ಡಾ ಕೋಲ್ಮನ್ ಅವರು ಕೀಟ ಹಾಗೂ ಶಿಲೀಂಧ್ರರೋಗ ತಜ್ಞರಾಗಿದ್ದಾಗ ಅಡಿಕೆಯ ಕೊಳೆರೋಗಕ್ಕೆ ಬೋರ್ಡೋ ಮಿಶ್ರಣವನ್ನು ಕಂಡುಹಿಡಿದು ರೋಗವನ್ನು ಹತೋಟಿಗೆ ತಂದರು. ಬೆಂಗಳೂರಿನ ಹೆಬ್ಬಾಳದಲ್ಲಿ 1913ರಲ್ಲಿ ಕೃಷಿ ಶಾಲೆ ಸ್ಥಾಪಿಸಲು ಅಗತ್ಯವಾದ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸುವುದರಿಂದ ಹಿಡಿದು ಶೈಕ್ಷಣಿಕ ನಿಯಮಗಳ ರಚನೆ ಹಾಗೂ ಪಠ್ಯಕ್ರಮ ರಚನೆ ಮಾಡಿ ಪ್ರಾಂಶುಪಾಲರಾದರು. ಅವರನ್ನು ಕೀಟ ಹಾಗೂ ಶಿಲೀಂಧ್ರ ರೋಗತಜ್ಞರಾಗಿ ಐದು ವರ್ಷಗಳ ಅವಧಿಗೆ ನೇಮಿಸಲಾಗಿತ್ತು.
“ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಂಡ್ಯದಲ್ಲಿ 650 ಎಕರೆಗಳ ವಿಸ್ತೀರ್ಣದ ಕೃಷಿ ಸಂಶೋಧನಾ ಕೇಂದ್ರವನ್ನು ಡಾ. ಲೆಸ್ಲಿ ಸಿ. ಕೋಲ್ಮನ್ Dr. L. C. Coleman ಅವರ ನೇತೃತ್ವದಲ್ಲಿ 1931ರಲ್ಲಿ ಸ್ಥಾಪಿಸಿದರು” ಎಂದು ಕೃಷಿ ಸಚಿವರಾದ ಚಲುವರಾಯಸ್ವಾಮಿಯವರು ವಿಧಾನ ಮಂಡಲದಲ್ಲಿ ಹೇಳಿದ್ದಾರೆ. ಮೊದಲಿಗೆ ಇರ್ವಿನ್ ಕೆನಾಲ್ ಫಾರ್ಮ್ ಎಂದು ಕರೆಯಲಾಗುತ್ತಿದ್ದ ಕೃಷಿ ಸಂಶೋಧನಾ ಕೇಂದ್ರವನ್ನು ನಂತರ ವಿಶ್ವೇಶ್ವರಯ್ಯ ಕೆನಾಲ್ ಫಾರ್ಮ್ (ವಿ.ಸಿ.ಫಾರ್ಮ್) ಎಂದು ಕರೆಯಲಾಗಿದೆ. ಆಗ ಫಾರ್ಮ್ ಇದ್ದದ್ದು ಮೈಸೂರು ಜಿಲ್ಲೆಯಲ್ಲಿ. ಮಂಡ್ಯ ಜಿಲ್ಲೆ ರಚನೆಯಾಗಿದ್ದು ಜುಲೈ 1, 1939ರಂದು. ನೀರಾವರಿ ಜಿಲ್ಲೆಯಾದ ಮಂಡ್ಯದಲ್ಲಿ ಹೊಸದಾಗಿ ಸಮಗ್ರ ಕೃಷಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುತ್ತಿದೆ. ನಾಲ್ವಡಿಯವರ ಮಾದರಿ ಆಡಳಿತ ಕುರಿತು ಕನ್ನಡಿಗರು ಅರಿತಿದ್ದಾರೆ. ಆದರೆ, ಕೋಲ್ಮನ್ ಬಗ್ಗೆ ಬೆಳಕು ಚೆಲ್ಲಬೇಕಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ರಾಜ್ಯದ ಕೃಷಿ ಕ್ಷೇತ್ರಕ್ಕೆ ಅವರು ಕೊಟ್ಟ ಕೊಡುಗೆಗಳನ್ನು ನಾವು ನೆನಪಿಸಿಕೊಳ್ಳಬೇಕಿದೆ.
ಮೈಸೂರು ರಾಜ್ಯದಲ್ಲಿ ಕೃಷಿ ಶಿಕ್ಷಣಕ್ಕೆ ಅಡಿಗಲ್ಲು ಹಾಕಿದ ಪಿತಾಮಹರೆಂದರೆ ಡಾ. ಲೆಸ್ಲಿ ಕೋಲ್ಮನ್ (ಜ: 16.06.1878, ಮ: 14.09.1954). ನಾಲ್ವಡಿಯವರ ಆಡಳಿತದ ಅವಧಿಯಲ್ಲಿ ಕೃಷಿ ಕ್ಷೇತ್ರಕ್ಕೆ ಕೋಲ್ಮನ್‍ರವರು ಅಪಾರವಾದ ಕೊಡುಗೆ ನೀಡಿದರು.
ಕೋಲ್ಮನ್ ನೇಮಕಕ್ಕೆ ಲೆಹ್ಮನ್ ಶಿಫಾರಸ್ಸು
ಕೋಲ್ಮನ್‍ರವರು ಕೆನಡಾ ದೇಶದ ಟೊರೊಂಟೋ ವಿಶ್ವವಿದ್ಯಾಲಯದ ಚಿನ್ನದ ಪದಕ ವಿಜೇತ ಪದವೀಧರ. ಅವರನ್ನು ರಾಜ್ಯದ ಸೇವೆಗೆ ನೇಮಿಸಿಕೊಳ್ಳಲು ಮೈಸೂರು ರಾಜ್ಯದ ಕೃಷಿ ರಾಸಾಯನಿಕ ತಜ್ಞರಾಗಿದ್ದ ಡಾ. ಅಡಾಲ್ಫ್ ಲೆಹ್ಮನ್‍ರವರು 1904ರಲ್ಲಿ ಸರ್ಕಾರಕ್ಕೆ ಪತ್ರ ಬರೆದರು. ಲೆಹ್ಮನ್‍ರವರು 1898ರಿಂದ 1908ರವರೆಗೆ ರಾಜ್ಯದಲ್ಲಿ ಸೇವೆ ಸಲ್ಲಿಸಿದರು. ಸೆಂಟ್ರಲ್ ಕಾಲೇಜಿನ ಬಳಿ ಅವರದೊಂದು ಕೃಷಿ ರಾಸಾಯನಿಕ ಪ್ರಯೋಗಾಲಯವಿತ್ತು. ಅದೇ ಜಾಗದಲ್ಲಿ ಈಗ ಕೃಷಿ ನಿರ್ದೇಶನಾಲಯವಿದೆ. ಅದರೊಳಗೆ ಡಾ. ಲೆಸ್ಲಿ ಕೋಲ್ಮನ್ ಸಭಾಂಗಣವೂ ಇದೆ.

ಕೋಲ್ಮನ್‍ರವರನ್ನು ಮೈಸೂರು ರಾಜ್ಯಕ್ಕೆ ನೇಮಿಸಿಕೊಳ್ಳಲು ಲೆಹ್ಮನ್‍ರವರು ಬರೆದ ಪತ್ರದ ವಿವರಗಳು ಹೀಗಿವೆ: “ರಾಜ್ಯದ ಕೃಷಿಯ ಅಭಿವೃದ್ಧಿಗಾಗಿ ಒಬ್ಬ ಕೃಷಿ ಕೀಟಶಾಸ್ತ್ರಜ್ಞರು ಹಾಗೂ ಕೃಷಿ ಶಿಲೀಂಧ್ರ ರೋಗ ತಜ್ಞರ ನೇಮಕವಾಗಬೇಕಿದೆ. ಅಡಿಕೆ ಬೆಳೆಗೆ ತೀವ್ರವಾಗಿ ಬಾಧಿಸುತ್ತಿರುವ ಕೊಳೆರೋಗವನ್ನು ಶಿಲೀಂಧ್ರರೋಗ ತಜ್ಞರು ಪರೀಕ್ಷಿಸಬೇಕಿದೆ. ಕಾಂಡ ಕೊರೆಯುವ ಹುಳ, ಕಂಬಳಿ ಹುಳ ಮತ್ತು ಮಿಡತೆಗಳು ರಾಜ್ಯದ ಕೃಷಿಗೆ ಅಗಾದವಾದ ನಷ್ಟವನ್ನುಂಟುಮಾಡುತ್ತಿವೆ. ಅವುಗಳ ಜೀವನ ಚಕ್ರವನ್ನು ಅಧ್ಯಯನ ಮಾಡಿ ಹತೋಟಿಯಲ್ಲಿಡಬೇಕಿದೆ.
ನಾನು ಕೆನಡಾ, ಅಮೆರಿಕ, ಜರ್ಮನಿ ಮತ್ತು ಇಂಗ್ಲೆಂಡಿನ ಕೃಷಿ ಪ್ರಯೋಗಾಲಯಗಳು, ಕೃಷಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ಭೇಟಿ ಕೊಟ್ಟೆ. ಅಲ್ಲಿ ತಜ್ಞರಿಗಾಗಿ ಹುಡುಕಾಟ ನಡೆಸಿದೆ. ಮೂವರು ವ್ಯಕ್ತಿಗಳು ನನ್ನ ಗಮನಕ್ಕೆ ಬಂದರು. ಇಬ್ಬರು ನಮಗೆ ನಿಲುಕಲಾರರು. ಒಬ್ಬರಿಗೆ ನಮ್ಮ ಮುಂಗಡಪತ್ರದಲ್ಲಿ ನಿಗದಿಪಡಿಸಿರುವುದಕ್ಕಿಂತ ಹೆಚ್ಚು ಸಂಬಳ ಬೇಕಂತೆ, ಮತ್ತೊಬ್ಬರು ಕೇವಲ ಮೂರು ವರ್ಷಗಳಷ್ಟೇ ನಮ್ಮಲ್ಲಿ ಉಳಿಯುತ್ತಾರಂತೆ. ಮೂರನೆಯವರು, ಮಿಸ್ಟರ್ ಕೋಲ್ಮನ್. ಅವರು ಕೀಟ ವಿಜ್ಞಾನವನ್ನು ಅಧ್ಯಯನ ಮಾಡಿದ್ದಾರೆ. ವಿಶ್ವವಿದ್ಯಾಲಯದ ಎಲ್ಲಾ ಪ್ರಾಧ್ಯಾಪಕರು ಕೋಲ್ಮನ್‍ರವರ ಕುರಿತು ‘ಅವರೊಬ್ಬ ಮೇಧಾವಿ ಯುವಕ’ ಎಂದರು.
ಕೋಲ್ಮನ್‍ರವರ ಪ್ರಾಧ್ಯಾಪಕರ ಅಭಿಪ್ರಾಯದಂತೆ ಅವರು ಮೈಕಾಲಜಿಸ್ಟ್ ಮತ್ತು ಎಂಟಮಾಲಜಿಸ್ಟ್ ಎರಡೂ ಹುದ್ದೆಗಳನ್ನು ನಿಭಾಯಿಸಬಲ್ಲರು. ಆದಷ್ಟು ಬೇಗ ಕೋಲ್ಮನ್‍ರವರನ್ನು ನೇಮಕ ಮಾಡಿಕೊಳ್ಳಲು ಸರ್ಕಾರಕ್ಕೆ ನಾನು ವಿನಂತಿಸುವೆನು. ತಡಮಾಡಿದರೆ, ಅವರು ಬೇರೊಂದು ಕಡೆ ಸೇರಿಕೊಳ್ಳಬಹುದು. ನಾನು ಒಂದೆರಡು ವಾರಗಳಲ್ಲಿ ನಮ್ಮ ಸರ್ಕಾರದಲ್ಲಿ ಅವರಿಗಿರುವ ಭವಿಷ್ಯದ ಕುರಿತು ಪತ್ರ ಬರೆಯಬೇಕಿದೆ. ನನ್ನ ಸಲಹೆಯಂತೆ, ಅಮೆರಿಕಾದ ಪ್ರಸಿದ್ಧ ಕೃಷಿ ಕೀಟರೋಗತಜ್ಞರಲ್ಲಿ ಆರು ತಿಂಗಳ ತರಬೇತಿ, ಜರ್ಮನಿಯ ಗೊಟಿಂಗೆನ್ ಪ್ರಾಯೋಗಿಕ ಕೇಂದ್ರದ ಶಿಲೀಂಧ್ರ ತಜ್ಞರಾದ ಪ್ರೊಫೆಸರ್ ಕಾಚ್‍ರವರಲ್ಲಿ ಕೆಲ ವಾರಗಳ ತರಬೇತಿ, ಭಾರತ ಸರ್ಕಾರದ ಕ್ರಿಪ್ಟೋಗಾಮಿಕ್ ಸಸ್ಯತಜ್ಞರಾದ ಡಾ. ಬಟ್ಲರ್ ಅವರಲ್ಲಿ ಕೆಲತಿಂಗಳ ತರಬೇತಿ ಮತ್ತು ಭಾರತ ಸರ್ಕಾರದ ಕೃಷಿ ಕೀಟತಜ್ಞರಾದ ಲೆಫ್ರಾಯ್‍ರವರಲ್ಲಿ ಕೆಲತಿಂಗಳ ತರಬೇತಿ ಪಡೆಯಬೇಕು. ಹಾಗಾದಾಗ, ಒಂದು ವರ್ಷದ ನಂತರವೇ ಅವರಿಲ್ಲಿ ವರದಿ ಮಾಡಿಕೊಳ್ಳಲು ಸಾಧ್ಯ. ಅವರ ನೇಮಕಾತಿಯನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳುವುದು ಬೇಡ”. ಹೀಗೆ ಡಾ. ಲೆಹ್ಮನ್‍ರವರು ಡಾ. ಕೋಲ್ಮನ್‍ರವರ ನೇಮಕಕ್ಕೆ ಶಿಫಾರಸ್ಸು ಮಾಡಿದರು.
ಪ್ರಜಾ ಪರಿಷತ್ತಿನ ಅನುಮೋದನೆ
ಫೆಬ್ರವರಿ 14, 1905ರಂದು ನಡೆದ ಮಹಾರಾಜರ ಪ್ರಜಾ ಪರಿಷತ್ತಿನ ಸಭೆಯಲ್ಲಿ ಡಾ ಲೆಹ್ಮನ್‍ರವರ ಎಲ್ಲಾ ಶಿಫಾರಸ್ಸುಗಳನ್ನು ಒಪ್ಪಲಾಯಿತು. ಮಾರ್ಚ್ 11, 1905ರಂದು ಕೋಲ್ಮನ್‍ರವರ ನೇಮಕಾತಿಯನ್ನು ಅನುಮೋದಿಸಿ ‘ಈ ನೇಮಕವು ಸರಿಯಾದ ದಿಕ್ಕಿನಲ್ಲಿದೆಯೆನ್ನಲು ಯಾವ ಅನುಮಾನವೂ ಇಲ್ಲ. ಸಂತೋಷದಿಂದ ಈ ನೇಮಕವನ್ನು ಒಪ್ಪುತ್ತೇನೆ’ ಎಂಬ ಷರಾದೊಂದಿಗೆ ನಾಲ್ವಡಿಯವರು ಸಹಿ ಮಾಡಿದರು. ಬ್ರಿಟಿಷ್ ಭಾರತ ಸರ್ಕಾರವು ಜುಲೈ 5, 1905ರಂದು ಕೋಲ್ಮನ್‍ರವರ ನೇಮಕಕ್ಕೆ ಹಸಿರು ನಿಶಾನೆಯನ್ನು ತೋರಿಸಿತು.

ಹೀಗೆ ಆಯ್ಕೆಯಾದ ಕೋಲ್ಮನ್‍ರವರು 1908ರಿಂದ 1913ರವರೆಗೆ ಕೃಷಿ ಕೀಟ ವಿಜ್ಞಾನಿ ಹಾಗೂ ಕೃಷಿ ಶಿಲೀಂಧ್ರರೋಗ ವಿಜ್ಞಾನಿಯಾಗಿ ಮತ್ತು 1913ರಿಂದ 1934ರವರೆಗೆ ಮೈಸೂರು ರಾಜ್ಯದ ಕೃಷಿ ಇಲಾಖೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.
ಕೃಷಿ ಇಲಾಖೆಯ ನಿರ್ದೇಶಕರಾಗಿ ಡಾ. ಲೆಸ್ಲಿ ಕೋಲ್ಮನ್ ನೇಮಕ
ಕೋಲ್ಮನ್‍ರವರು ಕೀಟ ಹಾಗೂ ಶಿಲೀಂಧ್ರರೋಗ ತಜ್ಞರಾಗಿದ್ದಾಗ ಅಡಿಕೆಯ ಕೊಳೆರೋಗಕ್ಕೆ ಬೋರ್ಡೋ ಮಿಶ್ರಣವನ್ನು ಕಂಡುಹಿಡಿದು ರೋಗವನ್ನು ಹತೋಟಿಗೆ ತಂದರು. ಬೆಂಗಳೂರಿನ ಹೆಬ್ಬಾಳದಲ್ಲಿ 1913ರಲ್ಲಿ ಕೃಷಿ ಶಾಲೆ ಸ್ಥಾಪಿಸಲು ಅಗತ್ಯವಾದ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸುವುದರಿಂದಿಡಿದು ಶೈಕ್ಷಣಿಕ ನಿಯಮಗಳ ರಚನೆ ಹಾಗೂ ಪಠ್ಯಕ್ರಮ ರಚನೆ ಮಾಡಿ ಪ್ರಾಂಶುಪಾಲರಾದರು.
ಅವರನ್ನು ಕೀಟ ಹಾಗೂ ಶಿಲೀಂಧ್ರರೋಗ ತಜ್ಞರಾಗಿ ಐದು ವರ್ಷಗಳ ಅವಧಿ ನೇಮಿಸಲಾಗಿತ್ತು. ಕೋಲ್ಮನ್‍ರವರು ಅಕ್ಟೋಬರ್ 1911ರಲ್ಲಿ ಸರ್ಕಾರಕ್ಕೆ ಒಂದು ಪತ್ರ ಬರೆದು ತಾವು ಕೆನಡಾ ದೇಶದ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಹುದ್ದೆಗೆ ವರದಿ ಮಾಡಿಕೊಳ್ಳಲು ಹೋಗಬೇಕಾಗಿದೆ ಎಂದರು. ಆಗ ಅವರಿಗಿನ್ನೂ 33 ವರ್ಷ ವಯಸ್ಸು.
‘ಒಂದೊಮ್ಮೆ ನನ್ನನ್ನು ಇಲ್ಲಿಯೇ ಉಳಿಸಿಕೊಳ್ಳಬೇಕೆಂದರೆ, ನನಗೆ ಹೆಚ್ಚಿನ ಸಂಬಳ ನೀಡಬೇಕು. ಕೃಷಿ ಇಲಾಖೆಯ ಕೆಲಸಗಳು ಅಗಾದವಾಗಿದೆ. ಕೃಷಿ ಶಾಲೆಯ ಕೆಲಸಗಳಿವೆ. ಕೃಷಿ ಸಂಶೋಧನೆ ಮತ್ತು ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಬೇಕಿದೆ. ಗುಣಮಟ್ಟದ ಪುಸ್ತಕಗಳು ಪ್ರಕಟಣೆಯಾಗುತ್ತಿರುವುದನ್ನು ನನ್ನ ನೇತೃತ್ವದಲ್ಲಿ ಮುಂದುವರೆಸಬೇಕಿದೆ. ಮುಂದಿನ 10ರಿಂದ 15 ವರ್ಷಗಳಲ್ಲಿ ಮಾಡಬಹುದಾದ ಕೆಲಸ ಕಾರ್ಯಗಳಿಂದ ಕೃಷಿ ಇಲಾಖೆಯ ಉತ್ತಮ ಭವಿಷ್ಯವನ್ನು ನಿರ್ಧರಿಸಬಹುದಾಗಿದೆ. ನನ್ನ ಕಾರ್ಯಭಾರವನ್ನು ಬೇರೆ ಇಲಾಖೆಗಳ ಮುಖ್ಯಸ್ಥರ ಹುದ್ದೆಗೆ ಹೋಲಿಸಲಾಗದು. ಹೆಚ್ಚೆಂದರೆ ಭೂಗರ್ಭ ವಿಜ್ಞಾನ ಇಲಾಖೆಯ ಮುಖ್ಯಸ್ಥರ ಹುದ್ದೆಗೆ ಹೋಲಿಸಬಹುದಷ್ಟೆ. ಆ ಇಲಾಖೆಯ ಮುಖ್ಯಸ್ಥರಾದ ಡಾ. ಸ್ಮಿತ್ ಅವರು ರೂ. 1800 ಅನ್ನು ಮಾಸಿಕ ಸಂಬಳವಾಗಿ ಪಡೆಯುತ್ತಿದ್ದಾರೆ. ಅವರ ವೇತನ ಶ್ರೇಣಿ ರೂ. 1500.’
‘ನಾನು ಈ ರಾಜ್ಯದಲ್ಲಿ ಇಲ್ಲಿಯವರೆಗೆ ಕೃಷಿಯಲ್ಲಿ ಸಾಧಿಸಿರುವ ಪ್ರಗತಿ, ಕೆಲಸ ಕಾರ್ಯಗಳು ಮತ್ತು ನನಗೆ ಕೆನಡಾ ವಿಶ್ವವಿದ್ಯಾಲಯದಿಂದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರ ಹುದ್ದೆಗೆ ಬಂದಿರುವ ಆಹ್ವಾನದ ಹಿನ್ನೆಲೆಯಲ್ಲಿ, ಮಾಸಿಕ ರೂ. 1200-50-1400 ವೇತನ ಶ್ರೇಣಿಯನ್ನು ಕೊಡುವುದಾದರೆ ನಾನು ಇಲ್ಲಿಯೇ ಮುಂದುವರೆಯಬಹುದಾಗಿದೆ’ ಎಂದು ಫೆಬ್ರವರಿ 29, 1912ರಂದು ತಮ್ಮ ನಿಲುವನ್ನು ಸರ್ಕಾರದ ಉನ್ನತ ಅಧಿಕಾರಿಗಳಾದ ನಂಜುಂಡಯ್ಯನವರಿಗೆ ಕೋಲ್ಮನ್ ತಿಳಿಸಿದರು.
ಮಹಾರಾಜರಿಗೆ ಕೋಲ್ಮನ್‍ರವರ ಸೇವೆಯನ್ನು ಕಳೆದುಕೊಳ್ಳಲು ಇಷ್ಟವಿರಲಿಲ್ಲ. ಫೆಬ್ರವರಿ 29, 1912ರಂದು ಬೆಂಗಳೂರಿನಲ್ಲಿ ನಡೆದ 274ನೇ ಪ್ರಜಾ ಪರಿಷತ್ತಿನ ಸಭೆಯಲ್ಲಿ ಕೋಲ್ಮನ್‍ರವರ ಕೋರಿಕೆಯನ್ನು ಚರ್ಚಿಸಲಾಯಿತು. ಕೋಲ್ಮನ್‍ರವರ ಮುಂದುವರಿಕೆಯ ನೇಮಕಾತಿಗೆ ಮಾರ್ಚ್ 15, 1912ರಂದು ರಾಜಮುದ್ರೆ ಬಿತ್ತು. ಕೋಲ್ಮನ್‍ರವರ ಸೇವಾಸೌಭಾಗ್ಯವು ರಾಜ್ಯಕ್ಕೆ ಒದಗಿಬಂತು. ಕೋಲ್ಮನ್‍ರವರನ್ನು ಕೃಷಿ ಇಲಾಖೆಯ ನಿರ್ದೇಶಕರನ್ನಾಗಿ ನೇಮಿಸಿ, ಕೃಷಿ ಇಲಾಖೆಯನ್ನು ಮರುಸಂಘಟನೆ ಮಾಡುವಂತೆಯೂ, ಕೃಷಿ ಶಿಕ್ಷಣವನ್ನು ಪ್ರಾರಂಭಿಸಲು ಕೃಷಿ ಶಾಲೆ ಅಥವಾ ಕಾಲೇಜನ್ನು ಸ್ಥಾಪಿಸುವಂತೆಯೂ ಆದೇಶಿಸಲಾಯಿತು. ಮುಂದೆ ಎರಡು ದಶಕಗಳಿಗೂ ಹೆಚ್ಚು ಕಾಲ, 1913ರಿಂದ 1934ರವರೆಗೆ ‘ಕೃಷಿ ಎಂದರೆ ಕೋಲ್ಮನ್, ಕೋಲ್ಮನ್ ಎಂದರೆ ಕೃಷಿ’ ಎಂದಾಯಿತು. ಕೋಲ್ಮನ್‍ರವರ ನಾಯಕತ್ವದಲ್ಲಿ ಕೃಷಿ ಅಭಿವೃದ್ಧಿ, ಜಾನುವಾರು ಅಭಿವೃದ್ಧಿಯಂತಹ ರೈತಪರ ಕೆಲಸಗಳಿಗೆ ಪ್ರಗತಿಯ ಸ್ಪರ್ಶ ದಕ್ಕಿತು.
ಕೋಲ್ಮನ್‍ರ ಪ್ರಮುಖ ಕೊಡುಗೆಗಳು
ಕೋಲ್ಮನ್‍ರವರು ಕೃಷಿ ಇಲಾಖೆಯ ನಿರ್ದೇಶಕರಾಗಿದ್ದ 1913-1934ರ ಅವಧಿಯಲ್ಲಿ ಪ್ರಮುಖ ಕೊಡುಗೆಗಳನ್ನು ಕೊಟ್ಟರು. ಅವೆಂದರೆ, ತೀವ್ರ ಬರಗಾಲದ ನಿರ್ವಹಣೆ (1913), ಸಾಗರ ತಾಲ್ಲೂಕಿನ ಮರ್ತೂರಿನಲ್ಲಿ ಕೃಷಿ ಸಂಶೋಧನಾ ಕೇಂದ್ರದ ಸ್ಥಾಪನೆ (1913), ಹಿರಿಯೂರು ತಾಲ್ಲೂಕಿನ ಬಬ್ಬೂರಿನ ಕೃಷಿ ಸಂಶೋಧನಾ ಕೇಂದ್ರದ ವಿಸ್ತರಣೆ (1915), ಮೈಸೂರು ತಾಲ್ಲೂಕಿನ ನಾಗನಹಳ್ಳಿಯ ಕೃಷಿ ಸಂಶೋಧನಾ ಕೇಂದ್ರದ ವಿಸ್ತರಣೆ (1916), ಕೃಷಿ ಸಂಶೋಧಕರ ಸಂಘದ ಸ್ಥಾಪನೆ (1916), ಶಿರಾ ತಾಲ್ಲೂಕಿನ ಚಿಕ್ಕನಹಳ್ಳಿಯಲ್ಲಿ ಕೃಷಿ ಶಾಲೆಯ ಆರಂಭ (1916), ಹೆಬ್ಬಾಳದಿಂದ ಎಚ್-22 ಎಂಬ ಅಧಿಕ ಇಳುವರಿಯ ರಾಗಿ ತಳಿಯ ಬಿಡುಗಡೆ (1918), ರೇಷ್ಮೆ ಇಲಾಖೆಯ ಉಸ್ತುವಾರಿ (1920-1927), ಹಾಸನದಲ್ಲಿ ಕೃಷಿ ಶಾಲೆಯ ಸ್ಥಾಪನೆ (1928), ಮೈಸೂರು ತಾಲ್ಲೂಕಿನ ಯಲಚಿಹಳ್ಳಿಯಲ್ಲಿ ಕುರಿ ಸಾಕಾಣಿಕಾ ಕೇಂದ್ರದ ಸ್ಥಾಪನೆ (1921), ಬಾಳೆಹೊನ್ನೂರಿನಲ್ಲಿ ಕಾಫಿ ಸಂಶೋಧನಾ ಕೇಂದ್ರದ ಸ್ಥಾಪನೆ (1925), ಬೆಂಗಳೂರಿನ ಹೆಬ್ಬಾಳದಲ್ಲಿ ಪ್ರಾಣಿಗಳಿಗಾಗಿ ಮೈಸೂರು ಲಸಿಕಾ ಸಂಸ್ಥೆಯ ಸ್ಥಾಪನೆ (1926), ಅಜ್ಜಂಪುರದ ಅಮೃತ್ ಮಹಲ್ ಕಾವಲು ಸ್ಥಾಪನೆ (1929), ಮಂಡ್ಯದ ಇರ್ವಿನ್ ಕೆನಾಲ್ ಫಾರ್ಮ್ (ವಿ.ಸಿ. ಫಾರ್ಮ್) ಸ್ಥಾಪನೆ (1931), ಆನೇಕಲ್ ತಾಲ್ಲೂಕಿನ ರಾಮಕೃಷ್ಣಾಪುರದಲ್ಲಿ ಕೃಷಿ ಶಾಲೆ ಸ್ಥಾಪನೆ (1931), ಮೈಸೂರು ಸಕ್ಕರೆ ಕಾರ್ಖಾನೆಯ ಸ್ಥಾಪನೆ (1933), ನಾಗರಿಕ ಪಶುವೈದ್ಯಕೀಯ ಇಲಾಖೆಯ ಮೇಲುಸ್ತುವಾರಿ (1913-1934), ಹೆಬ್ಬಾಳದ ಕೃಷಿ ಸಂಶೋಧನಾ ಕೇಂದ್ರವನ್ನು 30 ಎಕರೆಗಳಿಂದ 500 ಎಕರೆಗಳಿಗೆ ವಿಸ್ತರಣೆ (1913-1933) ಇತ್ಯಾದಿ.

ಮೈಸೂರು ರಾಜ್ಯಕ್ಕೆ ಕೋಲ್ಮನ್‍ರವರ ಭೇಟಿ
ಕೋಲ್ಮನ್‍ರವರು ಫೆಬ್ರವರಿ 27, 1934ರಂದು ನಿವೃತ್ತಿಯಾಗಿ ಕೆನಡಾಕ್ಕೆ ಮರಳಿದರು. ತಾವು ಕೈಗೊಂಡ ಕೃಷಿ ಚಟುವಟಿಕೆಗಳು ಇನ್ನಷ್ಟು ಅಭಿವೃದ್ಧಿಯಾಗಿರುವುದನ್ನು ಕಣ್ತುಂಬಿಕೊಳ್ಳಲು 1953ರಲ್ಲಿ ಮೈಸೂರು ರಾಜ್ಯಕ್ಕೆ ಭೇಟಿ ನೀಡಿದರು. ಅದನ್ನು ಅರಿತ ಅಂದಿನ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯನವರು ಕೋಲ್ಮನ್‍ರವರನ್ನು ರಾಜ್ಯದ ಅತಿಥಿಯಾಗಿ ಪರಿಗಣಿಸಿದರು. ತಾವು ಸೇವೆ ಸಲ್ಲಿಸಿದ ಸ್ಥಳಗಳಿಗೆ ಕೋಲ್ಮನ್ ಭೇಟಿಯಿತ್ತರು. ಅವು ಇನ್ನಷ್ಟು ಅಭಿವೃದ್ಧಿಯಾಗಿರುವುದನ್ನು ಗಮನಿಸಿದರು. ಎಲ್ಲ ಕಡೆ ಅವರಿಗೆ ವೈಭೋವೋಪೇತ ಸ್ವಾಗತ ಮತ್ತು ಅರ್ಥಪೂರ್ಣ ಸನ್ಮಾನ ನಡೆಯಿತು. ಕೃಷಿ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಶಿಫಾರಸ್ಸುಗಳ ವರದಿಯನ್ನು ಅವರು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದರು.
ನಾಲ್ವಡಿಯವರೊಡಗೂಡಿ ಕೋಲ್ಮನ್‍ರವರು ಮಂಡ್ಯದಲ್ಲಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪಿಸಿದರು. ಅಲ್ಲಿಯೇ ರಾಗಿ ಲಕ್ಷ್ಮಣಯ್ಯನವರು ಸಂಶೋಧನೆ ನಡೆಸಿ ಅಧಿಕ ಇಳುವರಿಯ ಇಂಡಾಫ್ ಮತ್ತಿತರ ತಳಿಗಳನ್ನು ಕೊಟ್ಟಿದ್ದು ಹಾಗೂ ಡಾ. ಎಂ. ಮಹದೇವಪ್ಪನವರು ಅಧಿಕ ಇಳುವರಿಯ ಭತ್ತದ ತಳಿಗಳನ್ನು ಕೊಟ್ಟಿದ್ದು. ಅಂತಹ ಸ್ಥಳದಲ್ಲಿ ಹೊಸದೊಂದು ಎಲ್ಲಾ ಕೃಷಿ ವಿಜ್ಞಾನಗಳನ್ನೊಳಗೊಂಡ ಸಮಗ್ರ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಯಾಗುತ್ತಿರುವುದು ರಾಜ್ಯದ ಕೃಷಿ ವಿಜ್ಞಾನಗಳ ಶಿಕ್ಷಣಕ್ಕೆ, ಸಂಶೋಧನೆಗೆ, ವಿಸ್ತರಣೆಗೆ, ಮತ್ತು ರೈತರ ಶ್ರೇಯೋಭಿವೃದ್ದಿಗೆ ಇನ್ನಷ್ಟು ಒಳಿತಾಗಬಹುದೆಂದು ಭಾವಿಸಲಾಗಿದೆ.

ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ
ಕೃಷಿ ಯಲ್ಲಿ ಉತ್ತಮ ಲೇಖನ ಈ ರೀತಿಯ ಲೇಖನಗಳು ಅಪರೂಪ
Nice information to know about origin of agri university in karunadu👌👍