ಡಿಕೆಶಿಯವರು ಅಂದುಕೊಂಡಂತೆ ಈಗ ಸಿಎಂ ಆಗಿದ್ದಾರೆ. ಆದರೆ ಇನ್ಮುಂದಿನ ಪಯಣ, ಕಲ್ಲು ಮುಳ್ಳಿನ ಹಾದಿ ಎಂದರೆ ತಪ್ಪಾಗಲಾರದು. ಉಳಿದ ಎರಡು ವರ್ಷದ ಅವಧಿಯಲ್ಲಿ ಈ ಕಲ್ಲು ಮುಳ್ಳಿನ ಹಾದಿಯನ್ನು ಹೇಗೆ ನಿಭಾಯಿಸ್ತಾರೆ ಎನ್ನುವುದೇ ಕುತೂಹಲ.
ದೊಡ್ಡಾಲಹಳ್ಳಿ ಕೆಂಪೇಗೌಡ ಶಿವಕುಮಾರ್.. ಈಗ ರಾಜ್ಯದ ಮುಖ್ಯಮಂತ್ರಿ… ಚಿಕ್ಕ ವಯಸ್ಸಿಗೆ ಶಾಸಕರಾಗಿ, ಮಂತ್ರಿಯಾಗಿ, ಕೆಪಿಸಿಸಿ ಅಧ್ಯಕ್ಷರಾಗಿ, ಉಪಮುಖ್ಯಮಂತ್ರಿಯಾಗಿದ್ದ ಡಿಕೆಶಿ ಈಗ ಸಿಎಂ ಗಾದಿಗೇರಿದ್ದು ಗಮನಾರ್ಹ. ಪುಟ್ಟ ಹಳ್ಳಿಯ ರೈತಾಪಿ ಕುಟುಂಬದಲ್ಲಿ ಜನಿಸಿದ್ದ ಡಿ ಕೆ ಶಿವಕುಮಾರ್ ಅವರು ರಾಜಕೀಯವಾಗಿ ಹೆಮ್ಮರವಾಗಿ ಬೆಳೆದು ಈಗ ರಾಜ್ಯದ ಮುಖ್ಯಮಂತ್ರಿ ಆಗಿರುವುದು ಇತಿಹಾಸ.
ಡಿಕೆಶಿಯವರು ಜನಿಸಿದ್ದು 1962ರ ಮೇ 15ರಂದು.. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡಾಲಹಳ್ಳಿಯ ಕೆಂಪೇಗೌಡರು ಹಾಗೂ ಗೌರಮ್ಮನವರ ಪುತ್ರ ಡಿ ಕೆ ಶಿವಕುಮಾರ್.. ಡಿಕೆಶಿಯವರು ಹಿರಿಯ ಪುತ್ರನಾದ್ರೆ, ಡಿ ಕೆ ಸುರೇಶ್ ಅವರು ಕಿರಿಯ ಸಹೋದರ. ಏಕೈಕ ಸಹೋದರಿ ಪದ್ಮಾರವರು.. 1977ರಲ್ಲಿ ಬೆಂಗಳೂರಿನ ವಿದ್ಯಾವರ್ಧಕ ಸಂಘದಲ್ಲಿ SSLC ವ್ಯಾಸಂಗ ಮುಗಿಸಿದ ಡಿಕೆಶಿ, 1980ರಲ್ಲಿ ಬೆಂಗಳೂರಿನ ಹೈದರಾಬಾದ್ ಕರ್ನಾಟಕ ಎಜುಕೇಶನ್ ಸೊಸೈಟಿಯಲ್ಲಿ ಪಿಯುಸಿ ಮುಗಿಸಿದರು.. ಇದಾದ ನಂತರ ಬೆಂಗಳೂರಿನ ಜಗದ್ಗುರು ರೇಣುಕಾಚಾರ್ಯ ಕಾಲೇಜಿನಿಂದ ಬಿಎ ಪದವಿ ಪಡೆದರು. ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಸ್ಟೂಡೆಂಟ್ ಆಗಿದ್ದಾಗಲೇ ಪಾಲಿಟಿಕ್ಸ್ನಲ್ಲಿ ತೊಡಗಿಸಿಕೊಂಡಿದ್ದ ಡಿಕೆಶಿಗೆ ಎನ್ಎಸ್ಯುಐ ಬಾಗಿಲು ತೆರೆಯಿತು.. ಆ ಬಳಿಕ 1981-83ರ ತನಕ ಎನ್ಎಸ್ಯುಐನ ಬೆಂಗಳೂರು ಘಟಕದ ಅಧ್ಯಕ್ಷರಾದರು.. ಬೆಂಗಳೂರಿನ ಆರ್ ಸಿ ಕಾಲೇಜಿನಲ್ಲಿ ಓದುವಾಗ ಯುವ ಕಾಂಗ್ರೆಸ್ ರಾಜ್ಯ ಘಟಕದ ಕಾರ್ಯದರ್ಶಿಯಾಗಿ ಆಯ್ಕೆಗೊಂಡು ಅಚ್ಚರಿ ಮೂಡಿಸಿದ್ದರು. ಅಲ್ಲಿಂದ ಶುರುವಾದ ಡಿಕೆಶಿಯವರ ರಾಜಕೀಯ ಜೀವನ ಈಗ ಸಿಎಂ ಸ್ಥಾನದವರೆಗೂ ಬಂದು ನಿಂತಿದೆ..
ಡಿಕೆಶಿಯವರಿಗೆ ದೇವೇಗೌಡರೇ ಮೊದಲ ಎದುರಾಳಿ
ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಡಿಕೆಶಿಯವರು ರಾಜಕೀಯಕ್ಕೆ ದಾಪುಗಾಲಿಟ್ಟರು.. 1985ರಲ್ಲಿ ಮೊದಲ ಬಾರಿಗೆ ಸಾತನೂರು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಿದರು.. ಆಗಿನ್ನು ಅವರಿಗೆ ವಯಸ್ಸು ಕೇವಲ 23.. ಇವರಿಗೆ ಎದುರಾಳಿಯಾಗಿದ್ದುದು 52ರ ಪ್ರಾಯದ ದೇವೇಗೌಡರು.. ಆ ಕಾಲಕ್ಕೆ ರಾಜ್ಯ ರಾಜಕೀಯದಲ್ಲಿ ಪ್ರಬಲ ನಾಯಕರಾಗಿದ್ದ ಜೆಡಿಎಸ್ನ ಎಚ್ ಡಿ ದೇವೇಗೌಡರ ಎದುರು ಡಿಕೆಶಿ ಸೋಲನುಭವಿಸಬೇಕಾಯಿತು… ಆದ್ರೆ, ಆ ಸೋಲು ಕಾಂಗ್ರೆಸ್ ಹೈಕಮಾಂಡ್ಗೆ ಒಂದು ಬಲವಾದ ಸಂದೇಶ ರವಾನಿಸಿತು.. ಅದೇನಂದ್ರೆ, ಆ ಎಲೆಕ್ಷನ್ನಲ್ಲಿ ಮತಗಳಿಕೆಯಲ್ಲಿ ದೇವೇಗೌಡರು ಮೊದಲ ಸ್ಥಾನದಲ್ಲಿದ್ದರೆ, ಡಿಕೆಶಿಯವರು ಎರಡನೇ ಸ್ಥಾನ ಪಡೆದಿದ್ರು.. ಅತಿ ಸಣ್ಣ ವಯಸ್ಸಿನಲ್ಲೇ ಅದೂ ಮೊದಲ ಸ್ಪರ್ಧೆಯಲ್ಲೇ 29 ಸಾವಿರಕ್ಕೂ ಹೆಚ್ಚು ವೋಟ್ ಪಡೆದಿದ್ದು ಕಾಂಗ್ರೆಸ್ ಹೈಕಮಾಂಡ್ ನಾಯಕರ ಹುಬ್ಬೇರುವಂತೆ ಮಾಡಿತ್ತು.. ಅಷ್ಟೇ ಅಲ್ಲ.. ಸೋಲೇ ಗೆಲುವಿನ ಸೋಪಾನ ಎಂಬಂತೆ ಅದೊಂದು ಸೋಲು ಹಲವು ಗೆಲುವುಗಳಿಗೆ ಮುನ್ನುಡಿ ಬರೆದಿತ್ತು.. ಇದಾದ ನಂತರ 1987ರಲ್ಲಿ ಸಾತನೂರು ಕ್ಷೇತ್ರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿ ಜನಸೇವೆಗೆ ಧುಮುಕಿದರು..
ಸಾತನೂರಿನಲ್ಲಿ ರಾಜಕೀಯ ಮೆಟ್ಟಿಲು ಹತ್ತಿದ ಡಿಕೆಶಿ
ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ ಬಳಿಕ ಡಿಕೆಶಿಯುವರು 1989ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರು.. ಸಾತನೂರು ಕ್ಷೇತ್ರದಿಂದ ವಿಧಾನಸಭೆ ಚುನಾವಣೆ ಗೆಲ್ಲುವ ಮೂಲಕ ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆಗೆ ಎಂಟ್ರಿ ಕೊಟ್ಟರು.. ಆ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಅಧಿಕಾರಕ್ಕೇರಿತು. ವೀರೇಂದ್ರ ಪಾಟೀಲರು ಸಿಎಂ ಆದರು.. 1990ರಲ್ಲಿ ಅನಾರೋಗ್ಯದಿಂದಾಗಿ ಪಾಟೀಲರು ಸಿಎಂ ಸ್ಥಾನವನ್ನು ತ್ಯಜಿಸಬೇಕಾದ ಅನಿವಾರ್ಯತೆ ಬಂದೊದಗಿತು.. ಆ ನಂತರ ವೀರೇಂದ್ರ ಪಾಟೀಲರ ಉತ್ತರಾಧಿಕಾರಿಯಾಗಿದ್ದ ಎಸ್.ಬಂಗಾರಪ್ಪನವರು ಮುಖ್ಯಮಂತ್ರಿ ಪಟ್ಟ ಅಲಂಕರಿಸಿದರೆ, ಡಿಕೆಶಿಯವರಿಗೆ ಸಂಪುಟದ ಬಾಗಿಲು ತೆರೆಯಿತು.. ಕಿರಿ ವಯಸ್ಸಿನಲ್ಲೇ ಡಿಕೆಶಿಯವರು ಬಂಧಿಖಾನೆ ಖಾತೆಯ ಸಚಿವರಾದರು..
ಟಿಕೆಟ್ ತಪ್ಪಿಸಿದವರಿಗೆ ಪಕ್ಷೇತರವಾಗಿ ಗೆದ್ದು ಉತ್ತರ ಕೊಟ್ಟಿದ್ದ ಡಿಕೆಶಿ
1994ರಲ್ಲಿ ಮತ್ತೆ ವಿಧಾನಸಭೆ ಚುನಾವಣೆ ಎದುರಾಯ್ತು.. ಆಗ ಸಚಿವರಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದರೂ ಕೂಡ ಡಿಕೆಶಿಯವರ ಬಗ್ಗೆ ಅಪಪ್ರಚಾರ ಹಾಗೂ ಪಿತೂರಿಗಳಿಂದಾಗಿ ಕಾಂಗ್ರೆಸ್ ಟಿಕೆಟ್ ಮಿಸ್ ಆಗುವಂತಾಯ್ತು. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದು, ಪಿತೂರಿ ಮಾಡಿದ ನಾಯಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದರು.. 1999ರ ಚುನಾವಣೆಯಲ್ಲಿ ಸಾತನೂರು ಕ್ಷೇತ್ರದಿಂದ ಮತ್ತೆ ಗೆಲುವಿನ ಬಾವುಟ ಹಾರಿಸಿದರು.. ಆಗ ಡಿಕೆಶಿಯವರ ರಾಜಕೀಯ ಗುರುಗಳಾದ ದಿವಂಗತ ಎಸ್ ಎಂ ಕೃಷ್ಣ ಅವರ ಸಂಪುಟದಲ್ಲಿ ಸ್ಥಾನ ಪಡೆದರು.. ಸಹಕಾರ ಖಾತೆ ಸಚಿವರಾಗಿ ರೈತರಿಗೆ, ಬಡವರಿಗೆ ಅನುಕೂಲ ಆಗುವಂತಹ ಹಲವು ಕಾರ್ಯಗಳನ್ನು ಕೈಗೊಂಡಿದ್ದರು. 2002ರಲ್ಲಿ ನಗರಾಭಿವೃದ್ಧಿ ಖಾತೆ ಸಚಿವರಾಗಿ ಡಿಕೆಶಿಯವರು ಸಲ್ಲಿಸಿದ ಸೇವೆ ಅಪಾರವಾದುದು.. 2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆ ಕಾರ್ಯಗಳು ನಡೆದವು. ಆಗ ಸಾತನೂರು ಕ್ಷೇತ್ರ ಇತಿಹಾಸದ ಪುಟ ಸೇರಿತು.. ಡಿ ಕೆ ಶಿವಕುಮಾರ್ ಅವರು ಕನಕಪುರ ಕ್ಷೇತ್ರಕ್ಕೆ ಕಾಲಿಟ್ಟರು. 2008, 2013, 2018, 2023ರ ಚುನಾವಣೆಯಲ್ಲಿ ಕನಕಪುರದಿಂದಲೇ ಸ್ಪರ್ಧಿಸಿ ಗೆದ್ದಿದ್ದಾರೆ… 2013ರಲ್ಲಿ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಡಿಕೆಶಿಯವರು ಇಂಧನ ಖಾತೆ ಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದು ಗಮನಾರ್ಹ.. 2018ರ ಮೈತ್ರಿ ಸರ್ಕಾರದಲ್ಲಿ ಜಲಸಂಪನ್ಮೂಲ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿ ಗಣನೀಯ ಸೇವೆ ಸಲ್ಲಿಸಿದರು.
2023ರಲ್ಲಿ ಪಕ್ಷ ಅಧಿಕಾರಕ್ಕೆ ತರುವಲ್ಲಿ ಡಿಕೆಶಿ ಪ್ರಮುಖ ಪಾತ್ರ
2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೇರಿದೆ ಅಂದರೆ ಅದರ ಹಿಂದೆ ಡಿ ಕೆ ಶಿವಕುಮಾರ್ ಅವರ ಪರಿಶ್ರಮ ಸಾಕಷ್ಟಿದೆ.. 2020ರಲ್ಲಿ ತೀವ್ರ ಪೈಪೋಟಿ ನಡುವೆಯೂ ಡಿಕೆಶಿಯವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಒಲಿದು ಬಂತು.. ಡಿಕೆಶಿಯವರ ಪಕ್ಷ ನಿಷ್ಠೆ, ಪರಿಶ್ರಮ, ತ್ಯಾಗದ ಪ್ರತಿಫಲವಾಗಿ 2020ರಲ್ಲಿ ಹೈಕಮಾಂಡ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿತು.. ಬೂತ್ ಮಟ್ಟಕ್ಕಿಳಿದು ಉತ್ಸಾಹಿ ಯುವಕರನ್ನು ಗುರುತಿಸಿ ಜವಾಬ್ದಾರಿ ನೀಡಿ, ಕಾಂಗ್ರೆಸ್ ಬಲಪಡಿಸುವ ಕಾರ್ಯಗಳು ಚುರುಕುಗೊಂಡವು.. 2023 ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಪರ ಬಿರುಸಿನ ಪ್ರಚಾರ ನಡೆಸಿದರು.. ಬಡವರು, ಹಿಂದುಳಿದವರಿಗಾಗಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಜನರ ಮನಸಲ್ಲಿ ಕಾಂಗ್ರೆಸ್ ಬೇರೂರುವಂತೆ ಮಾಡಿದರು.. ಅದರ ಪ್ರತಿಫಲವಾಗಿಯೇ 2023ರಲ್ಲಿ ಸ್ಪಷ್ಟಬಹುಮತ ಪಡೆದು ಅಧಿಕಾರಕ್ಕೇರಿತು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದರೆ, ಡಿಕೆಶಿಯವರು ಉಪಮುಖ್ಯಮಂತ್ರಿಯಾಗಿದ್ದರು. ಈಗ ಕಾಲ ಬದಲಾಗಿ ಒಪ್ಪಂದದಂತೆ ಸಿದ್ದರಾಮಯ್ಯನವರು ಸಿಎಂ ಸ್ಥಾನ ತ್ಯಾಗ ಮಾಡಿದ್ದು, ಡಿಸಿಎಂ ಆಗಿದ್ದ ಡಿಕೆಶಿಗೆ ಮುಖ್ಯಮಂತ್ರಿ ಪಟ್ಟ ಲಭಿಸಿದೆ.
ಇದನ್ನೂ ಓದಿದ್ದೀರಾ? ಕಾಂಗ್ರೆಸ್ನಲ್ಲಿ ತೀವ್ರ ಲಾಬಿ: ರಾಯಚೂರು ಸಚಿವ ಸ್ಥಾನ ಯಾರಿಗೆ?
ಡಿಕೆಶಿಯವರು ಅಂದುಕೊಂಡಂತೆ ಈಗ ಸಿಎಂ ಆಗಿದ್ದಾರೆ. ಆದರೆ ಇನ್ಮುಂದಿನ ಪಯಣ, ಕಲ್ಲು ಮುಳ್ಳಿನ ಹಾದಿ ಎಂದರೆ ತಪ್ಪಾಗಲಾರದು. ಉಳಿದ ಎರಡು ವರ್ಷದ ಅವಧಿಯಲ್ಲಿ ಈ ಕಲ್ಲು ಮುಳ್ಳಿನ ಹಾದಿಯನ್ನು ಹೇಗೆ ನಿಭಾಯಿಸ್ತಾರೆ ಎನ್ನುವುದೇ ಕುತೂಹಲ.




