದ್ದೇನೆ.
ದಲಿತ ಚಳವಳಿ ಎಂದಾಕ್ಷಣ ಮೈ ರೋಮಗಳು ನಿಮಿರು ನಿಲ್ಲುವ, ರಕ್ತ ಕುದಿಯುವ, ಕಾಲುಗಳು ಉರಿಗೊಂಡು, ಗಂಟಲು ತಾರಕದ ಘೋಷಕ್ಕೆ ಒಡ್ಡಿಗೊಂಡು ಮೊರೆಯುವುದು ಈಗ ನೆನೆಪು ಮಾತ್ರವಾಗಿಯೋ, ಹೊಸ ತಲೆಮಾರುಗಳ ಅನುಭವಕ್ಕೆ ದಕ್ಕದ ಕಥನವಾಗಿಯೋ ಉಳಿದು ಹೋಗಿರುವ ಈ ಹೊತ್ತಿನಲ್ಲಿ ‘ದಲಿತ ಸಂಘಟನೆ/ಚಳವಳಿ ಮತ್ತು ರಾಜಕೀಯ ಅಸ್ಮಿತೆ’ ಕುರಿತು ಮಾತನಾಡುವುದು ನಮ್ಮ ನೋವು ಮತ್ತು ನಲಿವುಗಳನ್ನು ಮೈದಡವಿದಂತ ಅನುಭವ.
ಇದನ್ನು ಓದಿದ್ದೀರಾ? ರಾಯಚೂರು | ದಲಿತರಿಗೆ ಪ್ರತ್ಯೇಕ ಚುನಾಯಿತ ಹಕ್ಕು ನೀಡದೆ ಸ್ವಾತಂತ್ರ್ಯ ರಾಜಕೀಯ ವಂಚನೆ; ಕೋರೆನಲ್ ಆರೋಪ
ಡಾ. ಬಾಬಾಸಾಹೇಬ್ಅಂಬೇಡ್ಕರ್ ಅವರಿಂದಾಗಿ ದೇಶದಲ್ಲಿ ದಲಿತ ಪ್ರಜ್ಞೆ ಜಾಗೃತಗೊಂಡಿತು. ಇದರ ಮುಂಬೆಳಕಲ್ಲಿ ದೇಶಾದ್ಯಂತ ದಲಿತ ಸಂಘಟನೆಗಳು/ಚಳವಳಿಗಳು ಹುಟ್ಟಿಕೊಂಡವು. ಮಹಾರಾಷ್ಟ್ರದ ‘ದಲಿತ ಪ್ಯಾಂರ್ಸ್’ ಪ್ರಭಾವಳಿಯಿಂದ ಕರ್ನಾಟಕದಲ್ಲಿ ‘ದಲಿತ ಸಂಘರ್ಷ ಸಮಿತಿ’ ಜನ್ಮ ತಾಳಿ ಪ್ರಬಲ ಚಳವಳಿ ಮುನ್ನಡೆಯಿತು ಕೂಡ.
ಈ ಚಳವಳಿಯ ಮೊಟ್ಟ ಮೊದಲ ನ್ಯಾಯ ದಕ್ಕಿದ್ದು (ಅನಸೂಯಮ್ಮ ಮೇಲಿನ ಅತ್ಯಾಚಾರ ಮತ್ತು ಶೇಷಗಿರಿಯಪ್ಪನ ಕೊಲೆ ಪ್ರಕರಣ. ಕೋಲಾರ) ಇದೇ ನೆಲದಲ್ಲಿ ಎಂಬುದು ಈ ಚಳವಳಿಯ ಕುರಿತ ಇವತ್ತಿನ ಅವಲೋಕನ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ.
ಸ್ವಾತಂತ್ರ್ಯ ಭಾರತಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಕೊಟ್ಟ ಸರ್ವಶ್ರೇಷ್ಠ ಸಂವಿಧಾನದ ಅನುಷ್ಠಾನದಲ್ಲಿ ಸರ್ಕಾರಗಳು ಮೈಮರೆಯದಂತೆ ಕಾವಲಿಗೆ ನಿಂತದ್ದು ಇದೇ ದಲಿತ ಸಂಘಟನೆಗಳು. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಎಂಬ ಸಂವಿಧಾನದ ಜೀವದ್ರವ್ಯ ಎಲ್ಲರಿಗೂ ತಲುಪಬೇಕು. ಕಾನೂನುಗಳಾಗಿ ದಲಿತರ ಬದುಕಿಗೆ ನ್ಯಾಯ ದಕ್ಕಬೇಕೆಂಬ ಗುರಿಯೊಂದಿಗೆ ಕಣ್ಗಾವಲು ಪಡೆಯಂತೆಯೂ ಕೆಲಸ ಮಾಡುತ್ತಾ ಬಂದವು.
ಯಾವುದೇ ಸಂಘಟನೆ ಚಳವಳಿಯನ್ನು ಕಟ್ಟಬೇಕಾದರೆ ಅದಕ್ಕೆ ಗಟ್ಟಿಯಾದ ತಾತ್ವಿಕ ನೆಲೆಗಟ್ಟಿರಬೇಕು. ತತ್ವವಿಲ್ಲದ ಸಂಘಟನೆ, ಸಂಘಟನೆ ಇಲ್ಲದ ತತ್ವಗಳು ಅರ್ಥಹೀನ ಮತ್ತು ಅವುಗಳಿಗೆ ಹೆಚ್ಚಿನ ಭವಿಷ್ಯವಿರಲಾರವು. ಗಟ್ಟಿಯಾದ ತತ್ವಗಳ ತಳಹದಿ ಹೊಂದಿರುವ ಸಂಘಟನೆಗಳು ರಾಜ್ಯವನ್ನು, ದೇಶವನ್ನು ಆಳಬಹುದು ಎಂಬುದಕ್ಕೆ ಜಗತ್ತಿನಾದ್ಯಂತ ಅನೇಕ ನಿದರ್ಶನಗಳಿವೆ. ವರ್ತಮಾನ ಭಾರತದಲ್ಲಿ ಎಡ ಮತ್ತು ಬಲ ತಾತ್ವಿಕತೆಯ ಪಂಥ ರಾಜಕಾರಣವನ್ನು ಗಮನಿಸಿದಾಗ ಇಲ್ಲೂ ಕೂಡ ತತ್ವಾಧಾರಿತ ಅಧಿಕಾರರಾಜಕಾರಣದ ಸಾಕಷ್ಟು ಉದಾಹರಣೆಗಳು ಸಿಗುತ್ತವೆ.
ಪ್ರೊ. ಬಿ. ಕೃಷ್ಣಪ್ಪ ಅವರು ಗಟ್ಟಿಯಾದ ತಾತ್ವಿಕತೆಯ ಅಡಿಪಾಯದ ಮೇಲೆಯೇ ತನ್ನ ಸಮಾನ ಮನಸ್ಕ ಸಂಗಾತಿಗಳೊಂದಿಗೆ ದಲಿತ ಸಂಘರ್ಷ ಸಮಿತಿಯನ್ನು ಕಟ್ಟಿದ್ದು, ಮತ್ತು ಒಂದು ಕಾಲಘಟ್ಟದವರೆಗೂ ದಲಿತ ಚಳವಳಿಯನ್ನು ತೀವ್ರವಾಗಿ. ಫಲಪ್ರದವಾಗಿ ಮುನ್ನಡೆಸಿದ್ದನ್ನು ಮರೆಯಲಾಗದು.
‘ದಲಿತ’ ಎಂಬುದು ಶೋಷಿತ ಜಾತಿ ಸೂಚಕಪದವಾಗಿ ಬಳಕೆಯಲ್ಲಿದ್ದ ಕಾಲದಲ್ಲಿ ‘ದಲಿತ’ ಎಂದರೆ ಶೋಷಿತನು, ತುಳಿತಕ್ಕೊಳಗಾದವನು, ಎಲ್ಲಾ ಜಾತಿಯ ಬಡವರು, ಕೂಲಿಕಾರ್ಮಿಕರು ಎಂಬ ವಿಶಾಲ ಅರ್ಥಕ್ಕೆ ಹಿಗ್ಗಿಸಿದ ಪ್ರೊ. ಬಿ ಕೃಷ್ಣಪ್ಪನವರು ಸಂಕೀರ್ಣವಾಗಿರುವ ಭಾರತೀಯ ಸಮಾಜದಲ್ಲಿ ಜಾತಿ, ಧರ್ಮ ಮತ್ತು ವರ್ಗಗಳ ಆಧಾರದ ಮೇಲೆ ಕಟ್ಟುವ ಸಂಘಟನೆಗಳಿಗೆ ಆಯಸ್ಸಿಲ್ಲ ಎಂಬುದನ್ನು ಸ್ಪಷ್ಟವಾಗಿ ಗುರುತಿಸಿದ್ದರು. ಅಷ್ಟೇ ಅಲ್ಲ, ದಲಿತ ಚಳವಳಿ ಎಂದೆಂದಿಗೂ ತಳಸಮುದಾಯಗಳ ಕೈಯಲ್ಲೆ ಇರಬೇಕು ಎನ್ನುವ ಮೂಲಕ ಶೋಷಕ ಜಾತಿಗಳ ಬಗ್ಗೆ ಖಚಿತ ಎಚ್ಚರವಹಿಸಿದ್ದರು.
ಇದನ್ನು ಓದಿದ್ದೀರಾ? ಬೀದರ್ | ದೇಶದಲ್ಲಿ ದಲಿತರ ರಾಜಕೀಯ ಸ್ಥಿತಿಗತಿ ಚಿಂತಾಜನಕ: ವೈಜಿನಾಥ ಸೂರ್ಯವಂಶಿ
ದಲಿತ ಚಳವಳಿ ಸರಿಸುಮಾರು ಎರಡು ದಶಕಗಳ ಮುನ್ನಡೆಗೆ ಅದರ ಗಟ್ಟಿಯಾದ ತಾತ್ವಿಕ ನಿಲುವು, ಪ್ರೊ.ಬಿ ಕೃಷ್ಣಪ್ಪರಂತಹ ಮಾತೃಹೃದಯದ ನಾಯಕತ್ವ ಕಾರಣ. ಭಾರತೀಯ ಸ್ಥಾಪಿತ ಜಾತಿ ಸಮಾಜದಲ್ಲಿ ಜಾತಿಯ ಕಾರಣಕ್ಕಾಗಿ ಶೋಷಣೆಗೊಳಗಾದ, ತುಳಿತಕ್ಕೊಳಗಾದ ಜಾತಿಗಳನ್ನು ಸಂಘಟಿಸಿ, ಅವುಗಳಲ್ಲಿ ಸ್ವಾತಂತ್ರ್ಯ, ಸ್ವಾಭಿಮಾನ, ಶಿಕ್ಷಣ, ಹೋರಾಟದ ಜಾಗೃತಿ ಮೂಡಿಸುವಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅತ್ಯಲ್ಪ ಕಾಲದಲ್ಲೆ ಪರಿಣಾಮಕಾರಿ ಯಶಸ್ಸನ್ನು ಕಂಡಿತು. ಇದನ್ನು ದಲಿತ ಹೋರಾಟದ ಯಶೋಗಾಥೆ ಎನ್ನಬಹುದು.
ಡಾ.ಅಂಬೇಡ್ಕರ್ ಅವರನ್ನು ಪ್ರಖರ ಮಾದರಿಯನ್ನಾಗಿಸಿಕೊಂಡು ಶೋಷಿತ ಸಮುದಾಯಗಳು ಶಿಕ್ಷಣದ ಕಡೆಗೆ ನಡೆದವು. ಸಾಂವಿಧಾನಿಕ ಹಕ್ಕುಗಳ ಕಡೆಗೆ ಹೋರಾಟದ ಮಾದರಿಯನ್ನು ನಿರೂಪಿಸಿದವು. ಮೂಢನಂಬಿಕೆ, ಅಸಮಾನತೆ, ಅಸ್ಪೃಶ್ಯತೆ ವಿರುದ್ದ ಹೋರಾಟದ ಮಂತ್ರವನ್ನು ಪಠಿಸಿದಷ್ಟೇ ಅಲ್ಲ, ಅದನ್ನು ತಾರ್ಕಿಕ ಅಂತ್ಯದೆಡೆಗೆ ಕೊಂಡೊಯ್ಯಲು ಅವಿರತ ದುಡಿಯುತ್ತಾ ಬರಲಾಯಿತು. ಎಪ್ಪತ್ತರ ದಶಕದಿಂದ ಒಂದು ಸಾಮಾಜಿಕ ಚಳವಳಿಯಾಗಿ ಆರಂಭಗೊಂಡ ದಲಿತ ಚಳವಳಿ ದಲಿತರ ಪಾಲಿಗೆ ದೊಡ್ಡ ಭರವಸೆಯಾಗಿಯೂ, ಬಲವಾಗಿಯೂ ಕಂಡದ್ದು ಮಾತ್ರ ರೋಚಕ ಇತಿಹಾಸ.
ದಲಿತ ಸಂಘಟನೆ/ಚಳವಳಿ ಇಲ್ಲದೇ ಹೋಗಿದ್ದರೆ ನಮ್ಮ ಪಾಡೇನಾಗಿರುತ್ತಿತ್ತು ಎಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ.
ರಾಜಕೀಯ ಅಸ್ಮಿತೆ:
ದಲಿತರಿಗೆ ರಾಜಕೀಯ ಅಸ್ಮಿತೆ ಅಡಿಪಾಯ ಹಾಕಿದವರು ಮತ್ತು ಅದಕ್ಕಾಗಿ ಹೋರಾಡಿದ ಮಹಾನಾಯಕ ಬಾಬಾಸಾಹೇಬ್ ಅಂಬೇಡ್ಕರ್. ದಲಿತ ಉದ್ಧಾರದ ಕೀಲಿ ಶಾಸಕಾಂಗದಲ್ಲಿದೆ. ಎಲ್ಲವೂ ಶಾಸಕಾಂಗದಲ್ಲೇ ನಿರ್ಧಾರವಾಗುವುದರಿಂದ ಈ ಶಾಸಕಾಂಗವನ್ನು ದಲಿತರು ತಮ್ಮ ಕೈಯಲ್ಲಿಟ್ಟುಕೊಳ್ಳಬೇಕು ಎಂದು ಸ್ಪಷ್ಟವಾದ ಅರಿವು ಬಿತ್ತಿದರು.
ಸಾಮಾಜಿಕ ಚಳವಳಿ ಜೊತೆ ಜೊತೆಗೆ ರಾಜಕೀಯ ಚಳವಳಿಯನ್ನು ಮುನ್ನಡೆಸಿದ ಅಂಬೇಡ್ಕರ್ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದಲಿತರ ಸಮಸ್ಯೆಗಳಿಗೆ, ಸಂಕಷ್ಟಗಳಿಗೆ ಕಾನೂನಾತ್ಮಕ ಪರಿಹಾರಗಳು ಅಗತ್ಯ. ಅದಕ್ಕಾಗಿ ದಲಿತರು ರಾಜಕೀಯ ಅಧಿಕಾರದ ಚುಕ್ಕಾಣಿ ಹಿಡಿಯಬೇಕು. ಇದಕ್ಕಾಗಿಯೇ ದಲಿತರಿಗೆ ಪ್ರತ್ಯೇಕ ಮತಕ್ಷೇತ್ರವನ್ನು ಪ್ರತಿಪಾದಿಸಿದರು. ಆದರೆ ಇದು ಗಾಂಧಿಯ ಪ್ರಭೆಗೆ ಸಿಕ್ಕು ಪೂನಾ ಒಪ್ಪಂದದಲ್ಲಿ ಕೊಚ್ಚಿಹೋಯಿತು. ಇದು ದಲಿತರ ಸ್ವಾಭಿಮಾನಿ ರಾಜಕಾರಣದ ಅವಸಾನಕ್ಕೆ ಬರೆದ ಮುನ್ನುಡಿ.
ದಲಿತರಿಗೆ ಮೀಸಲು ಕ್ಷೇತ್ರವೊಂದು ದಕ್ಕಿದ್ದು ರಾಜಕೀಯನ್ಯಾಯದ ಅಲ್ಪ ಜಯ ಎಂತಾಗಿದ್ದರೂ ಮೀಸಲು ಕ್ಷೇತ್ರದಲ್ಲಿ ಬಲಾಢ್ಯ ಜಾತಿಗಳ ಗುಲಾಮಗಿರಿಯನ್ನು ಒಪ್ಪಿಕೊಂಡೆ ರಾಜಕೀಯವನ್ನು ನಡೆಸಬೇಕಾದ ಅನಿವಾರ್ಯತೆ ಎಂದು ಭಾವಿಸಿರುವುದು ದುರಂತ. ಈ ಕ್ಷೇತ್ರದಲ್ಲಿ ದಲಿತನೋರ್ವ ಗೆದ್ದರೂ ಆತ ದಲಿತರ ಪ್ರತಿನಿಧಿಯಾಗಿರಲು ಸಾಧ್ಯವಿಲ್ಲ. ಜಾತಿ ಸಮಾಜದ ಮುಂದೆ ದಲಿತರು ಗುಲಾಮಿರಾಜಕಾರಣಕ್ಕೆ ಬಗ್ಗಿ ನಡೆಯಬೇಕಾಗಿರುವುದು ವಿಪರ್ಯಾಸ.
ಇದನ್ನು ಓದಿದ್ದೀರಾ? ಉಪಜಾತಿ ಐಡೆಂಟಿಟಿಯಿಂದ ದಲಿತ ಅಸ್ಮಿತೆ ಸಂಕುಚಿತ: ಕೆ.ರಾಮಯ್ಯ
ಇಂತಹ ಕಾರಣಕ್ಕಾಗಿಯೇ ಪ್ರೊ. ಬಿ ಕೃಷ್ಣಪ್ಪ ಅವರು ಸಂಘಟನೆಯ ಮೂಲಕ ಪರಿಹಾರ ಸಾಧ್ಯ ಎಂದು ಹೊರಟಿದ್ದರು. ಅದಕ್ಕೆ ನಿರ್ಣಾಯಕ ಫಲ ಸಿಗಲಿಲ್ಲ. ದಲಿತರು ಶಾಸಕಾಂಗ ಪ್ರವೇಶಿಸುವುದರಿಂದ ಪರಿಹಾರ ಸಾಧ್ಯ ಎನ್ನುವುದು ಮನದಟ್ಟಾಯಿತು. ಆದರೆ ದಲಿತರು ಸಂವಿಧಾನದ ಅವಕಾಶಗಳಿಂದ ಶಾಸನ ಸಭೆಗಳಿಗೆ ಪ್ರವೇಶ ದಕ್ಕಿದಂತಾಗಿದೆ ವಿನಃ, ಜಾತಿ ಸಮಾಜ ಇದಕ್ಕೆ ಪೂರಕವಾಗಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲಿ ನಾವು ಎಡವಿದ್ದೇವೆ.
ಅಂಬೇಡ್ಕರ್ ಅವರ ರಾಜಕೀಯ ತಾತ್ವಿಕತೆಯಲ್ಲಿ ಉತ್ತರ ಪ್ರದೇಶದಲ್ಲಿ ದಲಿತ ರಾಜಕಾರಣವನ್ನು ದಿಟ್ಟವಾಗಿ ಕಟ್ಟಿದ ಕಾನ್ಸಿರಾಂ ದಲಿತ ಹೆಣ್ಣುಮಗಳು ಮಾಯಾವತಿ ಅವರನ್ನು ಮುಖ್ಯಮಂತ್ರಿಯನ್ನಾಗಿಸಿ ದಲಿತರು ರಾಜ್ಯವಾಳಬೇಕು ಎಂದು ಬಯಸ್ಸಿದ್ದ ಅಂಬೇಡ್ಕರ್ ಅವರ ಕನಸನ್ನು ನಿಜವಾಗಿಸಿದ್ದರು. ಆದರೆ ಕಾನ್ಷಿರಾಮ್ ಅವರು ಇಲ್ಲದ ದಿನಗಳಲ್ಲಿ ಮಾಯಾವತಿ ತಮ್ಮ ಸೈದ್ದಾಂತಿಕ ವಿರೋಧಿಗಳ ಜೊತೆ ರಾಜಕೀಯ ಸಖ್ಯ ಬೆಳೆಸುವ ಮೂಲಕ ವೈರುದ್ಯ ರಾಜಕಾರಣವನ್ನು ಪ್ರವೇಶಿಸಿದರು.
“ತಿಲಕ್ ತರಜೋ. ಔರ್ ತಲ್ವಾರ್, ಇನ್ಕೂ ಮಾರೋ ಜೂತೆ ಚಾರ್” (ಬ್ರಾಹ್ಮಣ ಬನಿಯಾ ಮತ್ತು ಠಾಕೂರ್, ಇವರಿಗೆ ಹೊಡೆಯಿರಿ ಚಪ್ಪಲಿ ಏಟು) ಎಂದು ಮೇಲ್ಜಾತಿ ರಾಜಕಾರಣ ವಿರುದ್ದ ಹೋರಾಡಿ ರಾಜಕೀಯ ಅಧಿಕಾರ ಹಿಡಿದಿದ್ದರೋ, ದಲಿತರ ರಾಜಕೀಯ ಅಸ್ಮಿತೆಯನ್ನಾಗಿಸುವ ಬಹುಜನ ರಾಜಕಾರಣವನ್ನು ಮಾಡಿದರೋ ಅದೇ ಮಾಯಾವತಿ ನಂತರದ ದಿನಗಳಲ್ಲಿ ಸೈದ್ದಾಂತಿಕ ವಿರೋಧಿ ಶಕ್ತಿಗಳ ಜೊತೆಗೆ ಕೈ ಜೋಡಿಸಿ ಬಹುಜನರ ‘ಆನೆ’ಯನ್ನು “ಹಾತಿ ನಹೀ ಬ್ರಹ್ಮವಿಷ್ಣು ಮಹೇಶ್ವರ್ ಹೈ” (ಆನೆಯಲ್ಲ, ಬ್ರಹ್ಮ ವಿಷ್ಣು ಮಹೇಶ್ವರ್) ಎಂಬ ಸಾಂಸ್ಕೃತಿಕ ಕುಲಾಂತರಕ್ಕೆ ಒಡ್ಡುವ ಮೂಲಕ ಮೇಲ್ಜಾತಿಗಳ ವಶಹತು ರಾಜಕಾರಣಕ್ಕೆ ಬಗ್ಗಿದರು. ದಲಿತ ಸಮುದಾಯವನ್ನು ಬಲಿಯಾಗಿಸಿದರು. ಇದು ದಲಿತ ರಾಜಕಾರಣಕ್ಕೆ ಬಿದ್ದ ದೊಡ್ಡ ಪೆಟ್ಟು ಮತ್ತು ಆಘಾತ ಕೂಡ.
ದಲಿತ ಚಳವಳಿಯ ನಾಯಕತ್ವ ವಹಿಸಿದವರು ಮನುಷ್ಯ ಸಹಜ ಆಸೆ. ಆಕಾಂಕ್ಷೆಗಳಿಗೆ ತುತ್ತಾಗಿ ಜಾತಿ ಸಮಾಜದ ಮುಂದೆ ಮಂಡಿಯೂರಿಬಿಟ್ಟರು.. ಅಥವಾ ರಾಜಕೀಯ ಅಧಿಕಾರವನ್ನು ತನ್ನ ಸುಪರ್ದಿ ತೆಗೆದುಕೊಂಡ ಬಲಾಢ್ಯ ಜಾತಿಗಳು ರಾಜಕೀಯಾಧಿಕಾರದ ಆಸೆ ಆಮಿಷಗಳ ಒಡ್ಡಿ ದಲಿತ ಚಳವಳಿಯನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾದವು.
ದಲಿತ ಸಂಘರ್ಷ ಸಮಿತಿಯ ಶಿಬಿರದಲಿ (13/9/1992) ಪ್ರೊ. ಬಿ ಕೃಷ್ಣಪ್ಪ ಅವರು ಮಾತನಾಡುತ್ತಾ “ಒಂದು ರೀತಿ ಕನ್ಫೆಷನ್ ತರದಲ್ಲಿ ಮಾತಾಡುತ್ತಿದ್ದೀನಿ, ಏಕೆಂದರೆ 15 ವರ್ಷಗಳ ನನ್ನ ಚಳವಳಿಯಲ್ಲಿ ಗೊತ್ತು ಗುರಿಗಳು ಬಗ್ಗೆ ಮಾತಾಡುವಾಗ ನನಗೆ ಬಹಳ ದುಃಖವಾಗುತ್ತದೆ. ವ್ಯಥೆಯೂ ಆಗುತ್ತದೆ. ಕಣ್ಣೀರು ಬಂದು ಬಿಡುತ್ತದೆ. ಚಳವಳಿಯ ದಿಕ್ಕು ತಪ್ಪಿಹೋಗಿದೆ. ಅನ್ನೋ ಕಾರಣಕ್ಕೆ ಇದೆಲ್ಲ ಹೇಳುತ್ತಿದ್ದೇನೆ. ಡಿಎಸ್ಎಸ್ನ ತಾತ್ವಿಕ ಸಿದ್ದಾಂತವೆಂದರೆ ಅಸ್ಪೃಶ್ಯತೆ, ಬಡತನ ಹೋಗಬೇಕು. ಅಲ್ಲಿ ಸಮಾನತೆ ಬರಬೇಕು. ಹಾಗಾದಾಗ ಮಾತ್ರ ಬಡತನ ನೀಗಿದ ಹಾಗಾಗುತ್ತದೆ” ಎನ್ನುವ ಮೂಲಕ ಸಂಘಟನೆಯ ಪತನವನ್ನು ಎದುರುಗೊಳ್ಳುತ್ತಾರೆ.
ಇದಲ್ಲದೆ ದಲಿತ ರಾಜಕಾರಣ ಎದುರಿಸಬೇಕಾದ ಸಾಮಾಜಿಕ ಸಂದರ್ಭವನ್ನು ಕೃಷ್ಣಪ್ಪನವರು ಹೀಗೆ ವಿವರಿಸುತ್ತಾರೆ.
“ಚುನಾವಣೆ ಅಂದರೆ ಕಾಂಪ್ರೋಮೈಸ್ ಎಂದರ್ಥ. ಯಾವನೂ ಒಳ್ಳೆಯ ಕಾಂಪ್ರೋಮೈಸ್ ಮಾಡಿಕೊಳ್ಳುತ್ತಾನೋ ಆತ ಒಳ್ಳೆಯ ರಾಜಕಾರಣಿಯಾಗಬಲ್ಲ. ದೇವರು, ಮಠ, ದೇವಸ್ಥಾನಗಳೇ ಶೋಷಣೆಗಳ ಮೂಲ ಎಂದು ಅವುಗಳನ್ನು ನಿರಾಕರಿಸಬೇಕು, ದೂರ ಇಡಬೇಕು ಎಂದು ಅವುಗಳ ವಿರುದ್ದ ಹೋರಾಡುತಲೇ ಬಂದ ನಾವುಗಳು ಚುನಾವಣೆ ನಿಂತಾಗ ನಮ್ಮನ್ನು ಮತದಾರರು ಎತ್ತಿಕೊಂಡು ಹೋಗಿ ಅದೇ ದೇವಸ್ತಾನಗಳ ಮುಂದೆ ನಿಲ್ಲಿಸಿ ಪ್ರಸಾದ ಕೊಡುತ್ತಾರೆ. ಇದನ್ನು ನಿರಾಕರಿಸಿದರೆ ನಿಮ್ಮನ್ನು ಎತ್ತಿ ಎಸೆಯುತ್ತಾರೆ. ಇಲ್ಲಿ ರಾಜೀಬೇಕಾಗಿದೆ. ಎಲ್ಲವನ್ನೂ ಮುಚ್ಚಿಹಾಕಿಕೊಂಡು ಹೋಗಬೇಕಾಗುತ್ತದೆ.” ಇಂತಹ ಸೈದ್ಧಾಂತಿಕ ರಾಜಿಕೋರತನಕ್ಕೆ ಒಗ್ಗಿಕೊಳ್ಳದೆ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲಾಗದು ಎಂಬ ತೀರ್ಮಾನಕ್ಕೆ ದಲಿತ ರಾಜಕಾರಣಿಗಳು ಬಂದಿದ್ದಾರೆ. ಈಗ ನಡೆಯುತ್ತಿರುವುದು ಇದೇ ಆಗಿದೆ.
ನಮ್ಮ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ವಿಧಾನಸಭಾ ಕ್ಷೇತ್ರದ ಚುನಾವಣೆ ಅಭ್ಯರ್ಥಿಯಾಗಿದ್ದ ಕರಿಯಣ್ಣ(ಮಾಜಿ ಶಾಸಕ) ಅವರು ಮತಯಾಚನೆಗೆ ಹೋದಾಗ ಗ್ರಾಮವೊಂದರ ದೇವಸ್ಥಾನಕ್ಕೆ ಒಳಗೆ ಪ್ರವೇಶ ಮಾಡಲಿಲ್ಲ(ಬಿಡಲಿಲ್ಲ). ರಮೇಶ್ ಜಿಗಜಿಣಗಿ ಅಂತವರು ಇಂತಹ ಅವಮಾನಗಳನ್ನು ಈಗಲೂ ನೋವಿನಿಂದ ನೆನೆಯುತ್ತಾರೆ. ಇಡೀ ದೇಶದಲ್ಲೆ ಇಂತಹದ್ದೊಂದು ಜಾತೀಯತೆಯ ರೋಗ ಇದೆ. ಬಲಾಢ್ಯ ಜಾತಿಗಳ ಮನೆಯ ಜಗಲಿ ಮೇಲೆ ಕುಳಿತು ಅವರ ಮರ್ಜಿಯ ಮೇಲೆ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ದಯನೀಯ ಸ್ಥಿತಿ ದಲಿತರದ್ದಾಗಿದೆ. ಇವೆಲ್ಲವೂ ದಲಿತರ ಸಾಮಾಜಿಕ ಪರಿಸ್ಥಿತಿ ಇನ್ನೂ ಬದಲಾಗಿಲ್ಲ ಎನ್ನುವುದರ ಸೂಚಕ.
ಅಂಬೇಡ್ಕರ್ ಮತ್ತು ಕಾನ್ಸಿರಾಂ ಅವರ ಬಿತ್ತಿದ ರಾಜಕೀಯ ಅಸ್ಮಿತೆಯ ದಟ್ಟ ಪ್ರಭೆಯಲ್ಲಿ ಸ್ವಾಭಿಮಾನಿ ರಾಜಕಾರಣವನ್ನು ಮುನ್ನಡೆಸಬೇಕಾದ ನಾಯಕತ್ವ ದೊಡ್ಡ ಕೊರತೆಯಾಗಿ ಕಂಡಿತ್ತಾದರೂ ಇದೀಗ ಉತ್ತರ ಪ್ರದೇಶದಲ್ಲಿ ಚಂದ್ರಶೇಖರ್ ಆಜಾದ್ ರಾವಣ, ಗುಜರಾತ್ನಲ್ಲಿ ಜಿಗ್ನೇಶ್ ಮೇವಾನಿಯಂತಹ ಪ್ರಖರ ದಲಿತ ಯುವ ನಾಯಕತ್ವ ದಲಿತ ಸ್ವಾಭಿಮಾನಿ ರಾಜಕಾರಣದ ಭರವಸೆಯಾಗಿ ಕಾಣುತ್ತಿದ್ದಾರೆ. ಅಂಬೇಡ್ಕರ್ ಮತ್ತು ಕಾನ್ಷಿರಾಮ್ ಅವರ ರಾಜಕೀಯ ಸಿದ್ದಾಂತದ ಮೂಸೆಯಲ್ಲಿ ದಲಿತ ರಾಜಕಾರಣವನ್ನು ದಿಟ್ಟವಾಗಿ ಕಟ್ಟಲು ಹೊರಟಿರುವುದು ಸುರಂಗದ ಕೊನೆಯಲ್ಲಿ ಬೆಳಕಿನ ಕಿಂಡಿಯೊಂದು ಕಂಡಂತಾಗಿದೆ.
ದಲಿತ ಸಂಘಟನೆಗಳ ಪತನ ಪರ್ವ
ದಲಿತ ಸಂಘಟನೆಗಳು ಚಳವಳಿಗಳ ಮೂಲಕ ಸಾಮಾಜಿಕ ನೆಲೆಗಳನ್ನು ಬಿಟ್ಟುಕೊಡದೆ ಸಾಂಸ್ಕೃತಿಕ ಶಕ್ತಿಯನ್ನು ರೂಢಿಸಿಕೊಂಡು ವಿಸ್ತರಿಸಿದವು. ತನ್ನದೇ ಸಾಹಿತ್ಯದ ರೂಪ ಮತ್ತು ರೂಪಕಗಳನ್ನು ಸಮಾಜಕ್ಕೆ ಒಡ್ಡಿತು. ಮೇಲ್ಜಾತಿಗಳ ಭ್ರಾಮಾಧೀನ ಶ್ರೇಷ್ಠತೆಯ ಲೋಕವನ್ನು ಇದರಿಂದ ಕುಟ್ಟಿ ಕೆಡವಿತು. ಇಷ್ಟೆಲ್ಲಾ ಇದ್ದಾಗ್ಯೂ ದಲಿತ ಸಂಘಟನೆಗಳು ರಾಜಕೀಯ ಒತ್ತಾಸೆಗಳಿಂದಲೂ, ನಾಯಕತ್ವದ ಹಪಾಹಪಿತನದಿಂದಲೂ ವಿಘಟನೆಯಾಗಿದ್ದು ಮಾತ್ರ ವಿಪರ್ಯಾಸ.
“ಇಂದು ಚಳವಳಿಗಳಿಲ್ಲ. ಚಳವಳಿಗಾರರಿದ್ದಾರೆ.” ಇದನ್ನು ಹೇಗಾದರೂ ಅರ್ಥೈಸಿಕೊಳ್ಳಬಹುದು, ಅದನ್ನು ಅವರವರ ಊಹೆಗೆ ಬಿಡುತ್ತೇನೆ. ಎಪ್ಪತರ ದಶಕದಿಂದ ಸರಿ ಸುಮಾರು ಎರಡೂರೆ ದಶಕಗಳ ಕಾಲವಿದ್ದ ದಲಿತ ಸಂಘಟನೆಗಳ ವಿರಾಟ ಶಕ್ತಿಯಾಗಲಿ, ಚಳವಳಿ ತೀವ್ರತೆಯಾಗಲಿ, ಪರಿಣಾಮಗಳಾಗಲಿ ಈಗ ಕಾಣಲಾಗದು ಎನ್ನುವುದು ವಾಸ್ತವದ ಸಂಗತಿ. ಭದ್ರವಾದ ತಾತ್ವಿಕತೆಯಿಂದ ಕಟ್ಟಿದ ದಲಿತ ಚಳವಳಿ ಹೀಗೆ ಶಕ್ತಿಹೀನಗೊಳ್ಳಲು ಕಾರಣಗಳೇನು ಎಂದು ಯೋಚಿಸುವಾಗ ದಲಿತ ಚಳವಳಿಯ ತಾತ್ವಿಕತೆ ಸಡಿಲಗೊಂಡಿಲ್ಲ ನಿಜ, ಆದರೆ ಚಳವಳಿ ಸಿದ್ದಾಂತವನ್ನು, ಹೋರಾಟದ ಕಸುವನ್ನು ಹೊಸ ತಲೆಮಾರಿಗೆ ದಾಟಿಸುವಲ್ಲಿ ವಿಫಲವಾಗಿರುವುದಂತೂ ದಿಟ.
ಇದನ್ನು ಓದಿದ್ದೀರಾ? ಕಲಬುರಗಿ | ಜಾತಿ, ಲಿಂಗ ತಾರತಮ್ಯ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ
ದಲಿತ ಚಳವಳಿ ಅವನತಿ ಹಾದಿ ಹಿಡಿಯಿತು ಎಂದರೆ ಪ್ರೊ. ಕೃಷ್ಣಪ್ಪ ಮತ್ತವರ ಕಾಲಘಟ್ಟದ ನಾಯಕರಲ್ಲಿದ್ದ ಜಾತ್ಯಾತೀತ ಮನೋಭಾವ ,ವೈಚಾರಿಕ ಮನೋಭಾವ ಈಗಿಲ್ಲ. ರಾಜೀ ರಹಿತ ಹೋರಾಟದ ದಿಟ್ಟತನ ಈಗಿನ ಹೋರಾಟಗಾರರಲ್ಲಿ ಇಲ್ಲ. ಹೀಗಿರುವಾಗ ಎಲ್ಲದಕ್ಕೂ ಪರಿಹಾರ ಕಂಡುಕೊಳ್ಳುತ್ತೇವೆ ಅನ್ನೋದು ಕನಸಿನ ಮಾತು.
ಆಧುನಿಕತೆ, ಜಾಗತೀಕರಣ ಯಾವ ದಮನಿತ ಸಮುದಾಯವನ್ನು ಸಂಘಟನೆಯನ್ನು ಮಾಡಲು ಬಿಡೋದಿಲ್ಲ. ಒಡೆದು ಹಾಕುತ್ತದೆ. ಅದರ ಮೂಲ ಉದ್ದೇಶವೇ ಅದು. ಇವತ್ತಿನ ಯುವಕರು ಲಾಲಸೆ ಹುಟ್ಟಿಸೋದು. ಸಹಜವಾಗಿಯೇ ಯುವಕರಿಗೆ ಕುಡಿತ, ಮೋಜು, ಹೆಚ್ಚು ಗಮನವಿರುತ್ತದೆ. ಯಾರೂ ಮೇಲೂ ಹಿಡಿತವಿರುವುದಿಲ್ಲ. ತಂದೆ -ತಾಯಿ, ಸಮಾಜ ಯಾರ ಕೈಲೂ ಅವರಿಲ್ಲ. ಅವರು ಹಾಳಾಗಿದ್ದಾರೆ. ಆ ರೀತಿಯಲ್ಲಿ ದುರಾಸೆಗಳನ್ನು ಚೆಲ್ಲಿಬಿಟ್ಟರೆ ಸದ್ಪಥದಲ್ಲಿರಲು ಹೇಗೆ ಸಾಧ್ಯ? ಹೀಗಿರುವಾಗ ಸಮಾಜದಲ್ಲಿ ದಲಿತರನ್ನು ಉದ್ದಾರ ಮಾಡುತ್ತೇವೆ ಅನ್ನೋದು ನಿರಾಸೆ. ಸಂಘಟನೆ ಅವನತಿ ಹೊಂದುತ್ತಾ ಮುಂದೊಂದು ದಿನ ಇಲ್ಲವಾಗುತ್ತದೆ.
ಸರ್ಕಾರ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಉದ್ಧಾರಕ್ಕಾಗಿ ಹಾಸ್ಟೆಲ್ಗಳನ್ನು ಕಟ್ಟಿದೆ. ಹಿಂದಿನ ದಿನಗಳಿಗೆ ಹೋಲಿಸಿದರೆ ಈಗಿನ ದಿನಗಳಲ್ಲಿ ಹಾಸ್ಟೆಲ್ ವ್ಯವಸ್ಥೆ ಸುಧಾರಿಸಿದೆ. ವಿದ್ಯಾರ್ಥಿಗಳಿಗೆ ಮಂಚ, ಮೆತ್ತನೆ ಹಾಸಿಗೆ, ಮೇಜು, ಫ್ಯಾನು, ಉತ್ತಮವಾದ ಊಟದಂತ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲಾಗುತ್ತಿದೆ. ಜೊತೆಗೆ ಲ್ಯಾಪ್ ಟಾಪ್, ವಿದೇಶದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ನೆರವು ನೀಡಲಾಗುತ್ತಿದೆ. ಇದೆಲ್ಲವೂ ಬಾಬಾಸಾಹೇಬ್ ಅಂಬೇಡ್ಕರ್ ಕೊಟ್ಟ ಸಂವಿಧಾನದ ಫಲ, ದಲಿತ ಸಂಘಟನೆಗಳ ಹೋರಾಟದ ಫಲ. ಇಷ್ಟೆಲ್ಲಾ ಸವಲತ್ತು ಕೊಡುವ ಸರ್ಕಾರ ಈ ವಿದ್ಯಾರ್ಥಿಗಳಿಗೆ ಸಂವಿಧಾನವನ್ನು ಅರ್ಥಮಾಡಿಸುವ ಬೌದ್ಧಿಕ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ವಿಫಲವಾಗಿವೆ.
ಇದರ ಪರಿಣಾಮ ಸಂವಿಧಾನದ ಕಾರಣಕ್ಕಾಗಿ, ಮೀಸಲಾತಿ ಫಲಾನುಭವಿಗಳಾದ ದಲಿತ ಮತ್ತು ಅಲ್ಪಸಂಖ್ಯಾತ- ಹಿಂದುಳಿದವರ್ಗಗಳ ವಿದ್ಯಾರ್ಥಿಗಳು, ಯುವ ಸಮುದಾಯಗಳೇ ಬೀದಿಗೆ ಬಂದು ಇದೇ ಮೀಸಲಾತಿ ವಿರೋಧಿ ಚಳವಳಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಸಂವಿಧಾನ, ಅಂಬೇಡ್ಕರ್ ಅವರನ್ನು ನಿರಾಕರಿಸುವ ಮತೀಯ ಶಕ್ತಿಗಳ ಜೊತೆ ಕಾಲಾಳುಗಳಂತೆ ಹೆಜ್ಜೆ ಹಾಕುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ ಸನ್ನಿವೇಶ ಮತ್ತು ಕೃತಘ್ನತನ.
ಅಂಬೇಡ್ಕರ್ ಮತ್ತು ಅವರು ಬರೆದ ಸಂವಿಧಾನದಿಂದಾಗಿ ಅನ್ನ ತಿನ್ನುತ್ತಾ ಬದುಕು ಕಟ್ಟಿಕೊಳ್ಳುವ ಅವಕಾಶಗಳನ್ನು ಬಳಸಿಕೊಂಡ ಹೊಸತಲೆಮಾರು ಅಂಬೇಡ್ಕರ್ ವಿರೋಧಿಸಿದ ವಿಚಾರಧಾರೆಯ ಆರ್ಎಸ್ಎಸ್ನ ‘ನಮಸ್ತೆ ಸದಾ ವತ್ಸಲೆ ಮಾತೃಭೂಮಿ..,’ ಜೈ ಶ್ರೀರಾಂ, ಹಿಂದೂತ್ವ ಎಂಬ ವಿಧ್ವಂಸಕ ಭಜನೆಯಲ್ಲಿ ನಿರತವಾಗಿದೆ. ಈ ಹೊಸತಲೆಮಾರಿಗೆ ಅಂಬೇಡ್ಕರ್, ಕಾನ್ಸಿರಾಂ, ಪ್ರೊ. ಕೃಷ್ಣಪ್ಪ ಮತ್ತು ದಲಿತ ಚಳವಳಿಯ ವಿಚಾರಧಾರೆಗಳನ್ನು ದಾಟಿಸುವಲ್ಲಿ ನಾವು ವಿಫಲವಾಗಿದ್ದೇವೆ. ಇಂದು ಯುವ ಪೀಳಿಗೆ ಮತೀಯ ಶಕ್ತಿಗಳ ವಶವಾಗಿರುವುದಕ್ಕೆ ನಮ್ಮ ಕೊಡುಗೆಯೂ ಇದೆ ಎನ್ನುವುದನ್ನು ಮರೆಯಬಾರದು.
ದುರಾಸೆಗಳಿಂದ ಹೀಗಾಗಿದೆ. ಸ್ವಾರ್ಥಕ್ಕೆ ಬಿದ್ದಾಗ, ತ್ಯಾಗದ ಮನೋಭಾವ, ಎಲ್ಲರನ್ನೂ ತೆಕ್ಕೆಗೆ ತೆಗೆದುಕೊಂಡು ಹೋಗುವ ಮಾತೃಭಾವನೆ ಇಲ್ಲದೆ ಇದ್ದಾಗ ಯಾವ ಸಂಘಟನೆ ಉಳಿಯಲು ಸಾಧ್ಯವಿಲ್ಲ. ಕಟ್ಟಬೇಕಾದವರು, ನಡೆಸಬೇಕಾದವರೂ ರಾಜಕೀಯ ಲೋಭಿತದಿಂದ ಕಲುಷಿತಗೊಂಡಿರುವುದರಿAದ ಇದು ಸಾಧ್ಯವಾಗುತ್ತಿಲ್ಲ. ಯುವ ಪೀಳಿಗೆ ಆರ್ ಎಸ್ ಎಸ್ ನಲ್ಲಿರುವಾಗ, ಅವರ ಮೆದುಳಿನಲ್ಲಿ ಹಿಂದೂತ್ವದ ವಿಕೃತಿಯನ್ನು ತುಂಬಿರುವಾಗ ಇವರಿಂದ ಏನನ್ನು ನಿರೀಕ್ಷೆ ಮಾಡಲು ಸಾಧ್ಯ? ಸಂಘಪರಿವಾರ ನಿರೂಪಿತ ಮತೀಯ ರಾಜಕಾರಣಕ್ಕೆ ಪರ್ಯಾಯವಾಗಿ ಅದನ್ನು ಮುಖಾಮುಖಿಯಾಗಿಸುವ ವಿಚಾರಧಾರೆಯೇ ಸೋಲುತ್ತಿರುವಾಗ ಚಳವಳಿ ಮುನ್ನಡೆಸುವುದಾದರೂ ಹೇಗೆ?
ನಾನಿನ್ನೂ ‘ದಲಿತ ಚಳವಳಿ’ ಅನ್ನೋದು ಮುಗಿದ ಅಧ್ಯಾಯ ಎಂಬ ತೀರ್ಮಾನಕ್ಕೆ ಬಂದಿಲ್ಲ. ಆದರೆ ದಲಿತ ಚಳವಳಿ/ ಸಂಘಟನೆಗಳು ಗುಟುಕು ಜೀವ ಜೀಕುತ್ತಿರುವುದಂತೂ ನಿಜ, ಅದೀಗ ಐಸಿಯೂನಲ್ಲಿದೆ. ಅದೊಂದು ದಿನ ಇಲ್ಲವಾಗಿ ಚರಿತ್ರೆಯಾಗಿಯೋ, ಪಠ್ಯವಾಗಿಯೋ, ರೂಪಕವಾಗಿಯೊ, ನಾಟಕವಾಗಿಯೋ, ಕತೆಯಾಗಿಯೋ….. ಮಾತ್ರ ಉಳಿದು ಹೋಗುವುದಂತೂ ನಿಜ. ಇಂತಹದ್ದೊಂದು ಕಳವಳ ನನಗಲ್ಲದೆ ಇನ್ನಾರಿಗಾದರೂ ಇದ್ದಿದ್ದರೆ ಆದರೆ ಅದು ಆಶ್ಚರ್ಯವೇನಿಲ್ಲ. ಇಂತಹ ಕಳವಳಕ್ಕೆ ಕಾರಣಗಳೂ ಇಲ್ಲದಿಲ್ಲ.
ಕೊನೆಯದಾಗಿ……..
ದಲಿತ ಸಂಘಟನೆಗಳಿಂದ ನಮ್ಮ ಆರ್ತನಾದಗಳು ದಾಖಲಾಗಿದ್ದಂತೂ ನಿಜ, ಈಗ ದಲಿತ ಸಂಘಟನೆಗಳು ಇಳಿಜಾರಿನಲ್ಲಿವೆ. ಚಳವಳಿ ದಣಿದಿದೆ. ಬಳಲಿದೆ. ಚಳವಳಿಯ ಕಣ್ಣುಗಳಂತಿದ್ದ ನಮ್ಮ ಹಿರಿಯ ಹೋರಾಟಗಾರರು ಹಣ್ಣಾಗಿದ್ದಾರೆ. ದಲಿತರ, ದಮನಿತರ ಸ್ವಾಭಿಮಾನದ ಬದುಕು, ರಾಜಕಾರಣವನ್ನು ನೆಲೆಗೊಳಿಸಲು ಹಗಲು ರಾತ್ರಿ ಅವಿರತವಾಗಿ ದುಡಿದ ಈ ಜೀವಗಳನ್ನು ನೋಡಿದಾಗ ಕುರುಕ್ಷೇತ್ರ ಯುದ್ಧದ ಸಂದರ್ಭವೊಂದು ನೆನಪಾಗುತ್ತದೆ.
ಯುದ್ಧದಲ್ಲಿ ವಂಚನೆಯಿಂದ ನಡೆಯುವ ಕರ್ಣನ ಹತ್ಯೆಯನ್ನು ಕಂಡು “ಇವತ್ತಿನ ಸಂಜೆಯನ್ನು ಬೇಗ ಮುಗಿಸುತ್ತೇನೆ, ಏಕೆಂದರೆ ನನ್ನ ಮಗ ಕರ್ಣನ ಮುಳುಗುವಿಕೆಯನ್ನು ಮತ್ತು ನನ್ನ ಮುಳುಗಡೆಯನ್ನು ಏಕಕಾಲದಲ್ಲಿ ನೋಡಲಾಗದು” ಎಂದು ವ್ಯಥೆ ಪಡುವ ಸೂರ್ಯನಂತೆ ನಮ್ಮೊಂದಿಗಿರುವ ಈ ಹಿರಿಯ ಹೋರಾಟಗಾರರು ಕಾಣುತ್ತಾರೆ.
ಇಂದು ದೇಶದಲ್ಲಿ, ರಾಜ್ಯದಲ್ಲಿ ದಲಿತ ರಾಜಕಾರಣ ಮುನ್ನಲೆಯಲ್ಲಿ ಚರ್ಚೆ ನಡೆಯುತ್ತಿದೆ. ಇದು ಹಾಲು ಉಕ್ಕುವ ನೊರೆಯಂತೆ ಕ್ಷಣಿಕವಾದುದ್ದು. ದಲಿತರು ಪ್ರಧಾನಮಂತ್ರಿ ಆಗಬೇಕು. ಮುಖ್ಯಮಂತ್ರಿಯಾಗಬೇಕು ಎಂಬ ವಾದಗಳು ನಡೆಯುತ್ತಿರುವ ಹೊತ್ತಿನಲ್ಲಿ ದಲಿತರಿಗೆ ಅಧಿಕಾರದ ಮಾತಿರಲಿ, ಅವರನ್ನು ದೂರವಿಟ್ಟು ಚರ್ಚೆ ನಡೆಸಲಾಗುತ್ತಿದೆ.! ನನಗೆ ಮುಖ್ಯಮಂತ್ರಿಯಾಗುವ ಸಾಮರ್ಥ್ಯ ಇದೆ ಎಂದು ಹಕ್ಕು ಪ್ರತಿಪಾದಿಸುವ ಸ್ವಯಂ ದಲಿತರೇ ನಾಯಕರುಗಳೇ ಕಾಣುತ್ತಿಲ್ಲ. ಒಳಗೊಳ್ಳುವಿಕೆಯಿಂದ ಹೊರಗಿಟ್ಟಿರುವಾಗ ರಾಜಕೀಯ ಅಸ್ಮಿತೆ ರಾಜಕೀಯ ಪಕ್ಷವೊಂದರ ಸದಸ್ಯತ್ವವೋ, ನಾಯಕತ್ವವೋ ಎಂಬುದರ ಮೇಲೆ ನಿಂತಿರುತ್ತದೆ ಹೊರತು. ಸ್ವಯಂ ದಲಿತರ ಸಮುದಾಯದ ಪ್ರಾತಿನಿಧಿಕ ರೂಪವಾಗಿ, ಶಕ್ತಿಯಾಗಿ ಉಳಿಯಲು ಸಾಧ್ಯವಿಲ್ಲ. ಇದು ಸಾಧ್ಯವಾಗಬೇಕಾದರೆ ಪರ್ಯಾಯ ರಾಜಕೀಯ ಚಳವಳಿಯೊಂದು ನಡೆಯಬೇಕು, ಅದಕ್ಕಾಗಿ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಹೊಸ ತಲೆಮಾರುಗಳಿಗೆ ಸಂವಿಧಾನದ ಮಹತ್ವ-ಇತಿಹಾಸವನ್ನು, ದಲಿತ ಸಂಘಟನೆಗಳ ಹೋರಾಟದ ಮಾದರಿಯನ್ನೂ, ಚಳವಳಿಯ ತಾತ್ವಿಕತೆಗಳನ್ನು ಸಾಂಸ್ಕೃತಿಕ, ಶೈಕ್ಷಣಿಕ ಸ್ವರೂಪದಲ್ಲಿ ಮನದಟ್ಟು ಮಾಡಿಕೊಡಬೇಕು.
ಇದು ಸುಲಭದ ಮಾತಲ್ಲ ಎಂಬುದು ನನಗೆ ಗೊತ್ತಿದೆ. ಆದರೆ ಅನಿವಾರ್ಯ.. ಇಲ್ಲದೆ ಹೋದರೆ “ಜಾತಿಗ್ರಸ್ತ ಸಮಾಜ” ದಲಿತರನ್ನು ಹೊಸ ಹೊಸ ರೂಪದಲ್ಲಿ ಶೋಷಣೆ ಮಾಡುತ್ತಾ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಮುಂದುವರೆಯುತ್ತದೆ.
ಬಾಬಾಸಾಹೇಬ್ ಅಂಬೇಡ್ಕರ್ ಅವರ ತಾತ್ವಿಕ ಸಿದ್ದಾಂತದ ಮುಂಬೆಳಕಿನಲ್ಲಿ ಪ್ರೊ. ಕೃಷ್ಣಪ್ಪ ಕಟ್ಟಿದ ದಲಿತ ಚಳವಳಿಯ ದಿಟ್ಟತನದಲ್ಲಿ, ಕಾನ್ಷಿರಾಮ್ ಕಟ್ಟಿದ ಬಹುಜನ ರಾಜಕಾರಣವನ್ನು ಮತ್ತೆ ನಾವು ಕಟ್ಟುವುದೇ ಅದರೆ ನಮ್ಮ ರಾಜಕೀಯ ಅಸ್ಮಿತೆ ಉಳಿಯಲು ಸಾಧ್ಯ ಎಂಬ ವಿಶ್ವಾಸ ನನಗಿದೆ.

ಎನ್ ರವಿಕುಮಾರ್
ಪತ್ರಕರ್ತ, ಲೇಖಕ