ದೇಶದ ಜನರ ಮೇಲೆ ಚುನಾವಣಾ ಆಯೋಗ ಮತ್ತು ಮೋದಿ ಸರ್ಕಾರ ಹೇರಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಭಾರೀ ವಿರೋಧ ಆಕ್ರೋಶ ವ್ಯಕ್ತವಾಗುತ್ತಿದೆ. ಕರ್ನಾಟಕದಲ್ಲಿಯೂ ಎಸ್‌ಐಆರ್ ಹಿಮ್ಮೆಟ್ಟಲು ಮತ್ತು ಎಸ್‌ಐಆರ್ ಪ್ರಕ್ರಿಯೆಯ ಸ್ವರೂಪವನ್ನು ಬದಲಿಸಲು ಹೋರಾಟಗಳು ನಡೆಯುತ್ತಿವೆ. ತೀವ್ರ ವಿರೋಧಗಳ ನಡುವೆಯೂ ಎಸ್‌ಐಆರ್ ಜಾರಿಯಲ್ಲಿದೆ. ಈ ಪ್ರಕ್ರಿಯೆಗೆ ಬೆನ್ನೆಲುಬಾಗಿರುವ ‘ಮತಗಟ್ಟೆ ಮಟ್ಟದ ಅಧಿಕಾರಿ’ಗಳ (ಬಿಎಲ್‌ಒ) ಪಾಲಿಗೂ ಎಸ್‌ಐಆರ್ ಒಂದು ದುಸ್ವಪ್ನವಾಗಿ ಪರಿಣಮಿಸಿದೆ.
ಎಸ್‌ಐಆರ್‌ನಿಂದಾಗಿ ಮತದಾರರ ರೀತಿಯಲ್ಲಿಯೇ ಬಿಎಲ್‌ಒಗಳೂ ಕೂಡ ಬಸವಳಿದುಹೋಗಿದ್ದಾರೆ. ಅತಿಯಾದ ಕೆಲಸದ ಒತ್ತಡ ಮತ್ತು ಅವಾಸ್ತವಿಕ ಗಡುವುಗಳ ಕಾರಣದಿಂದಾಗಿ ಅವರೆಲ್ಲರೂ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೀವ-ಜೀವನ-ಆರೋಗ್ಯವನ್ನೂ ಕಳೆದುಕೊಳ್ಳುತ್ತಿದ್ದಾರೆ.
ಬಿಎಲ್‌ಒಗಾಗಿ ದುಡಿಯುತ್ತಿರುವವರಲ್ಲಿ ಬಹುಸಂಖ್ಯಾತರು ಪ್ರಾಥಮಿಕ ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಕಂದಾಯ ಇಲಾಖೆಯ ತಳಮಟ್ಟದ ಸಿಬ್ಬಂದಿಗಳೇ ಆಗಿದ್ದಾರೆ
. ಇವರೆಲ್ಲರಿಗೂ ದಿನವಿಡೀ ತಮ್ಮದೇ ಆದ ಅಧಿಕೃತ ಕೆಲಸಗಳಿರುತ್ತವೆ. ಶಿಕ್ಷಕರು ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುವುದು, ಪರೀಕ್ಷೆ ನಡೆಸುವುದು ಹಾಗೂ ಶಾಲಾ ದಾಖಲೆಗಳನ್ನು ನಿರ್ವಹಿಸುವುದರಲ್ಲಿ ಬ್ಯುಸಿಯಾಗಿದ್ದರೆ, ಅಂಗನವಾಡಿ ಕಾರ್ಯಕರ್ತೆಯರು ಗರ್ಭಿಣಿಯರು, ಬಾಣಂತಿಯರು ಹಾಗೂ ಪುಟ್ಟ ಮಕ್ಕಳ ಪೌಷ್ಟಿಕಾಂಶದ ಉಸ್ತುವಾರಿ ನೋಡಿಕೊಳ್ಳುವ ದೈನಂದಿನ ಕರ್ತವ್ಯದಲ್ಲಿ ನಿರತರಾಗಿರುತ್ತಾರೆ.
ಈ ಎಲ್ಲ ಮೂಲಭೂತ ಕೆಲಸಗಳ ನಡುವೆ, ಮತದಾರರ ಪಟ್ಟಿ ಪರಿಷ್ಕರಣೆಯಂತಹ ಹೆಚ್ಚು ಸಮಯ ತೆಗೆದುಕೊಳ್ಳುವ ಕೆಲಸವನ್ನೂ ಅವರ ಮೇಲೆ ಹೇರಲಾಗಿದೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಕಚೇರಿ ಅಥವಾ ಶಾಲೆ ಮುಗಿಸಿ ಆಯಾಸಗೊಂಡ ನಂತರವೂ ಅವರು ಮನೆ-ಮನೆಗೆ ಅಲೆದು ಮತದಾರರ ಮಾಹಿತಿ ಸಂಗ್ರಹಿಸಬೇಕಾಗಿದೆ. ಈ ಎರಡು ದೋಣಿಗಳ ಮೇಲಿನ ಪಯಣವು ಅವರಲ್ಲಿ ತೀವ್ರ ದೈಹಿಕ ಮತ್ತು ಮಾನಸಿಕ ಬಳಲಿಕೆಯನ್ನು ತಂದೊಡ್ಡಿದೆ.
ಇದರ ಜೊತೆಗೆ, ತರಬೇತಿಯ ಕೊರತೆ ಮತ್ತು ತಾಂತ್ರಿಕ ಸವಾಲುಗಳು ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿವೆ. ಚುನಾವಣಾ ಆಯೋಗವು ಇತ್ತೀಚಿನ ವರ್ಷಗಳಲ್ಲಿ ಪ್ರತಿಯೊಂದು ಪ್ರಕ್ರಿಯೆಯನ್ನೂ ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿದ್ದು, ಮಾಹಿತಿಗಳನ್ನು ಆನ್‌ಲೈನ್ ಆ್ಯಪ್‌ಗಳ ಮೂಲಕವೇ ಅಪ್‌ಲೋಡ್ ಮಾಡಬೇಕು. ಆದರೆ, ದುರಂತವೆಂದರೆ ಬಿಎಲ್‌ಒಗಳಿಗೆ ಈ ಬಗ್ಗೆ ಸಮರ್ಪಕ ತರಬೇತಿಯನ್ನೂ ನೀಡಿಲ್ಲ. ಬಿಎಲ್‌ಒಗಳಲ್ಲಿ ಅನೇಕರು ಹಿರಿಯ ವಯಸ್ಸಿನವರಾಗಿದ್ದು, ಅವರಿಗೆ ಸ್ಮಾರ್ಟ್‌ಫೋನ್ ಬಳಕೆಯ ಬಗ್ಗೆ ಆಳವಾದ ಜ್ಞಾನವೂ ಇರುವುದಿಲ್ಲ. ಇನ್ನು ಕೆಲವು ಗ್ರಾಮೀಣ ಭಾಗಗಳಲ್ಲಿ ಇಂಟರ್ನೆಟ್ ಸಂಪರ್ಕದ ಸಮಸ್ಯೆ ಮತ್ತು ಆ್ಯಪ್‌ಗಳು ಪದೇ ಪದೇ ಹ್ಯಾಂಗ್ ಆಗುವ ಕಾರಣದಿಂದಾಗಿ ಮಾಹಿತಿಯನ್ನು ತುಂಬಲು ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ತಂತ್ರಜ್ಞಾನದ ಅರಿವಿಲ್ಲದ ಕಾರಣ ಮಾಹಿತಿ ತಪ್ಪಾಗಿ ನಮೂದಾದರೆ ಇಲಾಖಾ ಶಿಸ್ತು ಕ್ರಮ ಜರುಗಬಹುದು ಎಂಬ ಭೀತಿಯೂ ಅವರನ್ನು ಸದಾ ಕಾಡುತ್ತಿರುತ್ತದೆ.
ಈ ಎಲ್ಲ ಸವಾಲುಗಳ ಮಧ್ಯೆ ಇಡೀ ಎಸ್‌ಐಆರ್ ಪ್ರಕ್ರಿಯೆಯನ್ನು ಕೇವಲ 3 ತಿಂಗಳ ಅಲ್ಪಾವಧಿಯಲ್ಲಿ ಮುಗಿಸಬೇಕೆಂದು ಚುನಾವಣಾ ಆಯೋಗವು ಕಠಿಣ ಗಡುವು ವಿಧಿಸಿದೆ. ಈ ಮೂರು ತಿಂಗಳ ಅವಧಿಯಲ್ಲಿ ಬಿಎಲ್‌ಒಗಳು ಎದುರಿಸುವ ಪ್ರಮುಖ ಸವಾಲೆಂದರೆ, ಕೇವಲ ಒಂದು ತಿಂಗಳ ಅವಧಿಯಲ್ಲಿ ಸುಮಾರು ಒಂದು ಸಾವಿರದಷ್ಟು ಎನ್ಯುಮರೇಷನ್ (ಮಾಹಿತಿ ಸಂಗ್ರಹಣಾ ಫಾರ್ಮ್)ಗಳನ್ನು ಭರ್ತಿ ಮಾಡಬೇಕು.
ಅಷ್ಟೇ ಅಲ್ಲದೆ, ಪ್ರತಿಯೊಬ್ಬ ಮತದಾರನ ನಿಖರತೆ ಪರಿಶೀಲಿಸಲು ಕನಿಷ್ಠ ಮೂರು ಬಾರಿ ಅವರ ಮನೆಗೆ ಖುದ್ದಾಗಿ ಭೇಟಿ ನೀಡುವುದು ಕಡ್ಡಾಯ. ಇಂದಿನ ಧಾವಂತದ ಬದುಕಿನಲ್ಲಿ ಜನರು ಮನೆಯಲ್ಲಿ ಸಿಗುವುದು ಅಪರೂಪವಾಗಿರುವುದರಿಂದ, ಒಂದೇ ಮನೆಗೆ ಮೂರು-ನಾಲ್ಕು ಬಾರಿ ಅಲೆಯಬೇಕಾದ ಪರಿಸ್ಥಿತಿ ಇದೆ. ಈ ಅವಾಸ್ತವಿಕ ಗುರಿಗಳು ಬಿಎಲ್‌ಒಗಳ ಮೇಲಿನ ಒತ್ತಡವನ್ನು ದುಪ್ಪಟ್ಟುಗೊಳಿಸಿವೆ.
ಈ ಕೆಲಸದ ಒತ್ತಡ ಕೇವಲ ಮಾನಸಿಕ ಕಿರಿಕಿರಿಯಾಗಿ ಉಳಿಯದೆ, ಇಂದು ಅಧಿಕಾರಿಗಳ ಪ್ರಾಣಕ್ಕೆ ಸಂಚಕಾರ ತಂದಿದೆ. ಈಗಾಗಲೇ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡಿರುವ ದೇಶದ ವಿವಿಧ ರಾಜ್ಯಗಳಲ್ಲಿ ಅತ್ಯಂತ ದುರದೃಷ್ಟಕರ ಘಟನೆಗಳು ನಡೆದಿವೆ. ನಿಗದಿಪಡಿಸಿದ ಸಮಯದೊಳಗೆ ಆ್ಯಪ್‌ನಲ್ಲಿ ಡೇಟಾ ಎಂಟ್ರಿ ಮಾಡಲು ಸಾಧ್ಯವಾಗದ ಕಾರಣ ಮತ್ತು ಮೇಲಧಿಕಾರಿಗಳಿಂದ ನಿರಂತರವಾಗಿ ಬಂದ ನೋಟಿಸ್ ಹಾಗೂ ತರಾಟೆಗೆ ಹೆದರಿ ಹಲವು ಬಿಎಲ್‌ಎಗಳು ಆತ್ಮಹತ್ಯೆ ಮಾಡಿಕೊಂಡಿರುವ ಕಹಿ ನಿದರ್ಶನಗಳು ಕಣ್ಮುಂದಿವೆ. ಸತತ ಓಡಾಟ, ನಿದ್ದೆಯಿಲ್ಲದ ರಾತ್ರಿಗಳು ಹಾಗೂ ತೀವ್ರ ಒತ್ತಡದ ಕಾರಣದಿಂದಾಗಿ ಕರ್ತವ್ಯದ ಅವಧಿಯಲ್ಲೇ ಹಲವು ಶಿಕ್ಷಕರು ಹೃದಯಾಘಾತದಿಂದ ಮರಣ ಹೊಂದಿದ್ದಾರೆ.
ಈವರೆಗೆ ಎಸ್‌ಐಆರ್‌ನಲ್ಲಿರುವ 13 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 45 ಮಂದಿ ಬಿಎಲ್‌ಒಗಳು ತಮ್ಮ ಜೀವ ಕಳೆದುಕೊಂಡಿದ್ದಾರೆ. ಅದರಲ್ಲೂ, ಉತ್ತರ ಪ್ರದೇಶದಲ್ಲಿಯೇ ಸುಮಾರು 15 ಮಂದಿ ಬಿಎಲ್‌ಒಗಳು ಕೆಲಸದ ಒತ್ತಡದಿಂದ ಆತ್ಮಹತ್ಯೆ ಮತ್ತು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಅವರಲ್ಲಿ, ಮೊರಾದಾಬಾದ್‌ನಲ್ಲಿ ಶಿಕ್ಷಕರೊಬ್ಬರು ಕೆಲಸದ ಒತ್ತಡದ ಬಗ್ಗೆ ಭಾವುಕ ವಿಡಿಯೋ ರೆಕಾರ್ಡ್ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತೊಂದು ಘೋರ ಘಟನೆಯಲ್ಲಿ, ಮದುವೆಗೆ ಕೇಲವೇ ಗಂಟೆಗಳ ಮೊದಲು 26 ವರ್ಷದ ಯುವತಿಯೊಬ್ಬರು ಬಿಎಲ್‌ಒ ಕೆಲಸದ ಅತಿಯಾದ ಒತ್ತಡದಿಂದ ಹೃದಯಾಘಾತಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡರು. ಮತ್ತೊಬ್ಬ ಬಿಎಲ್‌ಒ ತಮ್ಮ ಮಗಳ ಮದುವೆಗೂ ರಜೆ ಸಿಗದ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅಂತೆಯೇ, ಪಶ್ಚಿಮ ಬಂಗಾಳದಲ್ಲಿ 7 ಮಂದಿ, ಬಿಹಾರದಲ್ಲಿ 10 ಮಂದಿ, ಮಧ್ಯಪ್ರದೇಶದಲ್ಲಿ 5, ಗುಜರಾತ್‌ನಲ್ಲಿ 4, ಕೇರಳದಲ್ಲಿ ಒಬ್ಬರು ಹಾಗೂ ಇತರ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ 3 ಮಂದಿ ಬಿಎಲ್‌ಒಗಳು ಸಾವನ್ನಪ್ಪಿದ್ದಾರೆ.
ಈ ಲೇಖನ ಓದಿದ್ದೀರಾ?: ಪ್ರಜಾಪ್ರಭುತ್ವ ದಮನಕ್ಕೆ ಮೋದಿ ‘SIR’ ಅಸ್ತ್ರ ಬಳಸುತ್ತಿರುವುದು ಯಾಕೆ?
ಒಬ್ಬ ಮನುಷ್ಯನಿಗೆ ತಡೆದುಕೊಳ್ಳಲು ಸಾಧ್ಯವಾಗದಷ್ಟು ಮಾನಸಿಕ ಕಿರುಕುಳ ಮತ್ತು ಕೆಲಸ ಮುಗಿಸದಿದ್ದರೆ ಸಸ್ಪೆಂಡ್ ಮಾಡಲಾಗುವುದು ಎಂಬ ಮೇಲಧಿಕಾರಿಗಳ ಬೆದರಿಕೆಗಳು ಬಿಎಲ್‌ಒಗಳನ್ನು ತೀವ್ರ ಖಿನ್ನತೆಗೆ ತಳ್ಳುತ್ತಿವೆ.
ಬಿಎಲ್‌ಒಗಳ ಈ ಮಾರಣಾಂತಿಕ ಸಂಕಷ್ಟಕ್ಕೆ ತಕ್ಷಣವೇ ಪರಿಹಾರ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ. ಸದ್ಯ ಇರುವ 3 ತಿಂಗಳ ಗಡುವನ್ನು ಕನಿಷ್ಠ 6 ತಿಂಗಳವರೆಗೆ ವಿಸ್ತರಿಸುವುದು ಅತ್ಯಂತ ಮೂಲಭೂತ ಪರಿಹಾರವಾಗಿದೆ. ಕಾಲಾವಕಾಶ ಹೆಚ್ಚಾದಾಗ ಕೆಲಸದ ಒತ್ತಡ ಅರ್ಧದಷ್ಟು ಕಡಿಮೆಯಾಗುತ್ತದೆ. ಜೊತೆಗೆ, ಮತದಾರರ ಪಟ್ಟಿಯೂ ಯಾವುದೇ ತಪ್ಪುಗಳಿಲ್ಲದೆ ನಿಖರವಾಗಿ ಮೂಡಿಬರಲು ಸಾಧ್ಯವಾಗುತ್ತದೆ.
ಇದರೊಂದಿಗೆ ಡಿಜಿಟಲ್ ಆ್ಯಪ್‌ಗಳ ಬಳಕೆಯ ಬಗ್ಗೆ ತಳಮಟ್ಟದವರೆಗೂ ಪ್ರಾಯೋಗಿಕ ತರಬೇತಿ ನೀಡಬೇಕು. ಕೇವಲ ಶಿಕ್ಷಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಹೆಚ್ಚಿನ ಕೆಲಸ ಮತ್ತು ಒತ್ತಡ ಹೇರದೆ, ನಿರುದ್ಯೋಗಿ ಯುವಜನರು ಅಥವಾ ಅರೆಕಾಲಿಕ ಸಿಬ್ಬಂದಿಗಳನ್ನೂ ಈ ಪ್ರಕ್ರಿಯೆಯಲ್ಲಿ ಒಳಗೊಂಡು, ಅವರಿಗೆ ಗೌರವಧನ ದುಡಿಸಿಕೊಳ್ಳಬಹುದು. ಇದರಿಂದ, ಬಿಎಲ್‌ಒಗಳ ಮೇಲಿನ ಹೊರೆ ತಗ್ಗುತ್ತದೆ




