ಸನಾತನ ಧರ್ಮ ಬೇಕೋ? ’ಪ್ರತೀತ್ಯ ಸಮುತ್ಪಾದ’ ಬೇಕೋ?

Date:

Advertisements
‘ಸನಾತನ’ದ ನಿರ್ಮೂಲನೆ ಎಂದರೆ ಶಾಶ್ವತವಾಗಿ ಉಳಿಸಿಕೊಳ್ಳಲು ಯತ್ನಿಸುತ್ತಿರುವ ತರತಮಗಳ ಮೇಲಿನ ಗಂಭೀರ ಚರ್ಚೆ ಎಂದೇ ಭಾವಿಸಬೇಕಾಗುತ್ತದೆ

’ಸನಾತನ ಧರ್ಮವು ಡೆಂಘಿ, ಮಲೇರಿಯಾ, ಕೋವಿಡ್‌ ಇದ್ದಂತೆ. ಅದನ್ನು ನಿರ್ಮೂಲನೆ ಮಾಡಬೇಕು’ ಎಂದು ತಮಿಳುನಾಡಿನ ಡಿಎಂಕೆ ಯುವನಾಯಕ ಉದಯನಿಧಿ ಸ್ಟಾಲಿನ್‌ ಹೇಳಿಕೆ ಕೊಟ್ಟ ತಕ್ಷಣ ಬಿಜೆಪಿ ಮತ್ತು ಸಂಘಪರಿವಾರ ವಿಪರೀತ ಆಕ್ಟೀವ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿ, “ತಕ್ಕ ಉತ್ತರ ಅಗತ್ಯ” ಎಂದು ಪ್ರಚೋದನಾತ್ಮಕ ಭಾಷೆಯಲ್ಲಿ ಮಾತನಾಡಿದ್ದಾರೆ. ಮಣಿಪುರ ಗಲಭೆಯನ್ನು ನಿಲ್ಲಿಸುವಲ್ಲಿ ನಿಷ್ಕ್ರಿಯವಾಗಿರುವ ಮೋದಿಯವರೇಕೆ ಇಷ್ಟೊಂದು ಆಸ್ಥೆ ವಹಿಸಿ ಸನಾತನಧರ್ಮ ಸಂಬಂಧ ಹೇಳಿಕೆ ನೀಡಿದ್ದಾರೆ? ತಮ್ಮ ಆಡಳಿತ ವೈಫಲ್ಯಗಳನ್ನು ಮುಚ್ಚಿಹಾಕಿಕೊಳ್ಳಲು ’ಸನಾತನ ವಿವಾದ’ವನ್ನು ಮೋದಿ ಬಳಸುತ್ತಿದ್ದಾರಾ? ಎಂಬ ಪ್ರಶ್ನೆಗಳು ಹುಟ್ಟುವುದು ಸಹಜ.

ಅದರಾಚೆಗೆ ನೋಡಿದರೂ ’ಸನಾತನ ಧರ್ಮ’ದ ಹೆಸರಲ್ಲಿ ಮಾಡುತ್ತಿರುವ ಸಾಮಾಜಿಕ ಅನ್ಯಾಯವನ್ನು ನಾವು ಚರ್ಚಿಸಿ ಉತ್ತರ ಕಂಡುಕೊಳ್ಳುವುದು ಸೂಕ್ತ. ನಿಜಕ್ಕೂ ’ಸನಾತನ ಧರ್ಮ’ದ ನಿರ್ಮೂಲನೆ ಎಂದರೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ’ಸನಾತನ’ಕ್ಕೂ ’ಜಾತಿ, ಅಸ್ಪೃಶ್ಯತೆ’ಗೂ ಇರುವ ಸಂಬಂಧಗಳನ್ನು ಅವಲೋಕಿಸಬೇಕಿದೆ. ನಿಜಕ್ಕೂ ಏನಿದು ಸನಾತನ ಧರ್ಮ?

’ಸನಾತನ’ ಎಂದರೆ ‘ಶಾಶ್ವತ’ಎಂದರ್ಥ. ಸನಾತನ ಧರ್ಮ ಎಂದರೆ ‘ಶಾಶ್ವತವಾದ ಧರ್ಮ’ ಎಂಬ ಅರ್ಥವನ್ನು ಸೂಚಿಸುತ್ತದೆ. ’ಶಾಶ್ವತ ಅಸಮಾನತೆ’ಗೂ ’ಸನಾತನ ಧರ್ಮ’ಕ್ಕೂ ಇರುವ ಸಂಬಂಧಗಳನ್ನು ನೋಡುವುದು ಸೂಕ್ತ. ಸನಾತನ ಧರ್ಮ ಎಂಬುದನ್ನು ಭಿನ್ನವಾಗಿ ನೋಡುವ ಎರಡು ಗುಂಪುಗಳಿವೆ. ಒಂದು: ಅಲ್ಲಿನ ಕಂದಾಚಾರಗಳನ್ನು ಹೋಗಲಾಡಿಸಿ ಒಳಿತನ್ನು ಉಳಿಸಿಕೊಳ್ಳಬೇಕೆನ್ನುವ ಸುಧಾರಣಾವಾದಿಗಳು. ಎರಡು: ಸನಾತನದಲ್ಲಿ ಎಲ್ಲವೂ ಇದೆ, ಅದು ಹೇಳಿದ್ದೇ ಸತ್ಯ ಎನ್ನವ ಹಿಂದುತ್ವ ಪ್ರಣೀತ ರಾಜಕೀಯ ವರ್ಗ. ಸದ್ಯಕ್ಕೆ ಸುಧಾರಣಾವಾದಿಗಳಿಗಿಂತ ಯಥಾಸ್ಥಿತಿವಾದಿಗಳೇ ಅಧಿಕಾರ ಕೇಂದ್ರಿತವಾಗಿರುವುದರಿಂದ ಇವರು ಪ್ರತಿಪಾದಿಸುವ ’ಸನಾತನ’ವನ್ನು ಒಪ್ಪುವುದಾದರೂ ಹೇಗೆ?  ಇಂದು ಅಪಾಯ ಇರುವುದು ’ಸನಾತನ’ (ಶಾಶ್ವತ) ಕೆಡುಕುಗಳನ್ನು ಪೋಷಿಸಲು ಸಕ್ರಿಯವಾಗಿರುವ ರಾಜಕೀಯದಿಂದ.

Advertisements

ಸನಾತನ ಧರ್ಮವನ್ನು ಧರ್ಮವೆಂದು ಪ್ರತಿಪಾದಿಸುವ ರಾಜಕೀಯ ವರ್ಗ ಅಂಗೀಕರಿಸಿರುವ ಮತ್ತು ಮುನ್ನೆಲೆಗೆ ತರುವ ಧರ್ಮಗ್ರಂಥಗಳ ಪ್ರಕಾರ- ಯಾವುದು ಬದಲಾಗದ ಕ್ರಮ? ಯಾವುದು ಶಾಶ್ವತ ಮೌಲ್ಯ?

ವೇದ, ಸ್ಮೃತಿ, ಸದಾಚಾರ ಮತ್ತು ಆತ್ಮ ತುಷ್ಟಿ- ಇವು ಧರ್ಮದ ಸ್ಥಾಪಕ ರಚನಾತ್ಮಕ ಅಂಶಗಳು (ಲಕ್ಷಣಗಳು) ಎನ್ನುತ್ತಾನೆ ಮನು. ವರ್ಣಾಶ್ರಮ ಧರ್ಮದ ಸಾಂಪ್ರದಾಯಿಕ ಆಚರಣೆಯೇ ಸದಾಚಾರ ಎನ್ನುತ್ತದೆ ಮನುಸ್ಮೃತಿ.

ವಿರಾಟ್ ಪುರುಷನ ‘ಉನ್ನತ’ ಅಂಗಗಳಿಂದ ಜನಿಸಿದವರು ಶ್ರೇಷ್ಠರು ಮತ್ತು ವಿರಾಟ್ ಪುರುಷನ ದೇಹದಲ್ಲಿನ ಕೆಳ ಅಂಗಗಳಲ್ಲಿ ಜನಿಸಿದವರು ನಿಕೃಷ್ಟರು ಎಂದು ಅದು ಪ್ರತಿಪಾದಿಸುತ್ತದೆ. ವರ್ಣಾಶ್ರಮ ಧರ್ಮವು ಪ್ರತಿಯೊಂದು ವರ್ಣಕ್ಕೂ ನಿರ್ದಿಷ್ಟ ಪಾತ್ರಗಳನ್ನು, ಕರ್ತವ್ಯಗಳನ್ನು ವಿಧಿಸುತ್ತದೆ. ಮನುಸ್ಮೃತಿಯ ಪ್ರಕಾರ ಬ್ರಾಹ್ಮಣನ ಸ್ವಧರ್ಮವೆಂದರೆ- ಅಧ್ಯಯನ, ಬೋಧನೆ, ಉಡುಗೊರೆಗಳ ಸ್ವೀಕೃತಿ ಮತ್ತು ಯಜ್ಞ. ಶೂದ್ರನ ಕರ್ತವ್ಯವೆಂದರೆ- ದ್ವಿಜರ ಸೇವೆ. ಶೂದ್ರನಿಗೆ ಸಂಪತ್ತನ್ನು ಸಂಗ್ರಹಿಸುವ ಅಥವಾ ಕಲಿಕೆಯಲ್ಲಿಯಾಗಲೀ, ಯಾವುದೇ ಚಟುವಟಿಕೆಯಲ್ಲಿ ಆಗಲೀ ತೊಡಗಿಸಿಕೊಳ್ಳುವ ಹಕ್ಕಿಲ್ಲ. ’ಚಾಂಡಾಲ’ರೆಂದು ಕರೆಸಿಕೊಂಡ ಅಂತ್ಯಜರ ಸ್ಥಿತಿಯಂತೂ ಇನ್ನೂ ಶೋಚನೀಯ. ಇಂತಹ ಶ್ರೇಣಿಕೃತ ವ್ಯವಸ್ಥೆಯನ್ನು ಪ್ರತಿಪಾದಿಸುವ ಮನುಸ್ಮೃತಿಯನ್ನು ಬಾಬಾ ಸಾಹೇಬ ಡಾ.ಬಿ.ಆರ್‌.ಅಂಬೇಡ್ಕರ್‌ ಸುಟ್ಟು ಹಾಕಿದ್ದರು.

ಶಂಕರಾಚಾರ್ಯರ ಅದ್ವೈತ ಸಿದ್ಧಾಂತವು ಚಾತುರ್ವರ್ವ ಒಪ್ಪುತ್ತದೆ. ಭಗವಂತನು ಚಾತುರ್ವರ್ಣವನ್ನು ಸೃಷ್ಟಿಸಿದ್ದಾನೆ ಎಂದು ತಮ್ಮ ಗೀತಾ ಭಾಷ್ಯದಲ್ಲಿ ವಿವರಿಸುತ್ತಾರೆ. ಧರ್ಮಶಾಸ್ತ್ರ ಮತ್ತು ಪುರಾಣ ಗ್ರಂಥಗಳು ಯಾವುದನ್ನು ’ಸತಾತನ ಧರ್ಮ’ ಎನ್ನುತ್ತಿವೆಯೋ ಅದು ’ವರ್ಣಾಶ್ರಮ ಧರ್ಮ’ವೇ ಆಗಿದೆ. ಅದನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಕಾರ್ಯಸೂಚಿಗಳು ಇಂದು ಚಾಲ್ತಿಯಲ್ಲಿವೆ. ಎನ್‌ಇಪಿ ಹೆಸರಲ್ಲಿ ತಳಸಮುದಾಯದ ಶಿಕ್ಷಣವನ್ನು ನಾಜೂಕಾಗಿ ಹಂತಹಂತವಾಗಿ ಕಿತ್ತುಕೊಳ್ಳಲಾಗುತ್ತಿದೆ. ಸಾಮಾಜಿಕ ನ್ಯಾಯ, ಪ್ರಾತಿನಿಧ್ಯ ಪರಿಕಲ್ಪನೆಯನ್ನು ದುರ್ಬಲ ಮಾಡಲಾಗುತ್ತಿದೆ.

‘ಸನಾತನ’ ಎಂಬುದು ಚಲನೆಗೆ ವಿರುದ್ಧವಾದ ಪದವಾಗಿ ಗೋಚರಿಸುತ್ತಿದೆ. ‘ಸನಾತನ ಧರ್ಮ’ ಎಂಬುದು ಚಲನಶೀಲತೆಯನ್ನು ಕಳೆದುಕೊಂಡಿರುವುದರ ಪ್ರತಿರೂಪವಾಗಿ ಕಾಣುತ್ತಿದೆ. ಸನಾತನ ಧರ್ಮದಲ್ಲಿ ವರ್ಣ (ಜಾತಿ) ಶಾಶ್ವತ, ಅಸ್ಪೃಶ್ಯತೆ ಶಾಶ್ವತ. ಸನಾತನವನ್ನು ಬೋಧಿಸುವ ಸ್ಮೃತಿಗಳ ಪ್ರಕಾರ- ಬ್ರಾಹ್ಮಣ ಮೇಲು, ಶೂದ್ರ ಮತ್ತಿತರರು ಕೀಳು. ಇದು ಸನಾತನವಾದದ್ದು, ಅಂದರೆ ಶಾಶ್ವತವಾದದ್ದು, ಬದಲಾಗಬಾರದ ಸ್ಥಿತಿ. ಆದರೆ ನಮ್ಮ ಸಂವಿಧಾನ ಮೊದಲ ಬಾರಿಗೆ ಈ ಸನಾತನವನ್ನು ‘ನಿರ್ಮೂಲನೆ’ ಮಾಡುವ (ಪ್ರಶ್ನಿಸುವ) ಕಾರ್ಯಸೂಚಿಯನ್ನು ಹಾಕಿಕೊಟ್ಟಿತು.

ಯಾವುದನ್ನು ಸನಾತನ ಧರ್ಮ ಎನ್ನುತ್ತಿದ್ದಾರೋ ಅದು- ಬುದ್ಧ, ಬಸವಾದಿ ಶರಣರ ತತ್ವಗಳಿಗೆ ವಿರುದ್ಧವಾದದ್ದು. ಶರಣರು, ‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎಂದರು. ಬುದ್ಧ ಇದನ್ನೇ ‘ಪ್ರತೀತ್ಯ ಸಮುತ್ಪಾದ’ ಎಂದನು.

ಬೌದ್ಧಿಕ ಕಸರತ್ತಿನಿಂದ ಕೂಡಿದ, ತರ್ಕಲೋಕದಲ್ಲಿ ಮುಳುಗಿದ್ದ ಮತ್ತು ಮನುಷ್ಯನನ್ನು ಗುಲಾಮಗಿರಿಗೆ ತಳ್ಳಿದ್ದ ವೈದಿಕ ಚಿಂತನಾ ಕ್ರಮದಲ್ಲಿನ ಮಿಥ್ಯಾ ದೃಷ್ಟಿಗಳನ್ನು ಪೂರ್ಣಪ್ರಮಾಣದಲ್ಲಿ ನಿಕಷಕ್ಕೆ ಒಡ್ಡಿದ್ದು ಈ ದೇಶದ ಶ್ರಮಣ ಪರಂಪರೆ. ಶ್ರಮವೇ ಪ್ರಧಾನವಾದ, ತರ್ಕಕ್ಕಿಂತ ಮೌನವೇ ಬಿಡುಗಡೆ ಎಂದು ದಾರಿ ತೋರಿದ ಬೌದ್ಧ, ಜೈನ, ಸಿದ್ಧ, ಆರೂಢ, ಅವಧೂತ, ವಚನ, ಸೂಫಿ, ಮಂಟೇಸ್ವಾಮಿ, ಮಲೆಯ ಮಹದೇಶ್ವರ ಮೊದಲಾದವುಗಳ ತಾತ್ವಿಕತೆಯಲ್ಲಿ ಒಂದು ರೀತಿಯ ಸಾಮ್ಯತೆ ಅಥವಾ ಒಂದು ಮತ್ತೊಂದರ ಮುಂದುವರಿಕೆಯೋ, ರೂಪಾಂತರವೋ ಎಂಬ ಅರಿವು ಪ್ರವಹಿಸಿದೆ. ವಿಜ್ಞಾನ ಪ್ರತಿಪಾದಿಸುವ ’ಚಲನೆ’ ಇಲ್ಲಿ ಪ್ರಧಾನವಾಗಿದೆ.

ಬೌದ್ಧ ತಾತ್ವಿಕತೆಯ ಪ್ರಚಾರ ಮಾಡಿದ ಬಹುಮುಖ್ಯ ಪರಿಕಲ್ಪನೆಗಳಲ್ಲಿ ’ಪ್ರತೀತ್ಯ ಸಮುತ್ಪಾದ’ವೂ ಒಂದು. ನಾಗಾರ್ಜುನನ ‘ಮೂಲಮಾಧ್ಯಮಕಕಾರಿಕ’ ಅಂತಹ ಮಹತ್ವದ ಕೃತಿ. ಬೌದ್ಧ ತಾತ್ವಿಕತೆಗಳ ಕುರಿತು ನಿರಂತರವಾಗಿ ಬರೆಯುತ್ತಿರುವ ನಟರಾಜ ಬೂದಾಳು ಅವರು ಈ ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ. ಜೊತೆಗೆ ಬುದ್ಧನಡೆ ಸರಣಿಯಲ್ಲಿ ’ಪ್ರತೀತ್ಯ ಸಮುತ್ಪಾದ’ ಎಂಬ ಕಿರುಹೊತ್ತಿಗೆಯನ್ನೂ ಪ್ರಕಟಿಸಿದ್ದಾರೆ.

‘ಮೂಲಮಾಧ್ಯಮಕಕಾರಿಕ’ ಕೃತಿಯು ತರ್ಕದ ಭಾಷೆಯಲ್ಲಿ ಮೈದಾಳಿದೆ. ಎರಡನೇ ಬುದ್ಧ ಎಂದೇ ಖ್ಯಾತನಾಗಿರುವ, ‘ಮಹಾಯಾನ’ ಮಾರ್ಗದ ಮಹಾಪ್ರವರ್ತಕನೂ ಆದ ನಾಗಾರ್ಜುನ ಯಾಕೆ ತರ್ಕದ ಬೆನ್ನೇರಿದ? ಇದಕ್ಕೆ ಆ ಕಾಲದ ಸತ್ಯಗಳನ್ನು ತಿಳಿಯಬೇಕು. ಬುದ್ಧನ ನಂತರದಲ್ಲಿ ಬೌದ್ಧ ತಾತ್ವಿಕತೆಯನ್ನು ಹೀಯಾಳಿಸುವ ಪ್ರವೃತ್ತಿ ಹೆಚ್ಚಾಗಿತ್ತು. ವೈದಿಕ ಪರಂಪರೆಯ ತಾರ್ಕಿಕತೆ ಗೊಂದಲಗಳನ್ನು ಸೃಷ್ಟಿಸಿತ್ತು, ವೈಜ್ಞಾನಿಕತೆ ಮತ್ತು ಮೌನದ ಬಗ್ಗೆ ಮಾತನಾಡುವ ಬೌದ್ಧತ್ವವನ್ನು ತರ್ಕ, ಒಣವೇದಾಂತದಿಂದ ತುಚ್ಛೀಕರಿಸುವ ಪ್ರಯತ್ನಗಳಾಗುತ್ತಿದ್ದವು. ಗೌತಮ ಬುದ್ಧನ ನಂತರ ಸುಮಾರು 500 ವರ್ಷಗಳ ನಂತರ ಬಂದ ನಾಗಾರ್ಜುನ ಇದನ್ನು ಗಮನಿಸಿದ. ‘ತರ್ಕಕ್ಕೆ ತರ್ಕ’ ಎಂಬ ಹಾದಿಯನ್ನು ಹಿಡಿದ. ವೈದಿಕರಿಗೆ ಸವಾಲನ್ನು ಎಸೆದ. ಹೀಗಾಗಿ ನಾಗಾರ್ಜುನನ ಮಾಧ್ಯಮಕಾಕಾರಿಕ ಕೃತಿಯು ತರ್ಕವನ್ನು ಮೈದೆಳೆದಿದ್ದರೂ ಅಲ್ಲಿ ಹರಿಯುವುದು ಲೋಕದ ಕುರಿತ ನಿಜವಾದ ಅರಿವಷ್ಟೇ.

ಇದನ್ನು ಓದಿ ಅಂಗಿ ಕಳಚಿ ಎಂದರು, ನಾನು ದೇಗುಲದ ಒಳಗೆ ಕಾಲಿಡಲಿಲ್ಲ: ಕೇರಳ ಘಟನೆ ಮೆಲುಕು ಹಾಕಿದ ಸಿದ್ದರಾಮಯ್ಯ

ಏನಿದು ಪ್ರತೀತ್ಯ ಸಮುತ್ಪಾದ?

ಈ ಜಗತ್ತಿಗೆ ಆದಿ, ಅಂತ್ಯವೆಂಬುದಿಲ್ಲ. ಇದಿರೂ ಬದಿರೆಂಬುದಿಲ್ಲ. ಎಲ್ಲವೂ ಒಂದನ್ನೊಂದು ಒಳಗೊಳ್ಳುತ್ತಾ, ಪರಿಣಾಮ ತತ್ವದ ಮೂಲಕ ಚಲನೆಯಷ್ಟೇ ಇದೆ. ಇಲ್ಲಿ ಬೀಜ ಮೊದಲೋ, ಸಸಿ ಮೊದಲೋ ಎಂಬುದು ಹಿಮ್ಮುಖ ಚಲನೆಯಾಗುತ್ತದೆ. ಜಗತ್ತು ಹಾಗೆ ಇಲ್ಲ ಎಂಬ ಬುದ್ಧನ ‘ಪ್ರತೀತ್ಯ ಸಮುತ್ಪಾದ’ ಲೋಕಜ್ಞಾನವನ್ನು ತರ್ಕದ ಎರಕಕ್ಕೆ ಒಯ್ದು ವೈದಿಕ ಜಗತ್ತನ್ನು ಬೆಚ್ಚಿಸಿದ. ನಾಗಾರ್ಜುನನ ಮೂಲ ಕರ್ನಾಟಕ ಎಂಬುದು ಈ ನಾಡಿಗೆ ಹೆಮ್ಮೆಯ ಸಂಗತಿ.

“ಲೋಕದಲ್ಲಿ ಜರುಗುತ್ತಿರುವ ಎಲ್ಲಾ ಚಟುವಟಿಕೆಗಳೂ ಕಾರಣ, ಸನ್ನಿವೇಶ ಮತ್ತು ಪರಿಣಾಮಗಳ ಪರಸ್ಪರ ಸಂಬಂಧದಲ್ಲಿ ಮಾತ್ರ ಉಂಟಾಗುತ್ತಿದೆ. ಕಾರಣ ಕಾರಣವಾಗುವುದು ಸನ್ನಿವೇಶ ಮತ್ತು ಪರಿಣಾಮಗಳುಂಟಾದರೆ ಮಾತ್ರ. ಹಾಗೆಯೇ ಉಳಿದವುಗಳಿಗೆ ಅಸ್ತಿತ್ವ ಉಂಟಾಗುವುದು ಪರಸ್ಪರ ಸಂಬಂಧದಲ್ಲಿಯೇ ವಿನಾ ಯಾವುದಕ್ಕೂ ಸ್ವತಂತ್ರವಾದ ಶಾಶ್ವತವಾದ ಅಸ್ತಿತ್ವವೆಂಬುದಿಲ್ಲ. ಇದನ್ನೇ ಪ್ರತೀತ್ಯ ಸಮುತ್ಪಾದ” ಎಂದು ಬುದ್ಧ ಕರೆದ.

ಇದನ್ನು ಓದಿ ಸಾಮಾಜಿಕ ನ್ಯಾಯ ಶಾಶ್ವತವಾಗಿ ಅರಳಲಿ: ಪತ್ರ ಮುಖೇನ ಬಿಜೆಪಿಗೆ ಉದಯನಿಧಿ ಸ್ಟಾಲಿನ್ ತಿರುಗೇಟು

ಲೋಕಪ್ರವಾಹವು ‘ನಿರಂತರ ಉಂಟಾಗುತ್ತ’ಲೇ ಇರುವ ಪ್ರಕ್ರಿಯೆ. ಅದುವೇ ‘ಪ್ರತೀತ್ಯ ಸಮುತ್ಪಾದ’. ಯಾವುದೂ ಸ್ಥಗಿತ ಸ್ಥಿತಿಯಲ್ಲಿ ಇಲ್ಲ. ಸರಿಯಾದ ಅರಿವು ಇದುವೇ. ಬುದ್ಧ ತಾತ್ವಿಕತೆ ಯಾವುದನ್ನು ನಿರ್ವಾಣ, ಝೆನ್‌, ತಾವೋ ಎಂದಿತೋ ಅದನ್ನೇ ವಚನಾದಿ ಶರಣರು, ಶೂನ್ಯ, ಬಯಲು ಎಂದರು. ಶ್ರಮಣ ಪರಂಪರೆಯು ವಿವಿಧ ತೆರನಾಗಿ ಹರಿಯುತ್ತಾ ಬಂದಿದೆ. ರೂಪಾಂತರಗೊಂಡಿದೆ. ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಹಲವು ಮಾರ್ಗಗಳಲ್ಲಿ ನುಡಿದಿದೆ.

ಬುದ್ಧನ ‘ಪ್ರತೀತ್ಯ ಸಮುತ್ಪಾದ’ವು- ದ್ವೈತ, ಅದ್ವೈತಗಳನ್ನು ತಿರಸ್ಕರಿಸುತ್ತದೆ. ವಚನಾದಿ ಶರಣರು ಯಾವುದನ್ನು ಜಂಗಮ ಎಂದರೋ, ಬಯಲು ಎಂದರೋ ಅದುವೇ ‘ಪ್ರತೀತ್ಯ ಸಮುತ್ಪಾದ’. ಚಲನಾ ಮೀಮಾಂಸೆಯನ್ನು ಪ್ರತಿಪಾದಿಸಿದ್ದು ‘ಪ್ರತೀತ್ಯ ಸಮುತ್ಪಾದ’. ಈ ಜಗತ್ತು ಈಗಾಗಲೇ ಆಗಿ ಹೋಗಿರುವ ಸಂಗತಿಯಲ್ಲ. ಅದಕ್ಕೆ ಕೊನೆ ಮೊದಲೆಂಬುದು ಇಲ್ಲ. ಅದು ಆಗುತ್ತಲೇ ಇರುವ ನಿರಂತರ ಪ್ರಕ್ರಿಯೆ. ಜಂಗಮ ಸ್ವರೂಪಿಯಾದದ್ದು. ಅದು ‘ಸ್ಥಾವರ’ ರೂಪಿಯಲ್ಲ. ದ್ವೈತ, ಅದ್ವೈತಕ್ಕೆ ಅಂಟಿ ಕೂತ ಬಲ ಪಂಥೀಯತೆ ಅಥವಾ ವೈದಿಕ ಪರಂಪರೆ ಸ್ಥಾವರ ರೂಪಿಯಾಗಿ ಕಾಣುತ್ತದೆ. ಜಾತೀಯತೆ, ಮತೀಯತೆ, ಅಸ್ಪೃಶ್ಯತೆಯ ಗೂಡಾಗಿ ಯಥಾಸ್ಥಿತಿಯನ್ನು ಬಯಸುತ್ತಾ ಮನುಷ್ಯನನ್ನು ದುಃಖಕ್ಕೆ ತಳ್ಳಿದೆ. ಈ ತಾರತಮ್ಯವನ್ನು ತಿರಸ್ಕರಿಸಿ, ಕರುಣಾ ಮೈತ್ರಿಯನ್ನು ಪ್ರತಿಪಾದಿಸಿದ ‘ಪ್ರತೀತ್ಯ ಸಮುತ್ಪಾದ’ ನಿಜದ ವೈಜ್ಞಾನಿಕ ಚಿಂತನೆ. ’ಶಾಶ್ವತ’ ಎಂಬ ತರತಮವನ್ನು ನಾವು ಪ್ರಶ್ನಿಸಬೇಕಾಗುತ್ತದೆ. ಚಲನಶೀಲತೆಗೆ ತೆರೆದುಕೊಳ್ಳಬೇಕಾಗುತ್ತದೆ. ‘ಸನಾತನ’ದ ನಿರ್ಮೂಲನೆ ಎಂದರೆ ಶಾಶ್ವತವಾಗಿ ಉಳಿಸಿಕೊಳ್ಳಲು ಯತ್ನಿಸುತ್ತಿರುವ ತರತಮಗಳ ಮೇಲಿನ ಗಂಭೀರ ಚರ್ಚೆ ಎಂದೇ ಭಾವಿಸಬೇಕಾಗುತ್ತದೆ.

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X