Delimitation | ದಕ್ಷಿಣದ ರಾಜ್ಯಗಳಿಗೆ ಕಂಟಕವಾಗಿರುವ ಸಂಸದೀಯ ಕ್ಷೇತ್ರ ಮರುವಿಂಗಡಣೆ

Date:

Advertisements

ಡಿಲಿಮಿಟೇಷನ್ ನಂತರ ದಕ್ಷಿಣದ ಈಗಿರುವ ಸುಮಾರು 24% ಪ್ರತಿನಿಧಿತ್ವವು ಇನ್ನೂ ಕಡಿಮೆಯಾಗುವುದಾದರೆ, ದೇಶದ ಪ್ರಮುಖ ನಿರ್ಣಯಗಳಲ್ಲಿ ಮತ್ತು ಸಂಪನ್ಮೂಲಗಳ ನ್ಯಾಯಯುತ ಪಾಲನ್ನು ಪಡೆಯುವಲ್ಲಿ ದಕ್ಷಿಣದ ಧ್ವನಿಯು ಇನ್ನೂ ಕ್ಷೀಣಿಸಲಿದೆ. ಸುಮಾರು 60% ಪ್ರತಿನಿಧಿತ್ವ ಹೆಚ್ಚಿಸಿಕೊಳ್ಳಲಿರುವ ಹಿಂದಿ ಭಾಷಿಕ ರಾಜ್ಯಗಳು ಎಲ್ಲಾ ನಿರ್ಣಯಗಳಲ್ಲಿ ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಹೆಚ್ಚಿನ ಲಾಭ ಪಡೆಯುವಂತಾಗುತ್ತದೆ.

ಇತ್ತಿಚೆಗೆ ದಕ್ಷಿಣದ ರಾಜ್ಯಗಳಲ್ಲಿ ಲೋಕಸಭಾ ಕ್ಷೇತ್ರದ ವಿಂಗಡಣೆ ಮತ್ತು ಸ್ಥಾನಗಳ ಸಂಖ್ಯೆಯ ಕುರಿತಾದ ವಿಷಯವು ಮಹತ್ವ ಪಡೆದುಕೊಂಡಿದೆ. ತಮಿಳುನಾಡು ರಾಜ್ಯವು ಈ ಬಗ್ಗೆ ಹೆಚ್ಚಿನ ಆತಂಕ ವ್ಯಕ್ತಪಡಿಸಿದ್ದು, ಚರ್ಚೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಇಂದಿನ ರಾಜಕೀಯ ಆಗುಹೋಗುಗಳ ಸ್ಥಿತಿಯಲ್ಲಿ ಡಿಲಿಮಿಟೇಷನ್ ಬಗ್ಗೆ ಮುಖ್ಯವಾಗಿ ದಕ್ಷಿಣ ಭಾರತೀಯರು ತಿಳಿದುಕೊಳ್ಳುವುದು ಅನಿವಾರ್ಯವಿದೆ.

ಡಿಲಿಮಿಟೇಷನ್ ಎಂಬ ಆಂಗ್ಲ ಪದವೇ ಹೆಚ್ಚು ಬಳಕೆಯಲ್ಲಿರುವ ಕಾರಣ ಲೇಖನದಲ್ಲಿ ಅದೇ ಪದವನ್ನು ಬಳಸಲಾಗಿದೆ. ಡಿಲಿಮಿಟೇಷನ್ ಅನ್ನುವುದು ಲೋಕಸಭೆ ಮತ್ತು ರಾಜ್ಯ ವಿಧಾನಸಭಾ ಕ್ಷೇತ್ರವನ್ನು ಜನಸಂಖ್ಯೆ ಅನ್ವಯ ಮರುವಿಂಗಡಣೆ ಮಾಡುವ ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆಯು ಪ್ರತಿ ಜನಗಣತಿ ನಂತರದಲ್ಲಿ ಲೋಕಸಭಾ ಮತ್ತು ರಾಜ್ಯ ವಿಧಾನಸಭಾ ಸ್ಥಾನಗಳ ಸಂಖ್ಯೆಯನ್ನು ಜನಸಂಖ್ಯೆ ಬದಲಾವಣೆಯ ಮೇಲೆ ನಿಗದಿಸಬೇಕು ಎಂದು ಸಂವಿಧಾನದ 82ನೇ ಮತ್ತು 176 ವಿಧಿಯಲ್ಲಿ ಹೇಳಲಾಗಿದೆ. ಚುನಾವಣಾ ಪ್ರಾತಿನಿಧಿತ್ವವು ಜನಸಂಖ್ಯೆಯ ಬದಲಾವಣೆಗಳನ್ನು ಪ್ರತಿಬಿಂಬಿಸುವುದಲ್ಲದೆ, ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನಾಂಗಗಳಿಗೆ ಕಾದಿರಿಸಿದ ಸ್ಥಾನಗಳ ಸಂಖ್ಯೆಯನ್ನೂ ಸಹ ನಿರ್ಧರಿಸುತ್ತದೆ. ಇದೇ ಸಮಯದಲ್ಲಿ 42 ಮತ್ತು 84ನೇ ತಿದ್ದುಪಡಿ ಪ್ರಕಾರ ಲೋಕಸಭೆಯಲ್ಲಿ 550 ಕ್ಕಿಂತ (ಗರಿಷ್ಠ 530 ರಾಜ್ಯಗಳಿಂದ ಮತ್ತು 20 ಕೇಂದ್ರಾಡಳಿತ ಪ್ರದೇಶಗಳಿಂದ) ಹೆಚ್ಚು ಸದಸ್ಯರನ್ನು ಹೊಂದಿರದಂತೆ ಸ್ಥಗಿತಮಾಡಲಾಗಿದೆ. ಒಟ್ಟಾರೆ ಡಿಲಿಮಿಟೇಷನ್ ಪ್ರಕ್ರಿಯೆಯು ಒಬ್ಬ ನಾಗರಿಕ-ಒಂದು ಮತ-ಒಂದು ಮೌಲ್ಯವೆಂಬ ತತ್ವದ ಮೇಲೆ ಆಧಾರಿತವಾಗಿದೆ.

Advertisements

ಡಿಲಿಮಿಟೇಷನ್ ಆಯೋಗವು ಸ್ವಾಯತ್ತವಾಗಿದ್ದು, ರಾಜ್ಯ ಚುನಾವಣಾ ಆಯೋಗದ ಸಹಕಾರದಲ್ಲಿ ಲೋಕಸಭಾ ಮತ್ತು ರಾಜ್ಯಸಭಾ ಸ್ಥಾನಗಳನ್ನು ಮರುವಿಂಗಡಣೆ ಮಾಡುತ್ತದೆ. 1951 ರಿಂದ 2011ರ ತನಕ ಪ್ರತಿ ದಶಕದಲ್ಲಿ ತಪ್ಪದೆ ಜನಗಣತಿ ನಡೆದಿದ್ದರೂ, ಡಿಲಿಮಿಟೇಷನ್ ಆಯೋಗವನ್ನು ಕೇವಲ ನಾಲ್ಕು ಸಂದರ್ಭಗಳಲ್ಲಿ ಮಾತ್ರ ರಚಿಸಲಾಗಿತ್ತು. ಈ ಆಯೋಗಗಳು 1952ರಲ್ಲಿ 494 ಸ್ಥಾನಗಳನ್ನು ಹಂಚಿಕೆ ಮಾಡಿದ್ದು, ಪ್ರತಿ ಕ್ಷೇತ್ರವು ಸರಾಸರಿ 7.3 ಲಕ್ಷ ಜನರನ್ನು ಹೊಂದಿತ್ತು. 1963ರಲ್ಲಿ 522 ಸ್ಥಾನಗಳನ್ನು ಹಂಚಿಕೆ ಮಾಡಿದ್ದು, ಪ್ರತಿ ಕ್ಷೇತ್ರವು ಸರಾಸರಿ 8.4 ಲಕ್ಷ ಜನರನ್ನು ಹೊಂದಿತ್ತು. 1973ರಲ್ಲಿ 543 ಸ್ಥಾನಗಳನ್ನು ವಿಂಗಡನೆ ಮಾಡಿದ್ದು, ಪ್ರತಿ ಕ್ಷೇತ್ರಕ್ಕೆ 10.1 ಲಕ್ಷ ಜನರಿದ್ದರು. 2002ರಲ್ಲಿ ಕೇವಲ ಕ್ಷೇತ್ರದ ಗಡಿ ವಿಂಗಡಣೆ ಮತ್ತು ಪರಿಶಿಷ್ಟ ಜಾತಿ ಹಾಗೂ ಪಂಗಡದ ಸ್ಥಾನಗಳನ್ನು 2001ರ ಜನಗಣತಿ ಆಧಾರದ ಮೇಲೆ ಹೊಂದಾಣಿಕೆ ಮಾಡಲಾಗುತ್ತದೆಯೇ ಹೊರತು ಸಂಸದರ ಸ್ಥಾನಗಳು 1971ರ ಜನಗಣತಿ ಆಧಾರದಂತೆ ಮುಂದುವರೆದಿರುತ್ತದೆ.

1976ರಲ್ಲಿ ಜನಸಂಖ್ಯಾ ನಿಯಂತ್ರಣದ ಸಲುವಾಗಿ ಕುಟುಂಬ ಯೋಜನೆಯನ್ನು ತರಲಾಗುತ್ತದೆ. ರಾಜ್ಯಗಳು ತಮ್ಮ ಸಂಸದೀಯ ಸ್ಥಾನಗಳನ್ನು ಕಡಿಮೆ ಮಾಡಿಕೊಳ್ಳುವ ಭಯವಿಲ್ಲದೆ ಕುಟುಂಬ ಯೋಜನೆಯಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಲು ಅಂದಿನ ಕಾಂಗ್ರೆಸ್‌ ಸರ್ಕಾರವು 42ನೇ ಸಾಂವಿಧಾನಿಕ ತಿದ್ದುಪಡಿ ಮೂಲಕ 2001ರ ಜನಗಣತಿಯವರೆಗೆ 25 ವರ್ಷಗಳ ಕಾಲ 543 ಲೋಕಸಭಾ ಸ್ಥಾನಗಳನ್ನೇ ಮುಂದುವರೆಸುತ್ತದೆ. ಅಂತೆಯೇ, 2002ರಲ್ಲಿ ಅಂದಿನ ಬಿಜೆಪಿ ಸರ್ಕಾರವೂ ಸಹ 84ನೇ ಸಾಂವಿಧಾನಿಕ ತಿದ್ದುಪಡಿಯೊಂದಿಗೆ ಇದೇ ಸಂಖ್ಯೆಯನ್ನು ಮತ್ತೆ 25 ವರ್ಷಗಳ ತನಕ ಮುಂದುವರೆಸುವ ನಿರ್ಣಯ ಮಾಡುತ್ತದೆ. ಹೀಗೆ ಒಟ್ಟು 50 ವರ್ಷಗಳ ತನಕ ಸ್ಥಗಿತವಾಗಿದ್ದ ಡಿಲಿಮಿಟೇಷನ್ ಪ್ರಕ್ರಿಯೆಯನ್ನು 2026ಕ್ಕೆ ಮುಂದೂಡಲಾದ ಕಾರಣ, ಇಂದಿನ ಲೋಕಸಭಾ ಸ್ಥಾನಗಳ ಸಂಖ್ಯೆಯು 1971ರ ಜನಗಣತಿಯ ಆಧಾರದಂತೆ 543 ಲೋಕಸಭಾ ಸದಸ್ಯರಿಗೆ ಸೀಮಿತವಾಗಿದೆ.

2026ರ ಲೋಕಸಭಾ ಸ್ಥಾನಗಳ ಮರುವಿಂಗಡನೆಯು 2021ರ ಜನಗಣತಿ ಫಲಿತಾಂಶದ ಆಧಾರದಂತೆ ಆಗಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಜನಗಣತಿ ನಡೆಯಲಿಲ್ಲ. ಈಗ ಮುಂದಿನ ಜನಗಣತಿಯನ್ನು 2025ಕ್ಕೆ ಪ್ರಾರಂಭಿಸಿ 2026ಕ್ಕೆ ಅಂತ್ಯಗೊಳಿಸಬಹುದೆಂಬ ಸರ್ಕಾರಿ ಮೂಲಗಳ ಮಾಹಿತಿಯನ್ನು ಇಂಡಿಯಾ ಟುಡೆ ಅಕ್ಟೋಬರ್ 28ರಂದು ವರದಿ ಮಾಡಿರುತ್ತದೆ.

new parliament building inside view of new parliament 255608819

ಉತ್ತರದ ರಾಜ್ಯಗಳಿಗೆ ಹೋಲಿಸಿದರೆ, ಜನಸಂಖ್ಯಾ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ ಕಾರಣ ದಕ್ಷಿಣ ರಾಜ್ಯಗಳ ಜನಸಂಖ್ಯೆಯು ಗಣನೀಯವಾಗಿ ಇಳಿಕೆಯಾಗಿರುತ್ತದೆ. ಇದರಿಂದಾಗಿ, ಜನಸಂಖ್ಯಾ ಆಧಾರದ ಮೇಲೆ ಲೋಕಸಭಾ ಸ್ಥಾನಗಳನ್ನು ನಿಗದಿಗೊಳಿಸಿದರೆ ಉತ್ತಮ ಕೆಲಸ ಮಾಡಿದ ದಕ್ಷಿಣದ ರಾಜ್ಯಗಳನ್ನು ಶಿಕ್ಷಿಸಿದಂತಾಗುತ್ತದೆ ಎಂಬುದೇ ಈ ವಿರೋಧಕ್ಕೆ ಮುಖ್ಯ ಕಾರಣವಾಗಿದೆ. ಇದೇ ವಿರೋಧವನ್ನು 1972ರಲ್ಲಿಯೂ ವ್ಯಕ್ತಪಡಿಸಲಾದ ಹಿನ್ನೆಲೆಯಲ್ಲಿ ಡಿಲಿಮಿಟೇಷನ್ ಪ್ರಕ್ರಿಯೆಯನ್ನು 50 ವರ್ಷಗಳ ತನಕ ಸ್ಥಗಿತಗೊಳಿಸಲಾಗಿತ್ತು ಎನ್ನಲಾಗಿದೆ. ಹಾಲಿ ಇರುವ ಒಟ್ಟು 543 ಸ್ಥಾನಗಳಲ್ಲಿ, ದಕ್ಷಿಣದ ರಾಜ್ಯಗಳು ಒಟ್ಟು 159 ಸ್ಥಾನಗಳನ್ನು ಹೊಂದಿದ್ದು, ಇದು ಶೇಕಡ 23.75 ಆಗಿರುತ್ತದೆ. ಈಗಾಗಲೇ ಜನಸಂಖ್ಯೆ ಹೆಚ್ಚಿರುವ ಉತ್ತರದ ಕೇವಲ ಮೂರು ರಾಜ್ಯಗಳಾದ ಬಿಹಾರ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರವು ಒಟ್ಟು ಶೇಕಡಾ 30ರಷ್ಟು ಪ್ರಾತಿನಿಧಿತ್ವ ಹೊಂದಿದ್ದು, ಅದು ದಕ್ಷಿಣದ ಎಲ್ಲಾ ರಾಜ್ಯಗಳ ಒಟ್ಟು ಪ್ರತಿಶತಕ್ಕೂ ಹೆಚ್ಚಿರುವುದನ್ನು ಗಮನಿಸಬಹುದಾಗಿದೆ.

2026ರ ಮರುವಿಂಗಡಣೆಯು ಸರಾಸರಿ ಪ್ರತಿ ಕ್ಷೇತ್ರಕ್ಕೆ 20 ಲಕ್ಷ ಅಂದಾಜು ಜನಸಂಖ್ಯೆ ಪ್ರಕಾರ ನಡೆಯಬಹುದಾಗಿದ್ದು, ಈಗಿನ 543 ಸಂಸದರ ಸ್ಥಾನಗಳು 753ಕ್ಕೆ ಏರಲಿವೆ. ಇದರಿಂದಾಗಿ ದಕ್ಷಿಣದ ಇಂದಿನ 129 ಸ್ಥಾನಗಳು 144ಕ್ಕೆ ಏರಲಿದ್ದು, ಉತ್ತರದ ಕೇವಲ ಐದು ರಾಜ್ಯಗಳಲ್ಲಿನ (ರಾಜಸ್ಥಾನ, ಮಹಾರಾಷ್ಟ್ರ, ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ) 222 ಸ್ಥಾನಗಳು 357ಕ್ಕೆ ಏರಬಹುದು ಎಂದು ಅಂದಾಜಿಸಲಾಗಿದೆ. ಇದರಿಂದಾಗಿ ಸಂಸತ್ತಿನಲ್ಲಿ ದಕ್ಷಿಣದ ಪ್ರತಿನಿಧಿತ್ವವು 23.7% ರಿಂದ 19%ಕ್ಕೆ ಕುಸಿದರೆ, ಹಿಂದಿ ಭಾಷಿಕ ಉತ್ತರದ ರಾಜ್ಯಗಳು ಸುಮಾರು 60%ರಷ್ಟು ಸ್ಥಾನಗಳನ್ನು ಹೆಚ್ಚಿಸಿಕೊಳ್ಳಲಿವೆ ಎಂದಿದೆ ಇಂಡಿಯಾ ಟುಡೆ ವರದಿ. ಮತ್ತೊಂದು ಅಂದಾಜಿನಂತೆ, ಸಂಸದರ ಒಟ್ಟು ಸಂಖ್ಯೆಗಳನ್ನು 848ಕ್ಕೆ ಏರಿಸಿ, ಅದರಂತೆ ಪ್ರಮಾಣಾನುಗುಣವಾಗಿ ಎಲ್ಲಾ ರಾಜ್ಯಗಳಲ್ಲೂ ಏರಿಕೆ ಮಾಡುವುದಾಗಿದೆ. ಯಾವ ರೀತಿ ಅಂದಾಜು ಮಾಡಿದರೂ ಸಹ ಜನಸಂಖ್ಯೆಯ ಒಂದೇ ಆಧಾರದ ಮೇಲೆ ಕ್ಷೇತ್ರಗಳನ್ನು ಮರುವಿಂಗಡನೆ ಮಾಡಿದರೆ ದಕ್ಷಿಣದ ರಾಜ್ಯಗಳ ಪ್ರತಿನಿಧಿತ್ವವು ಇಳಿಕೆಯಾಗುವುದಂತೂ ಖಚಿತ.

ಕರ್ನಾಟಕವೂ ಸಹ ದೇಶದಲ್ಲಿ ಅತಿ ಹೆಚ್ಚು ತೆರಿಗೆ ನೀಡುತ್ತಿರುವ ರಾಜ್ಯಗಳಲ್ಲಿ ಒಂದಾಗಿದ್ದು, ಬೇರೆಲ್ಲಾ ಅಭಿವೃದ್ಧಿ ಸೂಚಕಗಳಲ್ಲಿ ಅನೇಕ ಉತ್ತರದ ರಾಜ್ಯಗಳಿಗೆ ಹೋಲಿಸಿದರೆ ಉತ್ತಮ ಸ್ಥಾನದಲ್ಲಿದೆ. ಡಿಲಿಮಿಟೇಷನ್ ನಂತರ ಇಂದಿನ 28 ಸ್ಥಾನಗಳು ಏರಿದರೂ, ಅಥವಾ ಅಷ್ಟೇ ಇದ್ದರೂ, ಉತ್ತರದ ಸ್ಥಾನಗಳು ಹೆಚ್ಚಾಗುವ ಕಾರಣ ಈಗಿರುವ ಶೇಕಡಾ 5ರ ಸ್ಥಾನವು ಖಚಿತವಾಗಿ ಕಡಿಮೆಯಾಗಲಿದೆ.

ಸಂಸತ್ತಿನ ಒಟ್ಟು ಪ್ರತಿನಿಧಿತ್ವದ ಕೇವಲ 20%ಕ್ಕೂ ಕಡಿಮೆ ಪ್ರತಿನಿಧಿತ್ವ ಹೊಂದಲಿರುವ ದಕ್ಷಿಣದ ರಾಜ್ಯಗಳ ಜನಸಂಖ್ಯಾ ಫಲವತ್ತತೆಯ ದರ, ತಲಾದಾಯ ಮತ್ತು ಶೈಕ್ಷಣಿಕ ಸಾಧನೆ ಸೇರಿದಂತೆ ಅನೇಕ ಸಾಮಾಜಿಕ ಹಾಗೂ ಆರ್ಥಿಕ ಸೂಚ್ಯಂಕಗಳು ಪ್ರಗತಿಯಲ್ಲಿವೆ. ಹೆಚ್ಚಿನ ತೆರಿಗೆಯನ್ನು ಕೇಂದ್ರಕ್ಕೆ ನೀಡುತ್ತಿರುವ ಈ ರಾಜ್ಯಗಳು ದೇಶದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡುತ್ತಿವೆ. ಆದರೂ, ಸಂಸತ್ತಿನಲ್ಲಿ ತಮ್ಮ ಪ್ರತಿನಿಧಿತ್ವದ ಸ್ಥಾನಗಳ ಕಡಿತದ ಕಾರಣದಿಂದಾಗಿ ಈ ರಾಜ್ಯಗಳ ರಾಜಕೀಯ ಪ್ರಭಾವವು ಕುಗ್ಗಿ, ಕಾಯ್ದೆ ಮತ್ತು ನೀತಿಗಳನ್ನು ರೂಪಿಸುವಾಗ ತಮ್ಮ ಜನರನ್ನು ಮತ್ತು ಕ್ಷೇತ್ರವನ್ನು ಪ್ರತಿನಿಧಿಸುವ ಅವಕಾಶದಿಂದ ವಂಚಿತರಾಗುವ ಅಪಾಯವಿದೆ. ಹೆಚ್ಚಿನ ತೆರಿಗೆ ನೀಡಿದರೂ ತಮ್ಮ ಪ್ರದೇಶಕ್ಕೆ ಮತ್ತು ಜನರಿಗೆ ಬೇಕಾದ ಸಂಪನ್ಮೂಲಗಳನ್ನು ಪಡೆಯಲು ಶತಪ್ರಯತ್ನ ಮಾಡಿಯೂ ಸೋಲಬಹುದು.

ಈ ಹಿನ್ನೆಲೆಯಲ್ಲಿ, ವಿರೋಧ ಮತ್ತು ಸಲಹೆಗಳು ವ್ಯಕ್ತವಾಗಿರುವುದರ ಜೊತೆಗೆ, ಈ ವಿರೋಧವನ್ನು ಖಂಡಿಸುವ ಪ್ರತಿಕ್ರಿಯೆಗಳೂ ಸಹ ಬಂದಿವೆ.

m106lobc mk stalin
ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್‌

ಮೊದಲೇ ಹೇಳಿದಂತೆ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಜನಸಂಖ್ಯಾ ಆಧಾರಿತದಲ್ಲಿ ಲೋಕಸಭಾ ಸ್ಥಾನಗಳ ಸಂಖ್ಯೆಯು ನಿಗದಿಯಾಗುವುದನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಈ ಕುರಿತಾಗಿ, 5ನೇ ಮಾರ್ಚ್‍ರಂದು ರಾಜ್ಯದಲ್ಲಿನ ಎಲ್ಲಾ ಪಕ್ಷಗಳ ಸಭೆ ನಡೆಸಿರುವ ಇವರು, 2026ರ ನಂತರದಿಂದ ಮತ್ತೇ ಮೂವತ್ತು ವರ್ಷಗಳ ತನಕ ಯಾವುದೇ ಮರುವಿಂಗಡಣೆಗೆ 1971ರ ಜನಗಣತಿಯೇ ಆಧಾರವಾಗಿರಬೇಕು ಮತ್ತು ಅದಕ್ಕೆ ಸಂಬಂಧಿತ ಸಾಂವಿಧಾನಿಕ ತಿದ್ದಪಡಿಯನ್ನು ಅಂಗೀಕರಿಸಬೇಕೆಂದು ಒತ್ತಾಯಿಸಿರುತ್ತಾರೆ. ಸಂಸದೀಯ ಸ್ಥಾನಗಳನ್ನು ಹೆಚ್ಚಿಸುವುದಾದರೆ, ಅದು 1971ರ ಜನಗಣತಿ ಪ್ರಮಾಣಾನುಗುಣ ಅನುಪಾತದ ಆಧಾರದಂತೆ ಹೆಚ್ಚಿಸಬೇಕು ಎನ್ನುವುದು ಇವರ ವಾದವಾಗಿದೆ ಎಂದಿದೆ 10ನೇ ಮಾರ್ಚ್‍ನ ದಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ. ಜನಸಂಖ್ಯೆ ಹೆಚ್ಚಿಸಲು ಹೆಚ್ಚು ಮಕ್ಕಳನ್ನು ಹೇರುವಂತೆಯೂ ಇವರು ಕರೆ ನೀಡಿದ್ದಾರೆ!

ಜನಸಂಖ್ಯೆಯ ಆಧಾರದಲ್ಲಿ ಸಂಸತ್ ಸ್ಥಾನಗಳ ಮರುವಿಂಗಡಣೆ ಮೂಲಕ ದಕ್ಷಿಣದ ಸ್ಥಾನಗಳನ್ನು ಕಡಿತಗೊಳಿಸುವ ಮತ್ತು ಉತ್ತರದ ಸ್ಥಾನಗಳನ್ನು ಹೆಚ್ಚಿಸುವ ಎಕೈಕ ಮಾರ್ಗವನ್ನು ಬಳಸಿದ್ದಾದಲ್ಲಿ, ದಕ್ಷಿಣದ ಧ್ವನಿಯು ಗಣನೀಯವಾಗಿ ಕುಗ್ಗಲಿದೆ. ಭಾರತದಂತೆ ಅಮೆರಿಕವು ಪ್ರಜಾಪ್ರಭುತ್ವ ಮತ್ತು ಒಕ್ಕೂಟ ರಾಷ್ಟ್ರವಾಗಿದ್ದು, ಅದು ಕಾಲಕಾಲಕ್ಕೆ ತನ್ನ 50 ರಾಜ್ಯಗಳಿಗೂ ನಿಗದಿಪಡಿಸಿದ ಪ್ರತಿನಿಧಿಗಳ (ಹೌಸ್ ಆಫ್ ರೆಪ್ರಸೆಂಟಿಟಿವ್ಸ್ – ಅಂದರೆ ಭಾರತದ ಲೋಕಸಭೆ ರೀತಿಯದ್ದು) ಸಂಖ್ಯೆಯನ್ನು ಮರು ನಿರ್ಧರಿಸುತ್ತದೆ. ಆದರೆ ಸೆನೆಟ್ನಲ್ಲಿ (ಇಲ್ಲಿನ ರಾಜ್ಯಸಭಾ ರೀತಿಯದ್ದು) ಪ್ರತಿ ರಾಜ್ಯಕ್ಕೂ ಸಮಾನ ಪ್ರಾತಿನಿಧ್ಯವನ್ನು ನೀಡುತ್ತಾ ಬಂದಿದ್ದು, ಈ ವಿಧಾನವು ಸುಮಾರು 250 ವರ್ಷಗಳಿಂದಲೂ ಯಶಸ್ವಿಯಾಗಿ ನಡೆಯುತ್ತಿದೆ ಎನ್ನುವ ಮೂಲಕ ಅದು ಭಾರತಕ್ಕೆ ಸೂಕ್ತವಿರಬಹುದು ಎನ್ನುವುದನ್ನು ಸೂಚಿಸಿದ್ದಾರೆ ಕಾಂಗ್ರೆಸ್ಸಿನ ರಾಜ್ಯಸಭಾ ಸದಸ್ಯರಾದ ಪಿ.ಚಿದಂಬರಂ ತಮ್ಮ ಲೇಖನದಲ್ಲಿ. (ಚಿದಂಬರಮ್ ಪಿ, ಡಿಲಿಮಿಟೇಷನ್ ಡೈಲಾಮಾ, ದಿ ಇಂಡಿಯನ್ ಎಕ್ಸ್‌ಪ್ರೆಸ್‌ 9ನೇ ಮಾರ್ಚ್).

ಜನಸಂಖ್ಯೆ ಮಾತ್ರವಲ್ಲದೆ ಇತರೆ ಮಾನದಂಡಗಳನ್ನೂ ಸಹ ಒಳಗೊಂಡಂತಹ ಡಿಲಿಮಿಟೇಷನ್ ಪ್ರಸ್ತಾವನೆ ಏನಿರಬೇಕು ಎಂದು ಸಂಸತ್ತಿನಲ್ಲಿ ಬದ್ಧತೆಯ ಚರ್ಚಿಯಾಗಬೇಕು ಎಂದು ರಾಷ್ಟ್ರೀಯ ಜನತಾದಳದ ರಾಜ್ಯಸಭಾ ಸಂಸದ ಮನೋಜ್ ಕುಮಾರ್ ಝರವರು ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಹೆಚ್ಚಿನ ಜನಸಂಖ್ಯೆ ಹೊಂದಿರುವ ಉತ್ತರದ ಹಿಂದಿ ಭಾಷಿಕ ರಾಜ್ಯಗಳ ಪ್ರಾತಿನಿಧಿತ್ವವು ಇನ್ನೂ ಹೆಚ್ಚಾಗಲಿದ್ದು, ಬಿಜೆಪಿಗೆ ಚುನಾವಣೆಯಲ್ಲಿ ಉತ್ತಮ ಪಾಲು ದೊರೆಯುವ ಸಾಧ್ಯತೆ ಇದೆ. ಇಂತಹ ನಿರೀಕ್ಷೆಯಿಂದಲೇ ಹೊಸ ಸಂಸತ್ ಭವನದಲ್ಲಿ 888 ಆಸನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ.

ಜನಸಂಖ್ಯಾ ವಾಸ್ತವತೆಗಳ ಆಧಾರದ ಮೇಲೆ ನ್ಯಾಯಯುತ ಪ್ರಾತಿನಿಧ್ಯವನ್ನು ಖಚಿತಪಡಿಸುತ್ತದೆ ಎನ್ನುತ್ತಾರೆ ಡಿಲಿಮಿಟೇಷನ್ ಪ್ರತಿಪಾದಕರು. ಈಗಲೂ ದಕ್ಷಿಣದ ಸಂಸದರ ಸಂಖ್ಯೆ ಕಡಿಮೆಯೇ ಇದ್ದು, ಅದು ಸಂಸತ್ತಿನಲ್ಲಿ ಅವರ ಧ್ವನಿಯನ್ನೇನು ಅಡಗಿಸಿಲ್ಲ ಮತ್ತು ಜನಸಂಖ್ಯಾ ನಿಯಂತ್ರಣದ ಅನೇಕ ಲಾಭಗಳನ್ನು ಆ ರಾಜ್ಯಗಳು ಪಡೆದುಕೊಂಡಿದ್ದು, ಕೇವಲ ರಾಜಕೀಯ ಲಾಭಕ್ಕೆ ಇದನ್ನು ವಿವಾದಗೊಳಿಸಲಾಗುತ್ತಿದೆ ಎಂಬಂತಹ ಅಭಿಪ್ರಾಯಗಳು ಕೇಳಿಬಂದಿವೆ. ಮಹಿಳೆಯರ ಮೀಸಲಾತಿಯು ಅನುಷ್ಠಾನವಾಗಬೇಕಿದ್ದರೆ ರಾಜಕೀಯ ಪ್ರತಿನಿಧಿತ್ವದ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವಿದೆ ಎನ್ನುವುದು ಮತ್ತೊಂದು ಆಭಿಪ್ರಾಯವಾಗಿದೆ.

ಆಂದ್ರ ಪ್ರದೇಶದ ಮುಖ್ಯ ಮಂತ್ರಿಗಳು ಡಿಲಿಮಿಟೇಷನ್ ವಿಷಯವು ಜನಸಂಖ್ಯೆ ನಿರ್ವಹಣಾ ವಿಷಯಕ್ಕಿಂತ ಭಿನ್ನವಾಗಿರುವ ಕಾರಣ ಅದನ್ನು ಪ್ರಸ್ತುತದ ರಾಜಕಾರಣದ ಚರ್ಚೆಯೊಂದಿಗೆ ಹೊಸೆಯುವುದು ಸರಿಯಲ್ಲ ಎಂಬ ಹೇಳಿಕೆಯ ಜೊತೆಗೆ ‘ಕುಟುಂಬ ಕಲ್ಯಾಣ ಯೋಜನೆ ಕುರಿತು ನನ್ನ ಚಿಂತನೆಯು ಬದಲಾಗಿದ್ದು, ಜನಸಂಖ್ಯೆ ಬೆಳವಣಿಗೆಯ ಅಗತ್ಯತೆ ಬಗ್ಗೆ ನನಗೀಗ ಮನವರಿಕೆಯಾಗಿದೆ’ ಎಂದು ಹೇಳಿರುವುದನ್ನು ಹಿಂದುಸ್ತಾನ್ ಟೈಮ್ಸ್ 6ನೇ ಮಾರ್ಚ್ ವರದಿ ಮಾಡಿದೆ.

ಡಿಲಿಮಿಟೇಷನ್ ಪ್ರಕ್ರಿಯೆಯಲ್ಲಿ ಪ್ರಮಾಣಾನುಗುಣವಾಗಿ (ಪ್ರೋ-ರೆಟಾ) ಸ್ಥಾನಗಳನ್ನು ಹಂಚುವ ಕಾರಣ, ದಕ್ಷಿಣದ ಯಾವುದೇ ರಾಜ್ಯದ ಒಂದು ಸ್ಥಾನವೂ ಕಡಿಮೆಯಾಗುವುದಿಲ್ಲ ಎಂದು ಪ್ರಧಾನಮಂತ್ರಿಗಳು ಲೋಕಸಭೆಯಲ್ಲಿ ಸ್ಪಷ್ಟಪಡಿಸಿರುವುದನ್ನು ಗೃಹಮಂತ್ರಿ ಅಮಿತ್ ಶಾರವರು ಕೊಯಮತ್ತೂರಿನ ಬಿಜೆಪಿ ಕಾರ್ಯಕ್ರಮದಲ್ಲಿ ಪುನರುಚ್ಚರಿಸುತ್ತಾ, ಡಿಲಿಮಿಟೇಷನ್ ಪ್ರಕ್ರಿಯೆಯಲ್ಲಿ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಮಾಡುವುದಿಲ್ಲ ಎಂಬ ಹೇಳಿಕೆ ನೀಡಿದ್ದಾರೆ.

ತೆಲಂಗಾಣದ ಮುಖ್ಯಮಂತ್ರಿಗಳು ಈ ಪ್ರೋ-ರೆಟಾ ವಿಧಾನದಿಂದಲೂ ದಕ್ಷಿಣದ ಸ್ಥಾನಗಳು ಇನ್ನೂ ಕಡಿಮೆಯಾಗಲಿವೆ ಎಂದಿದ್ದಾರೆ. ಉದಾಹರಣೆಗೆ, ಕೇಂದ್ರ ಸರ್ಕಾರವು ಹಾಲಿ ಸ್ಥಾನಗಳ 50% ಹೆಚ್ಚಳ ಮಾಡಿದರೆ, ಉತ್ತರಪ್ರದೇಶದ ಇಂದಿನ 80 ಸ್ಥಾನಗಳು 120ಕ್ಕೆ ಹೆಚ್ಚಳವಾಗಿ, ತಮಿಳುನಾಡಿನ 39 ಸ್ಥಾನಗಳು 60ಕ್ಕೆ ಹೆಚ್ಚಬಹುದು. ಇದರಿಂದ ಪ್ರಸ್ತುತ ಈ ಎರಡೂ ರಾಜ್ಯಗಳ ನಡುವೆ ಇರುವ ಸುಮಾರು 40 ಸ್ಥಾನಗಳ ವ್ಯತ್ಯಾಸವು ಪ್ರೋ-ರೆಟಾ ವಿಧಾನದಿಂದ 60 ಸ್ಥಾನಗಳ ವ್ಯತ್ಯಾಸ ಹೊಂದಲಿವೆ. ಇದೇ ರೀತಿ ಎಲ್ಲಾ ದಕ್ಷಿಣದ ರಾಜ್ಯಗಳಿಗೂ ವ್ಯತ್ಯಾಸ ಉಂಟಾಗಲಿವೆ ಎನ್ನುತ್ತಾ, ಗೃಹಮಂತ್ರಿಗಳು ಎಲ್ಲಾ ಪಕ್ಷಗಳ ಸಭೆಯನ್ನೇಕೆ ಕರೆಯುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. (ಇಂಡಿಯಾ ಟುಡೆ ಕಾನ್ಕ್ಲೇವ್ -25, 7ನೇ ಮಾರ್ಚ್‍ನಲ್ಲಿ ನೀಡಿರುವ ಸಂದರ್ಶನ)

Tamilnadu minister Baby
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಕೇರಳದ ಕಮ್ಯೂನಿಸ್ಟ್ ಪಕ್ಷದ ನಾಯಕರಾದ ಎಮ್.ಎ. ಬೇಬಿ

ಕೇರಳದ ಕಮ್ಯೂನಿಸ್ಟ್ ಪಕ್ಷದ ನಾಯಕರಾದ ಎಮ್.ಎ. ಬೇಬಿರವರು ಅಮಿತ್ ಶಾರವರಿಗೆ ಇಷ್ಟೊಂದು ವಿಶ್ವಾಸವಿದ್ದರೆ, ಅವರ ಉದ್ದೇಶವೇನು ಮತ್ತು ದಕ್ಷಿಣ ರಾಜ್ಯಗಳ ಈ ಆತಂಕಕ್ಕೆ ಯಾವ ಪರಿಹಾರವಿದೆ ಎಂದು ವಿವರಿಸಲು ಅವರು ಎಲ್ಲಾ ರಾಷ್ಟ್ರೀಯ ಪಕ್ಷಗಳ ಸಭೆಯನ್ನೇಕೆ ಕರೆಯುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಅದರಂತೆ, ಶಾರವರ ಹೇಳಿಕೆಯನ್ನು ಖಂಡಿಸುತ್ತಾ ಇವರನ್ನು ನಂಬುವಂತಿಲ್ಲ ಎಂದು ಹೇಳಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೇಂದ್ರದ ಡಿಲಿಮಿಟೇಷನ್ ಯೋಜನೆಯು ದಕ್ಷಿಣ ರಾಜ್ಯಗಳ ಪ್ರತಿನಿಧಿತ್ವವನ್ನು ತೀವ್ರವಾಗಿ ಕಡಿಮೆಗೊಳಿಸಲಿದ್ದು, ಈ ರಾಜ್ಯಗಳನ್ನು ರಾಜಕೀಯ ಮೂಲೆಗುಂಪಾಗಿಸುವ ಇಂತಹ ಉದ್ದೇಶಪೂರ್ವಕ ಪ್ರಯತ್ನಗಳ ವಿರುದ್ಧ ಒಕ್ಕೊರಲಿನ ನ್ಯಾಯಯುತ ಸಂಘಟಿತ ಹೋರಾಟ ನಡೆಯಬೇಕು ಎಂದಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿಗಳು 22ನೇ ಮಾರ್ಚ್‍ರಂದು ಜಂಟಿ ಕ್ರಮ ಸಮಿತಿಗೆ ಅಹ್ವಾನಿಸಿ ದಕ್ಷಿಣದ ರಾಜ್ಯಗಳ ಎಲ್ಲಾ ಮುಖ್ಯಮಂತ್ರಿಗಳಿಗೆ ಮತ್ತು ವೆಸ್ಟ್ ಬೆಂಗಾಲ್, ಒಡಿಶಾ ಹಾಗೂ ಪಂಜಾಬ್ ರಾಜ್ಯದ ಮುಖ್ಯಮಂತ್ರಿಗಳಿಗೂ ಪತ್ರ ಬರೆದಿದ್ದಾರೆ ಎಂದು ದಿ ಪ್ರಿಂಟ್ 7ನೇ ಮಾರ್ಚ್ ವರದಿ ಮಾಡಿದೆ.

ಡಿಲಿಮಿಟೇಷನ್ ಖಂಡಿತವಾಗಿಯೂ ಪ್ರಜಾಪ್ರಭುತ್ವದ ಪ್ರಕ್ರಿಯೆ ಎಂಬುದನ್ನು ಒಪ್ಪಿಕೊಂಡರೂ, ಒಕ್ಕೂಟ ವ್ಯವಸ್ಥೆಯಡಿ ಇದು ಸಣ್ಣ ರಾಜ್ಯಗಳಿಗೆ (ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಖಂಡ ಮತ್ತು ಉತ್ತರ-ಪೂರ್ವ ರಾಜ್ಯಗಳು) ಹಾಗೂ ಮುಖ್ಯವಾಗಿ ದಕ್ಷಿಣದ ರಾಜ್ಯಗಳಿಗೆ ತೊಡಕಾಗುವ ಮೂಲಕ ಒಕ್ಕೂಟ ತತ್ವಕ್ಕೆ ವ್ಯತಿರಿಕ್ತವಾಗಿದೆ ಅನ್ನುವುದನ್ನೂ ಸಹ ಒಪ್ಪಿಕೊಳ್ಳಬೇಕಾಗುತ್ತದೆ. ಜನಸಂಖ್ಯೆ ನಿಯಂತ್ರಣದ ಉತ್ತಮ ನಿರ್ವಹಣೆಯ ಕಾರಣ ದಕ್ಷಿಣದ ರಾಜ್ಯಗಳಲ್ಲಿ ಜನಸಂಖ್ಯೆ ಕಡಿಮೆ ಇದ್ದರೆ, ಉತ್ತರದ ಹಲವು ರಾಜ್ಯಗಳಲ್ಲಿ ಹೆಚ್ಚಿನ ಜನಸಂಖ್ಯೆ ಇರುವುದು ವಾಸ್ತವದ ವಿಷಯ. ಆದ್ದರಿಂದ ಜನಸಂಖ್ಯೆಯನ್ನು ಏಕಮಾತ್ರ ಮಾನದಂಡವಾಗಿ ಬಳಸುವುದು ಉತ್ತಮ ಕೆಲಸ ಮಾಡಿದ ರಾಜ್ಯಗಳಿಗೆ ಶಿಕ್ಷೆ ನೀಡಿದಂತಾಗುತ್ತದೆ ಎನ್ನುವುದನ್ನು ಅಲ್ಲಗೆಳೆಯುವಂತಿಲ್ಲ. ಇದೇ ಕಾರಣಕ್ಕಾಗಿ 50 ವರ್ಷಗಳ ಕಾಲ ಡಿಲಿಮಿಟೇಷನ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದ್ದು, ಇದನ್ನು ಬಿಜೆಪಿ ಸರ್ಕಾರದಡಿ ಮಾಡಿದ 84ರ ಸಂವಿಧಾನಿಕ ತಿದ್ದುಪಡಿಯಲ್ಲಿಯೂ ಸಹ ಸ್ಪಷ್ಟವಾಗಿ ನಮೂದಿಸಲಾಗಿದೆ.

ಆದರೆ, ಹಿಂದಿನಂತೆ ಮತ್ತೆ ಮತ್ತೆ ಡಿಲಿಮಿಟೇಷನ್ ಪ್ರಕ್ರಿಯೆಯನ್ನು ಮುಂದೂಡುವುದೂ ಸಹ ಸಮಸ್ಯೆಯನ್ನು ಮುಂದಕ್ಕೆ ತಳ್ಳುತ್ತದೆಯೇ ಹೊರತು ಪರಿಹಾರ ಸೂಚಿಸುವುದಿಲ್ಲ. ಸಂಪೂರ್ಣ ರಾಜಕೀಯ ವಿಷಯವೇ ಆಗಿರುವ ಡಿಲಿಮಿಟೇಷನ್ ಪ್ರಕ್ರಿಯೆಗೆ ಬಂದಿರುವ ವಿರೋಧವನ್ನು ಕೇವಲ ರಾಜಕೀಯದ ತಕರಾರು ಎನ್ನುತ್ತಾ ವಿಷಯವನ್ನು ಪಕ್ಕಕ್ಕೆ ತಳ್ಳುವುದು ಅರ್ಥವಿಲ್ಲದ ಮಾತಾಗುತ್ತದೆ. ಅದರಂತೆ ಹೆಚ್ಚು ಮಕ್ಕಳನ್ನು ಹೆರಬೇಕೆನ್ನುವುದೂ ಸಹ ಈ ಸಮಸ್ಯೆಗೆ ಪರಿಹಾರವಲ್ಲ. ಇಂತಹ ಹೇಳಿಕೆಗಳನ್ನು ನೀಡುವವರು ಮೊದಲು ಮಹಿಳೆಯರ ಅಭಿಪ್ರಾಯ ಸಂಗ್ರಹಿಸಲಿ.

ಇಗಾಗಲೇ ದಕ್ಷಿಣದ ಒಟ್ಟು ಪ್ರತಿನಿಧಿತ್ವವು ಕಡಿಮೆ ಇದ್ದು, ಪ್ರತಿ ನ್ಯಾಯಯುತ ಬೇಡಿಕೆಯನ್ನು ಹರಸಾಹಸ ಮಾಡಿಯೇ ಪಡೆಯಬೇಕಿದೆ. ಉದಾಹರಣೆಗೆ ಕರ್ನಾಟಕ ರಾಜ್ಯವು ತನ್ನದೇ ತೆರಿಗೆ ಪಾಲನ್ನು ಪಡೆಯಲು ದೇಹಲಿಯಲ್ಲಿ ಹೋರಾಟಕ್ಕಿಳಿದ ಘಟನೆಯನ್ನು ನೆನಪಿಸಿಕೊಳ್ಳಬಹುದು. ದಕ್ಷಿಣದ ಎಲ್ಲಾ ರಾಜ್ಯಗಳೂ ಒಂದು ನಿಗದಿತ ಪಕ್ಷಕ್ಕೆ ಮತ ಹಾಕಿದರೂ ಸಹ ಲೋಕಸಭೆಯ ನಿರ್ಣಯಗಳಲ್ಲಿ ಅವರ ಪ್ರತಿನಿಧಿತ್ವ ಕಡಿಮೆಯೇ ಇರುತ್ತದೆ ಎನ್ನುವುದು ಆತಂಕದ ವಿಷಯವಾಗಿದೆ. ಮುಂದೆ ಆಯ್ಕೆಯಾಗಬಹುದಾದ ಯಾವುದೇ ಕೇಂದ್ರ ಸರ್ಕಾರವೂ ಸಹ ದಕ್ಷಿಣದ ರಾಜ್ಯಗಳ ಮೇಲೆ ಹೆಚ್ಚು ನಿಯಂತ್ರಣ ಸಾಧಿಸಲು ದಾರಿಯಾಗಬಹುದು.

ಡಿಲಿಮಿಟೇಷನ್ ನಂತರ ದಕ್ಷಿಣದ ಈಗಿನ ಸುಮಾರು 24% ಪ್ರತಿನಿಧಿತ್ವವು ಇನ್ನೂ ಕಡಿಮೆ ಆಗುವುದಾದರೆ, ದೇಶದ ಪ್ರಮುಖ ನಿರ್ಣಯಗಳಲ್ಲಿ ಮತ್ತು ಸಂಪನ್ಮೂಲಗಳ ನ್ಯಾಯಯುತ ಪಾಲನ್ನು ಪಡೆಯುವಲ್ಲಿ ದಕ್ಷಿಣದ ಧ್ವನಿಯು ಇನ್ನೂ ಕ್ಷೀಣಿಸಿ ಪ್ರಭಾವ ಕಳೆದುಕೊಳ್ಳುತ್ತದೆ. ಸುಮಾರು 60% ಪ್ರತಿನಿಧಿತ್ವ ಹೆಚ್ಚಿಸಿಕೊಳ್ಳಲಿರುವ ಹಿಂದಿ ಭಾಷೆಯ ರಾಜ್ಯಗಳು ಎಲ್ಲಾ ನಿರ್ಣಯಗಳಲ್ಲಿ ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ದಕ್ಷಿಣದವರ ವೆಚ್ಚದಲ್ಲಿ ಹೆಚ್ಚಿನ ಲಾಭ ಪಡೆಯುವಂತಾಗುತ್ತದೆ. ಇದು ಇಗಾಗಲೇ ಇರುವ ಪ್ರಾದೇಶಿಕ ಅಸಮಾನತೆಯ ಅಂತರವನ್ನು ಇನ್ನೂ ಹೆಚ್ಚಿಸಿ ದಕ್ಷಿಣದ ಮತ್ತು ಇತರೆ ಸಣ್ಣ ರಾಜ್ಯಗಳು ಮೂಲೆಗುಂಪಾಗುತ್ತವೆ ಎನ್ನುವುದು ಕಳಕಳಿಯ ವಿಷಯವಾಗಿದೆ.

ಇದನ್ನೂ ಓದಿ ‘ನಮ್ಮ ಮೆಟ್ರೋ’ದಿಂದ ಕನ್ನಡಿಗರನ್ನು ಹೊರಗಿಡುವ ಹುನ್ನಾರ; ಪ್ರತಿಭಟನೆ ಎಚ್ಚರಿಕೆ ನೀಡಿದ ಮುಖ್ಯಮಂತ್ರಿ ಚಂದ್ರು

ಮೇಲ್ನೋಟಕ್ಕೆ ದಕ್ಷಿಣ ಮತ್ತು ಇತರೆ ಸಣ್ಣ ರಾಜ್ಯಗಳ ಸಮಸ್ಯೆ ಎನಿಸಿದರೂ, ಇದು ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಯ ನಡುವಿನ ತಿಕ್ಕಾಟವಾಗಿದ್ದು, ಅಂತಿಮದಲ್ಲಿ ಇದು ಒಟ್ಟಾರೆ ರಾಷ್ಟ್ರೀಯ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳು ತಮ್ಮ ರಾಜಕೀಯ ಲಾಭ ನಷ್ಟಗಳ ಲೆಕ್ಕಚಾರಗಳನ್ನು ಬದಿಗೊತ್ತಿ ವಿವಿಧ ದೇಶಗಳ ವಿಧಾನಗಳ ಅಧ್ಯಯನ ಮತ್ತು ವಿಸ್ತೃತ ಚರ್ಚೆಗಳ ಮೂಲಕ ಆಡಳಿತ ಮತ್ತು ವಿರೋಧ ಪಕ್ಷಗಳ ಸಂಘಟಿತ ಪ್ರಯತ್ನದಲ್ಲಿ ಎಲ್ಲಾ ರಾಜ್ಯಗಳಿಗೂ ನ್ಯಾಯ ಸಿಗುವಂತಹ ಒಂದು ಸೂತ್ರವನ್ನು ಕಂಡುಕೊಳ್ಳಬೇಕಿರುವುದು ಅನಿವಾರ್ಯವಿದೆ.

ಲತಾಮಾಲ
ಲತಾಮಾಲ
+ posts

ಗ್ರಾಮೀಣಾಭಿವೃದ್ಧಿ ತಜ್ಞರು ಮತ್ತು ಲೇಖಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಲತಾಮಾಲ
ಲತಾಮಾಲ
ಗ್ರಾಮೀಣಾಭಿವೃದ್ಧಿ ತಜ್ಞರು ಮತ್ತು ಲೇಖಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X