ಉತ್ತರ ಕರ್ನಾಟಕ ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರ; ಸೂಕ್ತ ಕ್ರಮಕ್ಕೆ ಮುಂದಾಗುವುದೇ ಸರ್ಕಾರ?

Date:

Advertisements
ನೀರನ್ನು ದುಡ್ಡು ಕೊಟ್ಟು ಖರೀದಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಸರ್ಕಾರಗಳು, ಜನಪ್ರತಿನಿಧಿಗಳು ಒಗ್ಗೂಡಿ, ಮೂಲಸೌಕರ್ಯಗಳಲ್ಲೊಂದಾದ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಜಲಮೂಲಗಳನ್ನು ಗುರುತಿಸಬೇಕು. ಸಾರ್ವಜನಿಕವಾಗಿ ಉಚಿತ ನೀರು ಸಿಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಬೆಲೆ ಏರಿಕೆಯಿಂದ ದುಬಾರಿ ದಿನಗಳಲ್ಲಿ ಜೀವನ ಸಾಗಿಸುತ್ತಿರುವ ಇಂತಹ ಹೊತ್ತಿನಲ್ಲಿ ಕುಡಿಯುವ ನೀರನ್ನು ಖರೀದಿಸುವುದು ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯಾಗುತ್ತದೆ. 

ಈ ಬೇಸಿಗೆಯಲ್ಲಿ ರಾಜ್ಯದ 6,380 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಲಿದೆಯೆಂದು ಸರ್ಕಾರ ಹೇಳಿದೆ. ಈ ಪೈಕಿ, ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಪಡೆಯುವ ಏಳು ಮಲೆನಾಡು ಜಿಲ್ಲೆಗಳ ಕನಿಷ್ಠ 2,100 ಗ್ರಾಮಗಳು ಹಾಗೂ ಶುಷ್ಕ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 1,325 ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ಕುಡಿಯುವ ನೀರಿನ ಅಭಾವವನ್ನು ಎದುರಿಸುತ್ತಿರುವ ಗ್ರಾಮಗಳ ಪಟ್ಟಿ ಹೆಚ್ಚುತ್ತಿರುವುದಕ್ಕೆ ಮಲೆನಾಡು ಪ್ರದೇಶದ ನಿರ್ಲಕ್ಷ್ಯವೇ ಕಾರಣವೆಂದು ತಜ್ಞರು ಮತ್ತು ಪರಿಸರವಾದಿಗಳ ಆರೋಪ.

ರಾಯಚೂರು ಜಿಲ್ಲೆಯ 512 ಗ್ರಾಮಗಳು, ಉತ್ತರ ಕನ್ನಡ ಜಿಲ್ಲೆಯ 411 ಗ್ರಾಮಗಳು ಮತ್ತು ಕಲಬುರಗಿ ಜಿಲ್ಲೆಯ 266 ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಿದೆ. ಆರ್‌ಡಿಪಿಆರ್ ಇಲಾಖೆ ಈ ಗ್ರಾಮಗಳನ್ನು ಅವುಗಳ ಹಿಂದಿನ ವರ್ಷಗಳ ದತ್ತಾಂಶದ ಆಧಾರದ ಮೇಲೆ ಗುರುತಿಸಿದೆ. ಆದರೆ ಬಳ್ಳಾರಿ ಜಿಲ್ಲೆಯಲ್ಲಿ ವರ್ಷಪೂರ್ತಿ ಕುಡಿಯುವ ನೀರಿನ ಸಮಸ್ಯೆ ಇರುತ್ತದೆಂಬುದು ಸ್ಥಳೀಯರ ಅಭಿಪ್ರಾಯ.

ರಾಜ್ಯದಾದ್ಯಂತ, ಕೆಲವು ಜಿಲ್ಲೆಗಳು ಈಗಾಗಲೇ ಕುಡಿಯುವ ನೀರಿನ ಅಭಾವ ಎದುರಿಸುತ್ತಿವೆ. ಆಯಾ ಜಿಲ್ಲಾಡಳಿತಗಳು ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರನ್ನು ಪೂರೈಸುತ್ತಿವೆ. ತೀವ್ರ ಅಭಾವದ ಸಮಯದಲ್ಲಿ ಕುಡಿಯುವ ನೀರು ಪೂರೈಸಲು ಆರ್‌ಡಿಪಿಆರ್ ಇಲಾಖೆಯು ರಾಜ್ಯಾದ್ಯಂತ 1,344 ಟ್ಯಾಂಕರ್‌ಗಳು ಮತ್ತು 3,683 ಖಾಸಗಿ ಬೋರ್‌ವೆಲ್‌ಗಳನ್ನು ಗುರುತಿಸಿದ್ದು, ಕಲ್ಯಾಣ ಕರ್ನಾಟಕದ 83 ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಸಲು ನೀರಿನ ಟ್ಯಾಂಕರ್‌ಗಳನ್ನು ಬಾಡಿಗೆಗೆ ಪಡೆದಿವೆಯೆಂದು ಹೇಳಲಾಗುತ್ತಿದೆ.

Advertisements

“ಈ ವರ್ಷ ಕುಡಿಯುವ ನೀರಿನ ಸಮಸ್ಯೆ ಕಳೆದ ವರ್ಷದಷ್ಟು ತೀವ್ರವಾಗಿರುವುದಿಲ್ಲ. ರಾಜ್ಯದಲ್ಲಿ ಉತ್ತಮ ಪೂರ್ವ ಮುಂಗಾರು ಮಳೆಯಾಗಲಿದೆ. ಜತೆಗೆ ಜಲಾಶಯಗಳಲ್ಲಿ ಸಾಕಷ್ಟು ನೀರಿನ ಸಂಗ್ರಹವಿದೆಯೆಂದು ಭಾರತೀಯ ಹವಾಮಾನ ಇಲಾಖೆ(IMD) ಮುನ್ಸೂಚನೆ ನೀಡಿದೆ. ಆದರೂ ಆಕಸ್ಮಿಕವಾಗಿ ನೀರಿನ ಹಾಹಾಕಾರ ಬಂದೊದಗಿದರೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ 250 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಹೊಸ ಕೊಳವೆಬಾವಿಗಳನ್ನು ಕೊರೆಯುವುದು ಸರ್ಕಾರದ ಕೊನೆಯ ಆದ್ಯತೆಯಾಗಿದೆ” ಎಂದು ಆರ್‌ಡಿಪಿಆರ್ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಜ್ ಹೇಳಿದ್ದಾರೆ.

ಕಿತ್ತೂರು ಕರ್ನಾಟಕದ ಕುಡಿಯುವ ನೀರಿನ ಸಮಸ್ಯೆಗಳು ಮತ್ತು ಪರಿಹಾರ

ಬೆಳಗಾವಿ: ವಾರಕ್ಕೊಮ್ಮೆ ನೀರು ಸರಬರಾಜು

ಬೆಳಗಾವಿ ನಗರದ ನಿವಾಸಿಗಳಿಗೆ ಈಗ ವಾರಕ್ಕೊಮ್ಮೆ ಮಾತ್ರ ಕುಡಿಯುವ ನೀರನ್ನು ಪೂರೈಸಲಾಗುತ್ತಿದ್ದು, ಬೇಸಿಗೆಯ ಆರಂಭದ ಮೊದಲು ಕುಡಿಯುವ ನೀರು ಪೂರೈಕೆ ನಿರ್ವಹಿಸಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.

ಬೆಳಗಾವಿಯ ಪ್ರಾಥಮಿಕ ನೀರಿನ ಮೂಲಗಳೆಂದರೆ ರಾಕಸಕೊಪ್ಪ ಜಲಾಶಯ ಮತ್ತು ಹಿಡಕಲ್ ಅಣೆಕಟ್ಟು, ಮಾರ್ಕಂಡೇಯ ನದಿಯಿಂದ ಹೆಚ್ಚುವರಿ ನೀರನ್ನು ಪಡೆಯಲಾಗುತ್ತದೆ. ನೀರಿನ ಪರಿಸ್ಥಿತಿಯನ್ನು ಕೂಲಂಕಷವಾಗಿ ಮೌಲ್ಯಮಾಪನ ಮಾಡಲಾಗಿದೆ. ಈ ವರ್ಷ ಹೆಚ್ಚು ಜಾಗರೂಕ ಮತ್ತು ಪರಿಣಾಮಕಾರಿ ನೀರಿನ ನಿರ್ವಹಣಾ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಲು L&T ಕಂಪೆನಿಗೆ ಅನುವು ಮಾಡಿಕೊಡುತ್ತದೆ. ರಾಕಾಸಕೊಪ್ಪ ಜಲಾಶಯವು ನಗರದ ಮುಖ್ಯ ನೀರಿನ ಮೂಲವಾಗಿ ಉಳಿದಿದೆ. ಆದರೆ ಹಿಡಕಲ್ ಅಣೆಕಟ್ಟು ಪೂರೈಕೆಗೆ ಪೂರಕವಾಗಿದೆಯೆಂದು ಬೆಳಗಾವಿಯ ಎಲ್ ಅಂಡ್ ಟಿ(L&T)ಯ ಜನರಲ್ ಮ್ಯಾನೇಜರ್ ಹಾರ್ದಿಕ್ ದೇಸಾಯಿ ಹೇಳಿದ್ದಾರೆ.

ಗದಗ-ಬೆಟಗೇರಿ ಅವಳಿ ನಗರದಲ್ಲಿ ನೀಗದ ಕುಡಿಯುವ ನೀರಿನ ಸಮಸ್ಯೆ

ಗದಗ-ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ನಗರದ 35 ವಾರ್ಡ್‌ಗಳ ಬಹುತೇಕ ಪ್ರದೇಶಗಳಲ್ಲಿ 15ರಿಂದ 25 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಹಾಗಾಗಿ ಪುರುಷರು, ಮಹಿಳೆಯರು, ವೃದ್ಧರು, ಮಕ್ಕಳು ಎಲ್ಲರೂ ಕೂಡ ಜೀವಜಲಕ್ಕಾಗಿ ಪರದಾಡುವಂತಾಗಿದೆ. ತುಂಗಭದ್ರಾ ನದಿಪಾತ್ರದಲ್ಲಿ ನೀರಿದ್ದರೂ ಗದಗ ಜಿಲ್ಲೆಯಲ್ಲಿ ನೀರಿಗಾಗಿ ಹಾಹಾಕಾರ ಎದುರಾಗಿದೆ.

ಮುಖ್ಯ ಕೊಳವೆ ಪೈಪ್‌ಗಳಲ್ಲಿ ಪದೇ ಪದೆ ನೀರು ಸೋರಿಕೆಯಾಗಿತ್ತಿದ್ದು, ಈಗಾಗಲೇ ನೀರು ಪೂರೈಕೆ ಸ್ಥಗಿತಗೊಂಡಿತ್ತು. ಪರಿಣಾಮ ಹೊಸ ವರ್ಷದ ಆರಂಭದಿಂದಲೇ ಅವಳಿ ನಗರದ ಜನತೆ ನೀರಿನ ಸಮಸ್ಯೆ ಅನುಭವಿಸುವಂತಾಗಿದೆ. ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟಾಲೂರು ಬ್ಯಾರೇಜ್‌ನಿಂದ ಪೈಪ್‌ಲೈನ್‌ ಮೂಲಕ ಅವಳಿ ನಗರಕ್ಕೆ ತುಂಗಭದ್ರಾ ನದಿ ನೀರನ್ನು ಪೂರೈಸಲಾಗುತ್ತದೆ. ಮುಖ್ಯ ಕೊಳವೆ ಪೈಪ್‌ಲೈನ್‌ಗಳಲ್ಲಿ ನೀರು ಸೋರಿಕೆಯಾಗುತ್ತಿರುವುದರಿಂದ ಕಳೆದ ನಾಲ್ಕು ದಶಕಗಳಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತಿಲ್ಲ ಎಂಬುದು ವಿಷಾದನೀಯ ಸಂಗತಿ.

ಗದಗ ನಗರದ ಖಾನತೋಟದ ಜನತಾ ಕಾಲೋನಿ ಭಾಗದಲ್ಲಿ 6ರಿಂದ 8 ಸಾವಿರ ಜನರು ವಾಸ ಮಾಡುತ್ತಾರೆ. ನಿತ್ಯ ಕೆಲಸ ಮಾಡಿದರೆ ಮಾತ್ರ ಇವರ ಹೊಟ್ಟೆ ತುಂಬುತ್ತದೆ. ಆದರೆ ನೀರು ಸರಿಯಾಗಿ ಪೂರೈಕೆಯಾಗದ ಹಿನ್ನೆಲೆಯಲ್ಲಿ ನೀರು ಸಂಗ್ರಹಿಸುವುದಕ್ಕಾಗಿಯೇ ಉದ್ಯೋಗ ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳುವಂತಾಗಿದೆ. ಇನ್ನು ಉಳ್ಳವರು ಟ್ಯಾಂಕರ್ ಮೂಲಕ ನೀರಿನ ಅಗತ್ಯವನ್ನು ಪೂರೈಕೆ ಮಾಡಿಕೊಳ್ಳುತ್ತಿದ್ದಾರೆ.

ಗದಗ-ಬೆಟಗೇರಿ ಅವಳಿ ನಗರದಲ್ಲಿ ಬೇಸಿಗೆ ಸಮಯದಲ್ಲಿ ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಜನರಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಖಡಕ್ ಸೂಚನೆ ನೀಡಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಅವರ ಖಡಕ್ ಸೂಚನೆಯನ್ನು ಹಗುರವಾಗಿ ಪರಿಗಣಿಸಿದಂತೆ ಕಾಣುತ್ತಿದ್ದು, ಇನ್ನು ಬೇಸಿಗೆ ಆರಂಭದಲ್ಲಿಯೇ ಜನರಿಗೆ ಕುಡಿಯಲು ನೀರಿಲ್ಲ, ಬಳಕೆ ಮಾಡಲು ನೀರಿಲ್ಲದಂತಹ ಸ್ಥಿತಿ ನಿರ್ಮಾಣವಾದರೂ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ.

ಗದಗ-ಬೆಟಗೇರಿ ನಗರಸಭೆಯಲ್ಲಿ ಸದ್ಯ ಜಿಲ್ಲಾಧಿಕಾರಿಗಳು ಆಡಳಿತ ನಡೆಸುತ್ತಿದ್ದಾರೆ. ಪೌರಾಯುಕ್ತರಾಗಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಪ್ರಭಾರ ಅಧಿಕಾರ ವಹಿಸಲಾಗಿದೆ. ಆದರೆ, ಅಧಿಕಾರಿಗಳ ನಡುವಿನ ಸಮನ್ವಯತೆ ಕೊರತೆಯಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಸಮಸ್ಯೆಗೆ ಪರಿಹಾರ ಇಲ್ಲದಂತಾಗಿದೆ. ಅಲ್ಲದೇ, ಅವಳಿ ನಗರದಲ್ಲಿ ಈಗಾಗಲೇ ಹಲವು ವಾರ್ಡ್‌ಗಳಲ್ಲಿ ಕೊಳವೆಬಾವಿ ಪೈಪ್‌ ಮತ್ತು 24/7 ನೀರಿನ ಪೈಪಲೈನ್‌ ಒಡೆದು ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.

35 ವಾರ್ಡ್‌ಗಳಲ್ಲಿ ಬೋರ್‌ವೆಲ್‌ ಪೈಪ್‌ ಹಾಗೂ 24/7 ಪೈಪ್‌ಲೈನ್‌ ಹೊಸದಾಗಿ ಹಾಕುವುದು ಮತ್ತು ರಿಪೇರಿ ಮಾಡಲು ಹಾಗೂ ಪ್ರತಿಯೊಂದು ವಾರ್ಡ್‌ಗೆ ನಿಗದಿಯಾಗಿರುವ 5 ಲಕ್ಷ ರೂ. ಮೊತ್ತದ ಟೆಂಡರ್‌ ತೆರೆಯಲಾಗುವುದು. ಜತೆಗೆ ಕಾಲುವೆ ಮೂಲಕ ಡಂಬಳ ಕಿನಾಲ್‌ಗೆ ನೀರು ಹರಿಸಿ ಅವಳಿ ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ಜರುಗಿಸಲಾಗುವುದೆಂದು ಈಗಾಗಲೇ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಭರವಸೆ ನೀಡಿದ್ದರು.

ಹಾವೇರಿ: ಪ್ರತಿ 10ರಿಂದ 15 ದಿನಗಳಿಗೊಮ್ಮೆ ನೀರು ಪೂರೈಕೆ.

ಹಾವೇರಿ ಜಿಲ್ಲೆಯಲ್ಲಿ ತುಂಬಿದ ಕೆರೆಗಳು ಮತ್ತು ಹೆಚ್ಚುತ್ತಿರುವ ಅಂತರ್ಜಲ ಮಟ್ಟವನ್ನು ಹೊಂದಿದೆ. ಆದರೆ, ಹಾವೇರಿ ನಗರದ ನಿವಾಸಿಗಳಿಗೆ ಪ್ರತಿ 10ರಿಂದ 15 ದಿನಗಳಿಗೊಮ್ಮೆ ಮಾತ್ರ ನೀರು ಪೂರೈಕೆ ಮಾಡಲಾಗುತ್ತದೆ. ಹೆಗ್ಗೇರಿ ಸರೋವರದ ಪೂರ್ಣ ಸಾಮರ್ಥ್ಯದ ಹೊರತಾಗಿಯೂ (623 ಎಕರೆಗಳಷ್ಟು ವಿಸ್ತಾರವಾಗಿದೆ), ಕುಡಿಯುವ ನೀರು ಪೂರೈಕೆ ಮಾಡುವುದು ಸವಾಲಾಗಿಯೇ ಉಳಿದಿದೆ.

ವಿಜಯಪುರ: ಹೆಚ್ಚುತ್ತಿರುವ ಕಳವಳ

ವಿಜಯಪುರ ಜಿಲ್ಲೆಯಲ್ಲಿ ಈಗಾಗಲೇ ಕುಡಿಯುವ ನೀರಿನ ಅಭಾವ ಹೆಚ್ಚಾಗಿದೆ. ಫೆಬ್ರವರಿ ಮಧ್ಯಭಾಗದಿಂದ, ನಗರ ಪ್ರದೇಶದ 35 ವಾರ್ಡ್‌ಗಳಲ್ಲಿ 14 ವಾರ್ಡ್‌ಗಳಿಗೆ ವಾರಕ್ಕೊಮ್ಮೆ, 8 ವಾರ್ಡ್‌ಗಳಿಗೆ ಪ್ರತಿ 2-3 ದಿನಗಳಿಗೊಮ್ಮೆ ಮತ್ತು ಉಳಿದ 13 ವಾರ್ಡ್‌ಗಳಿಗೆ ಪ್ರತಿ 4 ರಿಂದ 5 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ.

ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ ಸಾಕಷ್ಟು ನೀರು ಲಭ್ಯವಿರುವುದರಿಂದ ವಿಜಯಪುರಕ್ಕೆ ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಹಿಂದಿನ ವರ್ಷಗಳಿಗಿಂತ ಭಿನ್ನವಾಗಿ, ಜಿಲ್ಲೆಯ ಹಲವಾರು ಭಾಗಗಳಲ್ಲಿ ನೀರು ಸರಬರಾಜು ಮಾಡಲು ಜಿಲ್ಲಾಡಳಿತವು ಟ್ಯಾಂಕರ್‌ಗಳನ್ನು ಬಳಸಬೇಕಾಗಿಲ್ಲವೆಂದು ಅಧಿಕಾರಿಗಳು ಹೇಳುತ್ತಿದ್ದಾರೆ.

“ಜಿಲ್ಲೆಯ 640ಕ್ಕೂ ಹೆಚ್ಚು ಗ್ರಾಮಗಳಿಗೆ ಬಹುಗ್ರಾಮ ಯೋಜನೆ (ಎಂವಿಎಸ್) ಸೇರಿದಂತೆ ವಿವಿಧ ನೀರು ಸರಬರಾಜು ಯೋಜನೆಗಳೊಂದಿಗೆ ಸಂಪರ್ಕ ಕಲ್ಪಿಸಲಾಗಿದೆ. ಈ ವರ್ಷದ ಜುಲೈವರೆಗೆ ಸಾಕಾಗುವಷ್ಟು ನೀರು ನಮ್ಮಲ್ಲಿದೆ. ಆದ್ದರಿಂದ ಬೇಸಿಗೆಯ ಮಧ್ಯದಲ್ಲಿಯೂ ನಮಗೆ ಯಾವುದೇ ಟ್ಯಾಂಕರ್‌ಗಳ ಅಗತ್ಯವಿಲ್ಲವೆಂದು ಗ್ರಾಮೀಣ ನೀರು ಸರಬರಾಜು ಕಾರ್ಯಪಾಲಕ ಅಭಿಯಂತರ ಬಸವರಾಜ ಕುಂಬಾರ ಅವರು ನಿರರ್ಗಳವಾಗಿ ಹೇಳಿದ್ದಾರೆ.

ಬಾಗಲಕೋಟೆ: ಕುಡಿಯುವ ನೀರಿನ ಬಿಕ್ಕಟ್ಟು ಪರಿಹರಿಸುವ ಸರ್ಕಾರಿ ಕೊಳವೆಬಾವಿಗಳ ಅವಲಂಬನೆ

ಬಾಗಲಕೋಟೆ ಜಿಲ್ಲೆಯ ಇತ್ತೀಚಿನ ದಾಖಲೆಗಳು ಮತ್ತು ನೀರಿನ ಮೂಲಗಳ ಲಭ್ಯತೆಯ ಆಧಾರದ ಮೇಲೆ ಸುಮಾರು 35 ಗ್ರಾಮಗಳನ್ನು ಗುರುತಿಸಿದ್ದು, ಸಂಭಾವ್ಯ ಬಿಕ್ಕಟ್ಟನ್ನು ಪರಿಹರಿಸುವ ಸಲುವಾಗಿ, ಸರ್ಕಾರಿ ಕೊಳವೆಬಾವಿಗಳನ್ನು ಅವಲಂಬಿಸುವುದರ ಜತೆಗೆ ಖಾಸಗಿ ಕೊಳವೆಬಾವಿಗಳನ್ನು ಗುರುತಿಸುವುದು ಸೇರಿದಂತೆ ನಾವು ಈಗಾಗಲೇ ಯೋಜನೆಗಳನ್ನು ಸಿದ್ಧಪಡಿಸಿದ್ದೇವೆಂದು ಜಿಲ್ಲಾ ಪಂಚಾಯತಿ ಸಿಇಒ ಶಶಿಧರ್ ಕುರೇರ್ ಮಾಹಿತಿ ನೀಡಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಮುಗಿಯದ ನೀರಿನ ಸಮಸ್ಯೆ: 78 ಹಳ್ಳಿಗಳು ನೀರಿನ ಬಿಕ್ಕಟ್ಟು ಎದುರಿಸುವ ಆತಂಕ

ಧಾರವಾಡ ಜಿಲ್ಲೆಯಲ್ಲಿ ಯಾವಾಗಲೂ ನೀರಿನ ಸಮಸ್ಯೆ ಎದುರುರಾಗುತ್ತಲೇ ಇರುತ್ತದೆ. ನೀರು ಪೂರೈಕೆಗಾಗಿ ಅಂತರ್ಜಲ ಮತ್ತು ಮಲಪ್ರಭಾ ಜಲಾಶಯದಂತಹ ಜಲಾಶಯಗಳನ್ನು ಹೆಚ್ಚಾಗಿ ಅವಲಂಬಿಸಿದೆ. ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯು ನೀರಿನ ಲಭ್ಯತೆಯ ಸವಾಲುಗಳನ್ನು ಎದುರಿಸಿದೆ. 2023 ಹಾಗೂ 24ರಲ್ಲಿ ಮುಂಗಾರಿನ ಬರಗಾಲದ ಕಾರಣದಿಂದ ಅಂತರ್ಜಲ ಮಟ್ಟದಲ್ಲಿ ಗಮನಾರ್ಹ ಕುಸಿತ ಕಂಡಿತ್ತು. 

ಒಂದು ವರ್ಷದಲ್ಲಿ ನೀರಿನ ಮಟ್ಟ, 7 ಮೀಟರ್‌ನಿಂದ 11 ಮೀಟರ್‌ಗೆ ಇಳಿದಿತ್ತು. ಇದು ಹಿಂದೆ ಅಂತರ್ಜಲ ಮಟ್ಟಗಳು ಕಡಿಮೆಯಾಗುವ ಪ್ರವೃತ್ತಿಯ ಸೂಚನೆ ನೀಡಿತ್ತು. 2025ರ ಮಾರ್ಚ್‌ನಿಂದ ಮೇ ತಿಂಗಳ ವರೆಗೆ ಧಾರವಾಡ ಜಿಲ್ಲೆಯ 78 ಹಳ್ಳಿಗಳು ನೀರಿನ ಬಿಕ್ಕಟ್ಟನ್ನು ಎದುರಿಸುವ ಆತಂಕದಲ್ಲಿವೆ.

ಸಾರ್ವಜನಿಕ ಬೋರ್‌ವೆಲ್‌ಗಳಲ್ಲಿ ಮೂರು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತದೆ. ಆದರೆ, ಆ ನೀರು ಮಣ್ಣು ಮಿಶ್ರಿತ ನೀರು ಬರುತ್ತದೆ. ಸ್ಥಳೀಯರು ಅಂತಹ ನೀರನ್ನೇ ತುಂಬಿಸಿಟ್ಟುಕೊಂಡು. ಎರಡು ದಿನಗಳ ಬಳಿಕ ನೀರು ತಿಳಿಯಾದಾಗ ಅದನ್ನೇ ಕುಡಿಯಲು ಬಳಸುತ್ತಿದ್ದಾರೆ. ಬೇಸಿಗೆ ಹೆಚ್ಚಾದರೆ, ಮಳೆ ಬರದಿದ್ದರೆ, ಇನ್ನೂ ವಿಪರೀತ ಅಭಾವ ಉಂಟಾಗುತ್ತದೆ.

ಕಲ್ಯಾಣ ಕರ್ನಾಟಕದಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ

ಯಾದಗಿರಿ: ಶಿಥಿಲಾವಸ್ಥೆಯಲ್ಲಿರುವ ಜಲಶುದ್ಧೀಕರಣ ಘಟಕಗಳು

ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಪರಿಸ್ಥಿತಿ ವಿಶೇಷವಾಗಿ ಆತಂಕಕಾರಿಯಾಗಿದೆ. ಯಾದಗಿರಿ ಜಿಲ್ಲೆಯಲ್ಲಿ 122 ಗ್ರಾಮ ಪಂಚಾಯತ್‌ಗಳಲ್ಲಿ 484 ನೀರು ಶುದ್ಧೀಕರಣ ಘಟಕಗಳಿವೆ, ಅವುಗಳಲ್ಲಿ 200ಕ್ಕೂ ಅಧಿಕ ಘಟಕಗಳು ಶಿಥಿಲಗೊಂಡಿದ್ದು, ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚುವಂತಾಗಿದೆ. ಯಾದಗಿರಿ ಜಿಲ್ಲಾಡಳಿತ ನೀರಿನ ಬಿಕ್ಕಟ್ಟನ್ನು ತಪ್ಪಿಸಲು ಸಿದ್ಧತೆಗಳನ್ನು ಪ್ರಾರಂಭಿಸಿದೆ ಎನ್ನಲಾಗಿದೆ.

ಕಲಬುರಗಿ: ಶುದ್ಧ ನೀರು ಸರಬರಾಜಿನಲ್ಲಿನ ಸವಾಲುಗಳು

ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳು ಬೇಸಿಗೆಯಲ್ಲಿ ಸಾಮಾನ್ಯವಾಗಿ ಶುಷ್ಕವಾಗಿರುವುದರಿಂದ, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸಂಭವನೀಯ ಕುಡಿಯುವ ನೀರಿನ ಹಾಹಾಕಾರ ಎದುರಾಗುತ್ತದೆ. ಈ ಬಿಕ್ಕಟ್ಟನ್ನು ನಿಭಾಯಿಸಲು ಜಿಲ್ಲಾಡಳಿತಗಳು ಕ್ರಮ ತೆಗೆದುಕೊಳ್ಳಲು ಪ್ರಾರಂಭಿಸಿವೆ.

ಕಲಬುರಗಿಯಲ್ಲಿ ಸಾಕಷ್ಟು ನೀರಿನ ಸಂಪನ್ಮೂಲಗಳಿದ್ದರೂ, ಶುದ್ಧ ಕುಡಿಯುವ ನೀರನ್ನು ಪಡೆದುಕೊಳ್ಳುವುದು ಒಂದು ಸವಾಲಾಗಿಯೇ ಉಳಿದಿದೆ. ನಗರದಲ್ಲಿ ಮೂರು ಕುಡಿಯು ನೀರು ಶುದ್ಧೀಕರಣ ಘಟಕಗಳಿದ್ದರೂ ಕೂಡ ಅಲ್ಲಿಯ ಏಳು ಲಕ್ಷ ನಿವಾಸಿಗಳಿಗೆ ಶುದ್ಧೀಕರಿಸಿದ ನೀರನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ.

ಕಲಬುರಗಿ ಮಹಾನಗರ ಪಾಲಿಕೆಯು ಪ್ರತಿ ವಾರ್ಡ್‌ಗೆ ಒಂದು ನೀರಿನ ಟ್ಯಾಂಕರ್ ಸ್ಥಾಪಿಸಿ ನೀರು ಪೂರೈಸುವುದಾಗಿ ಹೇಳಿದೆ. ಕಲಬುರಗಿ ಜಿಲ್ಲೆಯ ಎಲ್ಲ 253 ಗ್ರಾಮಗಳು ಬೇಸಿಗೆಯಲ್ಲಿ ಕುಡಿಯುವ ನೀರಿನ ಹಾಹಾಕಾರವನ್ನು ಎದುರಿಸಬಹುದು. ಈಗಾಗಲೇ ಮಾರ್ಚ್‌ನಿಂದಲೇ ಸರಿಸುಮಾರು 66 ಗ್ರಾಮಗಳು ನೀರಿನ ಸಮಸ್ಸೆ ಎದುರಿಸುತ್ತಿವೆ, ಆಳಂದ, ಅಫಜಲಪುರ, ಕಮಲಾಪುರ, ಚಿತ್ತಾಪುರ, ಕಲಬುರಗಿಯಲ್ಲಿ ಜಲಮೂಲಗಳು ಬರಿದಾಗುವ ಸಾಧ್ಯತೆಯೂ ಇದೆ.

ಬೇಸಿಗೆಯಲ್ಲಿ ಎದುರಾಗುವ ಕುಡಿಯುವ ನೀರಿನ ಸಮಸ್ಯೆ ಎದುರಿಸಲು 10 ದಿನದೊಳಗೆ ಕ್ರಿಯಾ ಯೋಜನೆ ಸಿದ್ಧಪಡಿಸಬೇಕೆಂದು ಈ ಹಿಂದೆಯೇ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಿದ್ದರು.

ರಾಯಚೂರು: ಹಳೆಯ ನೀರು ಸರಬರಾಜು ವ್ಯವಸ್ಥೆಯ ಹೋರಾಟಗಳು

ರಾಯಚೂರು ನಗರಪಾಲಿಕೆಯಾಗಿ ಮೇಲ್ದರ್ಜೆಗೇರಿಸಲ್ಪಟ್ಟಿದ್ದರೂ, ಅದು ಇನ್ನೂ ಹಳೆಯ ನೀರು ಸರಬರಾಜು ವ್ಯವಸ್ಥೆಯನ್ನು ಅವಲಂಬಿಸಿದೆ. ಪ್ರಸ್ತುತ, ಪ್ರತಿ ನಾಲ್ಕು ದಿನಗಳಿಗೊಮ್ಮೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದ್ದು, ಮುಂಬರುವ ತಿಂಗಳುಗಳಲ್ಲಿ ಇನ್ನಷ್ಟು ಕಠಿಣ ವಿತರಣಾ ಕ್ರಮಗಳಿಗೆ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.

ಕಾಲುವೆಗಳಿಗೆ ನೀರು ಹರಿಯುವ ಮುನ್ನ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಲು 10 ದಿನಗಳ ಗಡುವು ನೀಡಲಾಗಿದೆ. ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದಂತೆ ಗ್ರಾಮಸ್ಥರಿಂದ ಯಾವುದೇ ದೂರುಗಳು ಬರದಂತೆ ನೋಡಿಕೊಳ್ಳಲು ಎಲ್ಲಾ ತಾಲೂಕುಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದು. ರಾಯಚೂರು ಜಿಲ್ಲೆಯ 297 ಗ್ರಾಮಗಳಿಗೆ ಕೆರೆ, ಕೊಳಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಈ ಕೊಳಗಳು ತುಂಗಭದ್ರಾ ಮತ್ತು ಎನ್‌ಆರ್‌ಬಿಸಿ ಕಾಲುವೆಗಳ ನೀರಿನಿಂದ ತುಂಬಿವೆ. ಇನ್ನೂ 265 ಕೊಳವೆಬಾವಿಗಳನ್ನು ಕೊರೆಸಬೇಕಿದ್ದು, ಈಗಾಗಲೇ 336 ಕೊಳವೆಬಾವಿಗಳನ್ನು ಕೊರೆಸಲಾಗಿದೆ ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಕೆ ತಿಳಿದ್ದಾರೆ.

ರಾಯಚೂರು ಜಿಲ್ಲೆಯ 512 ಹಳ್ಳಿಗಳ ಪೈಕಿ 300ಕ್ಕೂ ಹೆಚ್ಚು ಗ್ರಾಮಗಳು ಕಾಲುವೆ ನೀರು ಸರಬರಾಜನ್ನು ಅವಲಂಬಿಸಿವೆ. ಕಾಲುವೆ ನೀರಿನ ಗಡಸು ನೀರು(ನೈಟ್ರೇಟ್ ಮತ್ತು ಆರ್ಸೆನಿಕ್) ಅಂಶದಿಂದಾಗಿ ಕೊಳವೆಬಾವಿಗಳ ನೀರು ಶುದ್ಧವಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ನೀರಿನ ಬಿಕ್ಕಟ್ಟು ಎದುರಾಗಬಹುದೆಂದು ರಾಯಚೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಂ ತಿಳಿಸಿದ್ದಾರೆ.

“ನದಿ ನೀರಿನಿಂದ ಕೆರೆಗಳನ್ನು ತುಂಬಿಸುವ ಮೂಲಕ ಸಮಸ್ಯೆಯನ್ನು ಪರಿಹರಿಸಲು ನಾವು ಯೋಜನೆಗಳನ್ನು ರೂಪಿಸಿದ್ದೇವೆ. ಕುಡಿಯುವ ನೀರು ಪೂರೈಸಲು ಕನಿಷ್ಠ ಎರಡು-ಮೂರು ವಿಶ್ವಾಸಾರ್ಹ ಕೊಳವೆಬಾವಿಗಳನ್ನು ಗುರುತಿಸುವಂತೆ ಪ್ರತಿ ಗ್ರಾಮ ಪಂಚಾಯಿತಿಗೆ ಸೂಚಿಸಲಾಗಿದೆ ಎಂದರು. 

ಬೀದರ್‌: ಮೂರು ದಿನಗಳಿಗೊಮ್ಮೆ ನೀರು ಪೂರೈಕೆ

ಬೀದರ್‌ ಜಿಲ್ಲೆಯಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ಈಗಾಗಲೇ ಪ್ರತಿಭಟನೆಗಳೂ ಆರಂಭವಾಗಿವೆ. ಜಿಲ್ಲೆಯ ಕಮಲನಗರ ತಾಲೂಕಿನ ಡೋಣಗಾಂವ(ಎಂ) ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ಡೋಣಗಾಂವ್‌(ಎಂ) ಗ್ರಾಮದಲ್ಲಿ ಮೂರು ವಾರ್ಡ್‌ಗಳಿದ್ದು, ಸುಮಾರು 4 ಸಾವಿರ ಜನಸಂಖ್ಯೆ ಹೊಂದಿದೆ. ಜೆಜೆಎಂ ಕಾಮಗಾರಿ ಕೈಗೊಂಡರೂ ಕೂಡ ನೀರಿನ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ತೆರೆದ ಬಾವಿಯಿದ್ದರೂ ಕೂಡ ನೀರಿನ ಸಮಸ್ಯೆ ತಲೆದೋರಿದೆ. ಹೀಗಾಗಿ 3 ದಿನಕ್ಕೊಮ್ಮೆ ನೀರು ಬರುತ್ತದೆ. ಈ ಬಗ್ಗೆ ಅನೇಕ ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಜನರು ನೀರಿಗಾಗಿ ಕೊಡಗಳನ್ನು ಹಿಡಿದು ಅಲೆದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಜೆಜೆಎಂ ಕಾಮಗಾರಿ ಕೈಗೊಂಡರೂ ನೀರು ಪೂರೈಸುವಲ್ಲಿ ಗ್ರಾಮಾಡಳಿತ ವಿಫಲವಾಗಿದೆ. ಈ ಸಮಸ್ಯೆ ಮುಂದಿನ ತಿಂಗಳು ಇನ್ನೂ ಹೆಚ್ಚಾಗುವ ಸಾಧ್ಯತೆಯೂ ಇದೆ. ಹೀಗಾಗಿ 5 ದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ತೀವ್ರ ಪ್ರತಿಭಟನೆ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ಬೀದರ್ ಜಿಲ್ಲೆಯ 46 ಹಳ್ಳಿಗಳು ಬೇಸಿಗೆಯಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ಎದುರಾಗಬಹುದು. ಆದರೆ ಯಾವುದೇ ರೀತಿಯ ಕೊರತೆಯುಂಟಾಗದಂತೆ ನಿರ್ವಹಣೆಯ ಸಿದ್ಧತೆಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ಹೇಳುತ್ತಾರೆ

ಕೊಪ್ಪಳ: 8 ದಿನಗಳಿಗೊಮ್ಮೆ ನೀರು

ತುಂಗಭದ್ರಾ ಜಲಾಶಯ ಇದ್ದರೂ ಕೂಡ ಕೊಪ್ಪಳ ಜಿಲ್ಲೆಯು ಕುಡಿಯುವ ನೀರಿನ ತೀವ್ರ ಕೊರತೆ ಎದುರಿಸುವಂತಾಗಿದೆ. ನಗರ ಪ್ರದೇಶಗಳಿಗೂ ಕೂಡ ಪ್ರತಿ ಆರರಿಂದ ಎಂಟು ದಿನಗಳಿಗೊಮ್ಮೆ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ.

ಕೊಪ್ಪಳ ಜಿಲ್ಲೆಯ 153 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು 2,278 ಸರ್ಕಾರಿ ಕೊಳವೆ ಬಾವಿಗಳು ಮತ್ತು 5,551 ಖಾಸಗಿ ಕೊಳವೆ ಬಾವಿಗಳಿರುತ್ತವೆ. ಖಾಸಗಿ ಕೊಳವೆ ಬಾವಿಗಳ ಪೈಕಿ 776 ಕೊಳವೆ ಬಾವಿಗಳನ್ನು ತುರ್ತು ಸಂದರ್ಭದಲ್ಲಿ ಕುಡಿಯುವ ನೀರು ಒದಗಿಸಲು ಬಾಡಿಗೆ ಆಧಾರದ ಮೇಲೆ ಪಡೆಯಲು ಗುರುತಿಸಲಾಗಿದ್ದು, ಈಗಾಗಲೇ 11 ಗ್ರಾಮ ಪಂಚಾಯತಿಗಳ ಪೈಕಿ 14 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ 17 ಖಾಸಗಿ ಕೊಳವೆ ಬಾವಿಗಳನ್ನು(ಕೊಪ್ಪಳದಲ್ಲಿ 14, ಕುಷ್ಟಗಿಯಲ್ಲಿ 1 ಮತ್ತು ಕನಕಗಿರಿ 2 ಕೊಳವೆ ಬಾವಿಗಳು) ಬಾಡಿಗೆ ಆಧಾರದ ಮೇಲೆ ಪಡೆದು ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಕ್ರಮವಹಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ತಿಳಿಸಿದ್ದಾರೆ.

ಬಳ್ಳಾರಿ: ಅವೈಜ್ಞಾನಿಕ ನೀರು ಪೂರೈಕೆಯಿಂದ ನೀರಿನ ಹಾಹಾಕಾರ ಉಲ್ಬಣಗೊಂಡಿದೆ.

ತುಂಗಭದ್ರಾ ಜಲಾಶಯದ ನೀರು ಸರಬರಾಜು ಇದ್ದರೂ, ಬಳ್ಳಾರಿ ಜಿಲ್ಲೆಯು ಅವೈಜ್ಞಾನಿಕ ನೀರು ಪೂರೈಕೆಯಿಂದ ಬಳಲುತ್ತಿದೆ. ಕೆಲವು ಪ್ರದೇಶಗಳಲ್ಲಿ ಈಗಾಗಲೇ ತೀವ್ರ ನೀರಿನ ಅಭಾವ ಉಂಟಾಗಿದ್ದು, ಪ್ರತಿ 10 ದಿನಗಳಿಗೊಮ್ಮೆ ಮಾತ್ರ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಈ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು.

ಬಳ್ಳಾರಿ ನಗರ ಪ್ರದೇಶಗಳಲ್ಲಿಯೇ ವಾರಕ್ಕೊಮ್ಮೆ ನೀರು ಪೂರೈಕೆ ಮಾಡುತ್ತಿದ್ದು, ಹಳ್ಳಿಗಳ ಪರಿಸ್ಥಿತಿ ಇನ್ನೂ ಭೀಕರವಾಗಿರುತ್ತದೆ. ಕೆಲವು ಪ್ರದೇಶಗಳಲ್ಲಿ ಸಾರ್ವಜನಿಕ ಬೋರ್‌ವೆಲ್‌ಗಳೇ ಇಲ್ಲ. ನಿತ್ಯವೂ ಹಣ ಪಾವತಿಸಿ ನೀರು ಖರೀದಿಸಬೇಕು, ಕಾರ್ಖಾನೆಗಳಿರುವ ಪ್ರದೇಶಗಳಲ್ಲಿ ಧೂಳಿನ ಕಣಗಳಿಂದ ತುಂಬಿರುತ್ತದೆ. ಅಂಥಹದರಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿರುವುದು ಸ್ಥಳೀಯರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುತ್ತದೆ.

ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಡಾ.ದೊಡ್ಡಬಸರಾಜ ಅವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಬಳ್ಳಾರಿ ಜಿಲ್ಲೆಯಲ್ಲಿ ಕೇವಲ ಬೇಸಿಗೆಯಲ್ಲಿ ಅಲ್ಲದೆ ವರ್ಷಪೂರ್ತಿ ನೀರಿನ ಅಭಾವ ಇರುತ್ತದೆ. ನಾಲೆಗಳಲ್ಲಿ ನೀರಿನ ಹರಿವು ಹೆಚ್ಚಿಸಿದಾಗ ತಕ್ಕಮಟ್ಟಿಗೆ ನಗರ ಪ್ರದೇಶದ ಪರಿಸ್ಥಿತಿ ಸುಧಾರಿಸುತ್ತದೆ. ಇದನ್ನೂ ಹೊತರುಪಡಿಸಿದರೆ, ಯಾವುದೇ ನೀರು ಸಂಗ್ರಹವಾಗುವ ಜಲಮೂಲಗಳಿಲ್ಲ” ಎಂದು ತಿಳಿಸಿದರು.

“ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಇರುವ ಪ್ರದೇಶಗಳಲ್ಲಿ ಯಾವಾಗಲೂ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತದೆ. ಆದರೆ ಬಜ಼ಾರ್‌ ಇರುವ ಪ್ರದೇಶಗಳಲ್ಲಿ ಸಿಕ್ಕಾಪಟ್ಟೆ ನೀರಿನ ಹಾಹಾಕಾರವನ್ನು ಕಾಣಬಹುದು. ಖಾಸಗಿ ವ್ಯಕ್ತಿಗಳ ಬೋರ್‌ವೆಲ್‌ಗಳಿವೆ. ಆದರೆ, ಅದರಿಂದ ಸಾರ್ವಜನಿಕರಿಗೆ ಅನುಕೂಲವಾಗುವುದಿಲ್ಲ. ಖಾಸಗಿ ಕಂಪೆನಿಗಳ ಹಾವಳಿ ಹೆಚ್ಚಾಗಿದ್ದು, ರಾಜಕಾಲುವೆಗಳ ನೀರನ್ನು ಪರಿಷ್ಕರಿಸಿ ಮಾರಾಟ ಮಾಡಲಾಗುತ್ತಿದೆ. ಬಳ್ಳಾರಿಯಲ್ಲಿ ಬಿಸಿಲಿನ ಝಳಕ್ಕೆ ತತ್ತರಿಸುತ್ತಿರುವ ಜನತೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ ನೀರನ್ನೂ ಕೂಡ ಖರೀದಿಸುವ ಪರಿಸ್ಥಿತಿ ಎದುರಾಗಿದೆ. ಇಷ್ಟೆಲ್ಲ ಸಂಕಟಗಳನ್ನು ಅನುಭವಿಸುತ್ತಿದ್ದರೂ ಕೂಡ ಸ್ಥಳೀಯ ಸರ್ಕಾರಗಳು ಕಿಂಚಿತ್ತೂ ಕಾಳಜಿ ತೋರುತ್ತಿಲ್ಲ. ಸಮರ್ಪಕ ಕ್ರಮ ಕೈಗೊಳ್ಳುತ್ತಿಲ್ಲ” ಎಂದು ಆರೋಪಿಸಿದರು.

ಸ್ಥಳೀಯ ಸರ್ಕಾರಗಳು ಮಳೆನೀರು ಸಂಗ್ರಹಣೆಗೆ ಮಳೆನೀರು ಕೊಯ್ಲುಗಳಂತಹ ಕ್ರಮಗಳನ್ನು ಕೈಗೊಳ್ಳಬೇಕು, ಅವೈಜ್ಞಾನಿಕ ಕ್ರಮಗಳ ಹೊರತಾಗಿ ವೈಜ್ಞಾನಿಕವಾಗಿ ನೀರನ್ನು ಸಂಗ್ರಹಿಸುಲ್ಲಿ ಮುಂದಾಗಬೇಕು. ಶುದ್ದ ನೀರು ಘಟಕಗಳಿಗೆ ವಾರಕ್ಕೊಮ್ಮೆಯೂ ನೀರು ಪೂರೈಕೆಯಾಗದೆ 20 ಲೀಟರ್‌ ಕ್ಯಾನ್‌ಗೆ 35 ರೂಪಾಯಿ ಪಾವತಿಸಬೇಕಾಗಿದೆ. ಇದರಲ್ಲಿಯೂ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇರುವುದು ತಿಳಿದುಬಂದಿದೆ.

ಅರಗಿನದೋಣಿ ಪ್ರದೇಶ, ಜೈಲು, ಪ್ರದೇಶಗಳ ಸುತ್ತಲೂ ಹೆಚ್ಚಾಗಿ ಕಾರ್ಖಾನೆಗಳಿದ್ದು, ಈ ಭಾಗದಲ್ಲಿ ಕಂಪೆನಿಯವರೇ ಟ್ಯಾಂಕರ್‌ ನೀರು ಪೂರೈಕೆ ಮಾಡುತ್ತಾರೆ, ಇಲ್ಲಿ ಯಾವುದೇ ರೀತಿಯ ಸಾರ್ವಜನಿಕ ನೀರಿನ ವ್ಯವಸ್ಥೆಯಿಲ್ಲ. ಆದರೆ ಈ ಪ್ರದೇಶಗಳಲ್ಲಿ ದೊಡ್ಡ ದೊಡ್ಡ ಲಾರಿ ಮಾಲೀಕರರು, ಕಂಪೆನಿಗಳ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುವವರು ವಾಸಿಸುತ್ತಿರುವದರಿಂದ ಟ್ಯಾಂಕರ್‌ ನೀರು ಖರೀದಿಸಿ ಕುಡಿಯಲು ಶಕ್ತರಾಗಿದ್ದಾರೆ. ಜತೆಗೆ ವರ್ಷಪೂರ್ತಿ ಕೆಲಸಗಳು ಸಿಗುವುದರಿಂದ ನೀರು ಖರೀದಿಸಲು ಯಾವುದೇ ರೀತಿಯ ಸಮಸ್ಯೆಯಿಲ್ಲ.

ಆದರೆ ಕೃಷ್ಣದೇವರಾಯ ವಿಶ್ವ ವಿದ್ಯಾಲಯವಿರುವ ಎರಂಗ್ಲಿ ಪ್ರದೇಶದಲ್ಲಿ ನೀರಿಗೆ ವಿಪರೀತ ಹಾಹಾಕಾರ. ಆದರೂ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಆ ಪ್ರದೇಶ ಕಪ್ಪು ಮಣ್ಣಿನ ಭೂಮಿಯಾಗಿರುವ ಕಾರಣಕ್ಕೆ ಮಳೆ ನೀರು ಶೇಖರಣೆಯಾಗುವುದಿಲ್ಲ. ಪೂರ್ತಿ ನೀರು ಭೂಮಿಯಲ್ಲಿಯೇ ಇಂಗುತ್ತದೆ. ಒಮ್ಮೊಮ್ಮೆ ಜಿಲ್ಲಡಳಿತದಲ್ಲಿಯೂ ನೀರಿಗೆ ಬರ ಬಂದಿರುತ್ತದೆ. ಬೆಳಗಲ್‌ ರಸ್ತೆಯಲ್ಲಿ ನೀರಿಗಾಗಿ ಬಹುತೇಕ ಹೋರಾಟಗಳು ನಡೆಯುತ್ತಲೇ ಇರುತ್ತವೆ. ಆದರೆ, ಸ್ಥಳೀಯ ಜನಪ್ರತಿನಿಧಿಗಳು ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ನೀಡಿ, ಸುಮ್ಮನಾಗುತ್ತಾರೆಯೇ ಹೊರತು. ಯಾವುದೇ ರೀತಿಯ ಸಮರ್ಪಕ ನೀರು ಪೂರೈಕೆ ಮಾಡುವತ್ತ ಗಮನಹರಿಸದಿರುವುದು ಶೋಚನೀಯ.

ರೈತರಿಂದ ಸಾವಿರಾರು ಎಕರೆ ಭೂಮಿಯನ್ನು ಕಬಳಿಸಿರುವ ಭೂಮಾಲೀಕರು, ಆ ಭೂಮಿಗಳನ್ನು ಪಾಳುಗೆಡವಿದ್ದಾರೆ. ಇತ್ತ ಜಮೀನು ಪಡೆದ ಉದ್ದೇಶವೂ ಈಡೇರಿಲ್ಲ. ರೈತರಿಗೆ ಭೂಮಿಯೂ ಇಲ್ಲ. ಅಲ್ಲಿ ಯಾವುದೇ ರೀತಿ ನೀರು ಶೇಖರಣೆಯಾಗುತ್ತಿಲ್ಲ. ಮಳೆ ನೀರೆಲ್ಲ ಸೀದ ಒಳಚರಂಡಿ ಸೇರುತ್ತದೆ. ಕೆಲವೆಡೆ ಕೈಗಾರಿಕೋದ್ಯಮ ಮಾಡಿದ್ದಾರೆ, ಸ್ಥಳೀಯ ಜನರಿಗೆ ನೀರು ಪೂರೈಕೆ ಮಾಡಬೇಕು. ಆದರೆ ಕಂಪೆನಿಯವರು ನೀರು ಪೂರೈಕೆ ಮಾಡದಿರುವುದು ಕಂಡುಬರುತ್ತಿದೆ. ಇನ್ನು ನೀರಾವರಿ ಪ್ರದೇಶಗಳಾದ ತುಂಗಭದ್ರಾ ಹಿನ್ನೀರು ಅಚ್ಚುಕಟ್ಟು ಕಾಲುವೆಗಳಲ್ಲಿ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಬಹುತೇಕ ನೀರು ಆವಿಯಾಗಿ ಹೋಗುತ್ತಿದೆ. ಆಂಧ್ರ ಪ್ರದೇಶಕ್ಕೆ ನಿರಂತರ ನೀರು ಹರಿಸಲಾಗುತ್ತದೆ. ಆದರೆ ಅಸಮರ್ಪಕ ನಿರ್ವಹಣೆಯಿಂದ ಬಹುತೇಕ ನೀರು ಸೋರಿಕೆಯಾಗುವುದು, ಪೋಲಾಗುವುದು, ಈ ಬಿರುಬಿಸಿಲಿನ ಝಳಕ್ಕೆ ಆವಿಯಾಗುವುದನ್ನೂ ಕಾಣಬಹುದು.

ಜಿಂದಾಲ್‌ ಸಂಸ್ಥೆಯು ‌ನೀರನ್ನು ವ್ಯಾಪಾರದ ಸರಕನ್ನಾಗಿಸಿಕೊಂಡಿದ್ದು, ಉತ್ತಮವಾಗಿ ನಿರ್ವಹಣೆ ಮಾಡುತ್ತಿದೆ. ಯಾವುದೇ ರೀತಿಯಿಂದಲೂ ನೀರು ಪೋಲಾಗದಂತೆ ಎಚ್ಚರ ವಹಿಸಿದ್ದು, ನೀರು ಸಂಗ್ರಹವಾಗುವ ಪ್ರದೇಶ ಸದಾ ತಂಪಾಗಿರುವಂತಹ ತಂತ್ರಜ್ಞಾನ ಕ್ರಮಗಳನ್ನು ಕೈಗೊಂಡಿದೆ. ಇದರಿಂದ ಹೆಚ್ಚಿನ ನೀರು ಆವಿಯಾಗುವುದಾಗಲಿ, ಸೋರಿಯಾಗುವುದಾಗಲಿ ಅಥವಾ ಪೋಲಾಗುವುದನ್ನು ತಡೆಗಟ್ಟುವಂತಹ ಕ್ರಮ ಕೈಗೊಂಡಿದೆ.

ಬಳ್ಳಾರಿ ಜಿಲ್ಲೆ ಅಧಿಕವಾಗಿ ಗುಡ್ಡಗಾಡು ಪ್ರದೇಶಗಳಿಂದ ಕೂಡಿದೆ. ಹಾಗಾಗಿ ಮಳೆಯ ನೀರು ಸಂಗ್ರಹವಾಗುವುದಿಲ್ಲ. ಸ್ಥಳೀಯ ಸರ್ಕಾರ, ಜಿಲ್ಲಡಳಿತ ಮಳೆ ಸಂಗ್ರದಲ್ಲಿ ಮುತುವರ್ಜಿ ವಹಿಸಿ ಜಿಂದಾಲ್‌ ಸಂಸ್ಥೆಯ ನೀರು ಸಂಗ್ರಹಣಾ ಕ್ರಮಗಳನ್ನು ಅನುಸರಿಸಿದರೆ, ಗುಡ್ಡಗಳಿಂದ ಹರಿಯುವ ನೀರನ್ನು ವೈಜ್ಞಾನಿಕವಾಗಿ ಶೇಖರಿಸಿದರೆ ಬೇಸಿಗೆಯ ದಿನಗಳಲ್ಲಿ ಬಹುತೇಕ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡಬಹುದು, ಈ ನಿಟ್ಟಿನಲ್ಲಿ ಸ್ಥಳೀಯ ಸರ್ಕಾರಿ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ವಲ್ಪ ಜವಾಬ್ದಾರಿ ವಹಿಸಿಕೊಂಡು ಕ್ರಮ ಕೈಗೊಂಡರೆ ಒಳಿದಾದೀತು.

ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ನೀರಿನ ಅಭಾವ ತಲೆದೋರುತ್ತಿದೆ. ಸಮಸ್ಯೆ ಪರಿಹರಿಸಲು ಕೆಲವಡೆ ಕ್ರಮ ಕೈಗೊಂಡಿದ್ದರೆ, ಇನ್ನೂ ಕೆಲವೆಡೆ ಯಾವುದೇ ನೀರಿನ ಮೂಲಗಳಿಲ್ಲ. ನೀರಿಗೆ ಪಾವತಿಸಿ ಖರೀದಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಸರ್ಕಾರಗಳು, ಜನಪ್ರತಿನಿಧಿಗಳು ಒಗ್ಗೂಡಿ, ಮೂಲಸೌಕರ್ಯಗಳಲ್ಲೊಂದಾದ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಜಲಮೂಲಗಳನ್ನು ಗುರುತಿಸಬೇಕು. ಸಾರ್ವಜನಿಕವಾಗಿ ಉಚಿತ ನೀರು ಸಿಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಬೆಲೆ ಏರಿಕೆಯಿಂದ ದುಬಾರಿ ದಿನಗಳಲ್ಲಿ ಜೀವನ ಸಾಗಿಸುತ್ತಿರುವ ಇಂತಹ ಹೊತ್ತಿನಲ್ಲಿ ಕುಡಿಯುವ ನೀರನ್ನು ಖರೀದಿಸುವುದು ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯಾಗುತ್ತದೆ. ಈಗಾಗಲೇ ಹಳ್ಳಿಗಾಡು ಪ್ರದೇಶಗಳಲ್ಲಿ ಯಾವುದೇ ರೀತಿಯ ಕೆಲಸ ಕಾರ್ಯಗಳಿಲ್ಲದೆ ಆರ್ಥಿಕವಾಗಿ ಹಿನ್ನಡೆಯಾಗುತ್ತಿದ್ದು, ಒಪ್ಪತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ.

WhatsApp Image 2025 07 12 at 17.38.34 e1752322718567
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X