ಏಪ್ರಿಲ್ ತಿಂಗಳಿನಲ್ಲಿ ನಡೆದ, ಮೇ ತಿಂಗಳಲ್ಲಿ ಪ್ರಕಟಗೊಂಡ ಐದು ರಾಜ್ಯಗಳ ಚುನಾವಣೆ ಮತ್ತು ಫಲಿತಾಂಶಗಳು ಇಡೀ ದೇಶದ ರಾಜಕೀಯ ಚಿತ್ರವನ್ನೇ ಬದಲಿಸಿವೆ. ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಸೋಲುಂಡು ವಿಧಾನಸಭೆಯಿಂದ ಹೊರಗುಳಿಸಿದಿದ್ದಾರೆ. ಅವರ ಪಕ್ಷಗಳೂ ಹೀನಾಯ ಸೋಲು ಕಂಡಿವೆ. ಅದರಲ್ಲೂ, ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಹರಿದು ಹಂಚಿಹೋಗುವ ಪರಿಸ್ಥಿತಿಗೆ ಸಿಲುಕಿದೆ. ತಮಿಳುನಾಡಿನಲ್ಲಿ ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿದ್ದರಿಂದ, ಕೈ ಪಕ್ಷದ ವಿರುದ್ಧ ಡಿಎಂಕೆ ಮುನಿಸಿಕೊಂಡಿದೆ. ಲೋಕಸಭೆಯಲ್ಲಿ ಸೀಟುಗಳ ಪ್ರತ್ಯೇಕತೆಗೂ ಮನವಿ ಮಾಡಿದೆ. ಈ ನಡುವೆ, ಕಾಂಗ್ರೆಸ್ ವಿಪಕ್ಷಗಳನ್ನು ಮತ್ತೆ ಒಗ್ಗೂಡಿಸಿ, ಇಂಡಿಯಾ ಮೈತ್ರಿಕೂಟವನ್ನು ಬಲಪಡಿಸುವ ಪಯತ್ನ ಮಾಡುತ್ತಿದೆ. ಆದರೂ, ಡಿಎಂಕೆ, ಎಎಪಿಯಂತಹ ಪಕ್ಷಗಳು ಸೋಮವಾರದ ಸಭೆಗೆ ಗೈರಾಗಿವೆ. ಇದು, ಮೈತ್ರಿಕೂಟದೊಳಗಿನ ಅಸಮಾಧಾನವನ್ನು ಬಹಿರಂಗಗೊಳಿಸಿದೆ.
ಇದೇ, ಒಡಕನ್ನು ಬಳಸಿಕೊಳ್ಳಲು ಬಿಜೆಪಿ ಕೂಡ ಹವಣಿಸುತ್ತಿದೆ. ತಂತ್ರ-ಕುತಂತ್ರಗಳನ್ನು ರೂಪಿಸುತ್ತಿದೆ. ದೇಶದ ಒಟ್ಟಾರೆ ಚುನಾವಣಾ ಚಿತ್ರಣವನ್ನೇ ಬದಲಿಸಬಲ್ಲ ‘ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ’ (ಡಿಲಿಮಿಟೇಶನ್) ಮಸೂದೆ’ಯನ್ನು ಮತ್ತೆ ಸಂಸತ್ತಿನಲ್ಲಿ ಮಂಡಿಸಲು ಬಿಜೆಪಿ ಸರ್ಕಾರವು ತೀವ್ರ ಪರಿಶೀಲನೆ ಮತ್ತು ಸಿದ್ಧತೆಗಳನ್ನು ನಡೆಸುತ್ತಿದೆ.
ಈ ಹಿಂದೆ, ಭಾರೀ ಬಹುಮತದ ಕೊರತೆಯಿಂದಾಗಿ ಈ ಮಸೂದೆ ಹಿನ್ನಡೆ ಅನುಭವಿಸಿತ್ತು. ಲೋಕಸಭೆ/ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರವಾಗದೆ, ವಾಪಸ್ಸಾಗಿತ್ತು. ಈಗ, ಪ್ರಸ್ತುತ ವಿರೋಧ ಪಕ್ಷಗಳ ಒಕ್ಕೂಟದಲ್ಲಿ ಉಂಟಾಗಿರುವ ಬಿರುಕು ಮತ್ತು ಆಂತರಿಕ ಕಲಹಗಳನ್ನೇ ಬಿಜೆಪಿ ತನಗೆ ಒದಗಿಬಂದಿರುವ ಸುವರ್ಣಾವಕಾಶ ಎಂದು ಪರಿಗಣಿಸಿದೆ. ವಿರೋಧ ಪಕ್ಷಗಳ ಬಲಹೀನತೆಯನ್ನು ಅತ್ಯಂತ ಚಾಣಾಕ್ಷತನದಿಂದ ಬಳಸಿಕೊಂಡು, ಸಂವಿಧಾನ ತಿದ್ದುಪಡಿ ಮಸೂದೆಗೆ ಅಗತ್ಯವಿರುವ ಸಂಖ್ಯಾಬಲವನ್ನು ಕ್ರೋಡೀಕರಿಸಲು ತೆರೆಮರೆಯಲ್ಲಿ ಹುನ್ನಾರ ರೂಪಿಸುತ್ತಿದೆ.
ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆಯು ದಶಕಗಳಿಂದಲೂ ಅತ್ಯಂತ ಸೂಕ್ಷ್ಮ ಹಾಗೂ ಪ್ರಾದೇಶಿಕ ಅಸಮತೋಲನದ ಚರ್ಚೆಯನ್ನು ಹುಟ್ಟುಹಾಕಿರುವ ವಿಷಯ. ವಿಶೇಷವಾಗಿ, ದಕ್ಷಿಣ ಭಾರತದ ರಾಜ್ಯಗಳು ತೀವ್ರವಾಗಿ ವಿರೋಧಿಸುತ್ತಾ ಬಂದಿರುವ ಈ ಮಸೂದೆಯನ್ನು ಸರ್ವಸಮ್ಮತಿಯಿಂದ ಅಂಗೀಕರಿಸಲು ಬಿಜೆಪಿ ಹೊಸ ಮಧ್ಯಂತರ ಸೂತ್ರ ಕಂಡುಕೊಂಡಂತಿದೆ.
ಹಿಂದೆ, ಮೋದಿ ಸರ್ಕಾರ ಮಂಡಿಸಿದ್ದ ಮಸೂದೆಯು, ಜನಸಂಖ್ಯೆಯನ್ನು ನಿಯಂತ್ರಣದಲ್ಲಿಟ್ಟುಕೊಂಡು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ. ಲೋಕಸಭೆಯಲ್ಲಿ ದಕ್ಷಿಣ ರಾಜ್ಯಗಳ ಪ್ರಾತಿನಿಧ್ಯ ಕಡಿಮೆ ಅಗುತ್ತದೆ ಎಂಬ ಗಂಭೀರ ಆತಂಕವಿತ್ತು. ಆದ್ದರಿಂದಲೇ, ಮಸೂದೆಗೆ ಭಾರೀ ವಿರೋಧವೂ ವ್ಯಕ್ತವಾಗಿತ್ತು. ಈಗ, ದಕ್ಷಿಣದ ರಾಜ್ಯಗಳಲ್ಲಿ ಅನ್ಯಾಯವಾಗದ ರೀತಿಯಲ್ಲಿ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮಾಡಲು 2011ರ ಜನಗಣತಿಯ ಬದಲು 1971ರ ಜನಗಣತಿಯನ್ನೇ ಆಧಾರವಾಗಿ ಇಟ್ಟುಕೊಳ್ಳುವ ಇರಾದೆಯನ್ನು ಬಿಜೆಪಿ ವ್ಯಕ್ತಪಡಿಸಿದೆ. ಈ ಮೂಲಕ ದಕ್ಷಿಣ ರಾಜ್ಯಗಳ ರಾಜಕೀಯ ಹಿತಾಸಕ್ತಿ ಹಾಗೂ ಪ್ರಾತಿನಿಧ್ಯಕ್ಕೆ ಯಾವುದೇ ಧಕ್ಕೆ ಬರುವುದಿಲ್ಲ ಎಂಬ ಭರವಸೆ ನೀಡುತ್ತಿದೆ. ಜೊತೆಗೆ, ರಾಜ್ಯಗಳ ಆಂತರಿಕ ರಾಜಕೀಯದ ದೃಷ್ಟಿಯಿಂದ ಅತ್ಯಂತ ಮುಖ್ಯವಾಗಿರುವ ವಿಧಾನಸಭಾ ಕ್ಷೇತ್ರಗಳ ಪುನರ್ವಿಂಗಡಣೆಗೆ ಪ್ರಸ್ತುತ ಚಾಲ್ತಿಯಲ್ಲಿರುವ 2001ರ ಜನಗಣತಿಯ ಬದಲು, ಹೆಚ್ಚು ವೈಜ್ಞಾನಿಕ ಮತ್ತು ನವೀಕೃತವಾಗಿರುವ 2011ರ ಜನಗಣತಿಯನ್ನು ಆಧಾರವಾಗಿಟ್ಟುಕೊಳ್ಳುವ ಬಗ್ಗೆ ಕೇಂದ್ರ ಸರ್ಕಾರ ಚರ್ಚಿಸಿದೆ.
ಈ ಇಬ್ಬಂದಿ ಸೂತ್ರವು ಪ್ರಾದೇಶಿಕ ಪಕ್ಷಗಳ ಆತಂಕವನ್ನು ಶಮನಗೊಳಿಸಿ, ಮಸೂದೆಗೆ ಒಪ್ಪಿಗೆ ಪಡೆಯಲು ಸುಲಭವಾದ ಮಾರ್ಗವನ್ನು ಕಲ್ಪಿಸಿಕೊಡಬಹುದು ಎಂಬುದು ಬಿಜೆಪಿಯ ತಂತ್ರ. ಈ ತಂತ್ರವನ್ನು ಸುಗಮಗೊಳಿಸಲು ‘ಇಂಡಿಯಾ’ ಒಕ್ಕೂಟದಲ್ಲಿ ಉಂಟಾಗಿರುವ ಬಿರುಕು ಪೂರಕವಾಗಲಿದೆ ಎಂದೂ ಬಿಜೆಪಿ ಭಾವಿಸಿದೆ.
ಇತ್ತೀಚಿನ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶಗಳ ನಂತರ ಅಲ್ಲಿನ ರಾಜಕೀಯ ಸಮೀಕರಣಗಳು ಸಂಪೂರ್ಣವಾಗಿ ಬದಲಾಗಿವೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ಕಾಂಗ್ರೆಸ್ ಬಹಿರಂಗ ಬೆಂಬಲ ಘೋಷಿಸಿ ಸರ್ಕಾರ ರಚನೆಯಲ್ಲಿ ಕೈಜೋಡಿಸಿದೆ. ಕಾಂಗ್ರೆಸ್ನ ಈ ನಡೆ ಡಿಎಂಕೆ ನಾಯಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ದಶಕಗಳ ಕಾಲ ಜೊತೆಯಾಗಿದ್ದ ಕಾಂಗ್ರೆಸ್ ತನ್ನ ಬೆನ್ನಿಗೆ ಚೂರಿ ಹಾಕಿದೆ ಎಂದು ಭಾವಿಸಿರುವ ಎಂ. ಕೆ. ಸ್ಟ್ಯಾಲಿನ್ ನೇತೃತ್ವದ ಡಿಎಂಕೆ, ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡು ನವದೆಹಲಿಯಲ್ಲಿ ನಡೆದ ಪ್ರಮುಖ ಇಂಡಿಯಾ ಒಕ್ಕೂಟದ ಸಭೆಯಿಂದಲೇ ಸಂಪೂರ್ಣವಾಗಿ ದೂರ ಉಳಿದಿದೆ. ಲೋಕಸಭೆಯಲ್ಲಿ ಡಿಎಂಕೆ ಸಂಸದರಿಗೆ ಪ್ರತ್ಯೇಕ ಆಸನದ ವ್ಯವಸ್ಥೆಯನ್ನೂ ಕಲ್ಪಿಸುವಂತೆ ಸ್ಪೀಕರ್ಗೆ ಪತ್ರವನ್ನೂ ಬರೆಯಲಾಗಿದೆ. ಇದು ಒಕ್ಕೂಟದ ಒಡಕನ್ನೂ ಸೂಚಿಸಿದೆ.
ಈ ಲೇಖನ ಓದಿದ್ದೀರಾ?: SIR ದಳ್ಳುರಿಯಲ್ಲಿ ಬೇಯುತ್ತಿದ್ದಾರೆ BLOಗಳು; ಒತ್ತಡದಲ್ಲಿ ನಲುಗುತ್ತಿದೆ ಬದುಕು
ಕಾಂಗ್ರೆಸ್ ಮೇಲಿನ ಈ ಕೋಪದಿಂದಾಗಿ, ಮುಂಬರುವ ಅಧಿವೇಶನದಲ್ಲಿ ಡಿಎಂಕೆ, ‘ಡಿಲಿಮಿಟೇಶನ್ ಮಸೂದೆ’ಗೆ ನೇರ ಬೆಂಬಲ ನೀಡದಿದ್ದರೂ, ರಾಷ್ಟ್ರೀಯ ಹಿತಾಸಕ್ತಿ ಮತ್ತು ವಿಷಯಾಧಾರಿತ ಬೆಂಬಲದ ಹೆಸರಿನಲ್ಲಿ ಮಸೂದೆಯ ಪರವಾಗಿ ಮತ ಚಲಾಯಿಸಬಹುದು ಅಥವಾ ಸಭೆಯಿಂದ ಹೊರನಡೆಯುವ ಮೂಲಕ ಪರೋಕ್ಷವಾಗಿ ಬಿಜೆಪಿಗೆ ನೆರವಾಗಬಹುದು ಎಂಬ ಸಾಧ್ಯತೆಯನ್ನು ಬಿಜೆಪಿ ಅಂದಾಜಿಸಿದೆ ಎಂದು ಹೇಳಲಾಗಿದೆ.
ಇನ್ನೊಂದೆಡೆ, ಪೂರ್ವ ಭಾರತದ ಪ್ರಮುಖ ಶಕ್ತಿಯಾಗಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಉಂಟಾಗಿರುವ ಆಂತರಿಕ ಬಂಡಾಯವು ಬಿಜೆಪಿಗೆ ಮತ್ತಷ್ಟು ಶಕ್ತಿ ತುಂಬಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಇತ್ತೀಚಿನ ದಿನಗಳಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳಿಂದಾಗಿ ತೀವ್ರವಾಗಿ ಒಡೆದುಹೋಗಿದೆ. ಮಮತಾರ ಉತ್ತರಾಧಿಕಾರಿ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಅಸಮಾಧಾನಗೊಂಡಿರುವ ಸಂಸದರ ದೊಡ್ಡ ಗುಂಪೊಂದು ಬಂಡಾಯದ ಬಾವುಟ ಹಾರಿಸಿದೆ. ಈ ಬಂಡಾಯ ಸಂಸದರು ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಕೇಂದ್ರ ಸರ್ಕಾರದೊಂದಿಗೆ ಸಕಾರಾತ್ಮಕ ಸಂಬಂಧ ಹೊಂದಲು ಬಯಸುತ್ತಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ, ಸಂಸತ್ತಿನಲ್ಲಿ ಡಿಲಿಮಿಟೇಶನ್ ಮಸೂದೆ ಮಂಡನೆಯಾದಾಗ ಈ ಟಿಎಂಸಿ ಬಂಡಾಯ ಸಂಸದರು ಮುಕ್ತವಾಗಿ ಮಸೂದೆಯನ್ನು ಬೆಂಬಲಿಸುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಇದು ವಿರೋಧ ಪಕ್ಷಗಳ ಸಂಖ್ಯಾಬಲವನ್ನು ಗಣನೀಯವಾಗಿ ಕುಗ್ಗಿಸಿ, ಆಡಳಿತ ಪಕ್ಷಕ್ಕೆ ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತವನ್ನು ಸಾಧಿಸಲು ಸಾಧ್ಯವಾಗಬಹುದು ಎಂಬ ಲೆಕ್ಕಾಚಾರ ಬಿಜೆಪಿಯಲ್ಲಿದೆ. ಇನ್ನು, ಈಗಾಗಲೇ ಎಎಪಿಯಲ್ಲಿದ್ದ ಎಲ್ಲ ಸಂಸದರೂ ರಾಘವ್ ಚಡ್ಡಾ ನೇತೃತ್ವದಲ್ಲಿ ಬಿಜೆಪಿ ಪಾಳಯ ಸೇರಿಕೊಂಡಿದ್ದಾರೆ.
ರಾಜಕೀಯದಲ್ಲಿನ ಸಮಯ ಸಾಧಕತನ ಮತ್ತು ಸೂಕ್ತ ತಂತ್ರಗಾರಿಕೆಗಳು ಹೇಗೆ ಯಶಸ್ಸನ್ನು ತಂದುಕೊಡಬಲ್ಲವು ಎಂಬುದನ್ನು ಬಿಜೆಪಿ ರೂಪಿಸುವ ತಂತ್ರ-ಕುತಂತ್ರಗಳು ಸ್ಪಷ್ಟವಾಗಿ ಎತ್ತಿ ತೋರಿಸುತ್ತವೆ. ಒಂದು ಕಡೆ ವಿರೋಧ ಪಕ್ಷಗಳ ಪರಸ್ಪರ ಅಪನಂಬಿಕೆ ಮತ್ತು ಒಡಕನ್ನು ತನ್ನ ಲಾಭಕ್ಕೆ ಬಿಜೆಪಿ ಬಳಸಿಕೊಳ್ಳುತ್ತಿದೆ. ಮತ್ತೊಂದೆಡೆ, ಜನಗಣತಿಯ ಆಧಾರದ ವರ್ಷಗಳನ್ನು ಅತ್ಯಂತ ಜಾಣ್ಮೆಯಿಂದ ಬದಲಾಯಿಸುವ ಮೂಲಕ ದಕ್ಷಿಣ ಮತ್ತು ಪ್ರಾದೇಶಿಕ ಪಕ್ಷಗಳ ವಿರೋಧದ ತೀವ್ರತೆಯನ್ನು ತಗ್ಗಿಸಲು ಯತ್ನಿಸುತ್ತಿದೆ.
ಡಿಎಂಕೆಯ ವಿಷಯಾಧಾರಿತ ನಿಲುವು ಮತ್ತು ಟಿಎಂಸಿಯ ಆಂತರಿಕ ಒಡಕಿನಿಂದ ಸಿಗಲಿರುವ ಸಂಖ್ಯಾಬಲದ ಬೆಂಬಲವು ಕ್ರೋಡೀಕರಣಗೊಂಡರೆ, ಮುಂಬರುವ ಮಳೆಗಾಲದ ಅಧಿವೇಶನದಲ್ಲಿ ಡಿಲಿಮಿಟೇಶನ್ ಮಸೂದೆಯು ಕಾನೂನಾಗಿ ರೂಪಾಂತರ ಪಡೆಯುವ ಆತಂಕವಿದೆ. ಇದು ಕೇವಲ ಒಂದು ಮಸೂದೆಯ ಅಂಗೀಕಾರವಾಗಿರದೆ, ಮುಂದಿನ ದಿನಗಳಲ್ಲಿ ಭಾರತದ ಒಟ್ಟಾರೆ ರಾಜಕೀಯ ಭೂಪಟ ಮತ್ತು ಪ್ರಾದೇಶಿಕ ಶಕ್ತಿಗಳ ಪ್ರಾತಿನಿಧ್ಯವನ್ನೇ ಬುಡಮೇಲು ಮಾಡಲಿದೆ.




