ಸಿ.ಎ.ಎ. ವಿರುದ್ಧ ಶಾಂತಿಯುತ ಪ್ರತಿಭಟನೆಗಳನ್ನು ಮುನ್ನಡೆಸಿದ ಹಲವರ ಮೇಲೆ ಮತ್ತು ಪ್ರತಿಭಟನೆಯಲ್ಲಿ ಭಾಗಿಯೂ ಆಗಿರದ ಕೆಲವರ ಮೇಲೆ ಕಪೋಲಕಲ್ಪಿತ ಪ್ರಕರಣವನ್ನು ಅಸ್ಪಷ್ಟ ಸಾಕ್ಷ್ಯಗಳ ಮೇಲೆ ನಿರ್ಮಿಸಲಾಯಿತು. ಸರ್ಕಾರದ ಜನವಿರೋಧಿ ನೀತಿಗಳನ್ನು ಪ್ರಶ್ನಿಸಿ ಪ್ರತಿಭಟಿಸುವುದನ್ನು ಭಯೋತ್ಪಾದಕ ಚಟುವಟಿಕೆ ಮತ್ತು ರಾಷ್ಟ್ರ ವಿರೋಧಿ ಚಟುವಟಿಕೆಗಳಾಗಿ ಪ್ರಸ್ತುತಪಡಿಸಲಾಯಿತು. ಜೈಲು ಸೇರಿದ 18 ಜನರಲ್ಲಿ 16 ಜನ ಮುಸಲ್ಮಾನರು!
ದೆಹಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ. ಇದೇ ಫೆಬ್ರವರಿ 5ರಂದು ಮತದಾನವು ನಡೆಯಲಿದೆ. ಚುನಾವಣೆಯ ಅಬ್ಬರದ ಪ್ರಚಾರಗಳು, ಟಿಕೇಟು ಹಂಚಿಕೆ, ವಿವಿಧ ಪಕ್ಷಗಳ ಚುನಾವಣಾ ಕಾರ್ಯತಂತ್ರಗಳು ಕಣ್ಣಿಗೆ ರಾಚುತ್ತಿರುವ ಈ ಹೊತ್ತಿನಲ್ಲಿ 2020ರ ದೆಹಲಿ ಚುನಾವಣೆಗೆ ಮುನ್ನ 2019ರ ಡಿಸೆಂಬರ್ ತಿಂಗಳಲ್ಲಿ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಿಎಎ ವಿಷಯವನ್ನು ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಕ್ಕಾಗಿ ಮಂಡಿಸಿ ಆ ಮೂಲಕ ಮುಸ್ಲಿಮರನ್ನು ಗುರಿಯಾಗಿಸಿ ಚುನಾವಣೆ ಗೆಲ್ಲಲು ಮಾಡಿದ ತಂತ್ರಗಳು, ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ದೊರಕದಿದ್ದಾಗ ಆ ಫಲಿತಾಂಶದ ಆಕ್ರೋಶವನ್ನು ಬಿಜೆಪಿ ಮತ್ತು ಸಂಘ ಪರಿವಾರ ವ್ಯವಸ್ಥಿತವಾಗಿ ಅಮಾಯಕರ ಮೇಲೆ ತೀರಿಸಿಕೊಂಡ ರೀತಿ ನೆನಪಾಗದೇ ಇರದು.
ಸಿ.ಎ.ಎ ಮತ್ತು ಎನ್.ಆರ್.ಸಿ ವಿರೋಧಿಸಿ ದೇಶದ್ಯಾಂತ 2019ರ ಡಿಸೆಂಬರ್ ತಿಂಗಳಲ್ಲಿ ಪ್ರತಿಭಟನೆಗಳು ಆರಂಭಗೊಂಡಿದ್ದವು. ದೆಹಲಿಯ ಶಾಹೀನ್ ಭಾಗ್ ಮಾದರಿಯಲ್ಲಿ ಅನಿರ್ದಿಷ್ಟಾವಧಿ ಹೋರಾಟಗಳನ್ನು ಹಮ್ಮಿಕೊಂಡ ಮಹಿಳೆಯರು ದೇಶದ ಮೂಲೆ ಮೂಲೆಯಲ್ಲಿ ಹೋರಾಟದ ಕಿಚ್ಚು ಹಚ್ಚಿದರು. ಜೆಎನ್‌ಯು ಮತ್ತು ಜಾಮಿಯ ಮಿಲ್ಲಿಯಾ ಇಸ್ಲಾಮಿಯ ವಿಶ್ವವಿದ್ಯಾಲಯದಲ್ಲಿ ಹೋರಾಟಗಳು ನಡೆಯುತ್ತಿರುವಾಗ ಜಾಮಿಯ ವಿಶ್ವವಿದ್ಯಾಲಯದ ಗ್ರಂಥಾಲಯದ ಒಳಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಲಾಟಿಚಾರ್ಜ್ ಮಾಡಿದ ದೆಹಲಿ ಪೊಲೀಸರ ವಿರುದ್ಧ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬೀದಿಗಿಳಿದರು. ಒಟ್ಟಾರೆ ದೆಹಲಿಯ ಗಲ್ಲಿ ಗಲ್ಲಿಗಳಲ್ಲಿ ಮಹಿಳೆಯರು, ವಿದ್ಯಾರ್ಥಿಗಳು, ಮಾನವ ಹಕ್ಕು ಹೋರಾಟಗಾರರು ಕೇಂದ್ರ ಸರ್ಕಾರದ ಕರಾಳ ಕಾನೂನುಗಳನ್ನು ವಿರೋಧಿಸಿ ಹೋರಾಟ ತೀವ್ರಗೊಳಿಸಿದ್ದರು.
ಸತತ ಹೋರಾಟಗಳು ದೇಶದಾದ್ಯಂತ ಚಳವಳಿಯ ರೂಪ ಪಡೆದುಕೊಂಡ ಸಂದರ್ಭ ಫೆಬ್ರವರಿ 23ರಂದು ಭಾರತ್ ಬಂದ್ ಗೆ ಕರೆ ನೀಡಿದ್ದ ಭೀಮ್ ಆರ್ಮಿಯೊಂದಿಗಿನ ಒಗ್ಗಟ್ಟಿನ ಪ್ರದರ್ಶನಕ್ಕಾಗಿ ಫೆಬ್ರವರಿ 22ರಂದು ಈಶಾನ್ಯ ದೆಹಲಿಯ ಜಾಫ್ರಾಬಾದ್ ಮೆಟ್ರೋ ನಿಲ್ದಾಣದ ಬಳಿ ಸುಮಾರು 1000 ಜನರು ಪ್ರತಿಭಟನೆಯನ್ನು ಪ್ರಾರಂಭಿಸಿದರು. ಇದು ಸೀಲಾಂಪುರ-ಜಾಫ್ರಾಬಾದ್-ಮೌಜ್‌ಪುರ ರಸ್ತೆಯ ಒಂದು ಭಾಗವನ್ನು ಹಾಗೂ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನದ ಹಾದಿಯನ್ನು ಬಂದ್ ಮಾಡಿತ್ತು.

ಮಾನವ ಹಕ್ಕುಗಳ ರಕ್ಷಣೆಗಾಗಿ ನಡೆಯುತ್ತಿದ್ದ ಪ್ರತಿಭಟನೆಯ ವಿರುದ್ಧ ಫೆಬ್ರವರಿ 23ರಂದು ಬಿಜೆಪಿ ನಾಯಕ ಕಪಿಲ್ ಮಿಶ್ರಾ ರಸ್ತೆಗಳಲ್ಲಿ ಕುಳಿತಿದ್ದ ಸಿಎಎ ವಿರೋಧಿ ಪ್ರತಿಭಟನೆಗಳನ್ನು ದಮನಿಸಲು ಪೊಲೀಸರಿಗೆ “ಅಲ್ಟಿಮೇಟಮ್” ನೀಡಿದರು. ಹೊಸ ಪೌರತ್ವ ಕಾನೂನನ್ನು ವಿರೋಧಿಸುವವರ ರಸ್ತೆ ತಡೆಗೆ ಪ್ರತಿಕ್ರಿಯೆಯಾಗಿ ಸಿಎಎಯನ್ನು ಬೆಂಬಲಿಸಿ ಮೌಜ್‌ಪುರ ಚೌಕ್‌ನಲ್ಲಿ ಜನರು ಸೇರಬೇಕೆಂದು ಕಪಿಲ್ ಮಿಶ್ರಾ ನೀಡಿದ ಪ್ರಚೋದನಕಾರಿ ಭಾಷಣದಿಂದ ಮಿಶ್ರಾ ಭಾಷಣ ಮಾಡಿದ ಕೆಲವೇ ಗಂಟೆಗಳಲ್ಲಿ, ಕರವಾಲ್ ನಗರ, ಮೌಜ್‌ಪುರ ಚೌಕ್, ಬಾಬರ್‌ಪುರ ಮತ್ತು ಚಾಂದ್ ಬಾಗ್‌ಗಳಲ್ಲಿ ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲೆ ಸಿಎಎ ಪರ ಇದ್ದ ಪ್ರತಿಭಟನಾಕಾರರು ದಾಳಿ ಮಾಡಿದರು.
ಗುಂಪನ್ನು ಚದುರಿಸಲು ಪೊಲೀಸರು ಲಾಟಿ ಚಾರ್ಜ್ ಮಾಡಿ, ಅಶ್ರುವಾಯು ಪ್ರಯೋಗಿಸಿದರು. ಮರುದಿನ ಮಧ್ಯಾಹ್ನ, ಗೋಕಲ್‌ಪುರಿ ಮತ್ತು ಕರ್ದಂಪುರಿ ಪ್ರದೇಶಗಳು ಸೇರಿದಂತೆ ಈಶಾನ್ಯ ದೆಹಲಿಯ ಹಲವಾರು ಪ್ರದೇಶಗಳಲ್ಲಿ ಹಿಂಸಾತ್ಮಕ ಘರ್ಷಣೆಗಳು ಭುಗಿಲೆದ್ದವು. ದೆಹಲಿಯ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನಡೆದ ಈ ಘಟನೆ ಹಿಂಸಾಚಾರಕ್ಕೆ ಸಾಕ್ಷಿಯಾಯಿತು. ಅಲ್ಲಿ 53 ಜೀವಗಳು ಬಲಿಯಾದವು ಮತ್ತು ಹಲವಾರು ಮಸೀದಿಗಳು, ಅಂಗಡಿಗಳು ಮತ್ತು ಮುಸ್ಲಿಮರಿಗೆ ಸೇರಿದ ಮನೆಗಳನ್ನು ಸುಟ್ಟು ಹಾಕಿದರು ಮತ್ತು ಲೂಟಿ ಮಾಡಿದರು. ಪೊಲೀಸರೇ ಆಸ್ತಿ ನಾಶ ಮತ್ತು ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಅವಕಾಶ ನೀಡಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಹಿಂಸಾಚಾರ ಮತ್ತು ಪ್ರತ್ಯಕ್ಷದರ್ಶಿಗಳ ಸಾಕ್ಷ್ಯಗಳನ್ನು ಸೆರೆಹಿಡಿಯಲಾದ ವೀಡಿಯೊಗಳು ಹಿಂದುತ್ವ ಸಂಘಟನೆಗಳು ಸಂಘಟಿತ ಹತ್ಯಾಕಾಂಡವನ್ನು ಮುನ್ನಡೆಸಿ ಕಾರ್ಯಗತಗೊಳಿಸಿವೆ ಎಂದು ಸ್ಪಷ್ಟವಾಗಿ ಸೂಚಿಸುವಂತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ನಾಯಕರಿಂದ ದ್ವೇಷ ಭಾಷಣ ಮತ್ತು ಬೆದರಿಕೆ ಸಂದೇಶಗಳನ್ನು ದಾಖಲಿಸಿದ ನಿದರ್ಶನಗಳ ಹೊರತಾಗಿಯೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಬದಲಾಗಿ, ಸಿಎಎಯನ್ನು ವಿರೋಧಿಸಿದ ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು ಶಾಂತಿಯುತ ಪ್ರತಿಭಟನಾಕಾರರ ಮೇಲೆ ಕಠಿಣ ಯುಎಪಿಎ ಅಡಿಯಲ್ಲಿ ಸುಳ್ಳು ಆರೋಪ ಹೊರಿಸಿ ಜೈಲಿಗೆ ತಳ್ಳಲಾಯಿತು.
ಯುಎಪಿಎ ಮತ್ತು ಐಪಿಸಿಯ ಇತರ ಸೆಕ್ಷನ್‌ಗಳ ಅಡಿ ದೆಹಲಿಯಲ್ಲಿ ಕೋಮು ಹಿಂಸಾಚಾರವನ್ನು ಪ್ರಚೋದಿಸಲು ಮತ್ತು ದೇಶವನ್ನು ಅಸ್ಥಿರಗೊಳಿಸಲು ಸಂಚು ರೂಪಿಸಿದ್ದಾರೆ ಎಂದು 18 ಜನರ ಮೇಲೆ ದೆಹಲಿ ಪೊಲೀಸರಿಂದ ಸುಳ್ಳು ಆರೋಪ ಹೂಡಿ ಮೊಕದ್ದಮೆ ದಾಖಲಿಸಲಾಯಿತು.
ಸಿಎಎ ವಿರುದ್ಧ ಶಾಂತಿಯುತ ಪ್ರತಿಭಟನೆಗಳನ್ನು ಸಂಘಟಿಸಿದ ಮತ್ತು ಮುನ್ನಡೆಸಿದ ಹಲವರ ಮೇಲೆ ಮತ್ತು ಪ್ರತಿಭಟನೆಯಲ್ಲಿ ಭಾಗಿಯು ಆಗಿರದ ಕೆಲವರ ಮೇಲೆ ಕಪೋಲಕಲ್ಪಿತ ಪ್ರಕರಣವನ್ನು ದುರ್ಬಲ ಮತ್ತು ಅಸ್ಪಷ್ಟ ಸಾಕ್ಷ್ಯಗಳ ಮೇಲೆ ನಿರ್ಮಿಸಲಾಯಿತು. ಸರ್ಕಾರದ ಜನವಿರೋಧಿ ನೀತಿಗಳನ್ನು ಪ್ರಶ್ನಿಸಿ ಪ್ರತಿಭಟಿಸುವುದನ್ನು ಭಯೋತ್ಪಾದಕ ಚಟುವಟಿಕೆ ಮತ್ತು ರಾಷ್ಟ್ರ ವಿರೋಧಿ ಚಟುವಟಿಕೆಗಳಾಗಿ ಪ್ರಸ್ತುತಪಡಿಸಲಾಯಿತು.

ಜೈಲು ಸೇರಿದ 18 ಜನರಲ್ಲಿ 16 ಜನ ಮುಸಲ್ಮಾನರು! ಅವರಲ್ಲಿ ಹೆಚ್ಚಿನ ಆರೋಪಿಗಳು ಸಾಮಾಜಿಕ ನ್ಯಾಯ ಮತ್ತು ಶಾಂತಿಗಾಗಿ ವಿವಿಧ ಅಭಿಯಾನಗಳನ್ನು, ಹೋರಾಟಗಳನ್ನು ಮುನ್ನಡೆಸುತ್ತಿದ್ದ ಯುವ ಮುಂದಾಳುಗಾಳು. ದೆಹಲಿ ಪೊಲೀಸರು ಮತ್ತು ಕೇಂದ್ರ ಸರ್ಕಾರ ನಡೆಸಿದ ಅಧಿಕಾರ ದುರುಪಯೋಗ ಬಂಧಿತರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವುದರ ಜೊತೆಗೆ ಮಾನವ ಹಕ್ಕುಗಳ ಹೋರಾಟದಲ್ಲಿ ನಿರ್ಣಾಯಕ ಕಾರ್ಯವನ್ನು ದುರ್ಬಲಗೊಳಿಸಿತು.
ಅಷ್ಟೇ ಅಲ್ಲ ಪೊಲೀಸರು ಬಂಧಿಸಿದ 16 ಮುಸಲ್ಮಾನರಲ್ಲಿ ಇಬ್ಬರು ಹೋರಾಟ ಮತ್ತು ಚಳವಳಿಯೊಂದಿಗೆ ಯಾವುದೇ ರೀತಿಯ ಸಂಪರ್ಕ ಹೊಂದಿರಲಿಲ್ಲ. ಎಫ್‌ಐಆರ್ 59/2020 ಸಾಂವಿಧಾನಿಕ ಪ್ರಜಾಪ್ರಭುತ್ವಕ್ಕೆ ಧಕ್ಕೆಯನ್ನಂತು ಖಂಡಿತಾ ಉಂಟು ಮಾಡಿದೆ.
ಬಂಧಿತರಾದ ಉಮರ್ ಖಾಲಿದ್, ಶರ್ಜಿಲ್ ಇಮಾಮ್, ಖಾಲಿದ್ ಸೈಫಿ ಸಲೀಮ್ ಖಾನ್, ಅಥರ್ ಖಾನ್, ಸಫೂರಾ ಜರ್ಗರ್, ಫೈಜಾನ್ ಖಾನ್, ನತಾಶಾ ನರ್ವಾಲ್, ಇಶ್ರತ್ ಜಹಾನ್, ಮೀರನ್ ಹೈದರ್, ಗುಲ್ಫಿಶಾ ಫಾತಿಮಾ, ತಾಹಿರ್ ಹುಸೈನ್, ಶಿಫಾ-ಉರ್-ರೆಹಮಾನ್, ಆಸಿಫ್ ಇಕ್ಬಾಲ್ ತನ್ಹಾ, ಶಾದಾಬ್ ಅಹ್ಮದ್, ತಸ್ಲೀಮ್ ಅಹ್ಮದ್, ಸಲೀಮ್ ಮಲಿಕ್, ಮೊಹಮ್ಮದ್ ಇವರಲ್ಲಿ ಕೆಲವರು ಜಾಮೀನಿನ ಮೇಲೆ ಹೊರಗಿದ್ದಾರೆ.
2025ರ ಜನವರಿ 7ರಿಂದ ಸತತ ಮೂರು ದಿನಗಳ ಕಾಲ ದೆಹಲಿ ಹೈಕೋರ್ಟಿನಲ್ಲಿ ನಡೆದ ವಿಚಾರಣೆ ಸಂದರ್ಭ ಉಮರ್ ಖಾಲಿದ್, ಶರ್ಜಿಲ್ ಇಮಾಮ್, ಖಾಲಿದ್ ಸೈಫಿಯಂತಹ ಪ್ರಮುಖ ಹೋರಾಟಗಾರರ ಜಾಮೀನು ಅರ್ಜಿಗಳನ್ನು ವಿರೋಧಿಸುತ್ತಲೇ ಬಂದಿರುವ ದೆಹಲಿ ಪೊಲೀಸರಿಗೆ, “ಕೇವಲ ಸಿಎಎ ವಿರುದ್ಧ ಪ್ರತಿಭಟನೆಗಳನ್ನು ಆಯೋಜಿಸುವುದರಿಂದ ಯುಎಪಿಎ ಆರೋಪವನ್ನು ಹೊರಿಸಬಹುದೇ?” ಎಂದು ನ್ಯಾಯಮೂರ್ತಿ ನವೀನ್ ಚಾವ್ಲಾ ಮತ್ತು ನ್ಯಾಯಮೂರ್ತಿ ಶಾಲಿಂದರ್ ಕೌರ್ ಅವರ ವಿಭಾಗೀಯ ಪೀಠ ಪ್ರಶ್ನಿಸಿದೆ.

ಕಾನೂನೊಂದನ್ನು ವಿರೋಧಿಸಿ ಚಕ್ಕಾ ಜಾಮ್, ಅಂದರೆ ರಸ್ತೆ ತಡೆ ಮಾಡುವುದು ಕೂಡ ಪ್ರತಿಭಟನೆಯ ಒಂದು ರೂಪವಾಗಿರಬಹುದು ಎಂದು ಹೇಳಿದ ನ್ಯಾಯಮೂರ್ತಿಗಳು, ಆರೋಪಿಗಳ ಭಾಷಣಗಳು, ವಿವಿಧ ಕರಪತ್ರಗಳು ಮತ್ತು ಜಾಮಿಯಾ ವಿದ್ಯಾರ್ಥಿಗಳು ಹಂಚಿಕೊಂಡ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಉಲ್ಲೇಖಿಸಿದ ವಿಶೇಷ ಸಾರ್ವಜನಿಕ ಅಭಿಯೋಜಕ ಅಮಿತ್ ಪ್ರಸಾದ್ ಎನ್.ಆರ್.ಸಿ -ಸಿ.ಎ.ಎ, ತ್ರಿವಳಿ ತಲಾಖ್, ಬಾಬರಿ ಮಸೀದಿ ಮತ್ತು ಕಾಶ್ಮೀರದಂತಹ ವಿಷಯಗಳ ಕುರಿತು ಕೇಳುಗರಲ್ಲಿ “ಭಯದ ಭಾವನೆ”ಯನ್ನು ಆರೋಪಿಗಳು ಸೃಷ್ಟಿಸಿದ್ದಾರೆ ಎಂದು ಹೇಳಿದಾಗ, “ತ್ರಿವಳಿ ತಲಾಖ್ ಮುಸ್ಲಿಮರನ್ನು ಒಳಗೊಂಡಿರಬಹುದು, ಬಾಬರಿ ಮಸೀದಿ ಮುಸ್ಲಿಮರನ್ನು ಒಳಗೊಂಡಿರಬಹುದು, ಆದರೆ ಕಾಶ್ಮೀರ ಮುಸ್ಲಿಂ ವಿಷಯ ಎಂದು ನೀವು ಹೇಗೆ ಹೇಳುತ್ತೀರಿ? ಅದು ಭಾರತದ ಅವಿಭಾಜ್ಯ ಅಂಗ” ಎಂದು ನ್ಯಾಯಮೂರ್ತಿಗಳು ಅಮಿತ್ ಪ್ರಸಾದ್‌ರನ್ನು ಪ್ರಶ್ನಿಸಿದರು.
ಇದ್ನನೂ ಓದಿ ದೆಹಲಿ ಚುನಾವಣೆ | ಎಎಪಿ, ಬಿಜೆಪಿಗೆ ಪ್ರತಿಷ್ಠೆ ಕಣ; ಪ್ರಬಲ ನಾಯಕತ್ವವೇ ಇಲ್ಲದ ಕೇಸರಿಪಡೆ
ಆರೋಪಗಳನ್ನು ಹೊರಿಸದೇ ಐದು ವರ್ಷಗಳು ಕಳೆದಿವೆ ಮತ್ತು ಆರೋಪಿಗಳು ಪ್ರಾಥಮಿಕವಾಗಿ ಜಾಮೀನು ಕೋರಿರುವುದೇ ವಿಚಾರಣೆಯ ವಿಳಂಬದ ಆಧಾರದ ಮೇಲೆ. ಹಾಗಾಗಿ ಜನವರಿ 21ಕ್ಕೆ ಪ್ರಕರಣವನ್ನು ಮುಂದೂಡುವ ಮೊದಲು, ನ್ಯಾಯಾಲಯವು ಜಾಮೀನು ಅರ್ಜಿಗಳನ್ನು ಆಲಿಸುತ್ತಿದೆ ಎಂಬುದನ್ನು ನೆನಪಿನಲ್ಲಿಡಿ ಎಂದು ವಿಶೇಷ ಸಾರ್ವಜನಿಕ ಅಭಿಯೋಜಕರಿಗೆ ತೀಕ್ಷ್ಣವಾಗಿ ಹೇಳಿ ಆರೋಪಿಗಳ ವಿರುದ್ಧದ ವಾದಗಳ ಕುರಿತು ಒಂದು ಸಣ್ಣ ಟಿಪ್ಪಣಿಯನ್ನು ಸಲ್ಲಿಸುವಂತೆ ಪೀಠವು ನಿರ್ದೇಶನವನ್ನು ನೀಡಿದೆ.
ಹೋರಾಟಗಳನ್ನು ಹತ್ತಿಕ್ಕುತ್ತ, ದಮನಿತರ ಪರ ಧ್ವನಿಯನ್ನು ಅಡಗಿಸುತ್ತ ಮತ್ತು ಇಸ್ಲಾಮೋಫೋಬಿಯಾವನ್ನು ಬಿತ್ತರಿಸುತ್ತಲೇ ಚುನಾವಣೆಗಳನ್ನು ಗೆಲ್ಲುವ ಬಿಜೆಪಿ ಮತ್ತು ಸಂಘಪರಿವಾರ ದೆಹಲಿಯ ಈ ಚುನಾವಣೆಯ ಸಂದರ್ಭದಲ್ಲಿ ಇನ್ನ್ಯಾವ ತರಹದ ಪಿತೂರಿಗಳನ್ನು ಹೂಡಲಿದೆ ಎಂಬ ಆತಂಕ ದೆಹಲಿಯ ಜನಪರ ಹೋರಾಟಗಾರರ ಮನದಲ್ಲಿದೆ.
(ದೆಹಲಿ ಗಲಭೆಯಲ್ಲಿ ಬಂಧಿತರಾದ 16 ಮುಸ್ಲಿಂ ಹೋರಾಟಗಾರರ ಹಿನ್ನೆಲೆ, ಅಭಿಯಾನಗಳು, ಸದ್ಯದ ಸ್ಥಿತಿಗತಿಗಳ ಬಗ್ಗೆ ಸರಣಿ ಬರಹವನ್ನು ನಜ್ಮಾ ನಜೀರ್ ಚಿಕ್ಕನೇರಳೆ ಬರೆಯಲಿದ್ದಾರೆ)

ನಜ್ಮಾ ನಜೀರ್, ಚಿಕ್ಕನೇರಳೆ
ಯುವ ರಾಜಕಾರಣಿ. ಸಾಮಾಜಿಕ ಹೋರಾಟಗಳಲ್ಲಿ ತೊಡಗಿಕೊಂಡಿದ್ದಾರೆ