ಮಾಂಸಾಹಾರಿಗಳು ಹಿಂಸೆಯ ಪರವಲ್ಲ; ಸಸ್ಯಾಹಾರಿಗಳು ಅಹಿಂಸಾವಾದಿಗಳಲ್ಲ. ಆಹಾರ ಬೇರೆ ಹಿಂಸೆಯ ಪರಿಕಲ್ಪನೆ ಬೇರೆ.
ಇದು ಆಗಬೇಕಿತ್ತು. ಇದು ಕೇವಲ ಸಾಹಿತ್ಯ ಸಮ್ಮೇಳನದ ಮೆನುವಿನ ಪ್ರಶ್ನೆಯಲ್ಲ. ಸಾಹಿತ್ಯ ಸಮ್ಮೇಳನದಲ್ಲಿ ಮಾಂಸದೂಟದ ಬಗೆಗೆ ಏನನ್ನೂ ಮಾತನಾಡದಿದ್ದರೆ ಆಗ ಯಾರೂ ತಕರಾರು ತೆಗೆಯುತ್ತಿರಲಿಲ್ಲ; ಎಲ್ಲರೂ ಸುಮ್ಮನಿರುತ್ತಿದ್ದರು. ಈಗ ಸುಮ್ಮನಿರಲಾಗದು. ನಮ್ಮೆಲ್ಲರ ಅನ್ನವನ್ನು ಅಪಮಾನಿಸುವವರನ್ನು, ‘ನೀವು ಹೊಟ್ಟಿಗೆ ಏನನ್ನು ತಿನ್ನುತ್ತೀರಿ?’ ಎಂದು ಕೇಳಲೇಬೇಕಾದ ಹೊತ್ತು. ಇದೇನು ದೊಡ್ಡ ಸಂಗತಿ ಅಲ್ಲ ಎನ್ನಲಾಗದು. ಇದನ್ನು ಸುಮ್ಮನೆ ಬಿಟ್ಟರೆ, ನಮ್ಮ ಮುಖ್ಯಮಂತ್ರಿಯನ್ನೂ ಹೊರಗೆ ನಿಲ್ಲಿಸಿ, ‘ಬೆಳಗ್ಗೆ ಏನು ತಿಂದು ಬಂದಿದ್ದೀರಿ? ಕರುಳು ಬಗೆದು ತೋರಿಸಿ. ಆಮೇಲೆ ಒಳಗೆ ಬಿಟ್ಟುಕೊಳ್ಳುವುದೋ ಇಲ್ಲವೋ ತೀರ್ಮಾನಿಸುತ್ತೇವೆ’ ಎನ್ನುತ್ತಾರೆ. ಅದೂ ನಮ್ಮದೇ ದೈವದ ಗುಡಿಯ ಬಾಗಿಲಲ್ಲಿ. ಇನ್ನು ಎಲ್ಲರಿಗೂ ಸೇರಿದ ಸಾಹಿತ್ಯದ ಹಬ್ಬಕ್ಕೆ ಕುಂಬಳಕಾಯಿ ಹುಳಿ ಒಳಗೆ ಬಾಡು ಹೊರಗೆ ಅನ್ನೋದನ್ನು ಸಹಿಸಲಾಗದು. ಕುಂಬಳ ಕೂಡ ನಾವೇ ಬೆಳೆದದ್ದು; ಕುರಿ ಕೋಳಿಯನ್ನೂ ನಾವೇ ಸಾಕಿದ್ದು. ಯಾವುದನ್ನು ತಿನ್ನಲೂ ನಮಗೇ ಮೊದಲ ಹಕ್ಕು; ಏನನ್ನೂ ಬೆಳೆಯದ ನಿಮ್ಮದಲ್ಲ ಎನ್ನುವುದರಲ್ಲಿ ತಪ್ಪಿಲ್ಲ.
ಯಾವಾಗಲೂ ಇಲ್ಲದ ಜಗಳ ಈಗ ಏಕೆ? ನಮಗೆ ಸಾಹಿತ್ಯ ಮುಖ್ಯವೋ ಊಟ ಮುಖ್ಯವೋ? ಒಂದೆರಡು ದಿನ ಮಾಂಸಾಹಾರ ಇಲ್ಲದಿದ್ದರೆ ಏನು ಮುಳುಗಿ ಹೋಗುತ್ತದೆ? ಇತ್ಯಾದಿ ಪ್ರಶ್ನೆಗಳನ್ನು ಯಾರು ಯಾರಿಗೆ ಕೇಳಬೇಕೋ ಅದು ತಿರುಗು ಮುರುಗಾಗಿದೆಯಲ್ಲ ಅದು ಸಮಸ್ಯೆ. ಮಂಡ್ಯ ಜಿಲ್ಲೆ ಅನ್ನ ಬೆಳೆದು ದೇಶಕ್ಕೆ ನೀಡುವ ನೆಲ. ಊಟೋಪಚಾರದಲ್ಲಿ ಎಂದೂ ಕೊರತೆ ಮಾಡದ, ಯಾರೂ ಹಸಿದು ಮಲಗಲು ಬಿಡದ ಒಕ್ಕಲು ಆವರಣ. ಹೊರಗಿನಿಂದ ಹೋದವರು ಅವರು ನೀಡಿದ್ದನ್ನು ಹಿಡಿ ತುಂಬುವ ದೊಡ್ಡ ತುತ್ತು ಮಾಡಿ ಬಾಯಿ ತುಂಬ ತಿನ್ನಬೇಕು. ಅದನ್ನು ಕಂಡು ಅವರು ತಾವೇ ತಿಂದಷ್ಟು ಸಂತೋಷ ಪಡುತ್ತಾರೆ. ಅದನ್ನು ಬಿಟ್ಟು ನಿಮಗೆ ಏನನ್ನು ತಿನ್ನಬೇಕು ಎನ್ನುವುದು ಗೊತ್ತಿಲ್ಲ; ನಿಮ್ಮ ಆಹಾರವು ಗುಟ್ಕಾ ಮತ್ತು ಮದ್ಯಕ್ಕೆ ಸಮನಾದುದು; ಏನು ತಿನ್ನಬೇಕು ಎನ್ನುವುದನ್ನು ನಾವು ಹೇಳಿಕೊಡುತ್ತೇವೆ; ಅದನ್ನು ಮಾತ್ರ ತಿನ್ನಿ ಎಂದು ಊಟಕ್ಕೆ ಕರೆಯುತ್ತಿರುವವರ ಮುಖಕ್ಕೆ ಹೇಳಿದಾಗಲೂ ಅದನ್ನು ಕೇಳಿಸಿಕೊಂಡು ಅವರು ಸುಮ್ಮನಿರಬೇಕೆ?
ಇದನ್ನೂ ಓದಿರಿ: ಒಂದು ಕಿಡಿ ಹೊತ್ತಿಸಬಲ್ಲ ‘ಸಾಹಿತ್ಯ ಬೆಳಕು’
ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧಪಡಿಸಬೇಕಾದ ಊಟ ಏನು? ಎನ್ನುವ ಪ್ರಶ್ನೆಯಷ್ಟನ್ನೆ ಇಟ್ಟುಕೊಂಡು ಅದನ್ನು ತೀರ್ಮಾನ ಮಾಡಿದ್ದಿದ್ದರೆ ಈ ಸಮಸ್ಯೆ ಖಂಡಿತಾ ಬರುತ್ತಿರಲಿಲ್ಲ. ಈ ಸಾಂಸ್ಕೃತಿಕ ವಸಾಹತುಶಾಹಿ ನಮ್ಮನ್ನು ಅಪಮಾನಿಸಲು ನಮ್ಮ ಅನ್ನವನ್ನು, ನಮ್ಮ ದೈವಗಳನ್ನು, ನಮ್ಮ ಭಾಷೆಯನ್ನು, ನಮ್ಮ ಸಂಸ್ಕೃತಿಯನ್ನು, ನಮ್ಮ ಸಾಹಿತ್ಯವನ್ನು ಒಂದೋ ಕೀಳುಗಳೆಯುವುದು, ಅದಾಗದಿದ್ದರೆ ಅಪಹರಿಸುವುದು, ಅದೂ ಸಾಧ್ಯವಾಗದಿದ್ದರೆ ಮೆಲ್ಲಗೆ ಒಳಗೆ ಸೇರಿಸಿಕೊಂಡು ತಮ್ಮದನ್ನಾಗಿಸುವುದು – ಇವುಗಳನ್ನು ನೂರಾರು ವರುಷಗಳಿಂದ ಮಾಡುತ್ತಲೇ ಬಂದಿದೆ. ಇಂತಹ ಯಾವ ಅವಕಾಶವನ್ನೂ ಬಿಡದೆ ಸಾವಿರಾರು ವರುಷಗಳಿಂದ ನಮ್ಮ ಮೇಲೆ ಯಜಮಾನಿಕೆ ನಡೆಸಿಕೊಂಡು ಬರುತ್ತಿರುವ ಸಾಂಸ್ಕೃತಿಕ ಯಜಮಾನಿಕೆಯ ಸ್ಪಷ್ಟವಾದ ಮುಂದುವರಿಕೆ ಇದು. ಈ ದುಷ್ಟ ಯಜಮಾನಿಕೆ ಇವತ್ತೇ ಕೊನೆಯಾಗಬೇಕು.

ಇಲ್ಲೊಂದು ಸೂಕ್ಷ್ಮವಿದೆ. ನಾವು ತಿನ್ನುವ ಆಹಾರ ಯಾವುದಿರಬೇಕು ಎನ್ನುವುದನ್ನು ನಿರ್ಧರಿಸುವ ಹಕ್ಕಿರುವುದು ನಾವು ಬದುಕುತ್ತಿರುವ ಆವರಣಕ್ಕೆ, ನೆಲಕ್ಕೆ. ಅದು ನಮ್ಮ ನಿತ್ಯದ ಆಹಾರವನ್ನು ಬೆಳೆದುಕೊಡುವ ತಾಯಿ. ಇದು ಪ್ರಪಂಚದ ಎಲ್ಲ ಭಾಗಗಳಿಗೂ ಒಪ್ಪುವ ಮಾತು. ಅದನ್ನು ಹೊರಗಿನಿಂದ ಬಂದು ಕೈಯೊಡ್ಡುವವರು ಅಪಮಾನಿಸಬಾರದು. ನಾವು ಇನ್ನೊಂದು ನೆಲಕ್ಕೆ ಹೋಗಿ ಅವರ ಅನ್ನವನ್ನು ಅಪಮಾನಿಸಬಾರದು. ಇನ್ನು ನಾವು ಸಸ್ಯಾಹಾರಿಗಳು, ಅದು ಮಾತ್ರ ನಮ್ಮ ಆಹಾರ ಎನ್ನುವ ಹಕ್ಕು ಸಸ್ಯಾಹಾರಿಗಳಿಗೆ ಇದೆ. ಅದೂ ಸಮಾನವಾದ ಹಕ್ಕು ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಅನ್ನವನ್ನು ಯಾರೂ ಅಪಮಾನಿಸಬಾರದು. ಅವರಿಗೆ ಅವರ ಹಕ್ಕಿನ ಊಟವನ್ನು ನೀಡುವುದರಲ್ಲಿ ಕೊರತೆಯಾಗಬಾರದು. ಊಟ ಅವರವರ ಆಯ್ಕೆ.
ಇದು ಕನ್ನಡ ಸಾಹಿತ್ಯದ ವಿಶ್ವ ಸಮ್ಮೇಳನ. ವಿಶ್ವದ ಎಲ್ಲ ಕಡೆಯ ಜನರೂ ಪಾಲ್ಗೊಳ್ಳಬಹುದು. ಅವರು ಆಹಾರದ ತಾರತಮ್ಯದ ಈ ಸಣ್ಣಬುದ್ದಿಯನ್ನು ಕಂಡು ನಕ್ಕಾರು. ಕನ್ನಡವೆಂದರೆ ಕೇವಲ ಭಾಷಾ ವೈವಿಧ್ಯತೆ ಮಾತ್ರವಲ್ಲ. ಕನ್ನಡದ ಬಹುತ್ವ ವ್ಯಕ್ತವಾಗುವುದು ಮಾತಿನಲ್ಲಿ, ಆಹಾರದಲ್ಲಿ, ಉಡುಗೆ ತೊಡುಗೆಗಳಲ್ಲಿ, ಕಲೆ ಜನಪದದಲ್ಲಿ, ದಿನನಿತ್ಯದ ಬದುಕಿನಲ್ಲಿ. ಈ ವೈವಿಧ್ಯತೆಗೆ ಭಂಗ ಬಾರದಿರಲಿ. ಕನ್ನಡದ ಬಹುತ್ವವನ್ನು ಗೌರವಿಸದಿರುವ ಯಾವ ನಡೆಯೂ ಎಲ್ಲಿಯೂ ಸಂಭವಿಸದಿರಲಿ.
ಇದನ್ನೂ ಓದಿರಿ: ಆಹಾರದ ಸ್ವಾತಂತ್ರ್ಯವನ್ನು ಮನ್ನಿಸದ ಸಮಾಜದಲ್ಲಿ ಅರ್ಥಪೂರ್ಣ ಡೆಮಾಕ್ರಸಿಯಿದೆ ಎನ್ನಲಾಗದು
ಇದು ಕೇವಲ ಯಾವ ಊಟ ಅನ್ನುವ ಪ್ರಶ್ನೆಯಲ್ಲ. ಬಹುಜನರನ್ನು ಅವರ ಅನ್ನದ ಮೂಲಕ ಅಪಮಾನಿಸಿ ತಮ್ಮ ಯಜಮಾನಿಕೆಯನ್ನು ಸ್ಥಾಪಿಸಿಕೊಳ್ಳುವ ಕೇಡಾಳ ಬುದ್ಧಿ. ಪರವಾಗಿಲ್ಲ ಬಿಡಿ ಅವರದ್ದೇ ಊಟ ಆಗಲಿ ಎನ್ನುವುದು; ಪರವಾಗಿಲ್ಲ ಬಿಡಿ ಅಪಮಾನಿಸಲಿ ಅನ್ನುವುದು ಎರಡೂ ಒಂದೇ. ಇದು ಸಾವಿರಾರು ವರುಷಗಳ ಕೇಡಿನ ಮುಂದುವರಿಕೆ. ಈಗಲೇ ಕೊನೆಯಾಗಲಿ. ಈ ಸಾಹಿತ್ಯ ಸಮ್ಮೇಳನ ಒಂದು ನೆಪವಾಗಲಿ. ಇನ್ನು ಮಾಂಸಾಹಾರ ಒದಗಿಸುವುದು ಕಷ್ಟ, ಬಡಿಸುವುದು ಕಷ್ಟ, ನಿಭಾಯಿಸುವುದು ಕಷ್ಟ – ಇವೆಲ್ಲ ನಿಜ. ಆದರೆ ಸಮಸ್ಯೆ ಇದಲ್ಲ. ಇದು ಅಲಾಯಿದ ತೀರ್ಮಾನಿಸಬೇಕಾದ್ದು. ಸಮಸ್ಯೆ ನಮ್ಮ ಅಸ್ಮಿತೆಯ ತಿರಸ್ಕಾರದ್ದು. ಅದನ್ನು ಕುರಿತು ಮೊದಲು ಮಾತನಾಡಿದ್ದು ಅಪಮಾನಿಸುತ್ತ ಬಂದವರು. ಅವರು ಅನ್ನಬೇಕಾದ್ದನ್ನು ಅಂದು ಈಗ ಮಳ್ಳರ ಹಾಗೆ ಸುಮ್ಮನಿದ್ದಾರೆ. ಅವರ ಪರವಾಗಿ ಇವರೇ ಮಾತನಾಡುತ್ತಿದ್ದಾರೆ!
ನಿಸರ್ಗದಲ್ಲಿ ದೊರಕುವ ಯಾವ ಯಾವ ಆಹಾರವನ್ನು ಹೇಗೆ ಹದಗೊಳಿಸಿಕೊಂಡು ತಿನ್ನಬೇಕು ಎನ್ನುವುದನ್ನು ನಮ್ಮ ನಿಸರ್ಗ ವಿವೇಕ ನಮಗೆ ಮನನ ಮಾಡಿಕೊಟ್ಟಿದೆ. ಮಾಂಸಾಹಾರಿಗಳು ಹಿಂಸೆಯ ಪರವಲ್ಲ; ಸಸ್ಯಾಹಾರಿಗಳು ಅಹಿಂಸಾವಾದಿಗಳಲ್ಲ. ಆಹಾರ ಬೇರೆ ಹಿಂಸೆಯ ಪರಿಕಲ್ಪನೆ ಬೇರೆ. ಇವೆಲ್ಲ ಹೊಸದಲ್ಲ. ನೂರಾರು ಕಡೆ ಚರ್ಚೆಗೆ ಒಳಗಾಗಿವೆ. ನಮ್ಮ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡದ ಬಹುತ್ವ, ಈ ನೆಲದ ನಿಸರ್ಗ ವಿವೇಕ ಮತ್ತು ನಾವು ನಂಬಿ ಬಾಳುತ್ತಿರುವ ಸಂವಿಧಾನಕ್ಕೆ ಅಪಮಾನವಾಗದಿರಲಿ.

ಎಸ್. ನಟರಾಜ ಬೂದಾಳು
ಎಸ್.ನಟರಾಜ ಬೂದಾಳು ಅವರು ಕನ್ನಡದ ಪ್ರಮುಖ ಚಿಂತಕರಲ್ಲಿ ಒಬ್ಬರು. ಬೌದ್ಧತಾತ್ವಿಕತೆಯ ನೆಲೆಗಳನ್ನು ಮನಮುಟ್ಟುವಂತೆ ಓದುಗರಿಗೆ ಒದಗಿಸಿಕೊಟ್ಟ ಅಗ್ರಗಣ್ಯ ಬರಹಗಾರರು. ಶ್ರಮಣ ಪರಂಪರೆಗಳ ಚರ್ಚೆಗೆ ಹೊಸ ಆಯಾಮ ಒದಗಿಸಿಕೊಟ್ಟ ಇವರು, 'ಸರಹಪಾದ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ ಪಡೆದಿದ್ದಾರೆ. ಕನ್ನಡ ಕಾವ್ಯಮೀಮಾಂಸೆ, ನಾಗಾರ್ಜುನನ ಮೂಲಮಧ್ಯಮಕಕಾರಿಕಾ, ನಾಗಾರ್ಜುನ ಅಲ್ಲಮಪ್ರಭು, ಪ್ರತ್ಯೇಕ ಬುದ್ಧ ಅಲ್ಲಮಪ್ರಭು, ಹಿಂದಣ ಹೆಜ್ಜೆಯನ್ನರಿತಲ್ಲದೆ, ಪ್ರಜ್ಞಾ ಪಾರಮಿತ ಹೃದಯ ಸೂತ್ರ, ಬೌದ್ಧ ಮಧ್ಯಮ ವರ್ಗ, ಪ್ರತೀತ್ಯಾ ಸಮುತ್ಪಾದ, ಮಾತಿನ ಮೊದಲು, ದಾವ್ ದ ಚಿಂಗ್, ಈ ಕ್ಷಣದ ಶಕ್ತಿ ಮನ ಮಗ್ನತೆ ಮೊದಲಾದ ಕೃತಿಗಳನ್ನು ಬರೆದಿದ್ದಾರೆ.